ಕೃಷಿ-ತೋಟಗಾರಿಕೆಗೆ 6,688 ಕೋಟಿ ರೂ ಅನುದಾನ:
ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ಆಶಯದೊಂದಿಗೆ ರಾಜ್ಯ ಸರ್ಕಾರ ಹಲವಾರು ಹೊಸ ಯೋಜನೆಗಳೊಂದಿಗೆ ಹಳೆಯ ಕೆಲವು ಕಾರ್ಯಕ್ರಮಗಳನ್ನೂ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಗಮನ ಹರಿಸಿದೆ. ಕೃಷಿ-ತೋಟಗಾರಿಕೆ ಯೋಜನೆಗಳಿಗಾಗಿ 6,688 ಕೋಟಿ ರೂ. ಅನುದಾನವನ್ನು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮೀಸಲಿಟ್ಟಿದ್ದಾರೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುವ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ಯನ್ನು ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನು ಒಳಗೊಂಡ ಸಮಗ್ರ ಕೃಷಿ ಚಟುವಟಿಕೆಗಳನ್ನು ಮಾಡುತ್ತ ಆದಾಯದಲ್ಲಿ ಸ್ಥಿರತೆ ಕಂಡುಕೊಳ್ಳಲು ಬೆಂಬಲ ನೀಡುವುದು, ಮಣ್ಣಿನ ಗುಣ ಹಾಗೂ ಮಾರುಕಟ್ಟೆ ಬೇಡಿಕೆ ಆಧರಿಸಿ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ರೈತರಿಗೆ ಮಾರ್ಗದರ್ಶನ ನೀಡುವುದು, ಮಣ್ಣು ಪರೀಕ್ಷೆ ಮತ್ತು ಗುಣಮಟ್ಟ ಕುರಿತು ಮಾಹಿತಿ ನೀಡುವುದು, ಹೊಸ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನಗಳ ಕುರಿತು ರೈತರಿಗೆ ಅರಿವು ಮೂಡಿಸಿ ಬೆಂಬಲ ನೀಡುವುದು, ರೈತರಿಗೆ ಸಂಗ್ರಹಣೆ ಮತ್ತು ಮೌಲ್ಯವರ್ಧನೆಯ ಕುರಿತು ಅರಿವು ಮೂಡಿಸುವುದು ಮತ್ತು ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಈ ಯೋಜನೆಯಡಿ ಬರಲಿದೆ.
ಬೆಳೆಯ ಉತ್ಪಾದಕತೆ ಮುನ್ಸೂಚನೆ ಪಡೆಯಲು ಉಪಗ್ರಹ ಚಿತ್ರ, ಸೆನ್ಸಾರ್‌ಗಳ ಬಳಕೆ ಮತ್ತು ಮಷಿನ್ ಲರ್ನಿಂಗ್‌ನಂಥ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಧರಿಸಿ ದತ್ತಾಂಶ ಅಭಿವೃದ್ಧಿ ಮಾಡುವುದು, ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪನೆ ಮಾಡುವುದು, ಬರಪೀಡಿತ, ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ನರೇಗಾದಡಿ ಪ್ರತಿವರ್ಷ 1000ದಂತೆ ಒಟ್ಟು 5 ಸಾವಿರ ಸಣ್ಣ ಸರೋವರಗಳನ್ನು ನಿರ್ಮಾಣ ಮಾಡುವುದು, ಕೀಟ, ರೋಗ, ಪೋಷಕಾಂಶ ನಿರ್ವಹಣೆಯ ಬಗ್ಗೆ ಸಲಹೆ ನೀಡಲು ರಾಯಚೂರು ಕೃಷಿ ವಿವಿ ಅಭಿವೃದ್ಧಿಪಡಿಸಿರುವ ಇ-ಸ್ಯಾಪ್ ತಂತ್ರಾಂಶದ ಸೌಲಭ್ಯ ಎಲ್ಲ ರೈತರಿಗೆ ಪರಿಚಯಿಸಲು ಕ್ರಮ ಕೈಗೊಳ್ಳುವುದು, ಕೃಷಿ, ತೋಟಗಾರಿಕೆ ಉತ್ಪನ್ನಗಳ ರಫ್ತು ಉತ್ತೇಜಿಸಲು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯನ್ನು ಬಲಪಡಿಸಲು 80 ಕೋಟಿ ರೂ. ಮೀಸಲಿಡುವುದು, ಮಂಡ್ಯ ಜಿಲ್ಲೆಯ ವಿ.ಸಿ. ಫಾರಂನಲ್ಲಿ ಕೃಷಿ ವಿವಿ ಸ್ಥಾಪಿಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡುವುದು ಈ ಯೋಜನೆಯಲ್ಲಿ ಬರುವ ಮುಖ್ಯ ಅಂಶಗಳು.
ಮತ್ಸೃ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ನಿಂದ 3,000 ರೂ.ಗೆ ಹೆಚ್ಚಳ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ಸಹಾಯಧನ ನೀಡುವ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ನಬಾರ್ಡ್ ಸಹಯೋಗದೊಂದಿಗೆ 20 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿನ 16 ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಣ್ಣಿಸಲಾಗಿದೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆಗೆ 6 ಕೋಟಿ ರೂ. ವೆಚ್ಚ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಡಲಾಗಿದೆ.
ಮುಖ್ಯವಾಗಿ ನಮ್ಮ ದೊಡ್ಡ ಕೊರತೆ ಎಂದರೆ ಕೃಷಿ ಹಾಗೂ ಸಂಬಂಧಿಸಿದ ಇಲಾಖೆಗಳ ನಡುವಿನ ಸಮನ್ವಯದ್ದು. ಇದನ್ನು ಹೋಗಲಾಡಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸಮನ್ವಯದ ದೃಷ್ಟಿಯಿಂದ ಒಳ್ಳೆಯ ನೀತಿ. ಕೃಷಿ ಭಾಗ್ಯ ಯೋಜನೆ ಮುಂದುವರಿಸಿರುವುದು ಉತ್ತಮ ನಿರ್ಧಾರ. ಆದರೆ ಇದಕ್ಕೆ 200 ಕೋಟಿ ರೂ. ಅನುದಾನ ಕಡಿಮೆಯಾಯಿತು. ಖಾಸಗಿ ಸಹಭಾಗಿತ್ವದಲ್ಲಿ ಸಿರಿಧಾನ್ಯಗಳ ಮಾರಾಟಕ್ಕೆ ಆದ್ಯತೆ ನೀಡಿರುವುದು ಬರ ನಿರ್ವಹಣೆಗೆ ಪರಿಣಾಮಕಾರಿ ಕ್ರಮ ಎನಿಸಿದೆ. ಮುಂದಿನ ಮೂರು ವರ್ಷ ಬರ ಇರಬಹುದೆಂಬ ಅಂದಾಜಿನಲ್ಲಿ ಸಿರಿಧಾನ್ಯಗಳ ಮೂಲಕ ರೈತರನ್ನು ಕಾಪಾಡಲು ಸರ್ಕಾರ ಮುಂದಾಗಿರುವ ದೂರಗಾಮಿ ಕ್ರಮ ಇದು. ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ಸ್ಥಾಪನೆ ಮಾಡುತ್ತಿರುವುದು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಹಕಾರಿ. ಕೃಷಿ ನಾವೀನ್ಯತೆ ತರಲು ಕೃತಕ ಬುದ್ದಿಮತ್ತೆ, ಮಷಿನ್ ಲರ್ನಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಬೆಳೆಯ ಉತ್ಪಾದಕತೆಯ ಮುನ್ಸೂಚನೆ ನೀಡಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಅಗತ್ಯವಾದ ಹಣಕಾಸಿನ ವಿವರಗಳನ್ನು ನೀಡಿಲ್ಲ. ಕೃಷಿಕರಿಗೆ ಸಹಕಾರ ವಲಯದಿಂದ ಸಾಲದ ಪ್ರಮಾಣ ಹೆಚ್ಚಿಸಿರುವುದು ಒಳ್ಳೆಯ ಬೆಳವಣಿಗೆ.
50 ಸಾವಿರ ರೂ.ವರೆಗಿನ ರೈತರ ಬೆಳೆಸಾಲ ಮನ್ನಾ ಯೋಜನೆಯಡಿ 21 ಲಕ್ಷ ರೈತರ 7,631 ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಲಾಗಿತ್ತು. ಈ ಯೋಜನೆಯಡಿ ಡಿಸಿಸಿ ಬ್ಯಾಂಕ್‌ಗಳಿಗೆ ಬಾಕಿಯಿದ್ದ 132 ಕೋಟಿ ರೂ. ಬಿಡುಗಡೆಗೆ ನಿರ್ಧರಿಸಲಾಗಿದೆ. ಡಿಸಿಸಿ, ಪಿಕಾರ್ಡ್ ಬ್ಯಾಂಕ್‌ಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಅಂದಾಜು 57 ಸಾವಿರ ರೈತರಿಗೆ ಅನುಕೂಲವಾಗಲಿದೆ. ಡಿಸಿಸಿ, ಪಿಕಾರ್ಡ್ ಬ್ಯಾಂಕ್‌ಗಳಿಗೆ 496 ಕೋಟಿ ರೂ. ಸಾಲ ಮರುಪಾವತಿ ನಿರೀಕ್ಷೆ ಇರುವುದರಿಂದ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ. ಈ ಉದ್ದೇಶಕ್ಕಾಗಿ 450 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ
ಆಹಾರ ಸಂಸ್ಕರಣಾ ವಲಯವು ರೈತರ ಆದಾಯ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕೃಷಿ ಉತ್ಪನ್ನಗಳು ವ್ಯರ್ಥವಾಗದಂತೆ ತಡೆಯಲು ಹಾಗೂ ಬೆಳೆಗಳಿಗೆ ಸಮರ್ಪಕ ಬೆಲೆ ದೊರಕಿಸುವ ಸಲುವಾಗಿ ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ರಚಿಸುವ ಬಗ್ಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಯೋಜನೆ ಮುಂದಿಟ್ಟಿದ್ದಾರೆ. ಇದರ ಮೂಲಕ ವಿವಿಧ ಇಲಾಖೆಗಳಡಿ ಬರುವ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಒಗ್ಗೂಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.
ತೋಟಗಾರಿಕೆಗೆ ಕಿಸಾನ್ ಮಾಲ್:
ತೋಟಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರಗಳು ಮತ್ತು ಉತ್ಪನ್ನಗಳನ್ನು ಒಂದೇ ಕಡೆ ಒದಗಿಸುವ ಉದ್ದೇಶದಿಂದ ಆಯ್ದ ಜಿಲ್ಲೆಗಳಲ್ಲಿ ‘ಕಿಸಾನ್ ಮಾಲ್’ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ರಫ್ತಿನ ಪ್ರಮಾಣ ಹೆಚ್ಚಿಸಲು ಕೊಯ್ಲೋತರ ನಿರ್ವಹಣಾ ಕೇಂದ್ರ ಹಾಗೂ ಮೌಲ್ಯವರ್ಧನ ಸಂಸ್ಕರಣಾ ಘಟಕಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದು, ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚು ಇಂಗಾಲ ಹಿಡಿದಿಟ್ಟುಕೊಳ್ಳುವ ಬೆಳೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ರೆಡಿಟ್ ರೂಪದಲ್ಲಿ ಮಾರಾಟದ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಲು ಅನುಕೂಲವಾಗುವಂತೆ ಉತ್ತೇಜನ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
ಅಡಕೆ ರೋಗ ನಿಯಂತ್ರಣ:
ರಾಜ್ಯದಲ್ಲಿ ಅಡಕೆ ಬೆಳೆಯಲ್ಲಿ ಕಂಡುಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಮೂರು ಕಡೆ ಗುಡ್ ಪಾರ್ಕ್
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಸಮೀಪ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ುಡ್ ಪಾರ್ಕ್‌ಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಸಿಎಂ ನೇತೃತ್ವದಲ್ಲಿ ಪ್ರಾಧಿಕಾರ:
ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ‘ಕೃಷಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ.
ಸಣ್ಣ ನೀರಾವರಿಗೆ 200 ಕೋಟಿ ರೂ:
ಅಂತರ್ಜಲ ಕುಸಿದಿರುವ ಕಡೆ ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರು ಪೂರೈಸಲು ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್ ನಂತಹ 115 ಕಾಮಗಾರಿಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ವಿವಿಧ ತಾಲೂಕುಗಳಲ್ಲಿ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಬಂದಾರು ಯೋಜನೆಗಳನ್ನು 850 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಮೀನುಗಾರಿಕೆಗೆ ಬೃಹತ್ ಅನುದಾನ:
ಮೀನುಗಾರಿಕಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ. ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಹೊನ್ನಾವರ ತಾಲೂಕಿನ ಮಂಕಿ ಅಥವಾ ಕಾಸರಗೋಡಿನಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ, ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ, ಅಕ್ವಾ ಪಾರ್ಕ್‌ಗಳ ಸ್ಥಾಪನೆ, ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕಾ ಹೊರಬಂದರು ನಿರ್ಮಾಣ, ವಿಜಯಪುರದ ಆಲಮಟ್ಟಿ ಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಸಿಎಂ ಪ್ರಸ್ತಾಪಿಸಿದ್ದಾರೆ. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ತುತ್ತಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ಏಳು ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಆಂಬುಲೆನ್ಸ್ ಖರೀದಿ ಮಾಡಲಾಗುವುದು ಎಂದು ಸಿಎಂ ಮುಂಗಡ ಪತ್ರದಲ್ಲಿ ಘೋಷಿಸಿದ್ದಾರೆ.
ಸಂಪಾದಕರು,
ಸಹಕಾರ ಅಧ್ಯಾಯನ ಮತ್ತು ಅಭಿವೃದ್ಧಿ ಸಂಸ್ಥೆ,
ಮಂಗಳೂರು.