
ರಾಷ್ಟ್ರದ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ವಲಯ ಅದರಲ್ಲಿಯೂ ಎಲ್.ಪಿ. ಜಿ (Liberalisation,Privitastion, Globalization) ಪರಿಸರದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದರ ಪರಿಣಾಮ ಸಂಪತ್ತು ಬೆಳೆಯುತ್ತಿದೆ. ಅದರೊಡನೆ ‘ಉಳ್ಳವರು ‘ ಮತ್ತು ‘ ಇಲ್ಲದವರ ‘ನಡುವಿನ ಅಂತರ ಕೂಡ ಅಗಾದವಾಗಿ ಬೆಳೆಯುತ್ತಿದ್ದು ಸಮಾಜದಲ್ಲಿ ಅನೇಕ ದುಷ್ಕೃತ್ಯ, ಅಜಾಗೂರುಕತೆ, ಅಕ್ಷೋಭೆಗೆ ಕಾರಣವಾಗುತ್ತಿದೆ. ವಿಶ್ವದ ಧ್ಯೇಯ ಸಮತಾ ಸಮಾಜ ನಿರ್ಮಾಣದ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸುವುದಾಗಿದೆ. ಈ ಉದ್ದೇಶ ಸಾಧನೆಗೆ ‘ಸಹಕಾರ ಚಳುವಳಿ’ ಅತ್ಯುತ್ತಮ ಮಾರ್ಗ ಎಂಬುದನ್ನು ‘ವಿಶ್ವ ಸಂಸ್ಥೆ’ಯೂ ಕಂಡುಕೊಂಡಿದೆ. ಈ ದಿಶೆಯಲ್ಲಿ ಅದು 2025 ನೇ ವರ್ಷವನ್ನು ‘ಅಂತರಾಷ್ಟ್ರೀಯ ಸಹಕಾರ ವರ್ಷ’ವಾಗಿ ಘೋಷಿಸಿದೆ. ಕಾಪೋರೇಟ್ ಸಂಸ್ಥೆಗಳು ಬೆಳೆದಂತೆ ಸಹಕಾರ ಸಂಸ್ಥೆಗಳು ಬೆಳೆಯುತ್ತಿಲ್ಲವೇಕೆ? ಬೆಳೆಯಲು ಅನುಸರಿಸ ಬೇಕಾದ ಆಡಳಿತ ಕ್ರಮಗಳೇನು? ಈ ವಿಶ್ಲೇಷಣೆ ಯನ್ನು ಸಹಕಾರ ಸಂಸ್ಥೆಗಳು ಕೈಗೊಳ್ಳಬೇಕಿದೆ. ಇದು ಈ ದಿನದ ಅವಶ್ಯತೆ. ಕಾರ್ಪೋರೇಟ್ ಆಡಳಿತ ಅಥವ ಅತ್ಯುತ್ತಮ ಆಡಳಿತ ಸೂತ್ರ ಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಸಹಕಾರ ಸಂಸ್ಥೆಗಳು ಯಶಸ್ವಿಯಾಗಿ ನಡೆದು ಸಮತಾ ಸಮಾಜ ನಿರ್ಮಾಣಕ್ಕೆ ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗಬಹುದು.
ಅತ್ಯುತ್ತಮ ಆಡಳಿತ (Good Governance ) ಅಥವ ಕಾಪೋರೇಟ್ ಆಡಳಿತ ಮೂಲ ಸೂತ್ರ ಗಳನ್ನು ಅರಿಯುವ ಮುನ್ನ ಸಹಕಾರ ಸಂಸ್ಥೆಗಳು ಪ್ರಜಾಸತ್ತಾತ್ಮಕ ಹತೋಟಿ ಯಿಂದ ನಡೆಯುವ ಸದಸ್ಯರ ಸಂಸ್ಥೆಗಳು , ಚುನಾವಣೆ ಮೂಲಕ ‘ಆಡಳಿತ ಮಂಡಳಿ’ ರಚನೆಯಾಗುತ್ತದೆ. ಇವರ ನಡುವಿನ ಚುನಾವಣೆಯಿಂದ ಪದಾಧಿಕಾರಿಗಳು ‘ಅಧ್ಯಕ್ಷರು, ಉಪಾಧ್ಯಕ್ಷರು’ ಆಯ್ಕೆಗೊಳ್ಳುತ್ತಾರೆ.
ಇವರು ಸದಸ್ಯರ ಅವಶ್ಯಕತೆ, ನಿರೀಕ್ಷೆ, ಆಶೋತ್ತರಗಳ ಈಡೇರಿಕೆ ಮಾಡುತ್ತಾರೆ. ಇದರಂತೆ ಸಹಕಾರ ಸಂಸ್ಥೆಗಳು ‘ಸದಸ್ಯ ಚಾಲಿತ ‘ ಸಂಸ್ಥೆಗಳಾಗಿ ನಡೆಯುತ್ತವೆ ಎಂಬುದು ಪ್ರಮುಖ ಆಶಯ. ಈ ಆಶಯದ ಈಡೇರಿಕೆಗಾಗಿ ಅತ್ಯುತ್ತಮ ಆಡಳಿತದ ಮೂಲ ಸೂತ್ರಗಳನ್ನು ಆಡಳಿತ ಮಂಡಳಿ ಪಾಲಿಸಬೇಕಾದ ಅವಶ್ಯಕತೆ ಇದೆ.
ಅತ್ಯುತ್ತಮ ಆಡಳಿತ ಸೂತ್ರಗಳು :
(1) ಪಾರದರ್ಶಕತೆ
(2) ಪಾಲ್ಗೊಳ್ಳುವಿಕೆ
(3) ಮುಂದಾಲೋಚನೆ / ದೂರಾಲೋಚನೆ
(4) ಉತ್ತರದಾಯಿತ್ವ/ಹೊಣೆಗಾರಿಕೆ
ಈ ನಾಲ್ಕು ಮೂಲ ಸೂತ್ರಗಳನ್ನುಅತ್ಯುತ್ತಮ ಆಡಳಿತ ಅಥವ ಕಾರ್ಪೋರೇಟ್ ಆಡಳಿತದ ನಾಲ್ಕು ಆಧಾರ ಸ್ಥಂಭಗಳು ಎಂದು ಪರಿಗಣಿಸಲಾಗಿದೆ. ಈ ಆಡಳಿತ ಸೂತ್ರಗಳನ್ನು ಮೇಳೈಸಿ ಸಹಕಾರ ಸಂಸ್ಥೆಗಳಲ್ಲಿ ಸಹಕಾರ ಆಡಳಿತ ವನ್ನುಅತ್ಯುತ್ತಮ ಸಹಕಾರ ಆಡಳಿತ ವಾಗಿ ರೂಪಿಸುವುದು ಈ ದಿನದ ಅವಶ್ಯಕತೆಯೂ , ಅನಿವಾರ್ಯವೂ ಆಗಿದೆ ಎಂದರೆ ತಪ್ಪಾಗಲಾರದು.
(1) ಪಾರದರ್ಶಕತೆ (Transparency): ಆಡಳಿತ ಮಂಡಳಿ ತಾನು ತೆಗೆದುಕೊಳ್ಳುವ ನಿರ್ಧಾರಗಳು, ಕೈಗೊಳ್ಳುವ ಯೋಜನೆಗಳು ಪಾರದರ್ಶಕತೆಯಿಂದ ಕೂಡಿರಬೇಕು. ಇದರಿಂದ ಆಡಳಿತ ಮಂಡಳಿಯು ಪ್ರಾಮಾಣಿಕ , ದಕ್ಷ, ಹಾಗೂ ಕ್ರಿಯಾಶೀಲ ಆಡಳಿತವನ್ನು ನಡೆಸುತ್ತಿದೆ ಎಂದು ಗೋಚರವಾಗುತ್ತದೆ. ಆಡಳಿತ ಮಂಡಳಿ ಸಭೆಗಳು ಕೇವಲ ಔಪಚಾರಿಕೆ ಸಭೆಗಳಾಗದೆ ‘ಕ್ರೀಯಾಶೀಲ ‘ ಸಭೆಯಾಗಿ ಅದರ ನಡವಳಿಕೆಗಳು ಅನುಷ್ಠಾನಗೊಂಡು ಸದಸ್ಯೋಪಯೋಗಿ ಪರಿವರ್ತನೆ ಗೊಳ್ಳಬೇಕು. ಉದಾಹರಣೆಗೆ ಯಂತ್ರೋಪಕರಣಗಳ ಖರೀದಿ, ಕಂಪ್ಯೂಟರೀಕರಣ, ಸಿಬ್ಬಂದಿ ನೇಮಕಾತಿ, ಕಟ್ಟಡ ನಿರ್ಮಾಣ, ರಿಪೇರಿ, ಕಟ್ಟಡ ಖರೀದಿ, ಮಾರಾಟ, ಸಾಲ ಮಂಜೂರಾತಿ ,ಇತರೆ., ಟೆಂಡರ್ ಕರೆಯುವುದು, ಜಾಹಿರಾತು ನೀಡುವುದು , ಸಾಕಷ್ಟು ಪ್ರಚಾರ ಪಡಿಸುವುದು , ಈ ಮೂಲಕ ಅತುತ್ತಮ ಗುತ್ತಿಗೆದಾರರ ಆಯ್ಕೆ, ಸಿಬ್ಬಂದಿ ನೇಮಕಾತಿ, ಸರಬರಾಜುದಾರರ, ಸೇವೆ ಸಲ್ಲಿಸುವವರಿಗೆ ಅವಕಾಶ ಒದಗಿಸುವುದು. ಇದರಿಂದ ಸದಸ್ಯರು ಮತ್ತು ಸಾರ್ವಜನಿಕರಲ್ಲಿ ಸಹಕಾರ ಸಂಸ್ಥೆ ಬಗ್ಗೆ ಸದಭಿಪ್ರಾಯ ಮೂಡುತ್ತದೆ. ಸದಸ್ಯರಿಗೆ ಅತ್ಯುತ್ತಮ ಸೇವೆ ದೊರೆಯುತ್ತದೆ.
(2) ಪಾಲ್ಗೊಳ್ಳುವಿಕೆ (Participation ): ಸದಸ್ಯರು , ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸರಬರಾಜುದಾರರು/ಗುತ್ತಿಗೆದಾರರು/ ಗ್ರಾಹಕರು ಇವರುಗಳು ಸಹಕಾರ ಸಂಸ್ಥೆಯ ಭಾಗೀದಾರರು (stake holders) ಆಗಿರುತ್ತಾರೆ. ಇವನೆಲ್ಲರನ್ನೂ ಒಳಗೊಂಡು , ಪಾಲ್ಗೊಳ್ಳುವಂತೆ ಮಾಡಿ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಅದರ ಅನುಷ್ಠಾನ ಸುಲಭ ಸಾಧ್ಯವಾಗುತ್ತದೆ. ಇದನ್ನು ‘ಪಾಲ್ಗೊಳ್ಳುವಿಕೆಯ ವ್ಯವಸ್ಥಾಪನೆ’ (partpative Manage ment ) ಎನ್ನಲಾಗುತ್ತದೆ. ಯಾವುದೇ ಯೋಜನೆಯ ಅನುಷ್ಠಾನ / ಕಾರ್ಯಗತ ಗೊಳಿಸುವಲ್ಲಿ’ ಅವರನ್ನೂ ‘ಒಳಗೊಳ್ಳುವಂತೆ ಮಾಡಲು ಸಾಧ್ಯವಾ ಗುತ್ತದೆ. ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಕ್ರಿಯಾಶೀಲ ಸದಸ್ಯರ/ ಸಕ್ರಿಯ ಸದಸ್ಯರ / ವಿಶೇಷ ಮಹಾಸಭೆ ಕರೆಯುವುದು, ಗ್ರಾಹಕರ ಸಮಾವೇಷ , ಸಿಬ್ಬಂದಿ ಸಭೆಗಳಲ್ಲಿ ಪ್ರಸ್ಥಾಪಿಸಿ ಅಭಿಪ್ರಾಯ ಸಂಗ್ರಹಣೆ , ಸುತ್ತೋಲೆ, ಪ್ರಕಟಣೆ ಮೂಲಕ ಸಲಹೆ , ಸೂಚನೆಗಳನ್ನು ಪಡೆಯುವುದು. ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು. ಇದರಿಂದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಲ್ಲ ಭಾಗೀಧಾರವನ್ನು ಒಳಗೊಂಡಂತಾಗುತ್ತದೆ.
ಅನುಷ್ಟಾನಗೊಳ್ಳಬಲ್ಲ / ಕಾರ್ಯಗತಗೊಳ್ಳಬಲ್ಲ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ. ಎಲ್ಲ ಭಾಗೀದಾರರ ಬದ್ದತೆಯನ್ನು ಖಾತ್ರಿಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.
(3) ಮುಂದಾಲೋಚನೆ/ದೂರಾಲೋಚನೆ ( Predicability ): ಇದು ಉತ್ತಮ ನಾಯಕತ್ವದ ಗುಣ . ಆಡಳಿತ ಮಂಡಳಿ ಸದಸ್ಯ / ನಿರ್ದೇಶಕರು ಸದಸ್ಯರ ‘ನಾಯಕರು ‘ ಸದಸ್ಯರಿಂದ ಸದಸ್ಯರಿಗಾಗಿ ಚುನಾಯಿತಗೊಂಡು ಆಡಳಿತದ ಚುಕ್ಕಾಣಿ ಹಿಡಿದವರು. ತಾವು ಯಾವುದೇ ನಿರ್ಧಾರ ತೆಗೆದು ಕೊಂಡರೆ ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಆಲೋಚಿಸಬೇಕಾಗುತ್ತದೆ. ಉದಾ: ಠೇವಣಿಗಳ ಸಂಗ್ರಹಣೆಯಿಂದ ಕಟ್ಟಡ ನಿರ್ಮಾಣ, ಠೇವಣಿಗಳನ್ನು ಬಡ್ಡಿ ಸಹಿತ ಹಿಂತಿರುಗಿಸುವ ಬಗೆ ಹೇಗೆ? ಕಟ್ಟಡದಿಂದ ಅಷ್ಟು ಹುಟ್ಟುವಳಿ ಸಾಧ್ಯವೇ? , ಅಧಿಕ ಬಡ್ಡಿ ಅವಧಿ ಠೇವಣಿ ಸಂಗ್ರಹಣೆ , ಅದರ ಮೇಲೆ ನಿಧಿಗಳ
ಮೇಲಿನ ವೆಚ್ಚದ ಮೇಲಿನ ಪರಿಣಾಮ. ಸಾಲ ನೀಡಿಕೆ, ಹೂಡಿಕೆ ಮೇಲೆ ಗಳಿಸಬಹುದಾದ ಗಳಿಕೆ ಎಷ್ಟು ? ಅಂತರ ಸಾಧ್ಯವೇ? ಅಲ್ಪ ಜೀವಿತಾವಧಿ ವಸ್ತುಗಳ ಖರೀದಿ ಮಾರಾಟ ಆಗಬಹುದಾದ ಲಾಭ/ನಷ್ಟಗಳ ಲೆಕ್ಕಾಚಾರ. ಕೃಷಿ ಉತ್ಪನ್ನಗಳ ಸಂಗ್ರಹಣಿ ಮಾರಾಟ ಇತರೆ. ಸಹಕಾರ ಸಂಸ್ಥೆ ಮುಂದೆ ನಷ್ಟಕ್ಕೆ ಈಡಾಗದಂತೆ , ಅದರ ನಿಧಿಗಳು ಸವಕಳಿ ಯಾಗದಂತೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಬಂಡವಾಳದ ಹಿಂತಿರುಗುವಿಕೆ (Return of Capital ), ಬಂಡವಾಳದಿಂದ ಗಳಿಕೆ (Return from Capital), ಬಂಡವಾಳಕ್ಕೆ ಬಂಡವಾಳ ಸೇರ್ಪಡೆ (Return to Capital )ನ್ನು ಖಾತ್ರಿ ಗೊಳಿಸಿಕೊಳ್ಳಬೇಕಾಗುತ್ತದೆ. ಆಡಳಿತ ಮಂಡಳಿ ವಿವೇಚನಯುತವಾದ , ಸದಸ್ಯರ ಒಳಿತಿಗಾಗಿ, ಸಹಕಾರ ಸಂಸ್ಥೆಯು ಶಾಶ್ವತವಾಗಿ ನೆಲೆಗೊಳ್ಳುವಂತ ಮುಂದಿನ ಪೀಳಿಗೆಗೂ ಉಪಯುಕ್ತವಾಗಬಲ್ಲ ಸಂಸ್ಥೆಯಾಗಿ ರೂಪುಗೊಳ್ಳಲು ಸಾಧ್ಯವಾಗುವಂತಹ ತೀರ್ಮಾನ/ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
(4) ಉತ್ತರದಾಯಿತ್ವ / ಹೊಣೆಗಾರಿಕೆ (Accountability): ಆಡಳಿತ ಮಂಡಳಿ ಸದಸ್ಯರು / ನಿರ್ದೇಶಕರು ಸದಸ್ಯರಿಗೆ ಹೊಣೆಗಾರರು ಎಂಬ ಜವಾಬ್ದಾರಿಯುತ ಅರಿವು ಅವರಲ್ಲಿ ಇರತಕ್ಕದ್ದು. ಆಡಳಿತ ಮಂಡಳಿ ಸಾಮಾನ್ಯ ನಿಕಾಯಕ್ಕೆ ಜವಾಬ್ದಾರಿ . ಸಹಕಾರಿ ಸಂಸ್ಥೆಯ ‘ಯಜಮಾನರು’ ಸದಸ್ಯರು. ಸದಸ್ಯರು ಒಟ್ಟುಗೂಡಿ ‘ಸ್ವಸಹಾಯ ಮತ್ತು ಪರಸ್ಪರ ಸಹಾಯ ‘ ಆಧಾರಿತವಾಗಿ ತಮ್ಮ ಅವಶ್ಯಕತೆಗಾಗಿ ತಾವು ಸ್ಥಾಪಿಸಿಕೊಂಡಿರುವ ಸಂಸ್ಥೆ ಇದು. ಅವಶ್ಯ ವ್ಯವಹಾರ ನಡೆಸಲು ಅನುಕೂಲವಾಗುವಂತೆ ತಮ್ಮಲ್ಲಿ ತಾವು ತಮ್ಮ ಪ್ರತಿನಿಧಿಗಳಾಗಿ ಪ್ರಜಾಸತ್ತಾತ್ಮಕ ನಿಯಂತ್ರಣ/ಆಡಳಿತ ಕ್ಕಾಗಿ ಆಯ್ಕೆ ಮಾಡಲಾಗಿರುತ್ತದೆ. ಆದುದರಿಂದ ತಾವು ನಿರ್ದೇಶಕರಾಗಿ ಸದಸ್ಯರಿಗೆ ಹೊಣೆಗಾರರು ಎಂಬ ಅರಿವು ಇರತಕ್ಕದ್ದು. ಈ ಅರಿವಿನಿಂದ ತಮ್ಮಲ್ಲಿ ಜವಾಬ್ದಾರಿ ಮೂಡಿ ಸ್ವ ಹಿತಾಸಕ್ತಿ, ಹಿತಾಸಕ್ತಿ ಸಂಘರ್ಷ, ಅಪ್ರಮಾಣಿಕತೆ ಗಳಿಗೆ ಅವಕಾಶವಿಲ್ಲದಂತೆ ವರ್ತಿಸಲು ಸದಾ ಸದಸ್ಯರ ಹಿತಾಸಕ್ತಿಗೆ ಪೂರಕವಾಗಿ ವರ್ತಿಸಲು ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯನ್ನು ಲಾಭದಾಯಕವಾಗಿ ನೆಡೆಸಿ ಸದಸ್ಯರಿಗೆ ಲಾಭಾಂಶ (Dividend) ವಿತರಿಸುವ, ಸಿಬ್ಬಂದಿ ವರ್ಗದವರಿಗೆ ವೇತನ ದೊರೆಯುವಂತೆ ಮಾಡುವ , ಠೇವಣಿದಾರರಿಗೆ ಸಕಾಲದಲ್ಲಿ ಠೇವಣಿ ಹಿಂತಿರುಗಿಸುವ , ಸಾಲ ಅವಶ್ಯವುಳ್ಳ ಸದಸ್ಯರಿಗೆ ಸಾಲ ವಿತರಿಸುವ ,ಸಾಲಗಾರ ಸದಸ್ಯರಿಂದ ಸಕಾಲದಲ್ಲಿ ಬಡ್ಡಿ ಸಹಿತ ಸಾಲ ವಸೂಲಿ ಮಾಡುವ ಜವಾಬ್ದಾರಿ ತಮ್ಮದಾಗಿದೆ ಎಂಬ ಹೊಣಿಗಾರಿಕೆಯನ್ನು ಆಡಳಿತ ಮಂಡಳಿ ಹೊಂದಿರ ತಕ್ಕದ್ದು. ಇದರಿಂದ ಸೂಕ್ತ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಂಡು ಸಹಕಾರ
ಸಂಸ್ಥೆಯನ್ನು ಯಶಸ್ವಿಯಾಗಿ , ಸದಸ್ಯಸ್ನೇಹಿ ಯಾಗಿ ನಡೆಸಲು ಸಾಧ್ಯವಾಗುತ್ತದೆ.
ಸಹಕಾರ ಸಂಸ್ಥೆಯಾಗಿ ಈ ಮೇಲಿನ ಅತ್ಯುತ್ತಮ ಮೂಲ ಸೂತ್ರಗಳಲ್ಲದೇ ಸಹಕಾರ ಮೌಲ್ಯಗಳು ಮತ್ತು ಸಹಕಾರ ತತ್ವಗಳನ್ನು ಈ ಸೂತ್ರಗಳೂಡನೆ ಮೇಳೈಸಿ ಆಡಳಿತ ಮಂಡಳಿಯು ಸೂಕ್ತ ನಿರ್ಧಾರಗಳನ್ನು/ತೀರ್ಮಾನಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಸಹಕಾರ ಮೌಲ್ಯಗಳು:
1) ಸ್ವಸಹಾಯ ಮತ್ತು ಪರಸ್ಪರ ಸಹಾಯ : ಈ ಮೌಲ್ಯ ಸಹಕಾರದ ತಿರುಳು. ಭವಿಷ್ಯಕ್ಕಾಗಿ ನಿಧಿ ಉಳಿತಾಯ, ಲಾಭಾಂಶದ ಸೀಮಿತ ವಿತರಣೆ, ಶಕ್ತರಿಂದ ಠೇವಣಿ ಸಂಗ್ರಹಣೆ ಅವಶ್ಯವಿರುವವರಿಗೆ ಸಾಲ, ಮುಂತಾದುವು ಪ್ರಮುಖ ಅಂಶಗಳು ಈ ಮೌಲ್ಯ ಪಾಲನೆ ಅತಿ ಅಗತ್ಯ.
(2) ಸ್ವಯಂ ಜವಾಬ್ದಾರಿ:ಸಹಕಾರ ಸಂಸ್ಥೆಯ ಎಲ್ಲ ಭಾಗೀದಾರರು ಸ್ವಯಂ ತಮ್ಮ ತಮ್ಮ ಜವಾಬ್ದಾರಿ ಅರಿತು ನಡೆದರೆ ಸಂಸ್ಥೆ ಯಶಸ್ವಿಯಾಗಿ ನಡೆಯುವುದರಲ್ಲಿ ಸಂಶಯವಿಲ್ಲ.
(3) ಪ್ರಜಾಪ್ರಭುತ್ವ: ಸಂಸ್ಥೆಯ ಮೂಲ ಲಕ್ಷಣ, ರಚನಾ ಮತ್ತು ನಿಯಂತ್ರಣ ವ್ಯವಸ್ಥೆ , ಖಾಸಗಿ ಯಾ ಕಂಪನಿ ಮತ್ತು ಸಹಕಾರ ಆಡಳಿತ ವ್ಯವಸ್ಥೆಯಲ್ಲಿನ ವ್ಯತ್ಯಾಸ. ಪ್ರಜ್ಞಾವಂತ ಸದಸ್ಯರು ಜವಾಬ್ದಾರಿಯುತ ಆಡಳಿತ ಮಂಡಳಿ ರಚಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.’ ಕಾರ್ಪೋರೇಟ್ ಆಡಳಿತ ಒದಗಿಸುವುದು ಇವರ ಜವಾಬ್ದಾರಿ.
(4) ಸಮಾನತೆ, ಬಂಡವಾಳ, ಮತ್ತು ಒಗ್ಗಟ್ಟು: ಸದಸ್ಯರಾಗಿ ಎಲ್ಲರೂ ಸಮಾನರು , ಒಬ್ಬ ಸದಸ್ಯ ಒಂದು ಮತ. ಬಂಡವಾಳ
ವಿಲ್ಲದೇ ವ್ಯವಹಾರ ನಡೆಸಲಾಗುವುದಿಲ್ಲ. ಇದು ಮೌಲ್ಯಯುತವಾದ ಬಂಡವಾಳ , ಶ್ರಮದಿಂದ ಸಂಗ್ರಹಿಸಿದ ಬಂಡವಾಳ ಇದನ್ನು ರಕ್ಷಿಸುವುದು , ಉಳಿಸುವುದು , ಬೆಳೆಸುವುದು ಅತ್ಯಂತ ಪ್ರಮುಖ ಅಂಶ. ಒಗ್ಗಟ್ಟು ಸಂಸ್ಥೆ ಬೆಳೆಸುವಲ್ಲಿ ಅತ್ಯಮೂಲ್ಯ ಅಂಶ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮರೆಯಲಾಗದು.
ಸಹಕಾರ ತತ್ವಗಳು :
(1) ಸ್ವಯಂ ಪ್ರೇರಿತ ಮತ್ತು ಮುಕ್ತ ಸದಸ್ಯತ್ವ; ಸರ್ವರನ್ನೂ ಒಳಗೊಳ್ಳುವ ಪ್ರಕ್ರಿಯೆ , ಸದಸ್ವತ್ವ ನೀಡುವುದು ಆಡಳಿತ ಮಂಡಳಿಯಲ್ಲಿ ನಿಹಿತ ಅಧಿಕಾರ. ಸಂಸ್ಥೆಯ ಉದ್ದೇಶಗಳ ಈಡೇರಿಕೆಗೆ ಸಂಬಂಧಿಸಿದಂತೆ ಸದಸ್ಯತ್ವದ ಅರ್ಹತೆ ನಿಗದಿ ಪಡಿಸಲಾಗಿರುತ್ತದೆ. ಯಾವದೇ ರಾಗದ್ವೇಷ ಕ್ಕೆ ಒಳಗಾಗದೇ ಅರ್ಹರೆಲ್ಲರಿಗೂ ಮುಕ್ತವಾಗಿ ಸದಸ್ಯತ್ಯ ನೀಡುವುದು.
(2) ಪ್ರಜಾಸತ್ತಾತ್ಮಕ ಸದಸ್ಯ ಹತೋಟಿ / ನಿಯಂತ್ರಣ: ಸಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಆಡಳಿತ ಮಂಡಳಿ ಜವಾಬ್ದಾರಿ. ಸಕಾರಣವಿಲ್ಲದೆ ಮುಂದೂಡುವುದು, ರದ್ದು ಮಾಡುವುದು, ನಡೆಸದೆ ಇರುವುದು, ಆಡಳಿತ ಮಂಡಳಿ ರದ್ಧತಿಗೆ ಕಾರಣವಾಗುವುದು ಉತ್ತಮ ಪ್ರಜಾಪ್ರಭುತ್ವದ ಲಕ್ಷಣವಲ್ಲ.
(3) ಆರ್ಥಿಕ ಚಟುವಟಿಕೆಯಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ: ಇದರ ಹೆಚ್ಚಳಗೊಳ್ಳುವಿಕೆ ಯಿಂದ ವ್ಯವಹಾರದ ಗಾತ್ರ ಹೆಚ್ಚುತ್ತದೆ. ಲಾಭದಾಯಕತೆ ಹೆಚ್ಚುತ್ತದೆ. ಆಡಳಿತ ಮಂಡಳಿ ಇದರ ಈಡೇರಿಕೆಗಾಗಿ ಸೂಕ್ತ ಉತ್ತೇಜನ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
(4) ಸ್ವಾಯುತ್ತತೆ ಮತ್ತು ಸ್ವಾತಂತ್ರ್ಯ: ಆಡಳಿತ ಮಂಡಳಿ ಸದಸ್ಯ ಕೇಂದ್ರಿಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯಾವುದೇ ಅಡಚಣೆಯಿಲ್ಲ ಆದರೆ ಸ್ಟೇಚ್ಚಾಚ್ಛಾರಕ್ಕೆ ಎಡೆಯಾಗಬಾರದು.
(5) ಶಿಕ್ಷಣ, ತರಬೇತಿ , ಪ್ರಚಾರ : ಸಹಕಾರ ಚಳುವಳಿ ಬೆಳೆಯಲು ಇದರ ಪ್ರಯೋಜನ ಪಡೆಯದ ಅನೇಕ ಅಗತ್ಯ ಜನರನ್ನು ಒಳಗೊಳ್ಳಲು ಅತಿ ಅಗತ್ಯ. ಆಡಳಿತ ಮಂಡಳಿ ಸದಸ್ಯ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನಿಡಬೇಕು.
(6) ಸಹಕಾರ ಸಂಸ್ಥೆಗಳ ನಡುವೆ ಸಹಕಾರ : ಸಹಕಾರದಲ್ಲಿನ ಬಂಡವಾಳದ ಕ್ರೌಡೀಕರಣಕ್ಕೆ ಇದು ಅಗತ್ಯ. ಬಹು ಹಂತದ ವ್ಯವಸ್ಥೆಯಲ್ಲಿ ಲಂಭ ರೇಖೆ (Verticle) ಯಲ್ಲಿ ಎಂದರೆ ವಿವಿಧ ಹಂತದ ಸಂಸ್ಥೆಗಳ ನಡುವೆ ಸಾವಯವ ಸಂಬಂಧ , ಒಂದೊಕ್ಕೊಂದು ಪೂರಕವಾಗಿ ಕರ್ತವ್ಯ ನಿರ್ವಹಿಸುವ ಅಗತ್ಯತೆ. ಅಡ್ಡರೇಖೆ(Horizontal) ಒಂದೇ ಹಂತದ ವಿವಿಧ ರೀತಿಯ ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಇದರಿಂದ ಬಂಡವಾಳ ವೃದ್ಧಿ ಸಾಧ್ಯ. ಅಂತಿಮವಾಗಿ ‘ವ್ಯಕ್ತಿ’ ಸದಸ್ಯರ ಅವಶ್ಯಕತೆಯ ಪೂರೈಕೆ ಸಾಧ್ಯವಾಗುತ್ತದೆ.
(7) ಸಾಮಾಜಿಕ ಕಳಕಳಿ : ಸಂಸ್ಥೆ ಸಮಾಜ/ ಸಮೂಹ ದ ಒಂದು ಭಾಗ , ತನ್ನ ಅಸ್ಥಿತ್ವವೇ ಸಮೂಹಕ್ಕಾಗಿ ಆದದರಿಂದ ತನ್ನ ಲಾಭದಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಅತ್ಯುತ್ತಮ ಆಡಳಿತಕ್ಕೆ ಅವಶ್ಯ ಅಂಶಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರಲ್ಲಿ ಕಲಂ 28 C ಯಲ್ಲಿ , ಕರ್ನಾಟಕ ಸೌಹಾರ್ಧ ಕಾಯಿದೆ 1997 ರಲ್ಲಿ ಕಂ 27 ರಲ್ಲಿ ಸವಿವರವಾಗಿ ವಿವರಿಸಲಾಗಿದೆ ಮತ್ತು ಆಡಳಿತ ಮಂಡಳಿಗೆ ಜವಾಬ್ದಾರಿಗಳನ್ನು ನಿಗದಿ ಪಡಿಸಲಾಗಿದೆ. ಅದರಂತೆ ಆಡಳಿತ ಮಂಡಳಿ ಕಾರ್ಯವೆಸಗಿದಲ್ಲಿ ಸಹಕಾರ ಸಂಸ್ಥೆಗಳು ಯಶಸ್ಸು ಗಳಿಸಿ ಸಹಕಾರ ಚಳುವಳಿಯ ಉದ್ದೇಶ ಸಫಲವಾಗುತ್ತದೆ.
ಶಶಿಧರ.ಎಲೆ
ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ)
ನಂ281, ‘ನೇಸರ ‘ ಬಾಲಾಜಿ ಹೆಚ್. ಬಿ. ಸಿ.ಎಸ್ ಲೇಔಟ್ ವಾಜರಹಳ್ಳಿ
ಕನಕಪುರ ರಸ್ತೆ ಬೆಂಗಳೂರು 560109