ಭಾರತ ಸ್ವಾತಂತ್ರ್ಯ ನಂತರ, ಆರಿಸಿಕೊಂಡದ್ದು ಮಿಶ್ರ ಆರ್ಥಿಕ ನೀತಿ. ಇದರಿಂದ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಸರ್ಕಾರ ಬೆಂಬಲ ನೀಡಿತು. ಇವರ ನಡುವೆ ಸುವರ್ಣ ಮಾಧ್ಯಮವಾಗಿ ಸಹಕಾರ ವಲಯ ಕ್ಕೆ ತಾನೂ ಪಾಲದಾರನಾಗಿ ಸಹಕಾರ ಚಳುವಳಿಗೆ ಕಾರಣವಾಗಿ ತನ್ಮೂಲಕ ಹಸಿರು ಕ್ರಾಂತಿ, ಶ್ರೇತ ಕ್ರಾಂತಿ, ನೀಲಿಕ್ರಾಂತಿ, ಹಳದಿ ಕ್ರಾಂತಿ ಗೆ ಕಾರಣವಾಗಿದ್ದು ಈಗ ಇತಿಹಾಸ.
ಭಾರತದ ಆರ್ಥಿಕ ನೀತಿ 1990ರ ದಶಕದಲ್ಲಿ ಬದಲಾವಣೆ ಕಂಡಿತು. ವಿಶ್ವದಲ್ಲಿ ಭಾರತ ದ್ವೀಪವಾಗಿ ನಿಲ್ಲಲಾಗದೆ ತಾನೂ ಉದಾರೀಕರಣ, ಖಾಸಗಿಕರಣ, ಜಾಗತೀಕರಣ ನೀತಿ ಒಪ್ಪಿಕೊಳ್ಳಲಾಗಿ ಭಾರತವು ಆರ್ಥಿಕ ಮುಂದುವರೆದ ರಾಷ್ಟ್ರಗಳಲ್ಲಿ ಒಂದು ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಈಗಾಗಲೆ ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆ ಮುಟ್ಟಿದ್ದು ಇಷ್ಟರಲ್ಲೇ ಐದು ಟ್ರಿಲಿಯನ್ ಆರ್ಥಿಕತೆ ಮುಟ್ಟುವ ಆಶಯ ಹೊಂದಲಾಗಿದೆ. ಕೆಲವು ರಾಜ್ಯಗಳು ತಾವು ಒಂದು ಟ್ರಿಲಿಯನ್ ಆರ್ಥಿಕತೆ ಹೊಂದುವುದಾಗಿ ಘೋಷಿಸಿಕೊಂಡಿವೆ. ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಈ ಗಳಿಕೆ ಗಳಿಸಿದರೆ ಮಾತ್ರ ಸಾಕೇ? ನಮ್ಮ ಸಂವಿಧಾನ ದ ಆಶಯವಾದ ಸಮಾತ ಸಮಾಜ ನಿರ್ಮಾಣ ಇದರಿಂದ ಸಾಧ್ಯವೇ?
ವಿಶ್ವದಲ್ಲಿನ ಅಸಮಾನತೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಜ್ಞರು “ಭಾರತವು ಅತ್ಯಂತ ಶ್ರೀಮಂತರ ಬಡ ರಾಷ್ಟ್ರ ” ಎಂದು ಕರೆಯುತ್ತಿದ್ದಾರೆ. ಏಕೆಂದರೆ 80-90 ರ ದಶಕದಿಂದ ಅಸಮಾನತೆ ಬೆಳೆಯುತ್ತಾ ಬಂದಿದ್ದು ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಅಧಿಕವಾಗುತ್ತಿದ್ದು ದೊಡ್ಡ ಕಂದಕವೇ ನಿರ್ಮಾಣ ಆಗಿದೆ. ಅಸಮಾನತೆಯ ದುಷ್ಟರಿಣಾಮಗಳು ಅನೇಕ. ಅಪರಾಧಗಳು, ಅಹಿಂಸೆ, ಅನಾಚಾರ ಮುಂತಾದ ಕೆಡುಕುಗಳಿಗೆ ಕಾರಣವಾಗ ಬಲ್ಲದು. ಅಲ್ಲದೆ ಆರೋಗ್ಯದ ಮೇಲೆ ಶ್ರೀಮಂತರಲ್ಲಿ ಮತ್ತು ಬಡವರಲ್ಲಿ ಮಾನಸಿಕ ಮತ್ತು ದೈಹಿಕ ದುಷ್ಟರಿಣಾಮಗಳು ಉಂಟಾಗುತ್ತವೆ. ಸಮಾಜಿಕ ಕ್ಷೋಭೆಗೆ ಕಾರಣವಾಗುತ್ತದೆ. ಜನ ಸಮೂಹಗಳಲ್ಲಿನ ಅಂತರ ಅಧಿಕ ಗೊಳ್ಳುತ್ತಿರುವುದನ್ನು ಕಣ್ಣಾರೆ ಕಾಣುತ್ತಲಿದ್ದೇವೆ.
ಈ ಮುಂದಿನ ಕೆಲವು ಅಂಶಗಳು ಸೋಜಿಗ ವನ್ನು ಉಂಟು ಮಾಡುತ್ತದೆ. ಭಾರತದಲ್ಲಿ 1951 ರಲ್ಲಿ ಕೆನೆಪದರದ ಶೇಕಡ ಒಂದರಷ್ಟು ಜನಸಂಖ್ಯೆ ಭಾರತದ ಶ್ರೀಮಂತಿಕೆಯ ಶೇ 11.5 ಪಾಲು ಹೊಂದಿದ್ದರು. 1980 ಕ್ಕೆ ಅದು ಶೇ 6 ಕ್ಕೆ ಇಳಿದಿತ್ತು . 2022 ರಲ್ಲಿ ಅದು ಶೇ 22.6 ಮುಟ್ಟಿರುತ್ತದೆ. ಭಾರತದ ಮೇಲ್ಪದರದ ಶೇ 10 ಜನಂಖ್ಯೆಯ ಸರಾಸರಿ ವಾರ್ಷಿಕ ಆಧಾಯ ರೂ 53 ಲಕ್ಷಗಳು , ಭಾರತೀಯೊಬ್ಬನ ಸರಾಸರಿ ವಾರ್ಷಿಕ ಆಧಾಯ ಕೇವಲ ರೂ 2.3 ಲಕ್ಷಗಳು. ಶೇ 40 ಜನಸಂಖ್ಯೆ ವಾರ್ಷಿಕ ಆದಾಯ ರೂ 1.65 ಲಕ್ಷಗಳು ಶೇ 50 ಜನಸಂಖ್ಯೆಯ ವಾರ್ಷಿಕ ಆದಾಯ ರೂ 71, 000 ಮಾತ್ರ.
ಮುಂದುವರೆದು ಭಾರತದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಶ್ರಮದಿಂದಲೇ ಬದುಕನ್ನು ಕಟ್ಟಿಕೊಳ್ಳ್ತಿದ್ದಾರೆ . ಕೇವಲ ಕೆಲವರೇ ಭೂಮಿ ಅಥವ ಇತರೆ ಬಂಡವಾಳದಿಂದ ಜೀವನ ನಡೆಸುತ್ತಿದ್ದಾರೆ. ಈ ಶ್ರಮಜೀವಿಗಳಲ್ಲಿ ಶೇ90 ಭಾಗ ಅಸಂಘಟಿತ ಕಾರ್ಮಿಕರ ವಲಯವಾಗಿದೆ. ಇವರಿಗೆ ಸೇವೆ ಭದ್ರತೆ ಇಲ್ಲ. ಸೇವೆಗೆ ಪ್ರತಿ ಫಲವೂ ಇಲ್ಲ ಮತ್ತು ಆಧಾಯಗಳಿಕೆಯು ಬಹಳ ಕಡಿಮೆ. ನೂತನ ಕೆಲಸಗಳು ಸೃಷ್ಟಿಯಾಗುತ್ತಿದೆಯೇ? ಉತ್ತಮ ಕೆಲಸಗಳು ಸೃಷ್ಟಿಯಾಗುತ್ತಿವೆಯೆ? ವೇತನ, ಕೂಲಿ ಜಾಸ್ತಿಯಾಗುತ್ತಿದೆಯೇ? ಎಂಬ ಪ್ರಶ್ನೆಗಳು ಉಧ್ಭವವಾಗುತ್ತವೆ.
ಭಾರತ ಯುವ ಜನತೆ ಯ ರಾಷ್ಟ್ರವಾಗಿದೆ. ಇನ್ನು 30 – 35 ವರ್ಷಗಳವರೆಗೆ ಈ ಒಂದು ಅನುಕೂಲತೆ ಭಾರತಕ್ಕೆ ಇರುತ್ತದೆಯಾಗಿ ಜನಸಂಖ್ಯಾ ಶಾಸ್ತ್ರ ತಜ್ಞರು ಅಂದಾಜಿಸುತ್ತಿದ್ದಾರೆ. ಈ ಸುವರ್ಣಾವಕಾಶವನ್ನು ಭಾರತವು ಉಪಯೋಗಿಸಿಕೊಳ್ಳಬೇಕಾಗಿದೆ. ಯುವ ಜನತೆಯ ಸಂಪೂರ್ಣ ಶಕ್ತಿಯನ್ನು ಉದ್ಯೋಗ ಸೃಷ್ಟಿ ಮೂಲಕ ಮಾಡಿದಲ್ಲಿ ಉತ್ಪಾಧಕತೆ ಅಧಿಕಗೊಳ್ಳುತ್ತದೆ. ಹಾಲಿ ನಿರುದ್ಯೋಗ ಮತ್ತು ಅಪೂರ್ಣ ಶಕ್ತಿಯ ಬಳಕೆಯನ್ನು ತಪ್ಪಿಸ ಬಹುದಾಗಿದೆ. ಈಗಿನ ಬಂಡವಾಳ ಶಾಹಿ ಖಾಸಗಿ ವಲಯದ ಗುರಿ ಕೇವಲ ಬಂಡವಾಳದಿಂದ ಬಂಡವಾಳ ಬೆಳವಣಿಗೆಯಾಗಿರುತ್ತದೆ ವಿನಃ ಉದ್ಯೋಗ ಸೃಷ್ಟಿಯಲ್ಲ. ಆಧುನಿಕತೆಯ ಭರಾಟೆಯಲ್ಲಿ ಮಾನವ ಸಂಪನ್ಮೂಲಕ್ಕೆ ಬೆಲೆ ಇಲ್ಲದಂತಾಗಿದೆ. ಮಾನವ ಸಂಪನ್ಮೂಲ ವೇ ಆಸ್ತಿ, ಮತ್ತು ಬಂಡವಾಳ ವಾಗುವಂತಹ ಉದ್ಯೋಗ ಸೃಷ್ಟಿ ಮತ್ತು ಉತ್ಪನ್ನ ಸೃಷ್ಠಿಸುವ ಮಾದರಿಯ ಅವಶ್ಯಕತೆ ಇದೆ. ಅದುವೇ ಸಹಕಾರಿ ಮಾದರಿ. ಭಾರತದಲ್ಲಿ ಶೇ 53 ಕ್ಕೂ ಹೆಚ್ಚಿನ ಶ್ರಮಶಕ್ತಿ, ಮತ್ತು ಮಹಿಳಾ ಶ್ರಮಶಕ್ತಿ ಗ್ರಾಮೀಣ ಪ್ರದೇಶಗಳಲ್ಲಿದೆ ಎಂಬುದೊಂದು ಅಂದಾಜು. ‘ಸಣ್ಣದು ಸುಂದರ’ ಎಂಬುದು ಜರ್ಮನ್ ಆರ್ಥಿಕ ತಜ್ಞ , ಶೂಮೇಕರ್ ನ ಪುಸ್ತಕ. ಮಹಾತ್ಮ ಗಾಂಧಿ ಯವರ ಪ್ರತಿ ಪಾದನೆಯನ್ನು ಅವರು ಒಪ್ಪಿಕೊಳ್ಳುತ್ತಾರೆ. ‘ಸಹಕಾರ ದಿಂದ ಸ್ವಾತಂತ್ರ್ಯ’ ಎಂಬುದು ಅವರ ದೇಯವಾಕ್ಯವಾಗಿತ್ತು. ಈಗ ಪುನಃ ಇದರ ಚಿಂತನೆಯ ಅಗತ್ಯತೆ ಕಂಡುಬರುತ್ತದೆ. ಆಧುನಿಕ ವೈಜ್ಞಾನಿಕ ಆವಿಷ್ಕಾರಗಳು, ತಂತ್ರಜ್ಞಾನ ಇವುಗಳ ಅಳವಡಿಕೆಯಿಂದ ಕೃಷಿ, ಕೃಷಿ ಅವಲಂಭಿತ ಉದ್ಯೋಗಗಳ ಸೃಷ್ಟಿಗೆ ಸಾಕಷ್ಟು ಅವಕಾಶಗಳಿವೆ. ಮಾರುಕಟ್ಟೆಗೆ ದಾರಿಯ ಮಾದರಿ ನಮ್ಮ ಕಣ್ಣಿನ ಮುಂದೆ ಇದೆ. ಅದು ಅಮುಲ್ ಮಾದರಿ ಇದರ ಯಶಸ್ವಿ ಅನುಕರಣೆ “ನಂದಿನಿ” ಇಂದ ಆಗಿದೆ . ಇದರಿಂದ ಗ್ರಾಮೀಣ ಮಟ್ಟದ ಸಣ್ಣ ಸಣ್ಣ ಸಹಕಾರ ಸಂಘಗಳು ಒಟ್ಟುಗೂಡಿ ಸಹಕಾರ ಒಕ್ಕೂಟ ವ್ಯವಸ್ಥೆ ಮೂಲಕ ಯಶಸ್ಸು ಗಳಿಸಬಹುದೆಂಬದು ಸಾಬೀತಾಗಿದೆ.ಅಗತ್ಯವಿರುವುದು ಬದ್ಧತೆ, ಶ್ರದ್ಧೆ, ಪ್ರಾಮಾಣಿಕತೆ, ಉಳ್ಳ ನಾಯಕತ್ವ,ಸಂಘಟನಾತ್ಮಕ ಶಕ್ತಿ. ಅಸಂಘಟಿತ ಕಾರ್ಮಿಕ ವಲಯ ಗಳಲ್ಲಿ ಸಹಕಾರ ಸಂಘಗಳ ಸ್ಥಾಪನೆಯಾಗಬೇಕು. ಸಹಕಾರ ಚಳುವಳಿ ಒಂದೇ ಆರ್ಥಿಕ ಪ್ರಗತಿ ಯೊಡನೆ ಸಾಮಾಜಿಕ ನ್ಯಾಯ ಒದಗಿಸಿ ಸರ್ವತೋಮುಖ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಮತ್ತು ಯುಕ್ತಿ ಯನ್ನು ಒಳಗೊಂಡಿದೆ.ಇದಕ್ಕಾಗಿ ಯುವಜನತೆಯಲ್ಲಿ ಸಹಕಾರ ದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವಂತಹ ಕಾರ್ಯಕ್ರಮಗಳಾಗಬೇಕು. ಉತ್ತಮ ಸಕಾರಾತ್ಮಾಕ ನಾಯಕತ್ವ ಯುವಜನತೆಗೆ ಮಾದರಿಯಾಗಬೇಕಾದುದು ಈ ದಿನದ ಅವಶ್ಯಕತೆಯಾಗಿದೆ. ಇದರಿಂದ ಅಸಮಾನತೆಯ ಸಮಾಜದಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ.ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಮುಂದಿನ ಪೀಳಿಗೆಗೆ ಸಹಜ ಬದುಕು ಕಟ್ಟಿಕೊಡಲು ಸಾಧ್ಯವಾಗುತ್ತದೆ.
ರಾಕ್ ಡೇಲ್ ಅಗ್ರಗಾಮಿಗಳು ಸಹಕಾರ ಸಂಘದ ಯಶಸ್ವಿಗಾಗಿ ತಮಗೆ ತಾವೇ ಕೆಲವು ನಿಯಮಗಳನ್ನು ರೂಪಸಿಕೊಂಡರು. ಅವೇ ಮುಂದೆ ಸಹಕಾರ ತತ್ವ ಗಳು ಎನಿಸಿಕೊಂಡವು. ಸಹಕಾರ ಸಂಘಗಳು ಈ ತತ್ವಗಳನ್ನು ಪಾಲಿಸಿದಲ್ಲಿ ಅವರ ಉದ್ದೇಶ ಸಾಧಿಸುವಲ್ಲಿ ಸಾಧ್ಯವಾಗುತ್ತದೆ. ಸ್ವಯಂ ಮತ್ತು ಮುಕ್ತ ಸದಸ್ಯತ್ವ ಇದನ್ನು ಸಹಾರ ಸಂಘಗಳು ಪಾಲಿಸುತ್ತಿದೆಯೇ? ಸ್ವಯಂ ಹಿತಾಸಕ್ತಿಯೇ ಮೇಲುಗೈ ಪಡೆಯುತ್ತಿದೆಯೇ ಪ್ರಜಾಸತ್ತಾತ್ಮಕ ಸದಸ್ಯ ಹತೋಟಿ, ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ತಮಗೆ (ಸದಸ್ಯರಿಗೆ) ಹೊಣೆಗಾರಿಕೆ ಉಳ್ಳ ಆಡಳಿತ ಮಂಡಳಿ ರಚನೆಯಾಗುತ್ತಿದೆಯೇ? ಸಾಮಾನ್ಯ ನಿಕಾಯ ಸದಸ್ಯರ ಆಸೆ , ಆಕಾಂಕ್ಷೆ, ನಿರೀಕ್ಷೆಗಳನ್ನು ಪೂರೈಸುತ್ತಿದೆಯೇ? ಸಹಕಾರ ಸಂಘ ದ ಸದಸ್ಯರು ಎಷ್ಟರಮಟ್ಟಿಗೆ ಸಂಘದ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.? ಸಹಕಾರ ಸಂಘವು ಎಷ್ಟರ ಮಟ್ಟಿಗೆ ಸ್ವಾಯತ್ತತೆ ಮತ್ತು ಸ್ವಾತಂತ್ರತೆ ಯಿಂದ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಸಂಘವು ತನ್ನ ಸದಸ್ಯರಿಗೆ , ನೌಕರರಿಗೆ , ಶಿಕ್ಷಣ ಮತ್ತು ತರಭೇತಿ ನೀಡುತ್ತಿದೆಯೇ? ಸಹಕಾರದ ಬಗ್ಗೆ ಎಷ್ಟರಮಟ್ಟಿಗೆ ಪ್ರಚಾರಕಾರ್ಯ ಕೈಗೊಂಡಿದೆ. ಸಹಕಾರ ಸಂಘಗಳ ನಡುವೆ ಸಹಕಾರ ತತ್ವ ದಿಟವಾಗಿಯೂ ಪಾಲನೆ ಆಗುತ್ತಿದೆಯೇ? ಸಹಕಾರ ಸಂಘವು ಎಷ್ಟರ ಮಟ್ಟಿಗೆ ಸಾಮಾಜಿಕ (ಸಮೂಹ) ಕಳಕಳಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶಗಳು ಸಹಕಾರ ಚಳುವಳಿಯ ಯಶಸ್ಸಿಗೆ ಕಾರಣವಾಗುತ್ತದೆ. ಸಹಾರ ಸಂಘಗಳು ಯುವ ಜನತೆಯನ್ನು ಆಕರ್ಷಿಸಿ ಸಂಘಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯಬಲ್ಲವು. ಇದರಿಂದ ಸೃಷ್ಟಿಯಾಗುತ್ತಿರುವ ಆರ್ಥಿಕ ಅಸಮಾನತೆಯ ಮತ್ತು ತನ್ಮೂಲಕ ಸೃಷ್ಟಿಯಾಗುತ್ತಿರುವ ಸಾಮಾಜಿಕ ಕಂದರ ವನ್ನು ಮೊಟಕು ಗೊಳಿಸಲು ಸಾಧ್ಯ.
ಇದು ಕೇವಲ ಗಾಳಿಗೋಪುರ ವೇ ? ಎಂಬ ಪ್ರಶ್ನೆ ಉದ್ದವಿಸುತ್ತದೆ. ಖಂಡಿತ ಅಲ್ಲ. ಯುರೋಪ್ ಮತ್ತು ಪೂರ್ವ ಪೆನಿಫಿಕ್ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಸಹಕಾರ ಚಳುವಳಿ ಬಂಡವಾಳ ಶಾಹಿ ಹೂಡಿಕೆಗೆ ಸ್ಪರ್ಧಾತ್ಮಕ ವಾಗಿ ನಿಂತು ಕಾರ್ಯವೆಸಗುತ್ತಿವೆ. ಇದರಿಂದ ಸಮತಾ ಸಮಾಜ ನಿರ್ಮಾಣ ಸಾಧ್ಯವಾಗಿದೆ. ಈ ದಿಸೆಯಲ್ಲಿ ಭಾರತದ ಸಹಕಾರ ಚಳುವಳಿ ಕೂಡ ಕಾರ್ಯೊನ್ಮುಖ ವಾಗಬೇಕಿದೆ.
ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾ
– ಸರ್ ಫಿಲಿಪ್ ಸಿಡ್ನಿ,
ಶಶಿಧರ ಎಲೆ ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ)
ನಂ . 281, ‘ನೇಸರ’ವಾಲಾಜಿ ಹೆಚ್ ಬಿ ಸಿ ಎಸ್ ಲೇಔಟ್ , ವಾಜರಹಳ್ಳಿ , ಕನಕಪುರ ರಸ್ತೆ, ಬೆಂಗಳೂರು 560109