ಜೀವಜಗತ್ತಿನ ಪ್ರಮುಖ ಆಹಾರದ ಮೂಲ ಕೃಷಿ.ದೇಶದ 70%ಕ್ಕಿಂತ ಅಧಿಕ ಮಂದಿಯ ಉದ್ಯೋಗ ಕೃಷಿ ಅಥವಾ ಕೃಷಿಮೂಲ. ಏಕವಾರ್ಷಿಕಬೆಳೆ ಬಹುವಾರ್ಷಿಕಬೆಳೆ ˌಯಾವುದೇ ಬೆಳೆಯಾದರೂ ಅದರ ಮೂಲಸೌಕರ್ಯಗಳು ಇಲ್ಲವಾದಲ್ಲಿ ಅದು ಯಶಸ್ವಿಯಾಗಲಾರದು. ಬೀಜಪೂರೈಕೆˌ ಕಾರ್ಮಿಕರ ಲಭ್ಯತೆ ಅಥವಾ ಯಾಂತ್ರೀಕರಣˌ ನೀರಾವರಿ ˌಗೊಬ್ಬರˌ ಸಂಸ್ಕರಣೆ ˌಸಾಗಾಟ ˌಮಾರುಕಟ್ಟೆ -ಕೃಷಿಯ ವಿವಿಧ ಮಜಲುಗಳು .ಎಲ್ಲದಕ್ಕೂ ಅದರದೇ ಆದ ಮೂಲ ವ್ಯವಸ್ಥೆಗಳನ್ನು ರೂಢಿಸಿಕೊಳ್ಳುವುದು ರೈತನ ಪ್ರಾಥಮಿಕ ಅವಶ್ಯಕತೆ. ಯಾವುದೇ ವ್ಯವಸ್ಥೆಗಳು ಸುಲಭಸಾಧ್ಯವಾಗಿ ಲಭ್ಯವಾಗದಿದ್ದಲ್ಲಿ ಆತನ ಕೃಷಿಬದುಕು ಯಶಸ್ಸಿನ ಪಥದತ್ತ ಸಾಗದು.
ಕೃಷಿಯ ಮೂಲಸೌಕರ್ಯಗಳಲ್ಲಿ ಸಹಕಾರದ ಬೆಳಕು ಹಲವಾರು ಶತಮಾನಗಳಿಂದ ಬೀರುತ್ತಿರುವುದು ಇತಿಹಾಸವನ್ನು ಅವಲೋಕಿಸಿದಾಗ ನಾವು ಕಂಡು ಕೊಳ್ಳಬಹುದು.ಸಹಕಾರ ಮಾನವನ ಜೀವನದ ಸಂಗಾತಿ ಆಗಿ ಸಾಗಿ ಬಂದಿದೆ.
ಜಗತ್ತಿನಲ್ಲಿ ನೂರೈವತ್ತು ವರ್ಷಗಳ ಹಿಂದೆ ಸಹಕಾರರಂಗ ನೇಕಾರ ಬಂಧುಗಳ ಉದ್ಯೋಗಕ್ಕೆ ಕಾಯಕಲ್ಪ ನೀಡುವ ನೆಪದಲ್ಲಿ ವ್ಯವಸ್ಥಿತ ಚೌಕಟ್ಟನ್ನು ಕಂಡಿತು. ನಂತರದ ದಿನಗಳಲ್ಲಿ ಚಳುವಳಿಯ ಸ್ವರೂಪದಲ್ಲಿ ಸಹಕಾರ ಕೃಷಿಕ್ಷೇತ್ರವನ್ನು ವೇಗವಾಗಿ ಪ್ರವೇಶಿಸಿ ಕೃಷಿ ಮತ್ತು ಸಹಕಾರ ಅವಿನಾಭಾವ ಸಂಬಂಧದ ಪ್ರಮುಖ ಅಂಗಗಳೆಂದು ಶ್ರುತಪಡಿಸಿದ್ದು ಮಾತ್ರವಲ್ಲದೇ ಇಂದು ಜಗತ್ತಿನಲ್ಲಿ ಇದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ನಮ್ಮ ದೇಶದಲ್ಲಿ ಸಹಕಾರ ಸಂಘ ಪ್ರಾರಂಭವಾದ ಗದಗ ಜಿಲ್ಲೆಯ ಕಣಗಿನಹಾಳ ತೀರಾ ಗ್ರಾಮೀಣ ಪ್ರದೇಶವಾಗಿದ್ದು ರೈತಬಂಧುಗಳು ಆ ಸಂಘದ ಅಡಿಯಾಳುಗಳು. ದೇಶದಲ್ಲಿ ಸಹಕಾರದ ಬಾಹುಗಳು ಕೃಷಿ ಪತ್ತಿನ ವ್ಯವಸ್ಥೆಯ ಮೂಲಕ ಪ್ರಬಲವಾಗಿ ವಿಸ್ತಾರಗೊಂಡಿತು.ರೈತನ ಅವಶ್ಯಕತೆಯನ್ನು ಪರಿಗಣಿಸಿ ಕೃಷಿಪತ್ತು ವಿವಿಧ ಸ್ವರೂಪವನ್ನು ಹೊಂದಿವೆ. ಅಲ್ಪಾವಧಿ ˌ ಮಧ್ಯಮಾವಧಿˌ ಧೀರ್ಘಾವಧಿ ಮೂರು ಪ್ರಮುಖವಾದ ಕೃಷಿ ಸಾಲಗಳ ಸ್ವರೂಪ .ಏಕ ವಾರ್ಷಿಕ ಮರುಪಾವತಿಯ ಸಾಲವನ್ನು ಅಲ್ಪಾವಧಿ ಸಾಲ ಎನ್ನಲಾಗುತ್ತಿದೆ. ಇದರ ಉದ್ದೇಶ ಕೃಷಿಕನ ವಾರ್ಷಿಕ ಕೃಷಿ ನಿರ್ವಹಣೆ. ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲವು ಹೊಸ ಕೃಷಿಗೆ ಬಂಡವಾಳ ತೊಡಗಿಸುವ ಉದ್ದೇಶವನ್ನು ಹೊಂದಿರುತ್ತದೆ ಈ ಸಾಲಗಳು ಐದರಿಂದ ಹದಿನೈದು ವರ್ಷಗಳ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ. ಅದೇ ರೀತಿ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತನ ಮನೆ ನಿರ್ಮಾಣ ˌಹಟ್ಟಿ ಕೊಟ್ಟಿಗೆ ಗೋದಾಮು ನಿರ್ಮಾಣ ಭೂಖರೀದಿ ವಾಹನ ಖರೀದಿ ಮುಂತಾದ ಕೃಷಿಯೇತರ ಉದ್ದೇಶಕ್ಕೂ ಸುಲಭ ದರದ ಬಡ್ಡಿಯಲ್ಲಿ ಸಾಲವನ್ನು ನೀಡುತ್ತವೆ.. ಆರಂಭದಲ್ಲಿ ಸಾಲದ ಉದ್ದೇಶವನ್ನು ಹೊಂದಿದ್ದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ನಂತರದ ದಿನಗಳಲ್ಲಿ ಮಾರುಕಟ್ಟೆˌˌಜೀವನಾಶ್ಯಕವಾದ ದಿನಸಿ ˌ ದೈನಂದಿನ ಅವಶ್ಯಕ ವಸ್ತುಗಳ ಪೂರೈಕೆ ˌರಸಗೊಬ್ಬರˌ ಕ್ರಿಮಿನಾಶಕ ಮುಂತಾದ ರೈತೋಪಯೋಗಿ ವಸ್ತುಗಳ ಮಳಿಗೆಗಳನ್ನು ತೆರೆದು ಆತನ ವ್ಯವಹಾರ ಕೇಂದ್ರಗಳಾಗಿ ಬೆಳೆದುದನ್ನು ನಾವು ಕಾಣುತ್ತಿದ್ದೇವೆ. ತೊಟ್ಟಿಲಿನಿಂದ ಚಟ್ಟದ ತನಕದ ಸರ್ವಸವಲತ್ತುಗಳನ್ನು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೂಢಿಸಲು ಸಾಧ್ಯ. ಇಂತಹ ಸಕಲ ವ್ಯವಸ್ಥೆಗಳನ್ನು ಹೊಂದಿಸಲು ಸದಸ್ಯರು ಜಾಗ್ರತರಾಗಿರಬೇಕು. ಆಡಳಿತಮಂಡಳಿ ಬದ್ದತೆ ಪ್ರಾಮಾಣಿಕತೆಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಅದೇ ರೀತಿ ನೌಕರರು ಶಿಸ್ತಿನ ಸಿಪಾಯಿಗಳಾಗಿರಬೇಕು. ಸಂಬಂಧಿಸಿದ ಎಲ್ಲರೂ ಅವರವರ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಿದಾಗ ಯಶಸ್ವಿ ಸಹಕಾರಿ ಸಂಘ ಮುನ್ನಡೆಯಲು ಸಾಧ್ಯ.
ಕೃಷಿಕರ ಉಪಕಸಬು ಹೈನುಗಾರಿಕೆ . 1950 -60ರ ದಶಕದಲ್ಲಿ ಹಸಿರು ಕ್ರಾಂತಿಯ ಜತೆಯಲ್ಲಿ ಬಿಳಿ ಕ್ರಾಂತಿಯು ಶೋಭಾಯಮಾನವಾಯಿತು. ಗೌರವಾನ್ವಿತ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿಯವರು ಹಾರಿಸಿದ ಹಸಿರು ನಿಶಾನೆಯ ಮೂಲಕ ಡಾ ವರ್ಗೀಸ್ ಕುರಿಯನ್ ನೇತೃತ್ವ ದಲ್ಲಿ ಆನಂದ್ ಮಿಲ್ಕ್ ಯೂನಿಯನ್ ಲಿ( AMUL)ಹೆಸರಿನ ಸಹಕಾರಿಸಂಸ್ಥೆ ಹೈನಕ್ರಾಂತಿ ಯ ಹರಿಕಾರನಾಗಿ ಸಹಕಾರದ ಮಹತ್ವವನ್ನು ಬೆಳಕಿಗೆ ತಂದಿತಲ್ಲದೇ ˌಪ್ರತಿ ಗ್ರಾಮದಲ್ಲೂ ಅಸ್ತಿತ್ವ ಹೊಂದಿರುವ ರೈತ ಮೂಲದ ಹಾಲು ಉತ್ಪಾದಕ ಸಹಕಾರ ಸಂಘಗಳು ದೇಶಾದ್ಯಂತ ಬಾಹುಗಳನ್ನು ಚಾಚಿದ್ದು ರೈತರ ಪ್ರಮುಖ ಉಪಕಸಬು ಪ್ರಬಲವಾಗಲು ಕಾರಣವಾಗಿವೆ .ಹಾಲು ಸಹಕಾರ ಒಕ್ಕೂಟಗಳು ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಷಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಹಲವಾರು ಕುಟುಂಬಗಳಿಗೆ ಉದ್ಯೋಗಕ್ಕೆ ದಾರಿ ಕಾಣಿಸಿವೆ.
ಇಂದು ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರಿರಂಗವನ್ನು ಗಮನಿಸಿದಾಗ ವಾರಣಾಶಿ ಸುಬ್ರಾಯ ಭಟ್ಟರವರ ಮುತ್ಸದ್ದಿತನದಲ್ಲಿ ಕರಾವಳಿ ಕರ್ನಾಟಕದಲ್ಲಿ ಸ್ಥಾಪನೆಯಾದ ಅಡಿಕೆ ಹಾಗೂ ಕೊಕ್ಕೊ ಬೆಳೆಗಾರರ ಅಪದ್ಭಾಂಧವ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ಯಶೋಗಾಥೆ ಸಹಕಾರಕ್ಷೇತ್ರ ಹಾಗೂ ಕೃಷಿಜಗತ್ತಿನ ಅವಿನಾಭಾವ ಸಂಬಂಧವನ್ನು ಸಾರಿಹೇಳುತ್ತಿದೆ. ಅಡಿಕೆ ಮಾರುಕಟ್ಟೆ ಹಿಡಿತ ಹೊಂದಿರುವ ಕ್ಯಾಂಪ್ಕೊ ಕೊಕ್ಕೊ ಬೆಳೆಯ ಮೌಲ್ಯವರ್ಧಿತ ಉತ್ಪನ್ನ ಚಾಕಲೇಟು ಕಾರ್ಖಾನೆಯನ್ನು ಹೊಂದಿ ಆಮೂಲಕ ಕೃಷಿಕರ ಹಿತವನ್ನು ಕಾಪಾಡಿದೆ
ದೇಶದ ಸಹಕಾರಿರಂಗದ ಇನ್ನೊಂದು ಬಹುದೊಡ್ಡ ಸಂಸ್ಥೆ ‘ಇಫ್ಕೊ’ . ರಸಗೊಬ್ಬರ ಉತ್ಪಾದನೆಯಲ್ಲಿ ಬಲಿಷ್ಟ ಸಹಕಾರಿವ್ಯವಸ್ಥೆ. ” ಕ್ರಿಬ್ಕೊ” ದೇಶದ ಮತ್ತೊಂದು ಸಹಕಾರ ದಿಗ್ಗಜ. ಹೀಗೆ ಸಹಕಾರದ ಬಹುಪಾಲು ಬಲಿಷ್ಟ ಸಂಸ್ಥೆಗಳು ಕೃಷಿಕರ ಜೀವನನಾಡಿಯ ಮಧ್ಯೆ ಬೆಳೆದು ನಿಂತಿರುವುದನ್ನು ಗಮನಿಸಿದಾಗ ಸಹಕಾರಿಕ್ಷೇತ್ರಕ್ಕೂ ರೈತರಿಗೂ ಇರುವ ನಿಕಟ ಸಂಬಂಧಕ್ಕೆ ಸಾಕ್ಷಿಯಾಗಿದೆ. ಹತ್ತು ಹಲವುಉದ್ದಿಮೆ ಆಧಾರಿತ ಸಹಕಾರಿಸಂಘಗಳು ಕೃಷಿಕರ ಮಧ್ಯೆ ದೇಶದ ಬೇರೆಬೇರೆ ಭಾಗಗಳಲ್ಲಿ ಬೆಳೆದು ನಿಂತಿದ್ದು ಇವು ಕೂಡಾ ರೈತನ ಉತ್ಪಾದನೆಗಳನ್ನು ಮೌಲ್ಯವರ್ಧನೆಗೊಳಿಸಿ ಸುಲಭ ಮಾರುಕಟ್ಟೆಯನ್ನು ತೋರಿಸುವರೇ ದಾರಿ ಮಾಡಿವೆ.
ದೇಶದ ಅರ್ಥವ್ಯವಸ್ಥೆ ಸುದೃಢವಾಗಲು ಸಹಕಾರೀ ರಂಗದ ಕೊಡುಗೆ ಮಹತ್ತರವಾದುದು. ಸಹಕಾರರಂಗ ಬಲಿಷ್ಟವಾಗಲು ಕೃಷಿ ಕ್ಷೇತ್ರದ ಪಾಲು ಬಹುದೊಡ್ಡದು. ದೇಶ ಸಮಗ್ರ ಬದಲಾವಣೆಯ ಕಾಲಘಟ್ಟದಲ್ಲಿದೆ. ಈ ಸಂದರ್ಭದಲ್ಲಿ ಜನರ ಜೀವನವ್ಯವಸ್ಥೆಯನ್ನು ಎತ್ತಿ ಹಿಡಿಯಬಲ್ಲಂತಹ ಸಹಕಾರರಂಗಕ್ಕೂ ಬದಲಾವಣೆಯ ಕಾಯಕಲ್ಪ ಆಗಬೇಕಾಗಿದೆ. ಸಂಪೂರ್ಣ ಪಾರದರ್ಶಕ ಅರ್ಥಚಟುವಟಿಕೆಹೊಂದಿರುವ ಸಹಕಾರಿರಂಗಕ್ಕೆ ದೇಶದ ತೆರಿಗೆಯಲ್ಲೂ ರಿಯಾಯಾತಿಗಳು ದೊರೆಯಬೇಕು. ಆಗ ಪರೋಕ್ಷವಾಗಿ ಕೃಷಿಕಾರ್ಯಗಳಿಗೆ ಶಕ್ತಿತುಂಬಿದಂತಾಗುವುದು.ಕೇಂದ್ರದ ಕೃಷಿ ಹಾಗೂ ಸಹಕಾರ ಇಲಾಖೆ ಜಂಟೀಯಾಗಿದ್ದು ˌಸದ್ರಿ ಇಲಾಖೆ ಹಾಗೂ ಕೇಂದ್ರದ ನೀತಿ ಆಯೋಗ ಸಹಕಾರವನ್ನು ಉನ್ನತಿಕರೀಸಲು ಬದಲಾವಣೆಯ ಸೂತ್ರವನ್ನು ಜ್ಯಾರಿಗೆ ತರತಕ್ಕದ್ದು. ಆಮೂಲಕ ಸಹಕಾರಿರಂಗ ಹಾಗೂ ಕೃಷಿಚಟುವಟಿಕೆಗೆ ಕಾಯಕಲ್ಪ ನೀಡಿದಂತಾದರೆˌ ರೈತನ ಬದುಕು ಹಸನಾಗಬಹುದು ಸಹಕಾರರಂಗ ಇನ್ನಷ್ಟು ಸದೃಢ ವ್ಯವಸ್ಥೆಯಾಗಿ ರೂಪುಗೊಳ್ಳುವ ಅವಕಾಶಗಳಿವೆ.
– ರಾಧಾಕೃಷ್ಣ ಕೋಟೆ
ರಾಧಾಕೃಷ್ಣ ಕೋಟೆ
ಅಂಚೆ: ಕಳಂಜˌ ಸುಳ್ಯ ತಾಲೂಕು
ದ. ಕ : 574212
9448503424