ಜುಲೈ 1 : ಅಂತಾರಾಷ್ಟ್ರೀಯ ಸಹಕಾರ ದಿನ| ಡಾ. ಎಸ್ ಆರ್ ಹರೀಶ್ ಆಚಾರ್ಯ

   

ಜುಲೈ 1 ರಂದು ಇಡಿ ವಿಶ್ವ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸುತ್ತಿದೆ. ‘ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿಗಳು’ (Cooperatives for Sustainable Development) ಎಂಬ ಘೋಷ ವಾಕ್ಯದೊಂದಿಗೆ ಸಹಕಾರದ ಮೌಲ್ಯಗಳು ಹಾಗೂ ಸಹಕಾರ ತತ್ವಗಳಿಂದ ಕೂಡಿದ ಸಹಕಾರೀ ವಿಧಾನವು ಹೇಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುತ್ತದೆ ಎಂಬುದರ ಬಗ್ಗೆ ಈ ಬಾರಿಯ ಅಂತರಾಷ್ಟ್ರೀಯ ಸಹಕಾರ ದಿನದ ಆಚರಣೆಯು ಅರಿವನ್ನು ಮೂಡಿಸುತ್ತದೆ.

ವಿಶ್ವಸಂಸ್ಥೆಯು ಅಧಿಕೃತವಾಗಿ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲು ಪ್ರಾರಂಭವಾದ ಬಳಿಕ ಇದು 29 ನೆಯ ಸಹಕಾರ ದಿನದ ಆಚರಣೆಯಾಗಿದೆ. ಆದರೆ ವಿಶ್ವದ ಸಹಕಾರಿ ವಲಯವು ಇದನ್ನು ‘101ನೆಯ ಅಂತರಾಷ್ಟ್ರೀಯ ಸಹಕಾರ ದಿನವನ್ನಾಗಿ ಗುರುತಿಸಿದೆ. ವಿಶ್ವಸಂಸ್ಥೆಯು 1995 ರಿಂದ ಪ್ರತಿ ವರ್ಷ ಜುಲೈ ತಿಂಗಳ ಮೊದಲ ಶನಿವಾರದಂದು ಅಂತರಾಷ್ಟ್ರೀಯ ಸಹಕಾರ ದಿನದ ಆಚರಣೆಯನ್ನು ಪ್ರಾರಂಭ ಮಾಡಿತು. ಇದರಿಂದ 1844 ರಲ್ಲಿ ಇಂಗ್ಲೆಂಡ್ ದೇಶದಲ್ಲಿ ಆರಂಭವಾಗಿ ವಿಶ್ವದಲ್ಲೆಡೆ ಪಸರಿಸಿರುವ ಸಹಕಾರ ಚಳುವಳಿಗೆ ವಿಶ್ವಸಂಸ್ಥೆಯು ವಿಶೇಷ ಮಹತ್ವ ಹಾಗೂ ಮಾನ್ಯತೆಯನ್ನು ನೀಡಿದಂತಾಯಿತು. ಆದರೆ 1895ರಲ್ಲಿ ಇಂಗ್ಲೆಂಡ್ ದೇಶದಲ್ಲಿ ಪ್ರಾರಂಭವಾದ ಅಂತರಾಷ್ಟ್ರೀಯ ಸಹಕಾರ ಒಕ್ಕೂಟ (International Cooperative Alliance) ವು 1923 ರಿಂದ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ಒಕ್ಕೂಟವನ್ನು ಭಾರತವೂ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಇಂಗ್ಲೆಂಡ್, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಪೋಲಾಂಡ್, ಇಟಲಿ, ಸ್ವಿಡ್ಜರ್ಲ್ಯಾಂಡ್, ಸರ್ಬಿಯಾ, ಮತ್ತು ಅಮೆರಿಕ ದೇಶಗಳ ಪ್ರತಿನಿಧಿಗಳು ಒಟ್ಟು ಸೇರಿ ಸ್ಥಾಪಿಸಿದವು.

ಅಂತರಾಷ್ಟ್ರೀಯ ಸಹಕಾರ ಒಕ್ಕೂಟ (ICA)ವು ವಿಶ್ವಾದ್ಯಂತ ಸಹಕಾರಿಗಳನ್ನು ಒಂದುಗೂಡಿಸಲು, ಪ್ರತಿನಿಧಿಸಲು ಮತ್ತು ಸೇವೆ ಸಲ್ಲಿಸಲು ಸ್ಥಾಪಿಸಲಾದ ಸರ್ಕಾರೇತರ ಸಹಕಾರಿ ಸಂಘಟನೆಯಾಗಿದೆ. ಇದು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸಹಕಾರದ ವ್ಯಾಖ್ಯಾನ, ತತ್ವ ಮತ್ತು ಅದರ ಮೌಲ್ಯಗಳ ಪರಿಪಾಲಕ ಎಂದು ಗುರುತಿಸಿಕೊಂಡಿದೆ. ಸಹಕಾರ ಒಕ್ಕೂಟವು ಬೇರೆ ಬೇರೆ ದೇಶಗಳಲ್ಲಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ತರದ ಸಹಕಾರ ಸಂಘಟನೆಗಳ ಒಕ್ಕೂಟವಾಗಿ ಅವುಗಳನ್ನು ಪ್ರತಿನಿಧಿಸುತ್ತದೆ. ಇಂದು ಈ ಒಕ್ಕೂಟವು ವಿಶ್ವದ 107 ದೇಶಗಳಲ್ಲಿರುವ 315 ಬೇರೆ ಬೇರೆ ರೀತಿಯ ಸಹಕಾರ ಸಂಘಟನೆಗಳ ಪ್ರತಿನಿಧಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಸದಸ್ಯರು ಕೃಷಿ, ಬ್ಯಾಂಕಿಂಗ್, ಗ್ರಾಹಕ, ಮೀನುಗಾರಿಕೆ, ಆರೋಗ್ಯ, ವಸತಿ, ವಿಮೆ, ಉದ್ಯಮ ಮತ್ತು ಸೇವೆಗಳನ್ನು ಒಳಗೊಂಡಂತೆ ಎಲ್ಲಾ ಸಹಕಾರ ಕ್ಷೇತ್ರಗಳ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಹಕಾರಿ ಸಂಸ್ಥೆಗಳಾಗಿವೆ. ಮತ್ತು ಇದು ವಿಶ್ವಾದ್ಯಂತ ಒಂದು ಶತಕೋಟಿ ವ್ಯಕ್ತಿಗಳನ್ನು ಪ್ರತಿನಿಧಿಸುವ ವೇದಿಕೆಯಾಗಿ ಇಂದು ಮೂಡಿ ಬಂದಿದೆ. ಒಟ್ಟಾರೆಯಾಗಿ ಇದು ಸಹಕಾರ ವ್ಯವಸ್ಥೆಯಲ್ಲಿ ಜ್ಞಾನ, ಕೌಶಲ್ಯ ಮತ್ತು ಪರಿಣತಿಯನ್ನು ಮೂಡಿಸುವ ಜಾಗತಿಕ ಧ್ವನಿ ಮತ್ತು ವೇದಿಕೆಯಾಗಿ ಇಂದು ಕಾರ್ಯ ಮಾಡುತ್ತಿದೆ.

“ಸಹಕಾರವು ಜನತೆಯ ಉದ್ಧಾರದ ಮಾರ್ಗ”.

ಸಹಕಾರವು ಸಮಾಜದ ಸುಸ್ಥಿರ ಹಾಗೂ ಸಮಗ್ರ ಬೆಳವಣಿಗೆಗೆ ಅತ್ಯಂತ ಮಹತ್ವದ ಕ್ಷೇತ್ರ. ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ, ಲಿಂಗಾತೀತವಾಗಿ ಮಾತ್ರವಲ್ಲದೆ ಯಾವುದೇ ವೈಚಾರಿಕ ಅಡೆತಡೆಯೂ ಇರದೇ ಸರ್ವರೂ ಒಳಗೊಳ್ಳಬಹುದಾದ ಒಂದು ಆದರ್ಶ ವ್ಯವಸ್ಥೆ ಇದ್ದರೆ ಅದು ಸಹಕಾರ ಕ್ಷೇತ್ರ. ಕೃಷಿ ಪ್ರಧಾನವಾದ ಉದ್ಯೋಗವನ್ನು ಹೊಂದಿರುವ ಗ್ರಾಮಗಳ ಪ್ರಾಬಲ್ಯದ ಭಾರತದಂತಹ ಜನಭರಿತ ದೇಶದಲ್ಲಿ ಇಂತಹ ಸಹಕಾರ ಚಳುವಳಿಯ ಅಗತ್ಯತೆ ಇಂದು ಅತ್ಯಂತ ತೀವ್ರವಾಗಿದೆ. ಭಾರತದ ಉದ್ದಾರವೆಂದರೆ ಗ್ರಾಮಗಳ ಉದ್ದಾರ, ಗ್ರಾಮಗಳ ಉದ್ದಾರವೆಂದರೆ ಅಲ್ಲಿ ಕೃಷಿಯನ್ನು ನೆಚ್ಚಿಕೊಂಡು ವಾಸಿಸುತ್ತಿರುವ 66% ಜನರ ಉದ್ದಾರ ಎಂಬ ಸ್ಥಿತಿ ಇರುವ ಭಾರತದಲ್ಲಿ ಯಾವುದೇ ಆರ್ಥಿಕ ಯೋಜನೆಗಳನ್ನು ಕೈಗೊಳ್ಳುವುದಿದ್ದರೂ ಅವು ಗ್ರಾಮವಾಸಿಗಳ ಆಸಕ್ತಿ ಗಳಿಗೆ ಪೂರಕವಾಗುವಂತೆ ರೂಪಿಸಬೇಕಾಗಿರುವುದು ಅವಶ್ಯಕವಾಗಿದೆ. ಬ್ರಿಟಿಷ್ ಆಳ್ವಿಕೆಯ ದಿನಗಳಿಂದಲೂ ಭಾರತದ ಗ್ರಾಮಗಳು ಎದುರಿಸುತ್ತಾ ಬಂದಿರುವ ಸಮಸ್ಯೆಗಳನ್ನು ಗಮನಿಸಿರುವ ಅನೇಕ ತಜ್ಞರು ಈ ಸಂದರ್ಭದಲ್ಲಿ  ಬಡ ಜನತೆಗೆ ನಿಜಕ್ಕೂ ಅನುಕೂಲವಾಗಬಹುದಾದ ಒಂದು ಆಚರಣೀಯ ತತ್ವವೆಂದರೆ ಅದು ‘ಸಹಕಾರ ತತ್ವ’ ಎಂಬುದನ್ನು ಒತ್ತಿ ಹೇಳಿದ್ದಾರೆ.

ದೇಶದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಸಹಕಾರ ಒಂದು ಅತ್ಯುತ್ತಮವಾದ ಮಾರ್ಗ. ಅಂತೆಯೇ ಭಾರತದ ಸರ್ಕಾರವು ಜುಲೈ 2021 ರಲ್ಲಿ ಹೊಸ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲಿಯವರೆಗೆ ಸಹಕಾರ ಕ್ಷೇತ್ರವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತಿತ್ತು. ಸಣ್ಣ, ಸಣ್ಣ ಕೃಷಿ ಕಾರ್ಯಗಳು, ಸಣ್ಣ ವ್ಯವಹಾರಗಳು, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಮುಂತಾದ ಅನೌಪಚಾರಿಕ ವಲಯವನ್ನು ಒಳಗೊಂಡಿರುವ ಭಾರತೀಯ ಸಮಾಜದ ಬಹು ದೊಡ್ಡ ವರ್ಗ ಸಹಕಾರ ಕ್ಷೇತ್ರವನ್ನು ಅವಲಂಬಿಸಿದೆ ಎಂಬುದನ್ನು ಅರಿತುಕೊಂಡ ಕೇಂದ್ರ ಸರಕಾರ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಸಹಕಾರ ಕ್ಷೇತ್ರವನ್ನು ದೇಶದ ಆರ್ಥಿಕತೆಯ ಮಹತ್ವದ ಕ್ಷೇತ್ರ ಎಂದು ಪರಿಗಣಿಸಿತು. ಸಹಕಾರ ರಂಗವನ್ನು ಸಾಮಾನ್ಯವಾಗಿ ಕೃಷಿಕರು, ಕೂಲಿಕಾರರು, ಮಹಿಳೆಯರು ಮುಂತಾದ ಸಮಾಜದ ದುರ್ಬಲ ವರ್ಗದವರೇ ಆಶ್ರಯಿಸಿರುತ್ತಾರೆ. ಭಾರತದಂತಹ ಅಭಿವೃದ್ಧಿ ಶೀಲ ದೇಶದ ಜನ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಈ ತಳ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭೌತಿಕ, ಮತ್ತು ಸಾಂಸ್ಕೃತಿಕ ಬೆಳವಣಿಗೆಯಿಂದಲೇ ದೇಶ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಸಾಧ್ಯ. ಅಂತಹ ಜನ ಸಮುದಾಯದ ಶಿಕ್ಷಣ, ಆರೋಗ್ಯ, ಸ್ವಉದ್ಯೋಗ, ಕೌಶಲ್ಯ ಮುಂತಾದ ಮೂಲಭೂತ ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಇದು ಕಾರ್ಪೊರೇಟ್ ವ್ಯವಸ್ಥೆಯಿಂದ ಆಗುವ ಕಾರ್ಯವೆಲ್ಲ ಕೋಆಪರೇಟಿವ್ ವ್ಯವಸ್ಥೆಯಿಂದ ಮಾತ್ರವೇ ಸಾಧ್ಯ. ದೇಶದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಪರಿಕಲ್ಪನೆಯ ಗುರಿಯೆಡೆಗೆ ಸಾಗಿವಲ್ಲಿ ಕೇಂದ್ರ ಸರಕಾರದ ಈ ಉಪಕ್ರಮವು ಪ್ರಯೋಜನಕಾರಿಯಾಗಿದೆ.

ದೇಶದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳನ್ನು ಅತ್ಯಂತ ಪರಿಣಾಮಕಾರಿ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಭಾರತದ ಸಹಕಾರಿ ವ್ಯವಸ್ಥೆಯನ್ನು ಅವಲೋಕನ ಮಾಡಿದಾಗ ಇದು ಸ್ಪಷ್ಟ ಅನುಭವಕ್ಕೆ ಬರುತ್ತದೆ. AMUL, IFFCO ಮತ್ತು KRIBHCO ನಂತಹ ಅನೇಕ ಸಹಕಾರ ಸಂಸ್ಥೆಗಳು ಇತರೇ ಕಾರ್ಪೊರೇಟ್ ಸಂಸ್ಥೆಗಳಿಗಿಂತ ಅಥವಾ ಅವುಗಳ ಜೊತೆ ಜೊತೆಯಾಗಿ ಬೆಳೆದು ಯಶಸ್ವಿಯಾಗಿರುವುದನ್ನು ಗುರುತು ಹಾಕಿಕೊಳ್ಳಬಹುದು. ಸಹಕಾರಿ ಕ್ಷೇತ್ರವನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತವು ಇನ್ನೂ ಎಷ್ಟರ ಮಟ್ಟಿಗೆ ಪ್ರಯೋಜನ ಪಡೆಯಬಹುದೆಂಬುದನ್ನು ಅದರ ಸೂಕ್ತ ಕಾರ್ಯ ಯೋಜನೆಗಳೊಂದಿಗೆ ಕಂಡುಕೊಳ್ಳಬೇಕಾಗಿದೆ. ಹಲವಾರು ಪ್ರದೇಶಗಳಲ್ಲಿ ಸಹಕಾರಿಗಳು ಕೃಷಿ ಯಂತ್ರೋಪಕರಣಗಳು ಮತ್ತು ಕೃಷಿ ಕಾರ್ಯಾಚರಣೆಗಳಿಗಾಗಿ ಸಣ್ಣ ಹಿಡುವಳಿದಾರರ ಅಗತ್ಯವನ್ನು ಪೂರೈಸುವ ಕೃಷಿ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅವು ಸಹಕಾರಿ ಸಂಸ್ಥೆಗಳ ಸಾಲದ ವ್ಯವಸ್ಥೆ, ಉತ್ಪಾದನೆ, ಮಾರುಕಟ್ಟೆ ನಿರ್ಮಾಣ ಮತ್ತು ಈ ಮೂಲಕ ಕೃಷಿಕರ ತಲಾ ಆದಾಯವನ್ನು ಹೆಚ್ಚಿಸುವುದರೊಂದಿಗೆ ದೇಶದ ಜಿಡಿಪಿ ಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಕೃಷಿಕರು, ಕೂಲಿ ಕಾರ್ಮಿಕರು, ಮಹಿಳೆಯರು ಮುಂತಾದವರಿಗೆ ಯುಕ್ತ ದರದಲ್ಲಿ ಹಣಕಾಸು ಪೂರೈಕೆ ಮಾಡುವುದರೊಂದಿಗೆ ಅವರನ್ನು ಮೀಟರ್ ಬಡ್ಡಿ ದಂಧೆಕೊರರಿಂದ ದೂರವಿಡುತ್ತದೆ. ಇಂತಹ ಪ್ರಾಥಮಿಕ ಸಹಕಾರಿ ವ್ಯವಸ್ಥೆಯು ಸಮಾಜಮುಖಿಯಾಗಿದ್ದರೂ ಅವುಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಗ್ರಾಮೀಣ ಆರ್ಥಿಕತೆಯ ಮೂರನೇ ಎರಡರಷ್ಟು ಭಾಗವು ಕೃಷಿಯೇತರ ಆರ್ಥಿಕತೆಯಾಗಿದೆ. ಮುಖ್ಯವಾಗಿ ಸೇವಾ ವಲಯಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ವ್ಯಾಪಾರ ಮತ್ತು ಅಂಗಡಿಗಳು ಇತ್ಯಾದಿಗಳು. ಇವು ಇತ್ತೀಚಿನ ರಾಷ್ಟ್ರೀಯ ಮಾದರಿ ಸಮೀಕ್ಷೆ (NSS 2020-21) 47 ಪ್ರತಿಶತ ಆದಾಯವನ್ನು ತೋರಿಸುತ್ತದೆ. ಈ ಆದಾಯವನ್ನು ಕೃಷಿ ಕುಟುಂಬಗಳು ಕೃಷಿಯೇತರ ಮೂಲಗಳಿಂದ ಪಡೆಯುತ್ತವೆ. ಆದುದರಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತೇಜಿಸಿ ದೇಶದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ನೇರ ನಿಯಂತ್ರಣ ಮತ್ತು ಮಾರ್ಗದರ್ಶಕ ವ್ಯವಸ್ಥೆಯಾಗಿ ಪ್ರತ್ಯೇಕ ಸಹಕಾರ ಸಚಿವಾಲಯದ ಅವಶ್ಯಕತೆ ಇದೆ.

ದೇಶದ ಸಹಕಾರಿ ರಂಗವು ತನ್ನದೇ ಆದ ಅನುಭವಗಳನ್ನು ಹೊಂದಿದ್ದರೂ, ಕೆಲವು ಅಂತಾರಾಷ್ಟ್ರೀಯ ಅನುಭವಿಗಳು ಭಾರತಕ್ಕೆ ಹೊಸ ಪಾಠವನ್ನು ನೀಡಬಹುದು.

ಜಪಾನ್ ದೇಶವು ಸುಮಾರು 694 ಪ್ರಾದೇಶಿಕ ಸಹಕಾರಿ ಸಂಸ್ಥೆಗಳ ಗುಂಪನ್ನು ಹೊಂದಿದೆ. ಜಪಾನ್ ಅಗ್ರಿಕಲ್ಚರಲ್ ಕೋಆಪರೇಟಿವ್ಸ್ (JACs) ಇದು ಸದಸ್ಯರಿಗೆ ಉತ್ಪಾದನೆ, ಸಂಸ್ಕರಣೆ, ಸಾಗಾಟ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುತ್ತದೆ ಮತ್ತು ಹಣಕಾಸು ಸೇವೆಗಳನ್ನು ನೀಡುತ್ತದೆ. ಈ ಜೆಎಸಿಗಳು ಸಣ್ಣ ರೈತರ ಪ್ರಧಾನ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಜಪಾನಿನ ಈ ಸಹಕಾರಿ ಮಾದರಿಯನ್ನು ಬಾಂಗ್ಲಾದೇಶದಲ್ಲಿ ಅಳವಡಿಸಿಕೊಂಡಾಗ ಅದರ ಉತ್ತಮ ಮಾರುಕಟ್ಟೆ ತಂತ್ರಗಳು ಮತ್ತು ಸೇವಾ ಕಾರ್ಯಗಳು ರೈತ ಉತ್ಪನ್ನಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಯಶಸ್ವಿಯಾಗಿ ನಿವಾರಿಸಿ ಕೃಷಿ ವಲಯವನ್ನು ಸುಸ್ಥಿರ ಉತ್ಪಾದನಾ ವ್ಯವಸ್ಥೆಯಾಗಿ ಮಾಡಲು ಮತ್ತು ಸಹಕಾರವನ್ನು ಬಲವಾದ ಆರ್ಥಿಕ ಸಂಘಟನೆಯನ್ನಾಗಿ ಮಾಡಬಹುದು ಎಂದು ತೋರಿಸಿಕೊಟ್ಟಿದೆ.

ಡೆನ್ಮಾರ್ಕ್‌ನ ಆಹಾರ ಸಮೂಹ ಮತ್ತು ಅದರ ಕಾರ್ಯಾಚರಣೆಗಳು ಸಹಕಾರಿ ಸಂಪ್ರದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡೆನ್ಮಾರ್ಕ್‌ ದೇಶದಲ್ಲಿನ ಪ್ರಮುಖ ಆಹಾರ ಉದ್ಯಮಗಳು ರೈತರ ಒಡೆತನದ ಸಹಕಾರಿ ಸಂಸ್ಥೆಗಳಾಗಿವೆ. ರೈತರ ಮಾಲೀಕತ್ವದ ಇಲ್ಲಿನ ಕೃಷಿ ಮತ್ತುಆಹಾರ ಸಹಕಾರ ಸಂಘಗಳು ಅತಿ ದೊಡ್ಡ ಮಾರುಕಟ್ಟೆಗಳಾಗಿ ಪರಿಣಮಿಸಿದೆ ಮತ್ತು ರೈತರ ಲಾಭದ ಪ್ರಮಾಣವೂ ಇತರೆಲ್ಲಾ ದೇಶಗಳಿಂದ ಹಿರಿದಾಗಿದೆ. “ಒಬ್ಬ ರೈತ-ಒಂದು ಮತ” ಎಂಬ ಮೂಲ ತತ್ವವನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಜಮೀನಿನ ಗಾತ್ರ ಮತ್ತು ಉತ್ಪಾದನೆಯ ಪ್ರಮಾಣವನ್ನು ಲೆಕ್ಕಿಸದೆ ಪ್ರತಿಯೊಬ್ಬ ರೈತನನ್ನು ಕೂಡ ಪರಿಗಣಿಸಲಾಗಿದೆ. ಕೃಷಿಕರಿಂದ ನೇರ ಗ್ರಾಹಕರಿಗೆ ಮತ್ತು ಆದರಲ್ಲಿ ಪಾರದರ್ಶಕತೆ, ಮತ್ತು ನಾವೀನ್ಯತೆಯನ್ನು ಉತ್ತೇಜಿಸಿ ಉತ್ಪನ್ನಗಳ ಮಾರುಕಟ್ಟೆಯನ್ನು ಬಲಪಡಿಸಲು ಇಲ್ಲಿನ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿದೆ.

ನ್ಯೂಜಿಲ್ಯಾಂಡ್ ದೇಶದ ದೊಡ್ಡ 40 ಸಹಕಾರಿ ಸಂಸ್ಥೆಗಳು ವಾರ್ಷಿಕ ಒಟ್ಟು 28 ಬಿಲಿಯನ್ ಡಾಲರ್ (2018) ಆದಾಯವನ್ನು ಗಳಿಸುತ್ತಿವೆ. ನ್ಯೂಜಿಲ್ಯಾಂಡ್ ನ ಕೃಷಿ ಕ್ಷೇತ್ರದಲ್ಲಿ ಸಹಕಾರ ಸಂಸ್ಥೆಗಳು ಮತ್ತು ರೈತ ನಿಯಂತ್ರಿತ ವ್ಯವಹಾರಗಳು (FCBs) ನಿರ್ವಹಿಸುತ್ತದೆ. ಸಹಕಾರಿ ವ್ಯಾಪಾರ ವ್ಯವಸ್ಥೆಯು ಇಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದು ತನ್ನ ಸದಸ್ಯ ರೈತರ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಮಾಡುತ್ತಿದೆ. ಕೃಷಿ, ಹಣಕಾಸು, ಶಿಕ್ಷಣ, ಆರೋಗ್ಯ, ಸಗಟು ಮಾರಾಟ ಮತ್ತು ಚಿಲ್ಲರೆ ಮಾರಾಟ ಸೇರಿದಂತೆ ಇಡಿಯ ರೈತರ ಉತ್ಪಾದನಾ ಮತ್ತು ಮಾರಾಟ ಸರಪಳಿಯನ್ನು ಏಕೀಕರಣಗೊಳಿಸಿ ಅದರ ಪ್ರಮುಖಕೊಂಡಿಯಾಗಿ ಇಲ್ಲಿನ ಸಹಕಾರ ವ್ಯವಸ್ಥೆ ಕೆಲಸ ಮಾಡುತ್ತಿದೆ.

ಫ್ರಾನ್ಸ್ ದೇಶದಲ್ಲಿ ಮುಖ್ಯವಾಗಿ ಧಾನ್ಯಗಳು ಮತ್ತು ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಇವೆ. ಸುಸ್ಥಿರ ಮಾರಾಟದ ಸರಪಳಿಯನ್ನು ಹೊಂದಿರುವ ಇಲ್ಲಿನ ಸಹಕಾರ ಮಾರುಕಟ್ಟೆ ಅದರ ಸದಸ್ಯರ ಬದ್ಧತೆಯನ್ನು ಕೂಡಿದೆ. ಮೆದರ್ ಲ್ಯಾಂಡ್ ದೇಶದ ದಲ್ಲಿ ಸುಮಾರು 41 ಸಹಕಾರಿ ವ್ಯವಸ್ಥೆಯನ್ನು ಹೊಂದಿದೆ. ಸದಸ್ಯರ ಸಕ್ರಿಯತೆ, ಆಂತರಿಕ ಆಡಳಿತದಲ್ಲಿನ ನಾವಿನ್ಯತೆಗಳು ಮತ್ತು ಶಾಸನಾತ್ಮಕ ಅವಕಾಶಗಳು ಇಲ್ಲಿನ ಸಹಕಾರಿ ರಂಗದ ವಿಶೇಷತೆಯಾಗಿದೆ.

ಬೇರೆ ಬೇರೆ ದೇಶಗಳಲ್ಲಿನ ಸಹಕಾರ ವ್ಯವಸ್ಥೆಯನ್ನು ಅವಲೋಕಿಸಿದಾಗ ಅಲ್ಲಿನ ಬಂಡವಾಳ ಶಾಹಿ ಆರ್ಥಿಕತೆಯ ನಡುವೆಯೂ ಕೃಷಿ ಮತ್ತು ಆಹಾರ ಕ್ಷೇತ್ರದಲ್ಲಿ ಸಹಕಾರ ಸಂಸ್ಥೆಗಳು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಕೃಷಿ ಪ್ರಧಾನವಾದ ಭಾರತದಲ್ಲಿ ಪ್ರತಿಯೊಂದು ರೈತನನ್ನು ಕೂಡ ಸಹಕಾರ ವ್ಯವಸ್ಥೆಯೊಳಗೆ ತಂದು ಆತನಲ್ಲಿ ಸಹಕಾರಿ ಕೃಷಿ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕಾಗಿದೆ. ಆ ಮೂಲಕ ಸಣ್ಣ ರೈತರನ್ನು ಸಬಲೀಕರಣ ಗೊಳಿಸುವುದು ಅವರಿಗೆ ಮೌಲ್ಯವರ್ದಿತ ಆದಾಯವನ್ನು ಖಚಿತಪಡಿಸಿ ಉತ್ತಮ ಜೀವನೋಪಾಯವನ್ನು ಕಂಡುಕೊಳ್ಳುವಲ್ಲಿ ನೆರವಾಗಬೇಕಾಗಿದೆ. ಕೃಷಿಕರು, ಮಹಿಳೆಯರು ಮುಂತಾದ ಜನಸಾಮಾನ್ಯರನ್ನು ಉತ್ಪಾದಕರನ್ನಾಗಿ ಪರಿವರ್ತಿಸುವ ಕೆಲಸವಾಗ ಬೇಕಾಗಿದೆ. ಅವರಲ್ಲಿ ಉತ್ಪಾದಕ ಗುಣವನ್ನು ಹೆಚ್ಚಿಸಲು ಬೇಕಾದ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಹಾಗಾದಲ್ಲಿ ಮಾತ್ರ ದೇಶದ ಕಡೆಯ ವ್ಯಕ್ತಿಯು ಕೂಡ ಸುಸ್ಥಿರನಾಗಿ ಬೆಳೆಯಬಲ್ಲ. ಆತ ಸಮಾಜದ ಆಸ್ತಿಯಾಗಿಯೂ ಪರಿವರ್ತಿತನಾಗಿ ದೇಶದ ಆರ್ಥಿಕತೆಗೂ ಕೊಡುಗೆಯನ್ನು ನೀಡಬಲ್ಲ. ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರದ ಆರ್ಥಿಕತೆಯ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸೇರ್ಪಡೆ (Financial Inclusion)ಯು ಅತ್ಯಮೂಲ್ಯವೆನಿಸುತ್ತದೆ. ಸಹಕಾರ ರಂಗವು ಪ್ರತಿಯೊಬ್ಬನನ್ನು ಒಳಗೊಳ್ಳುವ ವೈಶಿಷ್ಟ್ಯತೆ ಮತ್ತು ಮಹತ್ವವನ್ನು ಹೊಂದಿದೆ. ಸಹಕಾರ ರಂಗದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಬಲಗೊಳಿಸಿ ಸುಸ್ಥಿರ ಸಮಾಜವನ್ನು ಕಟ್ಟಿದಾಗ ದೇಶದ ಆರ್ಥಕತೆಯು ಸಮಗ್ರ ಅಭಿವೃದ್ಧಿಯನ್ನು ಕಾಣುವುದಕ್ಕೆ ಸಾಧ್ಯವಿದೆ.

ಡಾ. ಎಸ್ ಆರ್ ಹರೀಶ್ ಆಚಾರ್ಯ
ಅಧ್ಯಕ್ಷರು
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ.
ಮಂಗಳೂರು.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More