ಸಹಕಾರಿ ಸಂಘದ ನಿತ್ಯ ನಿರಂತರ ಕಾರ್ಯ ಚಟುವಟಿಕೆಗಳ ಜೊತೆ ಜೊತೆಗೆ ಅದು ಹೊಸ ಹೊಸ ಸೇವೆಗಳನ್ನು ಕೊಡುವಂತಾಗಬೇಕೆಂಬುದು ನನ್ನ ಆಶೆ. ಯಾವುದೇ ಸಹಕಾರಿ ಮಾತಿಗೆ ಸಿಲುಕಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಇಂತಹ ಅಂಶಗಳನ್ನು ಅವರ ತಲೆಗೆ ಹೊಗಿಸಲು ನಾನು ಪೇಚಾಡುವುದು ಹೆಚ್ಚು. ನನ್ನ ಮಾತಿಗೆ ಸಿಕ್ಕಿದವರು ಕೂಡ ನನ್ನದೆ ಯೋಚನೆಗಳನ್ನು ಹೊಂದಿದರೆ ಮಾತು ಮುಂದುವರಿಯುತ್ತದೆ. ಅದರ ರೂಪುರೇಷೆಗಳು ಸಿದ್ಧವಾಗುತ್ತವೆ. ಅದು ಹೊರತು ಇಂತಹ ಮಾತುಗಳು, ಯೋಚನೆಗಳು ಇಷ್ಟವಿಲ್ಲದವರಾದರೆ ಕಾಟಾಚಾರಕ್ಕೆ ನನ್ನಲ್ಲಿ ಮಾತಾಡಿ ಹಿಂದಿನಿಂದ ‘ಇದು ಆಗಲಿಕ್ಕೆ ಹೋಗಲಿಕ್ಕೆ ಇರುವುದಲ್ಲ’ ಅಂತ ನಾಲ್ಕು ಪರಂಚಿ ಸುಮ್ಮನಾಗಿಬಿಟ್ಟಾರು.
ಆದರೆ ನಾನು ನನ್ನಲ್ಲಿ ಹುಟ್ಟಿದ ಯೋಚನೆಗಳನ್ನು ಎಲ್ಲಿಯಾದರೂ ಹೇಳಿಕೊಳ್ಳದೆ ಇರುವುದೇ ಇಲ್ಲ. ಯಾರಾದರೂ ಉತ್ಸುಕತೆಯಿಂದ ಕೆಲಸ ಮಾಡುವ ಸಹಕಾರಿಗಳ ಕಿವಿಗೆ ಈ ಯೋಚನೆ ತಾಕಿ ಸಮಾಜ ಅಭಿವೃದ್ಧಿ ಆಗುವುದಾದರೆ ಆಗಲಿ ಎಂಬುದು ಇಲ್ಲಿಯ ಆಶಯ. ಸಹಕಾರಿ ಸಂಘಗಳು ನಿತ್ಯದ ಕಾರ್ಯಚಟುವಟಿಕೆಗಳ ಜೊತೆಜೊತೆಗೆ ನೂತನ ಹಾದಿಯಲ್ಲಿ ಮುನ್ನಡೆದು ತನ್ನ ಸದಸ್ಯರಿಗೆ ಮತ್ತು ತನ್ನ ವ್ಯಾಪ್ತಿಯೊಳಗೆ ಬರುವ ಪ್ರದೇಶವನ್ನು ದೃಷ್ಟಿಯಲ್ಲಿರಿಸಿಕೊಂಡು ನೂತನ ಸೇವೆಗಳನ್ನು ಕೊಡಬೇಕೆಂಬುದು ಕಳಕಳಿ.
ನಮ್ಮ ಸಹಕಾರಿ ಸಂಘದ ಸದಸ್ಯರು ನಮ್ಮ ಜೊತೆಗೆ ನಿತ್ಯ ನಿರಂತರ ಇರಬೇಕೆಂದರೆ ಅವರು ಬದುಕುವ ಪರಿಸರ ಮತ್ತು ಅವರು ಆರೋಗ್ಯವಂತರಾಗಿರುವುದು ಮುಖ್ಯ. ಸುತ್ತಲಿನ ಪರಿಸರ ಎಂದರೆ ಒಂದು ಸಹಕಾರಿ ಸಂಘದ ವ್ಯಾಪ್ತಿ. ಅದು ಹೆಚ್ಚೆಂದರೆ ಮೂರೊ ನಾಲ್ಕೊ ಗ್ರಾಮಗಳಾಗಿರಬಹುದು. ಕೆಲವು ಸಹಕಾರಿ ಸಂಘದ ವ್ಯಾಪ್ತಿ ತುಂಬ ಚಿಕ್ಕದಿರಲೂ ಬಹುದು. ಯಾವುದಿದ್ದರೂ ಅಲ್ಲಿಯ ಹೆಚ್ಚಿನ ಮನೆಗಳು ಸಹಕಾರಿ ಸಂಘದ ಜೊತೆ ಸಂಬಂಧ ಇಟ್ಟುಕೊಂಡವುಗಳೇ ಆಗಿರುತ್ತವೆ.
ನೆಲ, ಜಲ ಮತ್ತು ಗಾಳಿ:
ಸುತ್ತಲಿನ ಪರಿಸರ ಅದರಲ್ಲೂ ಮುಖ್ಯವಾಗಿ ನಮ್ಮ ಸದಸ್ಯರು ಸೇವಿಸುವ ನೀರು, ಗಾಳಿ ಮತ್ತು ಬದುಕುವ ನೆಲ ತ್ಯಾಜ್ಯ ಮುಕ್ತವಾಗಿ, ಅರೋಗ್ಯಯುತವಾಗಿರಬೇಕೆಂದು ಒಂದು ಸಹಕಾರಿ ಸಂಘ ಬಯಸುವುದು ದೊಡ್ಡ ಸಂಗತಿ ಅಂತ ನಿಮಗೆ ಅನಿಸುವುದಿಲ್ಲವೆ. ಅಂತಹ ಸಹಕಾರಿ ಸಂಘ ನಮ್ಮ ದೇಶದಲ್ಲಿದೆಯೊ ನಾನರಿಯೆ. ಆದರೆ ಅಂತಹ ಕೈಂಕರ್ಯ ನಮ್ಮ ಸಹಕಾರಿ ಸಂಘಗಳು ಮಾಡಬೇಕು ಎಂಬುದು ಆಶೆ. ನಮ್ಮ ಸಹಕಾರಿ ಸಂಘದ ವ್ಯಾಪ್ತಿಯ ಎಲ್ಲ ಮನೆಗಳಲ್ಲಿ ಶುದ್ಧ ಕುಡಿಯುವ ನೀರು ವರ್ಷಪೂರ್ತಿ ಸಿಗುವಂತೆ ಮಾಡಲು ಮೊದಲಾಗಿ ಯೋಜನೆಗಳನ್ನು ರೂಪಿಸಿಕೊಳ್ಳುವುದು. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ, ಜಲಮರುಪೂರಣ, ಹಳೆಯ ಕೆರೆ ಬಾವಿಗಳ ದುರಸ್ತಿಗೆ ಒತ್ತು, ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಸದಸ್ಯರಿಗೆ ಸರಿಯಾದ ಮಾಹಿತಿಗಳ ಪೂರೈಕೆಗೆ ಅನುವುಮಾಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು. ನಮ್ಮ ನೆಲವನ್ನು ರಕ್ಷಿಸಿಕೊಳ್ಳುವುದೆಂದರೆ ಪ್ಲಾಸ್ಟಿಕ್ ಮುಕ್ತ ಮಾತ್ರವಲ್ಲ. ರಾಸಾಯನಿಕ ಮುಕ್ತ ಕೂಡ ಆಗಬೇಕು. ನಮ್ಮ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಕೃಷಿಕರು ಜೈವಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು, ಒಂದೆರಡು ದೇಸೀ ದನಕರುಗಳನ್ನು ಸಾಕಲು ಪ್ರೇರಣೆ, ನೀರಾವರಿಯಲ್ಲೂ ಕಡಿಮೆ ಖರ್ಚಿನ ಅತ್ಯಾಧುನಿಕ ನೀರಾವರಿ ಪದ್ಧತಿಗಳನ್ನು ಪರಿಚಯಿಸಲು ಕ್ರಮ, ಎರೆಹುಳ ಗೊಬ್ಬರ, ಹಟ್ಟಿ ಗೊಬ್ಬರ ತಯಾರಿ ಮತ್ತು ಇವುಗಳ ಬಳಕೆಯಿಂದ ನೆಲ ಸಂಪದ್ಭರಿತವಾಗುವ ಬಗ್ಗೆ ಮನವರಿಕೆ ಮಾಡುವುದು. ದನ ಸಾಕಲು ಕಷ್ಟ ಆಗುವವರಿಗೆ ಸಹಕಾರಿ ಸಂಘವೆ ಜೈವಿಕ ಗೊಬ್ಬರಗಳನ್ನು ಪೂರೈಸುವುದು. ಇನ್ನು ಶುದ್ಧ ಗಾಳಿಯತ್ತ ಒತ್ತು. ಪ್ಲಾಸ್ಟಿಕ್ , ಟಯರ್ ಮುಂತಾದ ತ್ಯಾಜ್ಯಗಳನ್ನು ಉರಿಸಿದರೆ ನಾವು ಉಸಿರಾಡುವ ಗಾಳಿ ವಿಷಮಯವಾಗುತ್ತದೆ ಎಂಬ ಅರಿವು ಮೂಡಿಸುವುದು. ಒಟ್ಟಿನಲ್ಲಿ ಒಟ್ಟು ಪರಿಸರ ಆರೋಗ್ಯಯುಕ್ತವಾಗಿಸುವ ಯೋಜನೆಗಳನ್ನು ರೂಪಿಸಿದಾಗ ಪ್ರತಿಯೊಬ್ಬರು ಕೂಡ ಆರೋಗ್ಯವಂತರಾಗಿರುವುದು ಸಾಧ್ಯ.
ಸೂಕ್ತ ತಂಡಗಳಿಂದ ಕಾರ್ಯಗತ:
ಸಹಕಾರಿ ಸಂಘ ಯೋಚನೆಗಳನ್ನು ಯೋಜನೆಗಳಾಗಿಸಿ ಕಾರ್ಯಗತಗೊಳಿಸಲು ಒಳ್ಳೆಯ ತಂಡ ರಚಿಸಿಕೊಳ್ಳಬೇಕು. ಆ ತಂಡದಲ್ಲಿ ಸಹಕಾರಿ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಮತ್ತು ಆಯ್ದ ಸದಸ್ಯರು ಇರಬೇಕು. ಸಹಕಾರಿ ಸಂಘದ ವ್ಯಾಪ್ತಿ ದೊಡ್ಡದಾದರೆ ಒಂದಕ್ಕಿಂತ ಹೆಚ್ಚು ತಂಡಗಳನ್ನು ರಚಿಸಿಕೊಳ್ಳಬಹುದು. ಈ ತಂಡಗಳಲ್ಲಿ ಸ್ತ್ರೀಯರಿಗೂ ಆಗತ್ಯ ಪ್ರಾತಿನಿಧ್ಯ ಇರುವಂತೆ ಗಮನಿಸಬೇಕು. ಈ ತಂಡದ ಸದಸ್ಯರು ಸಂಘದ ವ್ಯಾಪ್ತಿಗೆ ಬರುವ ಪ್ರತಿಯೊಂದು ಮನೆಯನ್ನು ಸಂದರ್ಶನ ಮಾಡಿ ಅಲ್ಲಿಯ ವ್ಯವಸ್ಥೆಗಳನ್ನು ಗುರುತುಹಾಕಿಕೊಳ್ಳಬೇಕು. ನಂತರ ಒಟ್ಟಾಗಿ ಕೂತು ಯೋಜನೆಗಳನ್ನು ಹಮ್ಮಿಕೊಳ್ಳುವುದು. ಇದರ ಸಂಚಾಲಕರಾಗಿ ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗು ಸಂಘದ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರ್ ಗಳನ್ನು ಸೇರಿಸಿಕೊಳ್ಳಬಹುದು. ನಮ್ಮ ಸಹಕಾರಿ ಸಂಘ ಯೋಜಿಸಿದ ಯೋಚನೆಗಳನ್ನು ಕಾರ್ಯರೂಪಕ್ಕಿಳಿಸಲು ಗ್ರಾಮಪಂಚಾಯತಿನ ಸಹಕಾರವನ್ನು ಕೂಡ ಪಡೆಯಬಹುದು.
ಇದರಿಂದ ಸಂಘಕ್ಕೇನು ಲಾಭ?
ಸಹಕಾರಿ ಸಂಘಕ್ಕೆ ಈ ಯೋಜನೆಗಳಿಂದ ಲಾಭಗಳೇನು ಅಂತ ಪ್ರಶ್ನೆ ಬರುವುದು ಸಹಜ. ತುಂಬ ಲಾಭಗಳಿವೆ. ಪ್ರತಿ ಮನೆಯನ್ನು ಸಂಪರ್ಕಿಸುವುದರಿಂದ ಸಹಕಾರಿ ಸಂಘ ಮತ್ತು ಸದಸ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಪ್ರತಿ ಮನೆಯ ಉಳಿತಾಯ ಖಾತೆ ಸಂಘದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಇರುವಂತೆ ಮಾಡುವುದರಿಂದ ಸಂಘಕ್ಕೆ ಪ್ರಯೋಜನ. ನೀರಾವರಿಗೆ, ದನ ಸಾಕಾಣಿಕೆಗೆ, ಗೋಬರ್ ಗ್ಯಾಸಿನ ವ್ಯವಸ್ಥೆಗೆ ಹೀಗೆ ಇನ್ನೂ ಅನೇಕ ವ್ಯವಸ್ಥೆಗಳನ್ನು ಹೊಂದಲು ಸಾಲ ನೀಡುವುದು. ಈ ಸಾಲ ನೀಡಿಕೆಯ ಮರುಪಾವತಿ ವಿವರಗಳನ್ನು ಮನೆ ಮನೆ ಭೇಟಿಯ ತಂಡಗಳು ನಿರ್ವಹಿಸುವಂತೆ ವ್ಯವಸ್ಥೆ ರೂಪಿಸುವುದು.
ಒಂದು ಹೊಸದಾದ ಯೋಚನೆ ಇಲ್ಲಿ ಹರಿಯಬಿಟ್ಟಿದೆ. ಇದರ ಬಗ್ಗೆ ಸಹಕಾರಿ ವಲಯದಲ್ಲಿ ಚರ್ಚೆಗಳಾಗಲಿ. ಕೇವಲ ಬ್ಯಾಂಕಿಂಗ್ ವ್ಯವಸ್ಥೆ ಒಂದಕ್ಕೆ ಅಂಟಿಕೊಂಡಿರುವ ನಮ್ಮ ಸಹಕಾರಿ ಸಂಘಗಳು ಅದರಿಂದ ಹೊರಗೆ ಬರಬೇಕು. ಇಲ್ಲಿ ಉಲ್ಲೇಖಿಸಲಾದವುಗಳನ್ನು ಅಲ್ಲಲ್ಲಿಯ ವ್ಯವಸ್ಥೆ, ಪರಿಸರಕ್ಕೆ ಬೇಕಾದಂತೆ ಬದಲಿಸಬಹುದು.
ಶಂಕರನಾರಾಯಣ ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ