ಭಾರತ ದೇಶದಲ್ಲಿ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯನ್ನು ಘೋಷಣೆ ಮಾಡಿದೆ. ಸುಮಾರು 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ (ಪಿಎಂಎಂಎಸ್‌ವೈ) ಘೋಷಿಸಿದ್ದರು. ಆತ್ಮ ನಿರ್ಭರ ಭಾರತ ಯೋಜನೆಯಡಿ 2020-21ರಿಂದ 2024-25ರ ಆರ್ಥಿಕ ವರ್ಷದ ಮಧ್ಯೆ ಐದು ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನು ಕೃಷಿಕರ ಆದಾಯ ಎರಡು ಪಟ್ಟು ಹೆಚ್ಚು ಮಾಡುವ ಹಲವು ಉಪಕ್ರಮಗಳನ್ನು ಯೋಜನೆ ಹೊಂದಿದೆ. ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊಂದಲಾಗಿದೆ.
ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಿಂದಾಗಿ ಸುಮಾರು ಎರಡು ಮಿಲಿಯ ಜನರಿಗೆ ಸಹಾಯಕವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. ಇದರಿಂದಾಗಿ ದೇಶದಲ್ಲಿ ಆಹಾರ ಸಂಸ್ಕರಣೆಯ ಉದ್ಯಮಕ್ಕೂ ಸಹಕಾರಿಯಾಗಲಿದೆ. ಜಿಡಿಪಿ, ಉದ್ಯೋಗ ಮತ್ತು ಹೂಡಿಕೆಯನ್ನು ಇದು ಹೆಚ್ಚಳ ಮಾಡಲಿದೆ. ಯೋಜನೆ ಅನ್ವಯ ಕೃಷಿ ವಲಯದ ನಿರುಪಯುಕ್ತ ವಸ್ತುಗಳನ್ನು ಮೀನುಗಾರಿಕೆಯಲ್ಲಿ ಬಳಕೆ ಮಾಡುವುದರಿಂದ ಕೃಷಿ ತ್ಯಾಜ್ಯ ಕಡಿಮೆಯಾಗಲಿದೆ.
ಮತ್ಸೃ ಸಂಪದ ಯೋಜನೆಯಿಂದ ರೈತರಿಗೂ ಸಹಾಯಕವಾಗಲಿದ್ದು, ಅವರ ಆದಾಯ ಹೆಚ್ಚಾಗಲಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ ಮೀನುಗಾರಿಕೆ ಇಲಾಖೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 123 ಕೋಟಿ ರೂ. ಮೌಲ್ಯದ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ.
ಮತ್ಸೃ ಸಂಪದ ಯೋಜನೆಯಡಿ ಬಿಹಾರದಲ್ಲಿ ಕೇಂದ್ರ ಸರ್ಕಾರದ 535 ಕೋಟಿ ರೂ. ಜೊತೆ ಸೇರಿಸಿ 1,390 ಕೋಟಿ ರೂ. ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮೂರು ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆಯ ಗುರಿ ಹೊಂದಲಾಗಿದೆ. ಜಲಚರ ಸಾಕಣೆಗಾಗಿ ಕೊಳ, ಫಿನ್ ಫಿಶ್ ಮೊಟ್ಟೆ ಕೇಂದ್ರಗಳು, ಹೊಸ ಕೊಳಗಳ ನಿರ್ಮಾಣ, ಅಲಂಕಾರಿಕಾ ಮೀನು ಸಾಕಣೆಯ ಘಟಕಗಳು, ಐಸ್‌ಬಾಕ್ಸ್‌ನೊಂದಿಗೆ ಮೋಟಾರ್ ಸೈಕಲ್, ಐಸ್‌ಬಾಕ್ಸ್‌ನೊಂದಿಗೆ ತ್ರಿಚಕ್ರ ವಾಹನ ಇತ್ಯಾದಿ ಉಪಕ್ರಮಗಳು ಈ ಯೋಜನೆಯಲ್ಲಿ ಸೇರಿವೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಕೇಂದ್ರ ಮೀನುಗಾರಿಕಾ ಇಲಾಖೆ ಪ್ರಾರಂಭಿಸಿದೆ. ಮೀನುಗಾರರ ಕಲ್ಯಾಣ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 20,050 ಕೋಟಿ ರೂ. ಹೂಡಿಕೆಯಲ್ಲಿ ದೇಶದಲ್ಲಿ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯ ಬೆನ್ನು ಹತ್ತಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದು ವರ್ಷಗಳ ಅವಧಿಗೆ ಈ ಯೋಜನೆಯನ್ನು ಅಳವಡಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಲು ಮೀನು ಮಾರಾಟಗಾರರು, ಮೀನುಗಾರರು ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು 6,000 ಕೋಟಿ ರೂ. ಹೂಡಿಕೆಯೊಂದಿಗೆ ಹೊಸ ಉಪ-ಯೋಜನೆಗಳನ್ನು ಘೋಷಿಸಲಾಗಿದೆ. .
ಮತ್ಸೃ ಸಂಪದ ಯೋಜನೆಯ ಉದ್ದೇಶಗಳು:
* ಮೀನುಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಸಮರ್ಥನೀಯ, ಜವಾಬ್ದಾರಿಯುತ, ಅಂತರ್ಗತ ಮತ್ತು ಸಮಾನ ರೀತಿಯ ಬಳಕೆ
* ಭೂಮಿ ಮತ್ತು ನೀರಿನ ವಿಸ್ತರಣೆ, ಉತ್ಪಾದನೆಯ ಬಳಕೆಯ ಮೂಲಕ ಮೀನು ಉತ್ಪಾದನೆ ಹೆಚ್ಚಿಸುವುದು
* ನಿರ್ವಹಣೆ ಮತ್ತು ಗುಣಮಟ್ಟದ ಸುಧಾರಣೆ ಸೇರಿದಂತೆ ಮೌಲ್ಯ ಸರಪಳಿಯನ್ನು ಬಲಪಡಿಸುವುದು
* ಮೀನುಗಾರರು ಮತ್ತು ಮೀನು ಕೃಷಿಕರ ಆದಾಯ ದ್ವಿಗುಣಗೊಳಿಸುವುದು
*. ರಫ್ತಿಗೆ ಮೀನುಗಾರಿಕಾ ವಲಯದ ಕೊಡುಗೆಯನ್ನು ಹೆಚ್ಚಿಸುವುದು
* ಮೀನುಗಾರರು ಮತ್ತು ಮೀನುಗಾರರಿಗೆ ಸಾಮಾಜಿಕ, ಭೌತಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು
ಮತ್ಸೃ ಸಂಪದ ಯೋಜನೆಯ ಗುರಿಗಳು:
* 2018-19ರಲ್ಲಿದ್ದ 13.75 ಮಿಲಿಯ ಮೆಟ್ರಿಕ್ ಟನ್‌ಗಳಿದ್ದ ಮೀನು ಉತ್ಪಾದನೆಯನ್ನು 2024-25ರ ವೇಳೆಗೆ 22 ಮಿಲಿಯ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವುದು
* ಅಕ್ವಾಕಲ್ಚರ್ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರಿಗೆ 5 ಟನ್‌ಗಳಿಗೆ ಹೆಚ್ಚಿಸುವುದು
* ದೇಶೀಯ ಮೀನು ಬಳಕೆಯನ್ನು ತಲಾ 5 ಕೆಜಿಯಿಂದ 12 ಕೆಜಿಗೆ ಹೆಚ್ಚಿಸುವುದು
* ರಫ್ತು ಆದಾಯವನ್ನು 2018-19ರಲ್ಲಿದ್ದ 46,589 ಕೋಟಿ ರೂ.ನಿಂದ 2024-25ರ ವೇಳೆಗೆ 1,00,000 ಕೋಟಿ ರೂಗೆ ಹೆಚ್ಚಿಸುವುದು
* ಮೀನುಗಾರಿಕೆ ವಲಯದಲ್ಲಿ ಖಾಸಗಿ ಹೂಡಿಕೆ ಮತ್ತು ಉದ್ಯಮಶೀಲತೆಯ ಬೆಳವಣಿಗೆಗೆ ಅನುಕೂಲ ವಾತಾವರಣ ಕಲ್ಪಿಸುವುದು
* ಈಗಿರುವ ಶೇಕಡಾ 20-25ರ ನಷ್ಟದ ಪ್ರಮಾಣವನ್ನು ಶೇ.10ಕ್ಕೆ ಕಡಿಮೆ ಮಾಡುವುದು
* ಮೀನುಗಾರರು ಮತ್ತು ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವುದು
ಮತ್ಸೃ ಸಂಪದ ಯೋಜನೆಯ ಪ್ರಯೋಜನಗಳು:
* ಈ ಯೋಜನೆಯು ಮೀನುಗಾರಿಕೆ ಮೂಲಸೌಕರ್ಯಗಳಾದ ಬಂದರುಗಳು, ಮೀನು ಇಳಿಸುವ ಕೇಂದ್ರಗಳು, ಮಾರುಕಟ್ಟೆಗಳು, ಮೀನು ಆಹಾರ ಸಸ್ಯಗಳು, ಮೀನು ಬೀಜ ಸಾಕಣೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವು ನೀಡುತ್ತದೆ.
* ಮೀನು ಕೃಷಿಕರಿಗೆ ಕೊಳಗಳು, ಪಂಜರಗಳು, ಮೊಟ್ಟೆ ಕೇಂದ್ರಗಳು ಮತ್ತು ನರ್ಸರಿಗಳ ನಿರ್ಮಾಣದಂಥ ವಿವಿಧ ಚಟುವಟಿಕೆಗಳಿಗೆ ಮತ್ತು ಗಾಳಿ ವ್ಯವಸ್ಥೆಗಳು ಮತ್ತು ಇತರ ಸಲಕರಣೆಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುತ್ತದೆ.
* ಈ ಯೋಜನೆಯು ಮೀನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳ ಅಳವಡಿಕೆ, ಮೀನುಗಾರಿಕೆ ನಿರ್ವಹಣಾ ಯೋಜನೆಗಳನ್ನು ಸ್ಥಾಪಿಸುವುದು ಮತ್ತು ಮೀನುಗಾರಿಕೆ ಮಾಹಿತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮೀನುಗಾರಿಕೆ ಸಂಪನ್ಮೂಲಗಳ ನಿರ್ವಹಣೆಗೆ ಹಣಕಾಸಿನ ನೆರವು ನೀಡುತ್ತದೆ.
* ಮೀನು ಸಾಕಣೆಯನ್ನು ವ್ಯಾಪಾರವಾಗಿ ಪರಿಗಣಿಸಿ ಅದನ್ನು ವೃತ್ತಿಯನ್ನಾಗಿ ಮಾಡುವವರಿಗೆ ಪ್ರೋತ್ಸಾಹ ನೀಡಲು ಕ್ರೆಡಿಟ್ -ಲಿಂಕ್ಡ್ ಸಬ್ಸಿಡಿ ಒದಗಿಸುತ್ತದೆ.
* ಮೀನು ಉತ್ಪನ್ನಗಳ ರಫ್ತು ಚಟುವಟಿಕೆ ಉತ್ತೇಜಿಸಲು ಕೋಲ್ಡ್ ಚೈನ್‌ಗಳು, ಮೀನು ಸಂಸ್ಕರಣಾ ಘಟಕಗಳು ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆ ನೆರವು ನೀಡುತ್ತದೆ.
ಸಂಪಾದಕರು.
ಸಹಕಾರ ಅಧ್ಯಾಯನ ಮತ್ತು ಅಭಿವೃದ್ಧಿ ಸಂಸ್ಥೆ .
ಮಂಗಳೂರು