“ಕನಸುಗಳೆ ಹೊಸ ಹಾದಿಗೆ ಬೆಳಕು”
ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯನ್ನು ಮುಟ್ಟಬಲ್ಲಂತಹ, ಅವನ ನೋವು ನಲಿವುಗಳಿಗೆ ಜವಾಬ್ದಾರಿಯಿಂದ ಸಮರ್ಪಕ ವ್ಯವಸ್ಥೆ ರೂಪಿಸಬಲ್ಲಂತಹ ಕ್ಷೇತ್ರವೆ ಸಹಕಾರಿ ಕ್ಷೆತ್ರ. ಭಾರತದ ಭವಿತವ್ಯ ನಿಂತಿರುವುದೇ ಸಹಕಾರಿ ಕ್ಷೇತ್ರದಲ್ಲಿ. ಅದನ್ನು ಬಲಿಷ್ಠಗೊಳಿಸುವ, ಹೊಸ ದಾರಿ ಹೊಸ ಹಜ್ಜೆಗಳನ್ನು ಗುರುತಿಸಿಕೊಂಡು ಸುಸೂತ್ರವಾಗಿ ಮುನ್ನಡೆಸುವ ಕಾರ್ಯ ಸಹಕಾರಿ ಕ್ಷೇತ್ರದಲ್ಲಿರುವ ಸಕ್ರಿಯ ಸಹಕಾರಿಗಳು ಮಾಡಬೇಕು. ಅದೆ ಹಳೆಯ ಹಾದಿಯನ್ನು ನಡೆದು ಸವೆಸಿದ್ದು ಸಾಕು, ಹೊಸ ದಾರಿಯಲ್ಲಿ ಕವಲು ದಾರಿಗಳನ್ನು ಹುಡುಕಿ ಮುನ್ನಡೆದರೂ ಅಡ್ಡಿಯಿಲ್ಲ ನೀವು ನಡೆದ ಹಾದಿ ಸಮಾಜೋನ್ನತಿಗೆ, ಭಾರತದ ಸರ್ವ ಸಂಪನ್ನತೆಗೆ ಕೊಡುಗೆ ನೀಡಲಿ. ಅದಕ್ಕಾಗಿ ನಿತ್ಯ ಮಹಾತ್ವಾಕಾಂಕ್ಷೆಯ ಹೊಸ ಹೊಸ ಕನಸು ಕಾಣಬೇಕು.
ಮುಖ್ಯವಾಗಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು ಹಾಗು ಸದಸ್ಯರು ಕನಸು ಕಾಣುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ನೀವು ನಾವೆಲ್ಲ ಕನಸು ಕಾಣುವುದೇ ಸಹಕಾರಿ ರಂಗದ ಹೊಸ ಹಾದಿಗೆ ಬೆಳಕು. ಒಂದು ಸಂಸ್ಥೆಯ ಒಳಹೊಕ್ಕ ನಿರ್ದೇಶಕ ತನ್ನ ಸಂಸ್ಥೆಯ ಮೂಲಕ ಸದಸ್ಯರಿಗೆ ತನ್ನ ಸಂಸ್ಥೆಯಲ್ಲಿ ಇದುವರೆಗೆ ಇರದಿದ್ದ ಹೊಸತೇನಾದರೂ ಕೊಡಬೇಕೆಂಬ ತುಡಿತ ಹೊಂದಿರಬೇಕು. ಇಂತಹ ತುಡಿತ ಹೊಂದಿದ, ನಿತ್ಯ ಕನಸು ಕಂಡ ಅನೇಕ ಸಹಕಾರಿಗಳು ಅನೇಕ ಸಹಕಾರಿ ಸಂಸ್ಥೆಗಳನ್ನು ಮಾದರಿಯಾಗಿ ಕಟ್ಟಿ ಬೆಳೆಸಿದ್ದಾರೆ, ಸಮಾಜಕ್ಕೆ ಒಂದು ಅಭಿವೃದ್ಧಿಯ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಒಬ್ಬ ನಿರ್ದೇಶಕ ಕನಸು ಕಂಡರೆ ಸಾಲದು ಆಡಳಿತ ಮಂಡಳಿಯ ಇನ್ನುಳಿದ
ನಿರ್ದೇಶಕರಿಗೂ ಕನಸು ಕಾಣಲು ಪ್ರೇರಣೆ ನೀಡಬೇಕು. ಆಗ ಕನಸಿಗೊಂದು ಮೂರ್ತ ರೂಪ ಕೊಡಲು ಸಾಧ್ಯ. ಈ ಕನಸುಗಳನ್ನು ನನಸು ಮಾಡುವ ಹಂತಕ್ಕೆ ಸಿಬ್ಬಂದಿಗಳು ಹೆಗಲಾಗಬೇಕು. ಅದು ಅವರ ದೊಡ್ಡ ಜವಾಬ್ದಾರಿ. ನಮ್ಮ ಪರಿಸರದ ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಕನಸು
ಕಾಣದಿರುವುದರ ಫಲಶ್ರುತಿ ನಮ್ಮ ಗಮನಕ್ಕೆ ಬರುತ್ತವೆ. ಒಂದೆರಡು ನಿರ್ದೇಶಕರು ಕಂಡ ಕನಸುಗಳಿಗೆ, ಅವರು ತೋರಿದ ಹೊಸ ಹಾದಿಗೆ ಉಳಿದವರು ಸೊಪ್ಪೂಹಾಕದೆ ಕನಸುಗಳೆಲ್ಲ ಕಮರಿ ಹೋಗುವುದಿದೆ. ಆಡಳಿತ ಮಂಡಳಿ ಕನಸುಗಳಿಗೊಂದು ಕಲ್ಪನೆಯ ರೂಪಕೊಟ್ಟು ಬೆಳೆಸಿದರೆ
ಅದಕ್ಕೆ ಸಿಬ್ಬಂದಿಗಳ ಅಸಹಕಾರ ಮುಳುವಾಗುವುದಿದೆ.
ಕೆಲವು ಪ್ರಾಥಮಿಕ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು ತನ್ನ ಸುತ್ತ ಮುತ್ತ ಇರುವ ಅನೇಕ ಸಹಕಾರಿ ಸಂಘಗಳು ಇನ್ನೂ ಯೋಚನೆಯೇ ಮಾಡದ ಕಾರ್ಯಕುಶಲತೆಗಳನ್ನು ಮೈಗೂಡಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದರ ಒಳ ಹೊಕ್ಕು ನೋಡಿದರೆ ಅಲ್ಲಿಯ ಪರಸ್ಪರ ಸಹಕಾರ ಖುಷಿ ಕೊಡುತ್ತದೆ. ಆಡಳಿತ ಮಂಡಳಿ, ಸಿಬ್ಬಂದಿ ಹಾಗು ಸದಸ್ಯರು
ಜೊತೆಯಾಗಿ ಮುನ್ನಡೆದು ತಮ್ಮ ಸಂಘವನ್ನು ಔನ್ನತ್ಯದ ಶಿಖರದೆಡೆಗೆ ಒಯ್ಯಲು ಕಾರಣೀಭೂತರಾಗಿರುತ್ತಾರೆ. ಕೇವಲ ವರ್ಷಕ್ಕೊಮ್ಮೆ ಸಾಮಾನ್ಯ ಸಭೆಯಲ್ಲಿ ಇಂತಹ ಸಹಕಾರಿ ಸಂಘಗಳು ಸದಸ್ಯರಿಗೆ ಮುಖಾಮುಖಿಯಾಗುವುದಲ್ಲ. ಆಗಾಗ ಸದಸ್ಯ ಸಂಪರ್ಕ ಸಭೆಗಳನ್ನು ಕರೆದು ಕಂಡ ಕನಸುಗಳನ್ನೆಲ್ಲ ಜೊತೆಯಾಗಿ ಹರಡಿ ಅವುಗಳಲ್ಲಿ ನನಸಾಗುವ ಕನಸುಗಳನ್ನು ಪಟ್ಟಿಮಾಡಿ ಎಲ್ಲರೂ ಅದನ್ನು ಕಾರ್ಯಸಾಧುವಾಗಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಾರೆ. ಇದು ಈಗಿನ ಸಹಕಾರಿ ಕ್ಷೇತ್ರಕ್ಕೆ ಬೇಕಾದ ಮೋಡೆಲ್.
ಸಂಪರ್ಕಕ್ಕೆ ಹೊಸತನ ತರಲಿ:
ಸದಸ್ಯರ ಜೊತೆ ಸಹಕಾರಿ ಸಂಸ್ಥೆಗಳು ಸಂಪರ್ಕ ನಿತ್ಯ ನೂತನವಾಗಿರಬೇಕು. ಸಹಕಾರಿ ಸಂಸ್ಥೆಯಲ್ಲಿ ಕಾರ್ಯಗಳಿದ್ದರೆ ಮಾತ್ರ ಸದಸ್ಯನಿಗೆ ತನ್ನ ಸಂಘ ನೆನಪಾದರೆ ಸಾಲದು. ತನ್ನ ಸಮಾಜವನ್ನು ಉನ್ನತಿಯೆಡೆಗೆ ಒಯ್ಯಲು ನನ್ನ ಹೆಗಲೂ ಜೊತೆಯಾಗಲಿ ಎಂಬ ಮನೋಭಾವ ಸಾಕ್ಷಾತ್ಕರಿಸಲು ಪರಸ್ಪರ ಸಂಪರ್ಕಗಳು ಸದಾ ಬೇಕು. ಆಧುನಿಕ ಯುಗದಲ್ಲಿ ಸಂಪರ್ಕ
ವ್ಯವಸ್ಥೆಗಳು ಬಲಾಢ್ಯವಾಗಿರುವಾಗ ಸಂಪರ್ಕದ್ದು ಸಮಸ್ಯೆಯೇ ಅಲ್ಲ. ಅದಕ್ಕೊಂದು ಮನಸ್ಸು
ಬೇಕು. ಆ ಮನಸ್ಸು ರೂಪುಗೊಳ್ಳುವುದು ಆಡಳಿತ ಮಂಡಳಿಯ ಚುರುಕುತನದಿಂದಲೆ.
ಸದಸ್ಯರ ಪ್ರತಿ ಮನೆಯ ಒಬ್ಬ ಸದಸ್ಯ ಒಳಗೊಳ್ಳುವಂತೆ ವಾಟ್ಸಪ್ ಗುಂಪುಗಳನ್ನು ಮಾಡಿಕೊಳ್ಳಬೇಕು. ಆಡಳಿತ ಮಂಡಳಿ, ಸಿಬ್ಬಂದಿ ಹಾಗು ಸದಸ್ಯರ ಭಾಗದಿಂದ ಒಬ್ಬೊಬ್ಬ ಅದರ ಅಡ್ಮಿನ್ ಆದರೆ ಸಾಕು. ಸಹಕಾರಿ ಸಂಘದ ಕಾರ್ಯಕ್ರಮಗಳು. ತಾವು ಕಂಡ ಕನಸುಗಳು ಎಲ್ಲ ಅದರಲ್ಲಿ ಪ್ರಸಾರವಾಗಲಿ. ಸದಸ್ಯರೂ ಸಹಕಾರಿ ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡುದನ್ನೆಲ್ಲ ದಾಖಲಿಸಲಿ.
ಇಲ್ಲಿ ವ್ಯಕ್ತಿ ಪ್ರತಿಷ್ಠೆ ಬೇಡ, ಮೇಲು ಕೀಳು ಭಾವನೆ ಬೇಡ, ಇನ್ನೊಬ್ಬ ಕಂಡ ಅಭಿವೃದ್ಧಿಯ ಕನಸನ್ನು ತಾತ್ಸಾರ ಮಾಡುವ ಕುಹಕಮಾಡುವ ಮನಸ್ಥಿತಿ ಬೇಡ. ಪ್ರತಿ ಮೂರು
ತಿಂಗಳಿಗೊಮ್ಮೆ ತಾವು ವಾಟ್ಸಪ್ ಗುಂಪುಗಳಲ್ಲಿ ಚರ್ಚಿಸಿದ ವಿಷಯಗಳ ಚಿಂತನ ಮಂಥನ ನಡೆಯಲಿ.
ಒಂದು ಸಣ್ಣ ಗುಂಪು ಮೊದಲು ಚಿಂತನೆಗೆ ತೆರೆದಿಡುವ ವಿಷಯಗಳನ್ನು ಹೆಕ್ಕಿ ಅದನ್ನು ಮತ್ತೆ ಸದಸ್ಯರ ಗಮನಕ್ಕೆ ತಂದು ಕಾರ್ಯಯೋಜನೆಗಳನ್ನು ರೂಪಿಸಿಕೊಂಡರೆ ಕನಸು
ಕಂಡುದಾದರೂ ಸಾರ್ಥವಾಗಬಹುದು.
ನಮ್ಮ ನಾಳೆಗಳು ನೆಮ್ಮದಿಯನ್ನು ನೀಡಬೇಕಾದರೆ, ನಾವೆಲ್ಲ ಸಮಾಜದಲ್ಲಿ ಪರಸ್ಪರ ಸಹಕಾರದಿಂದ ಕೂಡಿ ಬಾಳಬೇಕಾದರೆ, ಸ್ವಾಭಿಮಾನ, ಆತ್ಮಾಭಿಮಾನ ಉಳಿಸ ಬೇಕಾದರೆ ಪ್ರತಿಯೊಬ್ಬನೂ ಸ್ವಾವಲಂಬನೆಯೆಡೆಗೆ ಮುಖಮಾಡಬೇಕು. ಇದನ್ನು ಸಾಕಾರಗೊಳಿಸುವ ಸಮರ್ಥ
ಕ್ಷೇತ್ರ ಸಹಕಾರಿ ಕ್ಷೇತ್ರ. ಆದ್ದರಿಂದ ಸಹಕಾರಿಗಳು ಅಭಿವೃದ್ಧಿ ಕನಸುಗಳನ್ನು ಕಾಣುವುದರ ಮೂಲಕ ತಮ್ಮ ಸಮಾಜದ ಭವಿತವ್ಯದ ಔನ್ನತ್ಯ ಸಾಧಿಸುವುದರ ಜೊತೆ ಜೊತೆಗೆ
ರಾಷ್ಟçದೋನ್ನತಿಗೂ ಹೆಗಲಾಗಬೇಕಾದ ಅನಿವಾರ್ಯತೆ ಮೈಗೂಡಿಸಿಕೊಳ್ಳುವುದು ಅಗತ್ಯ.
ಶಂ. ನಾ. ಖಂಡಿಗೆ.
‘ಶ್ಯಾಮಕೃಪಾ’ ನಾಗೋಡಿ
ಅಂಚೆ: ಪೆರ್ಲ – ೬೭೧೫೫೨
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ.