ಸಹಕಾರಿ ಸಂಘಗಳಿಗೆ ಸಾಲ ಕೊಡುವುದು ಮತ್ತು ಸಾಲ ವಸೂಲಾತಿ ಕಾರ್ಯ ಹೆಚ್ಚು ಮಹತ್ವದ್ದು. ಸಾಮಾನ್ಯವಾಗಿ ಸಂಘದ ಉನ್ನತಿ ಅಥವ ಅವನತಿ ನಿರ್ಧಾರವಾಗುವುದು ಈ ಪ್ರಕ್ರಿಯೆಯ ಮೇಲೆ. ಸಾಲ ಕೊಟ್ಟು ವಸೂಲಾಗಲು ದೊಡ್ದ ಪ್ರಮಾಣದಲ್ಲಿ ಬಾಕಿ ಇದ್ದರೆ ಆ ಸಂಘದ ಹೆಸರಿನ ಕೆಳಗೆ ಕೆಂಪು ಗೆರೆ ಎಳೆಯುವುದು ಅನಿವಾರ್ಯ. ಅದೇ ರೀತಿ ಕೊಟ್ಟ ಸಾಲದ ಮರುಪಾವತಿ ತೃಪ್ತಿಕರವಾಗಿ ಇದ್ದರೆ ಆಗ ಸಹಕಾರಿ ಸಂಘದ ಬಗ್ಗೆ ಸದಸ್ಯರಿಗೆ ತೃಪ್ತಿ. ನೀಡಿದ ಸಾಲ ನೂರಕ್ಕೆ ನೂರು ಮರುಪಾವತಿ ಆಗಿದೆ ಎಂದರೆ ಅದು ನಿಜವಾದ ಸಾಧನೆ.
ಪ್ರಕ್ರಿಯೆಯ ನಡೆ
ಈ ಸಾಧನೆ ಮಾಡಬೇಕಾದರೆ ಸದಸ್ಯರು, ಆಡಳಿತ ಮಂಡಳಿ ಹಾಗು ಸಿಬ್ಬಂದಿಗಳ ಸಂಬಂಧ ಬಹಳ ಅನ್ಯೋನ್ಯವಾಗಿರಬೇಕು. ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸದಸ್ಯ ತನಗೆ ಅಗತ್ಯ ಇರುವಷ್ಟು ಸಾಲ ಪಡೆಯುವ ಮನಸ್ಸು ಮಾಡುವುದಲ್ಲ. ಸಾಲ ಪಡೆದುಕೊಂಡದ್ದನ್ನು ಕಾಲಕಾಲಕ್ಕೆ ಸಂದಾಯ ಮಾಡಲು ತನಗೆ ಸಾಮರ್ಥ್ಯ ಇದೆ ಎಂದು ತೀರ್ಮಾನಿಸಿ ಅಷ್ಟೇ ಮೊತ್ತದ ಸಾಲಕ್ಕೆ ಅರ್ಜಿ ಹಾಕುವುದು ಸರಿಯಾದ ಕ್ರಮ. ಹಾಗೆಯೇ ಸಲ್ಲಿಕೆಯಾದ ಸಾಲದ ಅರ್ಜಿಯ ಬಗ್ಗೆ ನಿಷ್ಪಕ್ಷಪಾತ ದೃಷ್ಟಿಯಿಂದ ಕೂಲಂಕುಶವಾಗಿ ಪರಿಶೀಲಿಸಿ, ವಿವೇಚಿಸಿ ಸಾಲಮರುಪಾವತಿ ದಾರಿಗಳನ್ನು ಗಮನಿಸಿಕೊಂಡು ಸಾಲ ನೀಡಲು ಆಡಳಿತ ಮಂಡಳಿಗೆ ಶಿಫಾರಸು ಮಾಡುವುದು ಚೊಕ್ಕ ಕ್ರಮ. ಸಾಲ ಕೇಳಿದವರಿಗೆ ನೀಡುವ ಜವಾಬ್ದಾರಿ ಆಡಳಿತ ಮಂಡಳಿಯದ್ದು. ರಾಶಿ ರಾಶಿ ಅರ್ಜಿ ತಿಂಗಳಿಗೊಮ್ಮೆ ನಡೆಯುವ ಆಡಳಿತ ಮಂಡಳಿ ಸಭೆಗೆ ಬಂತೆಂದು ಮೇಲಿಂದ ಮೇಲೆ ನೋಡಿ ಅಸ್ತು ಅನ್ನುವುದು ಸರಿಯಾದ ಕ್ರಮವಲ್ಲ. ಈ ಪ್ರಕ್ರಿಯೆಗಳೆಲ್ಲ ಸಹಕಾರಿ ಸಂಘವನ್ನು ಉಳಿಸುವ ಹಾದಿ ತಪ್ಪಿದರೆ ಅಳಿಸುವ ಅಪಾಯವನ್ನು ಹೊಂದಿರುವುದರಿಂದ ಜಾಗ್ರತೆ ವಹಿಸಿದಷ್ಟು ಅನುಕೂಲ. ಸಾಲಗಾರನ ಅರ್ಜಿಯಲ್ಲಿರುವ ಎರಡು ಜಾಮೀನುಗಾರರ ಬಗ್ಗೆಯೂ ಸಾಲ ಕೊಡುವಾಗ ಅರಿವಿರಬೇಕು. ಸಾಲಗಾರ ಮರುಪಾವತಿ ಮಾಡುವಲ್ಲಿ ವಿಫಲನಾದಾಗ ಜಾಮೀನುದಾರರು ಅದನ್ನು ಕಟ್ಟುವ ಸಾಮರ್ಥ್ಯ ಹೊಂದಿದ್ದಾರೊ ಎಂಬುದು ಗಮನದಲ್ಲಿರಬೇಕು. ಎಷ್ಟು ಸಣ್ನ ಮೊತ್ತದ ಸಾಲವಾದರೂ ಸಾಲಗಾರನ ಕುಟುಂಬ ಸದಸ್ಯರನ್ನು ಜಾಮೀನೆಂದು ಪರಿಗಣಿಸದೆ ಇರುವುದು ಜಾಣತನ. ಎರಡು ಜಾಮೀನುದಾರರು ಹೊರಗಿನವರಾದರೆ ಕ್ಷೇಮ. ಪ್ರತಿಯೊಂದು ಅರ್ಜಿಯನ್ನು ಸಮಾಧಾನದಿಂದ ಗಮನಿಸಿದ ನಂತರವೆ ಶಿಫಾರಸು ಮಾಡಬೇಕು. ಅಧ್ಯಕ್ಷನಾದವ ಯಾರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೊ ಆ ಭಾಗದಿಂದ ಬಂದಿರುವ ನಿರ್ದೇಶಕರ ಸಲಹೆ ಕೇಳಬಹುದು.
ಜವಾಬ್ದಾರಿಗೆ ಹೆಗಲಾಗಬೇಕು
ಮೊದಲನೆಯದಾಗಿ ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದರೆ ತಿಂಗಳಿಗೆ ಎರಡು ಸಲ ಆಡಳಿತ ಮಂಡಳಿ ಸಭೆ ಸೇರಬಹುದು. ಅಥವ ಸರ್ಕು್ಯಲೇಟರಿ ಮೀಟೀಂಗ್ ಕರೆಯಬಹುದು. ಪ್ರತಿಯೊಂದು ಆಡಳಿತ ಮಂಡಳಿ ಸಭೆಯಲ್ಲಿ ನೀಡಲು ಸಮ್ಮತಿಸಿದ ಸಾಲಗಳನ್ನು ಸರಿಯಾದ ಸಮಯಕ್ಕೆ ಕಂತು ಕಟ್ಟಿ ಮುಗಿಸುವಂತೆ ಸಾಲಪಡೆದವರಿಗೆ ನೆನಪಿಸುವ ಮತ್ತು ಕ್ಲಪ್ತ ಸಮಯಕ್ಕೆ ಸಾಲಮರುಪಾವತಿ ಮಾಡುವಂತೆ ಗಮನಿಸುವ ಜವಾಬ್ದಾರಿಯನ್ನು ಸಾಲ ಪಡೆಯುವ ಸದಸ್ಯರ ವ್ಯಾಪ್ತಿಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಒಬ್ಬ ಸಿಬ್ಬಂದಿ ವರ್ಗದವರಿಗೆ ಹಂಚಿಕೊಟ್ಟರೆ ಅನುಕೂಲ. ಪ್ರತಿ ತಿಂಗಳ ಸಭೆಯಲ್ಲಿ ಅಥವ ಅದಕ್ಕಾಗಿಯೇ ಆಡಳಿತ ಮಂಡಳಿಯ ಸಭೆ ಕರೆದು ಅಲ್ಲಿ ಸಾಲ ಮರುಪಾವತಿಯಲ್ಲಿನ ಪ್ರಗತಿಯ ವಿಮರ್ಶೆಯಾಗಲಿ. ಎಲ್ಲರೂ ತಮ್ಮ ಹೆಗಲ ಮೇಲೆ ಜವಾಬ್ದಾರಿಯಿದೆಯೆಂದು ಅರಿತುಕೊಂಡಾಗ ಕಾರ್ಯಗಳೆಲ್ಲ ಸುಲಭ.
ಮರ್ಯಾದೆಗೆ ಒತ್ತು
ಸಾಲ ವಸೂಲಾತಿಯೆಂಬುದು ಒಂದು ಕಲೆ. ಸಾಲಗಾರ ಸದಸ್ಯನನ್ನು ಮೊದಲ ಸಲವೇ ಜಬರ್ದಸ್ತಿನಿಂದ, ಆವೇಶಭರಿತರಾಗಿ ಹೋಗಿ ಜೋರುಮಾಡುವ ಅನೇಕ ಸಿಬ್ಬಂದಿಗಳನ್ನು ಗಮನಿಸಿದ್ದೇನೆ. ಇದು ಸರಿಯಾದ ಕ್ರಮ ಅಲ್ಲ. ಸಹಕಾರಿ ಸಂಘದಿಂದ ಕೊಟ್ಟ ಸಾಲ ಮರುಪಾವತಿ ಮಾಡಬೇಕಾದುದು ಸಿಬ್ಬಂದಿಗಳ ಜವಾಬ್ದಾರಿ ಎಂಬುದು ಸರಿ. ಆದರೆ ಅದು ಸಮಾಧಾನದ ನಡೆಯ ಮೂಲಕ ಮುನ್ನಡೆಯಬೇಕು. ಇಲ್ಲಿ ಸಂಬಂಧಗಳು ಹಾಳಾಗಬಾರದು. ಸಾಲ ಸಮಯಕ್ಕೆ ಸರಿಯಾಗಿ ಪಾವತಿಸದೆ ಕಂತುಗಳು ಬಾಕಿಯಾದರೆ ಅದುವೇ ಬೃಹತ್ತಾಗಿ ಬೆಳೆಯುತ್ತದೆ ಎಂಬುದನ್ನು ಸಾಲಗಾರ ಸದಸ್ಯರ ಗಮನಕ್ಕೆ ತರಬೇಕು. ನೀವು ಸಾಲದ ಕಂತುಗಳನ್ನು ಕಟ್ಟದಿದ್ದರೆ ನಾವು ಇನ್ನೊಬ್ಬ ನಿಮ್ಮದೇ ರೀತಿಯಲ್ಲಿ ಸಾಲ ಅಗತ್ಯ ಇರುವವರಿಗೆ ಕೊಡಲು ಹಣ ರೂಢಿಗೆಯಾಗುವುದಿಲ್ಲ ಎಂಬುದನ್ನು ಒತ್ತಿ ಹೇಳಬೇಕಾಗಬಹುದು. ಕಟ್ಟದಿದ್ದರೆ ಕೋರ್ಟಿಗೆ ಹೋಗುವುದು, ಪತ್ರಿಕೆಯಲ್ಲಿ ಹೆಸರು ಬರುವುದು ಇವನ್ನೆಲ್ಲ ಅಗತ್ಯ ಬಿದ್ದರೆ ಅಲ್ಲಿ ಪ್ರಸ್ತಾವಿಸಬಹುದು. ಸಾಲಗಾರನ ಚರ್ಯೆ, ಮರ್ಜಿಗಳನ್ನು ನೋಡಿಕೊಂಡು ಅಸ್ತ ಪ್ರಯೋಗಗಳಾಗಬೇಕು. ಸಾಲಗಾರ ಉದಾಶೀನ ಮಾಡಿ ಮತ್ತೂ ಕಂತುಕಟ್ಟಲು ಹಿಂದಡಿಯಿಡುತ್ತಿದ್ದರೆ ನಿರಂತರ ಬೇರೆ ಬೇರೆ ರೀತಿಯಲ್ಲಿ ಅವರ ಸಂಪರ್ಕ ಸಾಧಿಸಿ ವಸೂಲು ಮಾಡಬಹುದು. ಉಪದ್ರ ತಡೆಯುವುದಿಲ್ಲ ಎಂದು ಕೆಲವರು ಮರುಪಾವತಿ ಮಾಡುವುದು ಇದೆ.
ಸಾಲಗಾರನ ನಡವಳಿಕೆ
ಸಾಲ ಕೇಳುವಾಗ ಸಾಲಗಾರ ನಯ ವಿನಯದಿಂದ ಸಿಬ್ಬಂದಿಗಳಲ್ಲಿ, ಆಡಳಿತ ಮಂಡಳಿಯವರಲ್ಲಿ ವರ್ತಿಸುತ್ತಾನೆ. ಸಾಲದ ಅಗತ್ಯದ ಬಗ್ಗೆ ಮನವರಿಕೆ ಮಾಡುತ್ತಾನೆ. ಆದರೆ ಕೆಲವರು ಕಾಲ ಕಾಲಕ್ಕೆ ಮರುಪಾವತಿ ಮಾಡುವಲ್ಲಿ ಸೋಲುತ್ತಾರೆ. ಉದ್ಧಟತನದಿಂದ ವರ್ತಿಸುತ್ತಾರೆ. ಸಾಲ ಮರುಪಾವತಿ ಮಾಡಿದರೆ ಇನ್ನೊಬ್ಬರಿಗೆ ಸಾಲ ಕೊಡಲು, ಸಿಬ್ಬಂದಿಗಳ ವೇತನಕ್ಕೆ ಹಣ ಹುಟ್ಟುತ್ತದೆ ಎಂಬುದು ಎಷ್ಟು ಹೇಳಿದರೂ ಅವರ ಗಮನಕ್ಕೆ ಬರುವುದಿಲ್ಲ. ಇಂತಹ ಸಂದರ್ಭ ಬಂದಾಗ ಕೆಲವೊಮ್ಮೆ ಹಳೆಯ ಸಿಬ್ಬಂದಿಗಳಲ್ಲಿ, ಗಣ್ಯ ವ್ಯಕ್ತಿಗಳಲ್ಲಿ ಸಾಲಗಾರರಿಗೆ ಹೇಳಿಸಬೇಕಾಗಿ ಬರುತ್ತದೆ. ಜಾಮೀನು ನಿಂತವರ ಮೇಲೆ ಒತ್ತಡ ತರುವುದು, ಅವರಿಂದ ಒಂದೆರಡು ಕಂತುಗಳನ್ನು ಕಟ್ಟಿಸುವುದು ಮುಂತಾದ ತಂತ್ರಗಾರಿಕೆ ಅಲ್ಲಿ ಬೇಕಾಗಿ ಬರಬಹುದು. ಒಟ್ಟಿನಲ್ಲಿ ಸಹಕಾರಿ ಸಂಘಗಳು ನೀಡುವ ಸಾಲಗಳ ಮರುಪಾವತಿಯಲ್ಲಿ ನಾಜೂಕುತನ ಇರಲೇಬೇಕು. ಸಾಮ, ದಾನ, ಬೇಧ ಮತ್ತು ದಂಡೋಪಾಯಗಳು ಕೆಲವೊಮ್ಮೆ ಅನಿವಾರ್ಯವಾಗುವುದುಂಟು. ಸಹಕಾರಿ ಸಂಘದ ಭವಿಷ್ಯದ ದೃಷ್ಟಿಯಿಂದ ಯಾವುದು ಬೇಕೊ ಅದನ್ನು ಕಾಲಕಾಲಕ್ಕೆ ವಿಮರ್ಶಿಸಿಕೊಂಡು ಅಳವಡಿಸುವುದು ವಿಹಿತ. ಇಲ್ಲದೆ ಹೋದರೆ ಉಳಿದ ಸಹಕಾರಿ ಸಂಘಗಳು ಅನ್ಯಾನ್ಯ ಚಟುವಟಿಕೆಗಳಲ್ಲಿ ಹೊಸ ಹಾದಿ ಹೊಸ ಹಜ್ಜೆಯನ್ನಿಟ್ಟು ಮುನ್ನಡೆದಾಗ ನಾವು ನಿಂತಲ್ಲಿಯೇ ಕುಣಿಯಬೇಕಷ್ಟೆ.
ಶಂ. ನಾ. ಖಂಡಿಗೆ
ಶ್ಯಾಮ ಕೃಪಾ ನಾಗೋಡಿ
ಅಂಚೆ: ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ.