ಕೇರಳದ ಕೆಲವು ಸಹಕಾರಿ ಸಂಘಗಳು ದೊಡ್ಡ ಸದ್ದು ಮಾಡುತ್ತಿವೆ. ಸಹಕಾರಿ ತತ್ವಕ್ಕೆ ಮಸಿ ಬಳಿಯುವ ನಡೆ ಆ ಸಹಕಾರಿ ಸಂಘಗಳದ್ದು. ಸುಮಾರು ಮುನ್ನೂರು ಕೋಟಿಯಷ್ಟು ಸದಸ್ಯರ ಠೇವಣಿಯನ್ನು ನುಂಗಿ ನೀರು ಕುಡಿದ ತೃಶೂರಿನ ಕರವನ್ನೂರು ಸಹಕಾರಿ ಸಂಘ ಆರು ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕೂಡ ಆಯಿತು.
ಸಹಜ ಭಯ
ಇದು ಒಂದು ಸುದ್ದಿ ಮಾಧ್ಯಮಗಳಲ್ಲಿ ಬಂದುದೇ ತಡ. ಸಹಕಾರಿ ಸಂಘಗಳಲ್ಲಿ ಠೇವಣಿ ಹೂಡಿದವರು ಕಂಗಾಲು. ನಮ್ಮ ಸಹಕಾರಿ ಸಂಘ ಗಟ್ಟಿ ಇದೆಯ? ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿಶ್ವಾಸಕ್ಕೆ ಅರ್ಹರೇ? ಯಾವದಾದರೂ ಸಂಗತಿಗಳು ನಮ್ಮ ಅರಿವಿಗೆ ಬಾರದೆ ಹೋಗುತ್ತಿದೆಯ? ಇಂತಹ ಸಂಶಯಗಳು ಈಗ ವ್ಯಾಪಕವಾಗುತ್ತಿದೆ. ಸಹಜವಾಗಿ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಿಗೆ ಆತಂಕ ಹುಟ್ಟಿಕೊಂಡಿದೆ. ಸದಸ್ಯರು ಭಯ ಪಡುವುದು, ಕೆಲವು ಆಡಳಿತ ಮಂಡಳಿಯ ಸದಸ್ಯರ ಬೆಪ್ಪು ಬೆಪ್ಪಾದ ಹೇಳಿಕೆಗಳು, ಸಿಬ್ಬಂದಿಗಳಲ್ಲಿ ಒಂದೆರಡು ಜನ ಸದಸ್ಯರ ಕಣ್ಣಿಗೆ ಸಂಶಯ ಪಡುವಂತೆ ವರ್ತಿಸುವುದು. ಇಂತಾದ್ದೆಲ್ಲ ಇದ್ದು ಬಿಟ್ಟರೆ ಸದಸ್ಯರು ಭಯ ಪಡುವುದು ಸಹಜ.
ಆಡಳಿತ ಮಂಡಳಿ ಜವಾಬ್ದಾರಿ:
ಸದಸ್ಯರ ಠೇವಣಿ ಎಷ್ಟೇ ಇರಲಿ ಅದನ್ನು ಕಾಪಾಡುವುದು ಆಡಳಿತ ಮಂಡಳಿಯ ಜವಾಬ್ದಾರಿ. ಆಡಳಿತ ಮಂಡಳಿ ಹೊರಗೆ ಸದಸ್ಯರು ತಮ್ಮ ಠೇವಣಿಯ ಬಗ್ಗೆ ಆತಂಕ ಪಡುವ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ಒಂದೆರಡು ಸದಸ್ಯರು ಠೇವಣಿ ಹಿಂದಕ್ಕೆ ಪಡೆದ ಸಂಗತಿ ಹೊರಗೆ ಗೊತ್ತಾದರೆ ಸಾಕು. ಕೆರೆ ಕಟ್ಟೆ ಒಡೆದು ನೀರೆಲ್ಲ ಖಾಲಿಯಾದಂತೆ ಆಗಿ ಹೋದೀತು. ಪ್ರತಿಯೊಬ್ಬ ನಿರ್ದೇಶಕ ಹೊರಗೆ ಮಾತಾಡುವಾಗ, ಸದಸ್ಯರು ಆತಂಕ ಪಟ್ಟು ವಿಚಾರಿಸುವಾಗ ಗೊತ್ತಿದ್ದದನ್ನಷ್ಟೆ ಸಮರ್ಪಕವಾಗಿ ಹೇಳಬೇಕು. ಅದು ಹೊರತು ಗೊತ್ತಿಲ್ಲದ ಸಂಗತಿಗಳನ್ನು ಬಡಾಯಿ ಬಿಡಲು ಹೋಗಬಾರದು. ಸಿಬ್ಬಂದಿಗಳಿಗೆ ಕೂಡ ಅಷ್ಟೇ ಜವಾಬ್ದಾರಿ ಇದೆ. ಹೊರಗೆ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದಾರೆ ಎಂಬ ಅರಿವು ಸತತ ಬೇಕು.
ಸದಸ್ಯರಿಗೆ ಮನವರಿಕೆ ಮಾಡಿ
ಸದಸ್ಯರಿಗೆ ನಮ್ಮ ರಾಜ್ಯದ ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮನವರಿಕೆ ಮಾಡಿ. ಜೊತೆಗೆ ನಮ್ಮ ಸಹಕಾರಿ ಸಂಘ ಗಟ್ಟಿಯಾಗಿದೆ. ಪ್ರತಿಯೊಂದು ಠೇವಣಿ ಬಗೆಗೂ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಆಸ್ಥೆ ಇದೆ. ಯಾವುದೇ ಸಮಸ್ಯೆ ನಮ್ಮ ಸಹಕಾರಿ ಸಂಘಗಳಲ್ಲಿ ಸಹಕಾರಿ ಇಲಾಖೆ ಕೂಡ ಗುರುತಿಸಿಲ್ಲ. ಲೆಕ್ಕ ಪರಿಶೋಧಕರು ಸಂಘದ ನಡೆಯಲ್ಲಿ ತೃಪ್ತಿ ಪಟ್ಟಿರುವುದನ್ನು ಸದಸ್ಯರ ಗಮನಕ್ಕೆ ತರಲೇ ಬೇಕು.
ಸದಸ್ಯರ ಸಭೆ ನಡೆಸಿ
ಇನ್ನೂ ಒಳ್ಳೆಯ ಕ್ರಮವೆಂದರೆ ಸಹಕಾರಿ ಸಂಘದ ಕಾರ್ಯವ್ಯಾಪ್ತಿ ಇರುವ ಕಡೆಗಳಲ್ಲಿ ಸದಸ್ಯರ ಸಭೆ ಕರೆದು ಮಾತನಾಡಿಸುವುದು. ಅವರ ಸಂಶಯಗಳು, ಆತಂಕಗಳು ಅಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ನಿವಾರಣೆಯಾದರೆ ಬಹಳ ಒಳ್ಳೆಯದು. ಇಂತಹ ಸಭೆಗಳಿಗೆ ಠೇವಣಿದಾರರು ಆತಂಕದಿಂದಲೆ ಬರುವ ಕಾರಣ ಅವರ ವಿಶ್ವಾಸಗಳಿಸಿ ಕೊಳ್ಳುವುದನ್ನು ಆಡಳಿತ ಮಂಡಳಿ ತಪ್ಪದೆ ಮಾಡಬೇಕು.
ಮನೆ ಮನೆಗೆ ಭೇಟಿ
ದೊಡ್ಡ ಮಟ್ಟಿನ ಠೇವಣಿದಾರರು ಸದಸ್ಯರ ಸಭೆಗಳಿಗೆ ಹಾಜರಾಗುವುದು ಕಡಿಮೆ. ಹೆಚ್ಚಾಗಿ ಅದೆಲ್ಲ ಗೌಪ್ಯವಾಗಿರಿಸಲು ಎಲ್ಲರು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಠೇವಣಿದಾರರ ಪಟ್ಟಿ ತಯಾರಿಸಿ ಅವರ ಮನೆ ಮನೆಗೆ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿಗಳು ಭೇಟಿಕೊಟ್ಟು ಸಂಘದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಮಾತಿನಲ್ಲಿ ವಿಶ್ವಾಸ ಬರುವ, ಜವಾಬ್ದಾರಿಯುತವಾಗಿ ವರ್ತಿಸುವ ನಿರ್ದೇಶಕರು ಮತ್ತು ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಒಬ್ಬ ನಿರ್ದೇಶಕ ಮತ್ತು ಒಬ್ಬ ಸಿಬ್ಬಂದಿ ಸದಸ್ಯರ ಮನೆ ಮನೆಗೆ ಭೇಟಿ ಕೊಡುವ ಕಾರ್ಯ ಮಾಡುವುದು ವಿಹಿತ.
ಒಟ್ಟಿನಲ್ಲಿ ಸದಸ್ಯರು ನಿರಂತರ ಸಹಕಾರಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ತಮ್ಮ ವಿಶ್ವಾಸವನ್ನಿಟ್ಟಿರುವಂತೆ ಆಡಳಿತ ಮಾಡುವುದು ಸಣ್ಣ ಸಂಗತಿಯಲ್ಲ. ಅದಕ್ಕೆ ಅಧ್ಯಕ್ಷರಾದವರು ಬಹಳಷ್ಟು ಶ್ರಮ ಪಡಬೇಕು. ಮೊದಲು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರನ್ನು ಸಮಾನವೆಂದು ತಿಳಿದು ವಿಶ್ವಾಸದಿಂದ ಕೊಂಡುಹೋಗುವುದು, ನಂತರ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಕ್ಕೊಂಡು ಮೈಗಳ್ಳರಿಗೆ, ತಿರುಗಾಡಿ ಸಮಯ ಹಾಳುಮಾಡುವವರಿಗೆ ಬಿಸಿ ಮುಟ್ಟಿಸಿ ಸದಸ್ಯರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು.
ಶಂ. ನಾ. ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ- ೬೭೧೫೫೨
ಕಾಸರಗೋಡು ಜಿಲ್ಲೆ.