ಸಹಕಾರ ಸಂಘಗಳು ಮತ್ತು ಸ್ವ ಸಹಾಯ ಗುಂಪು ಇವೆರಡರ ಮೂಲ ತತ್ವ ಪರಸ್ಪರ ಸಹಕಾರ ಎಂಬುದಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಹಾಲಿಗೆ ಮಾರುಕಟ್ಟೆ ಒದಗಿಸುವುದರ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ವಿನೂತನ ಮತ್ತು ವೈವಿಧ್ಯಮಯ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅತ್ಯವಶ್ಯಕವಾಗಿದೆ. ಆದುದರಿಂದ, ಈ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ದೈನಂದಿನ ವ್ಯವಹಾರದೊಂದಿಗೆ, ಸ್ವ-ಸಹಾಯ ಗುಂಪುಗಳ ಪರಿಕಲ್ಪನೆಯನ್ನು ಅಳವಡಿಸಿ ಹಾಲು ಉತ್ಪಾದಕರನ್ನು ಸಂಘಟಿಸಿ ಸ್ವ-ಸಹಾಯ ಗುಂಪುಗಳನ್ನು ರಚಿಸುವುದು ಸಮಯೋಚಿತವಾಗಿದೆ. ಈ ಗುಂಪುಗಳ ರಚನೆಯಿಂದ ಕೆಳಕಂಡ ಅನುಕೂಲತೆಗಳನ್ನು ನಿರೀಕ್ಷಿಸಬಹುದಾಗಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ, ಹಾಲು ಉತ್ಪಾದಕರ ಮಹಿಳೆಯರನ್ನು ಸಂಘಟಿಸಿ ಸ್ವ-ಸಹಾಯ ಗುಂಪು ರಚಿಸುವುದರೊಂದಿಗೆ ಮಹಿಳೆಯರಲ್ಲಿ ನಾಯಕತ್ವ ಗುಣವನ್ನು ಮೂಡಿಸಲು ಸಹಕಾರವಾಗಿದೆ. ಇದರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿ, ಸಂಘದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಿರೀಕ್ಷಿಸಬಹುದು. ಇದರಿಂದ, ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶ ಈಡೇರಿಸಿದಂತಾಗುತ್ತದೆ.
ಉಳಿತಾಯ ಪ್ರವೃತ್ತಿಯನ್ನು ರೂಢಿಸಬಹುದು. ಆಂತರಿಕ ಸಾಲವನ್ನು ಅವಶ್ಯಕತೆಗೆ ತಕ್ಕಂತೆ ಪಡೆಯಬಹುದು. ಈ ಸಾಲದ ಮೊತ್ತದಿಂದ ರಾಸುಗಳ ಖರೀದಿಯನ್ನು ಪ್ರೋತ್ಸಾಹಿಸಿ ಹೈನುಗಾರಿಕೆ ಮಾಡುವವರ ಸಂಖ್ಯೆ ಹೆಚ್ಚಿಸಬಹುದಾಗಿದೆ. ಮಾತ್ರವಲ್ಲದೆ, ಸಂಘಗಳ ವ್ಯವಹಾರವನ್ನೂ ಹೆಚ್ಚಿಸಬಹುದಾಗಿದೆ.
ಸ್ವ-ಸಹಾಯ ಗುಂಪುಗಳ ಮೂಲಕ ಹೈನುಗಾರಿಕೆಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬಹುದಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವ-ಸಹಾಯ ಗುಂಪುಗಳನ್ನು ರಚಿಸಿ ಗಮನಾರ್ಹ ಸಾಧನೆ ಮಾಡಿವೆ. ಕೆಲವು ಉದಾಹರಣೆಗಳನ್ನು ಉಲ್ಲೇಖಿಸುವುದು ಈ ಸಂದರ್ಭದಲ್ಲಿ ಪ್ರಸ್ತುತವಾಗಿದೆ.
ಮಂಗಳೂರು ತಾಲೂಕಿನ ಪೆರ್ಮಂಕಿ ಹಾಲು ಉತ್ಪಾದಕರ ಸಹಕಾರ ಸಂಘ ಕಳೆದ ಏಳು ವರ್ಷಗಳಿಂದ ಸ್ವ-ಸಹಾಯ ಗುಂಪು ರಚಿಸಿಕೊಂಡು, ಗುಂಪಿನ ಮೂಲಕ ಹೈನುಗಾರಿಕೆಗೆ ಪೂರಕವಾಗಿ, ಪಶು ಆಹಾರ ತಯಾರಿಕೆ, ಮೇವಿನ ತಾಕುಗಳನ್ನು ಅಭಿವೃದ್ಧಿಪಡಿಸಿ ಬೇರು ಮತ್ತು ಕಾಂಡಗಳ ಮಾರಾಟ, ಮೇವಿನ ಸಸಿಗಳನ್ನು ಬೆಳೆಸಿ ವಿತರಿಸುತ್ತಿದೆ. ಜೊತೆಗೆ ಸಂಘದ ಕಟ್ಟಡದಲ್ಲಿಯೇ ಆ ಪರಿಸರದಲ್ಲಿ ಬೆಳೆದ ಉತ್ಪನ್ನಗಳ ಮಾರಾಟ ಕೇಂದ್ರವನ್ನತೆರೆದು ವ್ಯವಹರಿಸುತ್ತಿದೆ.
ಬಂಟ್ವಾಳ ತಾಲೂಕಿನ ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಚನೆಗೊಂಡಿರುವ ಸ್ವ-ಸಹಾಯ ಗುಂಪು ಅಡಕೆ ಹಾಳೆಯ ತಟ್ಟೆ ತಯಾರಿಸಿ ಮಾರಾಟ ಮಾಡುತ್ತಿದೆ. ಇದರಲ್ಲಿ ಉಳಿಕೆಯಾದ ಅಡಕೆ ಹಾಳೆಯನ್ನು ಹಾಲು ಒಕ್ಕೂಟದಿಂದ ಒದಗಿಸಲಾದ ಅಡಕೆ ಹಾಳೆ ಪುಡಿ ಮಾಡುವ ಯಂತ್ರದಲ್ಲಿ ಪುಡಿ ಮಾಡಿ ಉತ್ಪಾದಕರಿಗೆ ಮಾರಾಟ ಮಾಡುತ್ತಿದೆ. ಇದರಿಂದ ಹಾಲಿನ ಗುಣಮಟ್ಟದಲ್ಲಿ ಸುಧಾರಣೆಯಾಗಿರುವುದು ಕಂಡುಬಂದಿದೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳು ಗುಂಪಿನ ಮೂಲಕ ಡೇರಿಯನ್ನು ಮಾಡಿ ಸಂಘಕ್ಕೆ ಅತೀ ಹೆಚ್ಚಿನ ಹಾಲನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಲ್ಲಿ ಸ್ವ-ಸಹಾಯ ಗುಂಪುಗಳು ಔಷಧೀಯ ಸಸ್ಯಗಳನ್ನು ಬೆಳೆಸಿ ಮಾರಾಟ ಮಾಡುತ್ತಿದೆ. ಗೃಹಪಯೋಗಿ ಉತ್ಪನ್ನಗಳನ್ನು ತಯಾರಿಸಿ ತಾವೇ ಬಳಕೆ ಮಾಡುವುದರೊಂದಿಗೆ ಇತರರಿಗೆ ಮಾರಾಟ ಮಾಡುತ್ತಿದೆ.
ಈ ದಿಸೆಯಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಈಗಾಗಲೇ ಕಾರ್ಯಪ್ರವೃತ್ತವಾಗಿರುವುದು ಅಭಿನಂದನಾರ್ಹ. ಆದುದರಿಂದ ಎಲ್ಲಾ ಸಹಕಾರ ಸಂಘಗಳು ಈ ದಿಸೆಯಲ್ಲಿ ಸೂಕ್ತ ಚಿಂತನೆಯನ್ನು ನಡೆಸಿ, ಸಹಕಾರ ಸಂಘಗಳ ಸುಸ್ಥಿರತೆಗೆ ಸ್ವ-ಸಹಾಯ ಗುಂಪುಗಳನ್ನು ರಚಿಸುವಲ್ಲಿ ಗಮನ ಹರಿಸಬಹುದಾಗಿದೆ.
– ಶ್ರೀಮತಿ ಜಾನೆಟ್ ರೋಸಾರಿಯೋ
ವಿಸ್ತರಣಾಧಿಕಾರಿ, ದಕ್ಷಿಣ ಕನ್ನಡ ಹಾಲು ಒಕ್ಕೂಟ