ಸಮಾಜಮುಖಿ ಜೀವನ ಸಾಗಿಸಿದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾವ್
ಸಹಕಾರ ಮಂತ್ರವನ್ನು ತನ್ನ ಜೀವಿತ ಕಾಲದಲ್ಲಿ ಪಾಲಿಸಿಕೊಂಡು ಬಂದ ಮೊಳಹಳ್ಳಿ ಶಿವರಾವ್ ಸಹಕಾರ ರಂಗದ ಆದರ್ಶ ವ್ಯಕ್ತಿ. ಸಹಕಾರ ರಂಗದಲ್ಲಿ ಇವರ ಕಾರ್ಯ ದಾಖಲಾರ್ಹ.
ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡ ಸಹಕಾರ ಕ್ಷೇತ್ರ ಇಂದು ದೇಶ-ವಿದೇಶಗಳಲ್ಲೂ ಛಾಪು ಮೂಡಿಸಿದ ಅಪೂರ್ವ ಕ್ಷೇತ್ರ, ಸಮಬಾಳೆ ತತ್ವ ಪ್ರತಿಪಾದಿಸುವ ಸಹಕಾರ ಕ್ಷೇತ್ರ ಸಾಮಾಜಿಕ ಪರಿವರ್ತನೆಗೆ ತನ್ನದೇ ಕೊಡುಗೆ ನೀಡಿದೆ. ಇಂಥ ಮಹಾನ್ ಕ್ಷೇತ್ರ ಸಂಪನ್ನಗೊಳಿಸಿದವರು ಹಲವರು. ಅಂಥ ಮಹಾನುಭಾವರಲ್ಲಿ ಸ್ಮರಿಸಲೇಬೇಕಾದ ಹೆಸರು ಮೊಳಹಳ್ಳಿ ಶಿವರಾಯರದು.
1880 ಆಗಸ್ಟ್ 4ರಂದು ರಂಗಪ್ಪಯ್ಯ -ಮೂಕಾಂಬಿಕಾ ದಂಪತಿ ಮಗನಾಗಿ ಜನಿಸಿದ ಶಿವರಾವ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ-ಮೂಲೆಯಲ್ಲೂ ಸಹಕಾರ ಆಂದೋಲನ ಸಂಘಟಿಸಿ ಹಲವು ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದರು. ಇದರಿಂದ ಅವರನ್ನು ಅವಿಭಜಿತ ಜಿಲ್ಲೆಯ ‘ಸಹಕಾರ ಪಿತಾಮಹ’ರೆಂದೇ ಕರೆಯಲಾಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲೇ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಅವರು ಮುಂದೆ ಸಹಕಾರ ಕ್ಷೇತ್ರ ಮೂಲಕ ಗ್ರಾಮಾಭಿವೃದ್ಧಿಯ ಕನಸು ಕಂಡವರು. ಗ್ರಾಮ ಭಾರತ ನಿರ್ಮಾಣವೇ ನನ್ನ ಗುರಿ, ಅದರ ಸಾರ್ಥಕತೆಗೆ ಸಹಕಾರ ಕ್ಷೇತ್ರ ಉತ್ತಮ ಸಾಧನ ಎಂದಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕಲ್ಪನೆಗೆ ಸಹಕಾರ ಆಂದೋಲನದ ಮುಖಾಂತರ ಜಿಲ್ಲೆಯಲ್ಲಿ ಭದ್ರ ಅಡಿಪಾಯ ಹಾಕಿ ಅದ್ಭುತ ರೀತಿಯಲ್ಲಿ ಮೊಳಹಳ್ಳಿ ಶಿವರಾಯರು ಸಾಕ್ಷಾತ್ಕರಿಸಿದ್ದಾರೆ. 1967 ಜುಲೈ 4ರಂದು ಕೀರ್ತಿಶೇಷರಾದರೂ ಶಿವರಾಯರು ಸಹಕಾರ ರಂಗದಲ್ಲಿ ಮೂಡಿಸಿದ ಛಾಪು ಅಜರಾಮರ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಸಹಕಾರ ಕ್ಷೇತ್ರದತ್ತ ಹೆಚ್ಚು ಕಾರ್ಯೋನ್ಮುಖರಾಗಿದ್ದರು. ಶಿವರಾವ್ ತಮ್ಮ 87 ವರ್ಷಗಳ ಜೀವಿತ ಕಾಲದಲ್ಲಿ 58 ವರ್ಷ ಸಹಕಾರ ರಂಗಕ್ಕೆ ಮೀಸಲಿರಿಸಿದ್ದರು. ಶಿವರಾಯರು ಕೇವಲ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಇಂದು ಕೂಡ ಸಹಕಾರಿಗಳೆಲ್ಲರ ಮನದಲ್ಲಿ ರಾರಾಜಿಸುತ್ತಿದ್ದಾರೆ.
ಎಸ್ಸಿಡಿಸಿಸಿ ಬ್ಯಾಂಕ್ ಸ್ಥಾಪನೆ
ಹಳ್ಳಿ-ಹಳ್ಳಿಗಳಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಹಣಕಾಸಿನ ನೆರವಿನ ಅಗತ್ಯತೆ ಮನಗಂಡು ಮಾತೃಸಂಸ್ಥೆಯೊಂದನ್ನು ಹುಟ್ಟು ಹಾಕುವ ನಿರ್ಧಾರ ಕೈಗೊಂಡು 1914 ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಸ್ಥಾಪಿಸಿದರು. ಆಗ ಮೊಳಹಳ್ಳಿ ಶಿವರಾವ್ ಅವರೇ ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಎಲ್ಲರೂ ಬಯಸಿದ್ದರು. ಅದನ್ನು ನಯವಾಗಿ ತಿರಸ್ಕರಿಸಿದ ಶಿವರಾಯರು 1914 ರಿಂದ 1928 ರವರೆಗೆ ಬ್ಯಾಂಕ್ ಉಪಾಧ್ಯಕ್ಷರಾಗಿ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಶಕ್ತಿಯಾದರು. ರೈತರ ಅನುಕೂಲಕ್ಕಾಗಿ 1925 ರಲ್ಲಿ ಈ ಬ್ಯಾಂಕ್ ಪುತ್ತೂರಿನಿಂದ ಜಿಲ್ಲಾ ಕೇಂದ್ರ ಮಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಮೊಳಹಳ್ಳಿ ಶಿವರಾಯರು 1931 ರಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿ 1952 ರವರೆಗೆ 21 ವರ್ಷ ಕಾಲ ಬ್ಯಾಂಕನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈಗ ಬ್ಯಾಂಕ್ ಶತಮಾನೋತ್ಸವ ಪೂರೈಸಿ ಮುನ್ನಡೆಯುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಇಂದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ದೇಶದಲ್ಲೇ ಮೊಟ್ಟಮೊದಲ ಬಾರಿ ರೂಪೇ, ಕಿಸಾನ್ ಕಾರ್ಡ್ ಅನ್ನು ರೈತರಿಗೆ ನೀಡಿದ ಹೆಗ್ಗಳಿಕೆ ಎಸ್ ಸಿಡಿಸಿಸಿ ಬ್ಯಾಂಕ್ಗಿದೆ.
ವಿವಿಧ ಸಂಘಗಳ ಸ್ಥಾಪನೆ
1936 ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಗೆ ಕಾರಣರಾದ ಶಿವರಾಯರು ಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್ ಸಂಘ, ಸಹಕಾರಿ ಸ್ಟೋರ್, ಧಾನ್ಯದ ಬ್ಯಾಂಕ್, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್ ಸೋಸೈಟಿ ಮೊದಲಾದ ಸಹಕಾರಿ ಸಂಘಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿದ್ದರು. ಎರಡನೇ ಮಹಾಯುದ್ಧ ಕಾಲದಲ್ಲಿ ಜಿಲ್ಲಾದ್ಯಂತ ತಲೆದೋರಿದ ಆಹಾರ ಧಾನ್ಯದ ಕೊರತೆ ಹೋಗಲಾಡಿಸಲು ಶಿವರಾಯರು ದ.ಕ. ಜಿಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಹೋಲ್ ಸೇಲ್ಸ್ಟೋರ್ ಸಂಘ ಜನತಾ ಬಜಾರ್ ಸ್ಥಾಪಿಸಿದರು.
ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ
ಮೊಳಹಳ್ಳಿ ಶಿವರಾಯರು 1916 ರಲ್ಲಿ ಪುತ್ತೂರಲ್ಲಿ ಎಜುಕೇಶನ್ ಸೋಸೈಟಿ ಸ್ಥಾಪಿಸಿ ಹೈಸ್ಕೂಲ್ ಆರಂಭಿಸಿದರು. 1917 ರಲ್ಲಿ ವಿಟ್ಲದಲ್ಲಿ ಖಾಸಎಲಿಮೆಂಟರಿ ಶಾಲೆ ಹಾಗೂ ದಕ್ಷಿಣ ಕನ್ನಡ ಗೌಡ ಶಿಕ್ಷಣಾ ಸಂಘ ಸ್ಥಾಪಿಸಿದರು. ಪುತ್ತೂರು ತಾಲೂಕಿನ ಅನೇಕ ಎಲಿಮೆಂಟರಿ ಶಾಲೆಗಳನ್ನು ಹೈಯರ್ಎಲಿಮೆಂಟರಿ ಶಾಲೆಗಳನ್ನಾಗಿ, ಹೈಯರ್ಎಲಿಮೆಂಟರಿಶಾಲೆಯಿರುವಲ್ಲಿ ಹೈಸ್ಕೂಲ್ ವಲ್ಲೂ ಶಿವರಾಯರ ಶ್ರಮವಿದೆ. ಶಿವರಾಯರು ಹಿಂದುಳಿದ ಬಡವರ ಉದ್ದಾರಕ್ಕೂ ಪ್ರಯತ್ನಿಸಿದ್ದಾರೆ. ಮದ್ಯಪಾನ ನಿಷೇಧ, ಅಸ್ಪೃಶ್ಯತೆ ನಿವಾರಣೆ ಹಾಗೂ ಗ್ರಾಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಜನರನ್ನು ಸಂಘಟಿಸಿದ್ದಾರೆ. ಡಾ. ಶಿವರಾಮ ಕಾರಂತರೊಂದಿಗೆ ಶಾಲೆಗಳಲ್ಲಿ ನಾಟಕ, ನೃತ್ಯ, ಮಕ್ಕಳ ಮನೋವಿಕಾಸಕ್ಕಾಗಿ ಮಕ್ಕಳ ಕೂಟ ಹಾಗೂ ಶಿಕ್ಷಣ ಸಪ್ತಾಹವೆಂಬ ವಿಶೇಷ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿಏರ್ಪಡಿಸುತ್ತಿದ್ದರು.
ಕೃಷಿಕರ ಸಹಕಾರಿ ಭಂಡಸಾಲೆ
ಶಿವರಾಯರು ಕೃಷಿಕರ ಶ್ರೇಯೋಭಿವೃದ್ಧಿಯನ್ನೇ ಸಹಕಾರಿ ಸಂಘದ ಮುಖ್ಯ ಧೈಯವನ್ನಾಗಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ. 1919 ರಲ್ಲಿ ಪುತ್ತೂರಿನಲ್ಲಿ ಕೃಷಿಕರ ಸಹಕಾರಿ ಭಂಡಸಾಲೆ ಸಂಘ ಸ್ಥಾಪಿಸಿದರು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತೆ ಶ್ರಮಿಸಿದ ಈ ಸಂಘ 1948 ರವರೆಗೆ ಪುತ್ತೂರಿನಲ್ಲೇ ಇದ್ದು ಮುಂದೆ ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರಿ ಸಂಘವಾಗಿ ಮಂಗಳೂರಿಗೆ ಸ್ಥಳಾಂತರಗೊಂಡಿತ್ತು.