ಸಹಕಾರಿಯ ಆಡಳಿತ ಸಹಕಾರಿಯ ನೇತೃತ್ವದಲ್ಲಿರಲಿ.| ಶ್ರೀ. ಶಂ.ನಾ.ಖಂಡಿಗೆ.

ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯುವಾಗ ಸಹಕಾರಿ ತತ್ತ್ವದ ನೆಲೆಯಲ್ಲಿ ಬೆಳೆದು ಬಂದವರನ್ನು ಕಡೆಗಣಿಸಲಾಗುತ್ತಿದೆಯೆ? ಅಥವ ಸಹಕಾರಿ ತತ್ತ್ವಗಳನ್ನು ಅರಗಿಸಿಕೊಂಡವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೆ? ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹೌದು ಎಂಬ ಉತ್ತರವೇ ಸಿಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಿಡಿದು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳ ಚುನಾವಣೆಯ ಹಂತದಲ್ಲಿ ಸರಿಯಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡುವವರಿಗೆ ಮನ್ನಣೆ ಕಡಿಮೆಯಾಗುತ್ತಿದೆ.

ಲಾಬಿಗಳದ್ದೇ ಕಾರುಬಾರು

ಒಂದು ರಾಜಕೀಯ ಹಣೆಪಟ್ಟಿ. ಇನ್ನೊಂದು ಆರ್ಥಿಕವಾಗಿ ಸಬಲನಾಗಿರುವ ವ್ಯಕ್ತಿಯ ಒತ್ತಡ. ಈ ರೀತಿಯ ಲಾಬಿಗಳೇ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಜೋಡಿಸಲು ಪ್ರಮುಖ ಮಾನದಂಡಗಳಾಗುತ್ತಿವೆ. ಒಂದು ಚುನಾವಣೆ ಘೋಷಣೆಯಾದಾಗ ಅದು ವಿದಾನ ಸಭೆ ಮತ್ತು ಲೋಕಸಭೆ ಚುನಾವಣೆಯೋ ಎಂಬಷ್ಟು ಅದನ್ನು ಬೃಹದಾಕಾರವಾಗಿ ಬಿಂಬಿಸಿಕೊಂಡು ನಡೆಯುವ ಹುನ್ನಾರಗಳಿಗೆ ಮತ್ತು ಮುಖವಾಡ ಧರಿಸಿದ ವ್ಯಕ್ತಿಗಳ ಚಲನವಲನಗಳಿಗೆ ಮಿತಿಯಿಲ್ಲ. ಚುನಾವಣೆ ನಡೆಯುವ ಸಂಘದ ಮತ್ತು ಸಂಸ್ಥೆಯ ಒಳ ಹೊರಗನ್ನು ಬಲ್ಲ, ಧ್ಯೇಯೋದ್ದೇಶಗಳನ್ನು ಅರಿತಿರುವ, ಸಿಬ್ಬಂದಿ ಮತ್ತು ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕನಸುಗಳನ್ನು ಹೊಂದಿರುವ ಅದೆಷ್ಟೋ ಸಹಕಾರಿಗಳು ಈ ಲಾಬಿಯೆದುರು ಮಂಕಾಗಿ ಬಿಡುತ್ತಾರೆ.

ಸಮಯ ಕೊಡುವವರ ಕೊರತೆ

ಚುನಾವಣೆ ಬಂದಾಗ ಆಡಳಿತ ಮಂಡಳಿಗೆ ನುಗ್ಗಲು ತಾ ಮುಂದು ನಾ ಮುಂದು ಎಂದು ಎಲ್ಲರೂ ಮುನ್ನುಗ್ಗುತ್ತಾರೆ. ಆಯ್ಕೆಯಾಗಿ ಆಡಳಿತ ಮಂಡಳಿ ರೂಪೀಕರಣವಾದ ನಂತರ ಆಡಳಿತ ಮಂಡಳಿಯ ಸಭೆಯಿಂದ ಹಿಡಿದು ಸಹಕಾರಿಯ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಅವರಿಗೆ ನೂರಕ್ಕೆ ನೂರು ಗಮನ ಮತ್ತು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಕೆಲವರು ಆಡಳಿತ ಮಂಡಳಿ ಸಭೆ ಆರಂಭವಾಗುವಾಗ ಬಂದು ಸಹಿ ಹಾಕಿ ಒಂದಷ್ಟು ಹೊತ್ತು ಇದ್ದು ಹೊರ ಹೋಗುವುದು. ಇನ್ನು ಕೆಲವು ನಿರ್ದೇಶಕರು ಸಭೆಯ ಅರ್ಧದಲ್ಲಿ ಜೋಡಿಕೊಳ್ಳುವುದು. ಇದು ಅಪೂರ್ವಕ್ಕೆ ಆದರೆ ಸರಿ. ಏನೋ ಜರೂರು ಇರಬಹುದು. ಇರಲಿ. ಯಾವತ್ತೂ ಇದನ್ನು ಅಭ್ಯಾಸ ಮಾಡಿಕೊಂಡವರು ಸಿಗುತ್ತಾರೆ. ಅವರಿಗೆ ಸಹಕಾರಿಯ ಮೇಲೆ ಯಾವ ಭಾವನೆಯೂ ಇಲ್ಲ. ಅವರ ಧಿಮಾಕಿಗೋಸ್ಕರ ಆಡಳಿತ ಮಂಡಳಿಯಲ್ಲಿ ಸೇರಿಕೊಳ್ಳುತ್ತಾರೆ. ವಿಚಿತ್ರವೆಂದರೆ ಅಂತಹ ಮಂದಿಯೇ ಮತ್ತೆ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲು ಆಡಳಿತ ಮಂಡಳಿಯ ಒಳಗೆ ಪ್ರವೇಶ ಪಡೆಯುತ್ತಾರೆ.

ಹೀಗೆ ಸಹಕಾರಿ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಎಲ್ಲ ನಿರ್ದೇಶಕರು ಹಾಜರಾಗುವುದು ನಡೆಯುತ್ತಿಲ್ಲ. ನೂರೊಂದು ನೆಪಗಳನ್ನೊಡ್ಡಿ ತಪ್ಪಿಸುವ ದಾರಿಗಳು ಅವರಿಗೆಲ್ಲ ಕರಗತ. ಸಹಕಾರಿ ಎಂದ ಮೇಲೆ ಅಲ್ಲಿ ಹತ್ತಾರು ಕಾರ್ಯ ಚಟುವಟಿಕೆಗಳು ಇದ್ದೇ ಇರುತ್ತವೆ. ಸದಸ್ಯರ ಹಿತಕಾಯುವ ದೃಷ್ಟಿಯಿಂದ ಸದಸ್ಯ ಸಂಪರ್ಕ ಸಭೆಗಳು, ಸದಸ್ಯರ ಮನೆ ಭೇಟಿ ಕಾರ್ಯಗಳು, ಹೊಸತನಗಳು ಬಂದಾಗ ಅದರ ಉದ್ಘಾಟನೆಗಳು ಹೀಗೆ ಐದು ವರ್ಷದ ಆಡಳಿತ ಅವಧಿಯಲ್ಲಿ ನೂರಾರು ಕಾರ್ಯಕ್ರಮಗಳು ನಡೆದೇ ನಡೆಯುತ್ತವೆ. ಇದಕ್ಕೆಲ್ಲ ನಿರ್ದೇಶಕರ ಹಾಜರಾತಿ ನೂರಕ್ಕೆ ನೂರು ಇಲ್ಲದೆ ಹೋಗುತ್ತಿದೆ. ನಾನು ಈ ಸಹಕಾರಿಯ ನಿರ್ದೇಶಕ. ಇದಕ್ಕೆ ಸಮಯ ಕೊಡುವ ಉದ್ದೇಶದಿಂದ ನನ್ನನ್ನು ಇದರ ಆಡಳಿತ ಮಂಡಳಿಗೆ ಜೋಡಿಸಿದ್ದಾರೆ. ನಾನು ನನ್ನನ್ನು ಇಲ್ಲಿ ಜೋಡಿಸಿದವರ ಮನಸ್ಸಿಗೆ ಮತ್ತು ಸಹಕಾರಿಯ ಸದಸ್ಯರ ಭಾವನೆಗೆ ಧಕ್ಕೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬ ಮನಸ್ಸುಗಳು ಬಾರದಿರುವ ವ್ಯಕ್ತಿ ಸಹಕಾರಿಯ ನಿರ್ದೇಶಕನಾಗಲು ಅನರ್ಹ.

ಸಮಭಾವ ಸಮಚಿತ್ತ

ಆಡಳಿತ ಮಂಡಳಿಯ ಒಳಗೆ ಕೂಡ ಒಬ್ಬರನ್ನು ಮತ್ತೊಬ್ಬರು ತುಳಿಯದೆ ಎಲ್ಲರೂ ಜೊತೆಯಾಗಿ ಸಮಭಾವ, ಸಮಚಿತ್ತದಿಂದ ಆಡಳಿತ ಮಾಡಿ ಸಹಕಾರಿ ಸಂಘ ಮತ್ತು ಸಂಸ್ಥೆಯ ನಿತ್ಯ ನಿರಂತರ ಉನ್ನತಿಗೆ ಶ್ರಮಿಸಬೆಕಾದದ್ದು ಅಗತ್ಯ. ಒಂದು ಅವಧಿಯ ಆಡಳಿತ ಕುಂಠಿತವಾದರೆ ಅದು ಮುಂದಿನ ಅವಧಿಯ ಆಡಳಿತಕ್ಕೆ ಹೊಡೆತ ನೀಡಿಯೇ ನೀಡುತ್ತದೆ. ನಿತ್ಯದ ಆಡಳಿತದಲ್ಲಿ ಕುಂದುಕೊರತೆಗಳಿದ್ದರೆ ಅದನ್ನು ಆಗಿಂದಾಗೆ ಸರಿಮಾಡಿಕೊಂಡು ಸರಿಯಾದ ಪಥದಲ್ಲಿ ಮುನ್ನಡೆಸದೆ ಹೋದರೆ ಆಡಳಿತದ ಎಲ್ಲ ವಿಭಾಗಗಳು ಕ್ಷೀಣಿಸುತ್ತವೆ. ಆದರೆ ಹೀಗಾಗುವುದು ಬಹಳ ಕಡಿಮೆ.

ಹೆಗ್ಗಣಗಳನ್ನು ದೂರವಿಡಿ

ಸಹಕಾರಿಯ ಒಟ್ಟು ವ್ಯವಸ್ಥೆಯಲ್ಲಿ ಮೂಗು ತೂರಿಸಿ ಸ್ವಂತಕ್ಕೆ ಬಹಳಷ್ಟು ಮಾಡುವ ವ್ಯಕ್ತಿಗಳಿಗೆ ಒಳಗೆ ಬರಲು ಬಹಳ ದೊಡ್ಡ ಲಾಬಿಗಳ ಬೆಂಬಲವಿರುತ್ತವೆ. ಇದು ನಡೆಯದಂತೆ ಆಡಳಿತ ಮಂಡಳಿಗೆ ಜನರನ್ನು ಜೋಡಿಸುವ ವ್ಯಕ್ತಿಗಳು ಮತ್ತು ಆಯ್ಕೆ ಮಾಡುವ ಸದಸ್ಯರು ತಡೆಯಬೇಕು. ಆಡಳಿತ ಮಂಡಳಿ ಬರುತ್ತದೆ, ಹೋಗುತ್ತದೆ. ಇದರ ಎಡೆಯಲ್ಲಿ ಹೆಗ್ಗಣಗಳನ್ನು ಬೆಳೆಸುವ ಕ್ರೀಯೆಗಳು ನಡೆಯದೆ ಸಚ್ಚಾರಿತ್ರವಿರುವ, ನುಡಿದಂತೆ ನಡೆಯುವ, ಆ ಜಾಗಕ್ಕೆ ಒಪ್ಪುವಂತಹ ವ್ಯಕ್ತಿಗಳನ್ನು ಸೂಚಿಸಿ, ಆರಿಸಿ ನಂತರ ಅವರನ್ನು ಸದಾ ಗಮನಿಸಿ. ತಪ್ಪಿದರೆ ತಿದ್ದಿ, ತೀಡಿ ಬೆಳೆಸಿ. ಇದು ಸಹಕಾರಿಯ ಆಡಳಿತದ ಜೀವಾಳ.

ಶಂ.ನಾ. ಖಂಡಿಗೆ

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More