ಭಾರತದಲ್ಲಿ ಸಹಕಾರ ಚಳುವಳಿಯ ಉಗಮ , ‘ಚಳುವಳಿ’ ರೂಪದಲ್ಲಿ ಜನರದೇ ಆಂದೋಲನವಾಗಿ ರೂಪುಗೊಳ್ಳಲಿಲ್ಲ. 19ನೇ ಶತಮಾನದ ಆರಂಭದಲ್ಲಿ ಅಲ್ಲಲ್ಲಿ ಕೆಲವೊಂದು ಸಹಕಾರ ಸ್ವರೂಪದ ಸಂಸ್ಥೆಗಳು ಆರಂಭಗೊಂಡರೂ ಸರ್ಕಾರದ ಕಾರ್ಯಕ್ರಮವಾಗಿ ಜನ ಸಮುದಾಯದ ಆರ್ಥಿಕ ಕ್ಷೋಬೆ ನೀಗಿಸಲು ಅಂದಿನ ಬ್ರಿಟಿಷ್ ಸರ್ಕಾರ ಸಹಕಾರ ಕಾಯ್ದೆ ಜಾರಿಗೆ ತಂದು ತನ್ಮೂಲಕ ‘ಸಹಕಾರ’ವನ್ನುಭಾರತಕ್ಕೆ ಪರಿಚಯಿಸಿತು. ಯೂರೋಪ್ ಖಂಡದಲ್ಲಿ ಸಾಮಾನ್ಯ ಜನರು ತಮ್ಮ ಒಳಿತಿಗಾಗಿ, ತಮ್ಮ ಆರ್ಥಿಕ ಪೂರೈಕೆಗಾಗಿ ತಾವೇ ಕಂಡುಕೊಂಡ ಮಾರ್ಗ ‘ಸಹಕಾರ’ ಮಾರ್ಗ. ಆದುದರಿಂದ ಅಲ್ಲಿ ಎಲ್ಲ ವಲಯಗಳಲ್ಲಿ ‘ಸಹಕಾರ ಚಳುವಳಿ’ ಛಾಪು ಮೂಡಿಸಲು ಕಾರಣವಾಗಿದೆ. ಭಾರತವು ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆ ಹಂತದಲ್ಲಿದ್ದು ‘ಸಹಕಾರ’ದ ಪಾಲು ಎಷ್ಟಿದೆ? ಇದರ ಪಾಲು ಗೌಣವಾಗಿರಲು ಚಾರಿತ್ರಿಕ ಕಾರಣಗಳಾದರೂ ಏನು? ಇದರಿಂದಾಗಿರುವ ಋಣಾತ್ಮಕ ಪರಿಣಾಮಗಳು ಮತ್ತು ಮುಂದಿನ ಈ ಪರಿಣಾಮಗಳ ತಡೆಗೆ ‘ಸಹಕಾರ’ ಪರಿಹಾರವಾಗ ಬಲ್ಲುದೇ? ಈ ಅಧ್ಯಯನ ದೃಷ್ಟಿಯಿಂದ ಭಾರತದ ಸಹಕಾರ ಚಳುವಳಿಯನ್ನು ನಾಲ್ಕು ಹಂತಗಳಲ್ಲಿ ಅಧ್ಯಯನ ಮಾಡುವುದು ಸೂಕ್ತ. ‘ಚರಿತ್ರೆ ಅರಿಯದೇ ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ.’ ಎಂಬ ಮಾತಿದೆ ಅದರಂತೆ ಚರಿತ್ರಾತ್ಮಕ ಅಂಶಗಳನ್ನು ಅರಿತು ಮುಂದೆ ನಡೆಯಬೇಕಾದ ಹಾದಿ ಬಗ್ಗೆ ಆಲೋಚಿಸಿ ಆಯೋಜಿಸಬೇಕಾಗಿದೆ.
¡. ಪ್ರಥಮ ಹಂತ(1904-1947): ಭಾರತದಲ್ಲಿ ಸಹಕಾರ ಸಂಘಗಳ ಉಗಮವನ್ನು ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904’ರಿಂದ ಎಂದು ಗುರುತಿಸಿದೆಯಾದರೂ ಬಾರತದ ವಿವಿಧ ಪ್ರದೇಶಗಳಲ್ಲಿ ಆ ಪರಿಕಲ್ಪನೆ ಮೂಡಿ ಸಹಕಾರ ಸಂಘಗಳನ್ನು ಆರಂಭಿಸಿರುವುದು ತಿಳಿದು ಬರುತ್ತದೆ. ಬರೋಡ ಸಂಸ್ಥಾನದಲ್ಲಿ(ಗುಜರಾತ್) 5 ನೇ ಆಗಸ್ಟ್ 1889 ರಲ್ಲಿ’ ಅನ್ಯೋನ್ಯ ಸಹಕಾರ ಮಂಡಳಿ’ ಸ್ಥಾಪಿತವಾಗಿತ್ತು ಎಂದು ತಿಳಿದು ಬರುತ್ತದೆ. 1904ರ ಕಾಯ್ದೆ 25 ನೇ ಮಾರ್ಚ 1904 ರಲ್ಲಿ ಜಾರಿಗೆ ಬಂತು. ತಮಿಳು ನಾಡಿನ ತಿರುವ ನೈಲಿ ಜಿಲ್ಲೆಯ ಜಿಲ್ಲಾಧಾರಿಗಳಾಗಿದ್ದ ಸರ್ ಫೆಡ್ರಿಕ್ ನಿಕೋಲ್ಸನ್ ರವರನ್ನು ಯುರೋಪ್ ನಲ್ಲಿನ ಸಹಕಾರ ಚಳುವಳಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸರ್ಕಾರ ನಿಯೋಜಿಸಿತು. ಅವರು ವರದಿಯನ್ನು 1899 ರಲ್ಲಿ ವರದಿ ಸಲ್ಲಿಸಿದರು. “ರೈಫಿಸನ್ ನ್ನು ಕಂಡುಹಿಡಿಯಿರಿ” ಎಂದು ಗ್ರಾಮೀಣ ಪ್ರದೇಶಗಳಲ್ಲಿ “ರೈಫಿ ಸನ್” ಮಾದರಿ ಸಹಕಾರ ಸಂಘಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿದರು. ಉತ್ತರಪ್ರದೇಶದಿಂದ ಶ್ರೀ ಡೂಪರ್ನೆಕ್ಸ ಎಂಬ ಐ ಸಿ ಎಸ್ ಅಧಿಕಾರಿಗಳನ್ನು ನಿಯೋಜಿಸಿದರು. ಇವರು ಉತ್ತರ
ಭಾರತಕ್ಕೆ ‘ಪೀಪಲ್ಸ ಬ್ಯಾಂಕ್’ ಸ್ಥಾಪಿಸಲು ಶಿಫಾರಸ್ಸು ಮಾಡಿದರು. ತದ ನಂತರ ಭಾರತ ಸರ್ಕಾರ ಸರ್ ಎಡ್ವರ್ಡ ಲಾ ಎಂಬವವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿತು. ಇವರು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ವರದಿಗಳನ್ನು ಅಧ್ಯಯನ ಮಾಡಿ ಭಾರತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ‘ರೈಫಿಸನ್’ ಮತ್ತು ನಗರ ಪ್ರದೇಶಗಳಲ್ಲಿ’ ಷ್ಲುಜ್’ ಮಾದರಿ ಸಹಕಾರ ಸಂಘಗಳ ಸ್ಥಾಪನೆ ಬಗ್ಗೆ ವರದಿ ಸಲ್ಲಿಸುತ್ತಾರೆ. ಅದರಂತೆ ಭಾರತದ ಪತ್ತಿನ ಸಹಕಾರ ಕಾಯ್ದೆ 1904 ಜಾರಿಗೆ ಬರುತ್ತದೆ. ತಮಿಳುನಾಡಿನ ಕಾಂಚಿಪುರಂ ನಲ್ಲಿ ಅಕ್ಟೋಬರ್ 1904 ರಲ್ಲಿ’ ಪಟ್ಟಣ ಸಹಕಾರ ಸಂಘ’ ಸ್ಥಾಪನೆಯಾಯಿತು. ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ
ದಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದಂತೆ, ‘ಸೇವಾ ಸಹಕಾರ ಸಂಘ’ವನ್ನು ದಿನಾಂಕ 08.07.1905 ರಲ್ಲಿ ಸ್ಥಾಪಿಸಲಾಯಿತು. ಇದರ ಅಧ್ಯಕ್ಷರು ಶ್ರೀ ಸಿದ್ಧನಗೌಡ ಸಣ್ಣ ರಾಮನಗೌಡ ಪಾಟೀಲರು. ಇವರನ್ನು ಕರ್ನಾಟಕದ ಸಹಕಾರ ಪಿತಾಮಹ ಎಂದು ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರವೇ ಆರಂಭಿಕವಾಗಿ ರೈತರಿಗೆ ಕೃಷಿಗೆ ದುಡಿಯವ ಬಂಡವಾಳವಾಗಿ ,ಋುತು ಆಧಾರಿತವಾಗಿ ‘ಠಕಾವಿ’ ಸಾಲಗಳನ್ನು ನೀಡಲು ಆರಂಭಿಸಿತ್ತಾದರೂ ತದ ನಂತರದಲ್ಲಿ ಈ ಸಹಕಾರ ಸಂಘಗಳ ಮೂಲಕ ‘ಠಕಾವಿ’ ಸಾಲಗಳನ್ನು ವಿತರಿಸಲಾಯಿತು. ಇದರ ಉದ್ದೇಶಗಳಲ್ಲಿ ‘ಸದಸ್ಯರಲ್ಲಿ ‘ ಥ್ರಿಫ್ಟ್’ ಅಭ್ಯಾಸವನ್ನು ರೂಡಿಸುವುದು ಆಗಿತ್ತು. ಆದರೆ ಈ ಬಂಡವಾಳ ಅತ್ಯಲ್ಪವಾಗಿತ್ತು. ಆದರೆ ಪಟ್ಟಣ ಮತ್ತು ಅರೆ ಪಟ್ಟಣ ಪ್ರದೇಶದಲ್ಲಿ ‘ಸಹಕಾರ’ದ ಬಗ್ಗೆ ಇರುವ ಪ್ರಯೋಜನ, ಲಾಭ ಗಳನ್ನು ಸುಲಭವಾಗಿ ಜನತೆ ಗ್ರಹಿಸಿದ್ದರಿಂದ ಮತ್ತು ಜನರನ್ನು ಸಂಘಟಿಸುವುದು ಮತ್ತು ಠೇವಣಿ ರೂಪದಲ್ಲಿ ಸಂಪನ್ಮೂಲ ಸಂಗ್ರಹಣೆಯು ಸಾಧ್ಯವಾಗಿದ್ದರಿಂದ ಇಲ್ಲಿ(‘ ಷ್ಲುಜ್’ ಮಾದರಿ ಸಹಕಾರ ಸಂಘಗಳು – ಜರ್ಮನಿ ಯಲ್ಲಿ ಹರ್ಮನ್ ಷ್ಲುಜ್ ಅವರ ನೇತೃತ್ವ ದಲ್ಲಿ ಕೃಷಿಯೇತರ ಉದ್ದೇಶಕ್ಕಾಗಿ ಪಟ್ಟಣ ಮತ್ತು ಅರೆ ಪಟ್ಟಣ ಪ್ರದೇಶದಲ್ಲಿ ಆರಂಭವಾದ ಸಹಕಾರ ಸಂಘಗಳು) ಸಹಕಾರ ಸಂಘಗಳು ಸ್ಥಾಪನೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು.
1912 ರಲ್ಲಿ ಕಾಯ್ದೆ ತಿದ್ದು ಪಡಿ ಯಾಯಿತು. ಇದು ವರೆವಿಗೂ ಗ್ರಾಮೀಣ ಪ್ರದೇಶದ ರೈಫಿಸನ್ ಮಾದರಿ ಸಹಾರ ಸಂಘಗಳಿಗೆ ‘ಅನಿಯಮಿತ’ ಮತ್ತು ನಗರ ಪ್ರದೇಶಗಳಲ್ಲಿ’ ನಿಯಮಿತ’ ಸಹಕಾರ ಸಂಘಗಳ ಸ್ಥಾಪನೆಗೆ ಅವಕಾಶವಿತ್ತು.(‘ನಿಯಮಿತ’ ಎಂದರೆ ಸದಸ್ಯರ/ ಷೇರುದಾರರ ಹೊಣೆಗಾರಿಕೆ ತಾನು ಹೂಡಿದ ಷೇರು ಬಂಡವಾಳಕ್ಕೆ ಮಾತ್ರ ಸೀಮಿತವಾಗಿರುತ್ತದೆ. ‘ಅನಿಯಮಿತ’ ಎಂದರೆ ಅವರ
ಹೊಣೆಗಾರಿಕೆ ಸಂಘ ನಷ್ಟವಾದಲ್ಲಿ ಅದನ್ನು ಭರಿಸಿ ಕೊಡುವ ಜವಾಬ್ದಾರಿಯು ಇರುತ್ತದೆ) ಇದು ಯೂರೋಪ್ ನಲ್ಲಿ ಅಲ್ಲಿಯವರೆಗೆ ಇದ್ದಂತಹೆಯೇ ಇತ್ತು. ಈ ತಿದ್ದು ಪಡಿಯಲ್ಲಿ ಎರಡೂ ರೀತಿಯ ಸಹಕಾರ ಸಂಘಗಳಿಗೆ ‘ನಿಯಮಿತ’ಕ್ಕೆ ಅವಕಾಶ ನೀಡಲಾಯಿತು. ಅಲ್ಲದೇ ಸಹಕಾರ ಸಂಘಗಳು ಕೂಡ ತಮ್ಮದೇ ಆದ ‘ಒಕ್ಕೂಟ’ ರಚನೆಗೆ ಅವಕಾಶ ನೀಡಲಾಯಿತು. ಆದರೆ ಇಷ್ಟರಲ್ಲಿ ‘ಸೇವ ಸಹಕಾರ ಸಂಘಗಳು’
ಒಗ್ಗೂಡಿ ತಮ್ಮದೇ ಆದ ‘ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್’ ಸ್ಥಾಪನೆಗೆ ಕ್ರಮ ಕೈಗೊಂಡಿದ್ದವು. 1911ರಲ್ಲಿ ಆಜಮೀರ್ (ಈಗಿನ ರಾಜಸ್ಥಾನ)ದಲ್ಲಿ ಪ್ರಥಮ ಜಿಲ್ಲ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪಿಸಲಾಗಿದೆ.
1914 ರಲ್ಲಿ, ಮ್ಯಾಕ್ಲಗನ್ ಸಮಿತಿ ರಚಿಸ ಲಾಯಿತು. ಈ ಸಮಿತಿ ಸಹಕಾರ ವಲಯದ ಸುಧಾರಣೆಗಳ ಬಗ್ಗೆ 1915ರಲ್ಲಿ ನೀಡಿತು. ಸಹಕಾರ ತತ್ವಗಳ ಪಾಲನೆ, ಪ್ರಜಾಪ್ರಭುತ್ವ ಆಡಳಿತ, ಪಾರದರ್ಶಕತೆ, ನೈತಿಕ ಪಾಲನೆ, ಗುಣಮಟ್ಟ ಸಾಲ ನೀಡಿಕೆ, ವಸೂಲಾತಿ, ಮೀಸಲು ನಿಧಿ ಸೃಷ್ಠಿಗೆ ಶಿಫಾರಸ್ಸು ಮಾಡಲಾಯಿತು. ಅಲ್ಲದೇ, ಭೂ ಅಡಮಾನು ಬ್ಯಾಂಕ್ ಗಳ ಸ್ಥಾಪನೆಗೆ ಶಿಪಾರಸ್ಸು ಮಾಡಲಾಯಿತು. 1919ರ ವೇಳೆಗೆ
28000 ಸಹಕಾರ ಸಂಘಗಳು, 11 ಲಕ್ಷ ಸದಸ್ಯರು, ರೂ 15 ಕೋಟಿ ದುಡಿಯುವ ಬಂಡವಾಳ ಒಟ್ಟು ಗೂಡಿತು.
1919 ರಲ್ಲಿ, ಮಾಂಟೆಗೊ ಚಲ್ಮ್ಸ್ ಫರ್ಡ್ ವರದಿ ಆಧರಿಸಿ ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲಾಯಿತು. ಇದರ ಅಂಗವಾಗಿ ಇದು ವರೆವಿಗೂ ‘ಸಹಕಾರ’ ಕೇಂದ್ರ ಸರ್ಕಾರವಿಷಯವಾಗಿದ್ದುದು ಪ್ರಾಂತೀಯ ಸರ್ಕಾರದ ವಿಷಯವಾಗಿ ವರ್ಗಾವಣೆಗೊಂಡಿತು. ಮುಂಬೈ ಸರ್ಕಾರ 1925 ರಲ್ಲಿ ಸಹಕಾರ ಕಾಯ್ದೆ ರಚಿಸಿತು. ಮುಂದೆ ಇತರೆ ಪ್ರಾಂತೀಯ ಸರ್ಕಾರಗಳು ತಮ್ಮದೇ ಕಾಯ್ದೆಗಳನ್ನು ರೂಪಿಸಿಕೊಂಡವು.
1928 ರಲ್ಲಿ ಭಾರತ ಸರ್ಕಾರವು” ದಿ ರಾಯಲ್ ಕಮಿಷನ್ ಆನ್ ಅಗ್ರಿಕಲ್ಬರ್”ನ್ನು ನೇಮಿಸುತ್ತದೆ. ಈ ವರದಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ‘ಸಹಕಾರ’ ವೇ ಸರಿಯಾದ ವಲಯ ಎಂದು ಅಭಿಪ್ರಾಯ ಸಿದೆ. “ಸಹಕಾರ ಏನಾದರೂ ವಿಫಲವಾದರೆ, ಗ್ರಾಮೀಣ ಭಾರತದ ಅತ್ಯುತ್ತಮವಾದ ಭರವಸೆಯು ವಿಫಲವಾದಂತೆಯೇ ಸರಿ”(If cooperation fails, there wil fail the best hope of Rural India).ಇದರಿಂದ ಅಲ್ಯಾವಧಿ’ (ದುಡಿಯುವ ಬಂಡವಾಳ) ರಚನೆ ಮತ್ತು ಮಧ್ಯಮಾವಧಿ, ದೀರ್ಘಾವದಿ ಸಾಲ (ಹೂಡಿಕೆ ಸಾಲ) ರಚನೆ ಪ್ರತ್ಯೇಕ ವ್ಯವಸ್ಥೆಗಳಾಗಿ ರೂಪುಗೊಂಡವು.
1935 ರಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಯಾಯಿತು. ಅದರಲ್ಲಿ ಕೃಷಿ ಸಾಲಗಳಿಗೆ ಪ್ರತ್ಯೇಕ ವಿಭಾಗ ತೆರೆಯಲಾಯಿತು. ಇದರಿಂದ ಸಹಕಾರ ಸಂಸ್ಥೆಗಳಿಗೆ ಪುನರ್ಧನ ಸೌಲಭ್ಯ ದೊರೆಯುವಂತೆ ಆಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿಗಾಗಿ ಸಾಂಸ್ಥಿಕ ರೂಪದಲ್ಲಿ ಸಾಲ ದೊರೆಯುತ್ತಿದ್ದುದು ಸಹಕಾರ ವಲಯದಿಂದ ಮಾತ್ರ. ಅಲ್ಲದೇ, ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಗೃಹ ನಿರ್ಮಾಣಕ್ಕಾಗಿ ಸಾಲಗಳು ದೊರೆಯುತ್ತಿತ್ತು. ಬೆಂಗಳೂರು ನಲ್ಲಿ ‘ಬೆಂಗಳೂರು ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ’ ಎಂದು 1909 ರಲ್ಲಿ, ಸ್ಥಾಪಿಸಲಾಯಿತು. ನಂತರ 1913ರಲ್ಲಿ ಮುಂಬೈ ನಲ್ಲಿ ‘ಬಾಂಬೆ ಕೋ ಅಪರೇಟಿವ್ ಅಸೋಸಿಯೇಷನ್’ ಸ್ಥಾಪನೆಯಾಯಿತು. ಇನ್ನು ಪಟ್ಟಣ ಪ್ರದೇಶದಲ್ಲಿ ತಮ್ಮ ಸ್ವಯಂ ಶಕ್ತಿಯಲ್ಲಿ ಅನೇಕ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಸ್ಥಾಪನೆಗೊಂಡು ಯಶಸ್ವಿಯಾಗಿ ನಡೆದುಕೊಂಡು ಬಂದವು. ಎರಡನೇ ಮಹಾಯುದ್ಧ ಕಾಲದಲ್ಲಿ(1940ರ ಆರಂಭ)ದಲ್ಲಿ ಆಹಾರ ಕೊರತೆ ಉಂಟಾಗಿ ಅಗತ್ಯ ಆಹಾರ ಹಂಚಿಕೆಗಾಗಿ ಅವರಲ್ಲಿಯೂ ಪಟ್ಟಣ ಪ್ರದೇಶದಲ್ಲಿ ‘ ಗ್ರಾಹಕರ ಸಹಕಾರ/ಬಳಕೆದಾರರ ಸಹಕಾರ ಸಂಘಗಳು ಆರಂಭಗೊಂಡವು. ಅವುಗಳ ಶೃಂಗ ಸಂಘಗಳಾಗಿ ಜಿಲ್ಲ ಸಹಕಾರ ಸಗಟು ಸಹಕಾರ ಸಂಘಗಳು ಕಾರ್ಯಾರಂಭ ಗೊಂಡವು. ಇದು ಒಂದು ಸಂಕ್ಷಿಪ್ತ ಚಿತ್ರಣ.
1930ರ ದಶಕದ ಅಂತಿಮ ವರ್ಷಗಳು ಮತ್ತು 1940ರ ಆರಂಭಿಕ ವರ್ಷಗಳಲ್ಲಿ ಗುಜರಾತ್ ನಲ್ಲಿ ಅದರಲ್ಲಿಯೂ ಕೇಡಾ ಜಿಲ್ಲೆಯಲ್ಲಿ ಸರ್ ದಾರ್ ವಲ್ಲಭಾಯ್ ಪಟೇಲ್ ರ ನಾಯಕತ್ವ, ಮುರಾರ್ಜಿ ದೇಸಾಯಿ ರವರ ಮುಂದಾಳತ್ವ, ತ್ರಿಭುವನ್ ದಾಸ್ ರವರ ನೇತೃತ್ವದಲ್ಲಿ ಸ್ಥಾಪಿಸಲಾದ ಗ್ರಾಮೀಣ ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳು ಜಿಲ್ಲಾ ಮಟ್ಟದ ಒಕ್ಕೂಟ’ ಆನಂದ್ ಮಿಲ್ಕರ್ಸ ಯೂನಿಯನ್ ಲಿಮಿಟೆಡ್’ ”ಅಮುಲ್’ನ ಆರಂಭ. ಮುಂದೆ ಇದು’ ಶ್ವೇತ ಕ್ರಾಂತಿ’ಗೆ ನಾಂದಿ ಹಾಡಿದ್ದು ಈಗ ಇತಿಹಾಸ.
1944ರ ಡಿ.ಆರ್. ಗಾಡ್ಲಿಲ್ ರವರ ಅಧ್ಯಕತೆಯಲ್ಲಿ ರಚಿತವಾದ ‘ ಕೃಷಿ ಹಣಕಾಸು ಉಪಸಮಿತಿ’ ಕೃಷಿ ಸಹಕಾರ ಸಂಘಗಳ ಸುಧಾರಣೆಗೆ ಮತ್ತು 1946ರಲ್ಲಿ ಶ್ರೀ ಆರ್. ಜಿ. ಸರೈ ರವರ ಅಧ್ಯಕತೆಯಲ್ಲಿ ರಚಿತವಾದ ‘ಸಹಕಾರ ಯೋಜನಾ ಸಮಿತಿ’ ಎಲ್ಲ ಗ್ರಾಮೀಣ ವೃತ್ತಿಗಳಿಗೆ ಸಹಕಾರ ವಲಯ ವಿಸ್ತರಣೆ ಬಗ್ಗೆ ಸಲಹೆ ನೀಡಿತು.
¡¡. ಸ್ವಾತಂತ್ರ್ಯ ನಂತರ (1947-1990): ಭಾರತ ಸ್ವತಂತ್ರ ಗೊಂಡ ನಂತರ ತಾನು ಆರಿಸಿಕೊಂಡದ್ದು ‘ಮಿಶ್ರ ಆರ್ಥಿಕ ನೀತಿ’. ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯ ಎರಡಕ್ಕೂ ಅವಕಾಶಗಳು.
ಬೃಹತ್ ಕೈಗಾರಿಕೆ , ನಿರಾವರಿ , ಕೃಷಿಗೆ ಪ್ರಾಧಾನ್ಯತೆ , ಕೃಷಿ ಮತ್ತು ಕೃಷಿ ಪೂರಕ ವೃತ್ತಿ, ಗ್ರಾಮೀಣ ಕೈಗಾರಿಕೆ ಬೆಳವಳಿಗಳಿಗೆ ಅವಲುಭಿಸಿದ್ದು ಸಹಕಾರ ವಲಯವನ್ನು, ಸರ್ಕಾರ ಕೂಡ ಸಹಕಾರ ವಲಯದ
ಪಾಲುದಾರಿಕೆ ಹೊಂದಿರಬೇಕು ಎಂಬ ನಿಲುವಿನೊಂದಿಗೆ ‘ಪಂಚವಾರ್ಷಿಕ ಯೋಜನೆ’ಗಳನ್ನು ಅನುಷ್ಠಾನ ಗೊಳಿಸಲಾಯಿತು.
ಇದಕ್ಕೆ ಪೂರಕವಾಗಿ ಭಾರತದ ಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿ ಒಂದು ‘ಮೈಲಿಗಲ್ಲು’ ಏನಿಸಿಕೊಂಡದ್ದು ‘ಅಖಿಲ ಭಾರತ ಗ್ರಾಮೀಣ ಪತ್ತಿನ ಸಮೀಕ್ಷಾ ಸಮಿತಿ(All India Rural Credit Survey Committee). ಭಾರತೀಯ ರಿಸರ್ವ ಬ್ಯಾಂಕ್ ಎ . ಡಿ . ಗೊರ್ವಾಲ ರವರ ಅಧ್ಯಕ್ಷತೆಯಲ್ಲಿ 1951ರಲ್ಲಿ ಸಮಿತಿ ರಚಿಸಿತು. ಈ ಸಮಿತಿ 1954 ರಲ್ಲಿ ತಮ್ಮ ವರದಿ. ಸಲ್ಲಿಸಿತು. ಇದರಲ್ಲಿನ ಪ್ರಮುಖ ಘೋಷ ವಾಕ್ಯಗಳು ‘ಸಹಕಾರವು ವಿಫಲವಾಗಿದೆ ಆದರೆ ಅದು ಯಶಸ್ವಿಯಾಗಲೇ ಬೇಕು’ ಮತ್ತೊಂದು’ ಭಾರತದಲ್ಲಿ ರೈತರು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಜೀವಿಸಿ ಸಾಲದಲ್ಲೇ ಸಾಯುತ್ತಾರೆ’. ಇವರ ಪ್ರಮುಖ ಶಿಫಾರಸ್ಸುಗಳು : ಸರ್ಕಾರದ ಪಾಲುದಾರಿಕೆ, ದೀರ್ಘಾವಧಿ ಕಾರ್ಯಾಚರಣೆ ನಿಧಿ ಸ್ಥಾಪನೆ, ಸಣ್ಣ ಸಹಕಾರ ಸಂಘಗಳ ಒಟ್ಟುಗೂಡುವಿಕೆ, ಸಾಲ (ಪತ್ತು) ಮತ್ತು ಮಾರಾಟ ಜೋಡಣೆ,ನಬ್ಬಂದಿಗೆ ತರಬೇತಿ, ಸರ್ಕಾರದಿಂದ ಲೆಕ್ಕ ಪರಿಶೋಧನೆ, ಆರ್ಥಿಕ ಸಂಸ್ಥೆಗಳ (ಶೃಂಗ ಸಂಸ್ಥೆಗಳಿಂದ) ಮೇಲ್ವಿಚಾರಣೆ, ರೈತರ ಸಂಕಷ್ಟಕ್ಕೆ ನೆರವಿಗೆ ಬರಲು ಎರಡು ನಿಧಿಗಳ ಸೃಷ್ಟಿ. ಈ ಎಲ್ಲ ಶಿಫಾರಸ್ಸುಗಳನ್ನು ಅನುಷ್ಟಾನ ಗೊಳಿಸಲಾಯಿತು. ಎಲ್ಲ ಅಭಿವೃದ್ಧಿ ಇಲಾಖೆಗಳು ಅನುಷ್ಟಾನಕ್ಕಾಗಿ ಸಹಕಾರ ವಲಯವನ್ನು ಅವಲಂಭಿಸಿ ಕಾರ್ಯಗತ ಗೊಳಿಸಲಾಯಿತು.
I ) ಅಲ್ಪಾವಧಿ ಕೃಷಿ ಪತ್ತಿನ ರಚನೆ: ಸೇವ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ಆರಂಭವಾಗಿ ಕೃಷಿಗೆ ಅಗತ್ಯ ಋತು ಆಧಾರಿತ ಬೆಳೆ ಮತ್ತು ಬೆಳೆದ ಉತ್ಪನ್ನದ ಮೇಲೆ ಋಣ ಆಧಾರಿತ ಸಾಲವನ್ನು ಸರ್ಕಾರದ ತದನಂತರ ಜಿ.ಕೇ.ಸ.ಬ್ಯಾಂಕ್ ಗಳಿಂದ ಸಾಲ ಪಡೆದು ರೈತ ಸದಸ್ಯರಿಗೆ ವಿತರಿಸಲು ಸಾಧ್ಯವಾಯಿತು. ಈ ಸಹಕಾರ ಸಂಘಗಳನ್ನು ವ್ಯವಸಾಯ ಸೇವಾ ಸಹಕಾರ ಸಂಘಗಳಾಗಿ ಪುನರ್ ರೂಪಿಸಲಾಯಿತು. ಈ ಸಹಕಾರ ಸಂಘಗಳ ಮೂಲಕ ಗ್ರಾಮೀಣ ಪ್ರದೇಶದ ಆಹಾರ ವಿತರಣೆ, ಅಗತ್ಯ ವಸ್ತುಗಳ ವಿತರಣೆ ಸಾಧ್ಯವಾಯಿತು. ಉದ್ದೇಶಗಳ ವಿಸ್ತರಣೆಯಿಂದ ಅನೇಕ ಸಹಕಾರ ಸಂಘಗಳು ದಿನ ಬಳಕೆ ವಸ್ತುಗಳು, ಬಟ್ಟೆ ಅಂಗಡಿಗಳನ್ನು ತೆರೆದವು. ಕೃಷಿಕರ ಅವಶ್ಯಕತೆ ಯಾದ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ವಿವರಣೆಯಲ್ಲಿ ತೊಡಗಿಸಿಕೊಂಡವು. ಗೋದಾಮುಗಳು ನಿರ್ಮಾಣಗೊಂಡು
ಕೃಷಿ ಉತ್ಪನ್ನ ಈಡಿನ ಸಾಲಗಳನ್ನು ರೈತರಿಗೆ ವಿತರಿಸಿದವು.
1969 ರಲ್ಲಿ ಬ್ಯಾಂಕ್ ಗಳ ರಾಷ್ಟ್ರೀಕರಣವಾಯಿತು. ಇದರಿಂದ ಬ್ಯಾಂಕಿನ ದೃಷ್ಟಿಕೋನ ಬದಲಾಗಿ ಸಾಮಾಜಿಕ ಬ್ಯಾಂಕಿಂಗ್ ಪರಿಕಲ್ಪನೆ ಸಾಧ್ಯವಾಯಿತು. ಭಾರತೀಯ ರಿಸರ್ವ ಬ್ಯಾಂಕ್ ‘ಆಧ್ಯತಾ ವಲಯ’ಬ್ಯಾಂಕಿಂಗ್ ನೀತಿ ಜಾರಿಗೆ ತಂದಿತು. ತಮ್ಮ ಒಟ್ಟು ಠೇವಣಾತಿಗಳಲ್ಲಿ ಶೇ 40ನ್ನು ಗ್ರಾಮೀಣ ಪ್ರದೇಶದ ವಲಯ ಅಭಿವೃದ್ಧಿ( ಕೃಷಿಯನ್ನು ಒಳಗೊಂಡಂತೆ) ಗೆ ಸಾಲ ನೀಡುವ ಅಗತ್ಯತೆ ಬಿತ್ತು. ಸಹಕಾರ ಸಂಘಗಳ ಮೂಲಕ ಸಾಲ ವಿತರಣಿಗೆ ಮುಂದಾದವು. ಆಗ ಅನೇಕ ಸಹಕಾರ ಸಂಘಗಳನ್ನು ಜಿ.ಕೇ. ಸ.ಬ್ಯಾಂಕಿನಿಂದ ಬೇರ್ಪಡಿಸಿ ವಾಣಿಜ್ಯ ಬ್ಯಾಂಕ್ ಗಳ ವ್ಯಾಪ್ತಿಗೆ ಒಳಪಡಿಸಲಾಯಿತು. ಈ ಸಹಕಾರ
ಸಂಘಗಳ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಮಧ್ಯಮಾವಧಿ ಸಾಲಗಳಾದ ಎತ್ತು, ಎತ್ತು ಗಾಡಿ, ಹೈನುಗಾರಿಕೆ,ರೇಷ್ಮೆ, ಕೋಳಿ ಸಾಕಾಣಿ, ಕುರಿಸಾಕಾಣಿ ಮುಂತಾದ ಚಟುವಟಿಕೆಗಳಿಗೆ ಸಾಲ ಒದಗಿಸಲಾಯಿತು.
ರೈತ ಸೇವ ಸಹಕಾರ ಸಂಘಗಳು, ರೇಷ್ಮೆ ಬೆಳೆಗಾರರ ಮತ್ತು ರೈತ ಸಹಕಾರ ಸಂಘಗಳೆಂದು ಹೆಸರಿಸಲಾಯಿತು. ಈ ಪ್ರಾಥಮಿಕ ಸಹಕಾರ ಸಂಘಗಳು ಹೆಚ್ಚು ಹೆಚ್ಚು ವ್ಯವಹಾರಗಳನ್ನು ನಡೆಸಬೇಕು. ಈ ಸಹಕಾರ ಸಂಘಗಳು ಕೇವಲ ಕೃಷಿ ಪತ್ತು ವ್ಯವಹಾರದಲ್ಲಿ ಲಾಭ ಗಳಿಸಲಾರವು ಕೃಷಿ ಯೇತರ ಪತ್ತು ವ್ಯವಹಾರಗಳನ್ನು ನಡೆಸಬೇಕು. ಅಲ್ಲದೆ ಖರೀದಿ ಮಾರಾಟ ವ್ಯವಹಾರಗಳನ್ನು ಹೆಚ್ಚಳಗೊಳಿಸಿ ಸಹಕಾರ ಸಂಘಗಳು ಲಾಭದಾಯಕ ವಾಗಿ ನಡೆಯಬೇಕು. ವಾಣಿಜ್ಯ ಬ್ಯಾಂಕ್ ಗಳಿಗೆ ಹೊಂದಿಕೆಯಾಗಿದ್ದ ಸಹಕಾರ ಸಂಘಗಳಲ್ಲಿ ಕರಡು ಸಾಲಗಳು ಹೆಚ್ಚಾದವು ಗ್ಯಾಪ್(ಅಂತರ) ನಿರ್ಮಾಣವಾಯಿತು. ಅನೇಕ ಈ ಸಹಕಾರ ಸಂಘಗಳು ಒಂದು ಭಾರಿ ತೀರುವಳಿ(ಓ ಟಿ ಎಸ್) ಯೋಜನೆಗಳಲ್ಲಿ ವಾಣಿಜ್ಯ ಬ್ಯಾಂಕ್ ಸಾಲ ತೀರಿಸಿ ಪುನಃ ಜಿ. ಕೇ. ಸ.ಬ್ಯಾಂಕ್ ಗೆ ಪುನರ್ ಹೊಂದಾಣಿಕೆ ಮಾಡಲಾಯಿತು.
2) ದೀರ್ಘಾವಧಿ ಕೃಷಿ ಪತ್ತಿನ ರಚನೆ: ಭಾರತದ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೆ ಕಾರಣವಾದದ್ದು ಈ ವಲಯ. ಸ್ವಾತಂತ್ರ್ಯ ನಂತರ ಈ ವಲಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಲಾಯಿತು.
ರಾಷ್ಟ್ರಾದ್ಯಂತ ಪ್ರತಿ ತಾಲೂಕಿನಲ್ಲಿ ಒಂದು ಭೂ ಆಡಮಾನು ಬ್ಯಾಂಕ್ ತೆರೆಯಲಾಯಿತು. ರಾಜ್ಯ ಮಟ್ಟದಲ್ಲಿ ಇವುಗಳ ಶೃಂಗ ಸಂಸ್ಥೆಯಾಗಿ ರಾಜ್ಯ ಭೂ ಅಡಮಾನು ಟ್ಯಾಂಕ್ಗಳನ್ನು ಸ್ಥಾಪಿಸಲಾಯಿತು. ಇವುಗಳ ಹೆಸರನ್ನು ತನ್ನ ಕರ್ತವ್ಯಕ್ಕೆ ತೆರೆನಾಗಿ ಭೂ ಅಭಿವೃದ್ಧಿ ಬ್ಯಾಂಕ್ ಎಂದು ಬದಲಾಯಿಸ ಲಾಯಿತು. ಕೃಷಿಗೆ ಯೋಗ್ಯತೆ ಇಲ್ಲದ ಭೂಮಿಯನ್ನು ಕೃಷಿಗೆ ಅನುವು ಮಾಡುವಂತೆ ಮಾಡಲು ಭೂ ಅಡಮಾನು ಮಾಡಿಕೊಡಲು ಸಾಲ ನೀಡಲಾಯಿತು. ಅದರಂತೆ ಭೂಮಿ ಯನ್ನು ಕೃಷಿ ಗೆ ಸಜ್ಜು ಗೊಳಿಸಲು,, ತಂತಿ ಬೇಲಿ ಅಳವಡಿಸಲು, ಬಾವಿ ತೆಗೆಸಲು,ಪಂಪ್ ಅಳವಡಿಸಲು , ನೀರಾವರಿಗೆ ಅವಕಾಶ ಮಾಡಿ ಕೃಷಿ ಅಲ್ಲದೆ ತೋಟಗಾರಿಕೆ ಹೀಗೆ ಹತ್ತು ಹಲವು ಯೋಜನೆಗಳಿಗೆ ಯೋಜನಾತ್ಮಕ ಸಾಲಗಳನ್ನು ನೀಡಲಾಯಿತು. ಇದರಿಂದ ಕೃಷಿ, ತೋಟಗಾರಿಕೆ ಉತ್ಪನ್ನಗಳ ಹೆಚ್ಚಳಕ್ಕೆ ಕಾರಣವಾಯಿತಲ್ಲದೆ ರೈತರ ಆರ್ಥಿಕ ಪರಿಸ್ಥಿತಿ ಉತ್ತಮ ಗೊಂಡಿತು. ರಾಷ್ಟೀಕೃತ ಬ್ಯಾಂಕ್ ಗಳು ಈ ಉದ್ದೇಶಕ್ಕೆ ಸಾಲ ನೀಡಲು ಆರಂಭಿಸುವವರೆಗೆ ಇದು ಏಕಸ್ವಾಮತ್ಯ ವನ್ನು ಹೊಂದಿತ್ತು. ಸಾಲ ಸಂಪನ್ಮೂಲಕ್ಕಾಗಿ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಸಾಲಪತ್ರ( ಡಿಬೆಂಚರು) ಗಳನ್ನು ಹೊರಡಿಸುತ್ತಿತ್ತು. ಇವುಗಳಿಗೆ ರಾಜ್ಯ ಸರ್ಕಾರ ಖಾತ್ರಿಯಾಗಿ ನಿಲ್ಲುತ್ತಿತ್ತು ಮತ್ತು ಸಹಕಾರ ಸಂಘಗಳ ನಿಬಂಧಕರು ಧರ್ಮದರ್ಶಿ (ಟ್ರಸ್ಟಿ)ಯಾಗಿರುತ್ತಿದ್ದರು. ಸರ್ಕಾರವೇ ವಿಶೇಷ ಯೋಜನೆ ರೂಪಿಸಿದಲ್ಲಿ ವಿಶೇಷ ಡಿಬೆಂಚರು ಬಿಡುಗಡೆ ಮಾಡುತ್ತಿತ್ತು. ಮತ್ತು ಸರ್ಕಾರವೇ ಇವನ್ನು ಖರೀದಿಸುತ್ತಿತ್ತು. ಸಾಮಾನ್ಯ ಡಿಬೆಂಚರುಗಳನ್ನು ನಬಾರ್ಡ್ ಸೇರಿದಂತೆ. ಎಲ್ ಐ ಸಿ, ಕೆ. ಇ. ಬಿ ಇತರೆ ಸಂಸ್ಥೆಗಳು ಕೊಳ್ಳುತ್ತಿದ್ದವು. ಈ ವ್ಯವಸ್ಥೆಯಿಂದ ಕೃಷಿ ಹೂಡಿಕೆಗೆ ಬಂಡವಾಳ ದೊರೆಯಲು ಅನುವಾಯಿತು. ಅಲ್ಲದೇ ಈ ರೈತರು ಅಲ್ಪಾವಧಿ ವಲಯದಿಂದ ಕೃಷಿಗೆ ದುಡಿಯುವ ಬಂಡವಾಳ(ಬೆಳೆಸಾಲ)ಕೂಡ ದೊರೆಯುತ್ತಿತ್ತು.
ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ರಾಜ್ಯ ಸರ್ಕಾರಗಳ ಮೂಲಕ ಕೃಷಿ ಸಹಕಾರ ಸಂಘಗಳ ಅಭಿವೃದ್ಧಿ ತನ್ಮೂಲಕ ಕೃಷಿ ಅಭಿವೃದ್ಧಿ ಉದ್ದೇಶವಾಗಿತ್ತು. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ( ಎನ್. ಸಿ. ಡಿ. ಸಿ) ಮತ್ತು ಭಾರತೀಯ ರಿಸರ್ವ ಬ್ಯಾಂಕ್ ನ ಕೃಷಿ ಪುನರ್ಧನ ವಿಭಾಗವನ್ನು ಪ್ರತ್ಯೇಕ ಗೊಳಿಸಿ ‘ಕೃಷಿ ಪುನರ್ದನ ನಿಗಮ’ವನ್ನು ಸ್ಥಾಪಿಸಲಾಯಿತು. ಇದು 1981ರ ನಬಾರ್ಡ್ ಕಾಯ್ದೆ ಯಂತೆ 1983ರಲ್ಲಿ ನಬಾರ್ಡ್ (ರಾಷ್ಟ್ರೀಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಆಯಿತು. ಇದರಂತೆ ಭೂ ಅಭಿವೃದ್ಧಿ ಬ್ಯಾಂಕ್ ಗಳ ಉದ್ದೇಶಗಳನ್ನು ಇತರೆ ಗ್ರಾಮೀಣ
ಪ್ರದೇಶದ ವೃತ್ತಿಗಳಿಗೂ ಸಾಲ ನೀಡುವ ಉದ್ದೇಶ ವಿಸ್ತರಣಿ ಮಾಡಿದುದರಿಂದ ಇವುಗಳ ಹೆಸರನ್ನು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ಶೃಂಗ ಸಂಘವನ್ನು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂದು ಪುನರ್ ನಾಮ ಕರಣ ಮಾಡಲಾಯಿತು. ನಬಾರ್ಡ ಅಲ್ಪಾವಧಿ ಕೃಷಿ ಸಾಲ ರಚನೆಗೆ ಪುನರ್ಧನ ಸೌಲಭ್ಯ ಒದಗಿಸುವುದು, ಎನ್ . ಸಿ. ಡಿ. ಸಿ ಯು ಪರಿಕರಗಳ ನಿರ್ಮಾಣಕ್ಕೆ ಅಗತ್ಯ ಬಂಡವಾಳವನ್ನು ಷೇರು, ಸಾಲ, ಸಬ್ಸಿಡಿ ರೂಪದಲ್ಲಿ ರಾಜ್ಯ ಸರ್ಕಾರದ ಮೂಲಕ ಹಣಕಾಸಿನ ನೆರವು ಒದಗಿಸಿದವು.
1980 ರ ದಶಕದಲ್ಲಿ ಉದ್ಭವವಾದ ರೈತರ ಅಸಮಧಾನಗಳು ಸಾಲ ಮರುಪಾವತಿ ಪರಿಸರಕ್ಕೆ ಧಕ್ಕೆ ಉಂಟಾಯಿತು. ನಾಲ ವಸೂಲಾತಿ ಕಷ್ಟಕರ ಪರಿಸ್ಥಿತಿಗೆ ಒಳಗಾಯಿತು. ಇದರಿಂದ ‘ಸಾಲ ಚಕ್ರ’ ಕ್ಕೆ ಹೊಡೆತ ಬಿತ್ತು. ಸರ್ಕಾರ ಅನಿವಾರ್ಯವಾಗಿ ಬಡ್ಡಿ ಮನ್ನ , ಯೋಜನೆಗಳನ್ನು ಕಾರ್ಯಗತ ಗೊಳಿಸಬೇಕಾಯಿತು. ಅಲ್ಪಾವಧಿ ವಲಯದಲ್ಲಿ ಸಾಲ ವಸೂಲಿ ಮತ್ತು ಪುನಃ ಸಾಲ ವಿತರಣೆ ಸಾಧ್ಯವಾಯಿತು.
ಆದರೆ ದೀರ್ಘಾವಧಿ ಸಾಲ ವಲಯದಲ್ಲಿ ಕಂತುಗಳ ಮೂಲಕ ಸಾಲ ವಸೂಲಿಯಾಗಬೇಕು. ಇತರೆ ಯೋಜನೆಗಳಿಗೆ ಸಾಲ ಒದಗಿಸಬೇಕು . ಅಲ್ಲದೆ ಪ್ರಾಥಮಿಕ ಹಂತದಿಂದ ಉನ್ನತ ಮಟ್ಟಕ್ಕೆ ಬಡ್ಡಿ ಪಾವತಿ ಮಾಡಬೇಕು. ಆದುದರಿಂದ ಸದಸ್ಯರಿಂದ ಸಾಲ ಬರಲು ಬಾಕಿ ಇಲ್ಲದಿದ್ದರೂ ಸಾಲ ಪಾವತಿಸಲು ಬಾಕಿಯಾಗಿ ಗ್ಯಾಪ್(ಅಂತರ) ನಿರ್ಮಾಣ ಆಗಲು ಕಾರಣವಾಯಿತು. ಇದರಿಂದ ಈ ವಲಯದ ಬೆಳವಣಿಗೆಗೆ
ಕುಂದುಂಟಾಯಿತಲ್ಲದೆ, ಸ್ಥಗಿತ ಗೊಳ್ಳುವ ಸ್ಥಿತಿ ತಲುಪಿತು.
3) ಕೃಷಿ ಮಾರುಕಟ್ಟೆ ವಲಯ: ಭಾರತಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕ್ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘಗಳು(ತಾಲ್ಲಾಕ್ ಹುಟ್ಟುವಳಿ ಮಾರಾಟ ಮತ್ತು ಸಂಸ್ಕರಣಿ/ ರೂಪಾಂತರ ಸಹಕಾರ ಸಂಘಗಳು ಸ್ಥಾ ಪನೆಯಾದವು. ಇವು ಮಾಧ್ಯಮಿಕ ಸಹಕಾರ ಸಂಘಗಳು. ಏಕೆಂದರೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರೈತರಿಗೆ ನೇರವಾಗಿ ಸದಸ್ಯರಾಗಲು
ಅವಕಾಶವಿದೆ. ಅದರಂತೆ ಪ್ರಾ. ಸ.ಕೃ.ಪಿ. ಸ. ಸಂಗಳು ಸದಸ್ಯರಾಗಿದ್ದು ಇವುಗಳ ಪ್ರತಿನಿಧಿಗಳಿಗೆ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಈ ಸಹಕಾರ ಸಂಘಗಳ ಉದ್ದೇಶ ತಾಲ್ಲೂಕಿನಲ್ಲಿ ನ ಕೃಷಿ ಉತ್ಪನ್ನ ಸಂಗ್ರಹಣೆ ಸಂಸ್ಕರಣೆ( ಮೌಲ್ಯವರ್ಧೀಕರಣ) ಮತ್ತು ಮಾರಾಟ. ಎಸ್. ಸಿ. ಡಿ.ಸಿ ಸಹಾಯದಿಂದ ಗೋದಾ ಮುಗುಳು, ಸಂಸ್ಕರಣ ಘಟಕಗಳು( ಅಕ್ಕಿ ಗಿರಣಿಗಳು, ಹತ್ತಿ ಸಂಸ್ಕರಣೆ , ಬೇಳೆ, ಅಡಕೆ, ಹೀಗೆ ಪ್ರಾದೇಶಿಕ ಉತ್ಪನ್ನಗಳ ) ಸಾಗಣೆ ವಾಹನಗಳು ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಯಿತು. ಸರ್ಕಾರದ ಪರವಾಗಿ ಲೆವಿ (ಭತ್ತ) ಸಂಸ್ಕರಣೆ, ಅಲ್ಲದೇ, ಸಗಟು ಪಡಿತರ ವಿತರಣಿ ಸರ್ಕಾರದ ಏಜೆನ್ಸಿಯಾಗಿ, ರಸಗೊಬ್ಬರ, ಕ್ರಿಮಿನಾಶಕಗಳ ಮಾರಾಟ ಕೈಗೊಂಡವು. ಅನೇಕ ಸಂಘಗಳಲ್ಲಿ ಕೃಷಿ ಉಪಕರಣಗಳ ತಯಾರಿಕೆ, ಮಾರಾಟ, ವಾಹನಗಳ ರಿಪೇರಿ ವರ್ಕ್ ಶಾಪ್, ಸಗಟು ಮತ್ತು ಚಿಲ್ಲರೆ ಬಟ್ಟೆ ಮಾರಾಟ, ಕೃಷಿ ಉತ್ಪನ್ನಗಳ ಈಡಿ ನ ಸಾಲಗಳು, ಹೀಗೆ ರೈತರಿಗೆ ಬೆಳೆದ ಉತ್ಪನ್ನಕ್ಕೆ ಮಾರಾಟ ಮತ್ತು ನ್ಯಾಯಯುತ ಬೆಲೆ ದೊರಕುವಂತಾಗಲು ಸರ್ಕಾರದ ಬೆಂಬಲ ದೊಡನೆ ಅನೇಕ ಉಪಕ್ರಮಗಳು ಜಾರಿಗೆ ಬಂದವು.
ಈ ಸಹಕಾರ ಸಂಘಗಳ ಶೃಂಗ ಸಂಘ ವಾಗಿ ರಾಜ್ಯ ಸಹಕಾರ ಮಹಾಮಂಡಳ. ರಾಷ್ಟ್ರೀಯ ಸಹಕಾರ ಮಾರಾಟ ಮಹಾಮಂಡಳ(ನ್ಯಾ ಫೆಡ್) ಅಸ್ತಿತ್ವಕ್ಕೆ ಬಂದವು. ನ್ಯಾಫೆಡ್ ಮತ್ತು ರಾಜ್ಯ ಮಹಾಮಂಡಳಗಳು ಸರ್ಕಾರದ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ತೊಡಗಿಸಿಕೊಂಡಿವೆ. ರಾಜ್ಯ ಸಹಕಾರ ಮಹಾಮಂಡಳಗಳು ರಾಷ್ಟ್ರಮಟ್ಟದ ರಸಗೊಬ್ಬರ ತಯಾರಿಕಾ ಸಹಕಾರ ಸಂಸ್ಥೆಗಳಾದ ಇಪ್ಕೊ, ( ಇಂಡಿಯನ್ ಪಾರ್ಮಸ್ ಫರ್ಟಿಲೈಜರ್ ಕೋ ಆಪರೇಟಿವ್) ಕ್ರಿಬ್ ಕೊ(ಕ್ರಿಷಿಕ್ ಭಾರತ್ ಕೋ ಅಪರೇಟಿವ್)ಗಳ ಏಜೆನ್ಸಿಯಾಗಿ ಸಹಕಾರ ಜಾಲದಲ್ಲಿ ಯೂರಿಯಾ, ಮಿಶ್ರಣಗಳ ಮಾರಾಟದಲ್ಲಿ ಕೊಡಗಿನ ಕೊಂಡಿವೆ. ಈ ದಶಕಗಳಲ್ಲಿ ಕೃಷಿ , ತೋಟಗಾರಿಕೆ ವಿಜ್ಞಾನಗಳಲ್ಲಿ ನೂತನ ಆವಿಷ್ಕಾರಗಳಾಗಿ ‘ ಅಧಿಕ ಇಳುವರಿ’ ತಳಿಗಳು, ನೂತನ ತಂತ್ರಜ್ಞಾನಗಳ ಅಳವಡಿಕೆ ಯಿಂದ ರೈತರು ಅಧಿಕ ಕೃಷಿ ಉತ್ಪನ್ನಗಳಿಗೆ ಕಾರಣರಾದರು. ಇವುಗಳಿಗೆ ಕಾರಣವಾದದ್ದು ಸಹಕಾರ ಚಳುವಳಿ ಇದರಿಂದ ರಾಷ್ಟ್ರದಲ್ಲಿ ”ಹಸಿರು ಕ್ರಾಂತಿ’ಗೆ ಕಾರಣವಾಯಿತು.
4)ತೋಟಗಾರಿಕೆ ಉತ್ಪನ್ನ ವಲಯ: ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆ(ಅಂದಿನ) ವ್ಯಾಪ್ತಿಯ ರೈತ ಸದಸ್ಯರು ಹಣ್ಣು ಮತ್ತು ತರಕಾರಿಯನ್ನು ನೇರವಾಗಿ ಸರಬರಾಜು ಮಾಡಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ನ್ಯಾಯಬೆಲೆಗೆ ಒದಗಿಸಲು ಸಾಧ್ಯವಾದದ್ದು ಹಾಪ್ ಕಾಮ್ಸ್ (ತೋಟಗಾರಿಕೆ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘ) ಸ್ಥಾಪನೆ ಯಿಂದ ಸಾಧ್ಯವಾಯಿತು. ಖಾಸಗಿ ಯವರ ಮಾರಾಟದ ಬೆಲೆಯ ನಿಯಂತ್ರಣ ಮಧ್ಯಮ ವತ್ತಿಗಳ ಶೋಷಣೆಗೆ ಕಡಿವಾಣವಾಯಿತು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ‘ಜಿಲ್ಲಾ ಸಹಕಾರ ತೋಟಗಾರಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘಗಳನ್ನು ಕಾರ್ಯರಂಭ ಮಾಡಲಾಗಿದೆ. ರಾಜ್ಯಮಟ್ಟದ ಮಹಾಮಂಡಳ ಕೂಡ ಇದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕಾರ್ಯಕ್ರಮಗಳನ್ನು ಅನುಷ್ಟಾನ ಗೊಳಿಸಲಾಗುತ್ತಿದೆ.
5) ವಾಣಿಜ್ಯ ಕೃಷಿ/ ಪ್ಲಾಂಟೇಶನ್ (ಕಮರ್ಷಿಯಲ್) ಉತ್ಪನ್ನ ಮಾರಾಟವಲಯ: ಅಡಿಕೆ, ಕೊಕೊ, ರಬ್ಬರ್, ಏಲಕ್ಕಿ,ಮೆಣಸು, ಕಾಫಿ ಮುಂತಾದ ವಾಣಿಜ್ಯ ಬೆಳೆಗಳ ಮಾರಾಟಕ್ಕಾಗಿಯೇ ರೈತರು ಸಹಕಾರ ಸಂಘಗಳನ್ನು ರಚಿಸಿಕೊಂಡು ಯಶಸ್ವಿಯಾಗಿ ನಡೆಸುತ್ತಿರುತ್ತಾರೆ. ಇವುಗಳಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ‘ಕ್ಯಾಂಪಕೋ’ ಅಡಕೆ ಸಂಗ್ರಹಣೆ ಸಂಸ್ಕರಣಿ, ಮಾರಾಟ ಮಾಡುತ್ತಿರುವುದಲ್ಲದೇ ಚಾಕೋಲೆಟ್ ಕಾರ್ಖಾನೆ ಹೊಂದಿದೆ. ಮಾಮ್ಕೋಸ್, ತಮಕ್ಕೋಸ್, ಆಫ್ಯಕೋಸ್, ಟಿ ಸಿ ಎಸ್, ಟಿ ಎಸ್ ಎಸ್ ನಂತಹ ಸಹಕಾರ ಸಂಸ್ಥೆಗಳು ಅಡಿಕೆ ಗೆ ಅತ್ಯುತ್ತಮ ಮಾರಾಟ ಸೌಲಭ್ಯ ಒದಗಿಸಿವೆ.
6) ಸಹಕಾರ ಸಕ್ಕರೆ ಕಾರ್ಖಾನೆಗಳು: ಭಾರತದಲ್ಲಿ ಕಬ್ಬು ಒಂದು ಪ್ರಮುಖ ಕೃಷಿಯಾಗಿ ಪ್ರಾಚೀನ ಕಾಲದಿಂದಲೂ ರೈತರು ಕೈಗೊಂಡಿದ್ದಾರೆ. ಇದರಿಂದ ಸಕ್ಕರೆ ಕಾರ್ಖಾನೆಗಳಲ್ಲಿ ಸಹಕಾರದ ಪಾಲು ಈ ದಶಕಗಳಲ್ಲಿ ಪ್ರಮುಖ ವಾಗಿತ್ತು. (ಕೆಲವು ರಾಜ್ಯಗಳಲ್ಲಿ ಈಗಲೂ ಇದೆ). ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಮತ್ತು ಗ್ರಾಮೀಣ ಸೌಕರ್ಯಗಳ ನಿರ್ಮಾಣ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಯಿತು. ಈ ದಶಕಗಳಲ್ಲಿ ಕಲ್ಪಿಸಿದ ನೀರಾವರಿ ಸೌಲಭ್ಯಗಳ ಸದುಪಯೋಗಕ್ಕೆ ಕಾರಣವಾದುವು. ಇವುಗಳದೇ ಆದ ರಾಜ್ಯ ಮಹಾಮಂಡಳ ಕಾರ್ಖನೆ ಗಳಿಗೆ ತಾಂತ್ರಿಕ ಸೌಲಭ್ಯ, ಸಕ್ಕರೆ ಮಾರಾಟಕ್ಕೆ ಅನುಕೂಲ , ರಾಜ್ಯ , ಕೇಂದ್ರ ಸರ್ಕಾರದ ಕಾರ್ಖನೆಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತಿತ್ತು.
7) ಹಾಲು ಉತ್ಪಾದಕರ ಸಹಕಾರ ಸಂಘಗಳು: ಸ್ವಾತಂತ್ರ ನಂತರ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರದಲ್ಲಿನ ಹೈನೋದ್ಯಮ ವನ್ನು ಉತ್ತಮ ಗೊಳಿಸಲು ಕೃಷಿ ಮತ್ತು ಪಶು ಸಂಗೋಪನೆ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಮತ್ತು ಸರ್ಕಾರದ ಡೈರಿಗಳನ್ನು ಸ್ಥಾಪಿಸಿತು. ಅಧಿಕ ಹಾಲು ನೀಡುವ ಯೂರೋಪಿಯನ್ ತೆಳಿಗಳನ್ನು ತರಿಸಲಾಯಿತು. ತಳಿ ಸಂವರ್ಧನಾ ಕಾರ್ಯಕ್ರಮಗಳನ್ನು ಕೃತಕ ಗರ್ಭಧಾರಣೆ ಮೂಲಕ ಕೈಗೊಳ್ಳಲಾಯಿತು. ಆದರೂ ಗುಜರಾತ್ ರಾಜ್ಯದಲ್ಲಿನ ಕೆಡಾ ಜಿಲ್ಲೆಯ ‘ಅಮುಲ್’ ಮತ್ತು ಇತರ ಜಿಲ್ಲೆಗಳ ಒಕ್ಕೂಟಗಳು ಸೇರಿ’ಮಹಾಮಂಡಳ’ ರಚನೆಗೊಂಡು ‘ಅಮುಲ್’ ಬ್ರಾಂಡ್ ಅಡಿಯಲ್ಲಿ ಯಶಸ್ಸು ಗಳಿಸಿದ್ದು ಇತಿಹಾಸ. ಇಲ್ಲಿನ ಸ್ಥಳೀಯ ಎಮ್ಮೆ ತಳಿಗಳಾದ ಸುರ್ತಿ, ಮೆಹಸಾನಿ ತಳಿಗಳು ಅಧಿಕ ಹಾಲು ನೀಡುವ ಕಳೆಗಳಿಗಿದ್ದು ‘ಸಹಕಾರ’ ವ್ಯವಸ್ಥೆಯಡಿಯಲ್ಲಿ ಸುವ್ಯವಸ್ಥಿತ ಮಾರುಕಟ್ಟೆ ನಿರ್ಮಾಣ ದಿಂದ ಖಾಸಗಿ ಕಂಪನಿಗಳನ್ನು ಹೊರದೂಡಿ ‘ಅಮುಲ್’ ಯಶಸ್ಸು ಕಂಡಿತು. ಇದರ ಹಿಂದಿನ ಶ್ರಮ ‘ಅಮುಲ್’ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ವರ್ಗೀಸ್ ಕುರಿಯನ್. ‘ಅಮುಲ್’ನ ಪಶು ಆಹಾರ ಘಟಕದ ಉದ್ಘಾಟನೆಗೆ ಭಾರತದ ಪ್ರಧಾನಿ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಯವರ ಭೇಟಿ, ಚಾರಿತ್ರಹ್ಯ. ‘ಅಮುಲ್,’ ನಿಂದ ಈ ಸಹಕಾರ ವ್ಯವಸ್ಥೆಯಿಂದ ಹೈನುಗಾರರಿಗೆ ಆಗಿರುವ ಆರ್ಥಿಕ ಅನುಕೂಲ ಮತ್ತು ಸಹಕಾರ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಕಾರಣವಾಗಿರುವ ಬಗ್ಗೆ ಮನವರಿತ ಅವರು ರಾಷ್ಟ್ರಂದ್ಯಂತ ‘ಅಮುಲ್’ ಪುನರ್ ನಿರ್ಮಾಣ ಮಾಡುವ ಕನಸನ್ನು ಕಂಡರು. ಅವರ ದೂರದೃಷ್ಟಿ ಯಿಂದಾಗಿ ಶ್ರೀಕುರಿಯನ್ ರವರಿಗೆ ಎನ್.ಡಿ.ಡಿ.ಬಿ(ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ) ಮತ್ತು ಐ.ಡಿ.ಸಿ. (ಭಾರತೀಯ ಹೈನು ನಿಗಮ) ಗಳ ಜವಾಬ್ದಾರಿಯನ್ನು ನೀಡಿದರು. ಇದರಿಂದಾಗಿ ಇಡೀ ರಾಷ್ಟ್ರದಲ್ಲಿ ಹೈನು ಅಭಿವೃದ್ಧಿ ಯೋಜನೆ ಆರಂಭಗೊಂಡಿತು.
ರಾಷ್ಟ್ರದ ಹೈನು ಅಭಿವೃದ್ಧಿ ಯೋಜನೆ ‘ಅಮುಲ್’ ಮಾದರಿ ಯನ್ನು ಪುನರ್ ಸೃಷ್ಟಿ ಮಾಡುವುದಾಗಿದ್ದು ಹಣಕಾಸಿನ ನೆರವು ವಿಶ್ವಬ್ಯಾಂಕ್ ಮತ್ತು ಇ. ಇ.ಸಿ(ಯುರೋಪಿಯನ್ ಎಕನೆ ಮಿಕ್ ಯೂನಿಯನ್) ತನ್ನ ಹೆಚ್ಚುವರಿ ಹೈನು ಉತ್ಪನ್ನಗಳನ್ನು ಭಾರತಕ್ಕೆ ಕೊಡುಗೆ ಯಾಗಿ ನೀಡಿದ್ದರು. ಇದನ್ನು ಮಾರಾಟ ಮಾಡಿ ಆರಂಭವಾಗಿ ಕ್ಷೀರಧಾರ (ಆಪರೇಷನ್ ಫ್ಲಡ್) ಯೋಜನೆ ಆರಂಭಿಸಲಾಯಿತು. ಕ್ಷೀರಧಾರ-¡, ಕ್ಷೀರಧಾರ-¡¡, ಯೋಜನೆಗಳು ಕಾರ್ಯಗೊಂಡವು. ಕ್ಷೀರಧಾರ ಯೋಜನೆ -¡¡¡, ಆರಂಭಗೊಂಡಿತು. ಯೋಜನೆ ಆರಂಭದಲ್ಲಿ ಭಾರತದ ಪ್ರತಿ ಪ್ರಜೆಗೆ ಲಭ್ಯವಿದ್ದ ಪ್ರಮಾಣ 110 ಮಿ.ಲಿ 1990 ಕ್ಕೆ 179.00 ಮಿ.ಲಿ ನಷ್ಟು ಹೆಚ್ಚಳ ಕಂಡಿತು. ಕರ್ನಾಟಕದಲ್ಲಿ ಕರ್ನಾಟಕ ಹೈನು ಅಭಿವೃದ್ಧಿ ಯೋಜನೆ 1975 ರಲ್ಲಿ ಆರಂಭಗೊಂಡಿತು. 1990 ರ ವೇಳೆಗೆ 13 ಹಾಲು ಒಕ್ಕೂಟಗಳು , 1983 ರಲ್ಲಿ ಕರ್ನಾಟಕ ಹೈನು ಅಭಿವೃದ್ಧಿ ನಿಗಮ ಸಮಾಪನೆಗೊಂಡು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಸ್ಥಾಪನೆಯಾಯಿತು. ಯೋಜನೆ ಆರಂಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಇದ್ದದ್ದು ರಾಜ್ಯದ್ಯಂತ ವಿಸ್ತೃತ ಗೊಂಡಿತು. ಇದರ ಉತ್ಪನ್ನ ‘ನಂದಿನಿ’ ಬ್ರಾಂಡ್ ಸ್ವರೂಪ ಪಡೆಯಿತು.
8) ಎಣ್ಣೆ ಕಾಳುಗಳ ಉತ್ಪನ್ನ ವಲಯ: ರೈತರು ತಮ್ಮ ಉತ್ಪನ್ನಕ್ಕೆ ತಾವೇ ಮಾರುಕಟ್ಟಿ ಸೃಷ್ಟಿಸಿಕೊಳ್ಳಬಲ್ಲ, ಮಧ್ಯಮ ವರ್ತಿಯನ್ನು ನಿರ್ಮೂಲ ಗೊಳಿಸಬಲ್ಲ, ರೈತರದೇ, ರೈತರಿಂದಲೇ, ರೈತರಿಗಾಗಿಯೇ ಹುಟ್ಟಿಕೊಂಡ ‘ಅಮುಲ್’ ನ ಮೂರು ಹಂತದ ಶೃಂಗ ವ್ಯವಸ್ಥೆಯನ್ನು ಇತರೆ ಉತ್ಪನ್ನಗಳಿಗೂ ಏಕೆ ವಿಸ್ತರಿಸ ಬಾರದು? ಎಂಬ ಚಿಂತನೆ ಮೂಡಿ ಬಂದು ಎನ್. ಡಿ.ಡಿ. ಬಿ . ವತಿಯಿಂದ ‘ಇದೇ ಮಾದರಿಯನ್ನು ಎಣ್ಣೆ ಕಾಳುಗಳ ಬೆಳೆಗಳಿಗೆ ವಿಸ್ತರಿಸಲಾಯಿತು. ಅದರಂತೆ ಕರ್ನಾಟಕದಲ್ಲಿಯೂ ಈ ಬೆಳೆಗಳ ಉತ್ಪನ್ನ ವಲಯಗಳಲ್ಲಿ ಪ್ರಾಥಮಿಕ ಸಹಾರ ಸಂಘಗಳು ಎರಡು ಅಥವಾ ಮೂರು ತಾಲ್ಲೂಕುಗಳ ಕಾರ್ಯಕ್ಷೇತ್ರ ಮತ್ತು ಎರಡು ಮತ್ತು ಮೂರು ಜಿಲ್ಲೆಗಳಿಗೆ ಒಕ್ಕೂಟಗಳು ಮತ್ತು ರಾಜ್ಯ ಮಟ್ಟದ ‘ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜಗಳ ಸಹಕಾರ ಮಹಾಮಂಡಳ'(ಕೆ.ಓ.ಎಫ್).’ ಸಫಲ್’ ಬ್ರಾಂಡ್ ನ ಅಡಿಯಲ್ಲಿ ಎಣ್ಣೆ ಯನ್ನು ಮಾರಾಟ ಮಾಡಲಾಗುತ್ತದೆ.
9) ಬಳಕೆದಾರರ ಸಹಕಾರ ಸಂಘಗಳು: ಮೂರು ಹಂತದ ಶೃಂಗ ವ್ಯವಸ್ಥೆಯಾಗಿ ರೂಪುಗೊಂಡಿತಾದರೂ ಒಂದರ ಮತ್ತೊಂದರ ನಡುವೆ ಸಾವಯವ ಸಂಬಂಧಗಳು ವರ್ಷದಿಸಲಾಗಲಿಲ್ಲ. ಪ್ರತಿ ಸ್ಥರವೂ ಸ್ವತಂತ್ರವಾಗಿ ವರ್ತಿಸಿತು. ಇದಕ್ಕೆ ಕಾರಣ ಇಲ್ಲದಿಲ್ಲ. ತನ್ನ ಉನ್ನತ ಸ್ತರಕ್ಕೆ ಪತ್ರಿನಿಧಿ(ನಿಯೋಗಿ- ಡಿಲೆಗೇಟ್) ಕಳುಹಿಸುವುದಕ್ಕೆ ಸೀಮಿತವಾಯಿತು. ಆದರೂ ರಾಜ್ಯ ಸಂಸ್ಥೆ (ಕ.ರಾ.ಸ. ಗ್ರಾ. ಮಹಾಮಂಡಳ) ಮತ್ತು ಹಲವು ಜಿಲ್ಲ ಸಗಟು ಮಾರಾಟ ಸಹಕಾರ ಸಂಘಗಳು(ಉದಾ: ಮಂಗಳೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ) ತನ್ನದೇ ಆದ ‘ಜನತಾ ಬಜಾರ್’ಗಳನ್ನ ತೆರಿದಿದ್ದವು.’ಡಿಪಾರ್ಟಮೆಂಟಲ್ ಸ್ಟೋರ್ಸ್’ ಪರಿಕಲ್ಪನೆ ‘ಸ್ವಯಂ ಸಹಾಯ ಅಂಗಡಿ”ಸೆಲ್ಫ ಸರ್ವಿಸ್ ಸ್ಟೋರ್ಸ್’ ಪರಿಕಲ್ಪನೆ ಆರಂಭವಾಗಿದ್ದು ಸಹಕಾರಿ ವಲಯದಲ್ಲಿ, ಒಟ್ಟಾರೆ ಮಾರುಕಟ್ಟೆಯಲ್ಲಿನ ಪಾಲು ಅಧಿಕ ವಲ್ಲದಿದ್ದರೂ ಬಳಕೆ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸಹಕಾರಿ ಯಾವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಸರ್ಕಾರದ ಬೆಂಬಲ ಎಲ್ಲ ರೀತಿಯಲ್ಲಿ ದೊರಕಿತ್ತು. ಸಗಟು ಮತ್ತು ಚಿಲ್ಲರೆ ಪಡಿತರ ವಿತರಣೆ (ಪಟ್ಟಣ ಪ್ರದೇಶಗಳಲ್ಲಿ) ಈ ವಲಯದಲ್ಲಿ ಸಾಂಧ್ರ ಗೊಂಡಿತ್ತು.
10) ಮೀನುಗಾರಿಕೆ: ಮಿನುಗಾರಿಕೆಯಲ್ಲಿ ಸಹಕಾರ ವಲಯ ಅತ್ಯಂತ ಪ್ರಶಾಂಸರ್ಹ ಕಾರ್ಯವೆಸಗಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಗೆ ಮತ್ತು ಮೀನು ಮಾರುಕಟ್ಟೆಗೆ ಸಾಕಷ್ಟು ಕೊಡುಗೆ ನೀಡಿದೆ. ಯಾಂತ್ರಿಕ / ಆಧುನಿಕ ಮೀನುಗಾರಿಕೆ ಮತ್ತು ಸ್ರಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮೀನುಗಾರರಿಗೆ ಸರ್ಕಾರ ಒದಗಿಸುವ ಅನೇಕ ಸವಲತ್ತುಗಳನ್ನು ಸಹಕಾರ ಸಂಘಗಳ ಮೂಲಕವೇ ಒದಗಿಸುತ್ತಿದೆ. ಡೀಸೆಲ್ ಸಬ್ಸಿಡಿ, ಪಡಿತರ ಸೀಮೆ ಎಣ್ಣೆ, ಉಪ್ಪು, ವಿಮೆ ಸೌಲಭ್ಯ, ವಸತಿ ನಿರ್ಮಾಣ, ಇತರೆ. ಸಹಕಾರ ಸಂಘಗಳು ಪರಿಕರಗಳ ಮಾರಾಟ, ಬಿಡಿ ಭಾಗಗಳ ಮಾರಾಟ, ಮೀನಿಗೆ ನ್ಯಾಯ ಬೆಲೆ ದೊರೆಯಲು ಖರೀದಿ , ಮಾರಾಟ, ಏಜೆನ್ಸಿ ವ್ಯವಹಾರ, ಸಾಲ ಇವುಗಳ ಸೌಲಭ್ಯಗಳನ್ನು ಮೀನುಗಾರ ಸದಸ್ಯರಿಗೆ ಒದಗಿಸುತ್ತಿದೆ. ಕರ್ನಾಟಕದಲ್ಲಿ ಕರಾವಳಿ ಉದ್ದಕ್ಕೂ ಮೀನುಗಾರರ ಸಹಕಾರ ಸಂಘಗಳು, ಮಹಿಳಾ ಮೀನುಗಾರರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ದಕ ಜಿಲ್ಲೆ ಮೀನು ಸಹಕಾರ ಮಹಾಮಂಡಳ, ಉ.ಕ. ಜಿಲ್ಲೆ ಸಹಕಾರ ಸಂಘಗಳು ಅಸ್ತಿತ್ವದಲ್ಲಿವೆ. ಮಂಜುಗಡ್ಡೆ ತಯಾರಿಕೆ ಘಟಕಗಳು, ಶೈತ್ಯಾಗಾರಗಳು ಹೊಂದಿದ್ದು ಮೀನಿಗೆ ಮಾರುಕಟ್ಟೆ ಒದಗಿಸುತ್ತಿದೆ.
ಒಳನಾಡು ಪ್ರದೇಶಗಳಲ್ಲಿ ಕೆರೆ, ಕೊಳ್ಳ, ನದಿ, ಜಲಾಶಯಗಳಲ್ಲಿ ಮೀನು ಕೃಷಿಗೆ ಸಾಕಷ್ಟು ಅವಕಾಶಗಳಿವೆ. ಅದರಂತೆ ಮಿಮಗಾರಿಕೆ ಇಲಾಖೆಯ ಈ ಸಹಕಾರ ಸಂಘಗಳಿಗೆ ಪ್ರಶಾಸ್ತ್ಯ ನೀಡಿ ಮಿನುಗಾರಿಕೆ ಹಕ್ಕನ್ನು ನೀಡುತ್ತಿದೆ. ಅಲ್ಲದೆ ಅನೇಕ ಸಾಮಾಜಿಕ ಯೋಜನೆಗಳನ್ನು ( ವಸತಿ, ವಿಮೆ) ಈ ಸಹಕಾರ ಸಂಘಗಳ ಮೂಲಕ ಕಾರ್ಯಗತಗೊಳಿಸುತ್ತಿದೆ. ಈ ವೇಳೆಯಲ್ಲಿ ಇವುಗಳ ಮಹಾಮಂಡಳ (ಮೈಸೂರು)ನಲ್ಲಿ ಸ್ಥಾಪಿಸಲಾಯಿತು.
ನವದೆಹಲಿ ಯಲ್ಲಿ ರಾಷ್ಟ್ರೀಯ ಮೀನುಗಾರಿಕೆ ಸಹಕಾರ ಮಹಾಮಂಡಳ(ಫಿಶ್ ಕಾಪ್ ಫೆಡ್) ಕಾರ್ಯನಿರ್ವಹಿಸುತ್ತಿದ್ದು ರಾಷ್ಟ್ರದ ಸಹಕಾರ ಮೀನುಗಾರಿಕೆ ಯ ಮಂಚೂಣಿ ವಹಿಸಿಕೊಂಡಿದ್ದು ಮೀನುಗಾರರ ಒಳಿತಿಗಾಗಿ ಮತ್ತು ಮೀನುಗಾರಿಕೆ ಅಭಿವೃದ್ಧಾಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
11) ನೇಕಾರಿಕೆ: ಕೈಗಾರಿಕೆ ಇಲಾಖೆ ಮುಖಾಂತರ ಅನೇಕ ನೇಕಾರರ , ಕ್ರೈಮಗ್ಗ ಪವರ್ ಲೂಮ್ ಸಹಕಾರ ಸಂಘಗಳನ್ನು , ಕೈಗಾರಿಕೆ ಷಡ್ ಗಳ ನಿರ್ಮಾಣ , ನೂಲು ಸರಬರಾಜು , ಉತ್ಪನ್ನ ಮಾರುಕಟ್ಟೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಈ ಸಹಕಾರ ಸಂಘಗಳು ಕೈಗೊಂಡಿವೆ. ಇಲಾಖೆಯ ಸಾಮಾಜಿಕ ಭದ್ರತೆ ಅನುಕೂಲಗಳನ್ನು ಈ ಸಹಕಾರ ಸಂಘಗಳ ಮೂಲಕ ಒದಗಿಸಲಾಗಿದೆ. ಇವುಗಳ ಮಹಾ ಮಂಡಳ’ ಕೆ-ಟೆಕ್ಸ'(ಕಾವೇರಿ ಹ್ಯಾಂಡ್ ಲೂಮ್ಸ) ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿತ್ತು.
12) ರೇಷ್ಮೆ ವಲಯ: ವಿಶ್ವ ಬ್ಯಾಂಕ್ ಯೋಜನೆಯಡಿಯಲ್ಲಿ ಸಹಕಾರ ವಲಯದ ಮೂಲಕ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಾಗಿತ್ತು. ರೈತ ಸೇವ ಸಹಕಾರ ಸಂಜೆಗಳಲ್ಲಿ ಚಾಕಿ ಕೇಂದ್ರಗಳ ನಿರ್ಮಾಣ, ಮೊಟ್ಟಿ ಮರಿ ಉತ್ಪಾದನೆ. ರೇಷ್ಮೆ ನೂಲು ಬಿಚ್ಚುವ ಸಹಕಾರ ಸಂಘಗಳ ಸ್ಥಾಪನೆ, ಅವುಗಳ ಮೂಲಕ ನೂಲು ಮಾರಾಟ, ಇವುಗಳ ಮೂಲಕ ವಲಯದ ಅಭಿವೃದ್ದಿ ಸಾಧ್ಯವಾಯಿತು.
13) ಹತ್ತಿ ನೂಲಿನ ಗಿರಣಿಗಳು: ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಎನ್. ಸಿ. ಡಿ. ಸಿ . ಸಹಾಯದಿಂದ ನೂಲಿನ ಗಿರಣಿಗಳು ಮತ್ತು ಅದರ ಮಹಾಮಂಡಳ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವು
14) ಗೃಹ ನಿರ್ಮಾಣ ಸಹಕಾರ ಸಂಘಗಳು: ಮಧ್ಯಮ ವರ್ಗದ ಜನತೆಗೆ ಆಶ ಕಿರಣವಾಗಿ ನಿವೇಶನ ಒದುಗಿಸುವಲ್ಲಿ , ಗೃಹ ನಿರ್ಮಾಣ ಸಾಲ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ಅದರ ಕರ್ನಾಟಕ ರಾಜ್ಯ ವಸತಿ ಮಹಾಮಂಡಳ ಈ ದಿಸೆಯಲ್ಲಿ ತನ್ನ ಅನುಪಮ ಸೇವೆ ಸಲ್ಲಿಸಿದೆ.
15) ಇತರೆ ವಲಯಗಳು : ಎಲ್ಲ ಅಭಿವೃದ್ಧಿ ಇಲಾಖೆಗಳು ತಮ್ಮ ಅಭಿವೃದ್ಧಿ ಇಲಾಖೆಗಳು ಆ ವಲಯದಲ್ಲಿನ ಎಲ್ಲರನ್ನೂ ಒಳಗೊಂಡು , ಎಲ್ಲರಿಗೂ ಅದರಿಂದ ಅದರ ಫಲ ದೊರಕಲು ಸಹಕಾರ ಸಂಘಗಳನ್ನು ಸ್ಥಾಪಿಸಿ ಕಾರ್ಯವೆಸಗಿದವು.
(ಅ) ಖಾದಿ ಮತ್ತು ಗ್ರಾಮೋದ್ಯೋಗ: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ರಾಷ್ಟ್ರದ್ಯಂತ ಆಯಾ ಪ್ರದೇಶದ ಅಗತ್ಯತೆ ಅನುಸಾರ ಯಾವ ಗ್ರಾಮೋದ್ಯೋಗ ನೆರವೇರುತ್ತಿದೆಯೋ ಅದಕ್ಕೆ ನೆರವಾಗುವಂತೆ ಮತ್ತು ಅದರ ಮಾರಾಟಕ್ಕೆ ಅನುಕೂಲವಾಗುವಂತೆ ಸಹಕಾರ ಸಂಘಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಉದಾ: ಚಾಪೆ ನೇಕಾರರ , ಬುಟ್ಟಿ ಹೆಣೆಯುವ, ಶಿಲ್ಪಿಗಳ,ಗುಡಿಗಾರರ, ಮೇಣ ಮತ್ತು ಅಗರಬತ್ತಿ ತಯಾರಕರ, ಅವಲಕ್ಕಿ ತಯಾರಕರ, ಜೇನು ಸಾಕಾಣಿಕೆ, ಕುಂಬಾರರ, ಕುಶಲ ಕರ್ಮಿಗಳ, ಹೀಗೆ ಹತ್ತು ಹಲವು ರೀತಿಯ ಸಹಕಾರ ಸಂಘಗಳು.
(ಆ) ಸಾಮೂಹಿಕ/ ಜಂಟಿ ಕೃಷಿ ಸಹಕಾರ ಸಂಘಗಳು: ಸ್ವಾತಂತ್ರ್ಯ ನಂತರ ಅನೇಕ ಭೂರಹಿತರಿಗೆ ಸರ್ಕಾರಿ ಭೂಮಿತರಣೆ ಯಾಯಿತು. ಇವುಗಳನ್ನು ಸಹಕಾರ ಸಂಘಗಳ ಮೂಲಕ ನಿರ್ವಹಿಸಲಾಯಿತು.
(ಇ) ನೀರಾವರಿ ಸಹಕಾರ ಸಂಘಗಳು: ಲಿಫ್ಟ್ ಇರಿಗೇಷನ್ (ಏತ ನೀರಾವರಿ) ನದಿಗಳಿಂದ ನೀರನ್ನು ಪಂಪ್ ಅಳವಡಿಸಿ ನೀರನ್ನು ಹಂಚಿಕೊಳ್ಳುವುದು, ಕಾಡಾ(ಕಮಾಂಡ್ ಏರಿಯಾ ಡೆವಲಪ್ಮೆಂಟ್ ಏಜೆನ್ಸಿ) ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಹಂಚಿಕೆ ಮಾಡಿಕೊಳ್ಳಲು, ನಾಲೆಗಳ ನಿರ್ವಹಣೆಗೆ ಸಹಕಾರ ಸಂಘಗಳು
(ಈ) ಲ್ಯಾಂಪ್ಸ್: ದೊಡ್ಡ ಪ್ರಮಾಣದ ಆದಿವಾಸಿ ( ಗಿರಿಜನರ) ವಿವಿದೋದ್ದೇಶ ಸಹಕಾರ ಸಂಘಗಳು. ಕಿರು ಅರಣ್ಯ ಉತ್ಪನ್ನ ಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟ ನಿರ್ವಹಣೆ, ಕರ್ನಾಟಕದಲ್ಲಿ ಮಹಾಮಂಡಳವನ್ನು ಸ್ಥಾಪಿಸಲಾಗಿದೆ. (ಮೈಸೂರು).
16) ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್ ಗಳು, ಮಹಿಳಾ ಪತ್ತಿನ/ವಿವಿದೋದ್ದೇಶ ಸಹಕಾರ ಸಂಘಗಳು: ಪಟ್ಟಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಠೇವಣಿ ಸಂಗ್ರಹಣೆ ಮತ್ತು ಸಾಲ ವಿತರಣೆಯಲ್ಲಿ ಈ ಸಹಕಾರ ಸಂಘಗಳು ಸರ್ಕಾರದ ಯಾವುದೇ ಒತ್ತಾಸೆಯಿಲ್ಲದೆ ಸ್ವಯಂ ಆಸಕ್ತಿಯಿಂದ ಉತ್ತಮ ನಾಯಕತ್ವ ದೊಡನೆ ಕಾರ್ಯನಿರ್ವಹಿಸಿದವು. ಅವುಗಳದೇ ಮಹಾಮಂಡಳ ಗಳೂ ರಚನೆಯಾಗಿ ಪ್ರಾಥಮಿಕ ಸಂಘಗಳಿಗೆ ಸೂಕ್ತ ಮಾರ್ಗದರ್ಶನ, ಶಿಕ್ಷಣ , ತರಬೇತಿ, ಪ್ರಚಾರಗಳನ್ನು ಕೈಗೊಂಡವು. 1963 ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ನ್ನು ಪಟ್ಟಣ/ಪ್ರಾಥಮಿಕ ಸಹಕಾರ ಬ್ಯಾಂಕ್ ಗಳಿಗೆ ಅನ್ವಯ ಗೊಳಿಸಲಾಯಿತು.1979 ರ ಮಾಧವ ದಾಸ್ ಸಮಿತಿ ಪಟ್ಟಣ ಸಹಕಾರ ಬ್ಯಾಂಕಗಳ ಸುಧಾರಣೆಗೆ ಅನೇಕ ಶಿಫಾರಸ್ಸುಗಳನ್ನು ಮಾಡಿತು. ಇದರಿಂದ ವೃತ್ತಿಪರ ವ್ಯವಸ್ಥಾಪನೆಗೆ ಅವಕಾಶ ವಾಯಿತು.
1990 – 2024: ಭಾರತದ ಆರ್ಥಿಕತೆಗೆ ತಿರುವು ನೀಡಲಾಯಿತು. ‘ಮಿಶ್ರ ಆರ್ಥಿಕತೆ’ ನೀತಿಯಿಂದ ‘ಖಾಸಗಿ ಕರಣ’ ಹೆಚ್ಚು ಮಹತ್ವ ನೀಡಲಾಯಿತು. ಸಾರ್ವಜನಿಕ ಖಾಸಗಿ ಭಾಗಿತ್ವಕ್ಕೆ ಮಹತ್ವ ನೀಡಲಾಯಿತು. ಗ್ಯಾಟ್’ (ಜನರಲ್ ಅಗ್ರಿಮೆಂಟ್ ಆನ್ ಟ್ರೆಡ್ ಅಂಡ್ ಟರಿಫಟರಿಫ್) ಒಪ್ಪಂದವಾಯಿತು. ಉದಾರೀಕರಣ, ಖಾಸಗಿ ಕರಣ, ಜಾಗತಿಕರಣ ಮೂಲ ಮಂತ್ರವಾಯಿತು. ಭಾರತ ಜಗತ್ತಿನೊಡನೆ ಸಾಗಬೇಕಾಯಿತು. ‘ದ್ವೀಪ’ವಾಗಿ ಉಳಿಯುವಂತಿಲ್ಲ. ಸಹಕಾರ ಸಂಘಗಳು ವಾಣಿಜ್ಯ ಸಂಸ್ಥೆಗಳು ಇವೂ ಕೂಡ ಸ್ವಯಂ ನಿರ್ವಹಣೆ ಹೊಂದಿ ಸ್ವತಂತ್ರ ಸಂಸ್ಥೆಗಳಾಗ ಬೇಕು. ಸರ್ಕಾರದ ಅಧ್ಯತೆ, ಅನುಕೂಲಗಳು, ವಿನಾಯ್ತಿಗಳು ಇರುವುದಿಲ್ಲ. ‘ಮಾಡು ಅಥವ ಮಡಿ’ ಪರಿಸರ ನಿರ್ಮಾಣವಾಯಿತು. ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ನೀಡಲಾಗುತ್ತಿದ್ದ ಸಮತ್ತುಗಳನ್ನು ನಿಲ್ಲಿಸಲಾಯಿತು.ಇದರಿಂದ ಹೊಸ ಯುಗ ಆರಂಭವಾಯಿತು.
1) ಅಲ್ಪಾವಧಿ ಕೃಷಿ ಪತ್ತಿನ ರಚನೆ: ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಅದರಲ್ಲಿಯೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಸಾಲ (ಕೆ.ಸಿ.ಸಿ-ರೆಸಾನ್ ಕ್ರೆಡಿಟ್ ಸಾಲ) ದೊರೆಯುತ್ತಿರುವುದು ಈ ವಲಯದಿಂದ , ಆದರೆ ಒಟ್ಟಾರೆ ಮಾರುಕಟ್ಟೆಯಲ್ಲಿ ತನ್ನ ಪಾಲು ಕುಸಿಯುತ್ತಾ ಬಂದಿತು. 60 ರ ದಶಕದಲ್ಲಿ ನೂರು ಇದ್ದದ್ದು 80, 70, 60, 50, 40, 30 20, ಕ್ಕೆ ಕ್ರಮೇಣವಾಗಿ ಕುಸಿಯಿತು. ಕಾರಣ ವಾಣಿಜ್ಯ ಬ್ಯಾಂಕಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಸ್ಥಾಪನೆ ಮತ್ತು ವಿಸ್ತರಣೆ. ಸರ್ಕಾರದ ಸಹಾಯ ವಿಲ್ಲದೆ ವಲಯವನ್ನು ಗ್ರಾಮೀಣ ಪ್ರದೇಶದ ಜನತೆ ಮತ್ತು ಅಭಿವೃದ್ಧಿಗಾಗಿ ಉಳಿಸಿ ಕೊಳ್ಳಲೇ ಬೇಕೆಂಬ ಪರಿಸ್ಥಿತಿ. ಪಡಿತರ ವಿತರಣೆ, ಕೃಷಿ ಅಗತ್ಯ ಪರಿಕರ ಖರೀದಿ ಮಾರಾಟ, ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಮುಂತಾದುವು. ಒಟ್ಟಾರೆ ಮಾರುಕಟ್ಟೆ ಯಲ್ಲಿ ತನ್ನ ಪಾಲು ಅಧಿಕ ವಿಲ್ಲ ದಿದ್ದರೂ ಮಾರುಕಟ್ಟೆ ಬೆಲೆ ನಿಯಂತ್ರಣದಲ್ಲಿ ಸಹಾಯಕ. ಕಾಳಸಂತೆ ನಿಯಂತ್ರಣ ಸಾಧ್ಯ. ಈ ಪರಿಸ್ಥಿತಿಯಲ್ಲಿ ಮೂಡಿ ಬಂದದ್ದು, ‘ವ್ಯಾಪಾರ ಅಭಿವೃದ್ಧಿ ಯೋಜನೆ’ ಪರಿಕಲ್ಪನೆ. ಸಹಕಾರ ಸಂಘಗಳಲ್ಲಿ ಠೇವಣಿ ಸಂಗ್ರಹಣೆಗೆ ಆಧ್ಯತೆ ನೀಡುವುದು, ಕೃಷಿ ಸಾಲಗಳಲ್ಲದೇ ಕೃಷಿ ಯೇತರ ಉದ್ದೇಶಿತ ಸಾಲಗಳನ್ನು ವಿತರಣೆ ಮಾಡುವುದು. ತನ್ನ ಪರಿಸರದಲ್ಲಿ ಅಗತ್ಯವಸ್ತುಗಳ ಖರೀದಿ ಮಾರಾಟ,ಹೀಗೆ ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುವುದು. ಅದಕ್ಕಾಗಿ ಗುರಿಗಳನ್ನು ನಿಗದಿಪಡಿಸುವುದು. ಸಹಕಾರ ಇಲಾಖೆ ಮತ್ತು ಜಿ.ಕೇ. ಸ.ಬ್ಯಾಂಕ್ ಪ್ರತಿ ಮಾಹೆ ಪ್ರಗತಿ ಪರಿಶೀಲನೆ ನಡೆಸುವುದು.
ಸಹಕಾರ ಸಂಘ ಎಂದು ಹೆಸರಿದ್ದವರಿಗೆ ‘ ಬ್ಯಾಂಕ್” ಎಂದು ಹೆಸರು ಬದಲಾಯಿಸಲು ಉತ್ತೇಜನ ನೀಡಲಾಯಿತು. ಬ್ಯಾಂಕಿಂಗ್ ಗೆ ಅವಶ್ಯ ಪರಿಕರಗಳ ಅಳವಡಿಸಿಕೊಳ್ಳಲು (ಭದ್ರತಾ ಕೊಠಡಿ ನಿರ್ಮಾಣ, ಬ್ಯಾಂಕಿಂಗ್ ಕೌಂಟರ್ ಗಳು, ಮರಮುಟ್ಟುಗಳು) ಜಿ.ಕೇ. ಸ.ಬ್ಯಾಂಕ್, ಕ.ರಾ.ಸ.ಅ. ಬ್ಯಾಂಕ್ ನ ಹಣ ಕಾಸಿನ ಸೌಲಭ್ಯ ಒದಗಿಸಲಾಯಿತು. ರೈತರ ಸಂಕಷ್ಟ ನಿವಾರಣೆಗಾಗಿ ಸಹಕಾರ ಸಂಘಗಳ ವಸೂಲಾತಿ ಸುಧಾರಿಸಲು ಸುಸ್ತಿ ಬಡ್ಡಿ ಮನ್ನಾ , ಬಡ್ಡಿ ಮನ್ನ, ಸಾಲ ಮನ್ನಾ ಮುಂತಾದ ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತಂದವು. ರೈತರ ಆತ್ಮಹತ್ಯೆ ತಪ್ಪಿಸಲು(ವಿದರ್ಭ ಪ್ಯಾಕೇಜ್), ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಾಲವನ್ನು ಮನ್ನಾ ಮಾಡುವ, ಉತ್ಪಾದನ ಉತ್ತೇಜನ ನೀಡುವ ಯೋಜನೆಗಳು ಜಾರಿಗೊಂಡವು. ನಬಾರ್ಡ್ ಜಿ. ಕೇ.ಸ.ಬ್ಯಾಂಕ್ , ರಾಜ್ಯ ಸಹಕಾರ ಬ್ಯಾಂಕ್ ಗಳಲ್ಲಿ ಯೋಜನಾ ಬದ್ಧ ಬೆಳವಣಿಗಾಗಿ ,ನಿಧಿ ಆಧಾರಿತ ವ್ಯವಹಾರಗಳ ವೃದ್ಧಿಗೆ ಅವುಗಳು ಚಾಲ್ತಿ ಸೈರಣಿ ಹಂತ(current viability) ಮತ್ತು ಸ್ಥಿರ ಸೈರಣೆ ಹಂತ(sustainable viability )ತಲುಪಲು ಬೇಕಾದ ವ್ಯವಹಾರ ಗಾತ್ರವನ್ನು ಲೆಕ್ಕ ಹಾಕುವ ವಿಧಾನಗಳನ್ನು’ ಅಭಿವೃದ್ಧಿ ಕ್ರಿಯಾ ಯೋಜನೆ(Development Action Plan)’ ತೋರಿಸಿಕೊಟ್ಟಿತು. ಅದರಂತೆ ತೂಕ ಸಹಿತ ವ್ಯವಹಾರಗಳ ಅಳೆಯುವಿಕೆ ಇಂದ ಅನುಪಾತ ಗಳನ್ನು ಅರಿತು ಅದರಂತೆ ನಿಧಿಗಳ ಮೇಲಿನ ವೆಚ್ಛ, ಆಸ್ತಿಯ ಮೇಲಿನ ಗಳಿಕೆ, ಅಂತರ, ವ್ಯವಸ್ಥಾಪನಾ ವೆಚ್ಛ, ಇಂತಹ ಲೆಕ್ಕಾಚಾರ ಮಾಡುವುದಲ್ಲದೆ, ತನ್ನ ಶೃಂಗ ಸಂಸ್ಥೆಗಳೊಡನೆ ಬಡಂಬಡಿಕೆ ಮಾಡಿ ಕೊಳ್ಳಲಾಯಿತು.
ವ್ಯಾಪಾರ ಅಭಿವೃದ್ಧಿ ಯೋಜನೆ ಯಂತೆ ಪ್ರಾಥಮಿಕ ಸ. ಸಂ. ಗಳ ಅಭಿವೃದ್ಧಿ ಜವಾಬ್ದಾರಿ ಜಿ. ಕೇ. ಸ.ಬ್ಯಾಂಕ್ ಗಳದ್ದು, ಜಿ.ಕೇ. ಸ.ಬ್ಯಾಂಕ್ ಗಳ ಅಭಿವೃದ್ಧಿ ಜವಾಬ್ದಾರಿ ರಾಜ್ಯ ಸಹಕಾರ ಬ್ಯಾಂಕ್ ಗಳದ್ದಾಯಿತು. ಇದರಿಂದ ವರ್ಷ ವರ್ಷಕ್ಕೆ ವ್ಯವಹಾರ ವೃದ್ಧಿಗೊಳಿಸಲು ಸಾಧ್ಯವಾಯಿತು. ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ ಅಲ್ಪಾವಧಿ ಬೆಳೆಸಾಲ ವಿತರಿಸಲು ಆದೇಶಿಸಿತು. ಅದರಂತೆ ಶೇ03 ಬಡ್ಡಿ ಧರದಲ್ಲಿ ಆರಂಭಿಕವಾಗಿ ತದ ನಂತರ ‘ಶೂನ್ಯ’ ಬಡ್ಡಿ ಧರ ದಲ್ಲಿ ವಿತರಿಸಲು ಮತ್ತು ಸಕಾಲದಲ್ಲಿ ಮರು ಪಾವತಿಸುವವರಿಗೆ ಸರ್ಕಾರವೇ ಬಡ್ಡಿ ಭರಿಸುವ ಯೋಜನೆ ಜಾರಿಗೆ ತರಲಾಯಿತು.
ಈ ವಲಯದ (ಮತ್ತು ದೀರ್ಘಾವಧಿ) ಪುನಶ್ವೇತನಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ರಚಿತವಾದದ್ದು ಆರ್ಥಿಕ ತಜ್ಞ ಪ್ರೊ. ವೈದ್ಯನಾಥನ್ ರವರ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿ . ನಮ್ಮ ರಾಜ್ಯದಲ್ಲಿ ಅಲ್ಪಾವಧಿ ಕೃಷಿ ಸಾಲ ಕ್ಷೇತ್ರ ದಲ್ಲಿ ಮಾತ್ರ ಅನುಷ್ಟಾನ ಗೊಳಿಸಲಾಯಿತು. ಅದರಂತೆ ಆರ್ಥಿಕ, ಆಡಳಿತಾತ್ಮಕ/ಕಾನೂನಾತ್ಮಕ, ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ತರಲಾಯಿತು. ವಿಶೇಷ ಲೆಕ್ಕ ಸಂಶೋಧನೆ ಮೂಲಕ ಅನುಭವಿಸಿರುವ ನಷ್ಟಗಳನ್ನು ಆರ್ಥಿಕ ಕೊಡುಗೆ ಮೂಲಕ ಭರಣ ಮಾಡಿಕೊಡಲಾಯಿತು. ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಗೆ ಸ್ವಾತಂತ್ಯ, ಜವಾಬ್ದಾರಿ ಹೊರಿಸಲಾಯಿತು. ( ಸಾಮಾನ್ಯ ಶ್ರೇಣಿ ರದ್ದುಪಡಿಸಲಾಯಿತು.) ಸಾಮಾನ್ಯ ಲೆಕ್ಕ ಪದ್ಧತಿ ಜಾರಿಗೆ ತರಲಾಯಿತು. ಕಂಪ್ಯೂಟರೀಕರಣಕ್ಕೆ ಯತ್ನಿಸಲಾಯಿತು. ಸಮರ್ಪಕ ಬಂಡವಾಳ ಕನಿಷ್ಟ ಶೇ 07 ಕ್ಕೆ ನಿಗದಿ ಪಡೆಸಲಾಯಿತು. ಆಸ್ತಿಗಳ ವರ್ಗಿಕರಣ ಮತ್ತು ತಕ್ಕಂತೆ ಅವಕಾಶಗಳ ಕಲ್ಪಿಸುವಿಕೆ ಕಡ್ಡಾಯವಾಯಿತು. ಹೆಸರಿನಲ್ಲಿ ‘ಬ್ಯಾಂಕ್’ ಪದ ದ ಉಪಯೋಗವನ್ನು ನಿರ್ಭಂದಿಸಲಾಯಿತು. ಯಾವುದೇ ಹೆಸರು ಇದ್ದರೂ ಅದನ್ನು’ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ ಎಂದು ವರ್ಗೀಕರಿಸಲಾಯಿತು. ಕಿರು ಹಣಕಾಸು ಸಾಲಗಳಾದ ‘ಸ್ವಸಹಾಯ ಗುಂಪು’ ಮತ್ತು ‘ಜಂಟಿ ಭಾಧ್ಯತಾ ಗುಂಪು’ ಸಾಲಗಳನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈ ಸಾಲಗಳಿಗೆ ಬಡ್ಡಿ ರಿಯಾಯ್ತಿ ಘೋಷಿಸಿದೆ.
ಕೇಂದ್ರ ಸರ್ಕಾರ ದಲ್ಲಿ ಸಹಕಾರ ಇಲಾಖೆಯನ್ನು ಕೃಷಿ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ ಈ ವಲಯದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗಿದೆ. ಕೇಂದ್ರದ ‘ಕೃಷಿ ಪರಿಕರ ಅಭಿವೃದ್ಧಿ ನಿಧಿ’ಯಿಂದ ನಬಾರ್ಡ್ ಮೂಲಕ ಈ ಸಹಕಾರ ಸಂಘಗಳನ್ನು ‘ವಿವಿಧ ಸೇವ ಕೇಂದ್ರ’ಗಳಾಗಿ ಪರಿವರ್ತಿಸಿ ಪ್ರಾದೇಶಿಕ ಅವಶ್ಯಕತೆ ಯಂತೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ಸಂಗ್ರಹಣೆ, ಸರಬರಾಜು, ಅಂತಿಮವಾಗಿ ರೈತರ ಉತ್ಪನ್ನಕ್ಕೆ ಉತ್ತಮ ಬೆಲೆ ದೊರಕಿಸಿಕೊಡುವುದಾಗಿದೆ. ಈ ಸಂಘಗಳನ್ನು ‘ಗ್ರಾಮೀಣ ವಿವಿದೋದ್ದೇಶ ಅಭಿವೃದ್ಧಿ ಸಹಕಾರ ಸಂಘ’ ಎಂದು ಮಾದರಿ ಉಪನಿಯಮ ಅಳತಡೆದಕೊಳ್ಳಲು ಮತ್ತು ಅದರಂತೆ ಗ್ರಾಮೀಣ ಇತರ ಕಸುಬು ಗಳನ್ನು ಉದಾ: ನೇಕಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಯೊಳಗೆ ತರಲಾಗಿದೆ. ಸಹಕಾರ ಸಂಘಗಳಿಗೆ ಉಚಿತವಾಗಿ ಕಂಪ್ಯೂಟರೀಕರಣ ಗೊಳಿಸುವ ಯೋಜನೆ ಜಾರಿಯಲ್ಲಿದೆ.
2) ದೀರ್ಘಾವಧಿ ಸಾಲ ಕ್ಷೇತ್ರ: ಈ ವಲಯದಲ್ಲಿ ಸಾಲಗಳ ವಸೂಲಾತಿ ಕ್ಲಿಷ್ಟಕರ ವಾದುದರಿಂದ ಸಾಲ ಚಕ್ರ ಮುರಿದು ಬಿದ್ದುದ ರಿಂದ ರಾಷ್ಟ್ರಾದ್ಯಂತ ದುಸ್ಥಿತಿ ತಲುಪಿತು. ಅನೇಕ ರಾಜ್ಯಗಳಲ್ಲಿ ಸಮಾಪನೆ ಗೊಳಿಸಲಾಗಿದೆ ಅಥವ ಅಲ್ಪಾವಧಿ ಸಾಲ ಕ್ಷೇತ್ರ ದೊಡನೆ ವಿಲೀನ ಗೊಳಿಸಲಾಗಿದೆ. ಕರ್ನಾಟಕ ಮತ್ತು ಕೆಲವೇ ರಾಜ್ಯಗಳಲ್ಲಿ ಈ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಗಿದೆ. ಪ್ರಾಥಮಿಕ ಮತ್ತು ಉನ್ನತ ರಾಜ್ಯ ಮಟ್ಟದಲ್ಲಿ ಅವಧಿ ಠೇವಣಿ ಸಂಗ್ರಹಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಕೃಷಿ ಸಾಲ ಅಲ್ಲದೇ ಕೃಷಿಯೇತರ ಸಾಲ ನೀಡಲು ಪ್ರೊತ್ಸಾಹಿಸಲಾಗುತ್ತದೆ. ರೂ ಹತ್ತು ಲಕ್ಷದವರೆಗೆ ರಿಯಾಯ್ತಿ ಬಡ್ಡಿ ಧರ ಯೋಜನೆ ಜಾರಿಯಲ್ಲಿದೆ. ರಾಜ್ಯದಲ್ಲಿ 179 ಪ್ರಾಥಮಿಕ ಬ್ಯಾಂಕ್ ಗಳಿವೆ . ನೂತನವಾಗಿ ಕಿತ್ತೂರು, ನಿಪ್ಪಾಣಿ ಯಲ್ಲಿ ಬ್ಯಾಂಕ್ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಕಂಪ್ಯೂಟರೀಕರಣ ಪ್ರಗತಿಯಲ್ಲಿದೆ.
3) ಕೃಷಿಯೇತರ ಪತ್ತಿನ ವಲಯ: ನೌಕರರ ಮತ್ತು ಸಾರ್ವಜನಿಕ ವಲಯದ ಅನೇಕ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 5000 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳದೇ ಆದ ‘ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ’ ಅಸ್ತಿತ್ವದಲ್ಲಿದೆ. ಸದಸ್ಯ ಸಂಘಗಳ ಮೂಲಕ ಸಹಕಾರ ಶಿಕ್ಷಣ, ತರಬೇತಿ , ಪ್ರಚಾರ ಕಾರ್ಯಗಳನ್ನು ನೆರವೇರಿಸುತ್ತಿರುವುದಲ್ಲದೆ ‘ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ’ದ ಏಜೆನ್ಸಿಯಾಗಿ ತನ್ನ ಸದಸ್ಯ ಸಂಘಗಳ ಮೂಲಕ ಛಾಪಾ ಕಾಗದ ವಿತರಣೆ ಕಾರ್ಯ ಕೈಗೊಂಡಿದೆ.
ಪಟ್ಟಣ ಸಹಕಾರ ಬ್ಯಾಂಕುಗಳು ಸದೃಡವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿಯಾಗಿ ಆಡಳಿತಾತ್ಮಕ ವಿಷಯಗಳಲ್ಲೂ ಆರ್.ಬಿ. ಐ. ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
4) ಮಿನುಗಾರಿಕೆ ವಲಯ: ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಯಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ನೀಲಿ ಕ್ರಾಂತಿಗೆ ಕಾರಣವಾಗಿದೆ.
5) ಎಣ್ಣೆಕಾಳು ಗಳ ವಲಯ: ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ಎಂದೆನಿಸಿಕೊಳ್ಳದಿದ್ದರೂ ಇನ್ನು ಅಸ್ತಿತ್ವ ಉಳಿಸಿಕೊಂದಿದ್ದು ‘ಸಫಲ್’ ಬ್ರಾಂಡ್ ನಲ್ಲಿ ಮಾರುಕಟ್ಟೆ ಯಲ್ಲಿದೆ.
6) ಹಾಲು ಉತ್ಪಾದಕರ ಸಹಕಾರ ವಲಯ: ಕನಾ೯ಟಕದಲ್ಲಿ “ನಂದಿನಿ” ಬ್ರಾಂಡ್ ಅಡಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು “ಅಮುಲ್” ನ ನಂತರದ ಸ್ಥಾನ ಪಡೆದಿದೆ. 15 ಜಿಲ್ಲಾ ಒಕ್ಕೂಟಗಳು, 14500 ಕ್ಕು ಹೆಚ್ಚಿನ ಹಾ. ಉ. ಸ. ಸಂಘಗಳು , ಗರಿಷ್ಟ ಒಂದು ಕೋಟಿ ಲೀಟರ್ ಹಾಲು ಸಂಗ್ರಹಣೆ ದಾಖಲೆ. 140 ಕ್ಕೂ ಹೆಚ್ಚಿನ’ ನಂದಿನಿ’ ಉತ್ಪನ್ನಗಳು. ರೈತರ ಪಾಲಿನ ಅದರಲ್ಲಿ ಗ್ರಾಮೀಣ ಮಹಿಳೆಯರಿಗೆ ಸಂಜೀವಿನಿ ಯಾಗಿದೆ.
7) ಕರ್ನಾಟಕ ರಾಜ್ಯದ ವಿಶೇಷ ; ಕರ್ನಾಟಕ ಸೌಹಾರ್ಧ ಸಹಕಾರ ಚಳುವಳಿ: ಸಹಕಾರ ಸಂಘಗಳು ಸ್ವತಂತ್ರವಾಗಿ ಸ್ವಾಯತ್ತತೆಯಿಂದ ಬೆಳೆಯಬೇಕು. ನಿಯಂತ್ರಣಗಳು , ಹಸ್ತಕ್ಷೇಪಗಳು ಇರಬಾರದು ಎಂಬ 97ನೆಯ ಸಂವಿಧಾನ ತಿದ್ದುಪಡಿ ಆಶಯಗಳು ವ್ಯಕ್ತ ವಾಗುವ ಮೊದಲಿಗೆ ಶ್ರೀ ಅರ್ಧನಾರಿಶ್ವರನ್ ಸಮಿತಿಯು ಸ್ವಾಯತ್ತ ಕಾರ್ಯಚರಣೆಗೆ ಅಮಾಶವಿರುವ ಕಾಯ್ದೆ ಜಾರಿ ಬಗ್ಗೆ ತಿಳಿಸಿತು. ತದನಂತರ ಶ್ರೇ ಚೌಧುರಿ ಬ್ರಹ್ಮ ಪ್ರಕಾಶ್ ವರದಿ ರೀತಿ ಮಾದರಿ ಕಾಯ್ದೆ ರಚಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಪರ್ಯಾಯ ಕಾಯ್ದೆ ಕಲ್ಪಿಸಲು ನಿರ್ದೇಶಿಸಿತು. ಕೇವಲ ಎಂಟು ರಾಜ್ಯಗಳಲ್ಲಿ ಮಾತ್ರ ಜಾರಿಗೆ ತರಲಾಯಿತು. ಆಂಧ್ರ ಪ್ರದೇಶ ಪ್ರಥಮ ರಾಜ್ಯವಾಗಿ ‘ಆದರ್ಶ ಸಹಕಾರ ಕಾಯ್ದೆ ‘ಜಾರಿಗೆ ತುರಿತು. ಕರ್ನಾಟಕದಲ್ಲಿ ತಡವಾಗಿ 1997ರಲ್ಲಿ ಜಾರಿಗೊಳಿಸಿತು. ಇದರ ವಿಶೇಷತೆ ಈ ‘ಸಹಕಾರಿ’ಗಳ ಮಹಾಮಂಡಳ ರಚಿಸುವುದು ಮತ್ತು ಇದಕ್ಕೆ ಶಿಕ್ಷಣ, ತರಬೇತಿ, ಪ್ರಚಾರ ಅಲ್ಲದೇ ಪ್ರಾಥಮಿಕ , ಒಕ್ಕೂಟಗಳ ಮೇಲ್ವಿಚಾರಣಿ ಮತ್ತು ನಿಯಂತ್ರಣ ಅಧಿಕಾರ ವಹಿಸಿರುವುದು.
ರಾಜ್ಯದಲ್ಲಿ ಒಟ್ಟು 6000 ಕ್ಕೂ ಹೆಚ್ಚಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನವು ಪತ್ತಿನ ಕಾರ್ಯ ನಿರ್ವಹಿಸುತ್ತಿವೆ. ಕೃಷಿ, ಮತ್ತು ಇತರೆ ಉತ್ಪನ್ನಗಳ ಮಾರಾಟ ಮತ್ತು ವಿವಿಧ ವಿಭಿನ್ನ ಸ್ವರೂಪದ ಕಾರ್ಯಗಳನ್ನು ನಿರ್ವಹಿಸುತ್ತಿವೆ. ‘ಸಂಯುಕ್ತ ಸಹಕಾರಿ’ (ಮಹಾಮಂಡಳ) ಯು ಉತ್ತುಂಗ ಸಂಸ್ಥೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ‘ಸ್ಟಾಕ್ ಹೊಲ್ಡಿಂಗ್ ಕಾರ್ಪೋರೇಷನ್ ಆನ್ ಇಂಡಿಯ’ದ ಏಜೆನ್ಸಿಯಾಗಿ ಸದಸ್ಯ ಸಹಕಾರಿ ಗಳ ಮೂಲಕ ಛಾಪ ಕಾಗದ ವನ್ನು ವಿತರಿಸುತ್ತಿದೆ.
8) ಇತರೆ ವಲಯಗಳು: ಕರ್ನಾಟಕದಲ್ಲಿ ಮೇಲಿನ ವಲಯಗಳಲ್ಲದೇ ಇತರೆ ವಲಯಗಳು ಸರ್ಕಾರದ ಮೇಲಿನ ಅವಲಂಭನೆಯಿಂದಾಗಿ ಸ್ಥಗಿತ ಗೊಂಡಿವೆ ಇಲ್ಲ ಅವಸಾನದ ಸ್ಥಿತಿಯಲ್ಲಿವೆ. ಸರ್ಕಾರದ ನೀತಿ ಬದಲಾವಣೆಯಿಂದ ಕೆಲವು, ಮತ್ತು ತಮ್ಮ ಸ್ವಂತ ಬಲದ ಮೇಲೆ ವ್ಯವಹಾರ ಮಾಡಲಾರದೇ ಕೆಲವು, ಸಮಾಜದ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಬದಲಾವಣೆ, ಆಧುನಿಕ ಜೀವನ ಶೈಲಿಯ ಬದಲಾವಣೆ , ಉತ್ಪಾದನಾ ಕೇವ್ರದಲ್ಲಿ ಬಂಡವಾಳ ಶಾಹಿಯಿಂದ ಆಗುತ್ತಿರುವ ಉತ್ಪಾದನಾ ಮತ್ತು ಮಾರುಕಟ್ಟೆ ಬರಾಟೆಗಳಿಗೆ ಒಗ್ಗಲಾರದ ಸ್ಪರ್ಧೆ ತಡೆಯಲಾರದೆ ನಲುಗಿವೆ ಮತ್ತು ನಶಿಸಿವೆ.
¡¡¡. ಮುಂದೇನು?
ಭಾರತದಲ್ಲಿ ಸಹಕಾರ ಚಳುವಳಿ ಸರ್ಕಾರದ ಆಶ್ರಯದಲ್ಲೇ ಬೆಳೆದು ಬಂದು 90ರ ದಶಕ ದಲ್ಲಿ ಆದ ಬೆಳವಣಿಗೆಯಿಂದ ಸಹಕಾರ ವಲಯ ಮತ್ತು ಅದರಲ್ಲಿದ್ದ ವೈವಿಧ್ಯಮತೆ, ಮತ್ತು ಪ್ರಮುಖವಾಗಿ’ ತಳಗಿನಿಂದ ಆರ್ಥಿಕ ಅಭಿವೃದ್ಧಿ'(Economic-growth , Bottom up approach) ಸಾಧ್ಯವಿಲ್ಲ ಎಂದಾಯಿತೇ? ಆರಂಭಿಕವಾಗಿ ಸರ್ಕಾರದ ಬೆಂಬಲ ಪಡೆದು ತದನಂತರದಲ್ಲಿ ತನ್ನದೇ ಆದ ನೆಲೆಯನ್ನು ಕಂಡುಕೊಳ್ಳುವಲ್ಲಿ ವಿಫಲವಾಯಿತೆ? ರಾಷ್ಟ್ರದಲ್ಲಿ, ಮತ್ತು ರಾಜ್ಯದಲ್ಲಿ ಒಂದೊಂದು ಪ್ರದೇಶದಲ್ಲಿ ವಿಭಿನ್ನವಾಗಿ ಸಹಕಾರ ನೆಲೆ ಕಂಡಿರುವುದು, ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಅಲ್ಲಿನ ಭೌಗೋಳಿಕ , ಆರ್ಥಿಕ ಸಾಮಾಜಿಕ , ಸಾಂಸ್ಕೃತಿಕ ಹಿನ್ನೆಲೆಗಳು , ಸಂಘಟನಾ ಶಕ್ತಿ, ನಾಯಕತ್ವ , ಸಹ ಕಾರದ ಬಗ್ಗೆ ಅರಿವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಶತಮಾನ ತಾಂತ್ರಿಕ ಯುಗ, ವೇಗದ ಯುಗ, ಜ್ಞಾನದ ಯುಗ. ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಅವರು ಉಳಿಯುತ್ತಾರೆ ಇತರರು ಅಳಿಯುತ್ತಾರೆ. ಭಾರತದ ಈಗಿನ ಪರಿಸ್ಥಿತಿಯಲ್ಲಿ ಬಂಡವಾಳ ಹೂಡಿಕೆ , ನೂತನ ಮಾರುಕಟ್ಟೆ ಸೃಷ್ಟಿ, ಬಂಡವಾಳದಿಂದ ಬಂಡವಾಳದ ಬೆಳವಣಿಗೆ ಇದರಿಂದ ಶ್ರೀಮಂತ ವರ್ಗದ ಸೃಷ್ಟಿ. ಭಾರತದ 2024 ರ ಜಿ. ಡಿ. ಪಿ 04 ಟ್ರಿಲಿಯನ್ ಡಾಲರ್(ರೂ 330 ಲಕ್ಷ ಕೋಟಿ) ಭಾರತದ ಜನಸಂಖ್ಯೆ 140 ಕೋಟಿ. ಅಂದರೆ ಪ್ರತಿ ಭಾರತೀಯ ಪ್ರಜೆಯ ಸರಾಸರಿ ಆಧಾಯ ಅಂದಾಜು ಡಾ 2800/- . ಆದರೆ ಸಂಪತ್ತು ಹಂಚಿಕೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇದು ತಪ್ಪುದಾರಿಗೆ ಎಳೆಯುತ್ತದೆ. ಜನಸಂಖ್ಯೆಯ ಮೇಲಿನ ಶೇಂ 5 ಜನ 2.5 ಟ್ರಿಲಿಯನ್ ಡಾಲರ್ ಸಂಪತ್ತು ಹೊಂದಿರುತ್ತಾರೆ. ಇದನ್ನೆ ನಾದರೂ ಹೊರತು ಪಡಿಸಿದರೆ ಸರಾಸರಿ ಆಧಾಯ ಡಾ. 1130/- ಕ್ಕೆ ಇಳಿಯುತ್ತದೆ. ಇದರಿಂದ ಬಾರತ ಅತ್ಯಂತ ಶ್ರೀಮಂತರ ಬಡ ರಾಷ್ಟ್ರ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ.
ವಿಶ್ವ ಸಂಸ್ಥೆ ಇತ್ತೀಚಿನ ಒಂದು ವರದಿ ರೀತಿ ಭಾರತ ವನ್ನು’ ಮಧ್ಯಮ ಆದಾಯ’ ರಾಷ್ಟ್ರ ಎಂದು ಗುರುತಿಸಿದೆ. ತಾನು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸರಾಸರಿ ಆಧಾಯ ತಲುಪಲು ಅನೇಕ ದಶಕಗಳೇ ಬೇಕಾಗುತ್ತದೆ. ಭಾರತದ ಹಾಲಿ ಸರಾಸರಿ ಆಧಾಯ ವಾರ್ಷಿಕ ರೂ 2.13 ಲಕ್ಷ ಅಮೆರಿಕ ರೂ 67. 42 ಲಕ್ಷ, ಹೀಗಿರುವ ಪರಿಸ್ಥಿತಿಯಲ್ಲಿ ‘ಅಸಮಾನತೆ’ಯ ಸಮಾಜ ನಿರ್ಮಾಣ ಭಾರತದಲ್ಲಿ ಆಗುತ್ತಿರುವುದು ನಿಚ್ಛಳ. ಇದರಿಂದ ಆಗಬಹುದಾದ ದುಷ್ಟರಿಣಾಮಗಳು ಅನೇಕ. ಇದರ ತಡೆಯುವಿಕೆಗೆ ಇರುವ ಮಾರ್ಗ ಬಡ ಮತ್ತು ಮಧ್ಯಮ ವರ್ಗದ ಜನತೆ ಸಂಘಟಾತ್ಮಕವಾಗಿ ಒಗ್ಗೂಡಿ ಸಹಕಾರದ ನೆಲೆಯಲ್ಲಿ ಉತ್ತರ ಕಂಡುಕೊಳ್ಳುವುದೇ ಆಗಿದೆ.
ಭಾರತ ‘ವಿಶ್ವ ಗುರು’ ಆಗ ಬೇಕೆಂಬುದು ನಮ್ಮ ಆಶಯ , ಈ ಆಶಯ ಈಡೇರಿಸಲು ಭಾರತವು ಸದೃಡ ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕು. ಇದಕ್ಕಾಗಿ ಆರ್ಥಿಕ ಪ್ರಗತಿಯ ಲಾಭ ಕೆಲವರಿಗೆ ಮಾತ್ರ ದೊರಕಿ ಬಹುತೇಕ ಜನಸಮುದಾಯ ಇದರಿಂದ ಸದೃಡ ಭಾರತ ನಿರ್ಮಾಣ ಅಸಾಧ್ಯ . ಎಲ್ಲ ನಾಗರೀಕರಿಗೂ ಸಮಾನ ಅವಕಾಶ ದೊರೆತು ಸಮಾನತೆ ಸಾಧಿಸುವಲ್ಲಿ ಸಾಧ್ಯವಾಗಬೇಕು. ಬಡವ ಬಲ್ಲಿದನ ನಡುವಿನ ಅಂತರ ಕಡಿಮೆ ಯಾಗ ಬೇಕು. ಇದು ಸಹಕಾರ ವಲಯದಿಂದ ಮಾತ್ರ ಸಾಧ್ಯ. ‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷ ವಾಕ್ಯವನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಅದರ ಪ್ರೊತ್ಸಾಹದಿಂದ ಉತ್ತುಂಗ ಮಟ್ಟದಲ್ಲಿ ‘ ರಪ್ತು- ಆಮದು’ ಕೃಷಿ ಉತ್ಪನ್ನಗಳ ಮಾರಾಟ , ಸಾವಯವ ಉತ್ಪನ್ನ ಮಾರಾಟ ಮುಂತಾದ ಸಹಕಾರ ಸಂಸ್ಥೆಗಳನ್ನು ಆರಂಭಿಸಿದೆ. ಈ ಸಂಸ್ಥೆಗಳಿಗೆ ಪೂರಕವಾಗಿ ಕೆಳಹಂತದ ಸಹಕಾರ ಜಾಲ ಬಲವಯುತ ವಾಗಬೇಕಾಗಿದೆ. ಗ್ರಾಮೀಣ ಪ್ರದೇಶಗಳು ಉತ್ಪಾದನ ಕ್ಷೇತ್ರಗಳು ಮತ್ತು ನಗರ ಪ್ರದೇಶಗಳು ಬಳಕೆ ಕೇಂದ್ರಗಳಾಗಿ ರೂಪಿತವಾಗುತ್ತಿವೆ. ಇದಕ್ಕೆ ಪೂರಕವಾಗಿ ಹಾಲಿನ ಕ್ಷೇತ್ರದಲ್ಲಿ ‘ಅಮುಲ್’ಮಾದರಿ ಯಶಸ್ವಿಯಾಗಿರುವುದು ನಮ್ಮ ಮುಂದಿದೆ. ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಆರಂಭಿಕವಾಗಿ ಯಶಸ್ವಿಯಾದದ್ದು ಈಗ ನಶಿಸಿರುತ್ತಿರುವುದಕ್ಕೆ ಕಾರಣಗಳೇನು? ದವಸದಾನ್ಯ, ಹಣ್ಣು ತರಕಾರಿಗಳಲ್ಲಿ ನಾವೇಕೆ ಯಶಸ್ವಿಯಾಗಿಲ್ಲ? ಸಹಕಾರಿ ತತ್ವಗಳನ್ನೇ ಅಳವಡಿಸಿ ರೈತ ಉತ್ಪಾದನಾ ಸಂಸ್ಥೆಗಳ ಸ್ಥಾಪನೆಗೆ ಉತ್ತೇ ಜನಗಳೇಕೆ? ಎಂಬ ಪ್ರಶ್ನೆಗಳು ನಮ್ಮ ಮುಂದೆ ಉದ್ಭವಿಸುತ್ತವೆ. ಅಲ್ಲಲ್ಲಿ ಕಂಡು ಬರುವ ಸಹಕಾರ ಮಾದರಿಗಳು ಎಲ್ಲೆಡೆ ಯಶಸ್ವಿಯಾಗುತ್ತಿಲ್ಲವೇಕೆ? ನಗರಗಳಲ್ಲಿ ಅಸಂಘಟಿತ ಕಾರ್ಮಿಕ ವರ್ಗ ಎಲ್ಲ ವಲಯಗಳಲ್ಲಿ ಬೆಳೆಯುತ್ತಿದ್ದು ಅವರ ಭವಿಷ್ಯ ದೃಷ್ಟಿಯಿಂದ ಈ ಸಹಕಾರ ವಲಯ ತಮಗೆ ತಕ್ಕುದ್ದಾಗಿದೆ ಎಂದು ಅವರು ಅರಿತು ಈ ಮಾರ್ಗದಲ್ಲಿ ನಡೆಯುವಂತೆ ಮಾಡುವುದಾದರೂ ಹೇಗೆ? ಯುರೋಪ್ ಖಂಡದಲ್ಲಿ ಬ್ಯಾಂಕಿಂಗ್ , ಗ್ರಾಹಕರ, ವಿಮೆ ಮುಂತಾದ ಅನೇಕ ವಲಯಗಳಲ್ಲಿ ಖಾಸಗಿಗೆ ಪೈಪೋಟಿಯಾಗಿ ನಿಂತು ಅವುಗಳಿಗಿಂತ ಹೆಚ್ಚಿನ ವ್ಯವಹಾರಗಳು ಸಹಕಾರ ವಲಯದಲ್ಲಿ ನಡೆಯುತ್ತಿರುವುವಕ್ಕೆ ಕಾರಣಗಳಾದರು. ಏನು? ನಗರ ಪ್ರದೇಶಗಳಲ್ಲಿ ಬಡ ಮತ್ತು ಮಧ್ಯಮವರ್ಗ ಸಂಘಟಿತರಾಗಿ ಪತ್ತಿನ ಸಹಕಾರಿ ಸಂಘಗಳನ್ನು/ಬ್ಯಾಂಕ್ ಗಳನ್ನು ನಡೆಸಿ ಕೊಂಡು ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ . ಇತರೆ ವಲಯಗಳು ಮಂಕಾಗಿವೆ. ಸಣ್ಣ ಕೈಗಾರಿಕೆಗಾಗಿ ನಗರ ಪ್ರದೇಶಗಳ ಹೊರವಲಯಗಳಲ್ಲಿ ‘ಸಹಕಾರ ಕೈಗಾರಿಕೆ ಎಸ್ಟೇಟ್’ಗಳು ಅಸ್ತಿತ್ವದಲ್ಲಿದ್ದವು. ಪುನಃ ಈಗಿನ ಅಗತ್ಯತೆ ಗನುಸಾರ ಕೈಗಾರಿಕೆ ಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಸಹಕಾರ ಸಂಘಗಳ ಸ್ಥಾಪನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಅಲ್ಲದೆ ಕಾರ್ಮಿಕ ಶೋಷಣೆ ತಪ್ಪುತ್ತದೆ. ಭಾರತದ ಸಾಮರ್ಥ್ಯ ಇಂದಿನ ಯುವ ಜನಾಂಗ ಅವರನ್ನು ಈ ವಲಯದಲ್ಲಿ ತೊಡಗಿಸಿಕೊಳ್ಳಬೇಕು. ಸಹಕಾರ ವಲಯ ಆಂದೋಲನದ ಸ್ವರೂಪವನ್ನು ಪಡೆಯಬೇಕಾಗಿದೆ. ಇದಕ್ಕೆ ಸಹಕಾರ ಇಲಾಖೆಯು ನಿಯಂತ್ರಣ ಇಲಾಖೆಯಂತೆ ವರ್ತಿಸದೆ ಅಭಿವೃದ್ಧಿ ಇಲಾಖೆಯಂತೆ ವರ್ತಿಸಬೇಕಾಗಿದೆ. ನಿಬಂಧಕರು ಗೆಳೆಯರು, ಹಿತಚಿಂತಕ , ಮಾರ್ಗದರ್ಶಿ, ಎಂದು ಪರಿಗಣಿಸಲಾಗಿದೆ. ಅದರಂತೆ ವರ್ತಿಸಿದರೆ ಈ ವಲಯದಲ್ಲಿ ನೂತನ ಆವಿಷ್ಕಾರಗಳನ್ನು, ವಿನೂತನ ಉದ್ಯೋಗಾಂಕ್ಷೆ ಯನ್ನುಕಾಣಬಹುದಾಗಿದೆ. ಇದರಿಂದ ಮಾತ್ರ ಮುಂದೇನು? ಎನ್ನುವ ಪ್ರಶ್ನೆಗೆ ಉತ್ತರ ದೊರಕುತ್ತದೆ. ಸಮತಾ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಸಹಕಾರ ಸಂಘಗಳ ಅಪರ ನಿಬಂಧಕರು(ನಿವೃತ್ತ) ನಂ 281, ಬಾಲಾಜಿ ಹೆಚ್ ಬಿ ಸಿ ಎಸ್ ಲೇಔಟ್ ವಾಜರಹಳ್ಳಿ ಕನಕಪುರ ರಸ್ತೆ, ಬೆಂಗಳೂರು 56019