ಸಹಕಾರ ಸಂಘ ಅಂದಾಕ್ಷಣ ಸಾಮಾನ್ಯವಾಗಿ ಮುನ್ನೆಲೆಯಲ್ಲಿ ಕಾಣುವುದು ಸಾಲ ಸೌಲಭ್ಯದ ವ್ಯವಸ್ಥೆ. ಆದರೆ ಸಹಕಾರ ಜನರ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವ ವಿಫುಲ ಅವಕಾಶವನ್ನು ಹೊಂದಿದೆ.1844ರಲ್ಲಿ ಇಂಗ್ಲೇಂಡಿನ ರಾಕ್ ಡೇಲ್ ಪಟ್ಟಣದಲ್ಲಿ ನೇಕಾರರುˌ ಬಡಗಿಗಳುˌ ದರ್ಜಿಗಳು ಮುಂತಾದ 28ಮಂದಿ ಕುಶಲಕರ್ಮಿಗಳು ರಾಬರ್ಟ್ ಓವೆನ್ ನೇತೃತ್ವದಲ್ಲಿ “ರಾಕ್ ಡೇಲ್ ಇಕ್ವಿಟೇಬಲ್ ಸೊಸಾೈಟಿ ಆಫ್ ಪಯೋನಿಯರ್ಸ್” ಹುಟ್ಟುಹಾಕಿದ್ದು ಪ್ರಥಮ” ಗ್ರಾಹಕ ಸಹಕಾರಿ ಸಂಘ” ಅನ್ನುವಂತಾದ್ದು ಇತಿಹಾಸ. ಜಗತ್ತಿನ ಈ ಪ್ರಥಮ ಸಹಕಾರಿ ಸಂಘದ ಸ್ಥಾಪನೆಯ ಪ್ರೇರಣೆಯಿಂದ ಸಹಕಾರ ಚಳವಳಿ ಜಗತ್ತಿನಾದ್ಯಂತ ಪಸರಿಸಿ ಬಂಡವಾಳವಾದ ಸಮಾಜವಾದದ ಮಧ್ಯದ ಸುವರ್ಣ ಮಾಧ್ಯಮವಾಗಿ ಜನಸಾಮಾನ್ಯರ ಜೀವನದಲ್ಲಿ ಬೆಳಕುಹರಿಸಿದೆ.
1850ರಲ್ಲಿ ಜರ್ಮನಿಯ ಡಿಲಿಟ್ಸ್ ಪಟ್ಟಣದಲ್ಲಿ ಹರ್ಮನ್ ಶೂಲ್ಸ್ ನೇತೃತ್ವದಲ್ಲಿ ವ್ಯಾಪಾರಿವರ್ಗ ಪಟ್ಟಣ ಸಹಕಾರ ಸಂಘವನ್ನು ಹುಟ್ಟುಹಾಕಿದರು. ದುಡಿಯುವ ವರ್ಗ ಹಾಗೂ ನಗರಪ್ರದೇಶ ಕೇಂದ್ರವಾಗಿ ಆರಂಭವಾದ ಸಹಕಾರ ಚಳವಳಿ ಜಗತ್ತಿನಾದ್ಯಂತ ಕಳೆದ 180 ವರ್ಷಗಳಲ್ಲಿ ವಿವಿಧ ಉದ್ದೇಶಗಳನ್ನು ಇಟ್ಟುಕೊಂಡು ಪಸರಿಸಿ ಜನರ ಜೀವನಾವಶ್ಯಕ ಚಟುವಟಿಕೆಗಳ ಕೇಂದ್ರವಾಗಿದೆ.ಇಂದು ಜಗತ್ತಿನಲ್ಲಿ ಜಪಾನ್ ಗ್ರಾಹಕ ಸಹಕಾರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದುˌ ಗುಣಮಟ್ಟˌ ಶಿಸ್ತು ˌದಕ್ಷತೆಯನ್ನು ಹೊಂದಿರುವ ಕಾರಣ ಗಾತ್ರದಲ್ಲಿ ಸಣ್ಣ ರಾಷ್ಟ್ರವಾದರೂ ವಿಶೇಷ ಸ್ಥಾನಮಾನ ಹೊಂದಿದೆ.
ಕಡಿಮೆ ಲಾಭ ˌಗ್ರಾಹಕರಿಗೆ ವಿಶೇಷ ಸೇವೆಯೇ ಮುಖ್ಯ ಉದ್ದೇಶವಾಗಿಟ್ಟು ಗ್ರಾಹಕರ ದೈನಂದಿನ ಅವಶ್ಯಕತೆಯ ಸಮಗ್ರ ಸಾಮಾಗ್ರಿಗಳನ್ನು ಪೂರೈಸುವ ಕೇಂದ್ರ ಗ್ರಾಹಕರ ಸಹಕಾರಿ ಸಂಘ. ಗ್ರಾಹಕ ವಸ್ತುಗಳ ಉತ್ಪಾದನೆˌ ರೈತರುˌ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಖರೀದಿˌ ಮಾರಾಟ ಮೂಲಕ ಎಲ್ಲಾ ವ್ಯವಹಾರಗಳನ್ನು ಇಂತಹ ಸಹಕಾರಿ ಸಂಘಗಳಲ್ಲಿ ಕೈಗೊಳ್ಳಲಾಗುತ್ತದೆ. ನಮ್ಮ ದೇಶದಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿ ರಾಷ್ಟ್ರೀಯ ಗ್ರಾಹಕರ ಸಹಕಾರಿ ಫೆಡರೇಶನ್ (NCCF) ಅಸ್ತಿತ್ವ ದಲ್ಲಿದ್ದು ಕೆಳಗಿನ ಹಂತದ ಎಲ್ಲಾ ಗ್ರಾಹಕ ಸಹಕಾರಿ ಸಂಘಗಳ ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ˌಮಧ್ಯವರ್ತಿ ಗ್ರಾಹಕ ಸಹಕಾರಿ ಸಂಘಗಳು ಈ ಶೃಂಗ ಸಂಸ್ಥೆಯ ಸದಸ್ಯತ್ವ ಹೊಂದಲು ಅವಕಾಶವಿದ್ದುˌ ಪ್ರಾಥಮಿಕ ಗ್ರಾಹಕ ಸಹಕಾರಿ ಸಂಘಗಳು ಮಧ್ಯವರ್ತಿ ಗ್ರಾಹಕ ಸಹಕಾರಿ ಫೆಡರೇಶನ್ ನ ಸದಸ್ಯತ್ವ ಹೊಂದಿ ತನ್ಮೂಲಕ ಒಂದಕ್ಕೊಂದು ಸಂಬಂಧ ಬೆಳೆಸಿ ಸಹಕಾರಿ ನೀತಿ ಅನುಪಾಲನೆಗೆ ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಅಮುಲ್ ˌಇಪ್ಕೊ ,ಕೇರಳ ದಿನೇಶ ಬೀಡಿ ಕಾರ್ಮಿಕರ ಮಾರಾಟ ಫೆಡರೇಶನ್ˌ ಇಂಡಿಯನ್ ಕಾಫಿ ಹೌಸ್ˌ ಹಾಲು ಉತ್ಪಾದನೆಯ ಕರ್ನಾಟಕದ KMF, ಕೇರಳದ MILMA ಕರ್ನಾಟಕದ ತರಕಾರಿ ಹಣ್ಣು ಹಂಪಲು ಕ್ಷೇತ್ರದ HOPCOMS ˌಕರ್ನಾಟಕದ ಅಡಿಕೆ ಬೆಳೆಗಾರರ CAMPCOˌ MAMCOS, TSS ಮುಂತಾದವುˌ ಬಲಿಷ್ಟ ಸಹಕಾರಿ ಸಂಘಗಳು. ಇವು ಎಲ್ಲವು ರೈತರ ಉತ್ಪಾದನೆಯನ್ನು ಉತ್ತಮ ದರಕ್ಕೆ ಖರೀದಿಸಿ ಸಂಸ್ಕರಣೆ ಮಾಡಿ ಮಾರಾಟ ಮಾಡುವ ಸಹಕಾರ ಸಂಘಗಳಾಗಿದ್ದು ಹಳ್ಳಿ ಅಥವಾ ಪಟ್ಟಣದ ಗ್ರಾಹಕರ ಹಿತಾಸಕ್ತಿಯನ್ನು ಹೊಂದಿದ್ದು ಸರ್ವ ಸದಸ್ಯ ನಿಯಂತ್ರಿತ ಅನ್ನುವಂತಹ ವೈಶಿಷ್ಟ್ಯತೆಯನ್ನು ಹೊಂದಿದೆ. ದೇಶದಲ್ಲಿ ಇನ್ನೂ ಹಲವಾರು ವಿಶೇಷ ಉದ್ದೇಶದ ಗ್ರಾಹಕ ಸಹಕಾರಿ ಸಂಘಗಳಿದ್ದುˌ ಪ್ರಾದೇಶಿಕವಾರು ಅವಶ್ಯಕತೆˌ ವ್ಯವಹಾರದ ಪ್ರಾಮುಖ್ಯತೆಯನ್ನು ಗಮನಿಸಿ ಕಾರ್ಯ ನಿರ್ವಹಿಸುತ್ತಿವೆ.
ಅಂತರಾಷ್ಟ್ರೀಯ ಸಹಕಾರಿ ಒಕ್ಕೂಟ ರಚಿಸಿದ ಸಹಕಾರದ ಏಳನೇ ನೀತಿ “ಸಾಮಾಜಿಕ ಕಳಕಳಿ” . ಸಹಕಾರ ಸಂಸ್ಥೆ ಸಾಮಾಜಿಕ ಬದ್ದತೆಯುಳ್ಳ ವ್ಯಾಪಾರೀ ಸಂಸ್ಥೆಯಾಗಬೇಕೇ ಹೊರತು ಕೇವಲ ವ್ಯಾಪಾರಿ ಸಂಸ್ಥೆಯಾದರೆ ಜಾಗತಿಕ ಸಹಕಾರ ನೀತಿಗೆ ವಿರುದ್ದವಾಗಿˌ ಸಹಕಾರ ಸಿದ್ದಾಂತದಡಿ ಯಶಸ್ವಿನ ಪಥ ಸಾಗಲು ಅಸಾಧ್ಯ.
1946ರಲ್ಲಿ ಗುಜರಾತಿನ ಖೇಡಾ ಜಿಲ್ಲೆಯ ಆನಂದ್ ನಲ್ಲಿ ಶ್ರೀ ವಲ್ಲಭಭಾಯಿ ಪಟೇಲರ ಮಾರ್ಗದರ್ಶನˌ ಶ್ರೀ ಮೊರಾರ್ಜಿ ದೇಸಾಯಿಯವರ ಮುಂದಾಳತ್ವˌ ಶ್ರೀ ತ್ರಿಭುವನ ದಾಸ್ ರವರ ನೇತೃತ್ವದಲ್ಲಿ ಆರಂಭ ಗೊಂಡು ಶ್ರೀವರ್ಗಿಸ್ ಕುರಿಯನ್ ಮುನ್ನಡೆಸಿದ ಹಾಲು ಮಾರುಕಟ್ಟೆಯನ್ನು ಉದ್ದೇಶಿಸಿ ಆರಂಭವಾದ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್(ಅಮುಲ್) ಸಹಕಾರಿ ಸಂಸ್ಥೆ ಜಗತ್ತಿನ ಅತ್ಯಂತ ದೊಡ್ಡ ಶ್ವೇತ (ಹಾಲು)ಕ್ರಾಂತಿಯ ಸಹಕಾರಿ ಸಂಘ. ಅದೇ ರೀತಿಯ ದೆಹಲಿ ಕೇಂದ್ರವಾಗಿರುವ ರಸಗೊಬ್ಬರ ಉತ್ಪಾದನೆ ಯ”ಇಪ್ಕೊ” ಬಲಿಷ್ಟ ಸಂಸ್ಥೆ. ಕರಾವಳಿˌ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಮಾರುಕಟ್ಟೆ ಖಾಸಗಿಯವರ ಹಿಡಿತದಿಂದಾಗಿ 1970ರ ದಶಕದಲ್ಲಿ ಅಧಃಪತನಗೊಂಡಾಗ ಶ್ರೀ ವಾರಣಾಶಿ ಸುಬ್ರಾಯ ಭಟ್ಟರ ನೇತೃತ್ವದಲ್ಲಿ ಸ್ಥಾಪನೆಯಾದ CAMPCO ಸಂಸ್ಥೆ ಅಡಿಕೆ ಮಾರುಕಟ್ಟೆಗೆ ಸ್ಥಿರ ಹಾಗೂ ಮುನ್ನಡೆಯ ಮಾರುಕಟ್ಟೆ ಒದಗಿಸುವಲ್ಲಿ ಯಶಸ್ವಿಯಾಗಿದೆ. ಬೀಡಿ ಕಾರ್ಮಿಕರ ಹಿತರಕ್ಷಣೆಗಾಗಿ ಕೇರಳದಲ್ಲಿ ಆರಂಭವಾದ ದಿನೇಶ ಬೀಡಿ ಸಹಕಾರಿ ಸಂಘ ಕೇರಳದಾದ್ಯಂತ ಪಸರಿಸಿˌ ಬಡ ವರ ಹಿತ ಕಾಪಾಡುವಲ್ಲಿ ಸಹಕಾರಿ ಸಂಸ್ಥೆ ಯಶಸ್ವಿಯಾಗಿರುವುದನ್ನು ಎತ್ತಿ ತೋರಿಸುತ್ತಿದೆ.
1940ರ ಜಗತ್ತಿನ ಎರಡನೇ ಮಹಾಯುದ್ದದ ಕಾಲದಲ್ಲಿ ದೇಶದಲ್ಲಿ ಆಹಾರದ ಕೊರತೆ ಯುಂಟಾದಾಗ ಆಹಾರವನ್ನು ಬಡವರಿಗೆ ವ್ಯವಸ್ಥಿತವಾಗಿ ಹಂಚುದಕ್ಕೋಸ್ಕರ ಗ್ರಾಹಕರ ಸಹಕಾರಿ ಸಂಘಗಳು ಆರಂಭವಾಗಿ ಅವುಗಳ ಮಧ್ಯವರ್ತಿ ಕೇಂದ್ರಗಳಾಗಿ ಜಿಲ್ಲಾ ಸಗಟು ಮಾರಾಟ ಸಹಕಾರಿ ಸಂಘಗಳು ಕಾರ್ಯಾರಂಭ ಮಾಡಿದವು. ಇಂದು ಕೆಲವು ಸಗಟು ಮಾರಾಟ ಸಹಕಾರ ಸಂಘಗಳು ಜನತಾ ಬಜಾರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು ಸರ್ವ ಸಗಟಿನ ಮಳಿಗೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರ ಪ್ರೇರಣೆಯೊ ಎಂಬಂತೆ ಕಳೆದ 30-40 ವರ್ಷಗಳಿಂದ ಖಾಸಗಿ ಮ್ಹಾಲುಗಳುˌಸ್ವಯಂ ವಸ್ತುಗಳ ಆಯ್ಕೆಯ ಡಿಪಾರ್ಟ್ ಮೆಂಟಲ್ ಸ್ಟೋರ್ಸ್ ದೇಶದಾದ್ಯಂತ ಭರ್ಜರಿಯಾಗಿ ಕಾರ್ಯನಿರ್ವಹಿಸುತ್ತಿವೆ.ಟೆಲಿಫೋನ್ˌ ವಿದ್ಯುತ್ ಸೇವೆˌಮ್ಯೂಚುವಲ್ ಇನ್ಯೂರೆನ್ಸ್ˌ L P gas ಮುಂತಾದವ ಗ್ರಾಹಕ ವಲಯದಲ್ಲೂ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.ದೇಶದಲ್ಲಿ ಹಲವಾರು ಗ್ರಾಹಕರ ಸಹಕಾರಿ ಸಂಘಗಳು ವಿವಿಧ ಉದ್ದೇಶಗಳನ್ನು ಹೊಂದಿ ಯಶಸ್ವಿರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಹಕಾರಿ ಆಂದೋಲನದ ಪ್ರಾಮುಖ್ಯತೆಗೆ ಸಾಕ್ಷಿ. ಗ್ರಾಹಕ ಸಹಕಾರಿ ಸಂಘಗಳು ಯಶಸ್ವಿ ಯಾಗಬೇಕಾದರೆ ಅವುಗಳ ಮುಂದೆ ಹಲವು ಸ್ಪರ್ಧಾತ್ಮಕ ಅಂಶಗಳಿದ್ದುˌ ಸಾಮಾಗ್ರಿಗಳ ಗುಣಮಟ್ಟ ಕಾಪಾಡುವುದುˌ ಅಗ್ಗದ ದರˌ ಗ್ರಾಹಕರನ್ನು ಆಕರ್ಷಿಸುವ ಶಿಬಂಧಿˌ ಖಾಸಗಿ ವ್ಯಾಪಾರಸ್ತರ ಪೈಪೋಟಿಯನ್ನು ನಿಭಾಯಿಸುವುದು ಪ್ರಮುಖ ಅಂಶಗಳು. ಈ ಎಲ್ಲದರ ಬಗ್ಗೆ ಸದಾ ಎಲ್ಲಾ ಕೋನಗಳಿಂದ ಎಚ್ಚರಿಕೆಯಿಂದ ಗಮನಹರಿಸುವ ಆಡಳಿತ ಮಂಡಳಿ ಇದ್ದಾಗ ಮಾತ್ರ ಸಹಕಾರಿ ಗ್ರಾಹಕ ವ್ಯವಹಾರ ಯಶಸ್ವಿಯಾಗಲು ಸಾಧ್ಯ.
ಕೇಂದ್ರ ಸರಕಾರ ಸಹಕಾರ ಸಿದ್ದಾಂತದ ಮೂಲಕ ಗ್ರಾಮೀಣ ಜನರ ಸರ್ವಾಂಗೀಣ ಅವಶ್ಯಕತೆಯನ್ನು ಪೂರೈಸಲು ಈಗಾಗಲೇ ಸಿದ್ದತೆ ನಡೆಸಿದೆ. ಕೇಂದ್ರದಲ್ಲಿ ಸಹಕಾರ ಖಾತೆಗೆ ಬಲನೀಡಿ ಶ್ರೀ ಅಮಿತ್ ಶಾರವರು ಸಹಕಾರ ಖಾತೆಯ ಸಚಿವರಾದ ಬಳಿಕ ಸಾಲ ˌಠೇವಣಾತಿ ವ್ಯವಹಾರದ ಜತೆಗೆ ಗ್ರಾಹಕನ ಪ್ರತಿಯೊಂದು ಅವಶ್ಯಕತೆಯನ್ನು ಗ್ರಾಮೀಣ ಸಹಕಾರಿ ಸಂಘದಲ್ಲಿ ಒಂದೇ ಸೂರಿನಡಿ ಕಲ್ಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಇದು ದೇಶದ ಸಹಕಾರ ಚಳವಳಿಯಲ್ಲಿ ಆಗುತ್ತಿರುವ ಇನ್ನೊಂದುಕ್ರಾಂತಿ.
ರೈತನ ಉತ್ಪನ್ನದ ಮಾರುಕಟ್ಟೆ ಇರಬಹುದುˌ ಜೀವನಾಶ್ಯಕ ವಸ್ತುಗಳಿರಬಹುದುˌ ಎಲ್ಲವು ಗ್ರಾಮಕೇಂದ್ರದ ಏಕ ಸೂರಿನಡಿ ನಡೆಯಬೇಕು.ˌಜೀನಸುˌ ದೈನಂದಿನ ಜೀವನಾಶ್ಯಕ ವಸ್ತುಗಳುˌ ಗೃಹೋಪಯೋಗಿ ಸಾಮಾಗ್ರಿಗಳುˌ ಹಾರ್ಡ್ ವೇರ್ˌ ಪ್ಲಾಸ್ಟಿಕ್ ವಸ್ತುಗಳು ಸ್ಟೀಲುˌ ಅಲ್ಯುಮಿನಿಯಂ ಪಾತ್ರೆಗಳುˌ ರಸಗೊಬ್ಬರˌ ಕ್ರಿಮಿನಾಶಕˌ ಸಾವಯವ ಗೊಬ್ಬರˌ ವ್ಯವಸಾಯದ ಸಣ್ಣಪುಟ್ಟ ಮೆಶೀನರಿ ಹಾಗೂ ಉಪಕರಣಗಳುˌ ರಬ್ಬರು ಕೃಷಿಯ ಪರಿಕರಗಳುˌಕೃಷಿ ನೀರಾವರಿ ಪೈಪುಗಳು ಹಾಗೂ ಅವುಗಳ ಬಿಡಿಭಾಗˌ ಸರಕಾರಿ ಪಡಿತರ ವಿತರಣೆ , ಇನ್ನಿತರ ಹಲವಾರು ಜನಸಾಮಾನ್ಯರ ಅವಶ್ಯಕ ವಸ್ತುಗಳುˌ ಔಷಧಿ ಅಂಗಡಿˌ ಚಪ್ಪಲಿ ಅಂಗಡಿˌ ಜವಳಿ ಮಾರಾಟ, ಬೇಕರಿ ತಿಂಡಿಗಳು ಮುಂತಾದ ಸರ್ವವಸ್ತುಗಳು ಕೃಷಿ ಪತ್ತಿನ ಸಹಕಾರ ಸಂಘಗಳ ಮಳಿಗೆಗಳಲ್ಲಿ ಲಭ್ಯವಿರಬೇಕು. ಆ ಮೂಲಕ ಖಾಸಗಿಯವರ ಸ್ವೇಚ್ಚಾಚಾರಕ್ಕೆ ತಡೆಯೊಡ್ಡಿ ಪೈಪೋಟಿ ನೀಡಿದಾಗ ಸಹಕಾರದ ಮೂಲಕ ಸರ್ವರಿಗೂ ಸಮಪಾಲುˌ ಸರ್ವರಿಗೂ ಸಮಬಾಳು ನೀಡಿದಂತಾಗುತ್ತದೆ. ಇದು ಜ್ಯಾರಿಯಾಗಬೇಕಾದರೆ ಸರಕಾರದ ಒತ್ತಡ ˌಪ್ರಜೆಗಳ ಆಸಕ್ತಿಪ್ರಮುಖವಾಗಿರುತ್ತದೆ.
ಕರ್ನಾಟಕ ಕರಾವಳಿಯ ಸಹಕಾರಿ ಚಳವಳಿ ದಿವಂಗತ ಮೊಳಹಳ್ಳಿ ಶಿವರಾವ್ ರವರ ನೇತೃತ್ವದಲ್ಲಿ ಕಳೆದ ಶತಮಾನದ ಆರಂಭದಲ್ಲಿ ಪ್ರಾರಂಭಗೊಂಡಿದ್ದು ಇಂದು ಕೇಂದ್ರ ಸರಕಾರ ಯೋಜಿಸಿರುವ ಸರ್ವ ವ್ಯವಹಾರದ ಸಹಕಾರ ಮಳಿಗೆಗಳು ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಕರ್ನಾಟಕ ಕರಾವಳಿ ಯಾದ್ಯಂತ ಪಸರಿಸಿದ್ದುˌ ಇಲ್ಲಿಗೆ ಇದೊಂದು ಹೊಸ ವಿಷಯವಲ್ಲ. ಆದರೂ ಸರ್ವ ವ್ಯವಹಾರ ಸಹಕಾರ ಸಂಘಗಳು ಇನ್ನಷ್ಟು ಬಲಿಷ್ಟವಾಗುವ ಅವಶ್ಯಕತೆಯಿದೆ. ಪೂರ್ಣಪ್ರಮಾಣದಲ್ಲಿ ಸಹಕಾರಿ ಸಂಘ ಯಶಸ್ವಿಪಥದಲ್ಲಿ ಸಾಗಬೇಕಾದರೆ ಸಂಘದ ಗ್ರಾಹಕರೊಂದಿಗೆ ಅನ್ಯೋನ್ಯ ಸಂಬಂಧಗಳಿರಬೇಕು.
*ಒಂದು ಸಹಕಾರ ಸಂಸ್ಥೆ ಮುನ್ನಡೆಯಬೇಕಾದರೆ ಗ್ರಾಹಕ ಸದಸ್ಯ ಪರಮೋಚ್ಛ ನಾಯಕ.ˌ ಆತನ ವಿಶ್ವಾಸˌ ನಂಬಿಕೆಗೆ ಆಡಳಿತ ಮಂಡಳಿˌ ಶಿಬಂಧಿ ದಕ್ಕೆ ತರಬಾರದು.ˌ ಆತನ ವ್ಯವಹಾರವೇ ಸಂಸ್ಥೆಯ ಉನ್ನತಿಯ ಅಡಿಪಾಯವೆಂಬ ಸಿದ್ದಾಂತ ಬಲವಾಗಿರಬೇಕು.
* ಗ್ರಾಹಕರು ಸಂಸ್ಥೆಗೆ ಭೇಟಿನೀಡಿದಾಗ ಶಿಬಂಧಿ ನಗುಮುಖದಿಂದ ಆತನನ್ನು ಸ್ವಾಗತಿಸಬೇಕು.
*ಗ್ರಾಹಕನ ಬೇಡಿಕೆಗನುಸರಿಸಿ ಮಾಲುಗಳನ್ನು ತೋರಿಸುವˌ ದರˌ ಮ್ಹಾಲಿನ ಗುಣಮಟ್ಟದ ಬಗ್ಗೆ ಸವಿವರ ಮಾಹಿತಿ ನೀಡುವ ಛಾತಿ ಶಿಬಂಧಿ ಹೊಂದಿರಬೇಕು.
*ಗ್ರಾಹಕನನ್ನು ಹೆಚ್ಚು ಸಮಯ ಕಾಯಿಸದೆ ತ್ವರಿತವಾಗಿ ಸಾಮಾಗ್ರಿಗಳನ್ನು ಪ್ಯಾಕ್ ಮಾಡಿ ಪ್ಲಾಸ್ಟಿಕ್ ಹೊರತಾದ ಕೈಚೀಲಗಳಲ್ಲಿ ನೀಡಬೇಕು. ಒಂದು ವೇಳೆ ಕೈಚೀಲ ಆತನಲ್ಲಿ ಇಲ್ಲದಿದ್ದಲ್ಲಿ ಪೇಪರು ಚೀಲˌ ಅಥವಾ ಬೇಗ ಮಣ್ಣಿನಲ್ಲಿ ಕರಗುವ ಚೀಲಗಳಲ್ಲಿ ಚಿಲ್ಲರೆ ಸಾಮಾನುಗಳನ್ನು ತುಂಬಿಸಿˌ ಮುಂದಿನ ದಿನಗಳಲ್ಲಿ ಬಟ್ಟೆ ಕೈಚೀಲಗಳನ್ನು ತರಲು ಹುರಿದುಂಬಿಸಬೇಕು. (ಇದು ಪರೋಕ್ಷವಾಗಿ ಪರಿಸರ ಸಂರಕ್ಷಣೆಯ ವಿಷಯ).
*ಗ್ರಾಹಕನ ಜತೆ ಶಿಬಂಧಿ ಮಾತನಾಡುವಾಗ ನೇರದೃಷ್ಟಿ ಆತನೊಂದಿಗಿದ್ದುˌ ಆತನ ಸ್ವಾಭಿಮಾನಕ್ಕೆ ದಕ್ಕೆಯಾಗುವ ಮಾತುಗಳಾಗಲಿˌ ನಡತೆ ಯಾಗಲಿ ಇರಬಾರದು. ಆತ ಯಾವುದಾದರೂ ಪ್ರಶ್ನೆಯಿಟ್ಟಾಗ ತಾಳ್ಮೆಯಿಂದ ಕೇಳಿ ನಗುಮೊಗˌ ಹಾಗೂ ಸಾವಧಾನದಿಂದ ಮಾತನಾಡಿ ಆತನನ್ನು ತೃಪ್ತಿಪಡಿಸಬೇಕು.
*ಹಿಂದೆ ತೆಗೆದುಕೊಂಡು ಹೋದ ಸಾಮಾಗ್ರಿಗಳ ಗುಣಮಟ್ಟದ ಬಗ್ಗೆ ದೂರುನೀಡಿದರೆ ಅದನ್ನು ಸರಿಪಡಿಸುವ ಕುರಿತು ಧನಾತ್ಮಕ ಉತ್ತರವನ್ನು ಚಾಕಚಕ್ಯತೆಯಿಂದ ನೀಡಬೇಕು. ಅದೇ ರೀತಿ ಆತ ವ್ಯಾಪಾರಕ್ಕೆ ಸಂಬಂಧಿಸಿ ಸಲಹೆ ನೀಡಿದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಸಂಘ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಅವಶ್ಯಕವೆಂದು ಕಂಡುಬಂದಲ್ಲಿ ಜ್ಯಾರಿಗೊಳಿಸಲು ಕ್ರಮಕೈಗೊಳ್ಳಬೇಕು.
*ಸಹಶಿಬಂಧಿ ಗ್ರಾಹಕನ ಜತೆ ಋಣಾತ್ಮಕ ರೀತಿಯಲ್ಲಿ ವರ್ತಿಸಿದರೆ ಆತನನ್ನು ಸುಮ್ಮನಿರಿಸಿˌ ಗ್ರಾಹಕನ ನೋವನ್ನು ಮುಖ್ಯ ಶಿಬಂಧಿ ಶಮನಗೊಳಿಸಿ ಗ್ರಾಹಕ ಸಾವಧಾನಚಿತ್ತದಿಂದ ಸಾಮಾಗ್ರಿಗಳನ್ನು ಕೊಂಡೊಯ್ಯುವ ಚಾಣಾಕ್ಷತನ ವಿಭಾಗದ ಮುಖ್ಯ ಶಿಬಂಧಿಯಲ್ಲಿರಬೇಕು.
* ಒಂದು ವೇಳೆ ಆತ ಬೇಡಿಕೆಯಿಟ್ಟ ಸಾಮಾಗ್ರಿ ಇಲ್ಲವಾದಲ್ಲಿˌ ಅಥವಾ ಮುಗಿದುಹೋಗಿದ್ದಲ್ಲಿ ತಕ್ಷಣ ತರಿಸಿ ಪೂರೈಸುವ ಭರವಸೆ ನೀಡಬೇಕು. ಅದೇ ರೀತಿ ಭರವಸೆಗೆ ಯಾವುದೇ ಕಾರಣಕ್ಕೂ ತಪ್ಪಬಾರದು.
ಇದೆಲ್ಲಾ ವ್ಯವಹಾರಿಕ ಸೂಕ್ಷ್ಮ ವಿಷಯಗಳಾಗಿದ್ದು ಸದಸ್ಯರ ನಿಕಟ ಸಂಪರ್ಕˌ ಮಮತೆಗೆ ದಿಶೆಗಳಾಗಿದ್ದು ಸಹಕಾರ ಸಂಘದ ವ್ಯವಹಾರಿಕತೆಗೆ ಹಾಗೂ ಬೆಳವಣಿಗೆಗೆ ಪೂರಕ ವಿಚಾರಗಳು.
ಗ್ರಾಹಕ ಕೇಂದ್ರದ ನಿಭಾವಣೆ ಈ ಕೆಳಗಿನಂತೆ ಇದ್ದಲ್ಲಿ ಪಾರದರ್ಶಕ ವ್ಯವಹಾರˌ ಪ್ರಜಾಸತ್ತಾತ್ಮಕ ತಳಹದಿಗೆ ಕಾರಣವಾಗಿ ಸಹಕಾರ ಸಂಘ ಬಲಗೊಳ್ಳುವುದು. ಎಲ್ಲಾ ಸಾಮಾಗ್ರಿಗಳ ಖರೀದಿ ಆಡಳಿತ ಮಂಡಳಿಯಿಂದ ರಚಿಸಲ್ಪಟ್ಟ ಗ್ರಾಹಕ ವ್ಯವಹಾರ ಉಪ ಸಮಿತಿಯ ಮಾರ್ಗದರ್ಶನದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೇಲ್ವಿಚಾರಣೆಯಲ್ಲಿ ಖರೀದಿ ಹಾಗೂ ಮಾರಾಟ ದ ಹೊಣೆ ವಹಿಸಲ್ಪಟ್ಟ ಮುಖ್ಯಶಿಬಂಧಿ ಉಸ್ತುವಾರಿಯಲ್ಲಿ ನಡೆಯತಕ್ಕದ್ದು.ಕೃಷಿಕರ ಉತ್ಪನ್ನಗಳ ಮಾರಾಟದ ವ್ಯವಸ್ಥೆಗೆ ಪ್ರತ್ಯೇಕ ವಿಭಾಗ ರಚಿಸಲ್ಪಟ್ಟುˌ ಇವು ಎಲ್ಲವು ಮಹಾಸಭೆ ಮಂಜೂರುಗೊಳಿಸಿದ ಗ್ರಾಹಕ ವಿಭಾಗದ ಒಳನಿಯಮಾವಳಿ (subsidery rules )ಗನುಸಾರವಾಗಿ ಕಾರ್ಯಾಚರಣೆಯಲ್ಲಿ ಇರತಕ್ಕದ್ದು. ಜೀನಸು ˌದೈನಂದಿನ ಅವಶ್ಯಸಾಮಾಗ್ರಿಗಳ ವಿಭಾಗˌ ಹಾರ್ಡ್ ವೇರ್ˌ ಪ್ಲಾಸ್ಟಿಕ್ ಸ್ಟೀಲುˌ ಅಲ್ಯುಮಿನಿಯಂ ವಿಭಾಗˌ ರಸಗೊಬ್ಬರˌ ಕ್ರಿಮಿನಾಶಕ ˌ ನೀರಾವರಿ ಪೈಪ್ ˌಮೆಶೀನರಿ ವಿಭಾಗˌ ಪಡಿತರ ವಿಭಾಗ ಈ ರೀತಿ ಬೇರೆಬೇರೆಯಾಗಿ ಸಂಸ್ಥೆಯ ವ್ಯವಹಾರ ಅನುಕೂಲತೆಗನುಸರಿಸಿ ವಿಭಾಗಗಳನ್ನು ವಿಂಗಡಿಸಿ ಪ್ರತಿಯೊಂದಕ್ಕೂ ಶಿಬಂಧಿ ಮುಖ್ಯಸ್ಥರನ್ನು ನಿರ್ಣಯಿಸತಕ್ಕದ್ದು. ಸಣ್ಣಪುಟ್ಟ ತುರ್ತು ಖರೀದಿಗಳಿಗೆ ವಿಭಾಗ ಮುಖ್ಯಸ್ಥರುˌ ಇತರ ಖರೀದಿಗಳನ್ನು ಖರೀದಿ ವಿಭಾಗ ಮುಖ್ಯಸ್ಥ ನಿರ್ವಹಿಸುವುದುˌ ದೊಡ್ಡ ಮಟ್ಟಿನ ಖರೀದಿಗಳನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಒಪ್ಪಿಗೆಯೊಂದಿಗೆ ಖರೀದಿ ಮುಂತಾದ ವ್ಯವಸ್ಥೆಗಳನ್ನು ಒಳನಿಯಮಾವಳಿಗಳಲ್ಲಿ ಅಳವಡಿಸಿಕೊಳ್ಳತಕ್ಕದ್ದು. ಕನಿಷ್ಟ ಶೇಕಡಾವಾರು ಲಾಭಾಂಶ ನಿಗದಿಪಡಿಸಿ ಗರಿಷ್ಟ ವಹಿವಾಟು ನಡೆಯುವಂತೆ ಗಮನ ಹರಿಸುವುದು ಗ್ರಾಹಕ ವ್ಯವಹಾರದಲ್ಲಿ ಬಹಳ ಪ್ರಮುಖ ಅಂಶ. ಇದರಿಂದ ಗ್ರಾಹಕರಿಗೂ ಅನುಕೂಲ ˌಅದೇ ರೀತಿ ಸಂಸ್ಥೆ ಕೂಡಾ ಅಧಿಕ ಲಾಭಾಂಶ ಪಡೆಯಲು ಸಾಧ್ಯ. ಹೋಲ್ ಸೇಲ್ ವಿಕ್ರಯ ವಿಭಾಗ ತೆರೆದು ಕನಿಷ್ಟಲಾಭದಲ್ಲಿ ದೂರದ ಊರಿನ ವ್ಯಾಪಾರಸ್ತರು ˌಇತರ ಸಹಕಾರಿ ಸಂಘಗಳಿಗೆ ಅಥವಾ ದೊಡ್ಡಪ್ರಮಾಣದ ಬಳಕೆದಾರ ಸಂಸ್ಥೆಗಳಿಗೆ ವಿಕ್ರಯಿಸುವ ವ್ಯವಸ್ಥೆಯನ್ನು ನೆರವೇರಿಸಬಹುದು. ಅಂತಹ ಸಂದರ್ಭದಲ್ಲಿ ಹೋಲ್ ಸೇಲ್ ಮಾರಾಟದ ಮುಖ್ಯಸ್ಥ ಶಿಬಂಧಿಯನ್ನು ನೇಮಿಸಿಕೊಂಡು ವ್ಯವಹಾರ ವೃದ್ದಿಸಬಹುದು.ಪ್ರತಿ ವಾರ ಅಥವಾ 2ವಾರಕ್ಕೊಮ್ಮೆ ಗ್ರಾಹಕವಿಭಾಗ ಉಪಸಮಿತಿ ಸಭೆ ನಡೆಸಿ ಪ್ರಗತಿ ಪರಿಶೀಲನೆಯನ್ನು ನಡೆಸತಕ್ಕದ್ದು. ಖರೀದಿ ವಿಭಾಗ ಮುಖ್ಯಸ್ಥ ಕಡ್ಡಾಯವಾಗಿ ಸಭೆಗೆ ಆಹ್ವಾನಿತ. ಪ್ರತಿಯೊಂದು ವಿಭಾಗಕ್ಕೂ ವ್ಯಾಪಾರ ವಹಿವಾಟಿನ ಗುರಿ ನಿಗದಿಪಡಿಸಿ ಲೋಪ ದೋಷಗಳಿದ್ದಲ್ಲಿ ಸರಿಪಡಿಸುವುದು ತಿಂಗಳ ಜಮಾ ಖರ್ಚು ಮಂಡನೆˌ ಲಾಭ—ನಷ್ಟದ ವಿಮರ್ಶೆಮುಂತಾದ ವಿಷಯಗಳು ಉಪಸಮಿತಿ ಸಭೆಗಳಲ್ಲಿ ಚರ್ಚಿಸತಕ್ಕದ್ದು. ಪ್ರತಿ ಆಡಳಿತಮಂಡಳಿ ಸಭೆಯಲ್ಲಿ ಹಿಂದಿನ ತಿಂಗಳ ಉಪಸಮಿತಿ ಸಭೆಯ ನಿರ್ಣಯ ಧೃಢಿಕರಣಗೊಳ್ಳತಕ್ಕದ್ದು. ಮಹತ್ವದ ವಿಷಯಗಳಿದ್ದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಾರ್ಯಸೂಚಿಯನ್ನು ಮಂಡಿಸಿ ಅನುಮತಿ ಪಡಕೊಳ್ಳತಕ್ಕದ್ದು. ಅಧ್ಯಕ್ಷರು ಪ್ರತಿ ವಾರದ ವ್ಯವಹಾರಗಳನ್ನು ಕೂಲಂಕುಶ ಪರಿಶೀಲಿಸಿ ಸಲಹೆಗಳಿದ್ದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತರತಕ್ಕದ್ದು. ಈ ರೀತಿಯ ಗೋಪುರಾಕೃತಿಯ ವ್ಯವಹಾರˌನಿರ್ಣಯಗಳನ್ನು ಮಾಡಿದಾಗ ಸಹಕಾರದ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಮನ್ನಣೆ ಬರುತ್ತದೆ. ಲೋಪದೋಷಗಳು ಕುಂಠಿತಗೊಂಡು ಪಾರದರ್ಶಕ ವ್ಯವಹಾರ ಬಲಗೊಳ್ಳುತ್ತದೆ.
ವ್ಯವಹಾರ ಸುಸೂತ್ರವಾಗಿ ನಡೆಯಬೇಕಾದರೆ ಗ್ರಾಹಕ ಬಾಂಧವ್ಯˌ ಆಡಳಿತ ನಿರ್ವಹಣೆˌ ಲೆಕ್ಕಪತ್ರˌ ಕಾನೂನು ನಿಯಮˌ ಆಡಳಿತ- ಶಿಬಂಧಿ ಬಾಂಧವ್ಯˌಶಿಸ್ತು ಮುಂತಾದ ವಿಷಯಗಳಲ್ಲಿ ನಿರಂತರ ತರಬೇತಿ ಅಗತ್ಯ. ವರ್ಷದಲ್ಲಿ ಕನಿಷ್ಟಎರಡು ಅಥವಾ ಮೂರು ಬಾರಿ ಸಂಪನ್ಮೂಲ ವ್ಯಕ್ತಿಗಳಿಂದ ಒಂದುದಿನದ ತರಬೇತಿ ಹಮ್ಮಿಕೊಂಡು ಪ್ರತಿಯೊಬ್ಬ ಆಡಳಿತ ಮಂಡಳಿ ಸದಸ್ಯˌ ಶಿಬಂಧಿˌ ತರಬೇತಿಯಲ್ಲಿ ಪಾಲ್ಗೊಂಡಾಗ ಜ್ಞಾನವೃದ್ದಿಯಾಗಿ ಮಾನವಸಂಪನ್ಮೂಲ ವೃಧ್ಧಿಯಾಗುತ್ತದೆ.
ಈ ರೀತಿಯಲ್ಲಿ ವ್ಯವಸ್ಥಿತ ಚೌಕಟ್ಟಿನೊಳಗಡೆ ಗ್ರಾಹಕ ವ್ಯವಹಾರವನ್ನು ಸಹಕಾರಸಂಘಗಳಲ್ಲಿ ಅಳವಡಿಸಿದಾಗˌ ಗ್ರಾಮೀಣ ಜನತೆ ಖಾಸಗಿಯವರ ಕಪಿಮುಷ್ಟಿಗೆ ಸಿಲುಕಿ ತೊಳಲಾಡುವುದು ತಪ್ಪಿಸಬಹುದು. ಸದಸ್ಯಕೇಂದ್ರಿತ ವ್ಯವಹಾರ ಬಲಗೊಂಡು ಜನಸಾಮಾನ್ಯರ ಅನುಕೂಲತೆಗಳು ವೃಧ್ಧಿಯಾಗಿ ಗ್ರಾಮೀಣ ಜನರು ಸಂತಸದ ಬದುಕು ಕಾಣಬಹುದು. ಸದಸ್ಯರ ವಹಿವಾಟಿನಿಂದ ಸಂಸ್ಥೆ ಲಾಭಹೊಂದಿದಾಗ ತಮಗೂ ಸಣ್ಣಮಟ್ಟಿನ ಲಾಭ ನಂತರದ ದಿನಗಳಲ್ಲಿ ಸಿಗುವಂತಾದ್ದು ಸಹಕಾರದಲ್ಲಿ ಮಾತ್ರವಲ್ಲದೇ ಬೇರೆಲ್ಲೂ ಕಾಣದು. ಗ್ರಾಹಕ ಸದಸ್ಯರ ಪೂರ್ಣ ವಿಶ್ವಾಸವನ್ನು ಹೊಂದಿ ಆಡಳಿತಮಂಡಳಿˌ ಶಿಬಂಧಿ ಕಾರ್ಯವೆಸಗುವುದು ಸಹಕಾರ ರಂಗದ ನಿರಂತರ ಅವಶ್ಯಕತೆ.ದೇಶದ ಸಹಕಾರಿ ಗ್ರಾಹಕ ವ್ಯವಹಾರ ವೃದ್ದಿಯಾಗಲು ಸರ್ವಜನತೆಯ ಸಹಕಾರˌ ಪಾಲುಗಾರಿಕೆ ಅವಶ್ಯ.ಪ್ರತಿ ಗ್ರಾಮದಲ್ಲೂ ಸಹಕಾರದ ಬೆಳಕು ಹರಿದಾಗ ಭಾರತದ ಸರ್ವಾಂಗೀಣ ಪ್ರಗತಿ ಸಾಧ್ಯ.
ರಾಧಾಕೃಷ್ಣ ಕೋಟೆ
ಅಂಚೆ:ಕಳಂಜ
ಸುಳ್ಯ ತಾಲೂಕು. ದ. ಕ.
ಕರ್ನಾಟಕ
574212
9448503424