ಪತ್ತಿನ ಸಹಕಾರ ಸಂಘಗಳಲ್ಲಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಸಾಲ ವಸೂಲಾತಿಯ ಕ್ರಮಗಳು.

ಭಾರತದಲ್ಲಿ ಸಹಕಾರ ಚಳುವಳಿ ಆರಂಭ ಗೊಂಡಿದ್ದು ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904 ‘ರಿಂದ ಎಂದರೆ ತಪ್ಪಾಗಲಾರದು. ಆಗ ರೈತರ ಪತ್ತಿನ ಅವಶ್ಯಕತೆ ಪೂರೈಸಲು ಯೂರೋಪ್ ನ’ ರಾಫಿಸನ್’ ಮಾದರಿ ಅನುಸರಿಸಲಾಯಿತು. ಯೂರೋಪ್ ನಲ್ಲಿ ಪಟ್ಟಣ, ಅರೆಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಕೃಷಿ ಅವಶ್ಯ ಉಪಕರಣ ತಯಾರಿ ಉದಾಃ ಕುಲುಮೆ (ಕಮ್ಮಾರಿಕೆ) ಬಡಗಿ (ಮರಗೆಲಸ) ಸಣ್ಣ ವ್ಯಾಪಾರ ವಹಿವಾಟು ಈ ರೀತಿಯ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಜನತೆ ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಅವಶ್ಯಕತೆಗೆ ಅನುಸಾರ ಅವರೇ ಅಥವ ಅವಶ್ಯಕತೆ ಇರುವವರಿಗೆ ಸಾಲ(ಪತ್ತು ) ನೀಡಲು ಸ್ಥಾಪನೆಯಾದ ಸಹಕಾರ ಸಂಘಗಳಿಗೆ ‘ಷ್ಲೂ ಜ್’ ಮಾದರಿ ಸಹಕಾರ ಸಂಘಗಳು ಎಂದು ಕರೆಯಲಾಯಿತು.

ಸರ್ ಹರ್ಮನ್ ಷ್ಲೂಜ್ ಎನ್ನುವವರ ನಾಯಕತ್ವ ಮಾರ್ಗದರ್ಶನ ದಲ್ಲಿ ಈ ಸಹಕಾರ ಸಂಘಗಳು ಸ್ಥಾಪನೆಯಾದುದರಿಂದ ಈ ಹೆಸರಿನಿಂದ ಅವುಗಳನ್ನು ಕರೆಯಲಾಯಿತು. 1904 ರ ಕಾಯ್ದೆ ಭಾರತದಲ್ಲಿ ಜಾರಿಯಾದ ನಂತರ ಭಾರತದಲ್ಲಿ ಯೂ ಈ ಮಾದರಿಯ ಸಹಕಾರ ಸಂಘಗಳು ಆರಂಭಗೊಂಡವು. ಅದರಲ್ಲಿಯೂ ಪ್ರಮುಖವಾಗಿ ಗುಜರಾತ್ ,ಮಹರಾಷ್ಟ್ರ ಕರ್ನಾಟಕದಲ್ಲಿ ಅನೇಕ ಈ ರೀತಿಯ ಸಹಕಾರ ಸಂಘಗಳು ಸ್ಥಾಪನೆಯಾಗಿ ಚಳುವಳಿಯ ರೂಪವನ್ನು ಪಡೆಯಿತು. ಈ ಸಹಕಾರ ಸಂಘಗಳನ್ನು ನಾವು ‘ಪತ್ತಿನ ಸಹಕಾರ ಸಂಘಗಳು’ ಎಂದು ಗುರುತಿಸುತ್ತಿರುತ್ತೇವೆ.

ಕರ್ನಾಟಕದಲ್ಲಿ ಐದು ಸಾವಿರ ಕ್ಕೂ ಮೀರಿ ಈ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವು ತನ್ನ ಸದಸ್ಯರಿಂದ ಠೇವಣಿ ಸಂಗ್ರಹಣೆ ಮಾಡುತ್ತವೆ ಮತ್ತು ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ಸಾಲವನ್ನು ಒದಗಿಸಿ ವ್ಯವಹಾರಕ್ಕೆ ‘ದುಡಿಯುವ ಬಂಡವಾಳ’ ಆಸ್ತಿ ನಿರ್ಮಾಣಕ್ಕಾಗಿ ‘ಹೂಡಿಕೆ ಸಾಲ’ ಅಲ್ಲದೆ ಬಳಕೆ ವಸ್ತುಗಳ ಖರೀದಿ ಮುಂತಾದ ಜೀವನ ಉತ್ತಮ ಗೊಳಿಸುವಿಕೆಗಾಗಿ ವೈಯಕ್ತಿಕ ಸಾಲ, ಖಾತ್ರಿ ಸಾಲಗಳನ್ನು ಒದಗಿಸುತ್ತಿವೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಠಿ , ಸಾಮಾನ್ಯ ಜನತೆಯ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿಗೆ ಕಾರಣವಾಗಿರುತ್ತವೆ. ಅನೇಕ ಸಹಕಾರ ಸಂಘಗಳು ನಿಧಿಯೇ ತರ ವ್ಯವಹಾರವಾಗಿ ಇ- ಸ್ಟಾಂಪ್ ಪೇಪರ್ ಮಾರಾಟ ಏಜೆನ್ಸಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿವೆ.

ಠೇವಣಿ ಸಂಗ್ರಹಣೆ: ಈ ಸಹಕಾರ ಸಂಘಗಳಲ್ಲಿ ಸದಸ್ಯರ ಮೂಲ ಬಂಡವಾಳ ವೇ ‘ಪಾವತಿಯಾದ ಷೇರು ಬಂಡವಾಳ’. ಈ ಬಂಡವಾಳದಿಂದ ಸಹಕಾರ ಸಂಘಗಳ ವ್ಯವಹಾರವಾದ ‘ಸಾಲ ವಿತರಣೆ’ ಮಾಡಲು ಎಷ್ಟು ಸಾಧ್ಯ? ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ಮೊತ್ತದ ಶೇ 5 ಅಥವ 10 ನ್ನು ಅಧಿಕ(ಹೆಚ್ಚುವರಿ ಬಂಡವಾಳ) ವಾಗಿ ಸಂಗ್ರಹಿಸುವ ಪದ್ಧತಿ ರೂಢಿಯಲ್ಲಿದೆ. ಇದರಿಂದ ಸಂಘದ ಸ್ವಂತ ಬಂಡವಾಳ ಹೆಚ್ಚಳ ಸಾಧ್ಯವಾಗುತ್ತದೆ. ಮತ್ತು ಇದು ‘ ವೆಚ್ಚ ರಹಿತ’ ಬಂಡವಾಳ ವಾಗಿರುತ್ತದೆ. ಏಕೆಂದರೆ , ಲಾಭಗಳಿಸಿದಲ್ಲಿ , ಲಾಭಂಶ (ಡಿ ವಿಡೆಂಡ್ ) ಘೋಷಣೆ ಯಾದಲ್ಲಿ ಲಾಭದಲ್ಲಿ ಹಂಚಲಾಗುತ್ತದೆ ಯಾವುದರಿಂದ ಇದು ವೆಚ್ಚ ರಹಿತ ಬಂಡವಾಳ ವಾಗುತ್ತದೆ. ಆದರೆ ಕೇವಲ ಇದನ್ನೇ ಅವಲಂಭಿಸಿದರೆ ವ್ಯವಹಾರ ವೃದ್ಧಿ ಸಲು ಸಾಧ್ಯವಾಗುವುದಿಲ್ಲ. ಸಂಘವು ಇತರೆಡೆಯಿಂದ ಬಂಡವಾಳವನ್ನು (ಸಂಪನ್ಮೂಲ)ವನ್ನು ತರುವುದು ಅನಿವಾರ್ಯ. ಆದುದರಿಂದ ಪತ್ತಿನ ಸಹಕಾರ ಸಂಘಗಳು ‘ಠೇವಣಿ ಸಂಗ್ರಹಣೆ” ಮಾಡಲೇಬೇಕು.

ಪತ್ತಿನ ಸಹಕಾರ ಸಂಘಗಳು ‘ಸಹಕಾರ ಸಂಘ’ ವಾದುದರಿಂದ ಇವು ಠೇವಣಿಗಳನ್ನು ತನ್ನ’ ಸದಸ್ಯ’ರಿಂದ ಮಾತ್ರ ಸಂಗ್ರಹಣೆ ಮಾಡಬೇಕು. ಏಕೆಂದರೆ ಇವುಗಳು ‘ಬ್ಯಾಂಕ್’ ಅಲ್ಲ, ಯಾವ ಸಂಸ್ಥೆಗಳು ‘ಬ್ಯಾಂಕಿಂಗ್ ಕಾಯ್ದೆ’ಯಡಿಯಲ್ಲಿ ಬರುತ್ತವೋ ಅವು ಮಾತ್ರ ‘ಸಾರ್ವಜನಿಕರಿಂದ’ ಠೇವಣಿ ಸಂಗ್ರಹಣೆ ಮಾಡಬಹುದು. ಈ ಸಹಕಾರ ಸಂಘಗಳ ವ್ಯವಹಾರವು ತನ್ನ ಸದಸ್ಯರ ನಡುವೆ ನಡೆಸು ವವ್ಯವಹಾರ ಮಾತ್ರ ಆಗಿರುತ್ತದೆ. ಸಹಕಾರ ಸಂಘವು ತನ್ನ ಸದಸ್ಯರಿಂದ ಮಾತ್ರ ‘ಠೇವಣಿ’ ಸಂಗ್ರಹಣಿ ಮಾಡಬೇಕು ಮತ್ತು ತನ್ನ ಸದಸ್ಯರಿಗೆ ಮಾತ್ರ ‘ಸಾಲ’ ನೀಡಬೇಕು. ‘ಸದಸ್ಯ’ ಎಂದರೆ ಅದು ‘ನಾಮ ಮಾತ್ರ’ ಮತ್ತು ‘ಸಹಸದಸ್ಯ’ ನನ್ನು ಒಳಗೊಳ್ಳುತ್ತದೆ.

ಠೇವಣಿ ವಿಧಗಳು: ಠೇವಣಿಗಳನ್ನು (1) ‘ಬೇಡಿಕೆ’ ಠೇವಣಿಗಳು(Demand deposits) (2) ‘ಅವಧಿ’ ಠೇವಣಿಗಳು(Term deposits) ಎಂದು ವಿಂಗಡಿಸಿದೆ.

 (1) ಬೇಡಿಕೆ ಠೇವಣಿಗಳು: ಇವುಗಳನ್ನು ಠೇವಣಿದಾರರು ಬೇಡಿಕೆ ಇಟ್ಟು ಹಿಂತಿರುಗಿ ಪಡೆಯಲು ಕೇಳಿದಾಗ ಹಿಂತಿರುಗಿಸಲೇಬೇಕು. ‘ಉಳಿತಾಯ’ ಠೇವಣಿಗಳು ಮತ್ತು ‘ಚಾಲ್ತಿ’ ಠೇವಣಿಗಳು.  (Savings bank account, Current account -CASA). ಬೇಡಿಕೆ ಸಲ್ಲಿಸಿದಾಗ (ಚೆಕ್/ವಿತ್ ಡ್ರಾಯಲ್ ಸ್ಲಿ ಪ್ ಮೂಲಕ) ಹಿಂತಿರುಗಿಸಲೇ ಬೇಕಾಗಿರುವುದರಿಂದ ಇದರ ಮೇಲೆ ಕಡಿಮೆ ಬಡ್ಡಿಧರ ನೀಡಲಾಗುತ್ತದೆ. ಆದುದರಿಂದ ಇವು ‘ಕಡಿಮೆ ವೆಚ್ಚ’ ದ(low-cost deposits) ಠೇವಣಿಗಳು ಎನಿಸಿ ಕೊಳ್ಳುತ್ತವೆ. ಸಂಘದಲ್ಲಿ ಈ ಖಾತೆಯಲ್ಲಿ ಕನಿಷ್ಟ ಮೊತ್ತದ ಖಾದಿರಿಸುವಿಕೆಯನ್ನು ಕಡ್ಡಾಯ ಗೊಳಿಸುವುದರಿಂದ ಕನಿಷ್ಟ ಮೊತ್ತಸಂಘದಲ್ಲಿ ಉಳಿಯುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ಬೇಡಿಕೆ ಠೇವಣಿಗಳನ್ನು ಬೇಡಿಕೆ ಬಂದಾಗ ಹಿಂತಿರುಗಿಸಲೇ ಬೇಕಾಗಿರುವುದರಿಂದ ಬ್ಯಾಂಕ್ ಗಳಲ್ಲಿ ‘ನಗದು ಮೀಸಲು ಅನುಪಾತ'(Cash Reserve ratio -CRR) ಮತ್ತು ‘ಶಾಸನ ಬದ್ಧ ದ್ರವ್ಯ ಆಸ್ತಿ ಅನುಪಾತ’ (Statutory Liquid Ratio) ವಾಗಿ ಇಂತಿಷ್ಟು ಮೊತ್ತವನ್ನು ನಗದು ರೂಪದಲ್ಲಿ ಮತ್ತು/ಅಥವ ಸುಲಭವಾಗಿ ನಗದು ರೂಪುಗೊಳ್ಳುವ ಆಸ್ತಿ ರೂಪದಲ್ಲಿ ಇರಿಸಿ ಕೊಳ್ಳಬೇಕಾದ್ದು ಕಡ್ಡಾಯ. ಸಮಯ ಮತ್ತು ಬೇಡಿಕೆ ಜವಾಬ್ದಾರಿಯ (Time and Demand Liability) ಯ ಶೇ 03 ನ್ನು ಸಿ.ಆರ್. ಆರ್ ಆಗಿ ಮತ್ತು ಶೇ 25- 28 ನ್ನು ಎಸ್ ಎಲ್.ಆರ್. ಗಿ ಇರಿಸಿ ಕೊಂಡಿರಬೇಕು. ಹೀಗಾಗಿ ಇಷ್ಟು ಮೊತ್ತವು ಸಾಲ ನೀಡಲು ಲಭ್ಯ ವಿರುವುದಿಲ್ಲ. ಈ ನಿಯಮಗಳು ಸಹಕಾರ ಸಂಘಗಳಿಗೆ ಅನ್ವಯ ವಾಗದೇ ಇದ್ದರೂ ಇದನ್ನು ಸಂಘಗಳು ಪಾಲಿಸಿದಲ್ಲಿ ಸದಸ್ಯ ಠೇವಣಿದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಬಹುದು.

(2) ಅವಧಿ ಠೇವಣಿಗಳು: ಅವಧಿ ಠೇವಣಿಗಳು ಸಂಘಕ್ಕೆ ನಿರ್ದಿಷ್ಟ ಸಮಯದಲ್ಲಿ ಫಲಿತವಾಗುವುದರಿಂದ ಸಂಘಕ್ಕೆ ಲಭ್ಯ ಸಂಪನ್ಮೂಲದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಅವಧಿ ನಗರಿ ಪಡಿಸಲಾಗಿರುವುದರಿಂದ ಈ ಠೇವಣಿಗಳಿಗೆ ಹೆಚ್ಚಿನ ಬಡ್ಡಿಧರ ನೀಡಲಾಗುತ್ತದೆ. ಆದುದರಿಂದ ಇದು ಹೆಚ್ಚಿನ ವೆಚ್ಚದ ಠೇವಣಿಯಾಗಿರುತ್ತದೆ. (High cost deposits). ಅವಧಿ ಠೇವಣಿಗಳು ಅಲ್ಪಾವಧಿ ಆಗಬಹುದು ಅಥವ ದೀರ್ಘಾವಧಿ ಠೇವಣೆಗಳು ಆಗಬಹುದು. ದೀರ್ಘಾವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿಧರ ನೀಡಲಾಗುತ್ತದೆ ಕಾರಣ ಅದು ಸಂಘಕ್ಕೆ ದೀರ್ಘಾವಧಿವರೆಗೆ ಸಂಪನ್ಮೂಲವಾಗಿ ಬಳಕೆಗೆ ಲಭ್ಯವಿರುತ್ತದೆ.

ಆದುದರಿಂದ ಈ ಠೇವಣಿಗಳ ನವೀಕರಣಕ್ಕೆ ಸಂಘವು ಹೆಚ್ಚು ಆಧ್ಯತೆಯನ್ನು ನೀಡಬೇಕು ಮತ್ತು ಅದಕ್ಕಾಗಿ ಠೇವಣಿ ದಾರರ ( ಗ್ರಾಹಕರ ) ವಿಶ್ವಾಸ ಅತಿ ಮುಖ್ಯ ವಾಗುತ್ತದೆ. ಇದನ್ನು ಗಳಿಸುವಲ್ಲಿ ಸಂಘ ನೀಡುವ ಸೇವೆ ಅತಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಸಕಾಲದಲ್ಲಿ ಬಡ್ಡಿ ಪಾವತಿ, ಅವಶ್ಯಕತೆ ಇದ್ದಾಗ ಠೇವಣಿ ಮೇಲೆ ಸುಲಭ ಸಾಲ, ಇವರೊಡನೆ ನಿರಂತರ ಗ್ರಾಹಕ ಸಂಪರ್ಕ, ಇದನ್ನು ನೀಡಲು ಆಧುನಿಕ ತಂತ್ರಜ್ಞಾನ ಸಹಾಯಕವಾಗಿದೆ. ಅವರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇಂತಹ ದಿನಗಳಂದು ಶುಭಾಷಯ ಸಂದೇಶ ರವಾನೆ. ವಿನೂತನ ‘ಉತ್ಪನ್ನ’ಗಳ ಬಿಡುಗಡೆ , ಆಕರ್ಷಿಕ ಹೆಸರುಗಳ ನೀಡುವಿಕೆ , ಇಂತಹ ಉಪಕ್ರಮಗಳು ಠೇವಣಿ ಸಂಗ್ರಹಣೆಗೆ ಅನುಕೂಲಕರವಾಗುತ್ತದೆ. ಸಂಘದ ಒಳ ವಾತಾವರಣ, ಸುಸಜ್ಜಿತ ಪೀಠೋಪಕರಣಗಳು, ರಕ್ಷಣಾ ಕೊಠಡಿ, ಲಾಕರ್ ಸೌಲಭ್ಯ ಇವುಗಳು ಠೇವಣಿ ಸಂಗ್ರಹಣಿಗೆ ಅವಶ್ಯ ಅಲ್ಲದೆ’ ನಗು ಮುಖದ ಸೇವೆ’ ಅತಿ ಅಗತ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಗ್ರಾಹಕ , ಬ್ಯಾಂಕರ್ ಸಂಪರ್ಕ ತಂತ್ರಜ್ಞಾನದಿಂದ ಆಗುತ್ತಿದ್ದು ಬೌತಿಕ ಸಂಪರ್ಕದ ಅವಶ್ಯಕತೆಯೇ ಇಲ್ಲದಾಗಿದೆ. ನಮ್ಮ ಸಹಕಾರ ಸಂಘಗಳು ಆ ಮಟ್ಟಿಗೆ ಬೆಳೆದಲ್ಲಿ ಮಾತ್ರ ಇಂದಿನ ಯುವ ಜನತೆಯ ನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ.

ಠೇವಣಿ ಮಿಶ್ರಣ:(Deposit mix): ಸಂಘದ ಒಟ್ಟಾರೆ ಠೇವಣಿಯಲ್ಲಿ ಕಡಿಮೆ ವೆಚ್ಚದ ಠೇವಣಿ ಎಷ್ಟಿದೆ? ಹೆಚ್ಚಿನ ವೆಚ್ಚದ ಠೇವಣಿ ಎಷ್ಟಿದೆ? ಎಂಬುದರ ಮೇಲೆ ಠೇವಣಿ ಮೇಲಿನ ವೆಚ್ಚ(Cost of deposit)ಅವಲಂಭಿತವಾಗಿರುತ್ತದೆ. ಕಡಿಮೆ ವೆಚ್ಚದ ಠೇವಣಿ ಅಧಿಕ ವಿದ್ದಲ್ಲಿ ಠೇವಣಿ ಮೇಲಿನ ವೆಚ್ಚ ಕಡಿಮೆ ಯಾಗುತ್ತದೆ. ಅದೇ ಅಧಿಕ ವೆಚ್ಚದ ಠೇವಣಿ ಹೆಚ್ಚಿಗೆ ಇದ್ದಲ್ಲಿ ಠೇವಣಿ ಮೇಲಿನ ವೆಚ್ಚ ಅಧಿಕವಾಗುತ್ತದೆ.ಆದುದರಿಂದ ಸಂಘದಲ್ಲಿ ಕಡಿಮೆ ವೆಚ್ಚದ ಠೇವಣಿ ಸಂಗ್ರಹಣೆಗೆ ಆಧ್ಯತೆ ನೀಡಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇದೆ.

ಕಡಿಮೆ ವೆಚ್ಚದ ಠೇವಣಿ: ಅಧಿಕ ವೆಚ್ಚದ ಠೇವಣಿ 60:40 ಇರುವಂತೆ ಆಗಿಸಲಾಗುತ್ತದೆ. ನಗದು ಒಳಹರಿವು , ಹೊರ ಹರಿವು(cash inflow,cash outflow): ಆಸ್ತಿ ಜವಾಬ್ದಾರಿ ನಿರ್ವಹಣೆ (Asset, Liability management): ಠೇವಣಿಗಳ ಸಂಗ್ರಹಣೆ, ಸಾಲ ವಸೂಲಾತಿ ನೆಗದು ಒಳಹರಿವಿಗೆ ಕಾರಣವಾಗುತ್ತದೆ. ಠೇವಣಿಗಳ ಹಿ೦ತಿರುಗಿಸುವಿಕೆ, ಸಾಲಗಳ ವಿತರಣಿ ನಗದು ಹೊರಹರಿವಿಕೆ ಕಾರಣವಾಗುತ್ತದೆ. ಇವೆರಡರ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಆಸ್ತಿ ಜವಾಬ್ದಾರಿ ನಿರ್ವಹಣೆ ಎನ್ನಲಾಗುತ್ತದೆ. ಈ ನಿರ್ವಹಣೆ ಶ್ರೇಷ್ಟ ಮಟ್ಟದಲ್ಲಿದ್ದಾಗ ಮಾತ್ರ ಸಹಕಾರ ಸಂಘ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಠೇವಣಿಗಳು ಯಾವ , ಯಾವಾಗ ಅಥವ ಎಂದೆಂದು ಫಲಿತವಾಗುತ್ತವೆ. ಸಾಲಗಳು ಎಂದೆಂದು ಎಷ್ಟೆಷ್ಟು ಮರುಪಾವತಿಯಾಗುತ್ತವೆ ಎಂಬುದರ ಬಗ್ಗೆ ತಿಳಿದಿರಬೇಕು. ಅದರನ್ವಯ ಸಾಲದ ತರಹೆ ಮತ್ತು ಸಾಲ ಬಿಡುಗಡೆ ಅವಲಂಭಿಸಿರಬೇಕು. ಇದಕ್ಕಾಗಿ ಈಗ ಮೃದು ತಂತ್ರಜ್ಞಾನ ಲಭ್ಯವಿದೆ. ಅಲ್ಪಾವಧಿ ಠೇವಣಾತಿಗಳು ಹೆಚ್ಚಿದ್ದಲ್ಲಿ ಅಲ್ಪಾವಧಿ ಸಾಲಗಳನ್ನು ಹೆಚ್ಚಿಗೆ ನೀಡುವುದು. ದೀರ್ಘಾವಧಿ ಠೇವಣಿಗಳು ಇದ್ದಲ್ಲಿ ಅಷ್ಟು ಮಾತ್ರ ದೀರ್ಘಾವದಿ ಸಾಲಗಳನ್ನು ನೀಡತಕ್ಕದ್ದು. ಅಲ್ಪಾವಧಿ ಠೇವಣಾತಿಗಳೇ ಹೆಚ್ಚಿದ್ದು ದೀರ್ಘಾವಧಿ ಸಾಲಗಳನ್ನು ನೀಡಿದಲ್ಲಿ ನಗದು ಒಳಹರಿವು ಮತ್ತು ನಗದು ಹೊರಹರಿವಿನ ಸಮತೋಲನ ಕಾಯ್ದುಕೊಳ್ಳಲು ಆಗುವುದಿಲ್ಲ. ಇದರಿಂದ ಆಸ್ತಿ ಜವಾಬ್ದಾರಿ ನಿರ್ವಹಣೆ ಏರು ಪೇರಾಗಿ ಹೊಂದಾಣಿಕೆ ಆಗುವುದಿಲ್ಲ (mis match).

ಸಾಲ ವಿತರಣೆ: ಪತ್ತಿನ ಸಹಕಾರ ಸಂಘದ ಉದ್ದೇಶವೇ ಸದಸ್ಯರಿಗೆ ಸಾಲ ವಿತರಣೆ ಮಾಡುವುದಾಗಿದೆ. ಸಾಲ ನೀಡುವ ಉದ್ದೇಶ ಸಹಕಾರ ಸಂಘದ ಸದಸ್ಯರ ಅವಶ್ಯಕತೆಯನ್ನು ಅವಲಂಭಿಸಿರುತ್ತದೆ. ‘ಸಕಾಲದಲ್ಲಿ ಸಾಲ, ಸಾಕಷ್ಟು ಸಾಲ, ಸಕಲರಿಗೂ ಸಾಲ’ ಎಂಬುದು ಸಂಘದ ಘೋಷವಾಕ್ಯವಾಗಬೇಕು. ಸದಸ್ಯರಿಗೆ ತಮ್ಮ ಅವಶ್ಯಕತೆ ಗೆ ತಕ್ಕದಾಗಿ ಶೀಘ್ರವಾಗಿ ಸಾಲ ದೊರಕುವಂತೆ ಸಂಘದಲ್ಲಿ ಸಾಲ ನಿಯಮಗಳು, ಸಾಲ ನೀತಿ , ಸಾಲ ವಿತರಿಸುವ ರೂಢಿ ಪದ್ಧತಿಗಳು ಜಾರಿಗೆ ತರಬೇಕು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರ ಸಂಘಗಳ’ ಅಳಿವು ಉಳಿವು’ ನ ಪ್ರಶ್ನೆ ಇದನ್ನು ಅವಲಂಭಿಸಿರುತ್ತದೆ.

ಈ ದಿಸೆಯಲ್ಲಿ ಎಲ್ಲ ಸಹಕಾರ ಸಂಘಗಳು ಏಕ ರೂಪದಲ್ಲಿರಲು ನಿರೀಕ್ಷಿಸಲಾಗುವುದಿಲ್ಲ. ಆಯಾ ಸಹಕಾರ ಸಂಘದ ಪರಿಸರ, ಸದಸ್ಯರ ಅವಶ್ಯಕತೆ ಗಳನ್ನು ಅವಲಂಭಿಸಿರುತ್ತದೆ. ಆದರೆ ಸಂಘವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಈ ಮುಂದೆ ಕಾಣಿಸಿದ ಸಾಲ ತತ್ವಗಳ (ಸೂತ್ರ) ನ್ನು ಪರಿಪಾಲಿಸಬೇಕಾಗುತ್ತದೆ. (ಅ) ಸುರಕ್ಷತೆ (ಆ) ದ್ರವ್ಯ ಆಸ್ತಿ (ಇ) ಉದ್ದೇಶ (ಈ) ಲಾಭದಾಯಕತೆ (ಉ) ಭದ್ರತೆ (ಊ) ವೈವಿಧ್ಯಮತೆ.

(ಅ) ಸುರಕ್ಷತೆ: ಸಂಘವು ನೀಡಿದ ಸಾಲವು ಸಕಾಲದಲ್ಲಿ ಬಡ್ಡಿ ಸಹಿತ ಹಿಂತಿರುಗಿ ಬರಬೇಕು. ಅದಕ್ಕಾಗಿ ಸಾಲಗಾರನು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು ಸಾಲ ಪಡೆದು ಸಾಲ ಪಡೆದ ಉದ್ದೇಶಕ್ಕಾಗಿ ಉಪಯೋಗಿಸಿ ಸಾಲ ಮರು ಪಾವತಿಯ ಇಚ್ಛಾಶಕ್ತಿ ಉಳ್ಳವರಾಗಿರುತ್ತಾನೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಫಲಾನುಭವಿ ಆಯ್ಕೆ ಸರಿಯಾಗಿದ್ದಲ್ಲಿ ಸಂಘವು ನೀಡಿದ ಸಾಲವು ಸುರಕ್ಷಿತವಾಗಿರುತ್ತದೆ. ಸಾಲಗಾರರ ಮರುಪಾವತಿಶಕ್ತಿ, ಅವರ ಆಧಾಯ ಗಳಿಸುವಿಕೆ ವಿವರಗಳು, ಸಾಲವನ್ನು ಯಾವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಪ್ರಾಮಾಣಿಕತೆ, ಗುಣ ಮುಖ್ಯವಾಗುತ್ತದೆ. ಸಾಲಗಾರನ ಗುರುತಿಸುವಿಕೆ ಸರಿಯಾಗಿದ್ದಲ್ಲಿ ಸಾಲ ಸುರಕ್ಷಿತವಾಗಿದೆ ಎಂದು ಕಳೆಯಬಹುದು.

(ಆ) ದ್ರವ್ಯ ಆಸ್ತಿ: ಸಾಲ ವಿತರಣೆಗೆ ದ್ರವ್ಯ ಆಸ್ತಿ ಅತಿ ಅಗತ್ಯ. ಅದನ್ನು ನಿರ್ವಹಣೆ ಮಾಡುವಲ್ಲಿ ಸಂಘ ತೆಗೆದು ಕೊಳ್ಳ ಬೇಕಾದ ಕ್ರಮಗಳ ಬಗ್ಗೆ ಮೇಲಿನ ಕಂಡಿಕೆಗಳಲ್ಲಿ ವಿವರಿಸಿದೆ. ಅದು ಇಲ್ಲದಿದ್ದಲ್ಲಿ ಸಂಘವು ಠೇವಣಿದಾರರ ಮತ್ತು ಸಾಲಗಾರರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ.

(ಆ) ಉದ್ದೇಶ : ಸಾಲ ನೀಡುವ ಉದ್ದೇಶ ಖಚಿತವಾಗಿರಬೇಕು. ಯಾವ ಉದ್ದೇಶಕ್ಕೆ ಸಾಲ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಸಾಲ ಉಪಯೋಗಿಸಲಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.ಸಾಲ ಉತ್ಪಾದನಾ ಉದ್ದೇಶಗಳಿಗೆ ನೀಡಿದಾಗ ಬಂಡವಾಳ ವೃದ್ಧಿಯಾಗಿ ಬಡ್ಡಿ ಸಹಿತ ಸಾಲ ಮರುಪಾವತಿ ಸಾಧ್ಯ.

(ಆ) ಲಾಭದಾಯಕತೆ: ಆಸ್ತಿಗಳ ಮೆಲಿನ ಗಳಿಕೆಯಲ್ಲಿ ನಿಧಿಗಳ ಮೇಲಿನ ವೆಚ್ಚ ಕಳೆದು ಉಳಿದುದೇ ಸಂಘದ ಗರಿಷ್ಟ ಲಾಭ ಅಥವ ಅಂತರ ಇದರಲ್ಲಿ ವ್ಯವಸ್ಥಾಪನಾ ವೆಚ್ಚ ( ವ್ಯವಹಾರ ವೆಚ್ಚ) ಕಳೆದರೆ ಉಳಿಯುವುದೇ ಸಂಘದ ನಿವ್ವಳ ಲಾಭ ಅಥವ ಅಂತರ. ಆದುದರಿಂದ ಯಾವಾಗಲೂ ಸಾಲಗಳ ಮೇಲಿನ ಬಡ್ಡಿ ಧರ ಅಧಿಕ ವಿರಿಸಿ ಠೇವಣಿಗಳ ಮೇಲಿನ ಬದ್ದಿಧರ ಕಡಿಮೆ ಇರಬೇಕು. ಇತರೆ ವೆಚ್ಚಗಳ ಮೇಲೆ ನಿಯಂತ್ರಣವಿರಬೇಕು. ಆಗ ಮಾತ್ರ ಸಂಘವು ಲಾಭದಾಯಕವಾಗಿ ನಡೆಯಬಲ್ಲದು. ನಷ್ಟ ಅನುಭವಿಸಿದಲ್ಲಿ ಸಂಘದ ಬಂಡವಾಳ ಕರಗಿ ಹೋಗುತ್ತದೆ. ಸದಸ್ಯರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ.

(ಇ) ಭದ್ರತೆ: ಸಾಲಕ್ಕೆ ಸರಿಯಾದ ಭದ್ರತೆ ಹೊಂದಿದ್ದಲ್ಲಿ ಸಾಲ ಸಕಾಲದಲ್ಲಿ ಮರುಪಾವತಿ ಯಾಗದಿದ್ದರೂ ಬಡ್ಡಿ ಸಹಿತ ಸಾಲ ವಸೂಲಿ ಮಾಡಲು ಸಾಧ್ಯವಾಗುತ್ತದೆ. ದೀರ್ಘಾವಧಿ ಸಾಲಗಳಲ್ಲಿ ಸ್ಥಿರ ಆಸ್ತಿಗಳ ಭದ್ರತೆ ಅತಿ ಮುಖ್ಯ. ಅದಕ್ಕೆ ತಕ್ಕ ದಾಖಲಾತಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂಬುದನ್ನು ಮರೆಯಲಾಗದು.

(ಈ) ಸಾಲಗಳಲ್ಲಿ ವೈವಿಧ್ಯಮತೆ: ಸಾಲ ನೀಡುವಲ್ಲಿ ಯಾವುದೇ ಒಂದೇ ವಲಯ, ಒಂದೇ ಉದ್ದೇಶಕ್ಕೆ ಸಾಲ ವಿತರಿಸಬಾರದು. ಸಾಲಗಳು ವಿವಿಧ ಉದ್ದೇಶಗಳಿಗೆ ವಿವಿಧ ವಲಯಗಳಿಗೆ ವಿತರಣಿಯಾಗಿದ್ದಲ್ಲಿ ಒಂದು ವಲಯ , ಒಂದು ಉದ್ದೇಶ ಸಾಲ ವಸೂಲಿಯಾಗಲಿಲ್ಲವೆಂದರೆ ಮತ್ತೊಂದು ವಲಯ , ಅಥವ ಇತರೆ ಉದ್ದೇಶಕ್ಕೆ ನೀಡಿದ ಸಾಲವು ವಸೂಲಿಯಾಗಿ ಸಂಘದ ಹಿತಾಸಕ್ತಿ ಕಾಪಾಡುತ್ತದೆ. ‘ಒಂದೇ ಬುಟ್ಟಿಯಲ್ಲಿ ಎಲ್ಲ ಮೊಟ್ಟೆಗಳನ್ನು ಇಡುವ ಬದಲಿಗೆ, ಮೊಟ್ಟೆಗಳನ್ನು ಬೇರೆ ಬೇರೆ ಬುಟ್ಟಿ ಗಳಲ್ಲಿಡಿ’ ಎಂಬ ಸೂತ್ರ ಅನ್ಯಯವಾಗುತ್ತದೆ. ಬಿದ್ದು ಒಂದು ಬಟ್ಟೆಯಲ್ಲಿನ ಮೊಟ್ಟೆಗಳು ಒಡೆದು ಹೋದರೆ ಇತರೆ ಬುಟ್ಟಿಯಲ್ಲಿನ ಮೊಟ್ಟಿಗಳು ಕಾಪಾಡುತ್ತವೆ.

ಸಾಲ ವಸೂಲಾತಿ: ಪತ್ತಿನ ಸಹಕಾರ ಸಂಘಗಳಲ್ಲಿ ಅತಿ ದೊಡ್ಡ ಆಸ್ತಿ ಎಂದರೆ ತನ್ನ ‘ಸಾಲಗಳು ಮತ್ತು ಮುಂಗಡೆಗಳು’ ಈ ಕಲೆ ಬರಹದ ಹೊರಬಾಕಿ ಮೊತ್ತ . ಒಟ್ಟಾರೆ ಆಸ್ತಿಯ ಶೇ80ಕ್ಕೂ ಮಿಗಿಲಾಗಿರುತ್ತದೆ. ಇದರ ಆರೋಗ್ಯ ಆ ಸಹಕಾರ ಸಂಘದ ಸಾಲ ವಸೂಲಾತಿ ಪರಿಸ್ಥಿತಿಯನ್ನು ಅವಲಂಭಿಸಿರುತ್ತದೆ. ಸಹಕಾರ ಸಂಘವು ನಿಖರವಾದ ‘ಬೇಡಿಕೆ , ಸಂಗ್ರಹಣೆ, ಬಾಕಿ'(Demand Collection Balance) ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಸಾಲದ ನಿಖರವಾದ ‘ಕುಳುವಾರು ಬಾಕಿ ಪಟ್ಟಿ’ಯನ್ನು ಹೊಂದಿರಬೇಕು. ಇದರಿಂದ ಸಾಲ ಬಾಕಿ ಉಳ್ಳ ಸದಸ್ಯರ ಸಾಲ ಮರುಪಾವತಿ ಬಗ್ಗೆ ಗಮನಹರಿಸಲು ಸಾಧ್ಯ.ಸದಸ್ಯರಿಗೆ ಸಾಲ ಮರುಪಾವತಿ ಬಗ್ಗೆ ಸಕಾಲದಲ್ಲಿ ನೆನಪಿಸುವುದು , ಸಾಲ ಖಾತೆಯ ಮೇಲೆ ಕಣ್ಗಾವಲು ನಿರ್ವಹಿಸುವುದು ಅತಿ ಮುಖ್ಯ. ಇದಕ್ಕೆ ಇತ್ತೀಚೆಗೆ ಮೃದು ತಂತ್ರಜ್ಞಾನ ಅಭಿವೃದ್ಧಿ ಗೊಂಡಿದ್ದು ಅವುಗಳ ಅಳವಡಿಕೆ ಅತ್ಯಂತ ಉಪಯುಕ್ತ.

ಸಕಾಲದಲ್ಲಿ ವಸೂಲಿಯಾಗ ಬೇಕಾದ ಮೊತ್ತ ಮರುಪಾವತಿಯಾಗದಿದ್ದಲ್ಲಿ ಸಾಲ ವಸೂಲಾತಿಗೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.

ಸಾಲ ವಸೂಲಾತಿ ‘ಸಾಲ ವಿತರಣೆ’ ದಿನಾಂಕದಿಂದಲೇ ಆರಂಭವಾಗುತ್ತದೆ. ಉತ್ತಮ ಸಾಲಗಾರನನ್ನು ಗುರುತಿಸಿ ಗುಣಾತ್ಮಕವಾಗಿ ಸಾಲ ನೀಡಿದಲ್ಲಿ ಸಾಲ ಮರುಪಾವತಿ/ಸಾಲ ವಸೂಲಾತಿ ಸರಾಗವಾಗಿ ಆಗುತ್ತದೆ.

ಸಂಘಕ್ಕೆ ವಸತಿಯಾದ “ಬಡ್ಡಿ ” ಆಧಾಯವೇ ಆಧಾಯ. ಸಾಲ ಅಸಲು ಮತ್ತು ಬಡ್ಡಿಯೊಡನೆ ಮರುಪಾವತಿಯಾಗಬೇಕು. ಯಾವುದೇ ರೀತಿಯಲ್ಲಿ ‘ಸೋರಿಕೆ’ ಗೆ ಅವಕಾಶ ವಿರ ಬಾರದು. ಈ ವಿಷಯದಲ್ಲಿ ಆಂತರಿಕ ಪರಿವೀಕ್ಷಣೆ/ಲೆಕ್ಕ ಪರಿಶೋಧನಾ ಕ್ರಮಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಸಕಾಲದಲ್ಲಿ ವಸೂಲಾತಿಯಾಗದೆ ಸಂಘದ ಅನುಕ್ರಮಗಳಿಗೂ ಮೀರಿ ಸಾಲ ಸುಸ್ತಿಯಾದಲ್ಲಿ(ಬೇಬಾಕಿ ) ಕಾಯ್ದೆ ಯಾತ್ಮಕ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕಾಗುತ್ತದೆ. ಈ ಕ್ರಮಗಳಿಗೆ ಅಗತ್ಯ ದಾಖಲಾತಿಗಳು , ಭದ್ರತಾ ಕ್ರಮಗಳು ಅತಿ ಅಗತ್ಯ ಕ.ರಾ.ಸ. ಸಂ.ಕಾಯ್ದೆ ಕಲಂ 70 ರಲ್ಲಿ ವ್ಯಾಜ್ಯ ಹೂಡಿ ‘ಅವಾರ್ಡ್/ಡಿಕ್ರಿ ಪಡೆಯಬೇಕಾಗುತ್ತದೆ.

ತದ ನಂತರ ಕ.ರಾ. ಸ ಸಂ ಕಾಯ್ದೆ 101 ರಲ್ಲಿ ಅವುಲ್ಜಾರಿ ಮಾಡಿ ಸಾಲಗಾರರ ಚರ/ಸ್ಥಿರ ಆಸ್ತಿಗಳ ಮೂಲಕ ಸಾಲ ವಸೂಲಾತಿ ಮಾಡಬೇಕಾಗುತ್ತದೆ.

 

ಸಾಲವನು ಕೊಂಬಾಗ I ಹಾಲೋಗರ ಉಂಡಂತೆ

  ಸಾಲಿಗನು ಬಂದಾಗ | ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ | ಎಂಬುದೀಗ ತಿರುವು ಮುರುವು ಪರಿಸ್ಥಿತಿ ಉಂಟಾಗಿದ್ದು , ಪತ್ತಿನ ಸಹಕಾರ ಸಂಘಗಳು ಅತಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು

ಈ ದಿನಗಳ ಅವಶ್ಯಕತೆ ಯಾಗಿರುತ್ತದೆ.

   ( ಕ.ರಾ.ಸ.ಮಹಾಮಂಡಳ, ರಾಯಚೂರು.ಸ.ಒಕ್ಕೂಟ , ಸಹಕಾರ ಇಲಾಖೆ ವರ್ಷಕಿಸಿದ್ದ ತರಭೇತಿ ಕಾರ್ಯಗಾರಕ್ಕೆ ಸಿದ್ಧಪಡಿಸಿದ ಲೇಖನ)                                                                                                                                               

ಶಶಿಧರ ಎಲೆ,

ಸಹಕಾರ ಸಂಘಗಳ ಅಪರ ನಿಬಂಧಕರು, ( ನಿವೃತ್ತ) ನಂ 281, ನೇಸರ ಬಾಲಾಜಿ ಹೆಚ್ . ಬಿ. ಸಿ. ಎಸ್ ಲೇಔಟ್, ವಾಜರಹಳ್ಳಿ ಕನಕಪುರ ರಸ್ತೆ ಬೆಂಗಳೂರು 560109     

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More