ಅಪೆಕ್ಸ್ ಬ್ಯಾಂಕ್ ಮತ್ತು ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು.

 

 

ಪೀಠಿಕೆ : (ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾರಾಜಿಸಿದ್ದಾರೆ. ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿದಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ.)

ಪ್ರಾಯಶಃ ಸಹಕಾರಿ ರಂಗ ಅಜ್ಜೀಬಳರಂತೆ, ಅಜ್ಜೀಬಳರಷ್ಟು ಸುದೀರ್ಘಕಾಲ, ಅಜ್ಜೀಬಳರ ಹಾಗೆ ಒಳ್ಳೆಯ ಹೆಸರಿಟ್ಟುಕೊಂಡು ತಳದಿಂದ ಎತ್ತರದವರೆಗೆ ದುಡಿದ ಇನ್ನೊಬ್ಬ ಸೇವಕನನ್ನು ಪಡೆದಿದೆಯೆಂದು ನನಗನ್ನಿಸುವುದಿಲ್ಲ. ಇದ್ದರೂ ಈ ದೇಶದಲ್ಲಿ ಅಂಥವರ ಸಂಖ್ಯೆ ಬಹಳಿರಲಿಕ್ಕಿಲ್ಲ. ‘ ಸಕ್ಕರೆಯು ಸವಿಯೊಳಗೋ, ಸವಿಯು ಸಕ್ಕರೆಯೊಳಗೋ’ ಎಂಬಂತೆ , ‘ಅಜ್ಜೀಬಳರು ಸಹಕಾರದೊಳಗೋ, ಸಹಕಾರ ಅಜ್ಜೀಬಳರೊಳಗೋ’ ಎಂದು ಕೇಳಬೇಕಾಗುತ್ತದೆ ಎಂಬ ಶ್ರೀ ವಿಷ್ಣು ನಾಯ್ಕರ ಅಭಿಪ್ರಾಯವು ಅಜ್ಜೀಬಳರ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.

‘ನಾನು ಎಲ್ಲರಿಗಾಗಿ ; ಎಲ್ಲರೂ ನನಗಾಗಿ’ ಎಂಬ ಅರ್ಥಪೂರ್ಣವಾದ ಧ್ಯೇಯವನ್ನಿಟ್ಟುಕೊಂಡು ಮೂಡಿಬಂದ ಪರಿಕಲ್ಪನೆಯೇ ‘ಸಹಕಾರ’ ಪರಸ್ಪರ ಹಸ್ತಲಾಘವದೊಂದಿಗೆ ಕೈಜೋಡಿಸಿರುವ ಸಹಕಾರದ ಲಾಂಛನವು ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ಕೈಹಿಡಿದು ಮುನ್ನಡೆಸುವ ಕರುಣಾಳು ಬೆಳಕಿನಂತೆ ಸಹಕಾರ ತತ್ವವು ಪ್ರಕಾಶಿಸುತ್ತದೆ ಎಂಬ ಅರ್ಥವನ್ನು ನೀಡುವಂತಿದೆ. ಸಹಕಾರ ತತ್ವವು ಅಸಹಾಯಕತೆಯ ತಮಂಧದ ನಡುವೆ ಕೈಹಿಡಿದು ದಾರಿ ತೋರುವ ಬೆಳಕಾಗಿ ಭಾಸವಾಗುತ್ತದೆ.
ಸಹಕಾರ ಸಂಘಗಳು ಇಲ್ಲದ ಯಾವ ದೇಶವು ಇಲ್ಲ. ಸಹಕಾರ ಸಂಘಗಳು ಸರ್ವ ವ್ಯಾಪಿಯಾಗಿವೆ. ಇವು ಸ್ವಯಂ ಪ್ರೇರಿತ ಸಂಸ್ಥೆಗಳಾಗಿದ್ದು ಆರ್ಥಿಕವಾಗಿ ಹಿಂದುಳಿದವರು ತಮ್ಮ ಸದಸ್ಯರ ಅನುಕೂಲತೆಗಾಗಿ ಸ್ಥಾಪಿಸಿಕೊಂಡಿರುವ ಸಂಸ್ಥೆಗಳಾಗಿವೆ. ಸಾಮಾನ್ಯವಾಗಿ ಆರ್ಥಿಕ ಪ್ರಗತಿ ಸಾಧಿಸಲು ಮತ್ತು ಆರ್ಥಿಕ ಶೋಷಣೆಯಿಂದ ಮುಕ್ತರಾಗಲು ಆರ್ಥಿಕ ಸಮಾನತೆ ಸಾಧಿಸುವ ಮನಸ್ಸಿರುವ ವ್ಯಕ್ತಿಗಳು ಸಹಕಾರ ಸಂಘಗಳನ್ನು ಸ್ಥಾಪಿಸಿಕೊಳ್ಳುತ್ತಾರೆ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸಹಕಾರ ಚಳುವಳಿಯು ಭಾರತದಲ್ಲಿಯೂ ಆರಂಭವಾಯಿತು. ಜನತೆಯ ಆಶೋತ್ತರಗಳನ್ನು ಗಮನಿಸಿದ ಅಂದಿನ ಬ್ರಿಟಿಷ್ ಸರಕಾರ 1904ರಲ್ಲಿ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯಿದೆ ಜಾರಿಗೆ ಬಂದ ತರುವಾಯ ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘವು 1905ರಲ್ಲಿ ಸ್ಥಾಪನೆಯಾಯಿತು. ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ್ ಅವರು ಗದಗಿನ ಕಣಗಿನಹಾಳದಲ್ಲಿ ಈ ಸಹಕಾರ ಸಂಘವನ್ನು ಸ್ಥಾಪಿಸಿ ಕರ್ನಾಟಕದಲ್ಲಿ ಸಹಕಾರ ಚಳವಳಿಗೆ ಮುನ್ನುಡಿ ಬರೆದರು. ಅದರ ತರುವಾಯ ರಾಜ್ಯದ ಇತರೆಡೆಗಳಲ್ಲಿಯೂ ನಿಧಾನವಾಗಿ ಸಹಕಾರ ತತ್ವವು ಪ್ರಚುರಗೊಳ್ಳತೊಡಗಿತು. ಹೀಗಾಗಿ ಪಾಟೀಲರನ್ನು ಭಾರತದ ಸಹಕಾರ ಚಳುವಳಿಯ ಪಿತಾಮಹ ಎಂದು ಗುರುತಿಸಲಾಗುತ್ತದೆ.

ರಾಜ್ಯದಲ್ಲಿ ಸಹಕಾರ ಆಂದೋಲನವು ನಿಧಾನವಾಗಿ ವಿಸ್ತರಿಸುತ್ತಹೋಯಿತು. 1914-15ರ ವೇಳೆಗೆ ಕರ್ನಾಟಕದಲ್ಲಿ ಒಟ್ಟು 725 ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ಒಟ್ಟು 56,267 ಸದಸ್ಯರಿದ್ದರು. ಒಟ್ಟು ಬಂಡವಾಳ 30.85 ಲಕ್ಷದಷ್ಟಿತ್ತು. 175 ಸಹಕಾರ ಸಂಘಗಳ ಪೈಕಿ 661 ವ್ಯವಸಾಯ (ಕ್ರೆಡಿಟ್) ಸಹಕಾರಿ ಸಂಘಗಳಾಗಿದ್ದವು. ಅವುಗಳು ರೈತರಿಗೆ ಸಾಲ ಕೊಡಲು ಒಂದು ಕೇಂದ್ರ ಬ್ಯಾಂಕ್ (ಅಪೆಕ್ಸ್ ಬ್ಯಾಂಕ್ ) ಅವಶ್ಯಕವಾಯಿತು. ಈ ಉದ್ದೇಶದಿಂದಲೇ 1915ರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕನ್ನು ಸ್ಥಾಪಿಸಲಾಯಿತು. ಎಸ್. ವರದರಾಜ ಅಯ್ಯಂಗಾರ್ ಅವರು ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ 1915-16ರಲ್ಲಿ ಕಾರ್ಯನಿರ್ವಹಿಸಿದರು.

ಅಪೆಕ್ಸ್ ಬ್ಯಾಂಕು ರಾಜ್ಯದ ಎಲ್ಲ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಗೆ ಹಣಕಾಸನ್ನು ಒದಗಿಸುವ ಏಕೈಕ ಉದ್ದೇಶವನ್ನು ಹೊಂದಿತ್ತು. ಅದು ರಾಜ್ಯದ ಎಲ್ಲಾ ಸಹಕಾರ ಸಂಘಗಳ ಮೇಲ್ವಿಚಾರಣೆಯ ಅಧಿಕಾರವನ್ನು ಹೊಂದಿತ್ತು. ಆದರೂ 1951ರ ಹೊತ್ತಿಗೆ ಮೈಸೂರು ರಾಜ್ಯದ ಕೇವಲ 3%ರಷ್ಟು ಜನರು ಮಾತ್ರ ಅದರ ಫಲಾನುಭವಿಗಳಾಗಿದ್ದರು. 1991ರ ವೇಳೆಗೆ 62%ರಷ್ಟು ಗ್ರಾಮಾಂತರ ಜನರು ಅದರ ಪ್ರಯೋಜನ ಪಡೆದಿದ್ದರು. ರಾಜ್ಯದ ಎಲ್ಲ ಡಿ.ಸಿ.ಸಿ ಬ್ಯಾಂಕುಗಳೂ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಸದಸ್ಯತ್ವ ಪಡೆಯುವುದು ಕಡ್ಡಾಯ. ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ತಾವು ಸಂಗ್ರಹಿಸುವ ಠೇವಣಿಯಲ್ಲಿ 30%ರಷ್ಟನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಮೀಸಲಿಡಬೇಕಾಗುತ್ತದೆ. ಅಪೆಕ್ಸ್ ಬ್ಯಾಂಕ್ ತನ್ನ ಮೂಲನಿಧಿ ಹಾಗೂ ನಬಾರ್ಡ್ ನೀಡುವ ಹಣವನ್ನು ಡಿ.ಸಿ.ಸಿ ಬ್ಯಾಂಕುಗಳಿಗೆ ಹಂಚಿಕೆ ಮಾಡುತ್ತದೆ. ಡಿ.ಸಿ.ಸಿ ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತವೆ.

1963ರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಜಿ.ಎಸ್.ಹೆಗಡೆಯವರು 1964-66ರ ಅವಧಿಯಲ್ಲಿ ಈ ಬ್ಯಾಂಕಿನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1983 ರಿಂದ 1989ರ ವರೆಗೆ ಆರು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಇವರು ಬ್ಯಾಂಕಿನ 21ನೇ ಅಧ್ಯಕ್ಷರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜಿ.ಎಸ್.ಹೆಗಡೆಯವರು ಕೆನಡಾ ದೇಶದ ಮಾಂಟ್ರಿಯಲ್ ದಲ್ಲಿ ನಡೆದ I.R.U. ಸಮ್ಮೇಳನ (ಅಂತರ ರಾಷ್ಟ್ರೀಯ ಸಹಕಾರಿ ಒಕ್ಕೂಟ) ದಲ್ಲಿ ಪಾಲ್ಗೊಂಡಿದ್ದರು . ಇಂಟರ್ ನ್ಯಾಷನಲ್ ರೈಸೇಶಿಯನ್ ಯೂನಿಯನ್ (I.R.V )ಸಮ್ಮೇಳನದಲ್ಲಿ ಭಾಗವಹಿಸಿದ್ದ ಇಬ್ಬರು ಭಾರತೀಯರಲ್ಲಿ ಇವರೂ ಒಬ್ಬರು. ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಹಕಾರಿ ಚಳವಳಿ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಿ, ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದೇ ಸಂದರ್ಭದಲ್ಲಿ ಅಜ್ಜೀಬಳ ಹೆಗಡೆಯವರು ಅಮೇರಿಕದ ಹಲವು ಸಹಕಾರ ಸಂಘ-ಸಂಸ್ಥೆಗಳನ್ನು ಸಂದರ್ಶಿಸಿ ಅವುಗಳ ಕಾರ್ಯವೈಕರಿಯ ಬಗ್ಗೆ ಅಧ್ಯಯನ ನಡೆಸಿಕೊಂಡು ಬಂದಿದ್ದರು. ಅಲ್ಲಿಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು.
ಅಜ್ಜೀಬಳ ಜಿ.ಎಸ್.ಹೆಗಡೆಯವರು ಅಪೆಕ್ಸ್ ಬ್ಯಾಂಕಿನ ಸದಸ್ಯ ಹಾಗೂ ಅಧ್ಯಕ್ಷರಾದುದು ಕೆ.ಡಿ.ಸಿ.ಸಿ. ಬ್ಯಾಂಕಿಗೆ ವರವಾಗಿ ಪರಿಣಮಿಸಿತು, ಸ್ವತಃ ಅಜ್ಜೀಬಳರೇ ಕೆ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರೂ ಆಗಿದ್ದರಿಂದ ಅಪೆಕ್ಸ್ ಬ್ಯಾಂಕಿನಿಂದ ಕೆ.ಡಿ.ಸಿ.ಸಿ. ಬ್ಯಾಂಕಿಗೆ ಬರಬೇಕಿದ್ದ ಸಾಲ ಹಾಗೂ ಇತರೆ ಅನುಕೂಲಗಳನ್ನು ಸುಲಭವಾಗಿ ಪಡೆದುಕೊಳ್ಳಲು ಇದರಿಂದ ಸಹಾಯವಾಯಿತು. ಅದು ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಯಿತು. ಆ ಕಾಲಕ್ಕೆ ವಿಶ್ವಬ್ಯಾಂಕ್ ಸ್ಕೀಮ್ ನಿಂದ ಗೋದಾಮುಗಳ ನಿರ್ಮಾಣಕ್ಕೆ ಸಾಲ ನೀಡಲಾಗುತ್ತಿತ್ತು. ಆಗ ನಮ್ಮಲ್ಲಿನ ಅನೇಕ ಸೊಸೈಟಿಗಳ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಸ್ವಂತ ಗೋದಾಮು, ಕಟ್ಟಡ ನಿರ್ಮಿಸುಕೊಳ್ಳುವುದೂ ಅವುಗಳಿಗೆ ಕಷ್ಟಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಬಹಳಷ್ಟು ಸೊಸೈಟಿಗಳಿಗೆ “ವರ್ಲ್ಡ್ ಬ್ಯಾಂಕ್ “ಸ್ಕೀಮನ ಅಡಿಯಲ್ಲಿ ನೂರಾರು ಗೋದಾಮುಗಳನ್ನು ಮಂಜೂರು ಮಾಡಿಸಿದ್ದು ಅಜ್ಜೀಬಳರ ಸಾಧನೆ, ಸೊಸೈಟಿಗಳ ಆಡಳಿತ ನಿರ್ವಹಣೆ ಹಾಗೂ ಮಹಸೂಲು ಮಾರಾಟದಲ್ಲಿಯೂ ಅವರಿಂದ ಸಹಾಯ ದೊರಕಿತು. ಇದರಿಂದಾಗಿ ಕೆ.ಡಿ.ಸಿ.ಸಿ. ಬ್ಯಾಂಕು ರಾಜ್ಯದಲ್ಲಿಯೇ ಅತ್ಯುತ್ತಮ ಡಿ.ಸಿ.ಸಿ. ಬ್ಯಾಂಕ್ ಎಂಬ ಪುರಸ್ಕಾರವನ್ನು ಪಡೆಯಲೂ ಸಾಧ್ಯವಾಯಿತು.

ಸಂಗ್ರಹ ಮತ್ತು ಬರಹ
ಶಂಕರ ಹೆಗಡೆ,
ಟವರ್ ಬಿ2-110, 1ನೆ ಮಹಡಿ
ಮಹೇಂದ್ರ ಆರನ ಅಪಾರ್ಟ್ ಮೆಂಟ್ಸ್,
ಎಲೆಕ್ಟ್ರಾನಿಕ್ ಸಿಟಿ, 2ನೇ ಹಂತ ಅನಂತನಗರ,
ಕಮ್ಮಸಂದ್ರ ರೋಡ್, ಬೆಂಗಳೂರು-560100
ಮೊ.ನಂ. 7204789315 /8095595512

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More