ಸಹಕಾರಿ ಕ್ಷೇತ್ರಕ್ಕೆ ಹೊಸಮುಖಗಳ ಸೇರ್ಪಡೆ ಆಗುತ್ತಿರಬೇಕು. ಅದರಲ್ಲೂ ಯುವಶಕ್ತಿ ಹೆಚ್ಚು ಉತ್ಸುಕತೆಯಿಂದ ಸಹಕಾರಿ ರಂಗದಲ್ಲಿ ಧುಮುಕಬೇಕು ಎಂಬುದು ಆಶಯ. ಇದಕ್ಕೆ ಪೂರಕವಾಗಿ ದೊಡ್ಡ ಮಟ್ಟಿನ ಬದಲಾವಣೆ ಆಗದಿದ್ದರೂ ಈ ಕರೆಗೆ ಓಗೊಡುವ ಮಂದಿಗೇನೂ ಕಡಿಮೆಯಿಲ್ಲ. ಆದರೆ ಈಗಾಗಲೇ ಈ ಕ್ಷೇತ್ರದಲ್ಲಿ ಇರುವ ಕೆಲವು ಹಿರಿಯರು ಸಹಕಾರಿ ರಂಗವನ್ನು ಮುನ್ನಡೆಸಲು ಸರಿಯಾದ ತಂಡವನ್ನು ಕಟ್ಟಿ ಬೆಳೆಸುತ್ತಿಲ್ಲ ಎಂಬುದು ದೊಡ್ಡ ನೋವಿನ ಸಂಗತಿ. ಹತ್ತು ಮೂವತ್ತು ವರ್ಷಗಳಿಂದ ಕೆಲವೊಂದು ಸಹಕಾರಿ ಸಂಘ ಸಂಸ್ಥೆಗಳಲ್ಲಿ ಝಂಡಾ ಊರಿದವರು ಇನ್ನೂ ಅಲ್ಲೇ ಠಿಕಾಣಿ ಹೂಡಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದು ಸರ್ವತ್ರ ಕೇಳಿ ಬರುತ್ತಿರುವ ಆರೋಪ. ಸಧ್ಯಕ್ಕೆ ಕೇರಳ ಸರಕಾರ ಸಹಕಾರಿ ಸಂಘಗಳ ನಿರ್ದೇಶಕರ ಅವಧಿಯನ್ನು ಮೂರು ಅವಧಿಗೆ ನಿಗದಿಮಾಡಿ ಇಂತಹವುಗಳಿಗೆ ವಿರಾಮ ಹಾಕಿದೆ.
ಆಯ್ದು ತರುವುದು ಅಂತವರನ್ನೆ!
ಒಂದೆರಡು ಇಂತಹ ಹಿರಿಯರನ್ನು ನಾನು ಮಾತನಾಡಿಸಿದಾಗಲೂ ಅವರಿಂದ ಬಂದ ಉತ್ತರ ಅವರು ಪ್ರತಿನಿಧಿಸುತ್ತಿರುವ ಸಂಘಕ್ಕೆ ಅವರಲ್ಲದೆ ಹೋದರೆ ಗತಿಯಿಲ್ಲ ಎಂಬ ಮನೋಭಾವ. ಆ ಸಂಘಗಳ ಒಳ ಹೊಕ್ಕು ನೋಡಿದರೆ ಅಲ್ಲಿ ಬರುವ ಹೊಸಬರು ಒಂದಿನಿತೂ ಸಹಕಾರಿ ರಂಗಕ್ಕೆ ಸಹಕಾರ ಕೊಡಲು ತಾಳ್ಮೆ, ಪುರುಸೊತ್ತು ಇಲ್ಲದವರು. ಅಂತವರನ್ನೇ ಈ ಹಿರಿಯರು ತಂದು ಸೇರಿಸುತ್ತಾರೆ. ಯಾಕೆಂದರೆ ಅವರು ನಾಳೆ ತಮ್ಮ ಸ್ಥಾನಕ್ಕೆ ಸ್ಪರ್ಧಿಯಾಗುವುದು ಅವರಿಗೆ ಇಷ್ಟವಾಗದು. ಒತ್ತಾಯಕ್ಕೊ, ಹೆಸರಿಗೋ ಬರುವ ಹೊಸಬರು ಸಂಘಗಳ ಬೆಳವಣಿಗೆಗೆ ನೀಡುವ ಪಾಲಂತು ಬರಿಯ ಸೊನ್ನೆ.
ಉತ್ಸಾಹಿಗಳು ಬರಲಿ
ನಿರ್ದೇಶಕರಾಗಿ ಬರುವವರು ಉತ್ಸಾಹಿಗಳಾಗಿದ್ದರೆ ಆ ಸಹಕಾರಿ ಸಂಸ್ಥೆಗೆ ಮತ್ತು ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ಕೊಡಬಹುದು. ಸಹಕಾರಿ ಕ್ಷೇತ್ರದ ಮೂಲಕ ಸಮಾಜದ ಎಲ್ಲರ ಅಭಿವೃದ್ಧಿ, ತನ್ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದನ್ನು ಮತ್ತು ಭಾರತದ ಆರ್ಥಿಕ ಸಬಲತೆಗೆ ಸಹಕಾರಿ ರಂಗದ ಕೊಡುಗೆ ಅಪಾರ ಎಂಬುದನ್ನು ಮನದಟ್ಟು ಮಾಡಿದರೆ ಯುವಶಕ್ತಿ ಸಹಕಾರಿ ಕ್ಷೇತ್ರದತ್ತ ಮುಖಮಾಡಬಹುದು. ಅಂತವರನ್ನು ಹುಡುಕಿ ತರುವುದು ಪ್ರಯಾಸದ ಕೆಲಸ. ಇಷ್ಟೇ ಅಲ್ಲ. ಒಳಗೆ ಬಂದ ಹೊಸಮುಖಗಳಿಗೆ ಸಹಕಾರಿ ರಂಗದ ಬಗ್ಗೆ, ಅವರು ಪ್ರತಿನಿಧಿಸುವ ಸಂಘದ ಬಗ್ಗೆ, ಬೈಲಾಗಳ ಬಗ್ಗೆ ಸರಿಯಾದ ತರಬೇತಿಗಳು ಸಿಗುವಂತಾಗಬೇಕು. ಎಷ್ಟೋ ಕಡೆ ಸಂಘದ ಬೈಲಾವನ್ನೇ ನಿರ್ದೇಶಕರ ಕೈಗೆ ಕೊಡದಿರುವ ಉದಾಹರಣೆಗಳು ಇವೆ. ನಿರ್ದೇಶಕರ ಕರ್ತವ್ಯ, ಅವರು ಗಮನಿಸಬೇಕಾದ ಅಂಶಗಳು, ಅವರು ಸದಾ ಅಧ್ಯಯನಶೀಲರಾಗಬೇಕಾದ ಬಗ್ಗೆ ವರ್ಷಕ್ಕೆರಡಾದರೂ ತರಬೇತಿ ಕಾರ್ಯಕ್ರಮಗಳು ಸಿಗಬೇಕು.
ನಿರ್ದೇಶಕರನ್ನು ಬೆಳೆಸುವುದು ಅಳಿಸುವುದು ಆಯಾಯ ಸಂಘದ ಅಧ್ಯಕ್ಷರ ಕೈಯಲ್ಲಿದೆ. ಸಂಘದ ಆಗುಹೋಗುಗಳಲ್ಲಿ ಭಾಗವಹಿಸುವಂತೆ ಅವರಿಗೆಲ್ಲ ಒಂದಲ್ಲ ಒಂದು ಜವಾಬ್ದಾರಿ ನಿಗದಿಮಾಡಿದರೆ ಅವರು ಸದಾ ಸಕ್ರಿಯರಾಗಿರಲು ಸಾಧ್ಯ. ನಿರ್ದೇಶಕರಾದ ಮೇಲೆ ಅವರು ಸಮಯಕೊಡಲು ಕಲಿಯಬೇಕು. ತಿಂಗಳಿಗೊAದು ಸಲ ನಡೆಯುವ ಬೋರ್ಡ್ ಮೀಟಿಂಗಿಗೆ ಹಾಜರಾಗಿ ಬೆನ್ನುಹಾಕಿ ಹೋದರೆ ಮುಂದಿನ ತಿಂಗಳ ಮೀಟಿಂಗಿಗೇನೇ ಹಾಜರಾಗುವ ನಿರ್ದೇಶಕರ ಸಂಖ್ಯೆ ಕಡಿಮೆಯಲ್ಲ. ಇದಕ್ಕೆ ಅವಕಾಶ ಆಡಳಿತ ಮಂಡಳಿಯ ಅಧ್ಯಕ್ಷರು ಕೊಡಬಾರದು. ತನ್ನ ಆಡಳಿತ ಮಂಡಳಿಯ ಪ್ರತಿಯೊಬ್ಬ ನಿರ್ದೇಶಕರನ್ನು ಸಮಾನವಾಗಿ ಕಂಡು ಅವರಲ್ಲಿ ಸಹಕಾರಿ ಕ್ಷೇತ್ರದ ಕನಸನ್ನು ತುಂಬಿ ಬೆಳೆಸಬೇಕಾದ ಜವಾಬ್ದಾರಿ ಅಧ್ಯಕ್ಷನದು.
ಸಾವಿರ ಸಾವಿರ ಕೆಲಸಗಳಿವೆ.
ಸಹಕಾರಿ ರಂಗ ಇಂದು ಸರ್ವಶಕ್ತ. ಅದಕ್ಕೆ ಕೇಂದ್ರ ಸರಕಾರ ಹೊಸ ಶಕ್ತಿಯನ್ನೂ ತುಂಬಿದೆ. ಸರಕಾರಿ ಮತ್ತು ಖಾಸಗಿ ರಂಗ ಮಾಡಲಾರದ ಅನೇಕ ಕಾರ್ಯಗಳನ್ನು ಅತ್ಯಂತ ಮುತುವರ್ಜಿಯಿಂದ ಸಹಕಾರಿ ರಂಗ ಮಾಡಬಹುದು. ಅದರ ಮೇಲೆ ದೇಶಕ್ಕೆ ಅಪಾರ ಭರವಸೆ ಇದೆ. ಒಂದು ಸಮಾಜದ ಆಶೋತ್ತರಗಳಿಗೆ ಮೂರ್ತರೂಪ ನೀಡಿ ಆ ಸಮಾಜವನ್ನು ಸ್ವಾವಲಂಬನೆಯ ಶ್ರೀಕಾರದೊಂದಿಗೆ ಸರ್ವ ಸಂಪನ್ನಗೊಳಿಸಿಕೊಡುವ ತಾಕತ್ತು ಇದ್ದರೆ ಅದು ಸಹಕಾರಿ ರಂಗಕ್ಕೆ.
ಈ ಕ್ಷೇತ್ರಕ್ಕೆ ಬರುವವರ ಮುಂದೆ ಸಾವಿರ ಸಾವಿರ ಕೆಲಸಗಳು ಕಾದು ನಿಂತಿವೆ. ಸಹಕಾರಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿನ ನಾಗರಿಕರಿಗೆ ಮಹೋನ್ನತ ಬದುಕನ್ನು ಕಟ್ಟಿಕೊಡುವ ಸಾಮರ್ಥ್ಯ ಇರುವುದು ಸಹಕಾರಿ ರಂಗಕ್ಕೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಸಾರಿಗೆ, ಕೈಗಾರಿಕೆ, ಪ್ರವಾಸೋದ್ಯಮ ಮುಂತಾದ ಅನೇಕ ಕ್ಷೇತ್ರಗಳನ್ನು ಸಹಕಾರಿ ರಂಗದಡಿಯಲ್ಲಿ ಬೆಳೆಸುವ ಕೆಲಸಗಳನ್ನು ಮಾಡಬಹುದು. ಪರಸ್ಪರ ಸಹಕಾರದ ಬದುಕಿನಿಂದ ಹಿಡಿದು ಪ್ರತಿಯೊಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ದೇಶದ ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ತೆರದಲ್ಲಿ ಸಹಕಾರಿ ರಂಗ ಸಮಾಜವನ್ನು ಕಟ್ಟಬಹುದು.
ಶಂ.ನಾ.ಖಂಡಿಗೆ
(ಕ್ಯಾಂಪ್ಕೊ ಉಪಾಧ್ಯಕ್ಷರು)
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ