ಸಹಕಾರದ ಸಾಧನಾಪಥ

ಸಹಕಾರ ಮಾನವ ನಾಗರೀಕ ಪ್ರಪಂಚಕ್ಕೆ ಕಾಲಿಟ್ಟ ದಿನದಿಂದಲೇ ಆತನ ಜೀವನದ ಜತೆ ಸಾಗಿ ಬಂದಿದೆ.
“ತಾನು ಎಲ್ಲರಿಗಾಗಿˌ ಎಲ್ಲರೂ ತನಗಾಗಿ” ಎಂಬ ಧ್ಯೇಯವಾಕ್ಯಕ್ಕನುಸರಿಸಿ 1844ರಲ್ಲಿ ಸಮಾಜವಾದಿ ನಾಯಕ ರಾಬರ್ಟ್ ಓವೆನ್ ನೇತೃತ್ವದಲ್ಲಿ 18 ಮಂದಿ ನೇಕಾರರು ಇಂಗ್ಲೇಂಡಿನ ರಾಕ್ ಡೇಲ್ ಪಟ್ಟಣದಲ್ಲಿ ಸಹಕಾರ ಮಳಿಗೆಯನ್ನು ಆರಂಭಿಸುವ ಮೂಲಕ  ಸಂಘ ಸ್ವರೂಪಕ್ಕೆ ಚಾಲನೆ ದೊರೆಯಿತು.
ನಂತರ ಜರ್ಮನಿಯ ನಿವೃತ್ತ ಸೇನಾಧಿಕಾರಿ ರೈಫಿಸನ್ ಗ್ರಾಮೀಣ ಪ್ರದೇಶದ ಬಡವರ್ಗದವರ ಉಳಿತಾಯˌ ಸಾಲದ ಅವಶ್ಯಕತೆ ಮನಗಂಡು ಸರಳಬಡ್ಡಿˌ ಸುಲಭ ಮರುಪಾವತಿ ವಿಧಾನದಲ್ಲಿ ˌ”ಕ್ರೆಡಿಟ್ ಯೂನಿಯನ್” ಸ್ಥಾಪಿಸಿದನು .ಇದು ಕೃಷಿ ಪತ್ತಿನ ವ್ಯವಸ್ಥೆಗೆ ನಾಂದಿಯಾಯಿತು.
1850ರಲ್ಲಿ ಜರ್ಮನಿಯ ಹರ್ಮನ್ ಷೂಲ್ಸ್ ಎಂಬಾತ ಡಿಲಿಟ್ಸ್ ಪಟ್ಟಣದಲ್ಲಿ ಬಡವರ್ಗಕ್ಕೆ ಆರ್ಥಿಕ ಸಹಾಯ ಒದಗಿಸುವ ಸಹಕಾರ ಸಂಘವನ್ನು ಸ್ಥಾಪಿಸಿ ಪಟ್ಟಣ ಸಹಕಾರಿ ಬ್ಯಾಂಕುಗಳ ಸ್ಥಾಪನೆಗೆ ಮೂಲವಾಯಿತು.

ಈ ರೀತಿ ಪ್ರಾರಂಭವಾದ ಸಮಾಜವಾದ—ಬಂಡವಾಳಶಾಹಿ ಮಧ್ಯದ ಸುವರ್ಣ ಆರ್ಥಿಕದಾರಿ ಸಹಕಾರ ಚಳವಳಿ ವಿಶ್ವದಾದ್ಯಂತ 19ನೇ ಶತಮಾನದ ಅಂತ್ಯಕ್ಕೆ ಪಸರಿಸಿತು. ಸಹಕಾರಿ ಚಳುವಳಿಗೆ ಪ್ರಭಾವ ಬೀರಲು ಹಾಗೂ ಚಳವಳಿಯ ಮುಖಂಡತ್ವ ಮತ್ತು ಮಾರ್ಗದರ್ಶನ ನೀಡಲು1895ರಲ್ಲಿ ಅಂತರಾಷ್ಟ್ರೀಯ ಸಹಕಾರಿ ಮೈತ್ರಿಕೂಟ(I C A) ರಚನೆಯಾಯಿತು.

ಭಾರತದಲ್ಲಿ ಸಹಕಾರ ಚಳುವಳಿ
—————^^^^^^^———
ಭಾರತದಲ್ಲಿ  19ನೇ ಶತಮಾನದ ಅಂತ್ಯದಲ್ಲಿ ಅಂದಿನ ಬ್ರಿಟಿಷ್ ಸರಕಾರ ದೇಶದ ಕೃಷಿ ಪ್ರಗತಿಗಾಗಿ ಸಾಲ ವ್ಯವಸ್ಥೆ ರೂಪಿಸಲು ಸರ್ ಫೆಡರಿಕ್ ನಿಕೋಲ್ಸನ್ ಎಂಬಾತನನ್ನು ಯುರೋಪಿನ ಸಹಕಾರಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ವರದಿ  ನೀಡುವರೇ ಆದೇಶಿಸಿದ್ದಕ್ಕನುಸರಿಸಿˌ 1895ರಲ್ಲಿ ಸಹಕಾರ ಸಿದ್ದಾಂತದಡಿ ಸಾಲ ಸೌಲಭ್ಯ ಕಲ್ಪಿಸಿದಲ್ಲಿ ಕೃಷಿ ಪ್ರಗತಿಗೆ ಪೂರಕವಾಗಬಹುದೆಂಬ ವರದಿ ನೀಡಿದನು. 1901ರಲ್ಲಿ ಎಡ್ವರ್ಡ್ ಲಾ ಇವರ ಅಧ್ಯಕ್ಷತೆಯಲ್ಲಿ ಸಹಕಾರಿ ಸಂಘಗಳ ಕಾನೂನು ರಚನೆಗೆ ಚಾಲನೆ ದೊರೆಯಿತು.1904 ಮಾರ್ಚ್ 25ರಂದು ಅಖಿಲ ಭಾರತಕ್ಕೆ ಸಂಬಂಧಿಸಿ ಸಹಕಾರಿ  ಪತ್ತಿನ  ಸಂಘಗಳ ಕಾಯ್ದೆ ಜ್ಯಾರಿ ಯಾಗುವುದರೊಂದಿಗೆ ದೇಶದ ಸಹಕಾರಿ ಆಂದೋಲನ ಅಧಿಕೃತವಾಗಿ ಆರಂಭವಾಯಿತು.
ದಿನಾಂಕ 08-05-1905ರಂದು ಆಗಿನ ಮುಂಬೈ ಪ್ರಾಂತ್ಯದ ಈಗಿನ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ರೈತ ಮುಖಂಡ ಸಂಣರಾಮನಗೌಡ ಸಿದ್ದರಾಮನಗೌಡ ಪಾಟೀಲರ ನೇತೃತ್ವದಲ್ಲಿ  ಮುಂಬೈ ವೈಸರಾಯಿ ಲಾರ್ಡ್ ಕರ್ಜನ್ ಅಪೇಕ್ಷೆಯಂತೆ ದೇಶದ ಪ್ರಥಮ ಸಹಕಾರಿಸಂಘ ಸ್ಥಾಪನೆಯಾಯಿತು.
1912ರಲ್ಲಿ ಸಹಕಾರಿ ಕಾಯ್ದೆಯಲ್ಲಿ ಮಹತ್ತರ ಬದಲಾವಣೆಗಳಾಗಿ ಸಹಕಾರ ಸಂಘಗಳ ಅಭಿವೃಧ್ಧಿಗೆ ಕಾಯಕಲ್ಪ ನೀಡಲಾಯಿತು. ಸಹಕಾರ ಕ್ಷೇತ್ರದ ತೊಡಕುಗಳ ನಿವಾರಣೆಗಾಗಿ 1919ರಲ್ಲಿ ಸಹಕಾರಕಾಯ್ದೆಯನ್ನು ರಾಜ್ಯ ವ್ಯಾಪ್ತಿಗೆತರಲಾಯಿತು ತದನಂತರ ಎಲ್ಲಾ ರಾಜ್ಯಗಳು ಅದರದೇ ಆದ ಸಹಕಾರ ಕಾಯ್ದೆಯನ್ನು ಹೊಂದಿದವು’.1಼920ರಲ್ಲಿ ಲಾಲೂ ಬಾಯಿ ಶಾಮಲ್ ದಾಸ್ ಅಧ್ಯಕ್ಷತೆಯ ಸಮಿತಿ ಸಹಕಾರಿ ಸಂಘಗಳ ಸುಧಾರಣೆ ಮತ್ತು ಪ್ರಗತಿಯನ್ನು ಪರಿಶೀಲಿಸಿ ಮೈಸೂರು ರಾಜ್ಯದಲ್ಲಿ ಕೃಷಿಪತ್ತಿನ ಅಲ್ಪಾವಧಿ ಸಾಲ ವ್ಯವಹಾರಕ್ಕೆರಾಜ್ಯಮಟ್ಟದ ಅಪೆಕ್ಸ್ ಬ್ಯಾಂಕು ಹಾಗೂ ಮಧ್ಯಮಾವಧಿˌ ಧೀರ್ಘಾವಧಿ ಸಾಲಗಳಿಗೆ ಸಂಬಂಧಿಸಿ ರಾಜ್ಯ ಮಟ್ಟದ ಭೂ ಅಡಮಾನ ಬ್ಯಾಂಕು ರಚಿಸಲು ಸೂಚಿಸಿತು.1935ರಲ್ಲಿ ರಚನೆಯಾದ ಕೆ.ಎಸ್. ಚಂದ್ರಶೇಖರಯ್ಯ ಅಧ್ಯಕ್ಷತೆಯ ಸಮಿತಿ ಸಹಕಾರದ ಪ್ರಗತಿ ಪರಿಶೀಲನೆ ನಡೆಸಿ1936ರಲ್ಲಿ ಹಲವು ಮಹತ್ತರ ಸೂಚನೆಗಳೊಂದಿಗೆ ವರದಿ ಸಲ್ಲಿಸಿದರೂ1948ರ ತನಕ ಯಾವುದೇ ಕ್ರಮಗಳು ಜರಗಲಿಲ್ಲ.1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಅಸ್ತಿತ್ವಕ್ಕೆ ಬಂತು.
ದೇಶದ ಸ್ಷಾತಂತ್ರ್ಯ ನಂತರ 1952ರಲ್ಲಿ ಸಹಕಾರಿ ರೆಗ್ಯೂಲೇಶನ್ ರೂಪಿಸಲಾಯಿತು.1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ಬಳಿಕ ಪ್ರಸ್ತುತ ಜ್ಯಾರಿಯಲ್ಲಿರುವ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ1959 ಹಾಗೂ ಕರ್ನಾಟಕ ಸಹಕಾರಿ ಸಂಘಗಳ ನಿಯಮ 1960  ಅಸ್ತಿತ್ವಕ್ಕೆ ಬಂತು. ಈ ಕಾಯ್ದೆ ಅಂದಿನಿಂದ ಇಂದಿನ ತನಕ ಹಲವಾರು ಭಾರಿ ತಿದ್ದುಪಡಿಗೊಳಪಟ್ಟಿದೆ.
  

ಅಂತರಾಷ್ಟ್ರೀಯ ಸಹಕಾರ ತತ್ವ  ಹಾಗೂ ಸಹಕಾರ ನೀತಿಗಳು
—————————^^^^^^^—————
“ತಾನು ಎಲ್ಲರಿಗಾಗಿˌ ಎಲ್ಲರೂ ತನಗಾಗಿ”—ಎಂಬ ಸಹಕಾರ ತತ್ವ ಸಹಕಾರ ಚಳುವಳಿಯ ಹುಟ್ಟಿನಿಂದ ಆರಂಭವಾಗಿದೆ. ಸಮಾಜದಲ್ಲಿ ಅದಕ್ಕೊಂದು ವಿಶೇಷ ಮನ್ನಣೆ ಇದೆ.
1965ರಲ್ಲಿ ಅಂತರಾಷ್ಟ್ರೀಯ ಸಹಕಾರಿ ಮೈತ್ರಿಕೂಟ(I C A)ವು ಭಾರತದ  ಡಾ. ಡಿ. ಜಿ. ಕರ್ವೇಯವರ ನೇತೃತ್ವದಲ್ಲಿ  ಸಹಕಾರಿ ನೀತಿಗಳನ್ನು ಅಧ್ಯಯನ ನಡೆಸಿ ರಚನೆ ಮಾಡುವರೇ ಕ್ರಮ ಕೈಗೊಂಡಿತು. ಅದರಂತೆ ಈ ಸಮಿತಿಯು ಇಡೀ ವಿಶ್ವಕ್ಕೆ ಅನುಕರಣೆಯಾಗುವಂತೆ ಆರು ಸಹಕಾರಿ ನೀತಿಗಳನ್ನು ತಯಾರಿಸಿ  I C A ಮುಂದಿಟ್ಟಾಗ ಆ ಸಹಕಾರಿ ನೀತಿಗಳನ್ನು ಅಧಿಕೃತವಾಗಿ I  C  A ಘೋಷಣೆ ಮಾಡಿತು.ಮುಂದೆ 1995ರಲ್ಲಿ ಈ ನೀತಿಗಳನ್ನು ಪುನರ್ ಅಧ್ಯಯನ ನಡೆಸಿ ಕೆಲವು ಮಾರ್ಪಾಡುಗಳೊಂದಿಗೆ ಏಳನೇ ನೀತಿ “ಸಾಮಾಜಿಕ ಕಳಕಳಿ” ಸೇರ್ಪಡೆಯೊಂದಿಗೆ ಏಳು ಸಹಕಾರಿ ನೀತಿಗಳು ಅಸ್ತಿತ್ವ ಪಡೆದವು.
ಏಳು ಸಹಕಾರಿ ನೀತಿಗಳು
—————————
1:ಮುಕ್ತ ಹಾಗೂ ಸ್ವಯಂಪ್ರೇರಿತ ಸದಸ್ಯತ್ವ
2:ಪ್ರಜಾಸತ್ತಾತ್ಮಕ ಸದಸ್ಯ ಹತೋಟಿ
3:ಆರ್ಥಿಕ ಚಟುವಟಿಕೆಗಳಲ್ಲಿ ಸದಸ್ಯರ ಪಾಲು
4:ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ
5: ಸಹಕಾರ ಶಿಕ್ಷಣˌ ತರಬೇತಿ ಮತ್ತು ಪ್ರಚಾರ
6:ಸಹಕಾರಿಗಳಲ್ಲಿ ಪರಸ್ಷರ ಕ್ರಿಯಾತ್ಮಕ ಸಹಕಾರ
7:ಸಾಮಾಜಿಕ ಕಳಕಳಿ
ವಿಶ್ವದಾದ್ಯಂತ  ಕಾರ್ಯನಿರ್ವಹಿಸುತ್ತಿರುವ ಸಹಕಾರ ಚಳವಳಿಯ ಯಶಸ್ಸುˌ ಪ್ರಗತಿಗೆ ಈ ನೀತಿಗಳು ಅಡಿಪಾಯ. ಇದರ ಹೊರತಾದ ಮಾರ್ಗದತ್ತ ಸಹಕಾರಿ ಸಂಘ ನಡೆದರೆ  ಆ ಸಂಸ್ಥೆ ಯಶಸ್ಸನ್ನು ಕಾಣದು. ಯಾವುದೊ ಒಂದು ದಿನ ಅದರ ಅಸ್ತಿತ್ವಕ್ಕೆ ಅಪಾಯ ತಪ್ಪಿದ್ದಲ್ಲ.
ಸಹಕಾರದ ಮೌಲ್ಯವರ್ಧನೆಗೆ ನಡೆದ ಚಿಂತನೆಗಳು
——————^^^^^^^^^^——————
ದೇಶದ ಸ್ವಾತಂತ್ರ್ಯ ನಂತರ ಸಹಕಾರ ಆಂದೋಲನದ ಸರ್ವತೋಮುಖ ಅಭಿವೃಧ್ಧಿಗೆ ಹಲವಾರು ತಜ್ಞರ ಸಮಿತಿಗಳು ಕಾಲಕಾಲದಲ್ಲಿ ನೇಮಕಗೊಂಡು ಅವುಗಳು ತಮ್ಮ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿದವು.

1:ಅಖಿಲ ಭಾರತ ಪತ್ತು ಸಮೀಕ್ಷಾ ಸಮಿತಿ(1954)
—————————————————
1951ರಲ್ಲಿ ಶ್ರೀ ಎ. ಡಿ. ಗೋರವಾಲಾ ಅಧ್ಯಕ್ಷತೆಯಲ್ಲಿ ರಚನೆಯಾದ ಈ ಸಮಿತಿಯು ಸಹಕಾರದ ಆಡಳಿತ ನಿಯಂತ್ರಣˌ ಪಾಲು ಬಂಡವಾಳದಲ್ಲಿ ಸರಕಾರದ ಪಾಲುಗಾರಿಕೆˌ ಪತ್ತು ಮತ್ತು ಮಾರಾಟ ಜೋಡಣೆˌ ಹಾಗೂ ಸಹಕಾರ ಸಂಘಗಳ ಕಾರ್ಯ ವಿಸ್ತರಣೆ  ಮುಂತಾದವುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವುದು  ಕಾರ್ಯ ಸೂಚಿಯಾಗಿತ್ತು. ಈ ಸಮಿತಿ ಅಧ್ಯಯನ ನಡೆಸಿ ಈ ಕೆಳಕಂಡ ಶಿಫಾರಸುಗಳನ್ನು 1954ರಲ್ಲಿ ಸರಕಾರಕ್ಕೆ ಸಲ್ಲಿಸಿತು.

*ಪತ್ತುˌˌಬ್ಯಾಂಕಿಂಗ್ˌ ಚಟುವಟಿಕೆ ನಡೆಸುವ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ರಚನೆ
*ಪತ್ತು ಮತ್ತು ಮಾರಾಟ ವ್ಯವಸ್ಥೆಯನ್ನು ಜೋಡಿಸುವುದು. ಕೃಷಿ  ಪತ್ತಿನ ಸಂಘಗಳು ಹಾಗೂ ಮಾರಾಟ ಸಂಘಗಳ ಮಧ್ಯೆ ಪತ್ತು ನಿಯಂತ್ರಣ ಕಾರ್ಯತಂತ್ರಗಳನ್ನು ರೂಢಿಸುವುದು.
*ಕೃಷಿ ಉತ್ಪನ್ನಗಳ ಸಂಗ್ರಹˌ ಸಂಸ್ಕರಣೆˌ ಮಾರಾಟದ ಕಾರ್ಯಗಳಿಗೆಆದ್ಯತೆ ನೀಡುವುದು.
*ಉಗ್ರಾಣಗಳ ನಿರ್ಮಾಣಕ್ಕೆ ಸರಕಾರದಿಂದ ಸಾಲ ಹಾಗೂ ಸಹಾಯಧನವನ್ನು  ನೀಡುವುದು.
*ಸರಕಾರದ ಪಾಲುವಂತಿಗೆ ಇರುವ ಸಂಘಗಳ ಆಡಳಿತ ಮಂಡಳಿಯಲ್ಲಿ ಸರಕಾರದ ಪ್ರಾತಿನಿಧ್ಯಕ್ಕೆ ಅವಕಾಶ ನೀಡುವುದು.
*ಆರಂಭದಲ್ಲಿ ಅವಶ್ಯಕತೆಯಿದ್ದಲ್ಲಿ ವ್ಯವಸ್ಥೆಗಳನ್ನು ರೂಢಿಸುವ ಶಿಬಂಧಿಗಳ ವೇತನವನ್ನುಸರಕಾರ ಭರಿಸುವುದು.

2:ಸಹಕಾರ ಪತ್ತು ಸಮಿತಿ(1960)
————————————
ಸಹಕಾರ ಸಂಘಗಳ ಬಲವರ್ಧನೆಗಾಗಿ ಅವುಗಳ ಕಾರ್ಯಾಚರಣೆಯಲ್ಲಿ ಸುಧಾರಣೆಗಳನ್ನು ಬೊಟ್ಟು ಮಾಡಿತು. ಅಪೆಕ್ಸ್ ನಿಂದ ಪ್ರಾಥಮಿಕ ತನಕದ ಸಾಲ ನೀತಿಗಳಿಗೆ ಸ್ಪಷ್ಟತೆˌ ಸುಧಾರಣೆ ತರಲು ಸೂಚಿಸಿತು.

3:ಅಖಿಲ ಭಾರತ ಗ್ರಾಮಾಂತರ ಪತ್ತು ಸಮಿತಿ(1969)
———————————————————
ಈ ಸಮಿತಿಯು ಪತ್ತು ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿ ಆರ್ಥಿಕ ಸುಭದ್ರತೆಯನ್ನು ಪ್ರತಿಪಾದಿಸಿತು. ಸುಸ್ತಿ ಬಾಕಿ ನಿಯಂತ್ರಣ ˌಸಾಲ ನೀಡಿಕೆ ನೀತಿಗಳು ಹಾಗೂ ವಿಧಾನಗಳಿಗೆ ಎರಡು ಸೂತ್ರಗಳನ್ನು ಹೇಳಿತು. ಗೊಬ್ಬರˌ ಕೃಷಿ ಸಲಕರಣೆಗಳ ರೂಪದಲ್ಲಿ ಭಾಗಶಃ ಸಾಲ ನೀಡುವುದು ಇದರಲ್ಲಿ ಒಂದಾಗಿತ್ತು.
ಕೃಷಿಕರಿಗೆ ತೀರಾ ಅವಶ್ಯವಾದ ನೀರುˌ ವಿದ್ಯುತ್ ರಸಗೊಬ್ಬರ ಮುಂತಾದ ಪ್ರಮುಖ ವಿಷಯಗಳ ಪೂರೈಕೆಗೆ ಸರಕಾರ ಪ್ರಾಧಿಕಾರಗಳ ಮೂಲಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿತು.ಗ್ರಾಮೀಣ ವಿದ್ಯುದೀಕರಣ ಕಾರ್ಪೋರೇಶನ್ ಸ್ಥಾಪನೆ ಈ ಶಿಫಾರಸ್ಸಿನಲ್ಲಿ ಒಳಗೊಂಡಿತ್ತು.
ಚುನಾಯಿತ ಆಡಳಿತ ಮಂಡಳಿˌ ಮತ್ತು ವೇತನ ಶಿಬಂದಿಗಳ ನಡುವೆ ಹೊಣೆಗಾರಿಕೆಗಳ ನಿಗಧೀಕರಣ ಶಿಷ್ಟಾಚಾರಗಳನ್ನು ಹೊಂದುವುದು ಅಗತ್ಯ ಎಂಬುದಾಗಿ ಅಭಿಪ್ರಾಯ ಪಟ್ಟಿತು.

4: ಬಾವಾ ಕಮಿಟಿ(1971)
——————————
ಈ ಸಮಿತಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ  ಸಂಘಗಳನ್ನು ಸ್ಥಾಪಿಸಲು ಸೂಚಿಸಿತು. ಇದರ ಹಿನ್ನಲೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವು(1976) ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ರೈತ ಸೇವಾ ಸಹಕಾರ ಸಂಘಗಳನ್ನು  ಸ್ಥಾಪಿಸಲು ಸೂಚಿಸಿದ ಫಲಶ್ರುತಿ ಸಣ್ಣ ಕಾರ್ಯವ್ಯಾಪ್ತಿಯ ಹಲವು  ಸಂಘಗಳು ಏಕೀಕೃತಗೊಂಡು ರೈತ ಸೇವಾ ಸಹಕಾರ ಸಂಘಗಳು ಸ್ಥಾಪನೆಯಾಯಿತು

5:ಹಜಾರಿ ಕಮಿಟಿ(1975)
——————————
ಅಲ್ಪಾವಧಿ ಹಾಗೂ ಧೀರ್ಘಾವಧಿ ಸಾಲಗಳಿಗೆ ರಾಜ್ಯ ಅಪೆಕ್ಸ್ ಮತ್ತು ಭೂಅಡಮಾನಬ್ಯಾಂಕು ಎಂಬ ಪ್ರತ್ಯೇಕತೆ ಕಲ್ಪಿಸದೇ  ಗ್ರಾಮಮಟ್ಟದಲ್ಲಿ ಪ್ರಾಥಮಿಕ ಸಂಘಗಳು ಕೂಡಾ ಅಲ್ಪಾವಧಿ ಜತೆಯಲ್ಲಿ ಮಧ್ಯಮಾವಧಿˌ ಧೀರ್ಫಾವಧಿ ಸಾಲಗಳನ್ನು  ನೀಡಬಹುದೆಂದು ಈ ಸಮಿತಿ ನೀಡಿದ ಶಿಫಾರಸ್ಸಿಗೆ ಧೀರ್ಘಾವಧಿ ಸಾಲವ್ಯವಸ್ಡೆ( ರಾಜ್ಯ ಭೂಅಡಮಾನ)ಯು ತನ್ನ ಅಸ್ತಿತ್ವಕ್ಕೆ ಕುಂದುಬರಬಹುದೆಂಬ ಕಾರಣಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿತು .

6:ಕ್ರಾಫಿಕಾರ್ಡ ಸಮಿತಿ(1981)
——————————
ಕೃಷಿ ಹಾಗೂ ಗ್ರಾಮೀಣ ಅಭಿವೃಧ್ದಿ ಬಗ್ಗೆ ಒತ್ತು ನೀಡಿˌವಿಶೇಷವಾಗಿ ರೈತ ಸೇವಾ ಸಹಕಾರಿ ಸಂಘಗಳು ಮತ್ತು ಆದಿವಾಸಿ ವಿವಿದೊದ್ದೇಶ ಸಹಕಾರಿ ಸಂಘಗಳನ್ನು ಅಭಿವೃಧ್ಧಿ ಪಡಿಸಲು ನಿಗದಿತ ಅವಧಿ  ಹಾಗೂ ಸೂತ್ರಗಳನ್ನು  ಹೇಳಿ ರಾಜ್ಯ ಸರಕಾರವನ್ನು ಒತ್ತಾಯಿಸಿತುˌ.  ಸಮಗ್ರ ಗ್ರಾಮೀಣ ಅಭಿವೃಧ್ಧಿ ಹಿನ್ನಲೆಯಲ್ಲಿ”ರಾಷ್ಟ್ರೀಯ ಗ್ರಾಮೀಣ ಅಭಿವೃಧ್ಧಿ ಬ್ಯಾಂಕು” (ನಬಾರ್ಡ್) ಸ್ಥಾಪನೆಯ ಅಗತ್ಯತೆ ಹಾಗೂ ಸಾಧ್ಯತೆಯನ್ನು ಪರಿಶೀಲಿಸಿತು.
ಉದ್ದೇಶಪೂರ್ವಕ ಸುಸ್ತಿದಾರರಿಗೆ ದಂಡನೆ ಹಾಗೂ ಕ್ರಿಮಿನಲ್ ಕಾಯ್ದೆಯಡಿ ಶಿಕ್ಷೆಗೆ  ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿತು.ಭೂಅಭಿವೃಧ್ಧಿ ಬ್ಯಾಂಕುಗಳು
ಕೃಷಿಗೆ ಪೂರಕ ಚಟುವಟಿ಼ಕೆಗಳಾದ ತೋಟಗಾರಿಕೆ ಹೈನುಗಾರಿಕೆˌ ಕೋಳಿಸಾಕಣೆˌ ಹಂದಿಸಾಕಣೆˌ ಮೀನುಗಾರಿಕೆˌ ರೇಷ್ಮೆಕೃಷಿˌ ಗೋಬರ್ ಗ್ಯಾಸ್ˌಉಗ್ರಾಣˌ ಗೋದಾಮುˌ ಗುಡಿಕೈಗಾರಿಕೆ ˌಗ್ರಾಮೀಣ ಕರಕುಶಲ ಚಟುವಟಿಕೆಗಳಿಗೆ ಸಾಲನೀಡುವಂತೆ ಈ ಸಮಿತಿ ಸೂಚಿಸಿತು.

7:ಕುಸ್ರೋ ಸಮಿತಿ(1989)
——————————
ಈ ಸಮಿತಿ 1986ರಲ್ಲಿ ರಚಿಸಲ್ಪಟ್ಟು 1989ರಲ್ಲು ವರದಿ ನೀಡಿತು.ಇದರಲ್ಲಿರುವ ಮುಖ್ಯ ಸಲಹೆ ವ್ಯಾಪಾರ ಅಭಿವೃಧ್ಧಿ ಯೋಜನೆ. (B D P)ಈ ಯೋಜನೆಯು ಒಂದು ನಿರಂತರ ಪ್ರಕ್ರಿಯೆ. ಸಂಘಗಳ ಸಾಮರ್ಥ್ಯˌ ಬಲಹೀನತೆ ˌಅವಕಾಶˌ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ಅದರ ಆಧಾರದಲ್ಲಿ ಸಂಸ್ಥೆಗಳ ಚಟುವಟಿಕೆ ಗಳನ್ನು ವೃದ್ದಿಸುವುದು  ಯೋಜನೆಯ ಉದ್ದೇಶ. ಪ್ರಾಥಮಿಕ ಸಂಸ್ಥೆಗಳಿಗೆ ಮೇಲುಸ್ತರ ಸಂಸ್ಥೆಗಳು ಭೌತಿಕ ಸೌಲಭ್ಯಗಳಾದ ಕೌಂಟರ್  ˌಸುರಕ್ಷಿತ ಕವಾಟುಗಳಿಗೆ  ನೆರವು ನೀಡುವರೇ ಸಮಿತಿ ಸೂಚಿಸಿದೆ. ರಾಜ್ಯ ಬ್ಯಾಂಕುಗಳು ˌಜಿಲ್ಲಾ ಬ್ಯಾಂಕುಗಳು “ಸಹಕಾರ ಅಭಿವೃದ್ದಿ ನಿಧಿ”ಯನ್ನು ಸ್ಥಾಪಿಸಿ ಅದರಿಂದ ನೆರವು ನೀಡುವ ಪ್ರಸ್ತಾಪ ವರದಿಯಲ್ಲಿದೆ.”ರಾಷ್ಟ್ರೀಯ ಸಹಕಾರ ಬ್ಯಾಂಕು” ಸ್ಥಾಪಿಸುವಂತೆ ಸಲಹೆ ನೀಡಲಾಗಿದೆ.

8: ನಬಾರ್ಡ್ ನೇಮಿತ ವರ್ಕಿಂಗ್ ಗ್ರೂಫ್(1985)
—————————————————ಭೂಅಭಿವೃಧ್ಧಿ ಬ್ಯಾಂಕು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಆರೋಗ್ಯಕರ ಸ್ಪರ್ಧೆ ಮೂಲಕ ರೈತರ ಅವಶ್ಯಕತೆಗಳನ್ನು ಪೂರೈಸಲು ಸಲಹೆ ನೀಡಿದೆ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ವಿವಿದೋದ್ದೇಶ ಚಟುವಟಿಕೆಗಳಿದ್ದರೂ ಅವು ನಿರೀಕ್ಷಿತ ಯಶಸ್ಸು ಕಂಡಿಲ್ಲ ಎಂದು ಹೇಳಿದೆ. ಇದರತ್ತ ವಿಶೇಷ ಗಮನ ಹರಿಸಲು ಸೂತ್ರಗಳನ್ನು ಹೇಳಲಾಗಿದೆ

9:ಚೌಧುರಿ ಬ್ರಹ್ಮಪ್ರಕಾಶ ಸಮಿತಿ(1991)
——————————————
1991ರಲ್ಲಿ ದೇಶದ ಹೊಸ ಆರ್ಥಿಕ ನೀತಿಯು ಖಾಸಗೀಕರಣ ˌಜಾಗತೀಕರಣˌ ಉದಾರೀಕರಣ ಎಂಬ ಸಿದ್ದಾಂತದಡಿ  ಜ್ಯಾರಿಗೆ ಬಂತು. ಇದರ ಪರಿಣಾಮ ಸಹಕಾರದ ಮೇಲೂ ಗೋಚರಿಸಿತುˌ. ಆದ್ದರಿಂದ ಬದಲಾವಣೆ ಅನಿವಾರ್ಯ ಹಂತ ತಲಪಿತು.
ಸಹಕಾರ ಒಂದು ಶತಮಾನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. 1970ರ ಬಳಿಕ ವಿಪರೀತ ರಾಜಕೀಯ ಹಸ್ತಕ್ಷೇಪ ,ಅಧಿಕಾರಿಗಳ ಭ್ರಷ್ಟತೆಯಿಂದ ಸಹಕಾರದ ಮೇಲೆ ದುಷ್ಪರಿಣಾಮಗಳಾದವು.   ಇದನ್ನು  ಅಧ್ಯಯನ ನಡೆಸಲು ನೇಮಕ ಗೊಂಡ ಅರ್ಧನಾರೀಶ್ವರನ್ ಸಮಿತಿ  ಸಹಕಾರದ ಮೇಲಾಗಿರುವ ತೊಡಕುಗಳನ್ನು ಎತ್ತಿತೋರಿಸಿ ಇದಕ್ಕೆ ಸಹಕಾರದಲ್ಲಿ ಸ್ವಾಯತ್ತೆˌ  ಸ್ವಯಂಆಡಳಿತ ಒಂದೇ ದಾರಿ  ಎಂಬುದಾಗಿ ಸಾರಿ ಹೇಳಿತು. ಈ ವರದಿಯ ಜ್ಯಾರಿಗೆ  ನೀತಿಗಳನ್ನು ರೂಪಿಸುವರೇ ರಚಿಸಲಾದ ಚೌಧುರಿ ಬ್ರಹ್ಮಪ್ರಕಾಶ ಸಮಿತಿ ಸಹಕಾರಿಗಳಿಗೆ ಸ್ವಾಯತ್ತೆ ˌಸ್ವಯಂ ಆಡಳಿತ ನೀಡಬಲ್ಲ ಸಂಪೂರ್ಣ ಪ್ರಜಾಸತ್ತಾತ್ಮಕವಾದ ಮಾದರಿ ಸಹಕಾರಿ ಕಾಯ್ದೆ ರಚಿಸಿ ಮಂಡನೆ ಮಾಡಿತು. ಆ ಕಾಯ್ದೆಯ ಸ್ವರೂಪದಲ್ಲಿ ಎಲ್ಲಾ ರಾಜ್ಯಗಳು ತಮ್ಮ ಕಾಯ್ದೆಗಳನ್ನು ತಿದ್ದುಪಡಿಗೊಳಪಡಿಸಬೇಕು ಎಂಬುದು ಸಮಿತಿಯ ಆಶಯವಾಗಿತ್ತು .ಇದರ ಆಧಾರದಲ್ಲಿ ಕೇಂದ್ರ ಸರಕಾರದ ಬಹುರಾಜ್ಯ ಸಹಕಾರಿ ಕಾಯ್ದೆ 2002ರಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಕರ್ನಾಟಕದಲ್ಲಿ ಸಹಕಾರ ಸಂಘಗಳ ಕಾಯ್ದೆ1959ನ್ನು ಅಸ್ತಿತ್ವದಲ್ಲಿ ಇಟ್ಟುಕೊಂಡು ಸಮಾನಾಂತರವಾದ ಸಂಪೂರ್ಣ ಸ್ವಾಯತ್ತೆ ಹೊಂದಿರುವ ಕರ್ನಾಟಕ ಸೌಹಾರ್ಧ ಸಹಕಾರಿ ಕಾಯ್ದೆ1997 ಜ್ಯಾರಿಯಾಯಿತು. ದೇಶದ ಹಲವಾರು ರಾಜ್ಯಗಳು ಮಾದರಿ ಸಹಕಾರಿ ಕಾಯ್ದೆ ಸ್ವರೂಪದ ಕಾಯ್ದೆಗಳನ್ನು ಜ್ಯಾರಿಮಾಡಿದವು. ಇಷ್ಟೆಲ್ಲಾ ಬದಲಾವಣೆಗಳು ಆದರೂ ಸಹಕಾರಿ ರಂಗ ಇನ್ನೂ ಕೂಡಾ ದೊಡ್ಡ ಪ್ರಮಾಣದ ಸ್ವಚ್ಛತೆ ಹೊಂದದೇ ಇರುವುದು ಖೇದಕರ ಸಂಗತಿ.

10:ಸಹಕಾರ ಪತ್ತು ವ್ಯವಸ್ಥೆಯ ಪುನರುಜ್ಜೀವನ
—————————————————
ದೇಶದ ಗ್ರಾಮೀಣ ಪತ್ತು ವ್ಯವಸ್ಥೆಯನ್ನು ಹೊಸದಿಗಂತಕ್ಕೆ ಕೊಂಡೊಯ್ಯುವ ಪ್ರಬಲ ಉದ್ದೇಶದ ನೆಲೆಯಲ್ಲಿ  ಜಗದೀಶ ಕಪೂರ ಸಮಿತಿ ˌ ವಿ ಯಸ್ ವ್ಯಾಸವ ಸಮಿತಿˌ  ಬಾಬಾಸಾಹೇಬ ವಿಖೆ ಪಾಟೀಲ ಸಮಿತಿಗಳು ಬೇರೆಬೇರೆ ಸಂದರ್ಭಗಳಲ್ಲಿ ಅಧ್ಯಯನ ನಡೆಸಿ ಕೃಷಿ ಪತ್ತಿನ ಪುನರುಜ್ಜೀವನಕ್ಕಾಗಿ ವರದಿ ನೀಡಿದ ಹಿನ್ನಲೆಯಲ್ಲಿ ಪ್ರೊ ವೈದ್ಯನಾಥನ್ ಸಮಿತಿಯನ್ನು ಕೃಷಿ ಪತ್ತಿನ ಸುಧಾರಣೆಯ ವಿಸ್ತೃತ ವರದಿ ನೀಡುವರೇ ಅಸ್ತಿತ್ವಕ್ಕೆ ತರಲಾಯಿತು.

11:ಪ್ರೊ. ಎ .ವೈದ್ಯನಾಥನ್ ಸಮಿತಿ
———————————
ಸಹಕಾರಿ ಕೃಷಿ ಪತ್ತಿನ ವ್ಯವಸ್ಧೆಯ ಸುಧಾರಣೆಗೆ ಕಾರ್ಯಸಾಧು ಕ್ರಿಯಾಯೋಜನೆ ರೂಪಿಸುವುದುˌ ಅದರ ಜ್ಯಾರಿಗೆ ಸೂಕ್ತ ನಿಯಂತ್ರಣˌ  ನಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪುನರುಜ್ಜೀವನಕ್ಕೆ ಆರ್ಥಿಕ ಸಹಾಯದ ಅಂದಾಜು ತಯಾರಿˌ ಹಾಗೂ ವಿತ್ತೀಯ ವ್ಯವಸ್ಥೆಗಳ ಬಗ್ಗೆ ಸಲಹೆ ಮುಂತಾದ ಕಾರ್ಯಸೂಚಿಯೊಂದಿಗೆ ಕೇಂದ್ರ ಸರಕಾರದಿಂದ ರಚಿಸಲ್ಪಟ್ಟ ಏಳು ಮಂದಿ ತಜ್ಞರನ್ನೊಳಗೊಂಡ ಈ ಸಮಿ಼ತಿ ಪೂರ್ತಿ ಅಧ್ಯಯನ ನಡೆಸಿ 2004 ಡಿ. 30ರಂದು ತನ್ನ ವರದಿಯನ್ನು ಸಲ್ಲಿಸಿ ಸಾರ್ವಜನಿಕರ ಸಲಹೆಗಳಿಗೆ ಆಹ್ವಾನ ನೀಡಿತು. ತನ್ನ ವರದಿಯಲ್ಲಿ ದೇಶದ ಸಹಕಾರಿ ಚಳವಳಿಯ ಹುಟ್ಟಿನಿಂದ ಆರಂಭಿಸಿ ಅಂದಿನ ತನಕದ  ಸಹಕಾರದ ಬೆಳವಣಿಗೆ ಹಾಗೂ ವಿದ್ಯಮಾನಗಳನ್ನು ವಿಶ್ಲೇಷಣೆ ನಡೆಸಿರುವುದು ಉಲ್ಲೇಖನೀಯ. ಅಲ್ಲದೇ ಈ ಕ್ಷೇತ್ರ ದುರ್ಬಲವಾಗಲು ಕಾರಣಗಳನ್ನು ವಿಶೇಷವಾಗಿ ಬೊಟ್ಟು ಮಾಡಿದೆ.ಸಹಕಾರಿ ರಂಗ ಬಲಪಡಿಸಲು ಈ ಕೆಳಗಿನ ಕೆಲವೊಂದು ಶಿಫಾರಸುಗಳನ್ನು ಸಮಿತಿ ಮಾಡಿತು .ನಷ್ಟದಲ್ಲಿರುವ ಕೃಷಿ ಪತ್ತಿನ ಸಂಘಗಳಿಗೆ ವಿಶೇಷ ಅನುದಾನ .ˌ ಸ್ವಾಯತ್ತಾ ˌಸದಸ್ಯಕೇಂದ್ರಿತ ˌಪ್ರಜಾಸತ್ತಾತ್ಮಕ  ಸಂಸ್ಥೆಗಳಾಗಿ ಬಲಪಡಿಸುವರೇ ಸಹಕಾರಿ ಕಾನೂನಿನಲ್ಲಿ ಕ್ರಾಂತಿಕಾರಿ ಬದಲಾವಣೆ.  ˌನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಿಶೇಷ ತರಬೇತಿ.
ವಿಶೇಷ ಅನುದಾನಕ್ಕೆ ಇಡೀ ದೇಶಕ್ಕೆ ಸಂಬಂಧಿಸಿ ರೂಪಾಯಿ 14839/ಕೋಟಿ ಯ ಕ್ರಿಯಾಯೋಜನೆ ಹಾಗೂ ಇದರಲ್ಲಿ 53%ಕೇಂದ್ರ ಸರಕಾರದ ಪಾಲು 31%ರಾಜ್ಯ ಸರಕಾರದ ಪಾಲು ಹಾಗೂ16% ಸಹಕಾರಿ ರಂಗ ನೀಡುವಂತೆ ಸಲಹೆ ಮಾಡಿದೆ. ಅದೇ ರೀತಿ ಬ್ರಹ್ಮಪ್ರಕಾಶ ಸಮಿತಿಯ ಮಾದರಿ ಕಾಯ್ದೆಯನ್ನು ಎಲ್ಲಾ ರಾಜ್ಯಗಳು ಒಪ್ಪಿಕೊಂಡು ಜ್ಯಾರಿಗೆ ತರಲು ಶಿಪಾರಸು ಮಾಡಲಾಗಿದೆ. ಕಾಯ್ದೆಯಲ್ಲಿ ನಿಯಮಗಳ ರಚನೆಯಿರಬಾರದು ನಿರ್ದೇಶಕರು ಸಾಮಾನ್ಯ ಸಭೆಗೆ ಉತ್ತರದಾಯಿತ್ವˌ ಶಿಬಂಧಿ ಆಡಳಿತ ಮಂಡಳಿಯಿಂದ ನೇಮಕ ಹಾಗೂ ಅವರಿಗೆ ಉತ್ತರದಾಯಿಯಾಗಿರಬೇಕು. ಸರಕಾರದ ಹಸ್ತಕ್ಷೇಪಕ್ಕೆ ಕಡಿವಾಣˌ ನಿಗದಿತ ಸಮಯದಲ್ಲಿ ಲೆಕ್ಕಪರಿಶೋಧನೆˌ ಚುನಾವಣೆ ˌಸಾಮಾನ್ಯಸಭೆಗಳು ಜರಗುವರೇ ಅವಕಾಶ ಕಲ್ಪಿಸಲು ಪ್ರಸ್ತಾಪಿಸಲಾಗಿದೆ. ಶಿಫಾರಸುಗಳನ್ನು ಜ್ಯಾರಿಗೆ ತರುವ ಉಸ್ತುವಾರಿಗಳ ಬಗ್ಗೆ ಸ್ಪಷ್ಟಪಡಿಸಲಾಗಿದೆ. ಜಿಲ್ಲಾ ಬ್ಯಾಂಕುಗಳು ಹಾಗೂ ಅಪೆಕ್ಸ್ ಬ್ಯಾಂಕುಗಳ ಪುನರ್ ಸಂಘಟನೆಯ ಪ್ರಸ್ತಾಪನೆ ಕೂಡಾ ಇದರಲ್ಲಿ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಸಹಕಾರಿ ಕೃಷಿ ಪತ್ತಿನ ವ್ಯವಸ್ಥೆಯ ಸಮಗ್ರ ಪುನಶ್ಚೇತನಕ್ಕೆ ಇದೊಂದು ಉಜ್ವಲ ಬೆಳಕಿನ ದಾರಿದೀಪ.  ನಮ್ಮ ರಾಜ್ಯದಲ್ಲಿ ಅಲ್ಪಾವಧಿ ಸಾಲದ ಅಪೆಕ್ಸ್ ಬ್ಯಾಂಕು ವಲಯದಲ್ಲಿ ಆರ್ಥಿಕ ಸಹಾಯವನ್ನು ಸರಕಾರದಿಂದ ಪಡೆಯುವ ಉದ್ದೇಶದಿಂದ ಒಂದಷ್ಟು ಶಿಫಾರಸುಗಳು ಜ್ಯಾರಿಯಾದವು .ಆದರೆ ಧೀರ್ಘಾವಧಿ ಸಾಲದ ಭೂ ಅಭಿವೃಧ್ಧಿ ಬ್ಯಾಂಕು ವಲಯಕ್ಕೆ ಸಂಬಂಧಿಸಿ ಈ ವರದಿಯ ಯಾವುದೇ ಶಿಫಾರಸುಗಳು ಅನುಷ್ಟಾನಕ್ಕೆ ಬಾರದೆ ಇರುವುದು ದುಃಖದ ಸಂಗತಿ. ಸರಕಾರ ಹಾಗೂ ಸಂಬಂಧಿಸಿದವರ ಇಚ್ಚಾಶಕ್ತಿಯ ಕೊರತೆ ಈ ವರದಿಯ ಅಪೂರ್ಣಅನುಷ್ಟಾನದಲ್ಲಿ ಎದ್ದುಕಾಣುತ್ತಿದೆ.

12: ಸಂವಿಧಾನದ 97ನೇ ತಿದ್ದುಪಡಿ
—————————————
2011ರಲ್ಲಿ ಸಂವಿಧಾನದ 97ನೇ ತಿದ್ದುಪಡಿ ಮೂಲಕ ಸಹಕಾರಕ್ಕೆ ಮಹತ್ತರವಾದ ಸ್ಥಾನ ದೊರೆಯಿತು. ಸಹಕಾರ ಸಂಘಗಳ ಸ್ಥಾಪನೆ ನಾಗರಿಕರ ಮೂಲಭೂತ ಹಕ್ಕಾಗಿ ಪರಿಗಣಿಸಲ್ಪಟ್ಟುದು ದೇಶದ ಸಹಕಾರ ಚಳುವಳಿ ಇತಿಹಾಸದ ಪ್ರಮುಖ ಮೈಲುಗಲ್ಲು. ಸಹಕಾರ ಸಂಘಗಳ ಸ್ವಇಚ್ಚಾರಚನೆˌ ಸ್ವಾಯತ್ತಾ ಕಾರ್ಯಾಚರಣೆˌ ಪ್ರಜಾಸತ್ತಾತ್ಮಕ ಹತೋಟಿˌ ಮತ್ತು ವೃತ್ತಿಪರ ನಿರ್ವಹಣೆಯನ್ನು ಪ್ರೋತ್ಸಾಹಿಸುವುದು ಈ ತಿದ್ದುಪಡಿಯ ಪ್ರಮುಖ ಆಶಯವಾಗಿತ್ತು.2೦ ವರ್ಷಗಳ ಹಿಂದೆ ಬ್ರಹ್ಮಪ್ರಕಾಶ ಚೌಧುರಿ ಸಮಿತಿ ತಯಾರಿಸಿದ ಮಾದರಿ ಸಹಕಾರಿ ಕಾಯ್ದೆಯ ಬಹುಪಾಲು ಅಂಶಗಳು ಸಂವಿಧಾನ ತಿದ್ದುಪಡಿಯಲ್ಲಿ ಒಳಗೊಂಡಿರುವುದು ಉಲ್ಲೇಖನೀಯ.ಇದರ ಅಡಿಗಟ್ಟಿನಲ್ಲಿ ಕರ್ನಾಟಕ ಸಹಕಾರಿ ಕಾಯ್ದೆ1959—2013ರಲ್ಲಿ ತಿದ್ದುಪಡಿಗೊಳಪಟ್ಟು ರಾಜಕೀಯ ಹಸ್ತಕ್ಷೇಪˌ ಸರಕಾರದ ಹತೋಟಿಗೆ ಮುಕ್ತತೆˌ ವೃತ್ತಿಪರ ಲೆಕ್ಕಪರಿಶೋಧನೆˌ ಚುನಾವಣಾ ಆಯೋಗ ರಚನೆˌ ಚುನಾವಣಾ ತಕರಾರುಗಳು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೆ ಮುಂತಾದ ಹತ್ತು ಹಲವು ವಿಷಯಗಳು ಸೇರ್ಪಡೆ ಯಾ ತಿದ್ದುಪಡಿಗೊಳಪಟ್ಟು ಸಹಕಾರದ ಮೌಲ್ಯವರ್ಧನೆಗೆ ದಾರಿ ಸುಗಮವಾಯಿತು. ಆದರೆ ಈ ಕಾಯ್ದೆ 2014ರಲ್ಲಿ ಸರಕಾರದ ಸ್ವಾರ್ಥನೀತಿಯಿಂದ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಮರುತಿದ್ದುಪಡಿಗೊಳಪಟ್ಟು  ಹೆಚ್ಚುಕಮ್ಮಿ ಹಿಂದಿನ ಸ್ಥಿತಿಗೆ ಜ್ಯಾರಿದುದು ದುರಾದೃಷ್ಟಕರ ವಿಚಾರ. ಈ ಮಧ್ಯೆ ಗುಜರಾತ್ ಉಚ್ಚ ನ್ಯಾಯಾಲಯ ಸಂವಿಧಾನದ 97ನೇ ತಿದ್ದುಪಡಿಯನ್ನು ರದ್ದುಪಡಿಸಿತು. ಇದಕ್ಕೆ ಸಂಬಂಧಿಸಿದ ದಾವೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದ್ದು ಅಂತಿಮ ತೀರ್ಪು ಬರಲು ಬಾಕಿಯಿರುತ್ತದೆ.
ಸಹಕಾರ ಚಳುವಳಿ ಕಳೆದ 116 ವರ್ಷಗಳಲ್ಲಿ  ಹಲವು ಏಳುಬೀಳುಗಳನ್ನು ಕಂಡು ಜನರ ಜೀವನದ ಅಂಗವಾಗಿ ಸಾಗಿಬಂದಿದ್ದುˌ ಗ್ರಾಮೀಣ ಪ್ರಜೆಗಳ ಬದುಕಿಗೆ ಕೈಗನ್ನಡಿ ಹಿಡಿದಿದೆ. ಅದೇ ರೀತಿ ಪಟ್ಟಣವಾಸಿಗಳ ಆರ್ಥಿಕ ಚಟುವಟಿಕೆಯಲ್ಲಿ ವಾಣಿಜ್ಯ ಬ್ಯಾಂಕುಗಳ ಜತೆ ಪೈಪೋಟಿ ನೀಡುವ ಮೂಲಕ ಪಟ್ಟಣದಲ್ಲೂ ಜನಪ್ರಿಯತೆ ಉಳಿಸಿಕೊಂಡಿದೆ.  ಸಹಕಾರದ ಆಡಳಿತದಲ್ಲಿ ರಾಜಕೀಯ ಚಟುವಟಿಕೆ ಸರಕಾರದ ಸ್ವಾರ್ಥˌ ಅಧಿಕಾರಿಗಳ ಭ್ರಷ್ಟಾಚಾರ ˌಶಿಬಂಧಿಗಳ ಅಶಿಸ್ತಿನ ದುಡಿಮೆ  ˌಸದಸ್ಯರ ಅಸಡ್ಡೆಯ ನಿಲುಮೆˌಹಾಗೂ ಸಹಕಾರಿ ಜ್ಞಾನದ ಕೊರತೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದ್ದು ˌಇಂತಹ ಲಜ್ಜೆಗೆಟ್ಟ ವ್ಯವಹಾರಗಳು ಸಹಕಾರದ ಬಲವರ್ಧನೆಗೆ ಮಾರಕ. ಮಾದರಿ ಸಹಕಾರಿ ಕಾಯ್ದೆ ಹಾಗೂ ಸಂವಿಧಾನದ 97ನೇ ತಿದ್ದುಪಡಿಯ ಆಶಯದಂತೆ  ಸಹಕಾರ ಸಂಘಗಳ ಸರ್ವ ವ್ಯವಹಾರಗಳು ನಡೆದಾಗ ದೇಶದ ಜನಮಾನಸದ ಬದುಕು ನೆಮ್ಮದಿಯಾಗಬಹುದುˌ. ಗ್ರಾಮೀಣ ಭಾರತ ಸುಭಿಕ್ಷೆಯತ್ತ ಸಾಗಿ ದೇಶ ಅಭಿವೃಧ್ಧಿಯ ಪಥದಲ್ಲಿ  ಮುನ್ನಡೆಯುವುದರಲ್ಲಿ ಸಂಶಯವಿಲ್ಲ.

ರಾಧಾಕೃಷ್ಣ ಕೋಟೆ ಅಂಚೆ:ಕಳಂಜ ˌಸುಳ್ಯ ತಾಲೂಕು ದ.ಕ. – 574212  9448503424   

 

 

 

 

                    

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More