ಸಹಕಾರ ಕ್ಷೇತ್ರ ಭಾರತದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇಲ್ಲಿಯ ಜೀವನ ಪದ್ಧತಿ, ಅವಿಭಕ್ತ ಕುಟುಂಬದ ಒಳಗಿನ ಕೆಲಸಗಳ ವಿಂಗಡಣೆ ಮತ್ತು ಸಹಜೀವನದ ಶ್ರೇಷ್ಠತೆ, ಹಳ್ಳಿಗಳಲ್ಲಿ ಇಂದೂ ಇರುವ ಕೊಡುಕೊಳ್ಳುವಿಕೆಯ ಬಾಂಧವ್ಯ ಇವೆಲ್ಲ ಸಹಕಾರ ತತ್ವದ ಮಾನಬಿಂದುಗಳು. ಭಾರತದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಯ ಹಿಂದೆ ಸಹಕಾರದ ಕೊಡುಗೆಯೇ ಅತಿ ದೊಡ್ಡದು. “ಆಡು ಮುಟ್ಟದ ಸೊಪ್ಪಿಲ್ಲ” ಎಂದಂತೆ ಸಹಕಾರಿ ಕ್ಷೇತ್ರವಿಂದು “ ತೊಟ್ಟಿಲಿನಿಂದ ಚಟ್ಟದ ತನಕ” ವ್ಯಾಪಿಸಿದೆ. ದೇಶದ ಕೊಟ್ಟ ಕೊನೆಯ ವ್ಯಕ್ತಿ ತನಕ ಸಹಕಾರಿ ಕ್ಷೇತ್ರ ಮುಟ್ಟಿದೆ ಹಾಗು ತಟ್ಟಿದೆ.
ದೇಶದಲ್ಲಿರುವ ಸಹಕಾರಿ ಸಂಸ್ಥೆಗಳು, ಸಂಘಗಳು ಅನ್ಯಾನ್ಯ ಕ್ಷೇತ್ರಗಳಲ್ಲಿ ದೇಶದೋನ್ನತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಕೇವಲ ಹಣಕಾಸಿನ ವ್ಯವಹಾರವಾಗಿರದೆ ನಿತ್ಯದ ಬದುಕಿಗೆ ಬೇಕು ಬೇಕಾದ ಎಲ್ಲ ವ್ಯವಸ್ಥೆಯೊಳಗೂ ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾಲೂರಿವೆ. ಮೌಲ್ಯವರ್ಧಿತ ಸೇವೆಗಳನ್ನು ಕೊಡುತ್ತಿರುವ ಅನೇಕ ಸಹಕಾರಿ ಸಂಸ್ಥೆಗಳು ಜನಮಾನಸದಿ ಆತ್ಮೀಯವಾಗಿವೆ.
ಶಿಕ್ಷಣ ರಂಗ ಮೇಲೆತ್ತಲಿ
ಶಿಕ್ಷಣ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಘಟ್ಟ. ಶಿಕ್ಷಣ ರಂಗ ಭಾರತದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸಿದೆ. ಭಾರತ ಇಂದು ವಿಶ್ವದಲ್ಲಿ ಗುರುತಿಸುವಂತಾಗಲು ಒಂದು ಕಾರಣ ಇಲ್ಲಿಯ ಶಿಕ್ಷಣದ ಔನ್ನತ್ಯ. ಅನ್ಯಾನ್ಯ ಕಾರಣಗಳಿಂದ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ನಗರಗಳಲ್ಲಿ ಇನ್ನೂ ಶಿಕ್ಷಣ ಸಂಸ್ಥೆಗಳು ನಿರೀಕ್ಷಿತ ರೀತಿಯಲ್ಲಿ ಸಾಧನೆ ತೋರಲಾಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ಇಂತಹ ಶಿಕ್ಷಣ ಸಂಸ್ಥೆಗಳನ್ನು ಸಹಕಾರಿ ಕ್ಷೇತ್ರ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿಪಡಿಸಿದರೆ ಶಿಕ್ಷಣರಂಗ ಹೊಸಮಜಲು ತಲುಪಬಹುದು. ಸಮಾಜೋನ್ನತಿಯ ದೆಸೆಯಲ್ಲಿ ಯೋಚಿಸಿದಲ್ಲಿ ಅದು ದೊಡ್ಡ ಕಾರ್ಯ.
ಜೊತೆಯಾಗಿ ಯೋಚನೆ
ನಮ್ಮದು ಗ್ರಾಮೀಣ ಪ್ರದೇಶಗಳನ್ನು ಹೊಂದಿದ ಪರಿಸರ. ಇಲ್ಲಿನ ಕೆಲವು ಶಾಲೆಗಳಿಗಂತೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಮಕ್ಕಳು ಕಲಿಯಲು ಅಗತ್ಯ ಇರಬೇಕಾದ ವಾತಾವರಣ ಸಹ ಇಲ್ಲದ ಪ್ರದೇಶಗಳು ಕಡಿಮೆಯಲ್ಲ. ಇಂತಹ ಪರಿಸ್ಥಿತಿಯಲ್ಲಿ ಅ ಶಾಲೆಯ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಸಂಘವೊಂದು ಶಾಲೆಯ ಜವಾಬ್ದಾರಿಯನ್ನು ವಹಿಸಿ ಒಂದು ಮಾದರಿ ಶಾಲೆಯಾಗಿ ರೂಪುಗೊಳ್ಳುವಂತೆ ಮಾಡಬಹುದು. ಶಾಲೆಯ ಆಡಳಿತ ಮಂಡಳಿ, ಅಧ್ಯಾಪಕ ವರ್ಗ, ಊರಿನ ಜನರು – ಇವರನ್ನೆಲ್ಲ ಸೇರಿಸಿಕೊಂಡು ಶಾಲೆಯ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸಿ ಮುನ್ನಡೆಯುವುದು ಅಗತ್ಯ. ಮೊತ್ತ ಮೊದಲು ಶಾಲೆಗೆ ನೀರಿನ ವ್ಯವಸ್ಥೆ. ಇದರ ನಂತರ ನೀರು ಸಾಕಷ್ಟು ಇದ್ದರೆ ಚಂದದ ಒಂದು ಹೂದೋಟ, ಜಾಗ ಇರುವಲ್ಲೆಲ್ಲ ಹಸಿರು ಬೆಳೆಯುವುದು ಅಗತ್ಯ. ಶಾಲೆಯ ಬಿಸಿಯೂಟಕ್ಕೆ ಬೇಕಾದ ತರಕಾರಿ ಕೂಡ ಶಾಲೆಯ ಪರಿಸರದಲ್ಲಿಯೆ ಬೆಳೆಯಬಹುದು. ಮಿಕ್ಕಿದ ತರಕಾರಿಗಳನ್ನು ಮಾರಾಟ ಮಾಡಿ ಅದರ ಹಣವನ್ನು ಶಾಲೆಯ ಖರ್ಚಿಗೆ ಬಳಕೆ ಮಾಡಬಹುದು. ಇಷ್ಟೆಲ್ಲ ನೀರಿನ ಉಪಯೋಗ ಇರುವಾಗ ಮಳೆ ನೀರು ಇಂಗಿಸುವ ಯೋಜನೆ ಕೂಡಾ ಆವಶ್ಯ.
ಇಂತಹ ಕೆಲಸಗಳನ್ನು ಸಂಘ ಕೈಗೊಳ್ಳುವಾಗ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಮುತುವರ್ಜಿಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪೂರ್ತಿಯಾಗಿ ಇದು ಸಂಘಕ್ಕೆ ಉತ್ತಮ ಹೆಸರು ತರುವ ಕೆಲಸ. ಅದ್ದರಿಂದ ಸಂಘದ ಸದಸ್ಯರನ್ನು ಸಹ ಈ ಕಾರ್ಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಬಹಳ ನಾಜೂಕಿನಿಂದ ಮುಂದುವರಿಯುವುದು ಅಗತ್ಯ. ತಿಂಗಳಿಗೊಂದು ಸಭೆ ಶಾಲೆಯ ಕುರಿತು ಬೇಕು. ಈ ಸಭೆ ಶಾಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಾಕು. ಉಳಿದಂತೆ ಪರಿಸರದ ಯಾವುದಾದರು ಮನೆಯಲ್ಲಿ ಮಾಡಬಹುದು. ಪ್ರತಿ ತಿಂಗಳ ಸಭೆ ಬೇರೆ ಬೇರೆ ಮನೆಗಳಲ್ಲಿ ಆದರೆ ಎಲ್ಲರ ಸಹಭಾಗಿತ್ವ ಇದ್ದ ಹಾಗೆಯು ಆಗುತ್ತದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಲಾಭಾಂಶಗಳು ಶಾಲೆಯ ಅಭಿವೃದ್ಧಿಯಲ್ಲಿ ಉಪಯೋಗವಾಗುವಂತೆ ಮಾಡಬಹುದು.
ಶಾಲೆಗೆ ಅಗತ್ಯವಿರುವ ಕಟ್ಟಡಗಳು. ಶಾಲೆಯ ಪರಿಸರದ ಅಧ್ಯಯನದ ನಂತರ ಶಾಲೆಗೆ ಬರಬಹುದಾದ ಮಕ್ಕಳ ಸಂಖ್ಯೆಯನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಕಟ್ಟಡಗಳು ಬೇಕು. ಉತ್ತಮ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಹೆತ್ತವರಲ್ಲಿ, ಪರಿಸರದ ಜನರಲ್ಲಿ ಕೇಳಿ ಪಡೆಯಬಹುದು. ಊರಿನ ಕೆಲವು ನಾಗರಿಕರಲ್ಲಿ ಮಿಗತೆ ಪುಸ್ತಗಳಿದ್ದರೆ ಅಂತವುಗಳ ಜೋಡಣೆ ಕಷ್ಟ ಅಲ್ಲ.
ಉತ್ತಮ ಫಲಿತಾಂಶ ಎಲ್ಲರ ಬಯಕೆ. ಸಹಕಾರಿ ಮುತುವರ್ಜಿಗೆ ಸಿಕ್ಕಿದ ಶಾಲೆಯಲ್ಲಿ ಫಲಿತಾಂಶ ಚೆನ್ನಾಗಿ ಬರಬೇಕು. ಕಲಿಕೆಯಲ್ಲಿ ಹಿಂದೆ ಬಿದ್ದ ಮಕ್ಕಳಿಗೆ ವಿಶೇತಃ ಗಮನಕೊಟ್ಟು ಉತ್ತಮ ಅಂಕ ಪಡೆಯಲು ಉತ್ತೇಜನ ಕೊಡಬಹುದು. ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಇರುವ ವಿದ್ಯಾವಂತರ ಸಹಕಾರ ಇದಕ್ಕೆ ಪಡೆಯಬಹುದು.
ಇದು ಒಂದು ಹೊಸ ಚಿಂತನೆ. ಯಾವುದಾದರೂ ಸಹಕಾರಿ ಸಂಘ ಈ ಬಗ್ಗೆ ಯೋಚಿಸಿ ಮುಂದಡಿಯಿಟ್ಟರೆ ಅದು ಸಹಕಾರಿ ರಂಗದಲ್ಲಿ ಹೊಸ ಹಾದಿ ತೆರೆದಂತೆ ಆಗಬಹುದು.
ಶ್ರೀ.ಶಂ.ನಾ. ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ – ೬೭೧೫೫
ವವ