ಸಹಕಾರಿ ಸಂಘಗಳ ಸದಸ್ಯರಿಗೆ ತಮ್ಮ ಸಹಕಾರಿ ಸಂಘಗಳಲ್ಲಿ ಸ್ಥಿರ ಠೇವಣಿ ( ಫಿಕ್ಸೆಡ್ ಡೆಪಾಸಿಟ್) ಇಡುವ ಒಂದು ಒಳ್ಳೆಯ ಅವಕಾಶ ಇದೆ. ರಾಷ್ಟ್ರೀಕೃತ ಬ್ಯಾಂಕಿಗೆ ಹೋಲಿಸಿದರೆ ಸಹಕಾರಿ ಸಂಘಗಳಲ್ಲಿ ಬಡ್ಡಿ ದರ ಹೆಚ್ಚು. ತಮಗೆ ವಿಶ್ವಾಸವಿರುವ ಆಡಳಿತ ಮಂಡಳಿ ಆಡಳಿತವಿರುವ ಸಹಕಾರಿ ಸಂಘಗಳಲ್ಲಿ ಠೇವಣಿಗಳು ಕೋಟಿ ಕೋಟಿಯ ಲೆಕ್ಕದಲ್ಲಿ ಹರಿದುಬರುತ್ತದೆ. ಡೆಪಾಸಿಟ್ ಇಟ್ಟರೆ ಅದು ಬೆಳೆಯುತ್ತಾ ಹೋಗುತ್ತದೆ. ಒಂದೆಡೆಯಲ್ಲಿ ನೆಮ್ಮದಿ. ಅದರ ಮಗ್ಗುಲಿಗೆ ವಿಶ್ವಾಸ.
ಕೈಯಲ್ಲಿ ಹಣವಿಟ್ಟುಕೊಂಡರೆ ಅದು ವೃಥಾ ಖರ್ಚು ಆಗಿ ಹೋಗಬಹುದು. ಮನೆಯಲ್ಲಿ ಹಣವಿಟ್ಟುಕೊಂಡು ನೆಮ್ಮದಿಯಾಗಿರುವ ಕಾಲವೂ ಇದಲ್ಲ. ಅದಕ್ಕಾಗಿ ಸಂಘದ ಸದಸ್ಯರು ತಮಗೆ ಅನುಕೂಲವಾಗುವ ಕಾಲಮಿತಿಯಲ್ಲಿ ತಮ್ಮ ಆದಾಯ ಮತ್ತು ಖರ್ಚುಗಳನ್ನು ಹೊಂದಿಸಿ ಉಳಿದ ಉಳಿಕೆಯನ್ನು ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಸಹಕಾರಿ ಸಂಘಗಳಲ್ಲಿ ನಿಕ್ಷೇಪಿಸುತ್ತಾರೆ.
ಕೋಟಿ ಕೋಟಿ ಮಿಗತೆ ಹಣ ಕೇವಲ ಡೆಪಾಸಿಟ್ ಹೊಂದಿಸಿಕೊಳ್ಳುವುದು ಹೆಗ್ಗಳಿಕೆಯ ವಿಷಯ ಎಂದು ತಿಳಿದುಕೊಂಡ ಸಂಘಗಳ ಆಡಳಿತ ಮಂಡಳಿಗಳಿವೆ. ಸಾಲ ನೀಡುವುದು ಕೂಡ ಅಷ್ಟೇ ಮುಖ್ಯ ಅಂತ ತಿಳಿದುಕೊಂಡ ಸಹಕಾರಿಗಳು ಕಡಿಮೆ. ಡೆಪಾಸಿಟ್ ಮತ್ತು ಸಾಲ ನೀಡಿಕೆಯ ನಿಷ್ಪತ್ತಿಯನ್ನು ಅರಿತು ಮುನ್ನಡೆಯುವ ಸಂಘಗಳಂತು ಅತ್ಯಪೂರ್ವ. ಸಕಾಲಿಕವಲ್ಲದ ಬಡ್ಡಿ ದರಗಳನ್ನು ಘೋಷಿಸಿಕೊಂಡು ಹಣ ಬಾಚುವ ಮತ್ತು ಅನಂತರದ ದಿನಗಳಲ್ಲಿ ಕುರುಹು ಕೂಡ ತೋರದೆ ಹಣ ದೋಚಿ ಮಾಯವಾಗುವ ಅಭ್ಯಾಸ ಇಟ್ಟುಕೊಂಡ ಸಂಘಗಳಿವೆ. ಸಹಕಾರಿ ಸಂಘ ಸಂಸ್ಥೆಗಳ ಕಪ್ಪು ಹಣವನ್ನು ಹೇಗೆ ಹೇಗೋ ಸಹಕಾರಿ ಸಂಘಗಳಲ್ಲಿ ತುಂಬಿದ, ಕೇರಳದ ಹಲವು ಸಂಘಗಳ ಬಗ್ಗೆ ನಾವು ಮಾಧ್ಯಮದ ಮೂಲಕ ಅರಿತಿದ್ದೇವೆ. ಇಂತಹ ಮನಸ್ಸು ಉಳ್ಳವರು ಸಹಕಾರಿ ವಲಯದೊಳಗೆ ಇರುವುದರಿಂದ ಸಹಕಾರಿ ಕ್ಷೇತ್ರದ ಎಲ್ಲರ ಮೇಲೂ ಸದಸ್ಯರಿಗೆ ಸಂಶಯಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಇದೆಲ್ಲ ಸಹಕಾರಿ ಕ್ಷೇತ್ರವನ್ನು ಮಸುಕಾಗಿಸುವ ಕುತಂತ್ರ ಮತ್ತು ದ್ರೋಹ ಎಂದು ನಾವು ಅವುಗಳನ್ನು ಬದಿಗಿಟ್ಟುಬಿಡುವ.
ಪರಸ್ಪರ ಬಾಂಧವ್ಯದಿಂದ ಅಭಿವೃದ್ಧಿ ಸಹಕಾರಿ ಸಂಘಗಳು ತಮ್ಮೊಳಗೆ ಉತ್ತಮ ಸಂಬಂಧಗಳನ್ನಿಟ್ಟುಕೊಳ್ಳುವುದು ಸಹಕಾರಿ ಕ್ಷೇತ್ರದ ಆರೋಗ್ಯಕ್ಕೂ ಒಳ್ಳೆಯದು. ಒಂದು ಸಂಘ ತನ್ನಷ್ಟಕ್ಕೆ ಬಂಡವಾಳ ಹಾಕಿ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುವ ಬದಲು ಮಿಗತೆ ಹಣ ಇರುವ ನಾಲ್ಕೈದು ಸಂಘಗಳು ಜೊತೆಯಾಗಿ ತಮ್ಮೆಲ್ಲ ಸದಸ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಹೆಚ್ಚು ಹಿತಕಾರಿ.
‘ಉದಾಹರಣೆಗೆ ತೆಂಗಿನ ಕಾಯಿ ಬೆಳೆಯುವ ಕೃಷಿಕರು ತೆಂಗಿನ ಕಾಯಿಗೆ ಸೂಕ್ತ ಧಾರಣೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಅಡಿಕೆ ಬೆಳೆಗಾರರ ಒಂದು ಮುಖ್ಯ ಉಪಬೆಳೆಯಾದ ತೆಂಗಿನ ಕಾಯಿಗೆ ಸಂಬಂಧಿಸಿ ಸಮಾನ ಮನಸ್ಕ ಸಹಕಾರಿಗಳು ಯಾಕೆ ತೆಂಗಿನ ಎಣ್ಣೆ ಉತ್ಪಾದನೆಯತ್ತ ಮುಂದಡಿಯಿಡಬಾರದು? ತಮ್ಮದೆ ಒಂದು ಬ್ರಾಂಡಿನಲ್ಲಿ ತೆಂಗಿನ ಎಣ್ಣೆ ಉತ್ಪಾದಿಸಿ ಮಾರಾಟ ಮಾಡಬಹುದಲ್ಲ. ಹತ್ತು ಜನರಿಗೆ ಕೆಲಸ ಕೊಟ್ಟ ಸಂತೃಪ್ತಿ ಬೇರೆ. ಕೇವಲ ತೆಂಗಿನ ಕಾಯಿ ಅಂತ ಅಲ್ಲ, ಬಾಳೆಕಾಯಿ, ಹಲಸಿನಕಾಯಿಯಂತಹ ತಮ್ಮ ಸದಸ್ಯರು ಬೆಳೆಯುವ ಹತ್ತು ಹಲವು ಬೆಳೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರತರಬಹುದು. ತಾವು ಮಿಗತೆ ಹಣವನ್ನು ಸದ್ಭಳಕೆ ಮಾಡುವುದರ ಜೊತೆ ಜೊತೆಗೆ ಸ್ವಾವಲಂಬನೆಯ ದಿಕ್ಕಿನ ಹಾದಿಯನ್ನು ಮತ್ತಷ್ಟು ಅಗಲಗೊಳಿಸಬಹುದು.ಸಹಕಾರಿ ಸಾರಿಗೆ, ಸಹಕಾರಿ ಆಸ್ಪತ್ರೆಗಳನ್ನು ಕೂಡ ಸಹಕಾರಿ ಸಂಘಗಳು ಜಂಟಿಯಾಗಿ ರೂಪಿಸಿಕೊಂಡು ಒಟ್ಟು ಸಮಾಜಕ್ಕೆ ದೊಡ್ಡ ದೊಡ್ಡ ಕೊಡುಗೆಗಳನ್ನು ನೀಡಬಹುದು.
ಸ್ವಾವಲಂಬನೆಗೂ ದಾರಿ:
ಇತರ ಸಹಕಾರಿ ಸಂಘಗಳ ಜೊತೆಗೂಡಿ ಮೌಲ್ಯವರ್ಧಿತ ಸೇವೆಗಳನ್ನು ಕೊಡುವುದು ಕಷ್ಟ ಅನಿಸಿದರೆ ಸಂಘವೇ ತನ್ನ ಶಕ್ತಿಗನುಸಾರ ತನ್ನ ಸದಸ್ಯರಿಗೆ ಕೊಡಬಹುದು. ಸಂಘದ ಮುಂದೆ ಸಾಕಷ್ಟು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ತನ್ನ ಸದಸ್ಯರು ಬಯಸಿದ ಸೇವೆಗಳನ್ನು ಒದಗಿಸಲು ತನ್ನಲ್ಲಿರುವ ಮಿಗತೆ ಠೇವಣಿಗಳಲ್ಲಿ ಅವಕಾಶಗಳನ್ನು ತೆರೆದುಕೊಂಡರೆ ಮುಗಿಯಿತು. ಸದಸ್ಯರು ಅಪೇಕ್ಷೆ ಪಡುವ ಸೇವೆಗಳ ಬಗ್ಗೆ ತಿಳಿದುಕೊಂಡು ಅವರು ಬಯಸಿದ ಗೊಬ್ಬರಗಳು, ನರ್ಸರಿ ಗಿಡಗಳು, ಕಾಳುಮೆಣಸು ಮತ್ತು ಗೇರು ಬೀಜದ ಗಿಡಗಳು, ಕಸಿ ಕಟ್ಟಿದ ಮಾವು, ಅಂಗಾಂಶ ಕೃಷಿ ಮೂಲಕ ಉತ್ಪಾದಿಸಿದ ಬಿದಿರಿನ ಗಿಡಗಳು, ಹೈಬ್ರಿಡ್ ಹಲಸಿನ ಗಿಡಗಳನ್ನು ಅತ್ಯಂತ ಯಶಸ್ವಿಯಾಗಿ ಒದಗಿಸಿ ಕೊಟ್ಟ ಕಾಸರಗೋಡು ಜಿಲ್ಲೆಯ ಪೆರ್ಲ ಸಹಕಾರಿ ಸಂಘದ ಸೇವೆಯನ್ನು ಹತ್ತಿರದಿಂದ ಅನುಭವಿಸಿದ ಅನುಭವಗಳು ನನ್ನದು.ಸದಸ್ಯರಲ್ಲಿ ಹಲಸಿನ ಹಪ್ಪಳ ತಯಾರಿಗೆ ಸೂಚಿಸಿ ಅವರು ಮಾಡಿದ ಹಪ್ಪಳ ಖರೀದಿಸಿ ಉತ್ತಮ ಬ್ರಾಂಡೆಡ್ ಪ್ಯಾಕ್ ನಲ್ಲಿ ಸಂಘವೆ ಮಾರಾಟಮಾಡಬಹುದು. ಹಪ್ಪಳದಂತೆಯೆ, ಸಂಡಿಗೆ, ತರತರದ ಉಪ್ಪಿನಕಾಯಿ, ಜೇನು, ಕಾಡುತ್ಪತ್ತಿಗಳನ್ನು ಸದಸ್ಯರ ಸಹಕಾರದಿಂದ ಮೌಲ್ಯವರ್ಧನೆ ಮಾಡಿ ಸಹಕಾರಿ ಸಂಘವೆ ಉದ್ದಿಮೆ ಪರಿಕಲ್ಪನೆಯನ್ನು ಬೆಳೆಸಬಹುದು.
ಯಾವುದಿದ್ದರೂ ಅದು ಸಹಕಾರಿ ಸಂಘದ ಬೆಳವಣಿಗೆಗೆ, ತನ್ನ ಸದಸ್ಯರ ಅಭಿವೃದ್ಧಿಗೆ ಬಳಕೆಯಾಗಬೇಕು. ಮಿಗತೆ ಹಣ ಅಲ್ಲಿ ನಿಂತ ನೀರಾಗಬಾರದು. ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಕುಳಿತು ಯೋಚಿಸಿ ಹೊಸ ಹಜ್ಜೆಗಳನ್ನಿಡಬೇಕು
– ಶಂಕರ ನಾರಾಯಣ ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ ಪೆರ್ಲ – 671552
ಕಾಸರಗೋಡು ಜಿಲ್ಲೆ