ನಾವು ಕೇಳುತ್ತಿದ್ದುದು ೪ರಿಂದ ೪.೫ ಪರ್ಸೆಂಟ್… ಆದರೆ ಸರ್ಕಾರ ನಮಗೆ ಸಿಗುತ್ತಿದ್ದುದನ್ನೂ ಕಡಿತ ಮಾಡಿ ೩ ಪರ್ಸೆಂಟ್ ಗೆ ಇಳಿಸಿದೆ. ಹೀಗಾದರೆ ಜೀವನ ಮಟ್ಟ ಸುಧಾರಿಸುವುದು ಹೇಗೆ…? ಜೀವನ ನಿರ್ವಹಣೆ ಮಾಡುವುದು ಹೇಗೆ…?
ಸಹಕಾರ ಸಂಘದ ಪಿಗ್ಮಿ ಕಲೆಕ್ಟರ್ ಒಬ್ಬರು ಆಡಿದ ಮಾತುಗಳಿವು…. ಹೌದು… ಸಹಕಾರ ಸಂಘಗಳ ವ್ಯವಹಾರ ವಹಿವಾಟುಗಳಿಗೆ ಪೂರಕವಾಗಿ ಕೆಲಸ ಮಾಡುತ್ತ, ಸಣ್ಣ ಸಣ್ಣ ಅಂಗಡಿ, ಉದ್ಯಮಗಳಿಂದ ದಿನಕ್ಕೆ/ ವಾರಕ್ಕೆ ಪಿಗ್ಮಿ ಸಂಗ್ರಹಿಸಿ ಉಳಿತಾಯ ಖಾತೆಗಳಿಗೆ ನೆರವಾಗುತ್ತಿದ್ದ ಪಿಗ್ಮಿ ಕಲೆಕ್ಟರ್ ಗಳ ಜೀವನದ ಮೇಲೆ ಸರ್ಕಾರ ಕಳೆದ ವಾರ ಹೊಸ ಆದೇಶದೊಂದಿಗೆ ಗದಾಪ್ರಹಾರ ಮಾಡಿದೆ.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶ ಅವುಗಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಸಹಕಾರಿ ಸಂಘಗಳು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಆಯಾಯ ಜಿಲ್ಲೆಯ ವ್ಯವಹಾರದಂತೆ ವಹಿವಾಟು ಮಾಡುತ್ತಿವೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರ್ಕಾರಕ್ಕೆ ತಕ್ಕುದಲ್ಲ. ಆದರೂ ಸರ್ಕಾರ ತನ್ನ ಹೊಸ ಆದೇಶದಲ್ಲಿ ಪಿಗ್ಮಿ ಕಲೆಕ್ಟರ್‌ಗಳನ್ನು ಗುರಿಯಾಗಿಸಿ ಹೊಡೆತ ನೀಡಿದೆ.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿ ಮತ್ತು ಸಾಲದ ಬಡ್ಡಿ ದರಕ್ಕೆ ರಾಜ್ಯ ಸರ್ಕಾರ ಲಗಾಮು ಹಾಕಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ.
ಸಾಲಗಾರರ ಹಾಗೂ ಸಾರ್ಜಜನಿಕರ ಹಿತಾಸಕ್ತಿ ರಕ್ಷಿಸುವ ಕಾರಣ ಮುಂದಿಟ್ಟು ರಾಜ್ಯದ ಎಲ್ಲ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು,ಸೌಹಾರ್ದ ಸಹಕಾರಿ ಸಂಘಗಳು , ವಿವಿಧೋದ್ದೇಶ ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಕಲಂ ೩ಬಿಯಡಿ ಸರ್ಕಾರಕ್ಕೆ ದತ್ತವಾಗಿರುವ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದೆ.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸೌಹಾರ್ದ ಸಹಕಾರಿ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳು ಸದಸ್ಯರ ಸಾಲದ ಅವಶ್ಯಕತೆಗನುಗುಣವಾಗಿ ಠೇವಣಿ ಸಂಗ್ರಹಿಸದೆ ಅನಿಯಮಿತ ಬಡ್ಡಿ ದರ ನಿಗದಿಪಡಿಸಿ ಮನಸೋಇಚ್ಛೆ ಠೇವಣಿ ಸಂಗ್ರಹಿಸಲಾಗುತ್ತಿದೆ. ಸಾಲದ ಮೇಲೆ ಮಿತಿಮೀರಿದ ಬಡ್ಡಿದರ ನಿಗದಿಪಡಿಸಿ ಸರಿಯಾಗಿ ಹಣಕಾಸು ನಿರ್ವಹಣೆ ಮಾಡುತ್ತಿಲ್ಲ ಎಂಬ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿದ್ದವು. ಈ ಬಗ್ಗೆ ವಿಧಾನಮಂಡಲದಲ್ಲೂ ಚರ್ಚೆಗಳು ನಡೆದಿದ್ದವು.
ಸಹಕಾರ ಸಂಘಗಳ ಹಣ ದುರುಪಯೋಗ ಹಾಗೂ ಠೇವಣಿದಾರರಿಗೆ ವಂಚನೆ ಮಾಡಿರುವ ಹಲವು ಪ್ರಕರಣಗಳು ರಾಜ್ಯ ಸರ್ಕಾರದ ಗಮನಕ್ಕೆ ಬಂದಿರುವ ಕಾರಣ ಮುಂದೊಡ್ಡಿ ಪಿಗ್ಮಿ ಕಲೆಕ್ಟರ್‌ಗಳ ಮೇಲೆ ಗದಾಪ್ರಹಾರ ಮಾಡಲಾಗಿದೆ. ನಿಯಮ ಬಾಹಿರವಾಗಿ ಠೇವಣಿ ಸಂಗ್ರಹ, ಸಾಲದ ಮೇಲೆ ಮಿತಿ ಮೀರಿದ ಬಡ್ಡಿ ವಿಧಿಸುವುದು, ಸಹಕಾರ ಸಂಘಗಳಲ್ಲಿ ಹೂಡಿಕೆ ಮಾಡಲಾದ ಹಣವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಇವೆಲ್ಲ ಕಾರಣಗಳನ್ನೂ ಸಹಕಾರಿ ಸಂಘಗಳ ಮುಂದೆ ಇಡಲಾಗಿದೆ.
ಸರ್ಕಾರದ ಈ ಆದೇಶ ಸಂಘಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಒಬ್ಬ ಪಿಗ್ಮಿ ಕಲೆಕ್ಟರ್ ಸಹಕಾರ ಸಂಘಕ್ಕೆ ಹಲವಾರು ಸಣ್ಣ ಉಳಿತಾಯ ಖಾತೆಗಳನ್ನು ತೆರೆದುಕೊಡಬಲ್ಲ. ಅಂಥವರ ಮೇಲೆ ಕಮಿಶನ್ ಇಳಿಕೆಯ ಪ್ರಯೋಗ ಮಾಡಲು ಹೊರಟಿರುವ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ? ನಾವು ೪.೫ ಶೇಕಡಾ ಕಮಿಶನ್ ಗೆ ಬೇಡಿಕೆ ಇಡುತ್ತಿದ್ದೆವು. ಕನಿಷ್ಠ ೪ ಶೇಕಡಾವಾದರೂ ಸಿಗಬೇಕೆಂಬ ಆಗ್ರಹ ಇತ್ತು. ೩.೫ ಶೇಕಡಾ ಸಿಗುತ್ತಿತ್ತು. ಆದರೆ ಈಗ ಅದರಲ್ಲೂ ಶೇ.೫ ಕಡಿಮೆ ಮಾಡಿ ೩ಕ್ಕೆ ಇಳಿಸಿದೆ ಸರ್ಕಾರ ಎಂದು ಪಿಗ್ಮಿ ಸಂಗ್ರಾಹಕರೊಬ್ಬರು ತಿಳಿಸಿದ್ದಾರೆ.
ನಾನು ೩೦-೩೫ ವರ್ಷಗಳಿಂದ ಪಿಗ್ಮಿ ಕಲೆಕ್ಟರ್ ಆಗಿದ್ದೇನೆ. ನನಗೆ ೩.೫ ಶೇಕಡಾ ಕಮಿಷನ್ ಸಿಗುತ್ತಿತ್ತು. ೩೫ ವರ್ಷದ ಹಿಂದೆ ಒಂದು ಕೆಜಿ ಅಕ್ಕಿಗೆ ೮ ರೂ. ಇತ್ತು. ಈಗ ೫೦ ರೂ. ಆಗಿದೆ. ಪೆಟ್ರೋಲ್‌ಗೆ ಆಗ ೨೬ ರೂ. ಇತ್ತು, ಈಗ ೧೦೦ ರೂ. ಇದೆ. ಆದರೆ ನಮ್ಮ ಕಮಿಷನ್‌ನಲ್ಲಿ ಮಾತ್ರ ಏರಿಕೆ ಆಗೇ ಇಲ್ಲ. ಇದ್ದುದರಲ್ಲೂ ಕಡಿತ ಮಾಡುವ ಆದೇಶ ಸರ್ಕಾರ ನೀಡಿದೆ ಎಂದು ಅವರು ಪರಿಸ್ಥಿತಿಯ ನೈಜತೆ ಬಿಡಿಸಿಟ್ಟರು. ನಾವು ಮೊದಲೂ ಅದೇ ಸ್ಥಿತಿಯಲ್ಲಿದ್ದೆವು.. ಈಗಲೂ ಅದೇ ಸ್ಥಿತಿಯಲ್ಲಿದ್ದೇವೆ. ಹೀಗಾದರೆ ಜೀವನ ಮಟ್ಟ ಸುಧಾರಣೆ ಹೇಗೆ ಅಗುತ್ತದೆ? ಸವಲತ್ತುಗಳೇ ಸಿಗದಿದ್ದರೆ ಜೀವನ ನಡೆಸುವುದು ಹೇಗೆ ಎಂದು ಅವರು ಹಿಂದಿನ ಮತ್ತು ಈಗಿನ ಸ್ಥಿತಿಯ ಬಗ್ಗೆ ತುಲನೆ ಮಾಡಿದರು.
ಸರ್ಕಾರದ ಆದೇಶದಂತೆ ಸಹಕಾರಿ ಸಂಘಗಳು ಹಿರಿಯ ನಾಗರಿಕರ ಠೇವಣಿ ಮೇಲೆ ಶೇ.೦.೫೦ರಷ್ಟು ಅಧಿಕ ಬಡ್ಡಿ ಮಾತ್ರ ನಿಗದಿಪಡಿಸಬಹುದು. ಸರ್ಕಾರದ ಈ ಆದೇಶದಿಂದಲೂ ಸಹಕಾರಿ ಸಂಘಗಳ ಅಭಿವೃದ್ಧಿಗೆ ತಡೆಯಾಗಲಿದೆ. ಹಿರಿಯ ನಾಗರಿಕರು ಸಹಕಾರಿ ಸಂಘಗಳಲ್ಲಿ ಠೇವಣಾತಿ ಕಡಿಮೆ ಮಾಡುವ ಅಪಾಯವೂ ಈ ಆದೇಶದಿಂದ ಉದ್ಭವಿಸಿದೆ. ಸಹಕಾರ ಕ್ಷೇತ್ರದ ಉನ್ನತಿಯ ನಿಟ್ಟಿನಲ್ಲಿ ಪೂರಕ ನಿಯಮಗಳನ್ನು ರೂಪಿಸಬೇಕಾದ ಸರ್ಕಾರಿ ಇಲಾಖೆಗಳು ಅದಕ್ಕೆ ವ್ಯತಿರಿಕ್ತ ಕಾನೂನು ರೂಪಿಸಿದರೆ ಸಹಕಾರ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ?
ಹೈಕೋರ್ಟ್ ತಡೆಯಾಜ್ಞೆ:
ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿ ಮತ್ತು ವಿತರಿಸುವ ಸಾಲಗಳಿಗೆ ಬಡ್ಡಿ ದರ ನಿಗದಿಪಡಿಸುವ ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ಏ.೪ರಂದು ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಹಕಾರ ಸಂಘಗಳ ಹಣವನ್ನು ಡಿಸಿಸಿ ಬ್ಯಾಂಕ್ ಅಥವಾ ಅಪೆಕ್ಸ್ ಬ್ಯಾಂಕ್‌ನಲ್ಲಿ ಇಡುವಂತೆಯೂ ಸರ್ಕಾರ ಹೊರಡಿಸಿರುವ ಸುತ್ತೋಲೆ ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರ ಹೊರಡಿಸಿದ್ದ ಸಹಕಾರ ಸಂಘಗಳು ಪ್ರಶ್ನಿಸಿ ಕೋರ್ಟ್ ಮೇಟ್ಟಿಲೇರಿತ್ತು. ರ‍್ಕಾರದ ಸುತ್ತೋಲೆಗ ತಡೆಯಾಜ್ಞೆ ತಂದಿರುವ ಆದೇಶ ಎಲ್ಲ ಕ್ರೆಡಿಟ್, ವಿವಿಧೋದ್ದೇಶ, ಸೌಹರ‍್ದ ಸಹಿತ ಎಲ್ಲ ಸಹಕಾರ ಸಂಘಗಳಿಗೂ ಅನ್ವಯವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಶ್ರೀ.ಮೋಹನದಾಸ್ ಮರಕಡ
ಸಂಪಾದಕರು
ಸಹಕಾರ ಸ್ಪಂದನ