ಸಹಕಾರಿ ರಂಗದಲ್ಲಿ ಅನ್ಯಾನ್ಯ ಸೇವೆಗಳನ್ನು ತನ್ನ ಸದಸ್ಯರಿಗೆ ಮತ್ತು ಸಮಾಜಕ್ಕೆ ಒದಗಿಸುವ ಅವಕಾಶ ಇದೆ. ಕೆಲವೊಂದು ಪ್ರಾಥಮಿಕ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಬಹಳಷ್ಟು ದೂರ ನಡೆದಾಗಿದೆ. ಇನ್ನು ಹಲವು ಸಂಘಗಳಿಗೆ ಏನಾದರೂ ಮಾಡಬೇಕೆಂಬ ಉತ್ಸುಕತೆ ಇದೆ. ಇನ್ನು ಹಲವು ಸಂಘಗಳಿಗೆ ಕನಸುಗಳೇ ಇಲ್ಲ. ನಿತ್ಯ ಕರ್ಮಗಳನ್ನು ಮುಗಿಸಿ ಹಾಯಾಗಿದ್ದುಬಿಡುವುದು ಅವರ ಜಾಯಮಾನ. ಮೊದಲ ಮತ್ತು ಕೊನೆಯ ಜಾಯಮಾನದ ಸಹಕಾರಿ ಸಂಘಗಳಿಗೆ ಯಾವ ಸಲಹೆಗಳೂ ಅಗತ್ಯ ಇಲ್ಲ. ಮೊದಲನೆಯ ಪಂಗಡದ ಸಂಘಗಳಿಗೆ ಸಾಕಷ್ಟು ಅನುಭವ ಇದೆ. ಕಷ್ಟ ನಷ್ಟಗಳಲ್ಲಿ ಮೇಲೆ ಬಂದವರು. ಕಷ್ಟಗಳ ಅಡಿಪಾಯದಲ್ಲಿ ಸಹಕಾರಿ ಲಾಭಗಳ ಸೌಧಗಳನ್ನು ಕಟ್ಟಿ ಬೆಳೆದವರು. ಇಂತಹ ಸಹಕಾರಿಗಳಿಂದ ಉಳಿದವರು ಕಲಿಯುವುದು ಬಹಳಷ್ಟಿದೆ. ಇನ್ನು ಕೊನೆಯವರು. ಯಾರ ಅನುಭವ ಕಥನಕ್ಕೂ ಬದಲಾಗದೆ ಸದ್ಯದ ಸ್ಥಿತಿಯ ಲಾಭಗಳನ್ನು ಪಡೆದುಕೊಂಡು ಅದೇ ಹಳೆಯ ಶೈಲಿಯಲ್ಲಿ ಸಹಕಾರಿ ಬದುಕನ್ನು ಕಟ್ಟಿಕೊಡುವವರು. ಇವರಿಂದ ದೊಡ್ಡ ಸಾಧನೆಯನ್ನೇನೂ ನಿರೀಕ್ಷೆ ಮಾಡುವಂತಿಲ್ಲ. ಇಂತಹ ಸಂಘಗಳು ತಮ್ಮ ಕಣ್ಣ ಮುಂದೆಯೇ ಇತರ ಸಂಘಗಳು ಮುಂದೋಡುತ್ತಿದ್ದರೆ ತಾವು ಅದು ಯಾವುದೂ ನಮಗೆ ಸಂಬAಧಿಸಿದ್ದಲ್ಲ ಎಂದು ಹಳೇ ದಾರಿಯಲ್ಲಿ ಕುಂಟುತ್ತಾ ಸಾಗುತ್ತಿರುತ್ತವೆ.
ಬದಲಾವಣೆಯತ್ತ ಮುಖ
ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾದ್ದು ಜಗದ ನಿಯಮ. ಅಂತಹ ಬದಲಾವಣೆಗೆ ತೆರೆದುಕೊಳ್ಳುವ ಮನಸ್ಸು ಮೂಡಿದರೆ ಸಂಘದ ಯಶಸ್ಸು ಶತ:ಸ್ಸಿದ್ಧ. ಸಂಘದ ಸದಸ್ಯರಿಗೆ ನುರಾರು ಯೋಚನೆಗಳಿರುತ್ತವೆ. ಪ್ರತಿ ಸಲ ತಮ್ಮ ಸಹಕಾರಿ ಸಂಘಕ್ಕೆ ಭೇಟಿ ನೀಡಿದಾಗಲೂ ಸದಸ್ಯರಿಗೆ ಒಂದಲ್ಲ ಒಂದು ಅಭಿವೃದ್ಧಿಯ ಯೋಜನೆ ತಲೆಯಲ್ಲಿ ಸುಳಿಯುತ್ತಿರುತ್ತದೆ. ಅದನ್ನು ಅವರು ಸಹಕಾರಿ ಸಂಗದ ಆಡಳಿತ ಮಂಡಳಿ ಸದಸ್ಯರಲ್ಲಿ ಅಥವ ಸಿಬ್ಬಂದಿಗಳಲ್ಲಿ ಹೇಳಿ ಚರ್ಚೆ ಮಾಡಿದರೆ ಅದು ಅತ್ಯುತ್ತಮ ಬೆಳವಣಿಗೆ. ಹೆಚ್ಚಾಗಿ ಅಂತವುಗಳಿಗೆ ಅವಕಾಶಗಳು ಕಡಿಮೆ. ಸಹಕಾರಿ ಸಂಘಗಳ ವಾರ್ಷಿಕ ಮಹಾಸಭೆಗಳು ಹೆಚ್ಚಾಗಿ ದೊಡ್ಡ ಮಟ್ಟಿನ ವಿಚಾರ ವಿಮರ್ಶೆಗಳಿಲ್ಲದೆ ಮುಗಿದು ಬಿಡುತ್ತವೆ. ಸದಸ್ಯರ ಮನದಾಳಕ್ಕಿಳಿದು ಮನದೊಳಗೆ ಕೊರೆಯುತ್ತಿರುವ ವಿಚಾರಗಳಿಗೆ ಅಲ್ಲಿ ಅವಕಾಶಗಳಿರುವುದು ಬಹಳ ಕಷ್ಟ.
ಸದಸ್ಯರೊಂದಿಗೆ ಮುಖಾಮುಖಿ
ಇದನ್ನೆಲ್ಲ ನಿವಾರಿಸಲು ಮೂರು ಅಥವ ಆರು ತಿಂಗಳಿಗೊಮ್ಮೆ ಪ್ರತಿಯೊಂದು ಸಹಕಾರಿ ಸಂಘ ತನ್ನ ಸದಸ್ಯರನ್ನು ಕರೆದು ಸಣ್ಣ ಸಣ್ಣ ಸಭೆಗಳನ್ನು ಮಾಡಿದರೆ ಅಲ್ಲಿ ಇಂತಹ ಯೋಚನೆ, ಯೋಜನೆಗಳು ಬೆಳಕಿಗೆ ಬರಲು ಸಾಧ್ಯ. ಯಾಕೆಂದರೆ ಸದಸ್ಯರೇ ಸಹಕಾರಿ ಸಂಘದ ಆಧಾರ ಸ್ತಂಭಗಳು. ಅವರ ಜೊತೆಗಿನ ಸಂಬAಧಗಳು ಹೆಚ್ಚಿದಷ್ಟು ಸಹಕಾರಿ ಸಂಘದ ಕಾರ್ಯಚಟುವಟಿಕೆಗಳಿಗೆ ಉತ್ಸಾಹ, ಉತ್ತೇಜನ ತುಂಬಬಹುದಷ್ಟೆ. ಸಹಕಾರಿ ಸಂಘಕ್ಕೆ ಶಾಖೆಗಳಿದ್ದರೆ ಅಂತಹ ಶಾಖೆಗಳ ವ್ಯಾಪ್ತಿಯ ಸದಸ್ಯರು ಅಲ್ಲಿಯ ಸಭೆಗೆ ಬರುವಂತೆ ಮಾಡಿದರೆ ಆ ಶಾಖೆಯ ಬೆಳವಣಿಗೆ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಬಹುದು. ಕೆಲವು ಸದಸ್ಯರು ಸಹಕಾರಿಯ ಕಾರ್ಯವೈಖರಿಯನ್ನು ಪ್ರಶಂಸೆ ಮಾಡಬಹುದು. ಕೆಲವರು ಏನೇನೂ ಹಿತವಲ್ಲವೆಂದು ಹೀಗಳೆಯಬಹುದು. ಅದೆಲ್ಲ ಇರುವುದೇ ಎಂದು ತಿಳಿದುಕೊಂಡು ಆರೋಗ್ಯಯುತ ಚರ್ಚೆಗೆ ಒತ್ತು ನೀಡಿ ಅಭಿವೃದ್ಧಿಯ ಕಡೆಗೆ ಎಲ್ಲರೂ ತೆರೆದುಕೊಳ್ಳುವಂತೆ ಮಾಡುವ ಗುಣಾತ್ಮಕ ತೀರ್ಮಾನಗಳು ಅಲ್ಲಿ ಮೂಡಿ ಬರಬೇಕು. ಎಷ್ಟೋ ಸಲ ಎರಡು ನಾಲ್ಕು ಅವಧಿಗೆ ನಿರ್ದೇಶಕರಾಗಿ ಆಡಳಿತ ಮಂಡಳಿಗಳಲ್ಲಿ ಇದ್ದವರಿಗೂ ಹೊಳೆಯದ ಹೊಸ ಮೌಲ್ಯವರ್ಧಿತ ಸೇವೆಗಳು ಇಂತಹ ಸಭೆಗಳಲ್ಲಿ ವಿಮರ್ಶೆ ಆಗಬಹುದು. ಅದು ಕಾರ್ಯಗತವಾಗಿ ಮುಂದೆ ಆ ಸಹಕಾರಿಯ ಉನ್ನತೋನ್ನತಿಗೆ ಮೆಟ್ಟಲಾಗಬಹುದು. ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳಿರುತ್ತವೆ. ಅವುಗಳು ನಮ್ಮ ಅರಿವಿಗೆ ಎಷ್ಟೋ ಸಲ ಬಂದಿದ್ದರೂ ಅದನ್ನು ಗಾಢವಾಗಿ ಮನದೊಳಗೆ ತಂದು ವಿವೇಚನೆ ನಾವು ಮಾಡಿರುವುದಿಲ್ಲ. ಅದೊಂದೇ ಆ ಸಹಕಾರಿಯ ದೆಸೆಯನ್ನೇ ಬದಲಾಯಿಸಬಹುದು.
ಸಹಕಾರಿ ಸಂಘಕ್ಕೆ ಕೇವಲ ಸಾಲ ನೀಡಿಕೆ, ಮರುಪಾವತಿ ವಹಿವಾಟಿನ ಲಾಭ ಸಾಕಾಗುವುದಿಲ್ಲ. ಅದು ಇನ್ನಿತರ ಸೇವೆಗಳನ್ನು ತನ್ನ ಸದಸ್ಯರಿಗೆ ನೀಡುತ್ತಿರಲೇ ಬೇಕು. ಕೃಷಿಕರಿಗೆ, ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ಗುಡಿಕೈಗಾರಿಕೆಗಳಿಗೆ ಆಪ್ತವಾಗುವ ಸೇವೆಗಳನ್ನು ಕೊಟ್ಟರೆ ಆ ಸಹಕಾರಿ ಸಂಘ ಪ್ರಶಂಸೆ ಗಳಿಸುತ್ತದೆ. ಅಷ್ಟೇ ಅಲ್ಲ, ವೇತನ ನೀಡಲು, ಇನ್ನಿತರ ಖರ್ಚು ವೆಚ್ಚಗಳನ್ನು ಭರಿಸಲು ತನ್ನ ಸೇವೆಗಳಿಂದ ಬಂದ ಆರ್ಥಿಕ ಸಬಲತೆಯಿರುವಾಗ ಭಯಪಡುವ ಅಗತ್ಯಗಳೇ ಬರುವುದಿಲ್ಲ.
ಯಾವುದೇ ಹೊಸ ಮೌಲಯವರ್ಧಿತ ಸೇವೆಗಳಲ್ಲಿ ಸಂಘ ತೊಡಗುವ ಮುನ್ನ ಆ ಯೋಜನೆಯ ಪೂರ್ಣ ಪೂರ್ವಾಪರಗಳನ್ನು ಮತ್ತು ಲಾಭಾಲಾಭಗಳನ್ನು ವಿಮರ್ಶೆ ಮಾಡಿಕೊಳ್ಳಲೇ ಬೇಕು. ಒಂದು ಯೋಜನೆ ಆರಂಭಿಸಿದ ನಂತರ ಅದರಿಂದ ಸುಲಭದಲ್ಲಿ ಹಿಂದೆ ಬರುವುದು ಹೇಡಿತನ. ಅದಕ್ಕಾಗಿ ಹೊಸ ಯೋಚನೆ ಹುಟ್ಟಿದಾಗ ಅದರ ಬಗ್ಗೆ ಅಧ್ಯಯನ ನಡೆಸಲು ಸಂಘದ ಅಧ್ಯಕ್ಷರು ಒಂದು ಸಮಿತಿಯನ್ನು ರಚಿಸಿ ಅಧ್ಯಯನದ ವರದಿಯ ಮೇಲೆ ಮುನ್ನಡೆಯುವುದು ಜಾಣತನ.
ಶಂ.ನಾ.ಖಂಡಿಗೆ