ಕಾಲ ಸರಿದಂತೆ, ತಲೆಮಾರುಗಳು ಬದಲಾದಂತೆ ಸಮಯಕ್ಕೆ ಸರಿಯಾದ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳದೆ ಹೋದರೆ ನಾವು ನಿಂತಲ್ಲಿಯೇ ಕಾಲಾಡಿಸಬೇಕಲ್ಲದೆ ಮುಂದೆ ಹೋಗಲಾರದು. ನಿತ್ಯ ಜೀವನಕ್ಕೆ ಹೊಂದಿಕೊಳ್ಳುವ ಈ ಮಾತು ಪ್ರಾಥಮಿಕ ಸಹಕಾರಿ ಸಂಘಗಳಿಗಂತು ಹೆಚ್ಚು ಸೂಕ್ತ ಅನ್ನಿಸುತ್ತದೆ. ಇಂದು ತೋರು ಬೆರಳಿನ ತುದಿಯಲ್ಲಿ ಆಧುನಿಕ ಜಗತ್ತು ತೆರೆದುಕೊಳ್ಳುತ್ತಿದೆ. ಎಲ್ಲವೂ ತುರ್ತು, ತ್ವರಿತ. ಯಾರಿಗೂ ಕಾಯುವ ತಾಳ್ಮೆ ಇಲ್ಲ. ಇಂತಹ ಜಗತ್ತಿನಲ್ಲಿರುವ ಸಹಕಾರಿ ಸಂಘಗಳು ಕೂಡ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳದೆ ಉಳಿಯುವುದೆಂತು?
ನಿಂತ ನೀರಾಗಬಾರದು
ಅನೂಚಾನವಾಗಿ ನಡೆದುಬಂದಿರುವ ಕಾರ್ಯವೈಖರಿಯನ್ನು ಬದಿಗಿಟ್ಟು ಹೊಸ ತಂತ್ರಜ್ಞಾನದ ಬೆನ್ನು ಹತ್ತಿ ವೇಗದಿಂದ ಮುನ್ನಡೆಯುವರಿಗೆ ಈಗಿನ ಜನಮಾನಸದಲ್ಲಿ ಮಣೆ. ದೈನಂದಿನ ಪ್ರಾಥಮಿಕ ಸಹಕಾರಿ ಸಂಘದ ವ್ಯವಹಾರದಿಂದ ಹಿಡಿದು ಅದು ಮಗ್ಗುಲು ಬದಲಾಯಿಸಿ ತನ್ನ ಸದಸ್ಯರಿಗೆ ಕೊಡುತ್ತಿರುವ ಅನನ್ಯ ಸೇವೆಗಳಿಗೆ ಈ ಡಿಜಿಟಲೀಕರಣದ ಆವಾಹನೆ ಆಗಲೇ ಬೇಕು. ಅನೇಕ ಪ್ರಾಥಮಿಕ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ದಾಪು ಗಾಲಿಟ್ಟು ಮುನ್ನಡೆಯುತ್ತಿವೆ. ಆದರೆ ಇನ್ನೂ ಅನೇಕ ಸಹಕಾರಿ ಸಂಘಗಳು ಮೀನ ಮೇಷ ಎಣಕೆಯಲ್ಲಿಯೇ ಮುಳುಗಿವೆ. ನಿತ್ಯದ ವ್ಯವಹಾರ ನಿಂತ ನೀರಾದರೆ ಅದಕ್ಕೆ ಉಜ್ವಲ ಭವಿಷ್ಯ ಕಡಿಮೆ.
ವಾಟ್ಸಪ್ ಗ್ರೂಪಿರಲಿ
ಐದು ವರ್ಷಗಳ ಹಿಂದೆ ನಾನು ಪೆರ್ಲ ಸೇವಾ ಸಹಕಾರಿ ಸಂಘದ ನಿರ್ದೇಶಕನಾಗಿದ್ದಾಗ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸೇರಿ ವಾಟ್ಸಪ್ ಗ್ರೂಪ್ ತೆರೆದೆವು. ಐದು ವರ್ಷ ಆಡಳಿತ ಮಾಡಿ ನಾನು ಅಲ್ಲಿಂದಿಳಿದು ಬರಬೇಕಾದರೆ ಅದು ಮೂರು ಗ್ರೂಪ್ ಆಗಿ ಬೆಳೆದಿತ್ತು. ಸಹಕಾರಿ ಸಂಘದ ಬೇರೆ ಬೇರೆ ಸೇವೆಗಳಿಗೆ ಊರುಗೋಲಾಗಿ ವಾಟ್ಸಪ್ ಗ್ರೂಪ್ ನಮಗೆ ನೀಡಿದ ಸಹಕಾರ ಅನನ್ಯ. ಅಷ್ಟು ಚೆನ್ನಾಗಿ ಅದನ್ನು ಬಳಕೆ ಮಾಡುತ್ತಿದ್ದೆವು. ಸದಸ್ಯರು ಬಯಸುವ ಗೊಬ್ಬರ, ಅವರಿಗೆ ಬೇಕಾದ ಕಾಳುಮೆಣಸು, ಗೇರು ಬೀಜದ ಗಿಡಗಳು, ಅವರು ಬಯಸಿದ ಹಣ್ಣು ಹಂಪಲುಗಳ ಗಿಡಗಳು ಇವೆಲ್ಲವುಗಳನ್ನು ವಾಟ್ಸಪ್ ಮೂಲಕ ಸದಸ್ಯರು ಕೇಳುತ್ತಿದ್ದರು. ಅವರಿಗೆ ಬೇಕಾದ ಗೊಬ್ಬರಗಳು, ಗಿಡಗಳು ಎಲ್ಲದಕ್ಕೂ ಗ್ರೂಪ್ ನಲ್ಲಿಯೇ ಬೇಡಿಕೆ ಬರುತ್ತಿತ್ತು. ಬೇಡಿಕೆ ಬಂದಾಗ ನಮ್ಮ ಸಹಕಾರಿ ಸಂಘದ ತಂಡ ಕಾರ್ಯ ಪ್ರವೃತ್ತಿಯಾಗಿ ಅದನ್ನು ತಂದು ಕೊಡುತ್ತಿದ್ದೆವು. ಇದರಿಂದ ಸಹಕಾರಿ ಸಂಘ ಮತ್ತಷ್ಟು ಬೆಳೆಯಲು ಸಹಕಾರಿ ಕೂಡ ಆಯಿತು.
ಪೆರ್ಲ ಸೇವಾ ಸಹಕಾರಿ ಸಂಘದ ಅನೇಕ ಕಾರ್ಯಗಳ ಬಗ್ಗೆ ಸದಸ್ಯರು ನೇರ ಸಂಪರ್ಕದಲ್ಲಿರಲು ಸಾಧ್ಯವಾದ್ದು ಅದು ರಚಿಸಿಕೊಂಡ ಡಿಜಿಟಲೀಕರಣ ವ್ಯವಸ್ಥೆ. ಸೋಶಿಯಲ್ ಮೀಡಿಯಾ ಬಳಕೆ ಗೊತ್ತಿದ್ದ ಅನೇಕ ಸದಸ್ಯರು ಸಹಕಾರಿ ಸಂಘದ ಜೊತೆಗಿರಲು, ಬಾಂಧವ್ಯ ಬೆಳೆಯಲು ಸಾಧ್ಯವಾಯಿತು.
ಸತತ ಸಂಪರ್ಕವಿರಲಿ.
ಸಹಕಾರಿ ಸಂಘ ತನ್ನ ಸದಸ್ಯರ ಜೊತೆಗೆ ಸತತ ಸಂಪರ್ಕದಲ್ಲಿರಬೇಕು. ಸದಸ್ಯರಿಗೆ ಆಗಾಗ ಸಂಘಕ್ಕೆ ಬರಲು ಕಷ್ಟ. ಅದನ್ನು ಸೋಶಿಯಲ್ ಮೀಡಿಯಾ ಜಾಲ ತಾಣಗಳು ಸಮರ್ಥವಾಗಿ ನಿರ್ವಹಿಸಿ ಸದಸ್ಯರ ಆಶೋತ್ತರಗಳಿಗೆ ಓಗೊಡುವಂತಾಗಲು ವೇದಿಕೆ ನಿರ್ಮಿಸುತ್ತವೆ. ಅದನ್ನು ಸಮರ್ಥವಾಗಿ ಸತತವಾಗಿ ಬಳಕೆ ಮಾಡುತ್ತಾ ಇರಲು ನುರಿತ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ತಂಡ ಬೇಕು. ತನ್ನ ಸದಸ್ಯರು ಸಂಘಕ್ಕೆ ಬಂದು ವ್ಯವಹಾರ ಮಾಡಿದ್ದು ಅವರ ಕೈಯಲ್ಲಿರುವ ಮೊಬೈಲಿನಲ್ಲಿ ಸಂಘದ ಮೆಟ್ಟಲು ಇಳಿಯುವುದರ ಮೊದಲು ದಾಖಲಾಗಬೇಕು. ಹಣ ಕಟ್ಟಿದರೆ, ಹಣ ಹಿಂಪಡೆದರೆ, ಸಾಲ ಪಡೆಯುವಾಗ, ಸಾಲದ ವಾಯಿದೆಯಾಗುವಾಗ ಎಲ್ಲವೂ ಸದಸ್ಯರ ಮೊಬೈಲಿನಲ್ಲಿ ಬರುತ್ತಿರಬೇಕು. ಇದು ಸುಲಲಿತ ಮತ್ತು ಎಲ್ಲರೂ ಇಷ್ಟಪಡುವ ಸೇವೆ. ಸಹಕಾರಿ ಸಂಘದ ಠೇವಣಿ ಗಳ ಬಡ್ಡಿದರದ ವಿವರಗಳು, ಆಗಾಗ ಬದಲಾಗುತ್ತಿದ್ದರೆ ಕೂಡಲೇ ಅದರ ಮಾಹಿತಿ. ಸಹಕಾರಿ ಸಂಗದಲ್ಲಿ ಲಭ್ಯ ಇರುವ ಸೇವೆಗಳ ವಿವರಗಳು ವಾಟ್ಸಪ್ ಗ್ರೂಪಲ್ಲಿ ಬರುತ್ತಿರಬೇಕು.
ಕೆಲವು ಸಹಕಾರಿ ಸಂಘಗಳು ಸಾಲಗಾರನು ತನ್ನ ಕಂತು ಕಟ್ದಿಟಬೇಕಾದರೆ ವಸಕ್ಕಿಂತ ಬಹಳಷ್ಟು ಮೊದಲು ಸಾಲಗಾರನಿಗೆ ನೆನಪಿಸುತ್ತವೆ. ಕೇವಲ ನೆನಪಿಸುವುದಲ್ಲ. ಅದರ ಜೊತೆಗೆ ಸದಸ್ಯ ತೆಗೆದ ಸಾಲದ ಮೊತ್ತ, ಅದರಲ್ಲಿ ಇದುವರೆಗೆ ಕಟ್ಟಿದ ಕಂತುಗಳ ವಿವರ, ಈ ಕಂತು ಯಾವಾಗ ಕಟ್ಟಬೇಕಾದ್ದು, ಅದರ ವಿವರಗಳು. ಇಷ್ಟು ವ್ಯವಸ್ಥೆ ಸದಸ್ಯರಿಗೆ ಸಹಕಾರಿ ಸಂಘ ಕೊಟ್ಟರೆ ಬಹಳ ಅನುಕೂಲ.
ಇನ್ನಷ್ಟು!
ಸದಸ್ಯ ಸಾಲ ಪಡೆಯಲು ಅರ್ಜಿ ಹಾಕಿದ ನಂತರ ಆಡಳಿತ ಮಂಡಳಿಯ ಸಭೆಯಲ್ಲಿ ಸಾಲ ಕೊಡಬಹುದೇ ಎಂಬುದು ನಿರ್ಣಯವಾಗುತ್ತದೆ. ಸಾಲ ಕೊಡುವ ನಿರ್ಣಯ ಆದ ತಕ್ಷಣ ಸದಸ್ಯನಿಗೆ ತಿಳಿಯಬೇಕು; ಆ ಸಾಲ ಮರುಪಾವತಿಯ ಜವಾಬ್ದಾರಿಯನ್ನು ನೆನಪಿಸಲು ಒಬ್ಬ ಸಿಬ್ಬಂದಿ ಮತ್ತು ಒಬ್ಬ ನಿರ್ದೇಶಕನನ್ನು ಆಡಳಿತ ಮಂಡಳಿ ಸಾಲ ನೀಡಲು ಒಪ್ಪಿದ ಸಭೆಯಲ್ಲಿಯೇ ನಿಗದಿ ಮಾಡಬೇಕು. ಆ ನಿರ್ದೇಶಕ ಮತ್ತು ಸಿಬ್ಬಂದಿಯ ಹೆಸರು ಹಾಗು ಸಂಪರ್ಕ ಸಂಖ್ಯೆ ಸದಸ್ಯನಿಗೆ ಕೂಡಲೇ ತಿಳಿಯಬೇಕು. ಹೀಗಾದಾಗ ಸಾಲ ಮರುಪಾವತಿ ಸುಲಲಿತವಾಗುತ್ತದೆ.
ಸಾಧ್ಯವಾದರೆ ಸಹಕಾರಿ ಸಂಘವೊಂದು ಮೊಬೈಲ್ ಖರೀದಿಸಿ ರಾಷ್ಟ್ರೀಕೃತ ಬ್ಯಾಂಕಿನ ಅಕೌಂಟ್ ತೆರೆದು ಮೊಬೈಲ್ ಮೂಲಕ ಸಾಲ ಮರುಪಾವತಿಯನ್ನು ಮಾಡಬಹುದು. ಹೀಗೆ ಯೋಚಿಸುತ್ತ ಹೋದರೆ ನೂರಾರು ಕೆಲಸಗಳನ್ನು ಡಿಜಿಟಲೀಕರಣ ವ್ಯಾಪ್ತಿಯೊಳಗೆ ತಂದು ಸದಸ್ಯರ ಸಂಬಂಧ ವೃದ್ಧಿಸಿ ಸದಸ್ಯರ ಮತ್ತು ಸಂಘದ ಬೆಳವಣಿಗೆಗೆ ನಾಂದಿ ಹಾಡಬಹುದು.
ಶಂ.ನಾ. ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಜಿಲ್ಲೆ :ಕಾಸರಗೋಡು