“ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದ ಮೇಲೆ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೆನೆ” ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕವಾಗಿ,ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಶಕ್ತರಾಗಲು ಸಹಕಾರಿ ಸಂಸ್ಥೆಗಳು ಅತ್ಯಗತ್ಯ.
ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಈ ಸಹಕಾರಿ ಸಂಸ್ಥೆಗಳು ಬಹುಮುಖ್ಯವಾದ ಪಾತ್ರವನ್ನು ವಹಿಸಿವೆ.
ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಬಂಡವಾಳಶಾಹಿಗಳಿಗೆ ಆದ್ಯತೆ ನೀಡುತ್ತಿರುವುದನ್ನು ನಾವು ಗಮನಿಸಿದ್ದೇವೆ ಆದರೆ ಈ ಸಹಕಾರಿ ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ.
ಮಹಿಳೆಯರ ಹಾಲು ಉತ್ಪಾದಕರ ಸಹಕಾರ ಸಂಘ ಗಳು ಮಹಿಳೆಯರಿಗೆ ಆರ್ಥಿಕವಾಗಿ ಸದೃಢರಾಗಲು ಸಹಕರಿಸುತ್ತಿವೆ.ತಮ್ಮ ಕೃಷಿಯೇತರ ಚಟುವಟಿಕೆಯಾಗಿ ಮತ್ತು ಸಮಗ್ರ ಕೃಷಿಯ ಒಂದು ಭಾಗವಾಗಿ ಈ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮತ್ತು ಈ ಹೈನುಗಾರಿಕೆಯ ಮುಖಾಂತರ ಸ್ವಂತ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಾತಿನಿಧ್ಯವನ್ನು ನೀಡಿ ಲಿಂಗ ಭೇದಭಾವವನ್ನು ಹೋಗಲಾಡಿಸಲು ಸಹಕಾರಿ ಸಂಸ್ಥೆಗಳು ಮಾಡುತ್ತಿರುವ ಕೆಲಸಗಳು ಅವಿಸ್ಮರಣೀಯ.
ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರನ್ನು ಸಂಘಟಿಸಲು ಸಹಕಾರಿಯಾಗಿದೆ ಇದರ ಮೂಲಕ ಅವರು ಬೆಳೆಯುತ್ತಿರುವ ಅಥವಾ ಉತ್ಪಾದಿಸುತ್ತಿರುವ ಸಾಮಗ್ರಿಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಪ್ತು ಮಾಡುವಲ್ಲಿ ಸಫಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಬೇರೆ ಬೇರೆ ಭಾಗದ ರೈತ ಮಹಿಳೆಯರನ್ನು ಸಂಘಟಿಸಿ ಅವರು ತಮ್ಮ ಉದ್ಯಮದ ಮೂಲಕ ಉತ್ಪಾದಿಸುವ ವಸ್ತುಗಳನ್ನು ಪ್ರತ್ಯೇಕ ಬ್ರಾಂಡ್ ಮಾಡಲು ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಕುಶಲಕರ್ಮಿಗಳ ಸಹಕಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಹೊಸ ಕೌಶಲ್ಯ ಮತ್ತು ತರಬೇತಿಯನ್ನು ಪಡೆಯಬಹುದು.
ಒಂದು ಅಧ್ಯಯನದ ಪ್ರಕಾರ ನೇಪಾಳದಲ್ಲಿ ಮಹಿಳಾ ಸಹಕಾರಿಯ ಅಧ್ಯಯನದಲ್ಲಿ ವಿವಿಧ ಜಾತಿಯ,ಧರ್ಮದ ಮತ್ತು ವರ್ಗದ ಮಹಿಳೆಯರನ್ನು ಸೇರಿಸುವುದರ ಮೂಲಕ ಮಹಿಳೆಯರಲ್ಲಿ ಸಾಮಾಜಿಕ ಅಡೆತಡೆಗಳು ಮುರಿದುಹೋಗಿವೆ ಮತ್ತು ಇದರ ಮೂಲಕ ಸಾಮಾಜಿಕ ಸಾಮರಸ್ಯ ಸ್ಥಾಪನೆಯಾಗಿದೆ.
ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿರುವ ಮಹಿಳೆಯರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಉನ್ನತ ಶಿಕ್ಷಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಹಾಗೂ ಬಸ್ ಪಾಸ್ ಸೌಲಭ್ಯವನ್ನೂ ಸಹಾ ಕೆಲವೊಂದು ಸಹಕಾರಿ ಸಂಘಗಳು ನೀಡುತ್ತಿರುವುದು ವಿಶೇಷವಾಗಿದೆ.
ಈ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿಯಿಂದ ಮಹಿಳೆಯರ ಸಬಲೀಕರಣಕ್ಕೆ ಉಪಯುಕ್ತವಾಗಲಿದೆ.
ತೇಜಸ್ ಎಚ್.ಎನ್
ಬಿಎಸ್ಸಿ ಕೃಷಿ ವಿದ್ಯಾರ್ಥಿ
ಜಿಕೆವಿಕೆ