ಸಹಕಾರ ಚಳುವಳಿಯ ನಂದಾದೀಪ : “ನಮ್ಮ ಶಿವರಾಯರು”


ಜಗತ್ತಿನ ಎಲ್ಲಾ ಧರ್ಮಗಳನ್ನು, ಸಿದ್ಧಾಂತಗಳನ್ನು ಹಿಂಡಿದರೆ ಸಿಗಬಹುದಾದ ಸತ್ವಗಳನ್ನು ಒಂದು ಸಾಲಿನಲ್ಲಿ ವಿವರಿಸುವುದಾದರೆ, ಅದನ್ನು ಈ ರೀತಿಯಾಗಿ ಹೇಳಬಹುದು, “ನನಗಾಗಿ ಎಲ್ಲರರು, ಎಲ್ಲರಿಗಾಗಿ ನಾನು” ಹೌದು, ಸಹಕಾರ ಚಳುವಳಿಯ ತತ್ವವೇ ಅದು.

ಸಮಾಜದ ಎಲ್ಲರನ್ನು ಒಂದೇ ಮರದ ನೆರಳಿನಲ್ಲಿ ಸೇರಿಸಲು ಸಹಕಾರದಿಂದ ಮಾತ್ರ ಸಾಧ್ಯ, ಸಹಕಾರ ಭಾರತದ ಆತ್ಮವೆಂದು ಹೇಳಿದರು ಅದು ತಪ್ಪಾಗಲಾರದು. ಹಳ್ಳಿಗಳ ದೇಶವಾದ ಭಾರತದಲ್ಲಿ ಕೃಷಿಯು ಪ್ರಧಾನವಾಗಿದೆ. ಸಹಕಾರ ತತ್ವ ಗ್ರಾಮೀಣ ಆರ್ಥಿಕತೆಯಲ್ಲಿ ನೆರವಾಗುತ್ತಾ ದೇಶದಲ್ಲಿ ಚಳುವಳಿಯಾಗಿ ಹಬ್ಬಿತು. 20ನೇ ಶತಮಾನದ ಆರಂಭದಲ್ಲಿ ಸಹಕಾರ ಚಳುವಳಿ ಭಾರತದಲ್ಲಿ ಹಲವಾರು ಸಹಕಾರಿ ಪ್ರಯೋಗಗಳಿಗೆ ದಾರಿ ಮಾಡಿತು. ದಕ್ಷಿಣ ಭಾರತವು ಈ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.ಕರ್ನಾಟಕದ ಗದಗ, ಧಾರವಾಡ ಜಿಲ್ಲೆಗಳಲ್ಲಿ ಮೊದಲು ಸಹಕಾರ ಸಂಘಗಳು ಆರಂಭಗೊಂಡವು.ಇತರ ಭಾಗಗಳನ್ನು ಹೋಲಿಸಿದರೆ ಸಹಕಾರ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪ್ರಬಲವಾಗಿದೆ.

ದಕ್ಷಿಣಕನ್ನಡ ಜಿಲ್ಲೆ ರಾಷ್ಟ್ರಸಂತರ ತವರೂರು, ಇಲ್ಲಿ ಚಿಗುರೊಡೆದದ್ದೆಲ್ಲವೂ ಶ್ರೀಗಂಧವೇ, ಬೆಳದದ್ದೆಲ್ಲವೂ ಬಂಗಾರವೇ, ಈ ಜಿಲ್ಲೆಯೂ ದೇಶದ ಸಹಕಾರ ಚಳುವಳಿಗೆ ಅಪಾರ ಕೊಡುಗೆಯನ್ನು ನೀಡುತ್ತಾಬಂದಿದೆ. ರಾಜ್ಯದ ಸಹಕಾರ ಚಳುವಳಿಗೆ ಶರವೇಗವನ್ನು ನೀಡಿದ್ದು ಇಂತಹ ಸಹಕಾರಿ ಜಿಲ್ಲೆಗಳ ಜನರಿಗೆ ಸಹಕಾರ ಕ್ಷೇತ್ರದಲ್ಲಿದ್ದ ವಿಪರೀತ ಅಸಕ್ತಿಯೇ ಸರಿ. ಇಂತಹ ಸಹಕಾರಿ ಜಿಲ್ಲೆಯ ಸಹಕಾರಿ ಪಿತಾಮಹರೇ ಶ್ರೀ ಮೊಳಹಳ್ಳಿ ಶಿವರಾಯರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಆಂದೋಲನಕ್ಕೆ ಬೀಜ ಬಿತ್ತಿದವರು ಶ್ರೀ ಮೊಳಹಳ್ಳಿ ಶಿವರಾಯರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸಹಕಾರ ಸಂಘವನ್ನು ಸ್ಥಾಪಿಸಿದವರು ಮೊಳಹಳ್ಳಿ ಶಿವರಾಯರು. ಸಹಕಾರ ಕ್ಷೇತ್ರದಲ್ಲಿ ಇವರ ಕೊಡುಗೆ ಸೂಚನೀಯ.

ಭಾರತದ ಸ್ವಾತಂತ್ರ್ಯ ಹೋರಾಟದ ಆರಂಭದಲ್ಲಿ, ಅಂದರೆ 1880ರ ಆಗಸ್ಟ್ 8ರಂದು ಪುತ್ತೂರಿನಲ್ಲಿ ಶ್ರೀಯುತರು ಜನಿಸಿದರು. ಮಧ್ಯಮವರ್ಗದ ತುಂಬು ಕುಟುಂಬದವರಾದ ಶಿವರಾಯರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿ ಊರಿಗೂ-ಮನೆಗೂ ಕೀರ್ತಿಯನ್ನು ತರುವತ್ತ ತಮ್ಮ ಹೆಜ್ಜೆಗಳನ್ನು ಇಡಲಾರಂಭಿಸಿದರು. ಮುಂದೆ ಎಫ್‌.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೊಡಗಿನ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಸ್ವಲ್ಪಕಾಲ ಕಾರ್ಯನಿರ್ವಹಿಸಿದರು. ತದನಂತರ 1901ರಲ್ಲಿ ಪುತ್ತೂರಿಗೆ ಬಂದು ವಕೀಲ ವೃತ್ತಿಯನ್ನು ಆರಂಭಿಸಿದರು.

ಸಿವಿಲ್ ಮತ್ತು ಕ್ರಿಮಿನಲ್ ಲಾಯರ್ ಆಗಿ ಪ್ರಖ್ಯಾತಗೊಂಡರು. ತನ್ನ ವಕೀಲ ವೃತ್ತಿಯನ್ನು ಹಣಗಳಿಕೆಗಾಗಿ ಬಳಸಿಕೊಳ್ಳದೆ, ಶೋಷಿತರ ಧ್ವನಿಯಾಗಿ ಹೊರಹೊಮ್ಮಿದರು. ಬಹುಮುಖ ಪ್ರತಿಭಾವಂತರಾದ ಶಿವರಾಯರು ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ಜೀವನ ಶಕ್ತಿ ಮತ್ತು ಬದುಕಿನ ಕುರಿತಾದ ಒಳನೋಟಗಳಿಂದ ಬಹುದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಅವರ ಬದುಕೇ ಸಾಕ್ಷಿ.

1909 ರಲ್ಲಿ ಅವರು ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಸಹಕಾರ ಸಂಘವೊಂದನ್ನು ಸ್ಥಾಪನೆಯನ್ನು ಮಾಡಿ ಇಡೀ ಜಿಲ್ಲೆಯಲ್ಲಿ ಅದನ್ನು ಪಸರಿಸುತ್ತಾ ಹೋದರು.ಇದು ಮುಂದೆ ಸಹಕಾರಿ ಟೌನ್ ಬ್ಯಾಂಕ್ ಆಗಿ ಪ್ರಸಿದ್ಧವಾಯಿತು. ಶಿವರಾಯರು ಕಾಲ್ನಡಿಗೆಯಿಂದ ಅನೇಕ ಹಳ್ಳಿಗಳನ್ನು ಸಂದರ್ಶಿಸಿ, ಸಹಕಾರ ಸಂಘಗಳ ಪರಿಚಯವೇ ಇಲ್ಲದ ಪ್ರದೇಶಗಳಲ್ಲಿ, ಅವುಗಳನ್ನು ಸ್ಥಾಪಿಸಿ ಯಶಸ್ವಿಯಾದರು. ಸಹಕಾರಿ ಸಂಘಗಳ ಆರ್ಥಿಕ ಶಕ್ತಿಯನ್ನು ವೃದ್ಧಿಸಲು 1913 ರಲ್ಲಿ ಪುತ್ತೂರಿನ ಯೂನಿಯನ್ ಕ್ಲಬ್ಬಿನ ಒಂದು ಕೋಣೆಯಲ್ಲಿ ಜಿಲ್ಲೆಯ ಸಹಕಾರ ಕೇಂದ್ರ ಬ್ಯಾಂಕ್ಅನ್ನು ಸ್ಥಾಪಿಸಿದರು.

ಒಂದನೇ ಮತ್ತು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಹಾರ ಕೊರತೆಯುಂಟಾದಾಗ ಅವರು ಕೈಗೊಂಡ ಆಹಾರ ವಿತರಣೆ ಕ್ರಮಗಳು ಸರ್ವರ ಮನ್ನಣೆ ಗಳಿಸಿದೆ, ರಂಗೊನ್ ಅಕ್ಕಿ ತಯಾರಿಸಿ ಬಡಬಗ್ಗರಿಗೆ ನೀಡಿದರು. ಸಹಕಾರ ಚಳುವಳಿಯ ಮೂಲಕ ರೈತಾಪಿ ಜನರ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೇ ಅಡಿಕೆ ಬೆಳೆಗೆ ಮಹಾಳಿ ರೋಗ ತಗುಲಿದ್ದಾಗ ಮಹಾಳಿ ನಿವಾರಣೆ ಸಹಕಾರ ಸಂಘವನ್ನು ಸ್ಥಾಪಿಸಿ ನೆರವಾದರು.

ಪುತ್ತೂರನ್ನು ಸಹಕಾರಿ ಚಳುವಳಿಯ ಅಡಿಪಾಯವನ್ನು ಆಗಿಸಿ ಅದರ ಯಶಸ್ಸನ್ನು ಇಡೀ ಜಿಲ್ಲೆಗೆ ಹಂಚಿದರು. 1917ರಲ್ಲಿ  ಸದಾನಂದ ಸಹಕಾರಿ ಚಾಪಖಾನೆ ಸಂಘವನ್ನು ಸ್ಥಾಪಿಸಿದರು. 1925ರಲ್ಲಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಮುಖ್ಯ ಶಾಖೆಯನ್ನು ಪುತ್ತೂರಿನಿಂದ ಜಿಲ್ಲಾ ಕೇಂದ್ರವಾದ ಮಂಗಳೂರಿಗೆ ವರ್ಗಾಯಿಸಿದರು.

1936,ರಲ್ಲಿ ಸಹಕಾರ ಭೂ ಅಡಮನ್‌ ಬ್ಯಾಂಕನ್ನು ರಚಿಸಿದರು. ಸಹಕಾರ ಸಂಘಗಳ ಸ್ಥಾಪನೆಯಲ್ಲಿ ಹಲವು ಪ್ರಯೋಗಗಳನ್ನು ಶಿವರಾಯರು ಮಾಡುತ್ತಾ ಹೋದರು. ಸರಕಾರಿ ನೌಕರರ ಸಂಘ, ಲೇಬರ್ ಯೂನಿಯನ್, ವರ್ತಕರ ಸಂಘ, ಮಹಿಳೆಯರ ಕೈಗಾರಿಕ ಸಂಘ ಮೊದಲಾದ ಸಂಘಟನೆಗಳನ್ನು ಆರಂಭಿಸಿದರು.ಸಹಕಾರಿ ಸಂಘಗಳ ಮೂಲಕ ಅಕ್ಕಿ ವಿತರಣೆ ಮಾಡಿದ್ದು ನಿಜಕ್ಕೂ ಶ್ರೀಯುತರು ತೆಗೆದುಕೊಂಡ ಕ್ರಾಂತಿಕಾರಿ ಹೆಜ್ಜೆ. ಎಲ್ಲಾ ಕಡೆ ಸ್ವತಹ ತಾವೇ ಸಂಚರಿಸಿ ನಾಲ್ಕೈದು ಮನೆಗಳಿಗೆ ಒಂದರಂತೆ ಸ್ಟೋರ್‌ಗಳನ್ನು ಸ್ಥಾಪಿಸಿದರು.ಆ ಕಾಲದಲ್ಲಿ ಜಿಲ್ಲೆಯಲ್ಲಿ ಸುಮಾರು 208 ಸ್ಟೋರ್ ಗಳನ್ನು ಸ್ಥಾಪಿಸಿ ಪ್ರತಿ ಸ್ಟೋರಿಗೂ ಪ್ರತ್ಯೇಕ ಯೋಗ್ಯ ಮ್ಯಾನೇಜರನ್ನು ನೇಮಿಸಿ ಅಲ್ಲಿನ ಕಾರ್ಯಗಳಲ್ಲಿ ದಕ್ಷತೆಯನ್ನು ತಂದರು.

ಇಂದು ಜಿಲ್ಲೆಯ ಎಷ್ಟೋ ಸಹಕಾರಿ ಸಂಘಗಳ ಆರ್ಥಿಕ ಗುಣಮಟ್ಟ ಬೆಳೆದು ಅದರ ವ್ಯವಹಾರ ಉತ್ತಮ ರೀತಿಯಲ್ಲಿ ಮುಂದುವರೆದಿದೆ ಹಾಗೂ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸುತ್ತಿದೆಯೆಂದರೆ ಅದರ ಹಿಂದೆ ಶಿವರಾಯರು ಹುಟ್ಟುಹಾಕಿದ ಸಹಕಾರ ಚಳುವಳಿಯೇ ಕಾರಣ.

ಸಹಕಾರ ಚಳುವಳಿಯಿಂದಾಗಿ ಮೊಳಹಳ್ಳಿ ಶಿವರಾಯರು ರೈತರ ಮೆಚ್ಚುಗೆ ಪಡೆದಿದ್ದರು.ಶಿವರಾಯರು 1918 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ವಿಟ್ಲ ಆಳ್ವಿಕೆಯ ವಿಟ್ಲ ಸೀಮೆಯ ಕೇಂದ್ರವಾದ ದಕ್ಷಿಣ ಕನ್ನಡ ಕೃಷಿಕರ ಸಗಟು ಮಾರಾಟ ಸಂಘ (S.K Garden planters cooperative wholesales society), 1919 ರಲ್ಲಿ ಮೊಳಹಳ್ಳಿ ಶಿವರಾಯರಿಂದ ಪುತ್ತೂರಿನಲ್ಲಿ ಕೃಷಿಕರ ಮಾರಾಟ ಸಂಘ ಆರಂಭವಾದ ಪರಿಣಾಮವಾಗಿ ಸಹಕಾರ ಸಂಘಗಳ ಮೂಲಕ ಮಾರಾಟ ವ್ಯವಸ್ಥೆಯನ್ನು ಮಾಡುವುದರಿಂದ ದಲ್ಲಾಳಿಗಳಿಂದ – ಮಧ್ಯವರ್ತಿಗಳಿಂದ ರೈತರಿಗಾಗುವ ಶೋಷಣೆ ಕಡಿಮೆಯಾಯಿತು.

ಮೊಳಹಳ್ಳಿ ಶಿವರಾಯರು ಬಹುಮುಖ ವ್ಯಕ್ತಿತ್ವ, ಸಾರ್ವಜನಿಕ ಜೀವನದ ಹಲವು ರಂಗಗಳಲ್ಲಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಇಂದು ಅಭಿವೃದ್ಧಿಗೆ ಕಾರಣವಾಗಿದೆ ವೈಯುಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನ ಎರಡರಲ್ಲೂ ಪರಿಶುದ್ಧ ವ್ಯಕ್ತಿತ್ವ ಪಡೆದ ಅಪರೂಪದ ಮಹಾನಿಯರು ಶಿವರಾಯರು, ಸಹಕಾರಿ ತತ್ವ ಬೋಧಿಸುವ ಸ್ವ-ಅವಲಂಬಿತ ಜೀವನವನ್ನು, ಶಾಲೆಗಳ ಮೂಲಕ ಮಕ್ಕಳಿಗೆ ವಿಸ್ತರಿಸುವ ಪ್ರಯತ್ನ ಮಾಡಿ ವಿದ್ಯಾರ್ಥಿಗಳಲ್ಲಿ ಸಹಕಾರ ತತ್ವವನ್ನು ಬೆಳೆಸುವ ಪ್ರಯತ್ನವನ್ನು ಶಿವರಾಯರು ಮಾಡಿದ್ದರು. ಶಿಕ್ಷಣದ ಬಗ್ಗೆ ಅತಿದೊಡ್ಡ ಒಲವನ್ನು ಹೊಂದಿದ್ದ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಕಾರಣರಾದರು.ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಅತ್ಯಂತ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿದ್ದ ತಾಲೂಕು ಪುತ್ತೂರಾಗಿತ್ತು. 1916 ರಲ್ಲಿ ಸತ್ತೂರಿನಲ್ಲಿ ವಿದ್ಯಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಪ್ರೌಢಶಾಲೆಯನ್ನು ಆರಂಭಿಸಿದರು. ಮುಂದೆ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಪುತ್ತೂರು ತಾಲೂಕಿನಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸ್ಥಾಪನೆಗೆ ಕಾರಣರಾದರು. ಶಿಕ್ಷಣದ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದ ಶಿವರಾಯರು ಡಾಕ್ಟರ್ ಶಿವರಾಮ ಕಾರಂತರ ‘ನದಿಗೆ ಸಿರಿ’ ಅಂತಹ ಹಲವು ಪ್ರಯೋಗಗಳನ್ನು ಶೈಕ್ಷಣಿಕ ಬೆಳವಣಿಗೆಗಾಗಿ ಕೈಗೊಂಡರು.

ಪುತ್ತೂರು, ಬಂಟ್ವಾಳ, ಕಾಸರಗೋಡುಗಳಲ್ಲಿ ಶಕ್ಷಣಿಕ ಪ್ರಗತಿಗೆ ಅವರು ನೀಡಿದ ಕೊಡುಗೆ ಅಪೂರ್ವವಾಗಿದೆ. ಶಿಕ್ಷಣವೂ ಕೇವಲ ಪುಸ್ತಕದ ಮಾಹಿತಿಯನ್ನು ವರ್ಗಾಯಿಸುವ ಮಾಧ್ಯಮ ಮಾತ್ರವಾಗದೇ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಮೂಡಿಸುವ ಕೇಂದ್ರವಾಗಬೇಕು. ಎಂದು ಇವರಂತೆಯೇ ನಂಬಿದ್ದಂತಹ ಡಾ.ಶಿವರಾಂ ಕಾರಂತರೊಂದಿಗೆ ಸೇರಿ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿಸುವ ಹಲವಾರು ಶೈಕ್ಷಣಿಕ ಚಟುವಟಿಕೆಳನ್ನು ಕೈಗೊಂಡರು. ಅಸ್ಪೃಶ್ಯತೆಯ ನಿವಾರಣೆ, ಮಧ್ಯಪಾನದ ವಿರುದ್ಧ ಜಾಗೃತಿ ಇತ್ಯಾದಿ ಸಾಮಾಜಿಕ ಸುಧಾರಣೆಗಳನ್ನು ಶಾಲೆಗಳ ಮೂಲಕ ತರಬೇಕೆಂದು ಅವರು ಶಿವರಾಮ ಕಾರಂತರಿಗೆ ನಾಟಕವನ್ನು ಬರೆಯಲು ಪ್ರೋತ್ಸಾಹಿಸಿದ ಮೇರೆಗೆ ಮೂಡಿಬಂದ ನಾಟಕವೇ ಶಿವರಾಮ ಕಾರಂತರು ಬರೆದ ‘ಡೊಮಿಂಗೋ’ ಹಾಗೂ ‘ಸಾವಿರ ಮಿಲಿಯ’. ಇದರ ಜೊತೆಗೆ ಶಿವರಾಮಕಾರಂತರ ಆಶಯದಂತೆ ‘ಆಶ್ರಮ ವಿದ್ಯೆ’ ಆಟದ ಮೂಲಕ ಮಕ್ಕಳ ಕೂಟವನ್ನು ಆಯೋಜಿಸಿ ಶಕ್ಷಣಿಕ ಅಭಿವೃದ್ಧಿಯತ್ತ ಪ್ರಯತ್ನಿಸಿದರು.1916 ರಲ್ಲಿ ಪುತ್ತೂರು ಎಜುಕೇಶನ್ ಸೊಸೈಟಿಯನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಹೈಸ್ಕೂಲ್ ಸ್ಥಾಪನೆಗೆ ಕಾರಣವಾದರು. ಇದೇ ಸಂಸ್ಥೆಯ ಮೂಲಕ 1965 ರಲ್ಲಿ ಪ್ರಸಿದ್ಧ ವಿವೇಕಾನಂದ ಕಾಲೇಜನ್ನು ಪುತ್ತೂರಿನಲ್ಲಿ ಸ್ಥಾಪಿಸಲಾಯಿತು. ಗೌಡ ಸಮಾಜದ ಅಭಿವೃದ್ಧಿಗೆ ದಕ್ಷಿಣಕನ್ನಡ ಗೌಡ ಶಿಕ್ಷಣ ಸಂಘವನ್ನು ಆರಂಭಿಸಿದರು. ಸಹಕಾರಿ ತತ್ವವನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಹಿರಿಯ ಪ್ರಾರ್ಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ ವಸ್ತು ಖರೀದಿ ಸಂಘಗಳನ್ನು ಅನೌಪಚಾರಿಕವಾಗಿ ಸ್ಥಾಪಿಸಿದರು.

ಶಿಕ್ಷಕರು ತಮ್ಮ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟನೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿ ಅವರ ನೇತೃತ್ವದಲ್ಲಿ ಶಿಕ್ಷಕ ಸಂಘಗಳು ಆರಂಭಗೊಂಡಿತು. ಅಧ್ಯಾಪಕರು ಸಹಕಾರಿ ಸಂಘಗಳ ಕಾರ್ಯದರ್ಶಿಗಳಾಗಿ ಕೆಲಸ ಮಾಡುವ ಅವಕಾಶಗಳನ್ನು ಒದಗಿಸಿದರು. ಪ್ರತಿಯೊಂದು ಗ್ರಾಮವು ಸ್ವಾವಲಂಬಿಯಾಗಲು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು. ಹಾಗಾಗಿ ಪ್ರತಿ ಗ್ರಾಮವು ಪಂಚಾಯಿತಿ, ಶಾಲೆ, ಸಹಕಾರಿ ಸಂಘ ಇತ್ಯಾದಿಗಳನ್ನು ಹೊಂದಬೇಕು. ಅಂತ ಗ್ರಾಮದಿಂದ ಮಾತ್ರ ಸ್ವಾವಲಂಬಿ ಅಭಿಮಾನವುಳ್ಳ ನಾಗರಿಕರು ನಿರ್ಮಾಣವಾಲು ಸಾಧ್ಯ ಎಂಬ ನಂಬಿಕೆ ಶಿವರಾಯರದ್ದು.

ಸಾಹಕಾರ ಕ್ಷೇತ್ರದಂತೆ ಶಿವರಾಯರು ಶಿಕ್ಷಣ ಕ್ಷೇತ್ರಕ್ಕೆ ಅತಿಹೆಚ್ಚು ಸೇವೆಯನ್ನು ಸಲ್ಲಿಸಿದ್ದಾರೆ.ಸರ್ವವನ್ನೂ ಸಮಾಜಕ್ಕೆ ನೀಡಿದ ಮೊಳಹಳ್ಳಿ ಶಿವರಾಯರಂತಹ ಮಹಾನ್ ರಾಷ್ಟ್ರ ಸಂತರನ್ನು ಸ್ಮರಿಸುವುದು, ಜಗತ್ತನ್ನೆ ಬೆಳಗುವಂತಹ ಸೂರ್ಯನಿಗೆ ದೀಪದಿಂದ ಅರತಿ ಎತ್ತಿದ ಹಾಗೆ.ಮನುಷ್ಯನ ಸಂಕೀರ್ಣ ಬದುಕಿನಲ್ಲಿ ಶಿವರಾಯರ ಕೊಡುಗೆಗಳು ಅತ್ಯುತ್ತಮ. ಇವರ ಛಲ,ಜೀವನ ಶಕ್ತಿ, ಬದುಕಿನ ಕುರಿತಾದ ಒಳನೋಟ, ಎಲ್ಲವೂ ಇಂದು ದಂತಕತೆಯಾಗಿ ಮೂಡಿಬಂದಿದೆ.ಇವರ ಅದರ್ಶ ಬದುಕು ಮುಂದಿನ ಉತ್ತಮ ನಾಗರಿಕ ಸಮಾಜದ ನಿರ್ಮಾಣಕ್ಕೆ ಮಾದರಿಯಾಗಬೇಕು.

– ಕು.ಪೆನಜಾ
ಸಹಕಾರ ಸ್ಪಂದನ,
ಸಹಕಾರ ಅಧ್ಯಯನ ಮತ್ತು ಅಭಿವೃದ್ದಿ ಸಂಸ್ಥೆ, ಮಂಗಳೂರು

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More