ಪ್ರಜಾಪ್ರಭುತ್ವ ಆಡಳಿತದಲ್ಲಿ ನಾಯಕತ್ವದ ಪಾತ್ರ ಬಹಳ ಪ್ರಮುಖವಾಗಿರುತ್ತದೆ.ನಾಯಕ ಅಂದರೆ ಆಡಳಿತ ವ್ಯವಸ್ಥೆಯ ರೂವಾರಿ.ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮತದಾರರ ಅಧೀನದ ಕೇಂದ್ರ ಸರಕಾರ ˌ ರಾಜ್ಯ ಸರಕಾರˌ ಜಿಲ್ಲಾ ಪಂಚಾಯತುˌ ತಾಲೂಕು ಪಂಚಾಯತುˌ ಗ್ರಾಮ ಪಂಚಾಯತುˌ ಮುಂತಾದ ಸಾರ್ವಜನಿಕ ಆಡಳಿತ ರಂಗಗಳಂತೆ ಸದಸ್ಯರಿಂದ ನಡೆಸಲ್ಪಡುವ ಸಹಕಾರಿ ರಂಗ ಕೂಡಾ ಬಹುದೊಡ್ಡ ಪ್ರಜಾಪ್ರಭುತ್ವ. ಸಹಕಾರಿ
ಸಂಘಗಳಲ್ಲಿ ವೃತ್ತಿಪರ ಆಡಳಿತ ನಿರ್ವಹಣೆ ಇದ್ದಲ್ಲಿ ಮಾತ್ರ ಆ ಸಂಸ್ಥೆ ಪ್ರಬಲವಾಗಿ ಬೆಳೆದು ಸಾಧನೆಯ ಶಿಖರ ಕಂಗೊಳಿಸಲು ಸಾಧ್ಯ.
6(ಆರು) –“M” ಯಾವುದೇ ಸಹಕಾರಿ ಸಂಸ್ಥೆಯಲ್ಲಿ ನಿರ್ವಹಣೆ ಸಂದರ್ಭ ಇರಲೇ ಬೇಕಾದ ಪ್ರಮುಖ ಅಂಶಗಳು.
1) Money-ಹಣಕಾಸು
2) Menpower -ವ್ಯಕ್ತಿ ಸಂಪನ್ಮೂಲ
3) Mechines- ಯಾಂತ್ರಿಕತೆ
4) Materials- ಸಾಮಾಗ್ರಿಗಳು
5) Market -ಮಾರುಕಟ್ಟೆ
6) Management skill – ಆಡಳಿತಕುಶಲತೆ
1)ಹಣಕಾಸು
ಸಹಕಾರಿ ಸಂಘ ದುಡಿಯುವ ಬಂಡವಾಳದ [(1) ಪಾಲುಬಂಡವಾಳ(2) ಕಾದಿಟ್ಟ ನಿಧಿಗಳು (3) ಕೆಟ್ಟ ಸಾಲಗಳಿಗೆ ಕಾದಿಟ್ಟ ನಿಧಿ (NPA) (4). ಇತರ ನಿಧಿಗಳು (5) ಸಾಲಗಳು (6)ಠೇವಣಾತಿಗಳು(7)ಹಂಚಿಕೆಯಾಗದ ಲಾಭಾಂಶ] ಮೂಲಕ ಬಲವಾದ ಹಣಕಾಸು ವ್ಯವಸ್ಥೆಯನ್ನು ಹೊಂದಿದ್ದಲ್ಲಿ ಸಂಸ್ಥೆಯು ಗಟ್ಟಿತನವನ್ನು ಸಾರುತ್ತದೆ.
2). ವ್ಯಕ್ತಿ ಸಂಪನ್ಮೂಲ
ವ್ಯಕ್ತಿ ಸಂಪನ್ಮೂಲ ಕೂಡಾ ಸಂಸ್ಥೆಯ ನಿರ್ವಹಣೆಯಲ್ಲಿ ಇರುವ ಪ್ರಮುಖ ಅಂಶ. ಆಡಳಿತ ಮಂಡಳಿˌ ಅಧ್ಯಕ್ಷˌ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಶಿಬಂಧಿ ಸುಲಲಿತ ಆಡಳಿತ ನಿರ್ವಹಣೆಯಲ್ಲಿ ಇರಬೇಕಾದ ಸಂಪನ್ಮೂಲಗಳು. ಇವುಗಳಲ್ಲಿ ಯಾವುದೇ ಅಂಶ ಸಶಕ್ತರೀತಿಯಲ್ಲಿ ಜವಾಬ್ದಾರಿಯುತವಾಗಿ ಇಲ್ಲದಿದ್ದಲ್ಲಿ ಸಂಸ್ಥೆ ನಿರೀಕ್ಷೆಯಂತೆ ಮುನ್ನಡೆಯಲು ಅಸಾಧ್ಯ.
3) ಯಾಂತ್ರಿಕತೆ
ಆಧುನಿಕ ಕಾಲಘಟ್ಟದಲ್ಲಿ ಡಿಜಿಟಲೈಸೇಶನ್ ಸಹಿತ ನವೀನ ಯಾಂತ್ರಿಕತೆ ಸಂಸ್ಥೆಯಲ್ಲಿದ್ದು ವೇಗದ ಖಚಿತಕಾರ್ಯಗಳು ಸಾಗುತ್ತಿರಬೇಕು.
4) ಸಾಮಾಗ್ರಿಗಳು
ಸಾಮಾಗ್ರಿಗಳು ಅಂದರೆ ವಸ್ತುಗಳು ಎಂಬ ಅರ್ಥ ಮಾತ್ರವಲ್ಲ. ಎಲ್ಲಾ ವಿಧದ ಸೌಲಭ್ಯಗಳು ಗ್ರಾಹಕರಿಗೆ ದೊರೆಯುವಂತಿರಬೇಕು.
5)ಮಾರುಕಟ್ಟೆ
ಸಂಸ್ಥೆ ಸದಸ್ಯನ ಉತ್ಪನ್ನಗಳಿಗೆ ಉತ್ತಮದರದ ಮಾರುಕಟ್ಟೆಯ ತಾಣವಾಗಬೇಕು.
6) ಆಡಳಿತ
ಆಡಳಿತ ಅನ್ನುವಂತದ್ದು ಸಂಸ್ಥೆಯ ವ್ಯವಹಾರ ಸೂತ್ರಕ್ಕೆ ಜೀವತುಂಬುವ ಸಾಧನ. ಇತರರಿಂದ ಅರ್ಥಾತ್ ಸಂಸ್ಥೆಯ ಶಿಬಂಧಿಯಿಂದ ಕೆಲಸಮಾಡಿಸುವ ಕಲೆಯನ್ನು ಹೊಂದಿದ್ದಲ್ಲಿ ಅದು ಆಡಳಿತ ಮಂಡಳಿಯ ನಿಜವಾದ ನಿರ್ವಹಣೆ. ಸಹಕಾರಿ ಸಂಸ್ಥೆಯ ಏಳುಬೀಳು ಆಡಳಿತ ನಿರ್ವಹಣೆಯ ಚಾಕತ್ಯದಲ್ಲಿ ಅಡಕವಾಗಿರುತ್ತದೆˌ
ಆಡಳಿತ ಮಂಡಳಿಯು ತನ್ನ ನಿಗದಿತ ಕರ್ತವ್ಯ ಹಾಗೂ ಮುಂದಿರುವ ಯೋಜನೆಗಳನ್ನು ಗುರಿ ಮುಟ್ಟುವ ಹಾದಿಯಲ್ಲಿ ಛಲಬಿಡದೇ ಸಾಗಬೇಕು. ಗುರಿಮುಟ್ಟಲು ದಿಕ್ಕು ತೋರಿಸುವಾತನೇ ನಾಯಕ ಅರ್ಥಾತ್ ಅಧ್ಯಕ್ಷ. ಮಾನವ ಸಂಪನ್ಮೂಲಗಳ ನಿರ್ವಹಣೆಯ ಜ್ಞಾನದೊಂದಿಗೆ ಬೆಂಬಲಿಗರ ಸಹಾಯಪಡೆದು ಮುನ್ನಡೆಯುವವನು ಉತ್ತಮ ಸಹಕಾರಿನಾಯಕನಾಗಲು ಸಾಧ್ಯ. ಆಡಳಿತ ಮಂಡಳಿ ಹಾಗೂ ಶಿಬಂಧಿಯ ಮಧ್ಯದ ಬಾಂಧವ್ಯ ಸಹಕಾರಿರಂಗದಲ್ಲಿ ಪ್ರಮುಖವಾದ ಅಂಶ.ನಿಗದಿತ ಅವಧಿಯಲ್ಲಿ ಶಿಬಂಧಿಗೆ ಹೊಣೆನೀಡಿದ ಮಾರಾಟದ ಮ್ಹಾಲುಗಳನ್ನುಕಡ್ಡಾಯವಾಗಿ ತಪಾಸಣೆಗೊಳಿಸುವುದು ಆಡಳಿತದ ಜವಾಬ್ದಾರಿ. ಒಂದುವೇಳೆ ತಪಾಸಣೆಗೆ ಒಳಪಡಿಸದೇ ಶಿಬಂಧಿಯ ಜತೆ ಶಾಮೀಲಾಗಿ ಅವರು ಹೇಳಿದಂತೆ ವರ್ತಿಸುವವರು ಬೇಜವಾಬ್ದಾರಿಯವರಾಗಿದ್ದು ಆಡಳಿತಕ್ಕೆ ನಾಲಾಯಕ್ಕು ವ್ಯಕ್ತಿಗಳು. ಸಂಘದ ಮಾರಾಟ ವಿಭಾಗದಲ್ಲಿ ಲಾಭಾಂಶ ಕನಿಷ್ಟಪ್ರಮಾಣದಲ್ಲಿದ್ದು ಹೆಚ್ಚು ಸಲವ್ಯವಹಾರವನ್ನು ಕುದುರಿಸಿದಾಗ ಗ್ರಾಹಕನಿಗೂ ಅನುಕೂಲˌ ಸಂಸ್ಥೆಯು ಗಟ್ಟಿಯಾಗುತ್ತದೆ. ಅದನ್ನು ನಿರ್ವಹಿಸುವ ಶಕ್ತಿ ಆಡಳಿತಕ್ಕೆ ಇರಬೇಕುˌ
ಆಡಳಿತˌ ಶಿಬಂಧಿ ತಮ್ಮ ಹಕ್ಕುˌ ಕರ್ತವ್ಯದ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿ ಕಾರ್ಯನಿರ್ವಹಿಸಬೇಕು. ಅವರು ಉತ್ತಮರು ಅನ್ನಬೇಕಾದರೆ ಸೂಕ್ಷ್ಮಮತಿತ್ವ ಇರಲೇಬೇಕು. ಅಚ್ಚುಕಟ್ಟಾಗಿ ಪ್ರಾಮಾಣಿಕರೀತಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ಸಂಸ್ಥೆಯ ಆಸ್ತಿ. ತನ್ನ ವೃತ್ತಿಯಲ್ಲಿ ಅಲ್ಪಜ್ಞಾನ ಹೊಂದಿˌ ನಿಷ್ಟಾವಂತ ಸಹವರ್ತಿಯನ್ನು ದಾರಿತಪ್ಪಿಸುವವರು ಅಲ್ಪತನದ ಸ್ಥಾನ ಹೊಂದುತ್ತಾರೆ. ಸಂಘದಲ್ಲಿ ತನಗೆ ಹಂಚಲ್ಪಟ್ಟ ಕೆಲಸಗಳನ್ನು ಪೂರ್ಣರೀತಿಯಲ್ಲಿ ನಿರ್ವಹಿಸದೆ ಅಲ್ಪಸ್ವಲ್ಪ ತಿಳುವಳಿಕೆ ಹೊಂದಿ ಆಡಳಿತಮಂಡಳಿಯನ್ನು ಭೋಪರಾಕ್ ಅನ್ನುತ್ತಾ ಸಂಘದ ಸ್ವತ್ತನ್ನು ಸ್ವಾಹಾ ಮಾಡುವವರು ಸಂಘದ ಕೆಟ್ಟ ಸೊತ್ತು. (NPA).
ಆಡಳಿತಮಂಡಳಿ ಹಾಗೂ ಶಿಬಂಧಿಯವರಲ್ಲಿ ಸಂವಹನ ಸಾಮರ್ಥ್ಯವಿರಬೇಕು ಸದಸ್ಯರುˌ ಗ್ರಾಹಕರನ್ನು ನಗುಮುಖದಿಂದ ಸ್ವಾಗತಿಸಿˌಅವರ ಅವಶ್ಯಕತೆಗಳಿಗೆ ಚುರುಕಾಗಿ ಸ್ಪಂದಿಸಿದಾಗ ಸಂಘದ ಬಗ್ಗೆ ಗೌರವಾನ್ವಿತ ಅಭಿಪ್ರಾಯ ಸಾರ್ವಜನಿಕವಾಗಿ ಮೂಡುತ್ತದೆ. ಖಾಯಂ ಬರುವ ಗ್ರಾಹಕನನ್ನು ಗುರುತು ಪರಿಚಯದ ನೆಲೆಯಲ್ಲಿ ಮಾತನಾಡಿಸಿದಾಗ ಆತನಲ್ಲಿ ಸಂತಸದ ಭಾವನೆ ತುಂಬಿ ಸಂಸ್ಥೆಯಲ್ಲಿ ವ್ಯವಹಾರವನ್ನು ವೃದ್ದಿಸುತ್ತಾನೆ. ಗ್ರಾಹಕನಿಗೆ ನಿರೀಕ್ಷೆಗಿಂತ ಹೆಚ್ಚಿನ ಸೇವೆ ದೊರೆತಾಗ ಅದು ಸಮಾಜದ ಇತರರ ಮಧ್ಯೆ ಪಸರಿಸಿ ಸಂಸ್ಥೆ ವಿಶಾಲವಾಗಿ ಬೆಳೆಯಲು ದಾರಿದೀಪವಾಗುತ್ತದೆ. ಗ್ರಾಹಕ ಸಂಬಂಧಕ್ಕೆ ಇರುವಷ್ಟೇ ಪ್ರಾಮುಖ್ಯತೆ ಗೃಹಬಳಕೆಯ ವಸ್ತುಗಳ ನಿರ್ವಹಣೆಗೂ ಇದೆ. ವಸ್ತುಗಳ ವಿಂಗಡಣೆˌ ಕ್ರಮಬದ್ದತೆˌ ಶುಭ್ರತೆˌ ವ್ಯವಹಾರಿಕ ಶಿಸ್ತುಪಾಲನೆˌ ಗ್ರಾಹಕ ಚಟುವಟಿಕೆಯ ಪ್ರಮುಖ ಅಂಶಗಳು. ಇವತ್ತು ರಾಜನಾಗಿದ್ದ ವ್ಯಕ್ತಿ ನಾಳೆ ಸೇವಕನಾಗಿ ಕಾರ್ಯನಿರ್ವಹಿಸುವ ಮನೋಸ್ಥಿತಿ ಆಡಳಿತ ಮಂಡಳಿˌ ಶಿಬಂಧಿಗೆ ಗ್ರಾಹಕವ್ಯವಹಾರದಲ್ಲಿ ಅಗತ್ಯ. ಗ್ರಾಹಕರೊಂದಿಗೆ ನಗುಮುಖದ ಸಂವಹನದಲ್ಲಿ ಅವರನ್ನು ಹೊಗಳುವಿಕೆಯ ಧ್ವನಿ ಗಟ್ಟಿಯಾಗಿರಬೇಕು. ಗ್ರಾಹಕರದ್ದು ಯಾವುದಾದರೂ ಋಣಾತ್ಮಕ ವ್ಯವಹಾರಗಳಿದ್ದಲ್ಲಿ ಅಂತಹ ಸಂದರ್ಭದಲ್ಲಿ ಬಹಳ ನಯವಾಗಿ ಆತನ ಗಮನಕ್ಕೆ ತರುವ ಅಂಶವನ್ನು ರೂಢಿಸಿಕೊಳ್ಳಬೇಕು.
ಈ ರೀತಿ ವೃತ್ತಿಪರತೆˌಶಿಸ್ತನ್ನು ಕಾಪಾಡಲು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಹಾಗೂ ಶಿಬಂಧಿಗೆ ತರಬೇತಿ ಅವಶ್ಯ. ವರ್ಷದಲ್ಲಿ ಎರಡು ಮೂರು ಭಾರಿ ಮಾನವ ಸಂಪನ್ಮೂಲˌ ˌಕಾನೂನುˌ ನಿಯಮˌ ಲೆಕ್ಕಪತ್ರ ಮುಂತಾದ ವಿಷಯಾಧಾರಿತವಾಗಿ ತಜ್ಞರಿಂದ ತರಬೇತಿಗಳನ್ನು ಏರ್ಪಡಿಸುತ್ತಾ ಇದ್ದಲ್ಲಿ ವೃತ್ತಿಪರತೆಯ ಬಗ್ಗೆ ಶಿಕ್ಷಣ ದೊರೆಯುತ್ತದೆ. ಎಲ್ಲಾ ಸಹಕಾರಿ ಸಂಸ್ಥೆಗಳು ಆಗಾಗ ತರಬೇತಿಗಳತ್ತ ಗಮನಹರಿಸಲೇಬೇಕು.”ಕ್ಷಣಕ್ಷಣ ಶಿಕ್ಷಣ” ಅಂದಹಾಗೆ ಆಡಳಿತಮಂಡಳಿ ಶಿಬಂಧಿಯ ಜ್ಞಾನˌ ಶಿಸ್ತನ್ನು ವೃದ್ದಿಸಲು ತರಬೇತಿ ತೀರಾ ಅವಶ್ಯ.
ಒಟ್ಟಿನಲ್ಲಿ ಸಹಕಾರಿಕ್ಷೇತ್ರದಲ್ಲಿ ವೃತ್ತಿಪರತೆ ಮೈಗೂಡಿದಾಗ ಸಹಕಾರದ ಬೆಳಕು ಪ್ರಜ್ವಲಿಸಲು ಸಾಧ್ಯ.

ರಾಧಾಕೃಷ್ಣ ಕೋಟೆ