ಭಾಗ – ೧
ಒಂದು ಗ್ರಾಮದಲ್ಲಿ ಒಂದು ಪಂಚಾಯತ್, ಒಂದು ಶಾಲೆ ಹಾಗು ಒಂದು ಸಹಕಾರಿ ಸಂಘವಿದ್ದರೆ ಅದನ್ನು ಅಭಿವೃದ್ಧಿಯ ಸಂಕೇತವೆಂದು ತಿಳಿಯುತ್ತಿದ್ದೆವು, ಕೊರೋನಾ ಯಾವಾಗ ನಮ್ಮ ದೇಶಕ್ಕೆ ಕಾಲಿಟ್ಟು ಸರ್ವತ್ರ ಭಯವನ್ನು ಮೇಳೈಸಿತೊ ಅದರ ನಂತರ ಮೇಲೆ ಕೊಟ್ಟ ಪಟ್ಟಿಗೆ ಇನ್ನೊಂದು ಸೇರ್ಪಡೆ ಅನಿವಾರ್ಯವಾಯಿತು. ಅದು ಪ್ರಾಥಮಿಕ ಆರೋಗ್ಯ ಕೇಂದ್ರ. ಹಾಗಾಗಿ ಈಗ ಈ ನಾಲ್ಕು ಸಂಸ್ಥೆಗಳು ಒಂದು ಗ್ರಾಮದಲ್ಲಿದ್ದರೆ ಅದನ್ನು ಆದರ್ಶ ಗ್ರಾಮ ಅಂತ ತಿಳಿಯಬಹುದು. ಅವೆಲ್ಲ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ನಂತರದ ಹಂತದ ವಿಮರ್ಶೆ.
ನಮ್ಮ ಕ್ಷೇತ್ರ ಸಹಕಾರ. ಒಂದು ಗ್ರಾಮ ಅಥವ ಎರಡೊ, ಮೂರೋ ಗ್ರಾಮ ವ್ಯಾಪ್ತಿ ಹೊಂದಿರುವ ಪ್ರಾಥಮಿಕ ಸಹಕಾರಿ ಸಂಘ ಒಂದು ಆದರ್ಶ ಸಂಘವಾಗಿ ತನ್ನ ಕಾರ್ಯಚಟುವಟಿಕೆಗಳಲ್ಲಿ ಗುರುತಿಸಲ್ಪಡಬಹುದು ಎಂಬುದನ್ನು ಗಮನಿಸೋಣ.
ಅಗತ್ಯ ಪರಿಸರದಲ್ಲಿ ಕಟ್ಟಡ.
ಮೊತ್ತಮೊದಲಾಗಿ ಈ ಸಂಘದ ಜಾಗ ಸದಸ್ಯರಾದವರಿಗೆ ಅನುಕೂಲಕರವಾಗಿರಬೇಕು. ಎಲ್ಲೋ ಒಂದು ಮೂಲೆಯಲ್ಲಿ ಕಟ್ಟಡಗಳ ಸರಹದ್ದಿನೊಳಗೆ ನುಸುಳಿಕೊಂಡು ಹೋಗಬೇಕಾದ ಜಾಗವಾಗಿರಬಾರದು. ಸರಿಯಾದ ರಸ್ತೆ ಸಂಪರ್ಕವಿರುವ, ಕಾರ್ಯಚಟುವಟಿಕೆಗಳು ಪೇಟೆಯ ಗೌಜಿಗದ್ದಲಗಳಲ್ಲಿ ಅದ್ದಿ ಹೋಗದಂತೆ ಇರುವ ಒಂದು ಸುಸಜ್ಜಿತ ಕಟ್ಟಡದಲ್ಲಿ ನಮ್ಮ ಸಹಕಾರಿ ಸಂಘವಿರಬೇಕು. ಗಲೀಜು ನೀರು, ಕೆಸರು, ಗಬ್ಬು ವಾಸನೆಗಳು ಸಂಘಕ್ಕೆ ಬರುವ ಸದಸ್ಯನಿಗೆ ಬಾಗಿಲಕಡೆಗೆ ಬರುವಾಗ ಅನುಭವಕ್ಕೆ ಬರದಂತಹ ಸ್ವಚ್ಛ, ಸುಂದರ ಪರಿಸರಬೇಕು. ಕಟ್ಟಡದಲ್ಲಿ ಸರಿಯಾದ ಜಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ಸಂಘದ ಹೆಸರು, ವಿಳಾಸ ಹೊಂದಿರುವ ನಾಮಫಲಕ ಅಳವಡಿಸಿರುವುದು ಅಗತ್ಯ.
ಒಳಗಡಿಯಿಡುವಾಗಿನ ಶಿಸ್ತು
ಒಬ್ಬ ಸದಸ್ಯ ಸಂಘದ ಒಳಗೆ ಬರುವಾಗ ಆತನ ಮನಸ್ಸಿಗೆ ಖುಷಿ ನೀಡುವ ವಾತಾವರಣ ಅಲ್ಲಿರಬೇಕು. ಬಾಗಿಲ ಬುಡದಲ್ಲಿ ರಾಶಿ ಹಾಕಿದ ಚಪ್ಪಲಿಗಳು ಇರದಂತೆ ನೋಡಿಕೊಳ್ಳಬಹುದು. ಸಂಘಕ್ಕೆ ಯಾರು ಆರಂಭಕ್ಕೆ ಬರುತ್ತೀರಿ ಅವರ ಚಪ್ಪಲಿ ಹೊರಗೆ ಒಂದರ ನಂತರ ಒಂದು ಜೋಡಿಸಿಡಲು ಅನುಕೂಲವಾಗುವಂತೆ ಇರಲಿ. ಕಡ್ಡಾಯವಾಗಿ ಹೊರಗೆ ಚಪ್ಪಲಿ ತೆಗೆದು ಜೋಡಿಸಿಟ್ಟು ಒಳಗಡಿಯಿಡುವುದು ಉತ್ತಮ ಸಂಪ್ರದಾಯ. ಸಿಬ್ಬಂದಿಗಳು ಒಳಗೆ ಚಪ್ಪಲಿ ಹಾಕುವುದು, ಸದಸ್ಯ ಬಂದವ ಹೊರಗೆ ಚಪ್ಪಲಿ ತೆಗೆದು ಒಳಗಡಿಯಿಡಬೇಕೆಂಬ ನಿಲುವು ಸರಿಯಲ್ಲ. ಎಲ್ಲರಿಗೂ ಯಾವುದಾದರೂ ಒಂದು ನಿಯಮ ಇರಲಿ. ಒಳಗಿನ ನೆಲ ಸ್ವಚ್ಛವಾಗಿರುವುದಾದರೆ ಒಳಗೆ ಯಾರಿಗೂ ಚಪ್ಪಲಿಗಳು ಇರಬೇಕೆಂದಿಲ್ಲ. ಶೌಚಾಲಯದ ಹೊರಗೆ ಎರಡು ಬಗೆ ಸ್ಲಿಪ್ಪರ್ ಇಟ್ಟುಬಿಟ್ಟರೆ ಉಪಯೋಗ ಸುಲಭ.
ಹೊಸ್ತಿಲು ದಾಟಿ ಬಂದವರನ್ನು ಗೌರವದಿಂದ ಸ್ವಾಗತಿಸಿ
ಸದಸ್ಯ ಒಳಗೆ ಬಂದಾಯಿತು. ಆಧುನಿಕ ಕಾಲ ಘಟ್ಟದಲ್ಲಿ ಒಂದಷ್ಟು ತಾಕತ್ತಿರುವ ಸಂಘಗಳು ಕಾರ್ಯದರ್ಶಿ, ಅಧ್ಯಕ್ಷರ ಕೊಠಡಿ ಮತ್ತು ಆಡಳಿತ ಮಂಡಳಿ ಸಭೆ ನಡೆಯುವ ಜಾಗ ಹವಾನಿಯಂತ್ರಿತ ಮಾಡಿದರೆ ಸಾಲದು. ಸದಸ್ಯರು ಬಂದು ಕೆಲಸ ಕಾರ್ಯಗಳು ನಡೆಯುವ ಜಾಗ ಕೂಡ ಹವಾನಿಯಂತ್ರಿತ ವ್ಯವಸ್ಥೆಯಲ್ಲಿರಲಿ. ವಿದ್ಯುತ್ ಖರ್ಚು ಹೆಚ್ಚಾಗುವ ನೆಪವಿದ್ದರೆ ಸೋಲಾರ್ ವ್ಯವಸ್ಥೆ ಅಳವಡಿಸಿಕೊಳ್ಳಿ. ಸ್ವಾವಲಂಬನೆ ಎಂಬ ಹೆಚ್ಚುವರಿ ಹಮ್ಮು ನಿಮ್ಮದಾಗುತ್ತದೆ. ಬಂದ ಸದಸ್ಯರೂ ನಿರುಮ್ಮಳರಾಗುತ್ತಾರೆ. ಬಿಸಿಲಿಗೆ ಬಂದು ಒಳಗೆ ಹೊಕ್ಕವರಿಗಂತೂ ಖುಷಿ ಬೇರೆ. ನಿಮ್ಮ ಸಹಕಾರಿ ಸಂಘಕ್ಕೆ ಆಧುನಿಕತೆಗಳನ್ನು ಮೈಗೂಡಿಸಿಕೊಳ್ಳುವ ಆರ್ಥಿಕ ಸಬಲತೆ ಇಲ್ಲದಿದ್ದರೆ ಬಿಡಿ. ಶಕ್ತಿ ಬಂದಾಗ ಮೈಕೊಡವಿಯೆದ್ದರೆ ಸಾಕು.
ಹೊಸ್ತಿಲು ದಾಟಿ ಒಳಗೆ ಬಂದ ಸದಸ್ಯರನ್ನು ಎದುರು ಕುಳಿತಿರುವ ಸಿಬ್ಬಂದಿಗಳು ನಮಸ್ಕರಿಸಿ ಸ್ವಾಗತಿಸುವುದು ಕರ್ತವ್ಯ ಅಂತ ತಿಳಿದಿರಬೇಕು. ಸಾವಿರ ಕೆಲಸ ಬಾಕಿ ಇರಬಹುದು. ಆದರೆ ಅದನ್ನೆಲ್ಲ ಬದಿಗಿಟ್ಟು ಮನಸ್ಸಿನಲ್ಲಿ ದುಗುಡಗಳನ್ನೆಲ್ಲ ಮನದೊಳಗೆ ಹುದುಗಿಸಿಟ್ಟವರಂತೆ ಮುಖ ಸಿಂಡರಿಸದೆ ತುಂಬು ಮನಸ್ಸಿನಿಂದ ಬಂದ ಸದಸ್ಯರನ್ನು ಗೌರವದಿಂದ ಸ್ವಾಗತಿಸುವುದು ತುಂಬ ಮುಖ್ಯ. ಇದು ಯಶಸ್ಸಿನ ಮೊದಲ ಗುಟ್ಟು. ಬಂದವರಲ್ಲಿ ಯಾವ ಕೆಲಸಕ್ಕೆ ಬಂದಿರಿ ಎಂದು ಕೇಳಿ ಅವರನ್ನು ಆಯಾಯ ಜಾಗಕ್ಕೆ ಕಳುಹಿಸುವುದು ಸ್ವಾಗತ ಮಾಡಿದವರ ಕೆಲಸ. ಕಳಿಸಿದ ಸದಸ್ಯರು ಆ ಜಾಗಕ್ಕೆ ಬಂದಾಗ ಬೇರೆ ಸದಸ್ಯರು ಬಂದು ಅವರ ಕೆಲಸಗಳಾಗುತ್ತಿದ್ದರೆ ಸ್ವಲ್ಪ ಕುಳಿತಿರಿ ಕರೆಯುತ್ತೇನೆ ಎಂಬ ಸಮಾಧಾನದ ನಗುಮೊಗದ ಉತ್ತರ ಅಲ್ಲಿ ಸಿಗಬೇಕು.
ಸಂಘದ ಸಿಬ್ಬಂದಿಗಳು ನೆನಪಿನಲ್ಲಿಡಬೇಕಾದ ಬಹಳ ಮುಖ್ಯ ವಿಷಯವೇನೆಂದರೆ ಮನೆಯಿಂದ ಸಂಘದ ಕೆಲಸಕ್ಕೆ ಹೊರಟ ಮೇಲೆ ಮನೆಯ ಯಾವ ಸಮಸ್ಯೆಗಳನ್ನು ತಲೆಯಲ್ಲಿಟ್ಟುಕೊಳ್ಳದೆ ಇರಬೇಕು. ಮನೆಯಿಂದ ಹೊರಡುವಾಗ ಮನೆಯವರಲ್ಲಿ ಏನೋ ಮನಸ್ಥಾಪಗಳಾಗಿರಬಹುದು, ಯಾವುದ್ಯಾವುದೋ ವಿಷಯಗಳು ಮನದೊಳಗೆ ಸದಾ ಕೊರೆಯುತ್ತಿರಬಹುದು, ಅಭಿಪ್ರಾಯ ವ್ಯತ್ಯಾಸಗಳಿಂದ ಮನಸ್ಸಿಗೆ ವೇದನೆ, ಸಿಟ್ಟು ನುಸುಳಿರಬಹುದು. ಅದು ಯಾವುದಿದ್ದರೂ ಸಹಕಾರಿ ಸಂಘದ ಕೆಲಸಕ್ಕೆ ಬಂದು ಹೊಸ್ತಿಲು ದಾಟಿದ ಮೇಲೆ ಒಂದು ಕೂಡ ವ್ಯಕ್ತವಾಗಬಾರದು. ಸಂಘದ ಸಮಸ್ಯೆಗಳನ್ನು ಮನೆಗೆ ಒಯ್ದು ಅಲ್ಲಿಯೂ ಸಿಕ್ಕ ಸಿಕ್ಕವರಲ್ಲಿ ರೇಗಾಡುವುದು, ಮನೆಯವರ ನೆಮ್ಮದಿಯನ್ನು ಸಂಘದ ಸಮಸ್ಯೆಗಳನ್ನೊಯ್ದು ಹಾಳುಗೆಡವುದು ಸರ್ವಥಾ ಸಂಮ್ಮತವಲ್ಲ.
ಮುಂದುವರೆಯುವುದು…
ಶಂ.ನಾ.ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ – ೬೭೧೫೫