ನೂರಾರು ವರ್ಷಗಳಿಂದ ಸಹಕಾರ ಸಂಘಗಳು ಸಹಕಾರ ತತ್ವದಡಿ ಬೇರೆ ಬೇರೆ ರೀತಿಯ ವ್ಯವಹಾರಗಳನ್ನುಸೇವಾರೂಪದಲ್ಲಿ ಮಾಡಿಕೊಂಡು ಬರುತ್ತಿದೆ. ಇಲ್ಲಿ ಲಾಭ ಅತ್ಯಂತ ಗೌಣ ಅಥವಾ ಅತ್ಯಲ್ಪ. ಉತ್ತಮ ಗುಣಮಟ್ಟದ ಶೋಷಣೆಮುಕ್ತ ಸೇವೆಯೇ ಸಹಕಾರ ಕ್ಷೇತ್ರದ ಪರಮಗುರಿ. ಈ ಹಿನ್ನೆಲೆಯಲ್ಲಿ ಆದಾಯತೆರಿಗೆ ಕಾಯ್ದೆ 1961 ಕಲಂ 80 ಪಿ ಅಡಿಯಲ್ಲಿ ಕೂಡ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ಇದೆ. ಆದರೆ ಆದಾಯ ತೆರಿಗೆ ಕಾಯ್ದೆಯ ಮೂಲ ಆಶಯ (Spirit of Act)ವನ್ನು ಬದಿಗೆ ಸರಿಸಿ ಸಹಕಾರ ಸಂಘಗಳ ಮೇಲೆ ಇಲಾಖೆಯ ಶೋಷಣೆ ಹದ್ದುಮೀರಿದೆ. ದೇಶದಲ್ಲಿ ಬೇರೆ ಬೇರೆ ರೀತಿಯ ಭಯೋತ್ಪಾದನೆಗಳಿದ್ದರೆ ಸಹಕಾರ ಕ್ಷೇತ್ರದಲ್ಲಿಇಂದು ನಮ್ಮನ್ನು ಆದಾಯತೆರಿಗೆ ಭಯೋತ್ಪಾದನೆ (Tax Terrorism) ಕಾಡುತ್ತಿದೆ.
ಸಹಕಾರ ಸಂಘಗಳು ನಮಗೆಲ್ಲ ತಿಳಿದಿರುವಂತೆ ಸಹಕಾರಿ ಕಾಯ್ದೆಯಂತೆ ಕಾರ್ಯಾಚರಿಸುತ್ತಿದೆ. ಸಹಕಾರ ಕ್ಷೇತ್ರಕ್ಕೆ ಅನ್ವಯಿಸುವ ಇತರೆಲ್ಲ ಕಾನೂನುಗಳನ್ನು ಗೌರವಿಸಿ ಪಾಲಿಸಿಕೊಂಡು ಬರುತ್ತಿವೆ. ತನ್ನದೇ ಆದ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಸಹಕಾರಕ್ಷೇತ್ರ ಹೊಂದಿದೆ. ಶಾಸನಬದ್ಧ ಲೆಕ್ಕಪರಿಶೋಧನೆ, ಆಂತರಿಕ ಲೆಕ್ಕ ಪರಿಶೋಧನೆ, ತೆರಿಗೆ ಲೆಕ್ಕ ಪರಿಶೋಧನೆ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಅಳವಡಿಸಿಕೊಂಡು ಬಂದಿದೆ. ಅತ್ಯಂತ ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸಿಕೊಂಡ ಖಾಸಗಿ ಮತ್ತು ಸಹಕಾರಿ ರಂಗದ ಮಧ್ಯೆ ಒಂದು ಉತ್ತ, ಆದರ್ಶದಿಂದಕೂಡಿದ ಸುವರ್ಣಮಾಧ್ಯಮವಾಗಿ ಸಹಕಾರಕ್ಷೇತ್ರ ಜನಸಾಮಾನ್ಯರ ಅಚ್ಚುಮೆಚ್ಚಿನ ಕ್ಷೇತ್ರವಾಗಿದೆ. ಹೀಗಿರುವಾಗ ಆದಾಯತೆರಿಗೆ ಕಾಯ್ದೆಯ ಆಶಯ ಬದಿಗೊತ್ತಿಇಲಾಖೆಯ ಶೋಷಣೆಯನ್ನು ಎದುರಿಸುವಲ್ಲಿ ಸಹಕಾರಿ ಆಡಳಿತ ವ್ಯವಸ್ಥೆ ಸಹಕಾರಕ್ಷೇತ್ರದ ಜೊತೆಗಿರುವುದು ಇಂದಿನ ಅವಶ್ಯಕತೆಯಾಗಿದೆ.
ಸಹಕಾರಿ ಕ್ಷೇತ್ರದ ಎಲ್ಲ ವ್ಯವಹಾರಗಳೂ ಪಾರದರ್ಶಕ. ಸಹಕಾರ ಸಂಘಗಳು ಯಾವುದೇ ಸಂದರ್ಭದಲ್ಲಿ ಜಿಎಸ್‌ಟಿ ಇರಬಹುದು ಅಥವಾ ಸರಕಾರದ ಯಾವುದೇ ನಿಯಮಗಳಿಗೂ ಬದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಆದಾಯತೆರಿಗೆ ನಿಯಮದಲ್ಲಿ ಸ್ಪಷ್ಟತೆ ಇರಬೇಕು. ಕೃಷಿಕರ ಮತ್ತು ಜನಸಾಮಾನ್ಯರ ಆರ್ಥಿಕ ಪ್ರಗತಿಗಾಗಿ ಪ್ರಯತ್ನಿಸಿ ಗ್ರಾಮಾಭಿವೃದ್ಧಿಗೆ ಪೂರಕವಾಗಿ ಕೆಲಸಮಾಡುವ ಸಹಕಾರಿ ಸಂಘಗಳ ಮೇಲೆ ಆದಾಯತೆರಿಗೆ ವಿಧಿಸಿರುವುದು ಸರಿಯಲ್ಲ. ಸೇವೆಯನ್ನೇ ಧ್ಯೇಯವಾಗಿಸಿರುವ ಸಹಕಾರಿ ಸಂಘಗಳ ಮೇಲೆ ಆದಾಯತೆರಿಗೆ ಹೇರಿಕೆಯೂ ತಪ್ಪು. ಆದಾಯತೆರಿಗೆಯ ನಿಯಮಗಳು ತಪ್ಪು ಪ್ರತಿನಿಧಿತವಾಗದೆ (misrepresent) ಸಹಕಾರಿ ಕಾಯ್ದೆಯ ಆಶಯದಂತೆ ಜಾರಿಯಾಗಬೇಕು. ಇದಕ್ಕೆ ಸರಕಾರ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿ ತಂದು ವ್ಯವಸ್ಥಿತವಾಗಿ ಜಾರಿ ಮಾಡಿದರೆ ಆದಾಯತೆರಿಗೆ ಕಟ್ಟಲು ಸಹಕಾರಿ ಸಂಸ್ಥೆಗಳು ಸಿದ್ಧ.
– ಶ್ರೀ ಹರೀಶ್ ಆಚಾರ್ಯ
ಅಧ್ಯಕ್ಷರು,
ಸಹಕಾರ ಅಧ್ಯಯನ ಮತ್ತುಅಭಿವೃದ್ಧಿಸಂಸ್ಥೆ