ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಬದುಕಿಗೆ ಆಸರೆ

ಗ್ರಾಮೀಣ ಜನತೆಯ ಸರ್ವಾಂಗೀಣ ಅವಶ್ಯಕತೆಯ ತಾಣ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳು.ನಮ್ಮ ದೇಶದಲ್ಲಿ ಸುಮಾರು ನೂರಹದಿನೆಂಟು ವರ್ಷಗಳ ಹಿಂದೆ ಶ್ರೀಮಂತರಿಂದ ಆ಼ರ್ಥಿಕ಼ ಶೋಷಣೆಗೆ ಒಳಗಾದ ಮಧ್ಯಮ ಹಾಗೂ ಬಡವರ್ಗದ ಜನರ ರಕ್ಷಣೆಗಾಗಿ ಸಹಕಾರಿ ಸಂಘಗಳು ಹುಟ್ಟಿಕೊಂಡವು.1904ರಲ್ಲಿ ಕರ್ನಾಟಕದ ಗದಗ ಜಿಲ್ಲೆ ಕಣಗಿನಹಾಳದಲ್ಲಿ ದಿ. ಸಿದ್ದನಗೌಡ ಸಂಣರಾಮನ ಗೌಡ ಪಾಟೀಲರ ಮುತುವರ್ಜಿಯಲ್ಲಿ ಆರಂಭಗೊಂಡ ಸಹಕಾರ ಚಳವಳಿ ಮುಂದಿನ ದಿನಗಳಲ್ಲಿ ಹಿಂತಿರುಗಿನೋಡಿರುವುದಿಲ್ಲ.ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಸಹಕಾರಿವ್ಯವಸ್ಥೆ ಸದಸ್ಯರೆಲ್ಲರೂ ಸಮಾನರು ಎಂಬ ಸಿದ್ದಾಂತದಡಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅಂದು ಲೇವಾದೇವಿ ವ್ಯವಹಾರಕ್ಕೆ ಮಾತ್ರ ಸೀಮಿತ ಗೊಂಡಿದ್ದ ಗ್ರಾಮೀಣಭಾಗದ ಕೃಷಿ ಪತ್ತಿನ ಸಹಕಾರಿ ಸಂಘಗಳು ಇಂದು ದೇಶದ ಹಲವು ಪ್ರದೇಶಗಳಲ್ಲಿ ಕದಂಬ ಬಾಹುಗಳನ್ನು ಅಷ್ಟದಿಕ್ಕುಗಳಿಗೂ ವ್ಯವಹಾರಿಕವಾಗಿ ಚಾಚುವಷ್ಟು ವಿಫುಲ ಮಾರ್ಗಗಳನ್ನು ಕಂಡುಕೊಂಡಿವೆ. ಇಂತಹ ಬಂಡವಾಳಶಾಹಿˌ ನೌಕರಶಾಹಿ ಮಧ್ಯದ ಸುವರ್ಣಮಾಧ್ಯಮವನ್ನು ಹಳ್ಳಿಯ ಜನಸಾಮಾನ್ಯರ ಸರ್ವವ್ಯವಹಾರಿಕ ಕೇಂದ್ರವಾಗಿ ಬೆಳೆಸುವುದು ಸಹಕಾರಿ ಮಿತ್ರರ ಆದ್ಯ ಕರ್ತವ್ಯ.

ಮನುಷ್ಯನ ಆಹಾರಕ್ಕೆ ಹಸಿರು ಕ್ರಾಂತಿ ನೀಡಿದ ಕೊಡುಗೆಯ ರೀತಿಯಲ್ಲಿ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿ ಬಿಳಿಕ್ರಾಂತಿಯು ಮಹತ್ತರವಾದ ಹೆಜ್ಜೆಯನ್ನು ನೀಡಿದೆ. 1946ರಲ್ಲಿ ಗುಜರಾತ್ ನ ಆನಂದ್ ಎಂಬಲ್ಲಿ ಕೃಷಿಕನ ಉಪವೃತ್ತಿ ಹೈನುಗಾರಿಕೆಗೆ ಸಂಬಂಧಿಸಿ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆ ಯಾಯಿತು.ಶ್ರೀತ್ರಿಭುವನದಾಸ ಪಟೇಲ್ ಹುಟ್ಟುಹಾಕಿ ಡಾ ವರ್ಗೀಸ್ ಕುರಿಯನ್ ರವರು ಬೆಳೆಸಿ ಪೋಷಿಸಿದ ಅಮುಲ್” (Anand milk union Limited ಸಂಸ್ಥೆ ಹಾಲುಸಂಗ್ರಹˌ ಪರಿಷ್ಕರಣೆˌ ಮಾರುಕಟ್ಟೆಯ ದಿಸೆಯಿಂದ ಇಂದು ಬೃಹದಾಕಾರವಾಗಿ ಬೆಳೆದಿದೆ.

ಕರಾವಳಿ ಕರ್ನಾಟಕದ ಸಹಕಾರಿ ಚಳವಳಿಗೆ ಅದರದೇ ಆದ ವಿಶೇಷ ಮಹತ್ವ ಇದೆ.1904ರಲ್ಲಿ ದೇಶದ ಸಹಕಾರಿಚಳುವಳಿ ಆರಂಭವಾದ ಕೆಲವೇ ಸಮಯದಲ್ಲಿ ಕರಾವಳಿ ಕರ್ನಾಟಕಕ್ಕೂ ಸಹಕಾರ ಸಿದ್ದಾಂತ ಅಂಬೆಗಾಲಿಕ್ಕಿ ಜನಜೀವನದ ಮೇಲೆ ಹಂತಹಂತವಾಗಿ ಬೃಹತ್ ಪರಿಣಾಮ ಬೀರಿತು. ಇಂದು ಸಹಕಾರಿ ಸಂಘಗಳ ಅಸ್ತಿತ್ವ ಇಲ್ಲದ ಗ್ರಾಮಗಳು ಅವಿಭಜಿತ ಜಿಲ್ಲೆಯಲ್ಲಿ ಇಲ್ಲ. ಇದರ ಕಾರಣೀಭೂತ ಜನಕರು ನಮಗೆಲ್ಲ ತಿಳಿದ ಹಾಗೇ ದಿ. ಮೊಳಹಳ್ಳಿ ಶಿವರಾಯರು. ಅವರ ದೂರಾಲೋಚನೆಯ ನಡಿಗೆ ನಮ್ಮ ಕೃಷಿಬದುಕಿಗೆ ಬೆಳಕು ನೀಡಿದೆ.1909ರಲ್ಲಿ ಶಿವರಾಯರು ತನ್ನ ಹುಟ್ಟೂರಾದ ಪುತ್ತೂರಲ್ಲಿ ಇಂದು ನಗರದ ಕೇಂದ್ರಪ್ರದೇಶದಲ್ಲಿ ಅಸ್ತಿತ್ವಹೊಂದಿರುವ ಪುತ್ತೂರು ಸಹಕಾರಿ ಟೌನ್ ಬ್ಯಾಂಕನ್ನು” ಸಹಕಾರಿ ಕ್ರೆಡಿಟ್ ಸೊಸೈಟಿ” ಎಂಬ ಹೆಸರಲ್ಲಿ ಸ್ಥಾಪಿಸಿ ಕರಾವಳಿಯ ಪ್ರತಿಹಳ್ಳಿಯಲ್ಲಿ ಬಲಾಡ್ಯವಾಗಿ ಬೇರೂರಿ ಜನರ ಜೀವನದ ದಾರಿದೀಪವಾಗಿರುವ ಸಹಕಾರಿ ಆಂದೋಲನಕ್ಕೆ ಬೀಜಾಂಕುರಗೈದರು. ಆ ಬಳಿಕ ಶಿವರಾಯರು ಕಾಲ್ನಡಿಗೆˌ ಎತ್ತಿನಗಾಡಿ ಮೂಲಕ ಹಲವು ಹಳ್ಳಿಗಳಲ್ಲಿ ಸಂಚರಿಸಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಗ್ರಾಮಗಳ ಜನನಾಯಕರನ್ನು ಹುರಿದುಂಬಿಸಿದರು. ಈ ಸಹಕಾರಿ ಸಂಘಗಳಿಗೆ ಆರ್ಥಿಕ ಶಕ್ತಿ ಒದಗಿಸಲು ಪುತ್ತೂರು ಯೂನಿಯನ್ ಕ್ಲಬ್ ವಠಾರದಲ್ಲಿ 1913ರಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಸ್ಥಾಪನೆ ಮಾಡಿದರು. ಇಡೀ ಜಿಲ್ಲೆಗೆ ಸಹಕಾರಿ ಚಳವಳಿ ಹಂತಹಂತವಾಗಿ ಪಸರಿಸಿದಾಗ 1925ರಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಛೇರಿಯನ್ನು ಮಂಗಳೂರಿಗೆ ವರ್ಗಾಯಿಸಿದರು. 1918ರಲ್ಲಿ ವಿಟ್ಲ ಅರಸರ ಸಹಕಾರದೊಂದಿಗೆ ಕೃಷಿಯುತ್ಪನ್ನಗಳ ಮಾರುಕಟ್ಟೆಗಾಗಿ ದಕ್ಷಿಣ ಕನ್ನಡ ಕೃಷಿಕರ ಸಗಟು ಮಾರಾಟ ಸಂಘ (S K Garden planters co operative wholesale Soceity) ವಿಟ್ಲದಲ್ಲಿ ಸ್ಥಾಪಿಸಿದರು. ದುರಾದೃಷ್ಟವಶಾತ್ ಅದು 1930ರಲ್ಲಿ ಮುಚ್ಚಲ್ಪಟ್ಟಿತು. ಜನರ ಆಹಾರದ ಕೊರತೆಯನ್ನು ನೀಗಿಸಲು 1919ರಲ್ಲಿ ಕೃಷಿಕರ ಸಹಕಾರಿ ಬಂಡಸಾಲೆ ಪುತ್ತೂರಲ್ಲಿ ಸ್ಥಾಪಿಸಿದರು. ಒಂದನೇ ಹಾಗೂ ಎರಡನೆ ಮಹಾಯುದ್ದದ ಸಂದರ್ಭ ಸಹಕಾರಿ ಸಂಘಗಳಲ್ಲಿ ಆಹಾರ ವಿತರಣೆಯ ಮಹತ್ವದ ಅರಿವಾಯಿತು. ಹೀಗೇ ಹತ್ತು ಹಲವು ಕೋನಗಳ ಮೂಲಕ ಸಹಕಾರಿ ಚಳುವಳಿಯನ್ನು ಜನರ ಮನಗಳಿಗೆ ತಲಪಿಸುವಲ್ಲಿ ಅಪಾರ ಶ್ರಮ ವಹಿಸಿದರು. ಸಹಕಾರಿ ಛಾಪಖಾನೆˌ ವಿದ್ಯಾರ್ಥಿನಿಲಯˌ ಧಾನ್ಯದ ಬ್ಯಾಂಕುˌ ಸರಕಾರಿ ನೌಕರರ ಸಹಕಾರಿ ಸಂಘˌ ವರ್ತಕರ ಸಹಕಾರಿ ಸಂಘˌ ಭೂಅಡಮಾನ ಸಹಕಾರಿ ಬ್ಯಾಂಕುˌ ಮುಂತಾದ ಹತ್ತಾರು ರೀತಿಯ ಸಹಕಾರಿಸಂಘಗಳ ಮೂಲಕ ಜನರು ಸಹಕಾರಚಳವಳಿಯಲ್ಲಿ ಸಕ್ರಿಯವಾಗಿರಲು ಹುರಿದುಂಬಿಸಿದರು. ಕೇರಳದ ನೀಲೇಶ್ವರದಿಂದ ಕರ್ನಾಟಕದ ಬೈಂದೂರು ತನಕ ಸಹಕಾರವನ್ನು ಪಸರಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟರು.  ಇದರ ಫಲಶ್ರುತಿ ಅವಿಭಜಿತ ದ. ಕ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕನು ಸಹಕಾರ ಸಂಘದ ಕದತಟ್ಟುವ ಮೂಲಕ ಆತನ ಆರ್ಥಿಕˌ ಸಾಮಾಜಿಕˌ ಶೈಕ್ಷಣಿಕ ಗುಣಮಟ್ಟ ಮೇರುಸ್ಥಿತಿಯಲ್ಲಿರಲು ಕಾರಣವಾಗಿದೆ.

ಸಹಕಾರ ಇದು ವರೆಗೆ ರಾಜ್ಯ ಸರಕಾರಗಳ ವಿಷಯವಾಗಿತ್ತು. ಕೇಂದ್ರ ಸರಕಾರದ ಮಟ್ಟದಲ್ಲಿ ಸಹಕಾರ ವಿಷಯ ಕೃಷಿ ಖಾತೆಯೊಂದಿಗೆ ಜೋಡಣೆಯಾಗಿದ್ದು ಬಹುರಾಜ್ಯ ಸಹಕಾರಿ ಕಾಯ್ದೆಯ ನಿರ್ವಹಣೆ ಮಾತ್ರ ಕೇಂದ್ರದ ಉಸ್ತುವಾರಿಯಲ್ಲಿತ್ತು. ಶ್ರೀ ನರೇಂದ್ರ ಮೋದಿಯವರ ಸರಕಾರ ಸಹಕಾರಕ್ಕೆ ವಿಶೇಷ ಮಾನ್ಯತೆ ನೀಡಿ  ಸಹಕಾರ ಕ್ಕೆ ಸಾಂವಿಧಾನಿಕವಾಗಿ ಪ್ರತ್ಯೇಕವಾದ ಖಾತೆ ರಚಿಸಿˌ  ದೇಶದಾದ್ಯಂತ ಸಹಕಾರದ  ಬಲವರ್ಧನೆಗೆ ಮುನ್ನುಡಿ ಬರೆದಿದ್ದಾರೆ. ಶ್ರೀ ಅಮಿತ್ ಶಾರವರು  ಕೇಂದ್ರದಲ್ಲಿ ಸಹಕಾರ ಖಾತೆಯ ಜವಾಬ್ದಾರಿ ಹೊಂದಿದ್ದು ಸಹಕಾರದ ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಪ್ರಗತಿಗೆ ಹೆಜ್ಜೆ ಇಟ್ಟಿರುತ್ತಾರೆ.ಕೃಷಿ ಪತ್ತಿನ ಸಹಕಾರ  ಸಂಘಗಳು ಅವಿಭಜಿತ ದ. ಕ. ಜಿಲ್ಲೆಯಂತಹ  ದೇಶದ ಕೆಲವೇ ಪ್ರದೇಶಗಳಲ್ಲಿ  ಮಾತ್ರ ಬಹು ಉದ್ದೇಶಿತ  ಕಾರ್ಯಚಟುವಟಿಕೆಗಳನ್ನು ಹೊಂದಿದ್ದು ದೇಶದ ಹೆಚ್ಚಿನ ಪ್ರದೇಶಗಳಲ್ಲಿ  ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಹಿತ ಕೇವಲ ಲೇವಾದೇವಿ ವ್ಯವಹಾರಕ್ಕೆ ಮಾತ್ರ ಸೀಮಿತಗೊಂಡಿದ್ಧುˌ ಹಿರಿಯರ ಕಲ್ಪನೆಯಾದ  ಗ್ರಾಮೀಣ ಭಾರತದಲ್ಲಿ “ತೊಟ್ಟಿಲಿನಿಂದ ಚಟ್ಟದ ತನಕ” ದ ವ್ಯವಹಾರಕ್ಕೆ ಕೈಚಾಚಿಲ್ಲ.

ಕೃಷಿ ಪತ್ತಿನ ಸಹಕಾರ ಸಂಘಗಳನ್ನು ವೇಗವಾಗಿ ಬಲಪಡಿಸಲು ಕೇಂದ್ರ ಸರಕಾರ ಮುಂದೆ ಬಂದಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿ ಬಹು ಕಾರ್ಯಚಟುವಟಿಕೆಗಳ ಉದ್ದೇಶವನ್ನೊಳಗೊಂಡ ಮಾದರಿ ಸಹಕಾರಿ ಉಪವಿಧಿಯನ್ನು ಕೇಂದ್ರ ಸಿದ್ದಪಡಿಸಿ ಸಲಹೆಗಳಿಗಾಗಿ ಸಾರ್ವಜನಿಕರ ಮುಂದಿಟ್ಟುˌ ಮಾದರಿ ಉಪವಿಧಿಯನ್ನು ಇತ್ತೀಚೆಗೆ  ಜ್ಯಾರಿಗೊಳಿಸಿದೆ. ಇದರಲ್ಲಿ ಸಾಲ ವ್ಯವಹಾರˌ ಠೇವಣಾತಿ ಸಂಗ್ರಹದ ಜತೆಯಲ್ಲಿ  ಜೀನಸು ಹಾಗೂ ದೈನಂದಿನ ಅವಶ್ಯಕತೆಯ  ಸಾಮಾಗ್ರಿಗಳಮಾರಾಟˌ ರಸಗೊಬ್ಬರ ˌಕ್ರಿಮಿನಾಶಕˌ ಬೀಜಗಳ ಪೂರೈಕೆˌ ರೈತರ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ˌಮಾಲು ದಾಸ್ತಾನು ಬಗ್ಗೆ ಗೋದಾಮುˌ ಕೃಷಿಉತ್ಪನ್ನಗಳನ್ನು ಸಂಸ್ಕರಿಸಿ ಅವುಗಳ ಮೌಲ್ಯವರ್ಧನೆˌ ಅವುಗಳ ಸಾಗಾಟˌ ಸಹಕಾರದ ಮೂಲಕ ಸಂಪರ್ಕˌ ಸಾರಿಗೆˌ  ಸಣ್ಣನೀರಾವರಿ ವ್ಯವಸ್ಥೆಗಳುˌ ಕೂಡು ಬೇಸಾಯಪದ್ದತಿ ˌಕೃಷಿ ಯಾಂತ್ರೀಕರಣಕ್ಕೆ ಅವಶ್ಯಕ ಏರ್ಪಾಡುಗಳುˌ ಆಹಾರಧಾನ್ಯ ಹಾಗೂ ವಾಣಿಜ್ಯ ಬೆಳೆಗಳ ಜತೆಗೆ ಹಣ್ಣುˌ ತರಕಾರಿˌ ಕೃಷಿˌ ಜೇನುವ್ಯವಸಾಯˌ ರೇಷ್ಮೆˌ ಮೀನುಗಾರಿಕೆˌ ಕೋಳಿ ˌಆಡು ಕುರಿ ಸಾಕಣೆ ಮುಂತಾದ ಕೃಷಿ ಪೂರಕವಾದ ಉಪಕಸುಬುಗಳಿಗೆ ರೈತರಿಗೆ ಆರ್ಥಿಕ, ತಾಂತ್ರಿಕ ಸಹಕಾರ ನೀಡುವುದುˌˌ ಎಲ್ ಪಿ ಜಿˌ ಪೆಟ್ರೋಲು ˌಡೀಸೆಲ್ˌ ಹಸಿರು ಇಂಧನಗಳನ್ನು ಸಂಘಗಳ ಮೂಲಕ ಪೂರೈಸುವುದುˌ ಸಂಘಗಳು ಸಾಮಾಜಿಕ ಭದ್ರತೆಯ ಏಜಂಟ್ ಆಗಿ ಯುವಜನತೆˌ ಮಹಿಳೆಯರು ಸಹಕಾರವನ್ನು ಆಕರ್ಷಿಸುವಂತೆ ಏರ್ಪಾಡುಗಳನ್ನು ಮಾಡುವುದು .ಆಸ್ಪತ್ರೆ ˌಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ನಡೆಸುವುದು ಡಿಜಿಟಲ್/ ಆನ್ ಲೈನ್ ಸೌಕರ್ಯಗಳತ್ತ ಸದಸ್ಯರನ್ನು ಆಕರ್ಷಿಸುವುದು— ಮುಂತಾದ ಹತ್ತು ಹಲವು ಉದ್ದೇಶಗಳನ್ನು  ಪ್ರಾದೇಶಿಕವಾರು ಅವಶ್ಯಕತೆˌ
ಅವಕಾಶಗಳನ್ನು ಗಮನಿಸಿ ಗ್ರಾಮೀಣ ಜನತೆಗೆ ಸುಲಭಸಾಧ್ಯವಾದ ಸೌಕರ್ಯಗಳನ್ನು ಒದಗಿಸುವ ಎಲ್ಲಾ ಚಟುವಟಿಕೆಗಳ ಜ್ಯಾರಿಗೆ ಅವಕಾಶ ಕಲ್ಪಿಸಲಾಗಿದೆ. ಇಂತಹ ಕೆಲವು ವ್ಯವಹಾರಗಳು ಕರಾವಳಿ ಭಾಗದಲ್ಲಿ ಈಗಾಗಲೆ ಜ್ಯಾರಿಯಲ್ಲಿ ಇರುವುದರಿಂದ ಅದೊಂದು ವಿಶೇಷ ಅನಿಸಲಾರದು. ಆದರೆ ದೇಶದ ಹಲವು ರಾಜ್ಯಗಳ ಬಹುಪ್ರದೇಶಗಳು ನೀರಾವರಿ ˌಇನ್ನಿತರ ಸೌಲಭ್ಯಗಳಿಂದ ವಂಚಿತವಾಗಿದ್ದು  ರೈತರು ಕೃಷಿಉತ್ಪನ್ನಗಳಿಂದ ಕನಿಷ್ಟ ಆದಾಯ ಪಡೆಯುತ್ತಿದ್ದಾರೆ. ಜೀವನ ನಿರ್ವಹಣೆಗೆ ಉದ್ಯೋಗಾವಕಾಶ ಕೂಡಾ ಕ್ಷೀಣ ರೀತಿಯಲ್ಲಿದ್ದುˌ ಉದ್ಯೋಗ ಅರಸಿ ವಲಸೆಹೋಗುತ್ತಿರುವುದು ಸಾಮಾನ್ಯ ವಿಷಯ. ಇಂತಹ ಸಂದರ್ಭಗಳನ್ನು ತಡೆಗಟ್ಟಿ ರೈತರ ಬದುಕನ್ನು ಹಸನು ಮಾಡುವ ಉದ್ಧೇಶವನ್ನಿಟ್ಟು ಕೃಷಿಪತ್ತಿನ ಸಹಕಾರ ಸಂಘಗಳನ್ನು ಬಹುಉದ್ದೇಶಿತ ಚಟುವಟಿಕೆಯ ಕೇಂದ್ರವಾಗಿಸುವುದು ಕೇಂದ್ರ ಸರಕಾರದ ಗುರಿ. ಇಂದು ದೇಶದಲ್ಲಿ 65000 ಕೃಷಿಪತ್ತಿನ ಸಹಕಾರಿ ಸಂಘಗಳಿದ್ದು ˌ ಮುಂದಿನ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು 5ಲಕ್ಷಕ್ಕೆ ಏರಿಸುವ ಗುರಿಯನ್ನು ಗೌರವಾನ್ವಿತ ಕೇಂದ್ರಸಚಿವ ಶ್ರೀ ಅಮಿತ್ ಶಾ ರವರು ಹೊಂದಿದ್ದು ˌಸಹಕಾರದ ಮೂಲಕ ಗ್ರಾಮೀಣ ಬದುಕಿಗೆ ಜೀವತುಂಬಲು ಸಾಧ್ಯ ಎಂಬ ನಿರ್ಧಾರ ತಳೆದಿರುತ್ತಾರೆ.

ಸಹಕಾರಿ ಸಂಘಗಳ ಬಲವರ್ಧನೆಯ ಮೂಲಕ ಜನರ ಸರ್ವಚಟುವಟಿಕೆಯ ಕೇಂದ್ರಬಿಂದುವಾಗಿ ರೂಪಿಸುವ ಯೋಚನೆˌ ಯೋಜನೆಗಳು  ನಾಯಕರ ಮುಂದಿದ್ದರೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಮಹತ್ತರವಾದ ಜವಾಬ್ದಾರಿ ಆಯಾಯ ಸಂಘಗಳ ಅಧ್ಯಕ್ಷˌ ಆಡಳಿತಮಂಡಳಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಶಿಬಂಧಿಯವರಿಗೆ ನೇರ  ಸಂಬಂಧಿಸಿರುತ್ತದೆ.ಆಡಳಿತˌ ಶಿಬಂಧಿಯವರಲ್ಲಿ ದಕ್ಷತೆˌಬದ್ದತೆˌ ಪ್ರಾಮಾಣಿಕತೆˌ ಸಹಕಾರದ ಜ್ಞಾನ ತಿಳುವಳಿಕೆ ಮನೆಮಾಡಿದ್ದಲ್ಲಿ ಮಾತ್ರ ಆ ಸಂಸ್ಥೆ ಯಶಸ್ವಿಯಾಗಲು ಸಾಧ್ಯ. ಅವರೆಲ್ಲರಿಗೂ ಅವರದೇ ಆದ ಕರ್ತವ್ಯಪ್ರಜ್ಞೆ ಇರಬೇಕು. ಕೇವಲ ಸ್ಥಾನಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಸಂಸ್ಥೆಯಲ್ಲಿದ್ದೇವೆ ಎಂಬ ವರ್ತನೆಯಾದಲ್ಲಿ ಸಹಕಾರ ಎಂದೇಂದೂ ಯಶಸ್ವಿನ ಪಥ ಕಾಣದು. ಇಂದು ಸಹಕಾರದ ಆಡಳಿತದಲ್ಲಿ ರಾಜಕೀಯ ಕೃಪಾ ಪೋಷಿತರು ತುಂಬುತ್ತಿರುವುದು ಅಪಾಯಕಾರಿ ಸಂಕೇತ. ರಾಜಕೀಯ ಹಿನ್ನಲೆ ಇದ್ದರೂ ಸಂಸ್ಥೆಯ ಜವಾಬ್ದಾರಿ ಪಡೆದ ನಂತರ ಅದನ್ನು ನಿಭಾಯಿಸುವ ಸಾಮರ್ಥ್ಯ ಬದ್ದತೆ ಆತನಲ್ಲಿರಬೇಕು. ಸಮರ್ಥರಲ್ಲದವರಾಗಿದ್ದು ರಾಜಕೀಯನಾಯಕರನ್ನು ಓಲೈಸುವವರು ಮಾತ್ರ ಸ್ಥಾನಮಾನಕ್ಕೆ ಬಂದರೆ ಆ ಸಂಘದ ಸರ್ವ ಸದಸ್ಯರ ಆಶೋತ್ತರ ಹಾಗೂ ಸಹಕಾರಸಿದ್ದಾಂತದ ಬೇರಿಗೆ ಕೊಡಲಿಯೇಟು ನೀಡಿದಂತಾಗುವುದು.

ಸಕ್ರೀಯ ವ್ಯವಹಾರಗಳ ಸದಸ್ಯರು ಸಂಘದ ಆಧಾರಸ್ತಂಭ.  ಗೋಪುರಾಕೃತಿಯ ವ್ಯವಸ್ಥೆಯಾಗಿರುವ ಸಹಕಾರಿ ಸಂಘಗಳಲ್ಲಿ ಸದಸ್ಯರು ಸದಾ ಜಾಗೃತವಂತರಾಗಿ ಸಂಸ್ಥೆಯ ವ್ಯವಹಾರಗಳನ್ನು ಅವಲೋಕಿಸುತ್ತಿರಬೇಕು.
ಸದಸ್ಯರು ˌಆಡಳಿತ ಮಂಡಳಿˌ ಶಿಬಂಧಿ ತಮ್ಮತಮ್ಮ ಹಕ್ಕುˌಕರ್ತವ್ಯ ಅರಿತು ಸಕ್ರಿಯವಾಗಿ ತೊಡಗಿಸಿಕೊಳ್ಳತಕ್ಕದ್ದು. ವಿಶೇಷವಾಗಿ ಗ್ರಾಮೀಣ ಬದುಕಿಗೆ ಮುನ್ನುಡಿ ಬರೆಯಲು ಶಕ್ತವಾಗಿರುವ “ಸಹಕಾರ” ಉತ್ತಮ ಆಡಳಿತ ನೀಡಿದಾಗ ಗ್ರಾಮೀಣರ ಜೀವನ ಸಮೃದ್ದಿಯತ್ತ ಸಾಗುವುದು ಶತಸಿದ್ದ. ಸರ್ವರಿಗೂ ಸಮಪಾಲುˌ— ಸರ್ವರಿಗೂ ಸಮಬಾಳು ಸಿದ್ದಾಂತದ ಆಶಯದೊಂದಿಗೆ ಮುಂದಿನ ದಿನಗಳಲ್ಲಿ ಸಹಕಾರ ಬಲವರ್ಧನೆಯಾಗಲಿ.

ರಾಧಾಕೃಷ್ಣ ಕೋಟೆ

ಅಂಚೆ:ಕಳಂಜ ˌಸುಳ್ಯ

ತಾಲೂಕು. ದ. ಕ.     

 574212   

  9448503424

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More