ಎಪ್ಪತ್ತನೆಯ ಅಖಿಲ ಭಾರತ ಸಹಕಾರ ಸಪ್ತಾಹ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು. ಪ್ರತಿ ವರ್ಷ ಆಚರಣೆ ಮಾಡುವಂತೆ ಈ ವರ್ಷವೂ ಆಚರಣೆ ಮಾಡಿದ್ದೇವೆ. ಆಚರಣೆಯೊಂದಿಗೆ ನಾವು ಏನು ಸಾಧಿಸಿದ್ದೇವೆ? ಸಹಕಾರಿಗಳೊಂದಿಗೆ ಮತ್ತು ನಮ್ಮದೇ ಸಂಘ ಸಂಸ್ಥೆಯ ಸದಸ್ಯರೊಂದಿಗೆ ಒಡನಾಡಿ ಹೊಸ ಕನಸುಗಳನ್ನೇನು ಕಂಡಿದ್ದೇವೆ? ಇದು ಆಗದಿದ್ದರೆ ಸಪ್ತಾಹದ ಆಚರಣೆ ವ್ಯರ್ಥ.
ನಾವೆಲ್ಲಿದ್ದೇವೆ?
ಪ್ರತಿ ವರ್ಷ ಸಹಕಾರ ಸಪ್ತಾಹ ಆಚರಣೆ ಮಾಡುವಾಗ ಮೊದಲು ಮಾಡಬೇಕಾದ ಕೆಲಸ ನಾವೆಲ್ಲಿದ್ದೇವೆ ಎಂಬ ವಿಮರ್ಶೆ. ಒಂದು ವರ್ಷದಲ್ಲಿ ನಮ್ಮ ಸಂಘ ಸಾಗಿ ಬಂದ ಹಾದಿ ಹೇಗಿದೆ? ಲಾಭ ನಷ್ಟದ ಲೆಕ್ಕಾಚಾರದ ಹೊರತಾಗಿ ಸದಸ್ಯರಿಗೆ ಮೌಲ್ಯವರ್ಧಿತ ಸೇವೆ ಏನನ್ನು ಒದಗಿಸಿದ್ದೇವೆ? ಸದಸ್ಯರ ಅಹವಾಲುಗಳನ್ನು ಕೇಳುವ ಕಿವಿಯಾಗಿದ್ದೇವೆಯೆ? ಸಿಬ್ಬಂದಿಗಳ ಕೌಶಲ್ಯ ಅಭಿವೃದ್ಧಿ ದೃಷ್ಟಿಯಲ್ಲಿ ಒಂದು ವರ್ಷದಲ್ಲಿ ಕೈಗೊಂಡ ಕೆಲಸಗಳೇನು? ಆಡಳಿತ ನಿರ್ವಹಣೆಯಲ್ಲಿ ಮತ್ತಷ್ಟು ನಿಖರತೆ ತರಲು ನಿರ್ದೇಶಕರಿಗೆ ತರಬೇತಿ ಸಿಕ್ಕಿದೆಯೆ? ತಿಂಗಳಿಗೊಮ್ಮೆಯಾದರೂ ಸಿಬ್ಬಂದಿಗಳ ಜೊತೆ ಆಡಳಿತ ಮಂಡಳಿ ಕುಳಿತು ಆಯಾಯ ತಿಂಗಳಿನ ಕಾರ್ಯ ಚಟುವಟಿಕೆಗಳನ್ನು ವಿಮರ್ಶೆ ಮಾಡುತ್ತಿದೆಯೆ? ಇಂತಹ ಹತ್ತಾರು ವಿಷಯಗಳು ಸಹಕಾರ ಸಪ್ತಾಹದಲ್ಲಿ ಗಣನೆಗೆ ಬರಬೇಕು. ಆದರೆ ಇದನ್ನು ಪಾಲಿಸಿದ ಸಹಕಾರಿ ಸಂಘಗಳು, ಸಹಕಾರಿಗಳು ಕಡಿಮೆಯೆನಿಸುತ್ತಿದೆ.
ಸಹಾಕಾರ ಚಳುವಳಿಯ ಬಗ್ಗೆ ಸಾಕಷ್ಟು ಪ್ರಸ್ತಾಪಗಳು ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಹಕಾರ ಸಪ್ತಾಹಗಳಲ್ಲಿ ಬಂದಿವೆ. ಪ್ರತಿ ವರ್ಷ ಹೇಳಿದ್ದನ್ನೆ ಹೇಳುವುದು, ಕೆಲವು ವೇದಿಕೆಗಳು ರಾಜಕೀಯ ಪ್ರಹಸನಗಳಿಗೆ ಕಾರಣವಾಗುವುದು ಇದೆಲ್ಲ ನಡೆದಿದೆ. ಇನ್ನೊಬ್ಬರ ಹುಳುಕನ್ನು ಖಂಡಿಸಲು ಇಲ್ಲವೆ ಲೇವಡಿ ಮಾಡಲು ಸಹಕಾರ ಸಪ್ತಾಹದ ವೇದಿಕೆಗಳು ಬಳಕೆಯಾಗುವುದು ಸಮಂಜಸ ಅನಿಸುವುದಿಲ್ಲ.
ತಳಮಟ್ಟದಿಂದ ತಟ್ಟಬೇಕು
ಸಹಕಾರ ಸಪ್ತಾಹದ ಕಾರ್ಯ ಚಟುವಟಿಕೆಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮಟ್ಟದಿಂದ ಆರಂಭವಾಗಬೇಕು. ಸಹಕಾರ ತತ್ವಗಳು ಸದಸ್ಯನ ಕುಟುಂಬದ ಮಟ್ಟದಲ್ಲಿ ಮನಸ್ಸಿಗೆ ನಾಟಬೇಕು, ತಟ್ಟಬೇಕು. ಇದು ಕುಟುಂಬದ ಒಳಗಿನ ಬಾಂಧವ್ಯ ವೃದ್ಧಿಗೆ ಸಹಕಾರಿ. ಮೊದಲನೆಯದಾಗಿ ಕುಟುಂಬದ ಸದಸ್ಯರಿಗೆ ಪರಸ್ಪರ ಸಹಕಾರ ನೀಡುವ ಮನೋಭಾವ ಮನಸ್ಸಿಗೆ ಇಳಿಯಬೇಕು. ಸಹಕಾರ ತತ್ವದ ಪ್ರಕಾರ ಮೂಲಕ ಒಂದು ಸಹಕಾರಿ ಸಂಘ ಸಾಮಾಜಿಕ ಬದಲಾವಣೆ, ಸಾಮರಸ್ಯ ವೃದ್ಧಿಗೆ ನೆರವಾಗುತ್ತದೆಯೆಂದು ಇದನ್ನು ಒಂದು ವಾರದ ಕಾರ್ಯಕ್ರಮದ ಒಂದೆರಡು ದಿವಸ ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕರಿ ಸಂಘ ತನ್ನ ವ್ಯಾಪ್ತಿಯೊಳಗೆ ಬರುವ ಪ್ರದೇಶದೊಳಗೆ ಒಂದೆರಡಾದರೂ ಕಾರ್ಯಕ್ರಮಗಳನ್ನು ಮಾಡಿದರೆ ಅದರಲ್ಲಿ ಸದಸ್ಯರು ತಮ್ಮದೇ ಸಂಘದ ಅಧಿಕೃತರ ಸಮ್ಮುಖ ಕುಳಿತು ಸಂಘದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಲು, ಸಂಘದ ನಡೆಯಲ್ಲಿ ಏನಾದರೂ ತೊಂದರೆಗಳು ನುಸುಳುವಂತಿದ್ದರೆ ಅದನ್ನು ಆರಂಭದಲ್ಲಿಯೇ ಹೊಸಕಿ ಹಾಕಲೂ ಅನುಕೂಲವಾಗುತ್ತದೆ.
ಸಹಕಾರ ಸಂಘಗಳು ತಮ್ಮ ಕಾರ್ಯ ವಿಸ್ತಾರದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವೊಂದು ಮೌಲ್ಯವರ್ಧಿತ ಸೇವೆಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸದಸ್ಯರು ಗುರುತಿಸಿ ಹೇಳುವುದಿದೆ. ಇದು ಇಂತಹ ತಳಮಟ್ಟದ ಸಮಾವೇಶಗಳ ಹೆಚ್ಚುಗಾರಿಕೆ. ಒಂದು ಸಣ್ಣ ಪತ್ತಿನ ಸಹಕಾರಿ ಸಂಸ್ಥೆ ಹಂತ ಹಂತವಾಗಿ ಬೆಳೆಯಲು ತನ್ನ ಸದಸ್ಯರ ಪ್ರೀತಿ ಗಳಿಸಿಕೊಳ್ಳಲು ಸಹಕಾರ ಸಪ್ತಾಹ ಸಾಕಷ್ಟು ಅವಕಾಶ ನೀಡುತ್ತದೆ.
ಮನೆ ಮನೆ ಸಂಪರ್ಕ
ಅಡಿಕೆ ಬೆಳೆಗಾರರ ಕಣ್ಮಣಿ ಕ್ಯಾಂಪ್ಕೊ ಸಹಕಾರ ಸಪ್ತಾಹದಲ್ಲಿ ವಾರಪೂರ್ತಿ ತನ್ನ ಸಿಬ್ಬಂದಿ ಮತ್ತು ನಿರ್ದೇಶಕರನ್ನು ತೊಡಗಿಸಿಕೊಳ್ಳುತ್ತದೆ. ತನ್ನ ಸದಸ್ಯರ ಮನೆಗೆ ತೆರಳಿ ಹೊಸ ವರ್ಷದ ಕ್ಯಾಲೆಂಡರ್ ಕೊಟ್ಟು ಕ್ಯಾಂಪ್ಕೊ ಬಗೆಗೆ ಸದಸ್ಯರಿಗೆ ವಿವರ ಕೊಡುವುದು. ಅವರಲ್ಲಿರುವ ಅನಿಸಿಕೆಗಳನ್ನು ಹಂಚಿಕೊಳ್ಳುವುದು, ಸಂಸ್ಥೆಯ ಯೋಜನೆ ಹಾಗೂ ಹೊಸತನಗಳನ್ನು ತಿಳಿದುಕೊಳ್ಳುವುದು. ಅಡಕೆ ಮಾರುಕಟ್ಟೆಯ ಸ್ಥಿತಿ ಗತಿಗಳ ಬಗೆಗೆ ಅರಿತುಕೊಳ್ಳುವುದು, ಕೃಷಿಯಲ್ಲಿನ ನೂತನ ಆವಿಷ್ಕಾರಗಳ ಪರಿಚಯ, ಹೀಗೆ ಕ್ಯಾಂಪ್ಕೊ ತನ್ನ ಸದಸ್ಯರ ಮನೆ ಮನೆ ಭೇಟಿಯಿಂದ ಸಾಕಷ್ಟು ಅಂಶಗಳನ್ನು ಗುರುತು ಹಾಕಿಕೊಂಡು ಸಾಧ್ಯವಾದ ಕಡೆ ಅದನ್ನು ಅಳವಡಿಸಿಕೊಳ್ಳಲು ನೋಡುತ್ತದೆ.
ಈ ಮನೆ ಮನೆ ಭೇಟಿಯಿಂದ ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಪೂರಕ ಅಂಶಗಳಿವೆ. ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಪ್ರತಿನಿಧಿಗಳು ಬೆಳೆಗಾರರು ಇದ್ದಲ್ಲಿಗೆ ತೆರಳುವುದರಿಂದ ಅವರು ಕೂಡ ತಮ್ಮ ಸಮಾಜದ ಬಗ್ಗೆ ಇದುವರೆಗೆ ಗೊತ್ತಿರದ ಹಲವು ಅಂಶಗಳನ್ನು ತಿಳಿಯಲು ಅನುಕೂಲ.
ಒಟ್ಟಿನಲ್ಲಿ ಸಹಕಾರ ಸಪ್ತಾಹದಿಂದಾಗಿ ಸಹಕಾರ ಸಂಘ, ಸಂಸ್ಥೆಗಳು ಬೆಳೆಯಬೇಕು. ಹೊಸತನಗಳತ್ತ ತೆರೆದುಕೊಳ್ಳಬೇಕು. ತನ್ನನ್ನು ನಂಬಿದ ಸದಸ್ಯರ ಬಗೆಗೆ ಧನಾತ್ಮಕವಾಗಿ ವ್ಯವಹರಿಸಿ ತನ್ಮೂಲಕ ಸಮಾಜೋದ್ಧಾರಕ್ಕೆ ಯಥಾನುಶಕ್ತಿ ಕೊಡುಗೆ ನೀಡಿ ಭಾರತ ವಿಶ್ವಗುರುವಾಗುವತ್ತ ಇಟ್ಟ ಹಜ್ಜೆಗೆ ಬಲ ತುಂಬ ಬೇಕು.
ಶಂ.ನಾ.ಖಂಡಿಗೆ
‘ಶ್ಯಾಮ ಕೃಪಾ’ ನಾಗೋಡಿ
ಅಂಚೆ ; ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ