ಜಗತ್ತಿನ ಸಹಕಾರ ಚಳುವಳಿಯ ಪ್ರಾರಂಭ ಬಡನೇಕಾರ ಬಂಧುಗಳಿಂದ ಹಾಗೂ ದೇಶದ ಚಳುವಳಿಗೆ ನಾಂದಿ ಹಾಡಿದ ಜಾಗ ಕರ್ನಾಟಕದ ಈಗಿನ ಗದಗ ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶ ಕಣಗಿನಹಾಳ.ಇದೊಂದು ಇತಿಹಾಸವಾದರೂ ಇಂದು 65% ರೈತ ಕುಟುಂಬಗಳನ್ನು ಅವಲಂಬಿಸಿರುವ ಗ್ರಾಮೀಣ ಜೀವನದ ಯಶಸ್ವಿಗೆ ಸಹಕಾರ ಚಳುವಳಿ ಪಾತ್ರ ಬಹಳ ಮಹತ್ವವಾದುದು.
ವಿಶೇಷವಾಗಿ ಸಾಲವ್ಯವಹಾರ ˌ ಮೀನುಗಾರಿಕೆˌಹೈನುಗಾರಿಕೆˌ ಕ್ರಷಿಉತ್ಪನ್ನಗಳ ಮಾರಾಟ ಮುಂತಾದ ಹತ್ತು ಹಲವು ರೈತರ ದೈನಂದಿನ ವ್ಯವಹಾರಗಳನ್ನು ಸಹಕಾರಿ ಸಂಘಗಳು ನಿರ್ವಹಿಸುತ್ತಿರುವುದು ಈ ಕ್ಷೇತ್ರದ ಬಗ್ಗೆ ಜನತೆಗಿರುವ ವಿಶ್ವಾಸದ ದ್ಯೋತಕ. ಒಂದು ಗ್ರಾಮೀಣ ಸಹಕಾರಿ ಸಂಘದಲ್ಲಿ ಸಾಲˌ ಠೇವಣಾತಿ ವ್ಯವಹಾರˌ ಪ್ರಮುಖವಾಗಿದ್ದರೂ ಜನರ ದೈನಂದಿನ ಬದುಕಿಗೆ ಅವಶ್ಯವಿರುವ ಸರ್ವಸವಲತ್ತನ್ನು ಒದಗಿಸಲು ಸಾಧ್ಯವಿದೆ. “ತೊಟ್ಟಿಲಿನಿಂದ ಚಟ್ಟ”ದ ತನಕದ ಚಟುವಟಿಕೆಯನ್ನು ಸಹಕಾರಿ ಸಂಘದಲ್ಲಿ ನಿಭಾಯಿಸಬಹುದು. ವಾಣಿಜ್ಯ ಬ್ಯಾಂಕುಗಳು ಪ್ರತಿಷ್ಟಿತವಾಗಿ ಕಂಡುಬಂದು ವಿಶಾಲವಾದ ಕಬಂಧಬಾಹುಗಳನ್ನು ಚಾಚಿದ್ದರೂ ಅವುಗಳ ವ್ಯವಹಾರ ಸಾಲˌ ಠೇವಣಾತಿಗಳಿಗೆ ಸೀಮಿತ. ಆದರೆ ಒಂದು ಸಹಕಾರಿ
ಸಂಘದಲ್ಲಿ ಸಾಲವ್ಯವಹಾರˌ ಠೇವಣಾತಿ ಸಂಗ್ರಹˌ ಕ್ರಷಿಯುತ್ಪನ್ನಗಳ ಖರೀದಿˌ ಮಾರಾಟ ˌಸಂಸ್ಕರಣೆˌ ದೈನಂದಿನ ಜೀವನಾಶ್ಯಕ ಸರ್ವ ವಸ್ತುಗಳನ್ನು ಆಧುನಿಕ ಮಾಲ್ ಗಳ ಸ್ವರೂಪದಲ್ಲಿ ಮಾರಾಟˌರಸಗೊಬ್ಬರˌ ಕ್ರಿಮಿನಾಶಕಗಳ ವಿತರಣೆˌ ರೈತನ ಮಾಲುಗಳ ದಾಸ್ತಾನುˌ ಸದಸ್ಯರ ಬದುಕಿಗೆ ಅವಶ್ಯವಿರುವ ವಿಮಾ ಸೌಲಭ್ಯಗಳುˌ ನೆಟ್ ವರ್ಕ್ ಬ್ಯಾಂಕಿಂಗ್ ಮುಂತಾದ ಹತ್ತು ಹಲವು ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ತಂದು ಗ್ರಾಹಕರಿಗೆ ಒದಗಿಸಲು ಸಾಧ್ಯ. ಗ್ರಾಮೀಣ ಪರಿಸರದಲ್ಲಿ ಜನರನ್ನು ಬದುಕನ್ನು ಅರಿವಿಲ್ಲದೇ ಹಸನಾಗಿಸಿದ ಹಲವಾರು ಉದಾಹರಣೆಗಳು ಸಹಕಾರಿ ಕ್ಷೇತ್ರದಲ್ಲಿವೆ.
“ಸಹಕಾರ” ಗೋಪುರಾಕ್ರತಿಯಲ್ಲಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆ. ಸಕ್ರಿಯ ಸದಸ್ಯರು ಸಹಕಾರಿ ಸಂಘಗಳ ಜೀವಾಳ. ಸದಸ್ಯರು ವ್ಯವಹಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿರಂತರ ವ್ಯವಹಾರವನ್ನು ಮಾಡುವುದು ಸದಸ್ಯರ ಕರ್ತವ್ಯ. ಕೇವಲ ಲಾಭದ ಅನಿವಾರ್ಯ ವ್ಯವಹಾರವಾದರೆ ಸಹಕಾರ ಸಂಘದ ಅವಲಂಬನೆˌ ಇಲ್ಲವಾದರೆ ಖಾಸಗಿಯನ್ನು ಅವಲಂಬಿಸುವುದು ಸಹಕಾರ ಚಳುವಳಿಯ ಬೆಳವಣಿಗೆಗೆ ಪೂರಕವಲ್ಲ. ಕನಿಷ್ಟ ವ್ಯವಹಾರ ಮಾಡುವ ಸಕ್ರಿಯ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹರು ಎಂದು ಕಾನೂನು ಹೇಳಬೇಕಾಗಿ ಬಂದಿರುವುದು ಸಹಕಾರಕ್ಕೆ ದುರಾದ್ರಷ್ಟಕರ ಸಂಗತಿ. ಸಹಕಾರದ ತಿರುಳನ್ನು ಅರಿತವ ಕ್ಷಣಿಕ ಲಾಭ _ನಷ್ಟವನ್ನು ಗಣನೆಗೆ ತಾರದೆ ಸಕ್ರಿಯ ವಾಗಿ ತೊಡಗಿಸಿಕೊಳ್ಳುತ್ತಾನೆ. ಇಂತಹ ಸದಸ್ಯರ ಶೇಕಡಾವಾರು ಪ್ರಮಾಣ ಯಾವ ಸಹಕಾರಿ ಸಂಘದಲ್ಲಿ ಹೆಚ್ಚು ಇದೆಯೊ ಅದು ಯಶಸ್ಸಿನ ದಿಕ್ಸೂಚಿಯನ್ನು ಪ್ರತಿಬಿಂಬಿಸುತ್ತದೆ. ಅಂತಹ ಸಹಕಾರಿ ಸಂಘಗಳಿರುವ ಗ್ರಾಮೀಣ ಪ್ರದೇಶ ಸಮ್ರದ್ದಿಯನ್ನು ಕಾಣುತ್ತದೆ. ಉದಾ: ಸಹಕಾರ ಚಳುವಳಿ ಕರ್ನಾಟಕದ ಕರಾವಳಿ ˌಮಲೆನಾಡುˌ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿದ್ದು ಇದಕ್ಕೆ ಸದಸ್ಯರ
ಬಹುದೊಡ್ಡ ಕೊಡುಗೆ ಕಾರಣ. ಇಲ್ಲಿಯ ಜನಜೀವನ ಆರ್ಥಿಕವಾಗಿ ಸುದ್ರಢ ವಾಗಿರುವುದನ್ನು ನಾವು ಕಾಣುತ್ತಿದ್ದೇವೆ.
ಸದಸ್ಯರ ಸಕ್ರಿಯತೆಯ ಜತೆಗೆ ವಸ್ತುನಿಷ್ಟವಾಗಿ ಕಾರ್ಯವೆಸಗಬೇಕಾಗಿರುವುದು ಸದಸ್ಯರಿಂದ ಚುನಾಯಿಸಲ್ಪಟ್ಟ ಆಡಳಿತ ಮಂಡಳಿ ಕರ್ತವ್ಯ. ಆಡಳಿತ ಮಂಡಳಿ ಕಾನೂನು ˌ ನಿಯಮಗಳ ಬಗ್ಗೆ ಅರಿವು ಉಳ್ಳವರಾಗಿ ಪ್ರಾಮಾಣಿಕತೆˌ ಬದ್ದತೆ ˌಹೊಣೆಗಾರಿಕೆಯಿಂದ ದೈನಂದಿನ ಆಡಳಿತದ ಸೂತ್ರದಾರರಾಗಿರಬೇಕು. ಸಂಘದ ವ್ಯವಹಾರದ ಬಗ್ಗೆ ನೀತಿರೂಪಿಸಿ ನಿರ್ಣಯ ಕೈಗೊಳ್ಳುವುದು ಆಡಳಿತ ಮಂಡಳಿಯ ಮೊದಲ ಆದ್ಯತೆ. ಕಾಲಕಾಲದಲ್ಲಿ ಸದಸ್ಯಬೇಡಿಕೆಗಳನ್ನು ಗಮನಿಸಿ ನಿಯಮಗಳಿಗೆ ಚ್ಯುತಿ ಬಾರದಂತೆ ವ್ಯವಹರಿಸಿದರೆ ಆಡಳಿತ ಮಂಡಳಿ ಸಕ್ರಿಯ ವಾಗಿದೆಯೆಂದು ಪರಿಗಣಿಸಬಹುದು. ಹೊಸಹೊಸ ವಿಷಯಗಳನ್ನು ಆಡಳಿತ ಮಂಡಳಿ ಚರ್ಚಿಸಿ ಕಾರ್ಯಗತಗೊಳಿಸಬೇಕು. ಆದರೆ ಎಲ್ಲೂ ಚೌಕಟ್ಟನ್ನು ಮೀರಬಾರದು. ಒಂದುವೇಳೆ ಉಪವಿಧಿಯಲ್ಲಿ ಇಲ್ಲದ ವಿಚಾರವಾದರೆ ಸಂಘದ ಸದಸ್ಯರ ಹಿತದ್ರಷ್ಟಿಯಿಂದ ಅನುಕೂಲವೆಂದು ಕಂಡುಬಂದಲ್ಲಿ ಉಪವಿಧಿಯಲ್ಲಿ ಅಳವಡಿಸಿ ಅಧಿಕಾರಸ್ತರ ಮಂಜೂರಾತಿ ಮೇರೆಗೆ ಜ್ಯಾರಿಗೆ ತರುವುದು ಚಾಣಾಕ್ಷತನ. ಸಂಸ್ಥೆಯ ಪ್ರಮುಖ
ಚುಕ್ಕಾಣಿ ವಹಿಸಿದ ಅಧ್ಯಕ್ಷ ಸಂಘದ ದೈನಂದಿನ ಆಗುಹೋಗುಗಳನ್ನು ಸದಾ ಗಮನಿಸಬೇಕು. ಅವಶ್ಯವೆಂದುಕಂಡುಬಂದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ನಿದರ್ಶನ ನೀಡುವಮೂಲಕ ನಿಬಂಧನೆಗೊಳಪಟ್ಟು ಯಾವುದೇ ವಿಷಯವನ್ನು ಜ್ಯಾರಿಗೆ ಕ್ರಮಕೈಗೊಳ್ಳಬಹುದು.ಆದರೆ ಆತ ಕಾನೂನು ನಿಯಮ ಉಪವಿಧಿಗಳನ್ನು ಪರಿಶೀಲಿಸಿ ಮುಂದಡಿಯಿಡುವ ಛಾತಿˌ ಸೂಕ್ಷ್ಮಮತಿತ್ವ ಹೊಂದಿರುವುದು ಸಂಘದ ಭವಿಷ್ಯಕ್ಕೆ ತೀರಾ ಅವಶ್ಯ.
ಮುಖ್ಯಕಾರ್ಯನಿರ್ವಹಣಾಧಿಕಾರಿ ದೈನಂದಿನ ಚಟುವಟಿಕೆ ಜ್ಯಾರಿಯ ರೂವಾರಿ. ಆತನ ಸ್ಥೈರ್ಯˌ ಚಾಣಾಕ್ಷತನˌ ಸೂಕ್ಷ ಮತಿತ್ವˌ ಸಹಕಾರದ ಬಗ್ಗೆ ಇರುವ ಜ್ಞಾನ ಸಂಸ್ಥೆಯ ಮುನ್ನಡೆಗೆ ದಾರಿದೀಪ. ಆತ ಪ್ರಾಮಾಣಿಕˌ ದಕ್ಷˌˌ ಬದ್ದತೆಯುಳ್ಳವನಾಗಿದ್ದು ಪ್ರತಿಯೋಬ್ಬ ಶಿಬಂಧಿಯ ಕೆಲಸ ಹಂಚೋಣವನ್ನು ಸದಾ ಪರಿಶೀಲಿಸಿˌ ಸದಸ್ಯರು—ಶಿಬಂಧಿ ಮಧ್ಯನಗುಮುಖದ ಸಂಬಂಧ ಬೆಳೆಯಲು ಪ್ರೇರಣೆಯಾಗಿರಬೇಕು.ದೈನಂದಿನ ವ್ಯವಹಾರˌ ಲೆಕ್ಕಪತ್ರದ ಮಾಹಿತಿ ˌಕಾನೂನಿನ ಜ್ಞಾನ ಮುಖ್ಯ ಕಾರ್ಯನಿರ್ವಣಾಧಿಕಾರಿ ಸ್ಮ್ರತಿಪಟಲದಲ್ಲಿ ಸದಾ ಹಸಿರಾಗಿರಬೇಕು.ಅದೇ ರೀತಿ ಪ್ರತಿಯೊಬ್ಬ ಶಿಬಂಧಿ ತನ್ನ ಕರ್ತವ್ಯ ಅರಿತು ಪ್ರಾಮಾಣಿಕತೆಯಿಂದ ಗ್ರಾಹಕರ ಮುಖವಾಣಿಯಾಗಿ ಹಸನ್ಮುಖದಲ್ಲಿ ಚುರುಕಿನ ಕಾರ್ಯನಿರ್ವಹಿಸಬೇಕು.
ಸದಸ್ಯರುˌ ಆಡಳಿತ ಮಂಡಳಿˌ ಅಧ್ಯಕ್ಷˌ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಶಿಬಂಧಿಯವರು ಗೋಪುರಾಕ್ರತಿಯಲ್ಲಿ ತಮ್ಮತಮ್ಮ ಕರ್ತವ್ಯˌ ಹಕ್ಕುಗಳನ್ನುಅರಿತು ಸಕ್ರಿಯರಾಗಿ ಸಹಕಾರಿಸಂಘಗಳಲ್ಲಿ ತೊಡಗಿಸಿಕೊಳ್ಳತಕ್ಕದ್ದು. ವಿಶೇಷವಾಗಿ ಗ್ರಾಮೀಣ ಬದುಕಿಗೆ ಮುನ್ನುಡಿ ಬರೆಯಲು ಶಕ್ತವಾಗಿರುವ “ಸಹಕಾರ” ಉತ್ತಮ ಆಡಳಿತ ನೀಡಿದಾಗ ಗ್ರಾಮೀಣರ ಜೀವನ ಸಮ್ರದ್ದಿಯತ್ತ ಸಾಗಿದ ಹಲವಾರು ಉದಾಹರಣೆಗಳಿವೆ. ಸರ್ವರಿಗೂ ಸಮಪಾಲು—ಸರ್ವರಿಗೂ ಸಮಬಾಳು ಸಿದ್ದಾಂತದ ಆಶಯದೊಂದಿಗೆ ಸಹಕಾರ ಮುನ್ನಡೆಯಲಿ.
– ರಾಧಾಕೃಷ್ಣ ಕೋಟೆಅಂಚೆ: ಕಳಂಜˌ ಸುಳ್ಯ ತಾಲೂಕು
ದ. ಕ : 574212
9448503424