ಸಹಕಾರಿ ಸಂಸ್ಥೆಗಳು ಒಂದು ವ್ಯಾಪಾರ ಸಂಸ್ಥೆಯಲ್ಲ. ಅದು ಲಾಭ–ನಷ್ಟದ ಅಂಕಿಗಳಿಂದ ಮಾತ್ರ ಅಳೆಯಬಹುದಾದ ವ್ಯವಸ್ಥೆಯೂ ಅಲ್ಲ.ಅದು ರೈತನ ಬದುಕಿನ ಭರವಸೆ, ಗ್ರಾಮೀಣ ಆರ್ಥಿಕತೆಯ ನೆಮ್ಮದಿ, ಮತ್ತು ಸಹಕಾರ ತತ್ವಗಳ ಜೀವಂತ ಅಭಿವ್ಯಕ್ತಿ. ಲಕ್ಷಾಂತರ ರೈತರ ನಂಬಿಕೆಯನ್ನು ಹೊತ್ತುಕೊಂಡು ನಿಂತಿರುವ ಸಹಕಾರಿ ಸಂಸ್ಥೆಗಳು, ತನ್ನ ನಿರ್ಧಾರಗಳ ಮೂಲಕ ಕೇವಲ ಮಾರುಕಟ್ಟೆಯನ್ನು ಅಲ್ಲ, ಗ್ರಾಮೀಣ ಬದುಕಿನ ದಿಕ್ಕನ್ನೇ ನಿರ್ಧರಿಸುತ್ತದೆ. ಇಂತಹ ಸಂಸ್ಥೆಯ ಬಲವು ಅದರ ಕಟ್ಟಡಗಳಲ್ಲಿ ಅಲ್ಲ; ಅದರ ಯಂತ್ರಗಳಲ್ಲಿ ಅಲ್ಲ; ಅದರ ಹಣಕಾಸು ಲೆಕ್ಕಗಳಲ್ಲಿ ಮಾತ್ರವೂ ಅಲ್ಲ. ಅದರ ನಿಜವಾದ ಬಲ ಅದರ ಸಿಬಂದಿಯ ಚಿಂತನೆ, ಜ್ಞಾನ ಮತ್ತು ಮನೋಭಾವದಲ್ಲಿ ಅಡಗಿದೆ.
ಸಹಕಾರ ಸಂಸ್ಥೆಯ ಸವಾಲು ಸಮತೋಲನದ ಕಲೆ :
ಸಹಕಾರ ಸಂಸ್ಥೆಯ ಆಡಳಿತ ಒಂದು ಸೂಕ್ಷ್ಮ ಸಮತೋಲನದ ಕಲೆಯಾಗಿದೆ. ಒಂದೆಡೆ ವ್ಯಾಪಾರಿಕ ಸ್ಪರ್ಧೆ ,ಮಾರುಕಟ್ಟೆಯ ಒತ್ತಡ ,ತಂತ್ರಜ್ಞಾನ ವೇಗ ,ಸಮಯೋಚಿತ ತಂತ್ರಗಾರಿಕೆ , ಕ್ಲಪ್ತ ಸಮಯದಲ್ಲಿ ಕ್ಲಪ್ತ ನಿರ್ಧಾರಗಳು. ಮತ್ತೊಂದೆಡೆ: ರೈತನ ಹಿತಾಸಕ್ತಿ , ಸಾಮಾಜಿಕ ಜವಾಬ್ದಾರಿ , ಸಹಕಾರ ತತ್ವಗಳ ಪಾವಿತ್ರ್ಯ , ಬಾಹ್ಯ ಒತ್ತಡಗಳು , ಅನಿವಾರ್ಯತೆಗಳು ಈ ಎರಡು ಧ್ರುವಗಳ ನಡುವೆ ನಿರ್ಧಾರ ತೆಗೆದುಕೊಳ್ಳುವುದು ಯಂತ್ರಾಧಾರಿತ ಕಾರ್ಯವಲ್ಲ; ಅದು ವಿಚಾರಾಧಾರಿತ ಪ್ರಕ್ರಿಯೆ.
ಅದಕ್ಕಾಗಿ ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬಂದಿಯೂ“ನಾನು ಕೆಲಸಗಾರನಲ್ಲ; ನಾನು ಈ ಸಂಸ್ಥೆಯ ಚಿಂತಕ”ಎಂಬ ಮನೋಭಾವವನ್ನು ಹೊಂದಿರಬೇಕಾಗಿದೆ. ಇದಕ್ಕಾಗಿ ಪ್ರತಿಯೊಂದು ಸಹಕಾರಿ ಸಂಸ್ಥೆಗಳು Brain Storming ನಂತಹ ತರಬೇತಿ ಶಿಬಿರಗಳನ್ನು ನಡೆಸಬೇಕಾಗಿದೆ
Brain_Storming_ಮಾತನಾಡುವ ವೇದಿಕೆ ಅಲ್ಲ ಚಿಂತನೆಯ ಸಂಸ್ಕೃತಿ:
Brain Storming ಎನ್ನುವುದು ಕೆಲವೊಮ್ಮೆ ಸಭೆಯಾಗಿ ಉಳಿಯುತ್ತದೆ; ಕೆಲವೊಮ್ಮೆ ವರದಿಯಾಗಿ ಮುಗಿಯುತ್ತದೆ. ಆದರೆ ಸಹಕಾರಿ ಸಂಸ್ಥೆಗಳಲ್ಲಿ ಅದು ಸಂಸ್ಕೃತಿಯಾಗಬೇಕು.
ತಳಮಟ್ಟದ ಸಿಬಂದಿಗೆ ಮಾರುಕಟ್ಟೆಯ ನಾಡಿಯ ಅರಿವಿದೆ. ದಿನನಿತ್ಯದ ನಿರ್ವಹಣೆಗೆ ಕಾರ್ಯವಿಧಾನದ ತೊಡಕುಗಳು ಗೊತ್ತಿವೆ. ಉನ್ನತ ನಿರ್ವಹಣೆಗೆ ದೀರ್ಘಕಾಲೀನ ದೃಷ್ಟಿಯಿದೆ.
ಈ ಮೂರು ಚಿಂತನೆಗಳು ಒಂದೇ ಮೇಜಿನ ಮೇಲೆ ಸೇರಿದಾಗಲೇ ಸಂಸ್ಥಾತ್ಮಕ ಬುದ್ಧಿವಂತಿಕೆ (Institutional Wisdom) ಹುಟ್ಟುತ್ತದೆ.
Brain Storming ಎಂದರೆ ಪ್ರಶ್ನಿಸುವ ಧೈರ್ಯ, ಸಲಹೆ ನೀಡುವ ಸ್ವಾತಂತ್ರ್ಯ, ಮತ್ತು ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ಪ್ರೌಢಿಮೆ. ಈ ನಿಟ್ಟಿನಲ್ಲಿ ತರಬೇತಿಯ ಅಗತ್ಯವಿದೆ. ತರಬೇತಿ ಎಂದರೆ ಕೆಲಸ ಕಲಿಸುವುದಲ್ಲ, ದೃಷ್ಟಿ ಬೆಳೆಸುವುದು ತರಬೇತಿ ಎಂದರೆ ಹೊಸ ಸಾಫ್ಟ್ವೇರ್ ಕಲಿಸುವುದು ಮಾತ್ರವಲ್ಲ. ಹೊಸ ನಿಯಮಗಳನ್ನು ಹೇಳಿಕೊಡುವುದೂ ಮಾತ್ರವಲ್ಲ.ಜನರೊಡನೆ ವ್ಯವಹರಿಸುವ ಜಾಣ್ಮೆಯನ್ನು ಹೆಚ್ಚಿಸುವುದು .ಸವಾಲುಗಳನ್ನು ಎದುರಿಸುವುದರಲ್ಲಿ ಪರಿಣತಿಯನ್ನು ಕೊಡುವುದು .
ಸಹಕಾರಿ ಸಂಸ್ಥೆಯಲ್ಲಿ ತರಬೇತಿ ಎಂದರೆ:ಸಹಕಾರ ತತ್ವಗಳನ್ನು ಒಳಗೊಳ್ಳಿಸುವುದು ,ರೈತ–ಕೇಂದ್ರಿತ ಚಿಂತನೆ ಬೆಳೆಸುವುದು ,ನಿರ್ಧಾರಗಳ ಸಾಮಾಜಿಕ ಪರಿಣಾಮ ಅರಿವಾಗಿಸುವುದು ಮತ್ತು ಸಂಸ್ಥೆಯ ಬೆಳವಣಿಗೆಯಲ್ಲಿ ಹೊಸ ಕಾರ್ಯ ಯೋಜನೆಗಳನ್ನು ರೂಪಿಸುವುದು.
ಒಬ್ಬ ಸಿಬಂದಿ ತನ್ನ ಕೆಲಸವನ್ನು “ನಾನು ಮಾಡಬೇಕಾದ ಕಾರ್ಯ” ಎಂದು ಮಾತ್ರ ನೋಡದೆ,“ಇದರಿಂದ ರೈತನ ಬದುಕಿಗೆ ಏನು ಪ್ರಯೋಜನ?” ಮತ್ತು ಸಂಸ್ಥೆಗೆ ಏನು ಹೆಚ್ಚಿನ ಮೌಲ್ಯವನ್ನು ಒದಗಿಸುತ್ತದೆ ಎಂದು ಯೋಚಿಸಲು ಪ್ರಾರಂಭಿಸಿದಾಗಲೇ ತರಬೇತಿಯ ಅರ್ಥ ಸಾರ್ಥಕವಾಗುತ್ತದೆ.
ಆಡಳಿತಾತ್ಮಕ ಪ್ರೌಢಿಮೆ ಜನರಿಂದ ಜನರಿಗಾಗಿ :
ಸಹಕಾರಿ ಸಂಸ್ಥೆಗಳ ಯ ಆಡಳಿತ ವ್ಯವಸ್ಥೆ ಪ್ರಜಾ ಸತ್ತಾತ್ಮ ಕವಾಗಿದೆ.ಆದರೆ ಪ್ರಜಾಸತ್ತಾತ್ಮಕತೆ ಕೇವಲ ಚುನಾವಣೆಗಳಲ್ಲ;ಅದು ಚಿಂತನೆಗಳಲ್ಲೂ, ನಿರ್ಧಾರಗಳಲ್ಲೂ, ಸಂವಾದದಲ್ಲೂ ಇರಬೇಕು. ಹಾಗೆ ಇರಬೇಕಾದಲ್ಲಿ ಸಹಕಾರಿ ವ್ಯವಸ್ಥೆಯ ಆಳವಾದ ಜ್ಞಾನ ಮತ್ತು ಪ್ರದೇಶದ ದಿನ ನಿತ್ಯದ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಮತ್ತು ಸದಾ update ಆಗಿರುವ ಬುದ್ಧಿಮತ್ತೆ ಇರಬೇಕು .ಶೆಕ್ಷಣಿಕವಾದ ಜೆನವೂ ಅಷ್ಟೇ ಮುಖ್ಯವಾಗುತ್ತದೆ.
ಸಿಬ್ಬಂದಿಯ ಧ್ವನಿಗೆ ಕಿವಿಗೊಡುವ ಆಡಳಿತವೇ ಶಕ್ತಿಶಾಲಿ ಆಡಳಿತ. ಸಿಬ್ಬಂದಿಯನ್ನು ರೂಪಿಸುವ ಆಡಳಿತವೇ ದೀರ್ಘಕಾಲೀನ ಆಡಳಿತ. ಇದಕ್ಕಾಗಿ ಆಡಳಿತಮಂಡಳಿಗೆ ಆಡಳಿತಾತ್ಮಕ ನಿರ್ವಹಣಾ ವಿಧಾನದ ಬಗ್ಗೆ ಒಂದು ತರಬೇತಿಯನ್ನು_ಕೊಡಬೇಕು .ಇದು ವಸ್ತ್ರ ಸಂಹಿತೆ , ಸಮಯ ಪಾಲನೆ , ಸಭೆಗಳನ್ನು ವಿಷಯಾತ್ಮಕವಾಗಿ ನಡೆಸುವ ವಿಧಾನ , ಪ್ರತಿ ಮೂರು ತಿಂಗಳಿಗೊಮ್ಮೆ #ಪರಿಶೀಲನಾ_ಸಭೆ ನಡೆಸುವ ಪರಿಪಾಠ , ಗುರಿ ತಲುಪುವಲ್ಲಿನ ಸವಾಲುಗಳನ್ನು ನಿಭಾಯಿಸುವ ಬಗ್ಗೆ ಗಮನ, ಅಭಿವೃದ್ಧಿಪರ ಚಿಂತನೆ , ವ್ಯಯಿಸುವ ವೆಚ್ಚಕ್ಕೆ ಸಮರ್ಥನೆ , ಆಡಳಿತದ ವಿಕೇಂದ್ರೀಕರಣ ಇತ್ಯಾದಿಗಳ ಬಗ್ಗೆ ನಿಖರವಾದ ಮತ್ತು ಸ್ಪಷ್ಟವಾದ ಚಿಂತನೆ ಇರುವಂತಹ ತರಬೇತಿ ಕೊಡಬೇಕು ಮತ್ತು ಆಡಳಿತ ಮಂಡಳಿಯ ಸ್ವ ಪರಿಶೀಲನಾ ಸಭೆಯೂ ,ಪ್ರತಿ_ನಿರ್ದೇಶಕರ ಕೊಡುಗೆ ಮತ್ತು ಗುರಿಯ ಬಗ್ಗೆಯೂ ಚರ್ಚಿಸಿಕೊಳ್ಳಬೇಕು.
Brain_Storming ಮತ್ತು ತರಬೇತಿ ಕಾರ್ಯಕ್ರಮಗಳು ಆಡಳಿತಕ್ಕೆ ಸವಾಲುಗಳಲ್ಲ; ಅವು ಆಡಳಿತಕ್ಕೆ_ಆಧಾರಸ್ತಂಭಗಳು. ಈ ನೀತಿ ಸಹಕಾರಿ ಸಂಸ್ಥೆಯ ಯ ಎಲ್ಲಾ ಸಿಬಂಧಿಗಳಿಗೂ ಅನ್ವಯಗಬೇಕು .ಇದರಲ್ಲಿ ಉನ್ನತ ನಿರ್ವಹಣಾ ಅಧಿಕಾರಿಗಳು , ಮಧ್ಯಮ ಮಟ್ಟದ ನಿರ್ವಹಣಾ ಸಿಬ್ಬಂದಿ ,ಕಾರ್ಯನಿರ್ವಹಣಾ ಹಾಗೂ ಎಲ್ಲಾ ಕ್ಷೇತ್ರ ಸಿಬ್ಬಂದಿಗಳೂ ಒಳಗೊಂಡಿರಬೇಕು.
ತರಬೇತಿ ವಿಭಾಗಗಳು:
ಸಹಕಾರ ಆಡಳಿತ ಮತ್ತು ನೈತಿಕತೆ , ತಂತ್ರಯೋಜನಾ ನಿರ್ವಹಣೆ ,ರೈತ–ಕೇಂದ್ರಿತ ನಿರ್ಧಾರ ಪ್ರಕ್ರಿಯೆ, ನಾಯಕತ್ವ ಮತ್ತು ತಂಡ ನಿರ್ವಹಣೆ , ನೀತಿ ಅನುಷ್ಠಾನ ಒಳಗೊಂಡಿರಬೇಕು.
ಮುಖ್ಯವಾಗಿ ಕಾರ್ಯನಿರ್ವಹಣಾ ಸಿಬ್ಬಂದಿಗಳಲ್ಲಿ ರೈತ ಸಂಪರ್ಕ ಮತ್ತು ಸೇವಾ ಕೌಶಲ್ಯ ಅಭಿವೃದ್ಧಿ ,ಕಾರ್ಯವಿಧಾನ ದಕ್ಷತೆ , ಗುಣಮಟ್ಟ ಮತ್ತು ತಂತ್ರಜ್ಞಾನ ಬಳಕೆ , ಸಂವಹವನ ಇತ್ಯಾದಿಗಳ ಬಗ್ಗೆ ವಿಮರ್ಶೆ ಮತ್ತು ನವೀಕರಣದ ಕಾರ್ಯಾಗಾರಗಳಾಗಬೇಕು.
Brain Storming ಅಧಿವೇಶನಗಳು ತ್ರೈಮಾಸಿಕವಾಗಿ ಆಯೋಜನೆ, ವಿಭಾಗಾವಾರು ಸಮಸ್ಯೆ ಮತ್ತು ಸಲಹೆಗಳ ಸಂಗ್ರಹ, ನಿರ್ವಹಣೆಗೆ ಸಂಕ್ಷಿಪ್ತ ವರದಿ ಸಲ್ಲಿಕೆ. ಒಳಗೊಂಡಿರುತ್ತದೆ.
ಸಹಕಾರಿ ಸಂಸ್ಥೆಗಳ ಭವಿಷ್ಯ ಕೇವಲ ಮಾರುಕಟ್ಟೆಯ ಕೈಯಲ್ಲಿಲ್ಲ.ಅದು ಜಾಗತಿಕ ಪರಿಸ್ಥಿತಿಗಳ ದಾಸನೂ ಅಲ್ಲ.ಅದು ತನ್ನೊಳಗಿನ ಮಾನವ ಸಂಪನ್ಮೂಲದ ಚಿಂತನೆ ಮತ್ತು ಶಕ್ತಿಯ ಮೇಲೆ ನಿಂತಿದೆ.
ಚಿಂತನೆ ಬೆಳೆದಾಗ ಸಂಸ್ಥೆ ಬಲಗೊಳ್ಳುತ್ತದೆ. ಸಂಸ್ಥೆ ಬಲಗೊಳ್ಳುವಾಗ ರೈತನ ಭವಿಷ್ಯ ಸುರಕ್ಷಿತವಾಗುತ್ತದೆ. Brain Storming ಮತ್ತು ತರಬೇತಿ ಸಹಕಾರಿ ಸಂಸ್ಥೆಗಳಲ್ಲಿ ಕೇವಲ ಯೋಜನೆಗಳಾಗಬಾರದು –ಅವು ಸಂಸ್ಥೆಯ ಉಸಿರಾಗಬೇಕು. ಅದೇ ಸಹಕಾರದ ಆತ್ಮ.ಅದೇ ಸಹಕಾರಿ ಸಂಸ್ಥೆಯ ಯ ದಾರಿದೀಪ.
ಕುಮಾರ ಸುಬ್ರಹ್ಮಣ್ಯ
ಮುಳಿಯಾಲ