ಸ್ವಂತವಾಗಿ ಸಾಧಿಸಲು ಸಾಧ್ಯವಾಗದ ಗುರಿಗಳನ್ನು ಒಟ್ಟಾಗಿ ಕಾರ್ಯಗೈಯುವುದೇ ಸಹಕಾರ ಸಂಘದ ಕಾರ್ಯ ವೈಖರಿ. ಸಾಮಾನ್ಯವಾಗಿ ಶೋಷಿತರ ,ದುರ್ಬಲರ ಮತ್ತು ಸಾಮಾಜಿಕವಾಗಿ ಹಿಂದುಯಳಲ್ಪಟ್ಟವರ ಮಧ್ಯೆ ಸಹಕಾರ ಸಂಘದ ಪ್ರವೇಶವು ಅವರನ್ನು ಒಗ್ಗೂಡಿಸಿ ಸಬಲೀಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ, ಮಹಿಳಾ ಸಬಲೀಕರಣದಲ್ಲಿ ಸಹಕಾರದ ಪಾತ್ರ ಮಹತ್ತರವಾದದ್ದು ಎಂದು ನಿಸ್ಸಂಶವಾಗಿ ಹೇಳಬಹುದು. ಸಬಲೀಕರಣವು ಹಲವಾರು ಅಂಶಗಳಿಂದ ಕ್ರೋಡೀಕೃತ -ಗೊಂಡಿದೆ, ಅವುಗಳಿಂದ ಸಂಪನ್ಮೂಲಗಳ ಮೇಲಿನ ನಿಯಂತ್ರಣ, ಆತ್ಮವಿಶ್ವಾಸ, ಆತ್ಮಗೌರವ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರದ ಚಲಾವಣೆ – ಮಹಿಳಾ ಸಬಲೀಕರಣ ಎಂಬುದು 1970ರ ದಶಕದಲ್ಲಿ ಅಮೇರಿಕಾದಲ್ಲಿ ಮೊದಲಿಗೆ ಬೆಳಕಿಗೆ ಬಂದಿದ್ದು.
ಮಹಿಳೆಯರ ವಿರುದ್ಧ ನಡೆಯಬಹುದಾದ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟುವುದು ಅದಲ್ಲದೆ, ಪುರುಷರ ಪರ ಮತ್ತು ಮಹಿಳೆಯರ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ರೀತಿಯ ತಾರತಮ್ಯಗಳನ್ನು ನಿಲ್ಲಿಸುವುದರ ಜೊತಗೆ ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಸಕಾರಾತ್ಮಕ ಧೋರಣೆಯತ್ತ ಸಾಗುವಂತೆ ಸುಧಾರಣೆ ಕೈಗೊಳ್ಳುವುದು ಮತ್ತು ಮಹಿಳೆಯರಿಗೆ ಸರ್ವ ರಂಗಗಳಲ್ಲಿ ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಸಹಭಾಗಿಯಾಗಲು ಹಾಗೂ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
ಮಹಿಳಾ ಸಬಲೀಕರಣದಲ್ಲಿ ಸಹಕಾರ ತತ್ವದಲ್ಲಿ ಹುಟ್ಟಿಕೊಂಡಿರುವ ಸಹಕಾರ ಸಂಘಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯನ್ನಾಗುವಲ್ಲಿ ಅವರಲ್ಲಿ ಆತ್ಮಶಕ್ತಿಯನ್ನು ಉದ್ದೀಪನಗೊಳಿಸಿ ಕರಗತಗೋಳಿಸಿರುವುದನ್ನು ಕಾಣಬಹುದು. ಮಹಿಳೆಯರಲ್ಲಿ ಸ್ವಸಾಮರ್ಥ್ಯ ತುಂಬಲು, ಈ ನಿಟ್ಟಿನಲ್ಲಿ ಅವರನ್ನು ಸಹಕಾರ ವ್ಯವಸ್ಥೆಗೆ ಬರಮಾಡಿಕೊಳ್ಳುವ ಆಶಯದೊಂದಿಗೆ1975 ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದಾಗ, ಅದರ ಮುಂದಾಳತ್ವವನ್ನು ಕರ್ನಾಟಕದ ರಾಜ್ಯ ಸಹಕಾರ ಯೂನಿಯನ್ ವಹಿಸಿತ್ತಲ್ಲದೆ ಸಹಕಾರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರು ಸಕ್ರಿಯ ಪಾತ್ರ ವಹಿಸಲು ಕರೆ ಕೊಡುವುದರ ಜೊತೆಗೆ ಅದಕ್ಕೆ ಬೇಕಾದ ಅಗತ್ಯ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅಧ್ಯಯನ ಕೇಂದ್ರಗಳು, ಮಹಿಳಾ ಸಂಶೋಧನಾ ಕೇಂದ್ರಗಳು, ಮಹಿಳೆಯರಿಗೆ ಸಹಾಯ ಕೇಂದ್ರ, ವಸತಿಹೀನರಿಗೆ ವಸತಿ, ಸಾಂತ್ವನ ಯೋಜನೆ, ಉದ್ಯೋಗಿನಿ ಮಹಿಳಾ ತರಬೇತಿ ಯೋಜನೆ, ತಾಯಿ ಭಾಗ್ಯ ಯೋಜನೆ, ಮಹಿಳಾ ಪ್ರಸೂತಿ ಆರೈಕೆ ಕೇಂದ್ರ, ಜನನಿ ಸುರಕ್ಷಾ ಯೋಜನೆ, ಭಾಗ್ಯಲಕ್ಷಿ ಯೋಜನೆ, ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ, ಮಹಿಳಾ ಸಶಕ್ತೀಕರಣ ಯೋಜನೆ, ನಯೀರೂಪಿ ಸಾಕ್ಷರ ಭಾರತ ಯೋಜನೆ, ಸ್ತ್ರೀ-ಶಕ್ತಿ ಸ್ವ-ಸಹಾಯ ಗುಂಪು ಯೋಜನೆಗಳು – ಹೀಗೆ ಕೇಂದ್ರ ಸರ್ಕಾರ ಆಯೋಜಿಸಿದ ಯೋಜನೆಗಳನ್ನು ನಾವು ಸಹಕಾರ ಸಂಸ್ಥೆಗಳ ಮೂಲಕ ಸಾಕಾರಗೊಳಿಸುವ ಮೂಲಕ ಮಹಿಳಾ ಸಬಲೀಕರಣದ ಕಾರ್ಯಗಳಿಗೆ ಒತ್ತು ನೀಡಲು ಚಿಂತಿಸಿ ಯೋಜಿಸಬೇಕಾಗಿದೆ.
21ನೇ ಶತಮಾನದಲ್ಲಿ ಮಹಿಳೆಯರು ಪುರುಷಗಿಂತ ಯಾವುದರಲ್ಲಿ ಕಡಿಮೆಯಿಲ್ಲ ಎಂದು ಅನೇಕ ಕ್ಷೇತ್ರದಲ್ಲಿ ಸಾದಿಸುವುದರ ಮೂಲಕ ನಿರೂಪಿಸಿದ್ದಾರೆ. ಹೆಣ್ಣನ್ನುತಾಯಿಯಂತೆ ಪೂಜಿಸಲು ಹೇಳಿಕೊಟ್ಟ ಸಂಸ್ಕೃತಿ ಅದೇ ಹೆಣ್ಣಿಗೆ ದೇಶದ ಅಡಳಿತದ ಚುಕ್ಕಾಣಿಯನ್ನು ಕೊಟ್ಟು ರಾಷ್ಟ್ರವನ್ನು ಮುನ್ನೆಡೆಸುವ ಜಬಾಬ್ದಾರಿ ಕೊಟ್ಟಂತ ಉದಾಹರಣೆಯು ಪ್ರಸ್ತುತ ದಿನಗಲ್ಲಿ ಕಾಣಸಿಗುತ್ತಿರುವುದು ನಾವೆಲ್ಲಾ ಅಭಿಮಾನ ಪಡಬೇಕಾದ ಸಂಗತಿ. ಮಹಿಳೆಯರನ್ನ ಶಕ್ತಗೊಳಿಸುವುದರ ಬದಲು ಮಹಿಳಿಯೇ ಶಕ್ತಿಯೆಂದು ಅರ್ಥ ಮಾಡಿಸಿಕೊಳ್ಳುವ ತನಕ ಸಂಪೂರ್ಣ ಮಹಿಳಾ ಸಬಲೀಕರಣವು ಸವಾಲಾಗಿಯೇ ಉಳಿಯಬಹುದು!
– ಕು.ಪೆನಜಾ
ಸಹಕಾರ ಸ್ಪಂದನ,
ಸಹಕಾರ ಅಧ್ಯಯನ ಮತ್ತು ಅಭಿವೃದ್ದಿ ಸಂಸ್ಥೆ, ಮಂಗಳೂರು