ಕ್ಯಾಂಪ್ಕೊ ಅಡಿಕೆಯ ಧಾರಣೆ ಕಿಲೊ ಒಂದಕ್ಕೆ ಕೇವಲ ಮೂರು ನಾಲ್ಕು ರೂಪಾಯಿ ಇದ್ದ ಸಮಯ. ಅಡಿಕೆ ಬೆಳೆಗಾರರು ತಮ್ಮ ಬದುಕಿನ ಕಥೆ ಮುಗಿಯಿತು ಅಂತ ಹೆದರಿದ ಹೊತ್ತು. ಕೇವಲ ಮೂರು ನಾಲ್ಕು ರೂಪಾಯಿ ಧಾರಣೆಯಿದ್ದರೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಕೃಷಿಕರೊಳಗೆ, ಸಹಕಾರಿಲಯದಲ್ಲಿ ಮತ್ತು ಸರಕಾರದ ಮಟ್ಟದಲ್ಲಿ ಚಿಂತನ ಮಂಥನಗಳು ನಡೆದವು. ಸರಕಾರ ಅಡಿಕೆ ಮಾರುಕಟ್ಟೆಯ ಅಧಃಪತನದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ವರದಿ ನೀಡಲು ಪೌಲೋಸ್ ಸಮಿತಿಯನ್ನು ಕೂಡ ರಚಿಸಿತು. ಸಮಿತಿಯ ವರದಿ, ಹಿರಿಯ ಕೃಷಿಕರ ಮತ್ತು ಸಹಕಾರಿಗಳ ನಿರಂತರ ಚಿಂತನ ಮಂಥನಗಳ ಫಲರೂಪವಾಗಿ ೧೧ ಜುಲೈ ೯೯೭೩ರಲ್ಲಿ ಸಹಕಾರಿ ರಂಗದಲ್ಲೊಂದು ಹೊಸ ಬೆಳಕು ಮೂಡಿತು. ವಾರಣಾಶಿ ಸುಬ್ರಾಯ ಭಟ್ಟರು ಮತ್ತು ಎಲ್.ಟಿ. ತಿಮ್ಮಪ್ಪ ಹೆಗಡೆ ಹಾಗು ಇನ್ನೂ ಅನೇಕ ಮಂದಿ ಹಿರಿಯ ಸಾಧಕರು, ಸಹಕಾರಿಗಳು ಊರೂರು ಸುತ್ತಿ ತಿರುಗಾಡಿ ಅಡಿಕೆ ಬೆಳೆಗಾರರ ಭವಿಷ್ಯದಲ್ಲಿ ನವಚೈತನ್ಯವನ್ನು ಸೃಜಿಸುವ ಸಂಸ್ಥೆಯೊಂದನ್ನು ಕಟ್ಟಿದರು. ‘ಅದು ಅಡಿಕೆ ಬೆಳೆಗಾರರ ಕಣ್ಮಣಿ, ಸಹಕಾರಿ ಕ್ಷೇತ್ರದ ಮುಕುಟಮಣಿ ಯೆನಿಸಿಕೊಂಡಿರುವ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ’. ಇದು ಬೆಳೆಗಾರರ ಕಷ್ಟ ಪರಂಪರೆಯನ್ನು ಕಳೆದು ಹೊಸ ಭರವಸೆಗಳ ಪಥವನ್ನು ತೋರುತ್ತಿದೆ. ಬಹುಶಃ ಕ್ಯಾಂಪ್ಕೊ ಸಂಸ್ಥೆಯೊಂದು ಇಂದು ಮಾರುಕಟ್ಟೆಯಲ್ಲಿ ಇರದಿರುತ್ತಿದ್ದರೆ ಅಡಿಕೆ ಮಾರುಕಟ್ಟೆ ಸ್ಥಿತಿ ಅಯೋಮಯವಾಗುತ್ತಿತ್ತು. ಕರಾವಳಿ ಜಿಲ್ಲೆ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶಗಳು ಇಂದು ಆರ್ಥಿಕ,ಸಾಮಾಜಿಕತ್ತು ಶೈಕ್ಷಣಿಕವಾಗಿ ಇಷ್ಟೊಂದು ಅಭಿವೃದ್ಧಿಯಾಗಲು ಅಡಿಕೆಗೆ ಇರುವ ಧಾರಣೆಯೇ ಕಾರಣ. ಅದರಲ್ಲೂ ಕರಾವಳಿ ಪ್ರದೇಶಗಳ ಜನರ ಜೀವನ ಮಟ್ಟ ಎತ್ತರಿಸುವಲ್ಲಿ ಅಡಿಕೆ ಮಾರುಕಟ್ಟೆ ವಹಿಸಿದ ಪಾತ್ರವಂತು ಅನನ್ಯ. ಇದರ ಹಿಂದೆ ಕ್ಯಾಂಪ್ಕೊ ವಹಿಸಿದ ಜವಾಬ್ದಾರಿಯುತ ನಡೆಗಳು ಅದರ ಮಹತ್ವವನ್ನು ಎತ್ತರಿಸಿದೆ.
ಒಂದೇ ಸೂರಿನಡಿ
▪ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸನ್ನು ಒಂದೇ ಸೂರಿನಡಿ ಖರೀದಿ, ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿರುವ ಕ್ಯಾಂಪ್ಕೊ ದೇಶದಾದ್ಯಂತ 182ಕ್ಕೂ ಅಧಿಕ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನು ಹೊಂದಿದೆ.
▪ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಸಿಬ್ಬಂದಿಗಳಿರುವ ಸಂಸ್ಥೆ ಕ್ಯಾಂಪ್ಕೊ. ಕರಾವಳಿ ಜಿಲ್ಲೆಗಳು, ಬಯಲು ಸೀಮೆಗಳು ಅಡಿಕೆ ಖರೀದಿಯಲ್ಲಿ ದೊಡ್ಡ ಪಾಲನ್ನು ನೀಡುತ್ತಿವೆ. ಚಾಲಿ ಮತ್ತು ಕೆಂಪಡಿಕೆ ಕ್ಷೇತ್ರದಲ್ಲಿ ಎಲ್ಲೆಲ್ಲ ಖರೀದಿಗೆ ಅನುಕೂಲಗಳಿವೆ ಅಲ್ಲೆಲ್ಲ ತನ್ನ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಂಡು ಅದು ಮುನ್ನಡೆಯುತ್ತಿದೆ.
▪ ಪಾರದರ್ಶಕ ವಹಿವಾಟು ಮತ್ತು ಸರಕಾರಕ್ಕೆ ನೂರಕ್ಕೆ ನೂರು ತೆರಿಗೆ ಪಾವತಿಸುವ ಹೆಗ್ಗಳಿಕೆ ಕ್ಯಾಂಪ್ಕೊ ಸಂಸ್ಥೆಯದು. ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದ ಬೆಳೆಗಾರನಿಗೆ ಖರೀದಿ ಹಂತದಲ್ಲಿಯೆ ನೂರಕ್ಕೆ ನೂರು ಹಣಪಾವತಿಸುವ ಹೆಮ್ಮೆಯೂ ಕ್ಯಾಂಪ್ಕೊಗಿದೆ. ಒಂದೇ ಸೂರಿನಡಿ ಕೃಷಿಕರ ನಾಲ್ಕು ಉತ್ಪನ್ನಗಳನ್ನು ಖರೀದಿ ಮಾಡುವುದರ ಜೊತೆಗೆ ಅವುಗಳ ಮಾರುಕಟ್ಟೆ ಧಾರಣೆಯನ್ನು ಸಾಧ್ಯವಾದಷ್ಟು ಸ್ಥಿರಗೊಳಿಸುವಲ್ಲಿ ಪ್ರಮುಖಪಾತ್ರವಹಿಸುತ್ತಿದೆ. ಬಹುಶಃ ಕ್ಯಾಂಪ್ಕೊ ಎಂಬ ಬೃಹತ್ ಸಹಕಾರಿ ಇಲ್ಲದಿರುತ್ತಿದ್ದರೆ ಇಂದು ಒಬ್ಬ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಬೆಳೆಗಾರನ ಸ್ಥಿತಿ ಅಯೋಮಯವಾಗುತ್ತಿತ್ತು ಎಂಬುದನ್ನು ಖಾಸಗಿ ಮಾರುಕಟ್ಟೆಯವರೇ ಒಪ್ಪುತ್ತಾರೆ.
▪ ಬಿಳಿಚೀಟಿ ವ್ಯವಹಾರದಿಂದ ಅನೇಕ ಕೃಷಿಕರಿಗೆ ಆಗುವ ತೊಂದರೆ ಮತ್ತು ತೆರಿಗೆ ವಂಚಿಸಿ ನಡೆಸುವ ವ್ಯವಹಾರದಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಕೊರತೆಗಳನ್ನು ಬೆಳೆಗಾರರಿಗೆ ತಿಳಿಸುವ ಕೆಲಸವನ್ನು ಆಗಾಗ ಕ್ಯಾಂಪ್ಕೊ ಮಾಡುತ್ತಾ ಬಂದಿದೆ.
▪ ಅಡಿಕೆ ಮತ್ತು ಕಾಳುಮೆಣಸು ಕಲಬೆರಕೆ ಮಾಡಿ ಉತ್ತರದ ರಾಜ್ಯಗಳಲ್ಲಿ ಮಾರಾಟಮಾಡುವ ಕೆಲವು ಖಾಸಗಿಯವರ ವ್ಯವಹಾರದೆದುರು ಹೋರಾಟಮಾಡಿ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಸಾಧ್ಯವಾದಷ್ಟು ಉತ್ತಮ ಧಾರಣೆಯನ್ನು ಕೊಡಲು ಕ್ಯಾಂಪ್ಕೊ ಸದಾ ಬದ್ಧವಾಗಿದೆ.
ಮೌಲ್ಯವರ್ಧನೆ ಮತ್ತು ಮೇಕ್ ಇನ್ ಇಂಡಿಯ
▪ ಭಾರತದ ಮಾನ್ಯ ಪ್ರಧಾನ ಮಂತ್ರಿಗಳ ಕನಸಾದ ‘ಮೇಕ್ ಇನ್ ಇಂಡಿಯಾ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿದ ಕ್ಯಾಂಪ್ಕೊ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಲ್ಲಿ ಬೃಹತ್ ಚಾಕೊಲೇಟ್ ಕಾರ್ಖಾನೆ ಸ್ಥಾಪಿಸಿದ್ದು ಕ್ಯಾಂಪ್ಕೊಕ್ಕೆ ಮಾತ್ರವಲ್ಲ ಸಹಕಾರಿ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲು.
▪ ಚಾಕೊಲೇಟ್ ಕಾರ್ಖಾನೆ ಸ್ಥಾಪನೆ ಹಿಂದೆ ಒಂದು ಹಠ ಸಾಧನೆಯ ಹಿನ್ನೆಲೆಯಿದೆ. ಬಹುರಾಷ್ಟ್ರೀಯ ಕಂಪೆನಿಯವರು ಬೆಳೆಗಾರರಿಗೆ ಕೊಕ್ಕೊ ಕೃಷಿಗೆ ಉತ್ತೇಜನ ನೀಡಲು ಗಿಡ ಮತ್ತು ಗೊಬ್ಬರಗಳನ್ನು ವಿತರಿಸಿದ್ದರು. ಆದರೆ ಕೊಕ್ಕೊ ಗಿಡಗಳು ಬೆಳೆದು ಫಸಲು ಬರುವ ಹೊತ್ತಿಗೆ ಕೊಕ್ಕೊ ಖರೀದಿಯಿಂದ ಅವರು ಹಿಂದೆ ಸರಿದರು. ಕೊಕ್ಕೊ ಕೃಷಿಕರಪಾಡು ಆತಂಕಭರಿತವಾಗಿತ್ತು. ಕೇರಳ ಸರಕಾರದೆದುರು ಬೆಳೆಗಾರರ ದೂರು ಹೋಯಿತು. ಬಹುರಾಜ್ಯ ಸಹಕಾರಿ ಕ್ಯಾಂಪ್ಕೊ ಆ ಸಮಯದಲ್ಲಿ ಮುನ್ನೆಲೆಗೆ ಬರುತ್ತಿದ್ದ ಹೊತ್ತು. ಸಹಜವಾಗಿ ಸರಕಾರದ ದೃಷ್ಟಿ ಕ್ಯಾಂಪ್ಕೊ ಕಡೆಗೆ ಹೋಯಿತು. ಕ್ಯಾಂಪ್ಕೊ ಕೊಕ್ಕೊ ಕೋಡುಗಳನ್ನು ಖರೀದಿಸಿ ಅದರ ಬೀಜಗಳನ್ನು ಮಾರಾಟ ಮಾಡಬೇಕಿತ್ತು. ಮಾರಾಟಕ್ಕಾಗಿ ಬಹುರಾಷ್ಟ್ರೀಯ ಕಂಪೆನಿಗಳ ಕದ ತಟ್ಟಿದರೆ ಅವರು ಬಹುರಾಜ್ಯ ಸಹಕಾರಿಯೊಂದರ ಜೊತೆ ಮಾತುಕತೆಗೆ ಮುಂದಾಗಲಿಲ್ಲ. ಬೆಳೆಗಾರರನ್ನು ರಕ್ಷಿಸುವ, ಬೆಳೆಗಾರರ ಹಿತಕಾಪಾಡುವ ಕ್ಯಾಂಪ್ಕೊದ ಯೋಚನೆಗೆ ಬಹುರಾಷ್ಟ್ರೀಯ ಕಂಪೆನಿ ಸೊಪ್ಪು ಹಾಕದಿರುವಾಗ ವಾರಣಾಶಿಯವರಿಗೂ ಹಠ ಬಿದ್ದಿತು. ಕಾರ್ಖಾನೆ ಸ್ಥಾಪನೆ ಕ್ಯಾಂಪ್ಕೊದಿಂದ ಸಾಧ್ಯ ಅಂತ ಮನಗಂಡು ಮುಂದಡಿಯಿಟ್ಟರು. ಅಂದು ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರ ಇಂದು ಅನೇಕ ಬೆಳೆಗಾರರಿಗೆ ಆದಾಯಕ್ಕೊಂದು ಮೂಲವಾಯಿತು. ಅನೇಕ ಉದ್ಯೋಗ ಸೃಷ್ಟಿಯಿಂದಾಗಿ ಅನೇಕ ಮನೆ ಮನೆಗಳಲ್ಲಿ ದೀಪ ಬೆಳಗುವಂತಾಯಿತು. ‘1986ನೇ ಇಸವಿ, ಸಹಕಾರಿ ರಂಗದ ಬೃಹತ್ ಚಾಕಲೇಟ್ ಕಾರ್ಖಾನೆಯನ್ನು ಪುತ್ತೂರಿನಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಗ್ಯಾನಿ ಜೈಲ್ ಸಿಂಗ್ ರಾಷ್ಟ್ರಕ್ಕೆ ಸಮರ್ಪಿಸಿದಾಗ ಏಷ್ಯಾದಲ್ಲೆ ದೊಡ್ಡ ಚಾಕೊಲೆಟ್ ಕಾರ್ಖಾನೆ ಹೊಂದಿದ ಹೆಮ್ಮೆ ಬೆಳೆಗಾರರ ನೆಚ್ಚಿನ ಕ್ಯಾಂಪ್ಕೊದ್ದಾಗಿತ್ತು. ಈ ಸಾಧನೆ ಮತ್ತು ದೂರದರ್ಶಿತ್ವದ ಸಾಧಕರು ವಾರಣಾಶಿ ಸುಬ್ರಾಯ ಭಟ್ಟರು.
▪ ಸುಮಾರು ಇಪ್ಪತ್ತಮೂರು ತರದ ಚಾಕಲೇಟುಗಳನ್ನು ಕ್ಯಾಂಪ್ಕೊ ಉತ್ಪಾದಿಸುತ್ತಿದೆ. ಕ್ಯಾಂಪ್ಕೊ ಬ್ರಾಂಡಿನಲ್ಲಿ ಮತ್ತು ಇತರ ಸಂಸ್ಥೆಗಳಾದ ಕ್ಯಾಡ್ಬರಿ, ನೆಸ್ಲೆ, ಅಮುಲ್, ಲೊಟ್ಟೆ, ಕೆಎಂಎಫ್, ಮಿಲ್ಮಾ ಮುಂತಾದ ಅನೇಕರಿಗೆ ಕೊಕ್ಕೊ ಕಚ್ಛಾವಸ್ತುಗಳನ್ನು ಪೂರೈಸುತ್ತಿದೆ.
▪ ವಾರ್ಷಿಕ 23ಸಾವಿರ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವಿರುವ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಹದಿನಾಲ್ಕು ಸಾವಿರ ಮೆಟ್ರಿಕ್ ಟನ್‌ಗೂ ಮಿಕ್ಕಿ ಉತ್ಪಾದನೆ ನಡೆಯುತ್ತಿದೆ.
▪ ಸುಮಾರು 14ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಾಕಲೇಟ್ ಫ್ಯಾಕ್ಟರಿಯ ‘ಸೌಲಭ್ಯ ಸೌಧ’ ವಂತು ಸಹಕಾರಿ ಕ್ಷೇತ್ರದ ಆಧುನಿಕ ದೇವಮಂದಿರ. ಇದರಿಂದಾಗಿ ಆಹಾರ ಸುರಕ್ಷೆ ಮತ್ತು ಸ್ವಚ್ಛತೆಗಿರುವ ಎಲ್ಲ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿರುವ ಹೆಗ್ಗಳಿಕೆ ಸಂಸ್ಥೆಯದು.
▪ ತನ್ನ ಸದಸ್ಯ ಬೆಳೆಗಾರರೆ ಬೆಳೆದ ಸ್ವದೇಶಿ ಕೊಕ್ಕೊ ಮತ್ತು ಸ್ಥಳೀಯ ಕಚ್ಛಾವಸ್ತುಗಳನ್ನು ಉಪಯೋಗಿಸಿ ವೈವಿಧ್ಯಮಯ ಚಾಕಲೇಟ್ ಮಾರುಕಟ್ಟೆಗೆ ಪೂರೈಸುತ್ತಿರುವ ಅದು ಇಂದು ಪ್ರೀಮಿಯರ್ ಚಾಕಲೇಟ್ ಕ್ಷೇತ್ರಕ್ಕೂ ಇಳಿದಿದೆ.
▪ ಕ್ಯಾಂಪ್ಕೊ ಉತ್ಪಾದಿಸುತ್ತಿರುವ ಕೊಕ್ಕೊ ಉತ್ಪನ್ನವಾದ ‘ವಿನ್ನರ್’ ಅತ್ಯುತ್ತಮ ಆರೋಗ್ಯದಾಯಕ ಸ್ವಾದಭರಿತ ಪೇಯ. ಮಕ್ಕಳಂತು ಇದನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೆ. ಈ ಉತ್ಪನ್ನ “ದಕ್ಷಿಣ ಆಫ್ರಿಕಾ ಖಂಡದ ಕೆಲವು ದೇಶಗಳಿಗೆ ಅವರದ್ದೇ ಬ್ರಾಂಡಿನಲ್ಲಿ ತಿಂಗಳಿಗೆ ಹದಿನೈದು ಕಂಟೈನರಿಗೂ ಮಿಕ್ಕಿದ ಪ್ರಮಾಣದಲ್ಲಿ ರಫ್ತಾಗುತ್ತಿದೆ”.
▪ ಕ್ಯಾಂಪ್ಕೊದ ಸುಮಾರು 33ಶಾಖೆಗಳಲ್ಲಿ ವೀಸೀ ಕೂಲರ್ ಸೌಲಭ್ಯಗಳಿದ್ದು ಕ್ಯಾಂಪ್ಕೊದ ಎಲ್ಲ ಶ್ರೇಣಿಯ ಚಾಕೊಲೇಟ್ ಉತ್ಪನ್ನಗಳು ಇದರಲ್ಲಿ ದೊರೆಯುತ್ತವೆ. ಪುತ್ತೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಚಾಕೊಲೇಟ್ ಕಿಯೋಸ್ಕ್ ತೆರೆಯಲಾಗಿದೆ. ಸಬ್ಸಿಡಿ ಬೆಲೆಯಲ್ಲಿ ಚಾಕಲೇಟುಗಳು ಈ ಕಿಯೋಸ್ಕ್ಗಳಿಂದ ಲಭ್ಯವಾಗುತ್ತಿವೆ. ಕೃಷ್ಯುತ್ಪನ್ನಗಳ ಮಾರಾಟಕ್ಕೆ ಬಂದ ಬೆಳೆಗಾರರಿಗೆ ಚಾಕೊಲೇಟ್ ಖರೀದಿಗೆ ಅವಕಾಶಮಾಡಿಕೊಡುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ.
▪ ತಿಂಗಳಿನ ಎಲ್ಲ ಶನಿವಾರಗಳಂದು ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿಯ ವೀಕ್ಷಣೆಗೆ ಸಾರ್ವಜನಿಕರೆಲ್ಲರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ.
▪ ಕ್ಯಾಂಪ್ಕೊ ಚಾಕಲೇಟ್ ಉತ್ಪನ್ನಗಳು ಕೇವಲ ಭಾರತದಲ್ಲಿ ಹೆಸರುವಾಸಿಯಲ್ಲ. ದಕ್ಷಿಣ ಆಫ್ರಿಕ, ನೇಪಾಲ ರಾಷ್ಟ್ರಗಳು ಕೂಡ ವಿನ್ನರ್ ಮತ್ತು ಚಾಕಲೇಟುಗಳನ್ನು ಕ್ಯಾಂಪ್ಕೊದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ. “ಭಾರತದ ಸೇನೆಗೂ ಕ್ಯಾಂಪ್ಕೊ ಚಾಕೊಲೇಟ್ ವಿತರಣೆಯಾಗುತ್ತಿರುವುದು ದೊಡ್ಡ ಸಂಗತಿ”. ವಿದೇಶಿ ವಿನಿಮಯ ಕ್ಷೇತ್ರಕ್ಕೂ ಕ್ಯಾಂಪ್ಕೊ ತನ್ನ ಯಥಾನುಶಕ್ತಿ ಕೊಡುಗೆಯನ್ನು ಕೊಡುತ್ತಿರುವ ಹೆಮ್ಮೆಯಿದೆ. ಅರಬ್ ರಾಷ್ಟ್ರಗಳು ಕ್ಯಾಂಪ್ಕೊ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದು ಮುಂದಿನ ದಿನಗಳಲ್ಲಿ ಕ್ಯಾಂಪ್ಕೊ ಉತ್ಪನ್ನಗಳು ಅಲ್ಲಿಯೂ ಲಭ್ಯವಾಗುವ ಸಾಧ್ಯತೆಗಳಿವೆ.
ವಿಸ್ತೃತ ಮಾರುಕಟ್ಟೆ
▪ ಕ್ಯಾಂಪ್ಕೊ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದಂತೆಲ್ಲ ಅದು ವ್ಯಾಪಕವಾಗಿ ಬೆಳೆಯುತ್ತಿದೆ. 1918-19 ರ ಆರ್ಥಿಕ ವರ್ಷದಲ್ಲಿ ಅದು ೧೮೭೫ ಕೋಟಿ ವ್ಯವಹಾರ ಮಾಡಿಸಾರ್ವಕಾಲಿಕ ದಾಖಲೆ ಮಾಡಿತು.
▪ ಹೊನ್ನಾವರ, ಬೆಳ್ತಂಗಡಿ, ಬೈಕಂಪಾಡಿ, ಸಾಗರ ಮತ್ತು ತೃಶೂರುಗಳಲ್ಲಿಗಳಲ್ಲಿ ನೂತನ ಸುಸಜ್ಜಿತ ಗೋದಾಮು ನಿರ್ಮಿಸಿದ್ದು ಆ ಭಾಗದ ಕೃಷಿಕರಿಗೆ ಹೆಚ್ಚಿನ ಸೇವೆ ಒದಗಿಸಲು ಸಾಧ್ಯವಾಗಲಿದೆ.
▪ ಕಾವು ನಿವೇಶನದಲ್ಲಿ ಅಡಿಕೆ, ರಬ್ಬರ್ ಮತ್ತು ಕಾಳುಮೆಣಸು ಸಂಸ್ಕರಣೆಗೆ ಅನುವಾಗುವಂತೆ ಸುಮಾರು 25 ಕೋಟಿ ವೆಚ್ಚದ ಬೃಹತ್ ಮಾಸ್ಟರ್ ಗೋಡೌನ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಕಟ್ಟಡದಲ್ಲಿ ಕಾಳುಮೆಣಸು ಸಂಸ್ಕರಣೆ ಮತ್ತು ಸಣ್ಣ ಪ್ಯಾಕೆಟುಗಳಲ್ಲಿ ಕಾಳುಮೆಣಸು ತುಂಬುವ ಯಂತ್ರಗಳೂ ಇರಲಿವೆ.
ಭವಿಷ್ಯದ ಯೋಜನೆ
▪ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸಿಗೆ ಮಾರುಕಟ್ಟೆ ಕಲ್ಪಿಸಿಕೊಟ್ಟ ಕ್ಯಾಂಪ್ಕೊ ಮುಂದಿನ ಹಂತದಲ್ಲಿ ತೆಂಗಿನಕಾಯಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ. ತೆಂಗಿನಕಾಯಿಯಿಂದ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲು ಮಹತ್ವಾಕಾಂಕ್ಷೆಯ ದೊಡ್ಡ ಮಟ್ಟಿನ ಫ್ಯಾಕ್ಟರಿ ನಿರ್ಮಾಣಮಾಡಿ ಉತ್ಪನ್ನಗಳನ್ನು ರಫ್ತು ಮಾಡುವ ಉದ್ದೇಶ ಹೊಂದಿದೆ. ಒಂದೊಮ್ಮೆ ಕ್ಯಾಂಪ್ಕೊದ ಈ ಕಾರ್ಯ ಸಾಧ್ಯವಾದರೆ ತೆಂಗಿನಕಾಯಿ ಮಾರುಕಟ್ಟೆಯೊಳಗಿನ ಖಾಸಗಿ ಏಕಸ್ವಾಮ್ಯ ಕಡಿಮೆಯಾಗಿ ತೆಂಗಿನಕಾಯಿಗೂ ಸ್ಥಿರ ಮಾರುಕಟ್ಟೆ ಲಭ್ಯವಾಗಬಹುದು.
▪ ಅಡಿಕೆ ಸುಲಿಯುವುದರಿಂದ ಹಿಡಿದು ಸಂಸ್ಕರಣೆಯ ವಿವಿಧ ಕಾರ್ಯಗಳು ಹಾಗು ಪ್ಯಾಕಿಂಗ್ ಒಂದೆ ಹಂತದಲ್ಲಿ ಯಾಂತ್ರೀಕರಣಗೊಳ್ಳಲು ಬೇಕಾದ ಸಂಶೋಧನೆಯ ಹಿಂದೆ ಕ್ಯಾಂಪ್ಕೊ ಕೆಲಸ ಮಾಡುತ್ತಿದೆ.
ಪವನ ವಿದ್ಯುತ್ – ಸ್ವಾವಲಂಬನೆ
▪ ಚಿಕ್ಕೋಡಿ ಮತ್ತು ಹೂವಿನ ಹಡಗಲಿಯಲ್ಲಿ ಒಟ್ಟು ಮೂರು ಪವನ ವಿದ್ಯುತ್ ಯಂತ್ರಗಳಿದ್ದು ಚಾಕೊಲೇಟ್ ಫ್ಯಾಕ್ಟರಿಗೆ ಬೇಕಾದ ಸುಮಾರು 60 ರಿಂದ 7೦ ಶೇಕಡಾ ವಿದ್ಯುತ್ ಅಲ್ಲಿ ಉತ್ಪಾದನೆಯಾಗುತ್ತದೆ. ಇದು ಒಂದು ಸ್ವಾವಲಂಬನೆ ಮತ್ತು ಉಳಿತಾಯದ ಹಜ್ಜೆ.
▪ ಮುಂದಿನ ದಿನಗಳಲ್ಲಿ ಸೋಲಾರ್ ವಿದ್ಯುತ್ ಯೋಜನೆಯೂ ಕಾರ್ಯಗತವಾಗಲಿದ್ದು ಮತ್ತಷ್ಟು ಸ್ವಾವಲಂಬನೆ ಈ ನಿಟ್ಟಿನಲ್ಲಿ ಸಾಧ್ಯವಾಗಲಿದೆ.
ಜಲಮರುಪೂರಣ
▪ ಚಾಕೊಲೇಟ್ ಫ್ಯಾಕ್ಟರಿಯ ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸುವ ಎಲ್ಲ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದೆ. ಫ್ಯಾಕ್ಟರಿಯ ಆವರಣದೊಳಗೆ ಬಿದ್ದ ನೀರು ಅಲ್ಲಿಯೇ ಇಂಗುವಂತೆ ವ್ಯವಸ್ಥೆ ಮಾಡಲಾಗಿದೆ.
ಬಹುಮುಖಿ ಸೇವೆ
▪ ತನ್ನ ಸದಸ್ಯ ಬೆಳೆಗಾರ ಮತ್ತು ಆತನ ಕುಟುಂಬ ಸದಸ್ಯರ ಹೃದಯ ಶಸ್ತ್ರಚಿಕಿತ್ಸೆಯಾದಾಗ 5೦ ಸಾವಿರ, ಕಿಡ್ನಿ ಕಸಿ ಮಾಡಿದಾಗ ಒಂದು ಲಕ್ಷ ಮತ್ತು ಹತ್ತು ಡಯಾಲಿಸಿಸ್‌ಗೆ ಹತ್ತು ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ಕ್ಯಾಂಪ್ಕೊ ನೀಡುತ್ತಿದೆ. ಇದಲ್ಲದೆ ಸಕ್ರಿಯ ಸದಸ್ಯ ಬೆಳೆಗಾರ ಯಾವುದೇ ಅವಘಡಗಳಿಂದ ಮೃತನಾದರೆ ಅವನ ವಾರೀಸುದಾರರಿಗೆ 5೦ ಸಾವಿರ ಮತ್ತು ಸಕ್ರಿಯ ಸದಸ್ಯ ಬೆಳೆಗಾರನ ಕಾರ್ಮಿಕ ತೋಟದಲ್ಲಿ ಯಾವುದೇ ಅವಘಡಗಳಿಂದ ಮೃತನಾದರೆ ಆತನ ಹತ್ತಿರದ ವಾರೀಸುದಾರರಿಗೆ 5೦ಸಾವಿರಗಳ ಸಹಾಯಧನ ಕ್ಯಾಂಪ್ಕೊ ನೀಡುತ್ತಿದೆ.
▪ ಪ್ರತಿ ವರ್ಷ ಸುಮಾರು 2೦ ಕಡೆಗಳಲ್ಲಿ ತನ್ನ ಸದಸ್ಯ ಬೆಳೆಗಾರರ ಸಂಪರ್ಕ ಸಭೆಗಳನ್ನು ನಡೆಸಿ ಪರಸ್ಪರ ಚರ್ಚೆ, ವಿಚಾರ ವಿನಿಮಯಗಳಿಂದ ಸದಸ್ಯರನ್ನು ಬೆಳೆಸಿ ತಾನೂ ಬೆಳೆಯುತ್ತಿದೆ.
▪ ಕೊಕ್ಕೊ, ಕಾಳುಮೆಣಸು ಗಿಡಗಳನ್ನು ಕಡಿಮೆ ದರದಲ್ಲಿ ಬೆಳೆಗಾರರಿಗೆ ವಿತರಣೆ, ಮೈಲುತುತ್ತನ್ನು ಸಬ್ಸಿಡಿ ದರದಲ್ಲಿ ತನ್ನದೇ ಬ್ರಾಂಡಿನಲ್ಲಿ ಬೆಳೆಗಾರರಿಗೆ ಒದಗಿಸುತ್ತಿರುವುದು ಕ್ಯಾಂಪ್ಕೊದ ಬಹುಮುಖಿ ಸೇವೆಗಳಲ್ಲಿ ಕೆಲವು.
ಮಾರುಕಟ್ಟೆಯಲ್ಲಿ ಸಮರ್ಥ ನೇತೃತ್ವ
▪ ಅಡಿಕೆಯ ಧಾರಣೆ ಮೇಲೆ ವಿದೇಶಿ ಅಡಿಕೆ ಆಮದಿನ ಹೊಡೆತ ಬಿದ್ದಾಗ ಕ್ಯಾಂಪ್ಕೊ ನೇತೃತ್ವ ವಹಿಸಿತು. ಕ್ಯಾಂಪ್ಕೊ ಮತ್ತು ಇನ್ನು ಕೆಲವು ಸಹಕಾರಿ ಸಂಘಗಳ ಹಿರಿಯರ ನಿಯೋಗ ಅಂದಿನ ಕೇಂದ್ರ ಸರಕಾರದ ವಾಣಿಜ್ಯ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಅವರಿಗೆ ಅಡಿಕೆ ಧಾರಣೆ ಮೇಲಿನ ಹೊಡೆತದ ಪರಿಣಾಮವನ್ನು ಮನದಟ್ಟು ಮಾಡಿತು. ಇದರಿಂದಾಗಿ ಆಮದು ಸುಂಕವನ್ನು 192ರಿಂದ 251ಕ್ಕೆ ಹೆಚ್ಚಿಸಲು ಸಹಾಯವಾದ್ದು ಮಾತ್ರವಲ್ಲ ಅಡಿಕೆ ಧಾರಣೆ ನೆಲಕಚ್ಚುವುದು ತಪ್ಪಿತು.
▪ ಅಡಿಕೆ ಆರೋಗ್ಯಕ್ಕೆ ಹಾನಿಕರ ಅದರ ಕೃಷಿಯನ್ನೆ ನಿಷೇಧಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಕ್ಯಾಂಪ್ಕೊ ಅದು ಆರೋಗ್ಯ ಪೂರ್ಣ, ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ, ಆಯುರ್ವೇದ ಔಷಧಿಗಳಲ್ಲಿ ಅದರ ಉಲ್ಲೇಖವಿದೆ ಎಂದು ಹಿರಿಯ ವಕೀಲರನ್ನು ನೇಮಿಸಿ ವಾದ ಮಾಡಿತು. ಈ ವಿವಾದ ಇನ್ನೂ ನ್ಯಾಯಾಲಯದಲ್ಲಿದ್ದು ಕ್ಯಾಂಪ್ಕೊ ಸದಾ ಅದನ್ನು ಗಮನಿಸುತ್ತಿದೆ.
▪ ಅಡಿಕೆ ಮಾರುಕಟ್ಟೆಗೆ ಆತಂಕ ಬಂದಾಗ, ಅಡಿಕೆ ನಿಷೇಧದ ಮಾತುಗಳು ಬಂದಾಗ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಇತರ ಸಹಕಾರಿ ಸಂಸ್ಥೆಗಳ ಜೊತೆಗೂಡಿ ಮಾಡುವ ಕಾರ್ಯ ಕ್ಯಾಂಪ್ಕೊ ಸದಾ ನಿರ್ವಹಿಸಿದೆ.
▪ 8 ನವೆಂಬರ್ 2013ರಂದು ಪ್ರಧಾನ ಮಂತ್ರಿಗಳು ೫೦೦ ಮತ್ತು 1೦೦೦ ರೂಪಾಯಿಗಳ ನೋಟು ಚಲಾವಣೆಯನ್ನು ಅಮಾನ್ಯ ಮಾಡಿದ ಸಂದರ್ಭದಲ್ಲಿ ಎಲ್ಲ ಮಾರುಕಟ್ಟೆಯಂತೆ ಅಡಿಕೆ ಮಾರುಕಟ್ಟೆ ತಲ್ಲಣಗೊಂಡಿತ್ತು. ಆದರೆ ಕ್ಯಾಂಪ್ಕೊ ಇತರರಂತೆ ಖರೀದಿ ನಿಲ್ಲಿಸಿ ಬಾಗಿಲು ಎಳೆಯದೆ ನಿರ್ದಿಷ್ಟ ಪ್ರಮಾಣದ ಅಡಿಕೆಯನ್ನು ಖರೀದಿಸಿ ಬೆಳೆಗಾರರ ಹಿತ ಕಾಪಾಡಿತು. ಅವರ ಕಷ್ಟಕ್ಕೆ ನೆರವಾಯಿತು. ಇದು ಅಡಿಕೆ ಮಾರುಕಟ್ಟೆ ಪಾತಾಳ ಸೇರದಂತೆ ತಡೆದ ಮಹಾನ್ ಪ್ರಯತ್ನ ಎಂದು ಬೆಳೆಗಾರರು ಅನೇಕರು ಸಂತಸಪಟ್ಟಿದ್ದರು.
▪ ಕೊಕ್ಕೊ ಬೆಳೆಯಲ್ಲಿ ಅದ್ಭುತ ಫಸಲು ಬಂದಾಗ, ಬಹುರಾಷ್ಟ್ರೀಯ ಕಂಪೆನಿಗಳು ಸ್ಥಳೀಯ ಏಜಂಟರ ಮೂಲಕ ಖರೀದಿ ನಿಲ್ಲಿಸಿದಾಗ ಬೆಳೆಗಾರರಿಗೆ ಆಸರೆಯಾಗಿ ನಿಂತುದು ಕ್ಯಾಂಪ್ಕೊ. ರಾತ್ರೆ ಹಗಲು ಕ್ಯಾಂಪ್ಕೊ ಮತ್ತು ಸಹಕಾರಿ ಸಂಘಗಳ ಸಿಬ್ಬಂದಿ ಬೆಳೆಗಾರರ ಕೊಕ್ಕೊ ಖರೀದಿ ಮತ್ತು ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡು ಸಮರ್ಪಕವಾಗಿ ಸಮಸ್ಯೆಯನ್ನು ನೀಗಿಸಿದ್ದರು. “ಇಂದು ಕ್ಯಾಂಪ್ಕೊ ಖಾಸಗಿಯವರಂತೆ ಕೊಕ್ಕೊ ಖರೀದಿ ನಿಲ್ಲಿಸುತ್ತಿದ್ದರೆ ನಾವಲ್ಲ ಕೊಕ್ಕೊ ಬೀಜಗಳನ್ನು ರಸ್ತೆಗೆ ಸುರಿಯಬೇಕಿತ್ತು” ಎಂದು ಬೆಳೆಗಾರರೊಬ್ಬರು ಆಡಿದ ಮಾತು ಮಾರ್ಮಿಕವಾದುದು.
ಡಿಜಿಟಲೀಕರಣ
▪ ಡಿಜಿಟಲ್ ಕ್ಯಾಂಪ್ಕೊ ಈಗಿನ ಆಡಳಿತ ಮಂಡಳಿಯ ಕನಸು. ಈ ನಿಟ್ಟಿನಲ್ಲಿ ಅದು ದಿಟ್ಟ ಹಜ್ಜೆಯಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪ್ಕೊದ ಯಶೋಗಾಥೆಗಳ ಚಿತ್ರಣ ನಿರಂತರ ಬರುತ್ತಿದೆ. ಸದಸ್ಯರಿಗೆ ಕ್ಯಾಂಪ್ಕೊದ ಆಗುಹೋಗುಗಳನ್ನು ಮುಟ್ಟಿಸುವಲ್ಲಿ ಸಾಮಾಜಿಕ ಜಾಲತಾಣದ್ದು ದೊಡ್ಡ ಯಶಸ್ಸು. ಕ್ಯಾಂಪ್ಕೊದ ಶೇಕಡಾ ಅರುವತ್ತಕ್ಕಿಂತಲೂ ಹೆಚ್ಚು ವ್ಯವಸ್ಥೆಗಳಿಂದು ಕಡತ ಮುಕ್ತವಾಗಿವೆ. ಬೆಳೆಗಾರರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಒಂದೆ ದೇಶ ಒಂದೆ ತೆರಿಗೆ ಎಂಬ ನಿಯಮ ಬಂದಾಗ ಕ್ಯಾಂಪ್ಕೊವ್ಯವಸ್ಥೆ ಅದಕ್ಕೆ ತ್ವರಿತವಾಗಿ ತೆರೆದುಕೊಂಡಿದೆ. ಕ್ಯಾಶ್‌ಲೆಸ್ ವ್ಯವಹಾರದಲ್ಲೂ ಅದು ಅಡಿಯಿಡುತ್ತಿದೆ.
ಅಡಿಕೆ ಕೌಶಲ್ಯ ಪಡೆ ತರಬೇತಿ
▪ ಮೊತ್ತ ಮೊದಲ ಬಾರಿಗೆ ಸುರಕ್ಷಾ ಸಾಧನಗಳನ್ನು ಬಳಕೆಮಾಡಿಕೊಂಡು ಅಡಿಕೆ ಮರವೇರುವ ಸಾಂಪ್ರದಾಯಿಕ ಕೌಶಲ್ಯದ ತರಬೇತಿಯನ್ನು ಎರಡು ಶಿಬಿರಗಳಲ್ಲಿ ಒಟ್ಟು 53 ತರುಣರಿಗೆ ಕೊಟ್ಟ ಕೀರ್ತಿ ಸಲ್ಲುವುದು ಕ್ಯಾಂಪ್ಕೊಗೆ. ಇದು ಹೊಸ ಹಾದಿ ಹೊಸ ಹಜ್ಜೆ. ಕೃಷಿ ಕ್ಷೇತ್ರದಲ್ಲಿ ಅಡಿಕೆ ಮರವೇರಿ ಸಿಂಪಡಣೆ ಮತ್ತು ಕೊಯ್ಲು ಮಾಡುವ ಕುಶಲ ಕಾರ್ಮಿಕರ ಕೊರತೆ ಕಂಡುಬಂದು ಬೆಳೆಗಾರರು ತಮ್ಮ ಫಸಲಿನ ಬಹುಪಾಲನ್ನು ಕೊಳೆರೋಗದಿಂದ ಕಳೆದುಕೊಂಡಾಗ ಬೆಳೆಗಾರರ ಸಂಕಷ್ಟ ಕಂಡು ಧಾವಿಸಿದ್ದು ಕ್ಯಾಂಪ್ಕೊ. ಸಿಪಿಸಿಆರ್‌ಐ ಮತ್ತಿತರ ಸಂಸ್ಥೆಗಳ ಜೊತೆ ಸೇರಿಕೊಂಡು ವಿಟ್ಲದ ಸಿಪಿಸಿಅರ್‌ಐಯಲ್ಲಿ ಒಟ್ಟು ಎರಡು ಹಂತಗಳಲ್ಲಿ ಐದು ದಿನಗಳ ತರಬೇತಿ ಶಿಬಿರ ಮಾಡಿದ್ದು ಕೃಷಿಕರ ಕಷ್ಟಗಳಿಗೆ ಕ್ಯಾಂಪ್ಕೊ ಹೆಗಲುಕೊಟ್ಟಂತಾಗಿದೆ.
▪ ಸದಸ್ಯ ಬೆಳೆಗಾರನೇ ಕ್ಯಾಂಪ್ಕೊದ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಕ್ಯಾಂಪ್ಕೊದ ನಿರಂತರ ಉನ್ನತಿ ಅವನ ಕಣ್ಣೆದುರೆ ಇದೆ. ಅದು ಸಾಲದು ಇನ್ನಷ್ಟು ಸಾಧನೆ, ಸಂಶೋಧನೆ, ಆವಿಷ್ಕಾರ ಇಲ್ಲಿ ನಡೆಯಬೇಕು. ಬೆಳೆಗಾರ ಮತ್ತು ಕ್ಯಾಂಪ್ಕೊ ನೂರಕ್ಕೆ ನೂರು ನಿಕಟತೆ ಸಾಧಿಸದಿದ್ದರೆ ಇದು ಸಾಧ್ಯವಾಗದು. ಕ್ಯಾಂಪ್ಕೊ ತನ್ನ ಬಂಡವಾಳ ಹೆಚ್ಚಿಸಿಕೊಂಡು ಇನ್ನಷ್ಟು ಕೃಷಿ ಆಧಾರಿತ, ಮೌಲ್ಯವರ್ಧಿತ ಉದ್ದಿಮೆಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕಿದೆ. ಅದಕ್ಕಾಗಿ ಬೆಳೆಗಾರರು ಇನ್ನಷ್ಟು ಕ್ಯಾಂಪ್ಕೊದ ಜೊತೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳಬೇಕು. ತಮ್ಮ ಉತ್ಪನ್ನಗಳಿಗೆ ಅದುವೆ ಮಾರುಕಟ್ಟೆಯಾಗಬೇಕು. ತನ್ನ ಕಳೆದ ಐವತ್ತು ವರ್ಷಗಳ ಸಾಧನೆಯಲ್ಲಿ ಕ್ಯಾಂಪ್ಕೊ ಬೆಳೆಗಾರರ ನಿಕಟತೆಯನ್ನು ಗಾಡವಾಗಿಸಿದೆ. ಇದು ಇನ್ನಷ್ಟು ಆತ್ಮೀಯವಾಗಿ ಬೆಳೆಯುವ ಅವಕಾಶವಿದೆ. ಅದನ್ನು ಬಳಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯುವ ಉತ್ಸಾಹವನ್ನು ಮೈಗೂಡಿಸಿಕೊಳ್ಳಬೇಕು. ಅದು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ.
▪ ಕ್ಯಾಂಪ್ಕೊ ಇದ್ದಕ್ಕಿದ್ದಂತೆ ಬೃಹತ್ತಾಗಿ ಬೆಳೆಯಲಿಲ್ಲ. ವಾರಣಾಶಿ ಸುಬ್ರಾಯ ಭಟ್ಟರ ನಂತರ ಬಂದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗು ಅನೇಕ ಸಿಬ್ಬಂದಿಗಳು, ಅಧಿಕಾರಿಗಳು ಕ್ಯಾಂಪ್ಕೊವನ್ನು ಹಂತ ಹಂತವಾಗಿ ಬೆಳೆಸಿದರು. ಈಗ ಅದರ ಹಿಂದೆ ಒಂದು ಲಕ್ಷದ ಹದಿಮೂರು ಸಾವಿರಕ್ಕೂ ಮಿಕ್ಕಿದ ಬೆಳೆಗಾರ ಸದಸ್ಯರ ಬಹುಬಲವಿದೆ.
▪ ಬೆಳೆಗಾರರು ಅವರದ್ದೆ ಆದ ಕ್ಯಾಂಪ್ಕೊವನ್ನು ಕಟ್ಟಿಬೆಳೆಸಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಹಗಲಿರುಳು ದುಡಿದಿದ್ದಾರೆ. ಸಿಬ್ಬಂದಿಗಳುಸಂಸ್ಥೆಯನ್ನು ಅನ್ನ ನೀಡುವ ತಾಯಿಯೆಂದು ಗೌರವದಿಂದ ಕಂಡಿದ್ದಾರೆ. ಅವರ ಶ್ರಮ ಸಂಸ್ಥೆಯ ದಿಕ್ಕುದೆಸೆಗಳನ್ನು ಪರಿಪೂರ್ಣತೆಯತ್ತ ಮುನ್ನಡೆಸಿದೆ. ತಿರುಗುವ ಕುರ್ಚಿಗಳಿಲ್ಲದ ಆ ದಿನಗಳಲ್ಲಿ ಅವರು ಗೋಣಿಚೀಲದ ಮೇಲೆ ಕುಳಿತು ಲೆಕ್ಕಪತ್ರ ಬರೆದಿದ್ದಾರೆ. ನಾಲ್ಕು ಜನ ನಿರ್ವಹಿಸುವ ಕೆಲಸವನ್ನು ಒಬ್ಬರೆ ಹೆಗಲುಕೊಟ್ಟು ಮುಗಿಸಿದ್ದಾರೆ. ಹೊರಗಿನ ಮಾರುಕಟ್ಟೆಯತ್ತ ನೋಡದೆ ನೇರವಾಗಿ ಕ್ಯಾಂಪ್ಕೊ ಜೊತೆ ಗುರುತಿಸಿಕೊಂಡು ಒಂದಡಿಕೆಯನ್ನೂ ಹೊರಗೆ ಕೊಡದ ಅನೇಕ ಸದಸ್ಯ ಬೆಳೆಗಾರರಿದ್ದಾರೆ. ಅವರೇ ಕ್ಯಾಂಪ್ಕೊದ ಆಧಾರ ಸ್ಥಂಭಗಳು. ಧಾರಣೆ ಏರಲಿ ಇಳಿಯಲಿ ನಮಗೆ ಕ್ಯಾಂಪ್ಕೊ ಬೇಕು. ನಮ್ಮ ಅಡಿಕೆಗೆ ಮಾನತಂದುಕೊಟ್ಟ ಕ್ಯಾಂಪ್ಕೊವನ್ನು ಮರೆಯುವುದುಂಟೆ ಎಂದು ಯಾವತ್ತೂ ಸಮರ್ಥಿಸುವ ಧೀಮಂತ ಬೆಳೆಗಾರರೆ ಕ್ಯಾಂಪ್ಕೊದ ನಿಜವಾದ ಆಸ್ತಿ. ಅವರೆ ಕ್ಯಾಂಪ್ಕೊವನ್ನು ಕೈಹಿಡಿದು ಮೆಟ್ಟಲಿನಿಂದ ಮೆಟ್ಟಲಿಗೆ ಹತ್ತಿಸಿದವರು. ಹೊಸ ಭರವಸೆಗಳು, ಹೊಸ ಉತ್ಸಾಹಗಳು ಮತ್ತು ಹೊಸತನಗಳು ಬೆಳೆದೆದ್ದು ನಿಲ್ಲಲು ಹುರುಪು ತುಂಬಿದವರು.
ಶಂ.ನಾ.ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ