120 ವರ್ಷಗಳ ಇತಿಹಾಸವಿರುವ ಸಹಕಾರ ಚಳವಳಿ ಇಂದು ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಭಾರತದ ಸಹಕಾರ ಚಳವಳಿಯ ಮೊದಲ ಬೇರು ಆರಂಭವಾಗಿದ್ದು ಕರ್ನಾಟಕದಲ್ಲಿ ಎಂಬುದು ಜನಜನಿತವಾದುದು. ದೇಶದ ಪ್ರಪ್ರಥಮ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭವಾಗಿದ್ದು ಗದಗ ಜಿಲ್ಲೆಯ ಕಣಗಿನಹಾಳದಲ್ಲಿ. ಇದರ ಜನಕ ಸಿದ್ದನ ಗೌಡ ಸಣ್ಣರಾಮನ ಗೌಡ ಪಾಟೀಲರು. ಸಹಕಾರ ಎಂಬುದು ಬಹಳ ಹಿಂದಿನ ತತ್ವ. ಹುಟ್ಟಿನಿಂದ ಸಾವಿನವರೆಗೂ ಸಹಕಾರ ಎಂಬುದು ಅನಿವಾರ್ಯವಾಗಿ ಇರಬೇಕಾದ ವಿಷಯ. ಸುಖ ಸಿಕ್ಕಾಗ ಹಂಚಿ ಉಣ್ಣಲು, ದುಃಖ ಎದುರಾದಾಗ ಹಂಚಿ ಹೇಳಿಕೊಂಡು ಅನುಭವಿಸಲು ಪರಸ್ಪರ ಸಹಕಾರ ಮನೋಭಾವ ಬೇಕೇ ಬೇಕು. ಪುರಾಣದ ಸಮುದ್ರ ಮಥನ ಸಹಕಾರಕ್ಕೊಂದು ಉತ್ತಮ ಉದಾಹರಣೆ. ಶೋಷಣೆಯ ವಿರುದ್ಧ ಇಂಗ್ಲೆಂಡ್‌ನಲ್ಲಿ ಆರಂಭವಾದ ಒಂದು ಚಳವಳಿ ಸಹಕಾರ ತತ್ವದಡಿ ರಾಬರ್ಟ್ ಓವನ್‌ರಿಂದ ಆರಂಭವಾಗಿ ಮುಂದೆ ಯುರೋಪ್ ಹಾಗೂ ವಿಶ್ವದ ಅನೇಕ ದೇಶಗಳಲ್ಲಿ ಹಬ್ಬಿತು. ಬಂಡವಾಳಶಾಹಿ ಮತ್ತು ಸಮಾಜವಾದಿ ಆರ್ಥಿಕ ವ್ಯವಸ್ಥೆಗೆ ಪರ್ಯಾಯವಾಗಿ ಬೆಳೆದು ಬಂದ ಈ ವ್ಯವಸ್ಥೆ ಸಮಾಜದ ದುರ್ಬಲ ವರ್ಗದವರ, ಮದ್ಯಮ ವರ್ಗದವರ ಬೆಳವಣಿಗೆಯ ಜೊತೆಗೆ ಸಿರಿವಂತರ ಅಭಿವೃದ್ಧಿಗೂ ಪೂರಕವಾದ ಉತ್ತಮ ವ್ಯವಸ್ಥೆಯೆಂದು ಮನ್ನಣೆ ಗಳಿಸಿತು. ಸಹಕಾರಿ ಕ್ಷೇತ್ರ ಆರೋಗ್ಯಕರವಾಗಿ ಬೆಳೆದಲ್ಲಿ ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಾದ್ಯವೆಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರತಿಪಾದಿಸಿದ್ದರು. ಅವರ ಪ್ರೋತ್ಸಾಹದಲ್ಲಿ ಗುಜರಾತ್‌ನಲ್ಲಿ ಆರಂಭವಾದ ಅಮುಲ್ ಇಂದು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಇಂಗ್ಲೆಂಡ್-ಯುರೋಪ್‌ಗಳಲ್ಲಿ ಸಹಕಾರಿ ಚಳವಳಿ ಕಾನೂನಿನ ತೆಕ್ಕೆಯೊಳಗೆ 18ನೇ ಶತಮಾನದಲ್ಲೇ ಬಂದಿದ್ದರೂ ನಮ್ಮ ದೇಶದಲ್ಲಿ 1904ರಲ್ಲಿ ಈ ವಿಷಯದಲ್ಲಿ ಮೊದಲ ಸಲ ಕಾನೂನು ರಚನೆಯಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(ಈಗಿನ ಕಾಸರಗೋಡು ಸೇರಿ) ಸಹಕಾರಿ ಕ್ಷೇತ್ರ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಬಹುದು. ಸಮಾಜದ ಎಲ್ಲ ವರ್ಗಗಳ ಜನರಿಗೆ ಉತ್ತಮ ಜೀವನ ನಿರ್ವಹಣೆಗಾಗಿ ಸಹಕಾರಿ ಕ್ಷೇತ್ರ ಸರಿಯಾದ ದಾರಿ ತೋರಲು ಸಾಧ್ಯ. ಈ ಅರಿವು ಎಲ್ಲರಿಗೂ ಇದ್ದು ಸಹಕಾರಿ ಕ್ಷೇತ್ರವನ್ನು ಪ್ರಾಮಾಣಿಕತೆ, ವೃತ್ತಿಪರತೆ, ಬದ್ಧತೆಗಳಿಂದ ಉತ್ತಮ ಮಾರ್ಗದರ್ಶನ ನೀಡಬಲ್ಲ ಸ್ನೇಹಿತ ತತ್ವಜ್ಞಾನಿ ಗುರುವಿನಂತೆ ಬೆಳೆಸಲು ಸಹಕಾರಿಗಳೆಲ್ಲ ಪಣ ತೊಟ್ಟು ಶ್ರಮಿಸಬೇಕು.ಸದಸ್ಯ-ಆಡಳಿತ- ಸಿಬ್ಬಂದಿ ಇವುಗಳು ಸಹಕಾರಿ ಸಂಸ್ಥೆಯೊಂದರ ಅವಿಭಾಜ್ಯ ಅಂಗ. ಇವರು ಬದ್ಧತೆ, ಪ್ರಾಮಾಣಿಕತೆ ಹಾಗೂ ವೃತ್ತಿ ಪರತೆಗಳಿಂದ ತ್ರಿಕೋನದಂತೆ ಕೂಡಿ ದುಡಿದಾಗ ಎಲ್ಲವೂ ಚೆನ್ನಾಗಿರುತ್ತದೆ. ಸಹಕಾರಿ ಸಂಘವೆಂದರೆ ಸದಸ್ಯರೊಂದಿಗೆ ಮಾತ್ರ ವ್ಯವಹಾರ. ಇದು ತಪ್ಪಿದಲ್ಲಿ ಹಲವಾರು ಸಮಸ್ಯೆಗಳಿಗೆ, ಕಷ್ಟಗಳಿಗೆ ಕಾರಣವಾಗಬಹುದು. ಸದಸ್ಯರೂ ಸಂಘದೊಂದಿಗೆ ವ್ಯವಹರಿಸಬೇಕು. ಬಾಂಗ್ಲಾದೇಶದ ನೊಬೆಲ್ ಪುರಸ್ಕೃತ ಮಹಮ್ಮದ್ ಯೂನಸ್ ಆರಂಭಿಸಿದ ಸ್ವಸಹಾಯ ಸಂಘಗಳ ಪರಿಕಲ್ಪನೆ ಮುಂದೆ ವಿಶ್ವಾದ್ಯಂತ ಹಬ್ಬಿತು. ಮುಂದುವರಿಯುತ್ತಿರುವ ದೇಶಗಳಲ್ಲಿ ಈ ಕಲ್ಪನೆಯಿಂದ ಆರ್ಥಿಕ ಸಬಲೀಕರಣ ಸಾಮಾಜಿಕ ಪ್ರಗತಿ ಆಗುತ್ತಲೇ ಇದೆ. ರಾಜ್ಯದಲ್ಲಿ ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಬಡವರ, ಮಧ್ಯಮ ವರ್ಗದವರ ಅಭಿವೃದ್ಧಿ ಸಾದ್ಯವಾದದ್ದು, ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆಯವರು 1982ರಲ್ಲಿ ಆರಂಭಿಸಿದ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯಿಂದ. ಇದೂ ಸಹಕಾರಿ ತತ್ವದಡಿಯೇ ಆರಂಭವಾದದ್ದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಅವರ ಕನಸಿನ ಸಹಕಾರ ವೈಭವ ಇಂದು ಪ್ರತಿಷ್ಠಿತ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕ್ಯಾಂಪ್ಕೊ ಮೂಲಕ ಸಾಕಾರಗೊಂಡಿದೆ. ಸಾಮಾಜಿಕ ಕಳಕಳಿಯೊಂದಿಗೆ ಸಮಾಜದ ಎಲ್ಲ ವರ್ಗದ ಜನರನ್ನೂ ಆರ್ಥಿಕವಾಗಿ ಮೇಲೆತ್ತಲು ಸಹಕಾರ ಕ್ಷೇತ್ರ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ತತ್ವದಲ್ಲಿ ವಿಶ್ವಾಸ, ಆಚರಣೆಯಲ್ಲಿ ಬದ್ಧತೆ, ಆರ್ಥಿಕವಾಗಿ ಸದೃಢಗೊಳ್ಳುತ್ತಿರುವ ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರ ಹೊಸ ಆಯಾಮ ಸೃಷ್ಟಿಸಿದೆ.
ಸಹಕಾರ ಚಳವಳಿಯ ಭದ್ರ ಬುನಾದಿಯಿಂದ ಇಂದು ಗ್ರಾಮೀಣ ಪ್ರದೇಶದ ಜನರು ಪ್ರಜಾಪ್ರಭುತ್ವದ ತಳಹದಿಯಲ್ಲಿ ಸಹಕಾರಿ ಸಂಘ, ಬ್ಯಾಂಕ್ ಹಾಗೂ ಸಂಸ್ಥೆಗಳನ್ನು ಕಟ್ಟಿ ಗ್ರಾಮಾಭಿವೃದ್ಧಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ಜನಸಾಮಾನ್ಯರಿಗೆ ಸೂಕ್ತ ಸ್ಪಂದನೆ ನೀಡುತ್ತಿರುವಾಗ ಕೆಲವೊಂದು ಎಡರು-ತೊಡರುಗಳು ಸಾಮಾನ್ಯ. ಇವೆಲ್ಲವನ್ನು ಮೆಟ್ಟಿ ನಿಂತು ಮುಂದೆ ಸಾಗಬೇಕಿದೆ.
ಭಾರತದ ಪ್ರಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು, ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು ಎಂದಿದ್ದರು. ಬ್ರಿಟಿಷರ ಆಳ್ವಿಕೆಯ ನಂತರ ಸಹಕಾರದ ನೇತಾರರೆನಿಸಿದಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ನಮ್ಮದೇ ನೆಲದಲ್ಲಿ ಸಹಕಾರ ತತ್ವವಾಧರಿಸಿದ ಆಳ್ವಿಕೆಯಲ್ಲಿ ಭಾರತವನ್ನು ಮುನ್ನಡೆಸಬೇಕೆಂಬ ಕನಸು ಕಂಡಿದ್ದರು. ಪರಕೀಯರ ಆಡಳಿತ ತಪ್ಪಿಸಿ ಭಾರತೀಯರೇ ದೇಶ ಆಳುವಂತೆ ಶ್ರಮಿಸಿ, ತಮ್ಮದೇ ನೆಲಗಟ್ಟಿನ ಜಾಯಮಾನಕ್ಕೆ ತಕ್ಕಂತೆ ಜನಸಾಮಾನ್ಯರಿಗೆ ಸಕಲ ಸೌಲಭ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿಯುತ ಪ್ರಜಾ ಸರ್ಕಾರ ರಚನೆಗೆ ನಾಂದಿ ಹಾಡಿದವರು ಮಹಾತ್ಮ ಗಾಂಧೀಜಿ ಎಂಬುದನ್ನು ಮರೆಯಲಾಗದು.
ಅನೇಕ ಹಿರಿಯರು ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ದಿ.ವೈಕುಂಠಲಾಲ್ ಮೆಹ್ತಾ, ಹಾಲು ಉತ್ಪಾದನೆಯ ಸಹಕಾರ ಸಂಘಗಳ ಮೂಲಕ ಸಹಕಾರ ಕ್ಷೇತ್ರವನ್ನು ಬಲಪಡಿಸಿದ ಡಾ.ಕುರಿಯನ್,ಭಾರತದಲ್ಲಿ ಸಹಕಾರ ಚಳುವಳಿಯ ಹುಟ್ಟಿಗೆ ಕಾರಣರಾದ ಸಿದ್ಧರಾಮನ ಗೌಡ ಸಣ್ಣರಾಮನ ಗೌಡ, ವೃತ್ತಿಯಲ್ಲಿ ನ್ಯಾಯವಾದಿಯಾದ್ದ ಮೊಳಹಳ್ಳಿ ಶಿವರಾಯರುಮೊದಲಾದವರು ಈ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದ ಗಣ್ಯರಲ್ಲಿ ಪ್ರಮುಖರು.
ಸಹಕಾರವು ಒಂದು ಮಾನವ ಪ್ರಯತ್ನವಾದುದರಿಂದ ಅದರ ಯಶಸ್ಸು ಉಳಿದೆಲ್ಲಪ್ರಯತ್ನಗಳಂತೆ ಎಲ್ಲರ ಸಹಕಾರದ ಮೇಲೆಯೇ ಅವಲಂಬಿಸಿರುತ್ತದೆ. ಸಹಕಾರ ಚಳವಳಿ ಯಶಸ್ವಿಯಾಗಬೇಕಾದಲ್ಲಿ ಸಾರ್ವಜನಿಕ ಸಹಕಾರಿ ಪ್ರಯತ್ನಬಹಳ ಮುಖ್ಯ. ಕೆೀಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರದ ಬಲವರ್ಧನೆಗೆ ವಿಶೇಷ ಯೋಜನೆ ರೂಪಿಸಿರುವುದು ಆಶಾದಾಯಕ. ಆಧುನಿಕತೆ ಬೆಳೆದಂತೆ ಹಿರಿಯ ಸಹಕಾರಿಗಳ ಪರಿಶ್ರಮದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಪರಿವರ್ತನೆಗಳಾಗಿದ್ದು, ಗಣಕೀಕರಣ, ಡಿಜಿಟಲೀಕರಣ ಮೂಲಕ ಸಹಕಾರ ರಂಗ ಜನರ ಪ್ರಗತಿಗೆ ಸಾಕಷ್ಟು ಒತ್ತು ನೀಡುತ್ತ ಬರುತ್ತಿದೆ. ಸಹಕಾರಿ ಸಂಘಗಳು ಸ್ವಸಹಾಯ, ಪ್ರಜಾಸತ್ತೆ, ಸಮಾನತೆ, ಸ್ವಾವಲಂಬನೆ ಹಾಗೂ ಸ್ವಯಂ ಹೊಣೆಗಳಾದಂಥ ಮೌಲ್ಯಗಳ ಮೇಲೆ ಅವಲಂಬಿತವಾಗಿದ್ದು, ಸಹಕಾರಿ ರಂಗಗಳು ಯಾವುದೇ ಅವ್ಯವಹಾರದಿಂದ ಕೂಡಿರದೆ ಪಾರದರ್ಶಕ ಸೇವೆಗಳ ಜತೆಗೆ ಸದಸ್ಯರು ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾದ ಹೊಣೆ ಅವಶ್ಯಕ.
ಸಂಪಾದಕರು
ಸಹಕಾರ ಸ್ಪಂದನ