ಇತ್ತೀಚಿನ ಯುರಿಯಾ ರಾಸಾಯನಿಕ ಗೊಬ್ಬರದ ಆಭಾವ ರಾಜ್ಯದೆಲ್ಲೆಡೆ ರೈತರಲ್ಲಿ ಆತಂಕ ತಂದಿರುವುದನ್ನು ನಾವೆಲ್ಲರು ಕಂಡಿದ್ದೇವೆ. ಅವಶ್ಯವಿರುವ ಗೊಬ್ಬರ ಖರೀದಿ ಮಾಡಲು ಬಂದ ರೈತರು ಅವಶ್ಯವಿಲ್ಲದ ಗೊಬ್ಬರವನ್ನು ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ನಿರ್ಮಾಣವಾಯಿತು. ಯುರಿಯಾ ಗೊಬ್ಬರ ಬೇಕಿದ್ದರೆ ಮತ್ತೊಂದು ಗೊಬ್ಬರ ಖರೀದಿಸುವ ಬಲವಂತವಾದ ನಿಯಮವನ್ನು ರೈತರ ಮೇಲೆ ಹೇರಲಾಯಿತು, ಈ ನಿಯಮ ರೈತರಿಗೆ ಆರ್ಧಿಕ ಹೊಡೆತ ಕೊಟ್ಟಿತು ಎಂದರೆ ತಪ್ಪಾಗಲಿಕಿಲ್ಲ. ಆದರು ರೈತರು ಹಗಲು ರಾತ್ರಿ ಎನ್ನದೆ ಗೊಬ್ಬರ ಮಳಿಗೆಯ ಮುಂದೆ ಗೊಬ್ಬರ ಖರೀದಿಸಲು ಮುಗಿಬಿದ್ದರು. ಎಷ್ಟೂ ಕಡೆಗಳಲ್ಲಿ ಆರಕ್ಷಕರಿಂದ ಲಘು ಲಾಠಿ ಪ್ರಹಾರವಾದದ್ದು ಕಂಡುಬಂದವು
ಈ ಸಂದಿಗ್ದ ಸಂದರ್ಭದಲ್ಲಿ ಮತ್ತೊಮ್ಮೆ ನಮ್ಮೆಲ್ಲರ ಗಮನ ಸೆಳೆದಿದ್ಧು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಡಿಯಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ರಾಸಾಯನಿಕ ಗೊಬ್ಬರಗಳ ಮಳಿಗೆಗಳು.ಈಗಲು ಅತಿ ಹೆಚ್ಚು ರೈತರು ಅವಲಂಬಿತರಾಗಿರುವುದು ಈ ಮಳಿಗೆಗಳ ಮೇಲೆ
ಭಾರತ ಸರಕಾರದ ಹಸಿರು ಕ್ರಾಂತಿಯ ಉದ್ಧೇಶ ಆಹಾರ ಉತ್ಪಾದನೆ ಹೆಚ್ಚಿಸುವುದಾಗಿದ್ದರೆ ಮತ್ತೊಂದೆಡೆ ರೈತರಿಗೆ ಉತ್ತಮ ತಳಿಯ ಬೀಜಗಳು, ಗುಣಮಟ್ಟದ ಗೊಬ್ಬರಗಳನ್ನು ಸಕಾಲಕ್ಕೆ ಗ್ರಾಮ ಮಟ್ಟದಲ್ಲಿ ತಲುಪಿಸುವುದಾಗಿತ್ತು. ಇದನ್ನು ಪುರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸುವ ಶ್ರೇಯ ನಮ್ಮ ಸಹಕಾರ ಸಂಘಗಳ ಗೊಬ್ಬರ ಮಳಿಗೆಗಳಿಗೆ ಸಲ್ಲುತ್ತದೆ.
ಗ್ರಾಮಿಣ ಭಾಗದ ಹಿರಿಯರ ಅನುಭವದ ಮಾತಿನ ಪ್ರಕಾರ ರಾಸಾಯನಿಕ ಗೊಬ್ಬರವನ್ನು ಒಂದು ಬೆಂಕಿ ಪಟ್ಟಣದ ಗಾತ್ರದ ಡಬ್ಬಿಗಳಲ್ಲಿ ನೀಡಿ, ರೈತರಿಗೆ ಸಹಕಾರ ಸಂಘಗಳ ಮುಖಾಂತರ ಬೆಳೆಗಳಿಗೆ ಹಾಕಲು ಪ್ರೇರೇಪಿಸಲಾಗಿತ್ತು. ಹಾಗೆ ಶುರುವಾದ ಈ ಪ್ರಕ್ರಿಯೆ ನೋಡು ನೋಡುತ್ತಿದ್ಧಂತೆ ಕೋಟ್ಯಾಂತರ ರೊಪಾಯಿಗಳ ವ್ಯವಹಾರವನ್ನು ಹಳ್ಳಿಗಾಡಿನಲ್ಲಿ ಮಾಡಲು ಆರಂಭಿಸಿದವು. ಸಣ್ಣದಾಗಿ ಶುರುವಾದ ವ್ಯಾಪಾರ ಬೃಹದಾಕಾರವಾಗಿ ಬೆಳೆದು ನಿಂತಿತು, ಒಟ್ಟಿನಲ್ಲಿ ಹೇಳಬೇಕಾದರೆ ದೇಶದ ಆಹಾರ ಭದ್ರತೆಯನ್ನ ಸಾಧಿಸುವಲ್ಲಿ ಹಾಗು ಹಸಿರು ಕ್ರಾಂತಿಯ ಯಶಸ್ಸಿನ ಹಿಂದೆ ಸಹಕಾರ ಸಂಘಗಳ ಪಾತ್ರ ನಿರ್ಣಾಯಕವಾದದ್ದು ಹಾಗು ಮಹತ್ವವಾದದ್ದು.
ರೈತರಿಗೆ, ಸೇವಾ ಉದ್ಧೇಶದಿಂದ ಶುರುವಾದ ಈ ಗೊಬ್ಬರ ಮಳಿಗೆಗಳು ಇತ್ತಿಚಿನ ದಿನಗಳಲ್ಲಿ ತಮ್ಮ ಮೂಲ ತತ್ವಗಳನ್ನು ಮರೆತು, ಕೇವಲ ವ್ಯಾಪಾರದ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವುದು ಸೊಕ್ತವಾದ ಬೆಳವಣಿಗೆಯಂತು ಅಲ್ಲ. ಖಾಸಗಿ ವ್ಯಾಪಾರಸ್ತರ ಪ್ರಭಾವದಿಂದಲೋ ಆಥವಾ ಮಾರುಕಟ್ಟೆಯ ಪರಿಣಾಮದಿಂದಲೋ ರಾಸಾಯನಿಕ ಗೊಬ್ಬರದ ಮಳಿಗೆಗಳು ತಮ್ಮ ಸುಸ್ತಿರತೆಯನ್ನು ಕಳೆದುಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಹಲವಾರು ವರ್ಷಗಳಿಂದ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತ ಬಂದಿರುವ ರೈತರಿಗೆ ಇಂದು ಭೊಮಿಯ ಬಗ್ಗೆ ಅದರ ಫಲವತ್ತತೆಯ ಬಗ್ಗೆ ತಿಳಿಸುವ ಅನಿವಾರ್ಯತೆ ಎದುರಾಗಿದೆ. ಈ ಉದ್ಲೇಶ ನೆರವೆರಿಸಲು ಸಹಕಾರ ಸಂಘಗಳು ಮುಂದಾಗಬೇಕು. ಕೇವಲ ಗೊಬ್ಫರವನ್ನು ಪೊರೈಸುವ ಕೆಲಸಕ್ಕೆ ಮಾತ್ರ ಅಂಟಿಕೊಳ್ಳದೆ ತಮ್ಮ ಆವರಣಗಳಲ್ಲಿ ಮಣ್ಣು ಪರೀಕ್ಷೆಯು ಪ್ರಯೋಗಾಲಯವನ್ನು ಸ್ಥಾಪಿಸಿ ಅದರ ಆದಾರದ ಮೇಲೆ ರೈತರಿಗೆ ಗೊಬ್ಬರ ಪೂರೈಕೆಯ ಮಾಡುವ ಸಂಕಲ್ಪವನ್ನು ಈ ದಿನ ನಾವೆಲ್ಲರು ಮಾಡಬೇಕಾಗಿದೆ.ಇಷ್ಟೇ ಅಲ್ಲದೇ ಸಮಯಕ್ಕೆ ತಕ್ಕಂತೆ ಕೃಷಿ ವಿಜ್ಞಾನಿಗಳನ್ನು, ಪ್ರಗತಿಪರ ರೈತರನ್ನು ಕರೆತಂದು ರೈತರಿಗೆ ಮಾರ್ಗದರ್ಶನ ನೀಡುತ್ತ, ರೈತರಿಗೆ ಕೃಷಿ ಕ್ಷೇತ್ರ ಪಾಠಶಾಲೆಗಳ ಮುಖಾಂತರ ಸಲಹೆ ಸೊಚನೆ ನೀಡುವತ್ತ ಸಹಕಾರ ಸಂಘಗಳು ಗಮನ ಹರಿಸಬೇಕು.
ಮಾರಾಟದಿಂದ ಉತ್ಪಾದನೆಯ ಕಡೆಗೆ –
ಹಸಿರು ಕ್ರಾಂತಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಗೊಬ್ಬರ ಮಳಿಗೆಗಳು ಇನ್ನು ಬರುವ ದಿನಮಾನದಲ್ಲಿ ನಿತ್ಯಹರಿದ್ವರ್ಣ ಕ್ರಾಂತಿಯನ್ನು ಸಾಧಿಸುವತ್ತ ಹೆಜ್ಜೆ ಇಡಬೇಕಾಗಿದೆ. ಗ್ರಾಮಗಳಲ್ಲಿ ಪರಿಸರ ಪೊರಕ ಸುಸ್ಥಿರ ಕೃಷಿ ಪ್ರೋತ್ಸಾಹಿಸಲು ಜೈವಿಕ ಇನಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪನೆ ಮಾಡುವುದು, ಜೈವಿಕ ಇದ್ದಲು ಕೇಂದ್ರಗಳನ್ನು ಶುರು ಮಾಡುವಲ್ಲಿ ಹಾಗು ಸಾವಯವ ಓಳ ಸುರಿವುಗಳನ್ನು ಹೆಚ್ಚು ಹೆಚ್ಚು ಬಳಸಲು ರೈತರಿಗೆ ಉತ್ತೇಜನೆ ನೀಡಲೂ ಸಹಕಾರ ಸಂಘಗಳು ಪಾತ್ರ ವಹಿಸಬೇಕಾಗಿದೆ. ಇದನ್ನು ಸಾಧಿಸಲು ಸಹಕಾರ ಸಂಘಗಳು ಸಹಕಾರ ತತ್ವಗಳ ಅನ್ವಯ ಸುಸ್ಥಿರತೆಯ ಚೌಕಟ್ಟಿನಲ್ಲಿ ಗೊಬ್ಡರದ ಮಳಿಗೆಗಳನ್ನು ರೈತ ಸ್ನೇಹಿಯಾಗಿ ಪರಿವರ್ತಿಸಲು ಕಾರ್ಯೋನ್ಮುಖವಾಗಬೇಕೆಂದು ಆಶಯ.

ಮಹೇಶ ದೇಶಪಾಂಡೆ.
ನಿರ್ದೇಶಕರು
ಪಿಎಸಿಎಸ್
ಹಿರೇಪದಸಲಗಿ
ಜಾಮಖಂಡಿ
ಬಾಗಲಕೋಟೆ