ಸಾಂಸ್ಥಿಕ ನಡವಳಿಕೆಯು (Organizational Behaviour) ಒಂದು ಸಂಸ್ಥೆಯ ಉದ್ಯೋಗಿಗಳು ವೈಯಕ್ತಿಕವಾಗಿ ಮತ್ತು ಗುಂಪುಗಳಾಗಿ ಹೇಗೆ ಸಂವಹನ ಮಾಡುತ್ತಾರೆ ಮತ್ತು ಅವರ ಪರಸ್ಪರ ವರ್ತನೆಯು ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸುವ ಒಂದು ವಿಷಯವಾಗಿರುತ್ತದೆ. ಇದು ‘ಉದ್ಯೋಗಿಗಳು’ – ಅವರ ವ್ಯಕ್ತಿತ್ವ ‘ ಮತ್ತು ‘ಸಂಸ್ಥೆ’ – ಸಂಸ್ಥೆಯ ಸಂಸ್ಕೃತಿ (Organizational Culture) ಈ ಎರಡೂ ಅಂಶಗಳ ಬಗ್ಗೆ ಏಕಕಾಲದಲ್ಲಿ ನಡೆಯಬೇಕಾದ ಅಧ್ಯಯನ ವಿಷಯವಾಗಿದೆ. ಒಬ್ಬ ವ್ಯಕ್ತಿಯು ಇತರರಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುವುದು, ಒಂದು ಗುಂಪು ಇತರರಿಗಿಂತ ಹೆಚ್ಚು ಕೆಲಸದ ಉತ್ಪಾದಕತೆಯನ್ನು ಹೊಂದಿರುವುದು ಮತ್ತು ಒಂದು ಸಂಸ್ಥೆ ತನ್ನ ಕ್ಷೇತ್ರದಲ್ಲಿ ಉಳಿದ ಸಂಸ್ಥೆಗಳಿಂದ ಮುಂದುವರಿದಿರುವುದು – ಈ ಎಲ್ಲಾ ವಿಷಯಗಳು ವೈಯಕ್ತಿಕ ಮತ್ತು ಸಾಂಸ್ಥಿಕ ನಡವಳಿಕಗಳ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ವ್ಯವಸ್ಥಾಪಕರು (Managers) ಕಚೇರಿಯಲ್ಲಿ ಉತ್ತಮ ಗುಣಮಟ್ಟದ ಸಾಂಸ್ಥಿಕ ನಡವಳಿಕೆಯನ್ನು ಅಭಿವೃದ್ಧಿಪಡಿಸುವುದು ಉದ್ಯೋಗಿಯ ವೈಯಕ್ತಿಕ ಕಾರ್ಯಕ್ಷಮತೆಯ ಬೆಳವಣಿಗೆ ಮತ್ತು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ನಡೆಸಿ ಕೊಡುವಲ್ಲಿ ಬಹಳಷ್ಟು ಕೆಲಸ ಮಾಡುತ್ತದೆ. ರೀತಿ – ನೀತಿಗಳು ಸಂಸ್ಥೆಯಿಂದ ಸಂಸ್ಥೆಗೆ ಭಿನ್ನಾವಾಗಿರಬಹುದು, ಸಂಸ್ಥೆಯಲ್ಲಿ ರಚಿಸಲ್ಪಟ್ಟ ಸಂಸ್ಕೃತಿ ಮತ್ತು ಸಾಂಸ್ಥಿಕ ನಡವಳಿಕೆಯ ವ್ಯವಸ್ಥೆ ಉದ್ಯೋಗಿಗಳ ಮೂಲ ವ್ಯಕ್ತಿತ್ವದ ಮೇಲೆ ಬಲವಾದ ಪ್ರಭಾವವನ್ನು ಬೀರುವ ಮತ್ತು ಅವರ ವೈಯಕ್ತಿಕ ನಡವಳಿಕೆಯನ್ನು ಬದಲಾಯಿಸುವ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಮರುಹೊಂದಿಸುವ ಸಾಮರ್ಥ್ಯವನ್ನು ಹೊಂದಿದೆ.
ಸಾಂಸ್ಥಿಕ ನಡವಳಿಕೆ ವಿಷಯವು ಒಳಗೊಂಡಿರುವ ಅಂಶಗಳು:
ಒಂದು ಸಂಸ್ಥೆಯ ಸಾಂಸ್ಥಿಕ ನಡವಳಿಕೆಯು ಸಂಸ್ಥೆಯ ಸಾಮಾಜಿಕ ಪರಿಸರ, ಕಛೇರಿ ನಿಯಮಗಳು, ಸಂಬಂಧಿತ ವ್ಯಕ್ತಿಗಳ ಮಾನಸಿಕ ವ್ಯವಸ್ಥೆ, ಸಂವಹನ ಪದ್ಧತಿ,ಸಂಸ್ಥೆಯ ಮನದಂಡಗಳು, ಸಾಮೂಹಿಕ ಚಿಂತನೆ, ತರಬೇತಿ ಕಾರ್ಯಕ್ರಮಗಳು, ಕಛೇರಿಯಲ್ಲಿ ಉಪಯೋಗಿಸುವ ತಂತ್ರಜ್ಞಾನ ಮತ್ತು ಚಟುವಟಿಕೆಗಳನ್ನು ನಡೆಸುವ ವಿಧಾನ,ನಿರ್ವಹಣಾ ವಿಭಾಗದ ದೃಷ್ಟಿಕೋನ, ಉದ್ಯೋಗಿಯ ಒಟ್ಟು ವೈಯಕ್ತಿಕ ವ್ಯವಸ್ಥೆ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇರುವ ಸ್ವಾತಂತ್ರ್ಯ ಮತ್ತು ಸಾಮರ್ಥ್ಯ, ಸಂಘರ್ಷ ನಿರ್ವಹಣೆ (conflict management) ಅಧಿಕಾರದ ವಿತರಣೆ, ವೈಯಕ್ತಿಕ ಶಿಸ್ತು ಮತ್ತು ಸಭ್ಯತೆ, ಸಂದರ್ಭಗಳ ಅಗತ್ಯಗಳಿಗೆ ಅನುಗುಣವಾಗಿ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ, ನಿರಂತರ ಪ್ರೇರಣೆ – ಸ್ವ ಪ್ರೇರಣೆ ಮತ್ತು ಬಾಹ್ಯ ಪ್ರೇರಣೆ (Intrinsic and Extrinsic Motivation), ಉದ್ಯೋಗಿಗಳ ಭಾವನಾತ್ಮಕ ಬುದ್ಧಿವಂತಿಕೆಯ ಮಟ್ಟ (emotional intelligence) – ಈ ಎಲ್ಲ ಅಂಶಗಳನ್ನು ಅವಲಂಬಿಸಿರುತ್ತದೆ.
ಸಹಕಾರಿ ಸಂಸ್ಥೆಗಳಲ್ಲಿ ಸಾಂಸ್ಥಿಕ ನಡವಳಿಕೆ – ಅಧ್ಯಯನ ಮತ್ತು ಅಳವಡಿಕೆ:
ಸಹಕಾರಿ ಸಂಸ್ಥೆಗಳು ಮುಖ್ಯವಾಗಿ ಮಾನವ ಸಂಪನ್ಮೂಲ ಕೇಂದ್ರೀಕೃತವಾಗಿ ಕಾರ್ಯ ನಿರ್ವಹಿಸುವುದರಿಂದ ಸಾಂಸ್ಥಿಕ ನಡವಳಿಕೆಯ ಕ್ರಮಬದ್ಧ ಅಧ್ಯಯನ ನಡೆಸುವುದು ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಸಹಾಯಕ. ಸಂಸ್ಥೆಯು ತಾನು ಕಾರ್ಯ ನಿರ್ವಹಿಸುವ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಒಟ್ಟು ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಪ್ರಾದೇಶಿಕ ಜನರ ಮನೋಸ್ಥಿತಿಗೆ ಹೊಂದಾಣಿಕೆಯಾಗುವಂತೆ ಸಾಂಸ್ಥಿಕ ನಡವಳಿಕೆಯ ವಾಸ್ತವ ವಿಷಯಗಳನ್ನು ಮತ್ತು ಪ್ರಕ್ರಿಯೆಗಳನ್ನು ಹಂತ-ಹಂತವಾಗಿ ಅಳವಡಿಸಿಕೊಳ್ಳುವುದು ಸಂಸ್ಥೆ ಮತ್ತು ಸಂಸ್ಥೆಯ ಜೊತೆಗೆ ಸಂಪರ್ಕ ಹೊಂದಿರುವ ಕೊನೆಯ ವ್ಯಕ್ತಿಯವರೆಗೆ ಎಲ್ಲರೂ ರಚನಾತ್ಮಕ ವಿಧಾನದಲ್ಲಿ ಬೆಳೆಯಲು ನೆರವಾಗುತ್ತದೆ.
ಸಂಬಂಧಿತ ಅಧ್ಯಯನ ವಿಷಯಗಳು:
ಸಾಂಸ್ಥಿಕ ನಡವಳಿಕೆಯು ಮುಖ್ಯವಾಗಿ ಮನಃ ಶಾಸ್ತ್ರ, ನಿರ್ವಹಣೆ, ಸಾಂಸ್ಕೃತಿಕ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥ ಶಾಸ್ತ್ರ, ಆಡಳಿತ, ಮಾನವ ಶಾಸ್ತ್ರ ಮತ್ತು ಅತೀ ಮುಖ್ಯವಾಗಿ ಪ್ರತಿಯೊಬ್ಬರಲ್ಲೂ ನೈಜವಾಗಿರುವ ಸಾಮಾನ್ಯ ಜ್ಞಾನ – ಇವುಗಳಿಗೆ ಸಂಬಂಧಿಸಿದ ಒಟ್ಟು ವಿಷಯ ವಸ್ತು ಮತ್ತು ಪುಸ್ತಕ ಅಧ್ಯಯನ ಹಾಗೂ ಉನ್ನತ ಶೈಕ್ಷಣಿಕ ಹಿನ್ನಲೆ ಇಲ್ಲದೆಯೂ ಕ್ರಮಬದ್ಧವಾದ ಗಮನದಿಂದ (observation)ಒಂದು ಹಂತದವರೆಗೂ ಗ್ರಹಿಸಿಕೊಳ್ಳಬಹುದಾದ ಅನ್ವಯಿಕ ವಿಜ್ಞಾನ (Applied Science).
ವಾಣಿಶ್ರೀ. ಬಿ
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ,
‘ಸ್ಪಂದನ’
ಮಂಗಳೂರು.