ಸಹಕಾರಿ ಸಂಘಗಳಿಗೆ ಸಂಪನ್ಮೂಲಗಳು. |ಶಂಕರನಾರಾಯಣ ಖಂಡಿಗೆ

 


ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ‘ಮಾಮೂಲಿ ಕಾರ್ಯ- ಕಲಾಪಗಳು ಮುಗಿದು ಅಧ್ಯಕ್ಷರ ಅನುಮತಿಯ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ ಅಂಶಗಳಲ್ಲಿ ಕಂಡುಬರಲಿಲ್ಲ. ಈ ವಿಷಯವೆತ್ತಿದ ನಿರ್ದೇಶಕರು ‘ಮತ್ತೆ ಯಾಕೆ ನಾವು ಕ್ಯಾಂಪ್ಕೊ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ ವೇತನದ ಖರ್ಚು ಹುಟ್ಟುವುದಿಲ್ಲ ಎಂದಾದರೆ ನಮ್ಮ ಎರಡು ಮೂರು ಕೋಣೆ ಸುಮ್ಮನೆ ವ್ಯರ್ಥ, ಅವರನ್ನು ಹೊರಗೆ ಕಳಿಸುವುದು ಒಳ್ಳೆಯದು’ ಎಂಬ ಅಸಮಾಧಾನ ತೋರಿದರು.

ಅಪಕ್ವ ಅನುಭವ

ಒಂದು ಸಹಕಾರಿ ಸಂಘದ ನಿರ್ದೇಶಕ ಈ ರೀತಿ ಮಾತನಾಡುವುದು ನೋಡಿದರೆ ಅನುಭವದ ಕೊರತೆಯ ಪರಿಣಾಮ. ಸಂಸ್ಥೆಯ ಏಳು ಬೀಳುಗಳಲ್ಲಿ ಆಡಳಿತಮಂಡಳಿಯ ಪ್ರತಿಯೊಬ್ಬ ನಿರ್ದೇಶಕನ ಮಹತ್ವಪೂರ್ಣ ಜವಾಬ್ದಾರಿ ಇದ್ದೇ ಇರುತ್ತದೆ. ಅದು ಒಬ್ಬ ಅಧ್ಯಕ್ಷನದ್ದೊ, ಉಪಾಧ್ಯಕ್ಷನದ್ದೊ ಅಥವ ಕಾರ್ಯದರ್ಶಿಯ ಜವಾಬ್ದಾರಿ ಮಾತ್ರ ಅಲ್ಲ. ಆ ಸಂಘದ ಸಿಬ್ಬಂದಿ ಮತ್ತು ನಿರ್ದೇಶಕ ಮಂಡಳಿ ನಿರಂತರ ಸಾಧನೆಯಲ್ಲಿದ್ದರೆ ಮಾತ್ರವೇ ಸಹಕಾರಿ ಸಂಘವನ್ನು ಲಾಭದತ್ತ ಮತ್ತು ಸದಸ್ಯರಿಗೆ ಅನುಕೂಲಕರವಾಗಿ ಬೆಳೆಸಬಹುದಷ್ಟೆ.
ಖರೀದಿಗೆ ಅಡಿಕೆ ಸಂಘಕ್ಕೆ ಬಂದಾಗ ಪ್ರತಿ ಕಿಲೋ ಖರೀದಿಯ ಮೇಲೆ ಸಂಘಕ್ಕೆ ಕ್ಯಾಂಪ್ಕೊ ಕಮಿಶನ್ ಕೊಡುತ್ತದೆ. ಈ ಕಮಿಶನ್ ಗೋದಾಮಿನ ಬಾಡಿಗೆ, ಖರೀದಿಯ ಸಮಯದಲ್ಲಿ ಸಹಕಾರಿ ಸಂಘ ಒದಗಿಸುವ ಸಿಬ್ಬಂದಿಯ ವೇತನಕ್ಕೆ ಒದಗುತ್ತದೆ. ಖರೀದಿ ಕಡಿಮೆಯಾದರೆ ಸಹಕಾರಿ ಸಂಘಕ್ಕೆ ಕ್ಯಾಂಪ್ಕೊದಿಂದ ಲಭಿಸುವ ಕಮಿಶನ್ ಮೊತ್ತ ಕೂಡ ಕಡಿಮೆಯಾಗಿ ಸಿಬ್ಬಂದಿ ವೇತನವನ್ನು ಸಹಕಾರಿ ಸಂಘವೇ ಕೊಡಬೇಕಾದ ಅನಿವಾರ್ಯತೆ ಬರುತ್ತದೆ. ಮೇಲೆ ಉಲ್ಲೇಖಿಸಿದ ನಿರ್ದೇಶಕರ ಮಾತಿನಲ್ಲಿ ನಾವು ಕಾಣುವುದು ಅಪಕ್ವ ಅನುಭವ ಎಂಬುದು ಇಲ್ಲಿ ಉಲ್ಲೇಖನೀಯ. ಯಾಕೆಂದರೆ ಕ್ಯಾಂಪ್ಕೊಗೆ ಕೃಷಿ ಉತ್ಪನ್ನಗಳು ಖರೀದಿಗೆ ಹೆಚ್ಚು ಪ್ರಮಾಣದಲ್ಲಿ ಬಂದರೆ ಮಾತ್ರ ಸಹಕಾರಿ ಸಂಘಕ್ಕೆ ಲಾಭ.

ಕೆಲವು ಸಹಕಾರಿ ಸಂಘಗಳಲ್ಲಿ ಇಂತಹ ನಿರ್ದೇಶಕರು ಇರುತ್ತಾರೆ. ಅವರಲ್ಲಿ ಹೆಚ್ಚಿನವರಿಗೆ ಮನವರಿಕೆ ಮಾಡಿದರೆ ತಿಳುವಳಿಕೆ ಬೆಳೆಯುತ್ತದೆ. ತಾವು ಆಡಳಿತಮಂಡಳಿಯಲ್ಲಿರುವ ಸಂಘದ ಕಾರ್ಯ ಕ್ಷೇತ್ರ, ವ್ಯವಹಾರಿಕ ಕ್ಷೇತ್ರ, ಸದಸ್ಯರ ಮನೋಭಾವ, ಸಂಘದ ಕಾರ್ಯ ಚಟುವಟಿಕೆಗಳು, ಸಂಘಕ್ಕೆ ಸಂಪನ್ಮೂಲ ಒದಗುವ ದಾರಿಗಳನ್ನು ಒಬ್ಬ ನಿರ್ದೇಶಕ ಅಧ್ಯಯನ ಮಾಡದೆ ಹೋದರೆ ಎಲ್ಲರ ಸಮಯ ಹಾಳುಮಾಡುವ ಅಪಕ್ವ ಮಾತುಗಳು ಹುಟ್ಟಿಕೊಳ್ಳುತ್ತವೆ.
ಮನವರಿಕೆ ಮಾಡುವುದು ಇದಕ್ಕೆ ಇರುವ ಪರಿಹಾರವೆಂದರೆ ಈ ರೀತಿ ಮಾತನಾಡುವ ನಿರ್ದೇಶಕರಿಂದ ಹಿಡಿದು ಇಡೀ ಆಡಳಿತ ಮಂಡಳಿ ಹಾಗು ಸಹಕಾರಿ ಸಂಘದ ಸಿಬ್ಬಂದಿಗಳು ಗ್ರಾಹಕರ ಸಂಪರ್ಕ ಹೆಚ್ಚಿಸಿಕೊಳ್ಳಬೇಕು. ಸಾಮಾನ್ಯವಾಗಿ ಕೃಷಿಕರ ಸೇವಾ ಸಹಕಾರಿ ಸಂಘಗಳು ಕೃಷಿಕರಿಗೆ ಕೃಷಿ ಸಾಲ ಮಂಜೂರುಮಾಡುತ್ತವೆ. ಈ ರೀತಿ ಸಾಲ ಪಡೆದವರು ಕ್ಯಾಂಪ್ಕೊ ಶಾಖೆಗೆ ಅಡಿಕೆ ಹಾಕಬೇಕು ಎಂಬ ಒತ್ತಾಯ ಮಾಡಬಹುದು. ಸದಸ್ಯರ ಮನೆ ಮನೆ ಸಂಪರ್ಕ ಮಾಡಿ ಉತ್ಪಾದನೆಯ ಶೇಕಡಾ ಐವತ್ತನ್ನಾದರೂ ಕ್ಯಾಂಪ್ಕೊಗೆ ಮಾರಾಟಮಾಡಿದರೆ ಸಹಕಾರಿ ಸಂಘಕ್ಕೆ ಲಾಭವಿದೆ ಎಂಬುದನ್ನು ಮನದಟ್ಟು ಮಾಡಬಹುದು. ನಿರಂತರ ಒತ್ತಾಯ ಮಾಡಿದರೆ ಸದಸ್ಯರು ಅಡಿಕೆ ಮಾರಾಟಮಾಡಿಯೇ ಮಾಡುತ್ತಾರೆ. ಕೆಲವು ಸಹಕಾರಿ ಸಂಘಗಳು ಈ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾದ ಉದಾಹರಣೆಗಳು ಇವೆ. ಸಹಕಾರಿ ಸಂಘ ನಮ್ಮದು. ಅದರ ಬೆಳವಣಿಗೆಯಲ್ಲಿ ನಮ್ಮ ಪಾಲು ಅನಿವಾರ್ಯ ಎಂಬ ಭಾವನೆಯನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸದಸ್ಯರಲ್ಲಿ ಬಿತ್ತಿಬಿಟ್ಟರೆ ಎಲ್ಲವೂ ಸರಾಗವಾಗಿ ನಡೆಯುತ್ತವೆ.
ನಮ್ಮ ಅನೇಕ ಸಿಬ್ಬಂದಿಗಳಿಗೆ ಸಂಘದ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಆಸಕ್ತಿ ಕಡಿಮೆ ಎಂದು ದೂರಿದ ಸಹಕಾರಿ ಸಂಘಗಳಿವೆ. ಇದು ಆಗಬಾರದು. ನಮಗೆ ನಮ್ಮ ಕುಟುಂಬಕ್ಕೆ ಅನ್ನ ನೀಡುವ ಸಂಸ್ಥೆ ಎಂಬ ತಿಳುವಳಿಕೆ ಇದ್ದಾಗ ಇಂತಹ ಅಸಹಕಾರ ಸಹಕಾರಿ ಸಂಘಗಳ ಸಿಬ್ಬಂದಿಗಳ ಮನದಲ್ಲಿ ಸುಳಿಯದು.
ಸಾಲು ಸಾಲು ಲಾಭಗಳು ಕ್ಯಾಂಪ್ಕೊ ಒಂದು ಸಹಕಾರಿ ಸಂಘದ ಆಶ್ರಯದಲ್ಲಿ ಕೃಷಿ ಉತ್ಪನ್ನ ಖರೀದಿ ಮಾಡಿದರೆ ಆ ಸಂಘಕ್ಕೆ ಅನೇಕ ಲಾಭಗಳಿವೆ. ಕ್ಯಾಂಪ್ಕೊಕ್ಕೆ ಉತ್ಪನ್ನಗಳನ್ನು ಮಾರಾಟಮಾಡಿದರೆ ಹಣ ಕೊಡುವುದು ಸಹಕಾರಿ ಸಂಘ. ಹೆಚ್ಚಾಗಿ ಸಂಘದ ಸದಸ್ಯರೆ ಕ್ಯಾಂಪ್ಕೊಕ್ಕೆ ಕೂಡ ಬರುತ್ತಾರೆ. ಉತ್ಪನ್ನ ಮಾರಾಟ ಮಾಡಿದವರು ಕೆಲವೊಮ್ಮೆ ಪೂರ್ತಿ ಹಣವನ್ನು ಕೊಂಡುಹೋಗದೆ ಸಂಘದ ತಮ್ಮ ಖಾತೆಯಲ್ಲಿ ಹಾಕಿಡುತ್ತಾರೆ. ಅವಶ್ಯವಿದ್ದಷ್ಟೆ ಬೇಕಾದಾಗ ಕೊಂಡುಹೋಗುತ್ತಾರೆ. ಕೆಲವೊಮ್ಮೆ ಹಣವನ್ನು ನಿರಖು ಠೇವಣಿಯಲ್ಲಿ ಅಲ್ಲಿಯೆ ಇಡುತ್ತಾರೆ. ಕ್ಯಾಂಪ್ಕೊ ಸದಸ್ಯರು ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಜನರಿದ್ದರೆ ಪ್ರತಿಯೊಬ್ಬನ ಹೆಸರಿನಲ್ಲಿಯೂ ಅವರು ಅಡಿಕೆ ಮಾರಾಟಮಾಡಬಹುದು. ಹಾಗೆಯೇ ಅವರೆಲ್ಲ ಸಂಘದಲ್ಲಿ ಸದಸ್ಯರೂ ಆಗಬಹುದು ಜತೆಗೆ ಹೊಸ ಖಾತೆಗಳನ್ನೂ ತೆರೆಯ ಬಹುದು. ಇದೆಲ್ಲ ಕ್ಯಾಂಪ್ಕೊದಿಂದ ಸಹಕಾರಿ ಸಂಘಕ್ಕಾಗುವ ಲಾಭಗಳು. ಅದನ್ನು ಬೆಳೆಸುವ ಮತ್ತು ಉಳಿಸುವ ಜವಾಬ್ದಾರಿ ಆಡಳಿತ ಮಂಡಳಿಗೆ ಬೇಕು. ಕ್ಯಾಂಪ್ಕೊ ಜೊತೆ ವ್ಯವಹಾರ ಮಾಡಿ ನಮ್ಮ ಸಹಕಾರಿ ಸಂಘಕ್ಕೆ ನಷ್ಟ ಎನ್ನುವುದನ್ನು ಬಿಟ್ಟು ಹೆಚ್ಚು ಹೆಚ್ಚು ಖರೀದಿಗೆ ಬೇಕಾದ ಮಾರ್ಗೋಪಾಯಗಳನ್ನು ಜೋಡಿಸಿಕೊಳ್ಳುವುದು ಜಾಣತನ.
ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಕೇರಳ ಮತ್ತು ಕರ್ನಾಟಕದಲ್ಲಿ ಅನೇಕ ಸಹಕಾರಿ ಸಂಘಗಳ ಆಶ್ರಯದಲ್ಲಿ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಖರೀದಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ತೆಂಗಿನಕಾಯಿ ಕೂಡ ಖರೀದಿ ಮಾಡಲಿದೆ. ಹೆಚ್ಚಿನ ಕಡೆಗಳಲ್ಲಿ ವಾರದ ಆರೂ ದಿವಸಗಳಲ್ಲಿ ಅಡಿಕೆ ಖರೀದಿ ಮಾಡಿದರೆ ಉಳಿದೆಡೆ ಅಡಿಕೆಯ ಆವಕವನ್ನು ಪರಿಗಣಿಸಿ ವಾರದಲ್ಲಿ ಒಂದು, ಎರಡು, ಮೂರು, ನಾಲ್ಕು ಹೀಗೆ ಕಡಿಮೆ ದಿವಸಗಳಲ್ಲಿ ಖರೀದಿ ನಡೆಯುತ್ತಿದೆ.

­

ಶಂಕರನಾರಾಯಣ ಖಂಡಿಗೆ
ಲೇಖಕರು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರು,            ಮೊಬೈಲ್: 09946406321
ಶಂ.ನಾ. ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ: ಪೆರ್ಲ –  661552
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More