ಇಂದು, ಜನವರಿ 14, ಮಕರ ಸಂಕ್ರಮಣ (ಕರಾವಳಿ ಪ್ರದೇಶದಲ್ಲಿ) , ಸುಮಾರು 2 ವರ್ಷದ ಹಿಂದೆ ಸ್ಪಂದನ ಸಂಸ್ಥೆಗೆ ಇದೊಂದು ಮಹತ್ವದ ದಿನವಾಗಿತ್ತು. ಹೌದು, 2021 ಜನವರಿ 14 ಸ್ಪಂದನ ತನ್ನ ಮೊದಲ ಹೆಜ್ಜೆಯನ್ನು ಇಟ್ಟ ದಿನ. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ʻಸ್ಪಂದನʼ ಎಂಬ ಹೊಸ ಯೋಚನೆ ಜನ್ಮ ತಾಳಿದ ದಿನ.
ಸಹಕಾರ ಕ್ಷೇತ್ರದಲ್ಲಿ ಒಂದು ವ್ಯವಸ್ಥಿತ ಅಧ್ಯಯನವನ್ನು ಮಾಡಬೇಕು ಮತ್ತು ಆ ಅಧ್ಯಯನದ ಆಧಾರದ ಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಯತ್ತ ಪ್ರಯತ್ನಿಸುವುದು ʻಸ್ಪಂದನʼ ಸಂಸ್ಥೆಯ ಗುರಿ ಎಂಬುವುದು ʻಸಹಕಾರ ಸ್ಪಂದನದʼ ಓದುಗರಿಗೆ ಈಗಾಗಲೇ ಮನವರಿಕೆಯಾಗಿರಬಹುದು. ಈ ಉದ್ದೇಶವನ್ನು ಇಟ್ಟುಕೊಂಡೇ ʻಸ್ಪಂದನʼ ಈ ಕಳೆದ ವರ್ಷಗಳಲ್ಲಿ ಕಾರ್ಯ ನಿರ್ವಹಿಸಿದ್ದು ಮತ್ತು ಮುಂದೆ ಕಾರ್ಯನಿರ್ವಹಿಸಲಿರುವುದು.
ಸತ್ಯ ಹೇಳೋದಾದ್ರೇ, ಜನವರಿ 14 ಕ್ಕೆ 3ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ ಎಂಬುವುದು ನಮಗೆ ಮರೆತೇ ಹೋಗಿತ್ತು. ಆದರೆ ಆ ದಿನವನ್ನು ನಮಗೆ ನೆನಪಿಸಿ ಕೊಟ್ಟಿದ್ದು ʻಸ್ಪಂದನʼ ಸಂಸ್ಥೆಯಿಂದಲೇ ಅಧ್ಯಯನದ ದೃಷ್ಟಿಯಿಂದ ಪ್ರವರ್ತಿತವಾದ ಒಂದು ಸ್ವಸಹಾಯ ಗುಂಪಿನಿಂದ. ಯಾಕೆ? ಏನು ವಿಷಯ ಎಂಬುವುದನ್ನು ಮುಂದೆ ಹೇಳುತ್ತೇನೆ ಕೇಳಿ.
ʻಸ್ಪಂದನʼ ಸಂಸ್ಥೆ ಮುಖ್ಯವಾಗಿ 5 ಚಟುವಟಿಕೆಗಳ ಕೆಳಗೆ ಕಾರ್ಯನಿರ್ವಹಿಸುತ್ತದೆ.
- ಸಹಕಾರ ಸ್ಪಂದನ
- ವಿದ್ಯಾ ಸ್ಪಂದನ
- ಮಹಿಳಾ ಸ್ಪಂದನ
- ಆಪ್ತ ಸ್ಪಂದನ
- ಗ್ರಾಮ ಸ್ಪಂದನ
ಈ ಪೈಕಿ ಮಹಿಳಾ ಸ್ಪಂದನ ಮತ್ತು ಗ್ರಾಮ ಸ್ಪಂದನದ ಅಡಿಯಲ್ಲಿ, ʻಸ್ವಸಹಾಯ ಗುಂಪುಗಳಲ್ಲಿ ಸಹಕಾರದ ಪಾತ್ರʼದ ಕುರಿತು ಸರಿಯಾದ ಮತ್ತು ವ್ಯವಸ್ಥಿತವಾದ ಅಧ್ಯಯನದ ದೃಷ್ಟಿಯಿಂದ ಒಂದಷ್ಟು ಸ್ವಸಹಾಯ ಗುಂಪುಗಳನ್ನು ಪ್ರವರ್ತಿತಗೊಳಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಮತ್ತು ಅಗತ್ಯತೆಗಳನ್ನು ಪೂರೈಸುತ್ತಿದ್ದೆವು.
ಆ ಮೂಲಕ ಸ್ವಸಹಾಯ ಗುಂಪುಗಳಲ್ಲಿರುವ ಸದಸ್ಯರ
- ಅಗತ್ಯತೆ,
- ಆರ್ಥಿಕ ಸ್ಥಿತಿ,
- ಪರಸ್ಪರ ಸಹಕಾರದ ಮನೋಭಾವ,
- ನಿಯತ್ತು – ನಿಷ್ಠ,
- ಆಸಕ್ತಿ ಮತ್ತು ಮನೋಸ್ಥಿತಿ
- ಹೇಗೆ ಗುಂಪಿನ ಸದಸ್ಯರ ಜೀವನ ಶೈಲಿಯನ್ನು ಮೇಲೆತ್ತಬಹುದು?
- ಯಾವ ಸವಲತ್ತುಗಳನ್ನು ಯಾವ ಸಂದರ್ಭದಲ್ಲಿ ಒದಗಿಸಬೇಕು?
- ಯಾವ ಉದ್ದೇಶದಿಂದ ಸಾಲದ ವ್ಯವಸ್ಥೆಯನ್ನು ಒದಗಿಸಬಹುದು?
- ಯಾವ ಪ್ರಮಾಣದಲ್ಲಿ ಸಾಲಗಳನ್ನು ನೀಡಬಹುದು?
- ಸರ್ಕಾರದಿಂದ ಸ್ವಸಹಾಯ ಗುಂಪುಗಳಿಗೆ ಒರುವ ಸೌಲಭ್ಯಗಳು ಯಾವುವು?
- ಗುಂಪಿನ ಸದಸ್ಯರಿಗೆ ಯಾವ ರೀತಿಯ ವಿಮೆಗಳನ್ನು ನೀಡಬಹುದು?
ಹೀಗೆ ಹಲವು ರೀತಿಯ ಅಧ್ಯಯನಗಳನ್ನು ಪ್ರಾಯೋಗಿಕವಾಗಿ ನಡೆಸಿ ಅದರ ಅನುಭವವನ್ನು ಪಡೆದುಕೊಳ್ಳುತ್ತಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನಗಳು ನಡೆಯುತ್ತಲೇ ಇದೆ.
ಹೀಗಿರುವಾಗ, ಕಳೆದ ಒಂದೆರಡು ದಿನಗಳ ಹಿಂದೆ ʻಸ್ಪಂದನʼದಿಂದಲೇ ಪ್ರವರ್ತಿತವಾದ ಒಂದು ಸ್ವಸಹಾಯ ಗುಂಪಿನ ಸದಸ್ಯರು ಒಂದುಗೂಡಿ ಸಮುದ್ರ ತೀರದಲ್ಲಿ ನಿಂತು ತೆಗೆದ ಒಂದು Group photo ವನ್ನು Whatsapp ನಲ್ಲಿ ಕಳುಹಿಸಿಕೊಟ್ಟರು. ಮೊದಲಿಗೆ ವಿಷಯ ಗೊತ್ತಾಗಲಿಲ್ಲಾ. ಮುಂದೆ ವಿಚಾರಿಸಿದಾಗ ತಿಳಿಯಿತು ಆ ಗುಂಪು ಆರಂಭಗೊಂಡು 2 ವರ್ಷ ಕಳೆದಿದ್ದರ ಸಂಭ್ರಮಾಚರಣೆಗಾಗಿ ಗುಂಪಿನ ಸದಸ್ಯರು ಅದನ್ನು ಒಂದು ಸಣ್ಣ Picnic ಆಯೋಜಿಸುವ ಮೂಲಕ ಆಚರಿಸಿದ್ದರು ಎಂದು.
ವಿಷಯ ಸಣ್ಣದಿರಬಹುದು ಆದರೆ ಸ್ವಲ್ಪ ಆಳವಾಗಿ ಯೋಚಿಸಿದಾಗ, ಆ ಗುಂಪಿನ ಸದಸ್ಯರ ನಡೆ, ಒಂದು ಸ್ವಸಹಾಯ ಗುಂಪಿನ ಉದ್ದೇಶಕ್ಕೆ ಪೂರಕವಾಗಿಯೇ ಇದೆ ಎಂಬುವುದು ಅರ್ಥವಾಯಿತು.
10-15 ಜನರು ತಮ್ಮ ಅಗತ್ಯತೆಯನ್ನು ತಾವೇ ಈಡೇರಿಸಿಕೊಳ್ಳಲಿಕ್ಕಾಗಿ ಒಂದುಗೂಡುವ ಮೂಲಕ ತಮ್ಮ ಸಂತೋಷವನ್ನು ಹಂಚಿ, ತಮ್ಮ ಕಷ್ಟದಲ್ಲಿ ಪರಸ್ಪರ ನೆರವಾಗಿ ಜೊತೆಗೂಡಿ ಆರ್ಥಿಕ ಅಭಿವೃದ್ಧಿಯತ್ತ ಮುಂದೆ ಸಾಗುವುದಲ್ಲವೇ ನಿಜವಾದ ಸ್ವಸಹಾಯ ಸಂಘದ ಉದ್ದೇಶ ಮತ್ತು ಈ ಉದ್ದೇಶದಿಂದ ಮುಂದುವರೆದ ಒಂದು ಸ್ವಸಹಾಯ ಗುಂಪು ತಮ್ಮ ಗುಂಪು ಆರಂಭಗೊಂಡ ದಿನದ ವರ್ಷಾಚರಣೆಗಾಗಿ ಒಂದೆಡೆ ಸೇರಿಕೊಳ್ಳುವುದು ಅತ್ಯಂತ ಅರ್ಥಪೂರ್ಣ ವಿಚಾರವೆಂದೆನಿಸಿತು.
ಒಂದುಕಡೆಯಿಂದ ನಮ್ಮೆಲ್ಲರ ಸಂಸ್ಥೆಯಿಂದ ಒಂದು ಆದರ್ಶ ಸ್ವಸಹಾಯ ಗುಂಪನ್ನು ರಚಿಸಲು ಸಾಧ್ಯವಾಯಿತಲ್ಲ ಎಂಬ ಸಂತೃಪ್ತಿ. ಮತ್ತೊಂದೆಡೆ ತನ್ನ ಉದ್ದೇಶಗಳಂತೆ ಸಂಸ್ಥೆ ಸರಿಯಾದ ದಾರಿಯಲ್ಲಿಯೇ ಮುನ್ನಡೆಯುತ್ತಿದೆ ಎಂಬ ಸಮಾಧಾನ. ಇದೆಲ್ಲಾ 3ನೇ ವರ್ಷದ ಬಾಗಿಲಿನಲ್ಲಿ ನಿಂತಿರುವ ನಮ್ಮೆಲ್ಲರ ‘ಸ್ಪಂದನ ‘ ಸಂಸ್ಥೆಗೆ ತನ್ನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಉತ್ಸಾಹದಿಂದ ಮುಂದುವರೆಸಲು ಪ್ರೇರಣೆ ನೀಡಿದಂತಾಯಿತು .
ಇಂದು ʻಸ್ಪಂದನʼ ಸಂಸ್ಥೆ ಸಹಕಾರ ಕ್ಷೇತ್ರದ reality ಅನ್ನು ಅರ್ಥ ಮಾಡಿಕೊಂಡು ಆಧುನಿಕ ವಿಧಾನ ಮತ್ತು ಶೈಲಿಯಲ್ಲಿ ಸಹಕಾರ ಕ್ಷೇತ್ರದ ಅಧ್ಯಯನದಲ್ಲಿ ತೊಡಗಿಕೊಂಡಿದೆ. ಆರಂಭಿಸುವಾಗ ಹಾಕಿಕೊಂಡ ಮುಂದಿನ 5 ವರ್ಷಗಳಲ್ಲಿ ಕೈಗೆತ್ತಿಕೊಳ್ಳಬೇಕಾದ ಯೋಜನೆಗಳಲ್ಲಿ ಸುಮಾರು 65% ರಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸ್ಪಂದನ ತನ್ನ ಕಾರ್ಯ ಚಟುವಟಿಕೆಗಳಿಂದ ಇಡೀ ದೇಶವನ್ನು ದಕ್ಷಿಣ ಕನ್ನಡ – ಕರಾವಳಿಯತ್ತ ಕಣ್ಣಾಯಿಸುವಂತೆ ಮಾಡುವ ಮೂಲಕ ದಕ್ಷಿಣ ಕನ್ನಡವೇ ʻಸಹಕಾರ ಸಂಸ್ಥೆಗಳ ತೊಟ್ಟಿಲುʼ ಎಂದು ಜಗತ್ತಿಗೆ ಪರಿಚಯಿಸಲು ಕಾರ್ಯತತ್ಪರವಾಗಿದೆ.
ಒಂದು ಸಹಕಾರ ಸಂಸ್ಥೆಯನ್ನು ಆರಂಭಿಸುವಲ್ಲಿಂದ ಹಿಡಿದು ಅದರ ನಿರ್ವಹಣೆಯ ಪ್ರತಿಯೊಂದು ಹಂತದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ಮಾಹಿತಿ, ತಂತ್ರಜ್ಞಾನ, ಕೌಶಲ್ಯ, ಮುಂತಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೇ ನಮ್ಮ ಸಂಸ್ಥೆ ಒದಗಿಸಿಕೊಡುತ್ತಿದೆ. ಅದೆಲ್ಲದಿಕ್ಕಿಂತ ಹೆಚ್ಚಾಗಿ ಒಂದು ಅಕಾಡಮಿಕ್ ಆಂಗಲ್‌ನಿಂದ (Academic Angle) ಸಹಕಾರ ಕ್ಷೇತ್ರದಲ್ಲಿ ಅಧ್ಯಯನವನ್ನು ನಡೆಸುವ ವಿನೂತನವಾದ ಉದ್ದೇಶವನ್ನಿಟ್ಟು ಕಾರ್ಯನಿರ್ವಹಿಸುತ್ತಿದೆ.
ಈ ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆ ಮಾಡಿರುವ ಕೆಲಸಗಳೇನೆಂಬುವುದು ಮೊನ್ನೆ ಪುರುಸೊತ್ತು ಮಾಡಿಕೊಂಡು ತಿಂಗಳ ಮೀಟಿಂಗ್ ಬುಕ್ ಅನ್ನು ಓದಿದಾಗ ಗೋಚರವಾಯಿತು. ಸಹಕಾರ ಕ್ಷೇತ್ರದ ಕೆಲಸವೇ ಹೀಗೆ, ಒಂದು ಕಡೆಯಿಂದ ಕೆಲಸಗಳು ನಡೆಯುತ್ತಿರಬೇಕು ಮತ್ತೊಂದೆಡೆ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಿರಬೇಕು….
ಜಿತಿನ್ ಜಿಜೋ
ಕಾರ್ಯದರ್ಶಿ,
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ಮಂಗಳೂರು.