ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪದ್ದತಿಯಿಂದ ಆಡಳಿತದ ರೂವಾರಿಗಳನ್ನು ಆಯ್ಕೆಮಾಡುವುದು ಪದ್ದತಿ. ಮತದಾನಕ್ಕೆ ಅರ್ಹರು ಮತದಾನ ಮಾಡಿ ಬಹುಮತದಿಂದ ಆಯ್ಕೆಯಾದವರು ಸಂಘಸಂಸ್ಥೆˌ ಪಂಚಾಯತ್ ರಾಜ್ˌ ರಾಜ್ಯˌ ಕೇಂದ್ರ ಸರಕಾರ ಮುಂತಾದವುಗಳ ಆಡಳಿತದ ಸೂತ್ರದಾರರು. ಕಾನೂನು ˌನಿಯಮಗಳ ಅಡಿಯಲ್ಲಿ ಚುನಾವಣೆಗಳು ನಡೆಯುವುದು ನಮಗೆಲ್ಲ ತಿಳಿದ ವಿಚಾರ. ಹಾಗೆ ಆಯ್ಕೆಯಾದವರ ಅಧಿಕಾರ ಅವಧಿ ಸಾಮಾನ್ಯವಾಗಿ ಹೆಚ್ಚಿನ ವ್ಯವಸ್ಥೆಯಲ್ಲಿ ಐದು ವರ್ಷ. ಲೋಕಸಭೆˌ ವಿಧಾನಸಭೆˌ ತಾಲೂಕುಪಂಚಾಯತುˌ ಜಿಲ್ಲಾ ಪಂಚಾಯತುಗಳಲ್ಲಿ ರಾಜಕೀಯಪಕ್ಷಗಳ ಅಧಿಕೃತ ಚಿಹ್ನೆಗಳಡಿ ಸ್ಪರ್ಧೆಗೆ ಕಾನೂನಿನಲ್ಲಿ ಅವಕಾಶವಿದ್ದು ಪಕ್ಷರಾಜಕಾರಣವನ್ನು ಒಪ್ಪತಕ್ಕ ವಿಚಾರ.ಕಾನೂನು ನಿಯಮಗಳ ಅಡಿಯಲ್ಲಿ ಸಹಕಾರಿ ಸಂಘಗಳ ಚುನಾವಣೆಗಳು ಸದಸ್ಯಕೇಂದ್ರಿತವಾಗಿ ಪಕ್ಷಾತೀತವಾಗಿ ನಡೆಯಲು ಅವಕಾಶವಿರುವುದಾಗಿರುತ್ತದೆ. ಕಾನೂನು ನಿಯಮಗಳ ಅರ್ಹತೆಹೊಂದಿರುವ ಎಲ್ಲಾ ಸದಸ್ಯರು ಮತನೀಡಬಹುದು ಮತ್ತು ಸ್ಪರ್ಧಿಸಬಹುದು.
ಸಹಕಾರಿರಂಗ ವಿಶಿಷ್ಟವ್ಯವಸ್ಥೆಯನ್ನು ಹೊಂದಿದ್ದು ಇಲ್ಲಿ ವಿಶೇಷ ಜ್ಞಾನ ಅವಶ್ಯ. ಅಂತಹ ಜ್ಞಾನ ˌತಿಳುವಳಿಕೆ ಆಡಳಿತಮಂಡಳಿಗೆ ಪ್ರವೇಶಿಸಿದ ತಕ್ಷಣ ಯಾರಿಗೂ ಬರುವುದಿಲ್ಲ.ಸಭೆಗಳಲ್ಲಿ ಹಾಜರಾಗುವುದುˌ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮನನಮಾಡುವ ಉತ್ಸಾಹ ˌಕಾನೂನು ನಿಯಮˌ ಬೈಲಾಗಳ ಅಧ್ಯಯನ ನಡೆಸುವುದುˌ ಆಡಳಿತಮಂಡಳಿ ಹಾಗೂ ಶಿಬಂಧಿ ಹಕ್ಕುˌಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಮುಂತಾದ ಬದ್ದತೆˌ ತೊಡಗಿಸಿಕೊಳ್ಳುವ ಗುಣ ಇದ್ದಲ್ಲಿ ಸಂಘದ ಆಡಳಿತದಲ್ಲಿ ಸಕ್ರಿಯತೆ ಸಾಧ್ಯ. ಇಂತಹ ಗುಣಹೊಂದಿರುವ ನಿರ್ದೇಶಕರುಗಳ ಸಂಖ್ಯೆ ಇಂದು ಕಡಿಮೆಯಾಗುತ್ತಿದ್ದುˌ ಸಹಕಾರದ ಬೆಳವಣಿಗೆಗೆ ಇದೊಂದು ಹಿನ್ನಡೆ.ಸಹಕಾರದ ಅಭಿವೃಧ್ಧಿದೃಷ್ಟಿಯಿಂದ ಸಂಘಗಳು ಗುಂಪುರಹಿತˌ ರಾಜಕೀಯ ರಹಿತವಾಗಿರಬೇಕು.
ಹಾಗಿದ್ದಲ್ಲಿ ಸದಸ್ಯರಿಂದ ….ಸದಸ್ಯರಿಗಾಗಿ.. ಅನ್ನುವ ಪಕ್ಷಾತೀತ ಸಹಕಾರ ಸಿದ್ದಾಂತದ ಮೌಲ್ಯ ವೃಧ್ಧಿಯಾಗಲು ಸಾಧ್ಯ. ಇಂದು ಎಲ್ಲಾ ಕಡೆಗಳಲ್ಲೂ ರಾಜಕೀಯಪಕ್ಷಗಳ ತಳಹದಿಯಲ್ಲಿ ಚುನಾವಣೆಗಳಾಗುತ್ತಿದ್ದುˌ ಇದರಿಂದಾಗಿ ಸಹಕಾರಸಿದ್ದಾಂತದ ಬಗ್ಗೆ ಸ್ವಾಭಾವಿಕವಾಗಿ ಅರಿವಿಲ್ಲದ ಸಾಮಾನ್ಯ ಸದಸ್ಯ ಅಥವಾ ಶಾಶ್ವತವಾಗಿ ಪಕ್ಷನಿಷ್ಟೆ ಹೊಂದಿರುವಾತ ಪಕ್ಷಬೆಂಬಲಿತನಿಗೆ ಮತನೀಡಲು ಮುಂದಾಗುತ್ತಾನೆ. ಇಂತಹ ಸಂದರ್ಭಗಳಲ್ಲಿ ಎರಡು ರೀತಿಯ ಪ್ರಮಾದಗಳಾಗಿ ಸಂಸ್ಥೆ ಹಾಗೂ ಅದನ್ನು ಹೊಂದಿರುವ ವ್ಯಾಪ್ತಿಯ ಮುಗ್ದ ಸದಸ್ಯರ ಅಭಿವೃಧ್ಧಿ ನಲುಗುವ ಸಾಧ್ಯತೆ ಬಲವಾಗಿದೆ. ಕೇವಲ ರಾಜಕೀಯ ಹಿನ್ನಲೆಯಿಂದ ಆಯ್ಕೆಯಾದ ಸಂಸ್ಥೆಯ ಬಗ್ಗೆ ಗಮನ ನೀಡದ ನಿರ್ದೇಶಕನಿಂದ ಸಕ್ರಿಯ ಪಾಲ್ಗೊಳ್ಳುವಿಕೆಯ ಕೊರತೆ ಹಾಗೂ ರಾಜಕೀಯ ಪ್ರೇರಣೆ ಇಲ್ಲದಿರುವ ಸಹಕಾರದ ಬಗ್ಗೆ ಜ್ಞಾನ ಹೊಂದಲು ಶಕ್ತನಾಗಿರುವ ಸದಸ್ಯ ನಿರ್ದೇಶಕನಾಗಿ ಆಯ್ಕೆಯಾಗದ ತೊಡಕು ಸಂಸ್ಥೆಯ ಉನ್ನತಿಗೆ ಅಡ್ಡದಾರಿ.
ಪಕ್ಷರಾಜಕಾರಣದ ಅಭ್ಯರ್ಥಿಆಯ್ಕೆಗಳು ಪಕ್ಷದ ಉನ್ನತಮಟ್ಟದ ನಾಯಕ ( ಹೈಕಮಾಂಡ್) ರಿಂದಾಗುತ್ತಿದ್ದುˌ ಅವರಿಗೆ ಸ್ಥಳೀಯವಾದ ತಳಹಂತದ ಮಾಹಿತಿಗಳಿರುವುದಿಲ್ಲ. ಸಾಮಾನ್ಯವಾಗಿ ಪಕ್ಷದಲ್ಲಿ ಸಕ್ರಿಯವಾಗಿ ಓಡಾಡುವ ಅಥವಾ ನಾಯಕರನ್ನು ಸದಾ ಓಲೈಸುವವರು ಅಭ್ಯರ್ಥಿಗಳಾಗಿರುತ್ತಾರೆ. ಪಕ್ಷದ ಮತದಾರನಾಗಿರುವ ಸಂಘದ ಒಬ್ಬ ಸದಸ್ಯ ಸಹಕಾರದ ಬಗ್ಗೆ ಅರಿವು ಹೊಂದಿರುವ ಅಥವಾ ತೊಡಗಿಸಿಕೊಳ್ಳುವ ಗುಣಉಳ್ಳವನಾದರೂ ಪಕ್ಷದಲ್ಲಿ ಓಡಾಟˌ ಓಲೈಕೆಯಿಲ್ಲದಿದ್ದಲ್ಲಿ ಹೈಕಮಾಂಡ್ ಗೆ ಆತ ಗೋಚರಿಸುವುದಿಲ್ಲ. ಸ್ವಚ್ಚತೆಯ ಸ್ಥಳೀಯ ಸದಸ್ಯ ಬಂಧುಗಳನ್ನು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸಂದರ್ಭ ಸಂಪರ್ಕಿಸುವುದಿಲ್ಲ. ಪಕ್ಷನಾಯಕರಿಗೆ ಪಕ್ಷಹಿತವೇ ಹೊರತು ಸಂಘದ ಹಿತ ಗೌಣ.ಈ ರೀತಿಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸಹಕಾರಸಂಘದ ಅಭಿವೃಧ್ಧಿ ದೃಷ್ಟಿಯಿಂದ ಪ್ರಥಮ ತೊಡರುಗಾಲು. ಹಲವಾರು ಕಡೆಗಳಲ್ಲಿ ರಾಜಕೀಯ ನಾಯಕರೆನ್ನಿಸಕೊಂಡ ಆ ಸಂಸ್ಥೆಯ ಸುಸ್ತಿದಾರ ಮತದಾನಕ್ಕೆ ಅನರ್ಹಸದಸ್ಯರು ಅಭ್ಯರ್ಥಿ ಆಯ್ಕೆಯ ಪ್ರಮುಖರಾಗಿರುತ್ತಾರೆ. ಅವರು ಲಕ್ಷಗಟ್ಟಲೆ ಸಾಲಪಡೆಯಲು ಮಾತ್ರ ಉತ್ಸುಕರಾಗಿದ್ದುˌ ಸಂಸ್ಥೆಯ ದೈನಂದಿನ ವ್ಯವಹಾರಗಳಲ್ಲಾಗಲಿˌ ಮಹಾಸಭೆಗಳಲ್ಲಾಗಲೀ ಭಾಗವಹಿಸುವುದಿಲ್ಲ. ಸಂಸ್ಥೆಯ ಬಗ್ಗೆ ಕಾಳಜಿಯಿಲ್ಲದ ಇಂತಹ ಸುಸ್ತಿದಾರ ಸದಸ್ಯರಿಂದ ಸಂಘದ ಅಭಿವೃಧ್ಧಿಗಾಗಿ ನಾವು ಏನನ್ನು ನಿರೀಕ್ಷಿಸಬಹುದು? ಇತ್ತೀಚೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಇಂತಹ ಸದಸ್ಯರು ನೇತೃತ್ವವಹಿಸಿ ಮತದಾನಕ್ಕೆ ಅನರ್ಹ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸುವಂತೆ ಉಚ್ಫ ನ್ಯಾಯಾಲಯದ ಮೊರೆ ಹೋಗುವುದನ್ನು ಕಾಣಲಾಗುತ್ತಿದೆ. ಹಲವು ಕಡೆ ನ್ಯಾಯಾಲಯವು ಮಧ್ಯಂತರ ಆದೇಶದ ಮೂಲಕ ಮತದಾನಕ್ಕೆ ಅವಕಾಶನೀಡುತ್ತಿದ್ಧುˌ ಅಂತಹವರ ಮತಪೆಟ್ಟಿಗೆಯನ್ನು ಪ್ರತ್ಯೇಕವಾಗಿ ಕಾಯ್ದಿಟ್ಟುˌನ್ಯಾಯಾಲಯದ ಅಂತಿಮ ಆದೇಶದ ಬಳಿಕ ಚುನಾವಣಾ ಫಲಿತಾಂಶ ಘೋಷಣೆಗೆ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತಿದೆ.
ಸಹಕಾರ ಸಂಘಗಳ ಚುನಾವಣೆಗಳಲ್ಲಿ ಪರೋಕ್ಷವಾದ ಪಕ್ಷ ರಾಜಕಾರಣವನ್ನು ಬಹಳ ವರ್ಷಗಳ ಹಿಂದಿನಿಂದ ಕಾಣಲಾಗುತ್ತಿದೆ. ಆ ಸಂದರ್ಭಗಳಲ್ಲಿ ಒಂದಷ್ಟು ಸಹಕಾರದಲ್ಲಿ ಆಸಕ್ತರುˌ ಅರ್ಹರಿಗೆ ಆಡಳಿತದಲ್ಲಿ ಅವಕಾಶವಾಗುತ್ತಿತ್ತು.ಆದರೆ ಇತ್ತೀಚೆಗೆ ಇದು ಸಂಸ್ಥೆ ಹಿತಾಸಕ್ತಿಗೆ ಮಾರಕವಾಗುವ ರೀತಿಯಲ್ಲಿ ಭ್ರಷ್ಟ ಸುಸ್ತಿದಾರರ ಕಪಿಮುಷ್ಟಿಗೆ ತಲಪಿದ್ದುˌ ಶ್ರದ್ದೆಯ ಸಹಕಾರಿ ಮಿತ್ರರು ಅವಕಾಶವಂಚಿತರಾಗುವ ಮಟ್ಟಕ್ಕೆ ತಲಪಿದೆ. ಮಿತಿಮೀರಿದ ಚುನಾವಣಾ ಪಕ್ಷ ರಾಜಕಾರಣ “ಸಹಕಾರ”ಕ್ಕೊಂದು ಸವಾಲಾಗಿದ್ದು ಇದನ್ನು ನಿರ್ಬಂಧಿಸಲು ಕ್ರಮಕೈಗೊಳ್ಳುವ ಕಾಲ ಸನ್ನಿಹಿತ ವಾಗಿದೆ. ನ್ಯಾಯಾಲಯ ಕೂಡಾ ಇಂತಹ ಚಟುವಟಿಕೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಆಡಳಿತ ಮಂಡಳಿಗೆ ಆಯ್ಕೆಯಾದ ಬಳಿಕ ಕೆಲವು ಸಂದರ್ಭಗಳಲ್ಲಿ ಆಡಳಿತಮಂಡಳಿ ಸದಸ್ಯರು ಸುಸ್ತಿದಾರರಾಗುತ್ತಾರೆ. ಕಾನೂನು ಪ್ರಕಾರ ಒಬ್ಬ ನಿರ್ದೇಶಕ ಒಂದು ದಿನ ಸುಸ್ತಿದಾರನಾದರೂ ಅನರ್ಹತೆ ಹೊಂದುತ್ತಾನೆ. ಇದನ್ನು ಇಲಾಖೆಗೆ ವರದಿಮಾಡುವ ಜವಾಬ್ದಾರಿ ಸಂಘದ ಮುಖ್ಯಕಾರ್ಯನಿರ್ವಾಹಕನದ್ದಾಗಿರುತ್ತದೆ. ಹಲವು ಸಂದರ್ಭಗಳಲ್ಲಿ ಬಾಹ್ಯ ಒತ್ತಡˌ ದಾಕ್ಷಿಣ್ಯಕ್ಕೆ ಒಳಗಾಗಿ ವರದಿ ಮಾಡುವ ಗೋಜಿಗೆ ಆತ ಹೋಗುವುದಿಲ್ಲ. ಒಂದುವೇಳೆ ಆತ ವರದಿ ಮಾಡಿದರೂ ಕೆಲವೊಮ್ಮೆ ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣದಿಂದಾಗಿ ಅನರ್ಹತೆ ತೀರ್ಪು ನೀಡದೆ “ಒಡಂಬಡಿಕೆ”ಯ ತೀರ್ಪು ನೀಡಿ ವಿಷಯವನ್ನು ಮುಗಿಸುತ್ತಾರೆ. ಅದೇ ರೀತಿ ಪಕ್ಷ ಪ್ರಭಾವದ ಮೂಲಕ ವೈಯುಕ್ತಿಕ ಮಿತಿಗಿಂತ ಅಧಿಕ ಸಾಲಪಡೆಯುವˌ ಸೂಕ್ತ ದಾಖಲೆಗಳನ್ನು ಪಡೆಯದೇ ಸಾಲ ನೀಡುವ ಪ್ರಕ್ರಿಯೆಗಳು ಸಾಕಷ್ಟು ನಡೆಯುತ್ತಿವೆ.
ಈ ರೀತಿಯ ಹಲವಾರು ನಿಯಮಬಾಹಿರ ಪಕ್ಷರಾಜಕೀಯ ಒತ್ತಡದ ಕೆಲಸಗಳು ಸಹಕಾರ ಸಂಘಗಳನ್ನು ನಿಧಾನವಾಗಿ ಮೂಲೆಗುಂಪು ಗೊಳಿಸುವತ್ತ ದಾರಿಯಾಗಬಹುದು. ಇನ್ನಾದರೂ ಸಂಬಂಧಿಸಿದ ಸರ್ವರು ಸಹಕಾರಿಕ್ಷೇತ್ರದಲ್ಲಿ ರಾಜಕಾರಣವನ್ನು ತೊಡೆದು ಹಾಕಿ ಸಹಕಾರಸಿದ್ದಾಂತವನ್ನು ಬಲಪಡಿಸುವತ್ತ ಸಿದ್ದಾಂತವಾದಿ ಸಹಕಾರಿಗಳ ಚಿತ್ತ ಹರಿಯಲಿಯೆಂದು ಆಶಿಸೋಣ.
ರಾಧಾಕೃಷ್ಣ ಕೋಟೆ.