ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ತೊಟ್ಟಿಲು.ದೇಶದ ಆರ್ಥಿಕತೆಯ ಹೆಬ್ಬಾಗಿಲು ಎಂಬ ವಿಷಯದಲ್ಲಿ ಎರಡು ಮಾತಿಲ್ಲ. ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯವರೆಗೆ ತಲುಪಿದ ಅತ್ಯುತ್ತಮ ವ್ಯವಸ್ಥೆ ಸಹಕಾರಿ ಕ್ಷೇತ್ರ. ಸರಕಾರದ ಯಾವ ವ್ಯವಸ್ಥೆ ಕೂಡ ಸಹಕಾರಿ ರಂಗದ ಕಾರ್ಯಚಟುವಟಿಕೆಯ ವೇಗ ಮತ್ತು ಓಘಕ್ಕೆ ಸಮನಾಗದು. ದೇಶದಲ್ಲಿ ಸಹಕಾರಿ ರಂಗದೊಳಗೆ ಸಮ್ಮಿಳಿತವಾದ ವ್ಯವಸ್ಥೆಗಳು ಅನಂತ. ಸಾಮಾನ್ಯವಾಗಿ ಹೇಳುವಂತೆ “ತೊಟ್ಟಿಲಿನಿಂದ ಹಿಡಿದು ಚಟ್ಟದ ವರೆಗೆ” ಸಹಕಾರಿ ಕ್ಷೇತ್ರ ತನ್ನ ಕಾರ್ಯಚಟುವಟಿಕೆಗಳ ವಿಸ್ತಾರವನ್ನು ಹರಹಿಕೊಂಡಿದೆ. ಇದಕ್ಕೆ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದ ‘ಸಹಕಾರದಿಂದ ಸಮೃದ್ಧಿ’ ಧ್ಯೇಯ ಇನ್ನಷ್ಟು ಕಾರ್ಯವಿಸ್ತಾರಕ್ಕೆ ಬಹುಮಾರ್ಗಗಳ ನಕ್ಷೆಗಳನ್ನು ರೂಪಿಸಿಕೊಟ್ಟಿದೆ.
ಸಹಕಾರಿ ರಂಗ ಇಷ್ಟೆಲ್ಲ ಕನಸುಗಳನ್ನು ಹೊತ್ತುಕೊಂಡು ಭಾರತದ ಸಾರ್ವಭೌಮತೆಗೆ, ವಿಶ್ವಗುರು ಶ್ರೇಷ್ಠತೆಗೆ ತನ್ನದೇ ಕೊಡುಗೆಗಳನ್ನು ನೀಡಲು ಮುಂದಾಗಿರುವಾಗ ಸಹಕಾರಿ ವ್ಯವಸ್ಥೆಯೊಳಗಿನ ಕೆಲವೊಂದು ಸ್ವಾರ್ಥ ಹಾಗೂ ಭ್ರಷ್ಟ ಮನಸ್ಸುಗಳು ಮನಸ್ಸಿಗೆ ಹೇಸಿಗೆ ಹುಟ್ಟಿಸುವಂತೆ ವರ್ತಿಸುತ್ತಿರುವುದು ನೋವಿನ ಸಂಗತಿ.
ಪರಸ್ಪರ ವಿಶ್ವಾಸ ಸಹಕಾರಿ ಕ್ಷೇತ್ರದ ಆಧಾರ ಸ್ತಂಭಗಳಲ್ಲಿ ಮೊದಲನೆಯದು ಪರಸ್ಪರ ವಿಶ್ವಾಸ. ಸದಸ್ಯರು ಮತ್ತು ಸಹಕಾರಿ ಸಂಘದ ಆಡಳಿತ ವ್ಯವಸ್ಥೆಯೊಳಗಿನ ವಿಶ್ವಾಸ ಮತ್ತು ನಂಬಿಕೆ. ಹಾಗೆಯೇ ಸಹಕಾರಿಯ ಒಳಗಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ನಡುವಿನ ವಿಶ್ವಾಸ ಹಾಗು ನಂಬಿಕೆ. ಈ ಅಂಶಗಳು ಸಹಕಾರಿ ರಂಗದ ಒಂದು ಸಂಸ್ಥೆಯೊಳಗೆ ಅತ್ಯುತ್ತಮವಾಗಿದ್ದರೆ ಅದು ಎಗ್ಗಿಲ್ಲದೆ ಕುಗ್ಗದೆ ಮುನ್ನಡೆಯಬಹುದು. ಇದುವೆ ಸಹಕಾರಿ ರಂಗದ ಆಸ್ತಿ ಮತ್ತು ಶಕ್ತಿ.
ವಿಶ್ವಾಸದ್ರೋಹದ ಘಟನೆಗಳು.
ಆದರೆ ಇತ್ತೀಚೆಗೆ ಕೇಳಿಬರುತ್ತಿರುವ ಕೆಲವು ಸುದ್ಧಿಗಳು ಈ ವಿಶ್ವಾಸಕ್ಕೆ ದ್ರೋಹ ಬಗೆದಿರುವಂತ ಸಂಗತಿಗಳು. ಒಬ್ಬ ಸದಸ್ಯ ತನ್ನ ಊರಿನ ಪ್ರಾಥಮಿಕ ಸಹಕಾರಿ ಸಂಘದಲ್ಲಿ ವಿಶ್ವಾಸವಿಟ್ಟು ವ್ಯವಹಾರ ಮಾಡುತ್ತಾನೆ. ಅದು ಉಳಿತಾಯ ಖಾತೆಯಿರಬಹುದು, ಠೇವಣಿಗಳಿರಬಹುದು, ಲಾಕರ್ ವ್ಯವಸ್ಥೆಗಳಿರಬಹುದು ಅಥವ ಸಾಲ ಸೌಲಭ್ಯಗಳಿರಬಹುದು. ಆತ ತನ್ನ ಆರ್ಥಿಕ ವ್ಯವಹಾರಕ್ಕೆ ಪ್ರಾಮಾಣಿಕ ಸಂಘವೆಂದು ಗ್ರಹಿಸಿ ವ್ಯವಹಾರಕ್ಕೆ ತೊಡಗುತ್ತಾನೆ. ಈ ವ್ಯವಹಾರ ಆ ಸದಸ್ಯನ ವಿಶ್ವಾಸ ಮತ್ತು ನಂಬಿಕೆಯ ಪ್ರತೀಕ. ಆದರೆ ಆತ ವಿಶ್ವಾಸದಿಂದ ಸಂಘದ ಲಾಕರ್ ಒಳಗೆ ಇಟ್ಟ ವಸ್ತುಗಳು ಆತನಿಗೆ ಅವಶ್ಯವಿದ್ದಾಗ ಲಾಕರಿನೊಳಗೆ ಇಟ್ಟಂತೆ ಇರಲಿಲ್ಲ. ಇದು ಅಲ್ಲಿಯ ಸಿಬ್ಬಂದಿಗಳ ಕೈವಾಡದಿಂದ ನಡೆದ ಕೆಲಸ. ವಿಶ್ವಾಸ ದ್ರೋಹವಲ್ಲದೆ ಇದು ಮತ್ತೇನು?
ಒಳಪೆಟ್ಟು ಹೊಡೆದು ಬದುಕುವವರು!
ಕೆಲವೊಮ್ಮೆ ಸಹಕಾರಿ ಸಂಘದಿಂದ ಸಾಲ ಮಂಜೂರು ಆಗಬೇಕಾದರೆ ಗುಟ್ಟಿನಲ್ಲಿ ಒಂದಿಬ್ಬರು ಸಿಬ್ಬಂದಿಗಳ ‘ಸಹಕಾರ’ ಬೇಕಾಗುತ್ತದೆ. ಅವರಿಗೆ ಸಾಲ ಮಂಜೂರಾದ ಮತ್ತೆ ಸಾಲದ ಮೊತ್ತದಲ್ಲಿ ‘ಸಹಕಾರ’ ಸಂದರಾಯಿತು. ಮೌಲ್ಯವಿಲ್ಲದ ಕಡೆಯ ಹತ್ತು ಸೆಂಟ್ಸ್ ಜಾಗ ಇದ್ದ ಸದಸ್ಯನಿಗೂ ಇಪ್ಪತ್ತು ಲಕ್ಷ ಮಂಜೂರು ಮಾಡಲು ಅವರ ‘ಸಹಕಾರ’ ಇದ್ದರೆ ಆಗುತ್ತದೆ. ಸಾಲ ವಸೂಲಾತಿ ಆದರೆ ಆಯಿತು, ಇಲ್ಲದಿದ್ದರೆ ಸಾಲ ಮಂಜೂರು ಮಾಡಿಸಿದವರು ಅದಕ್ಕೆ ಜವಾಬ್ದಾರರಲ್ಲ. ಆ ಸಿಬ್ಬಂದಿಗಳಂತೂ ಅದನ್ನೇ ದಂಧೆ ಮಾಡಿಕೊಂಡು ಹಾಯಾಗಿರುತ್ತಾರೆ. ಕೇವಲ ಸಿಬ್ಬಂದಿಗಳು ಅಂತ ಅಲ್ಲ. ಆಡಳಿತ ಮಂಡಳಿಯವರ ಕೃಪೆಯೂ ಇಲ್ಲಿ ‘ಕೆಲಸ’ ಮಾಡುತ್ತದೆ. ವಸೂಲಾಗದಿದ್ದರೆ ಮುಂದಿನ ಆಡಳಿತ ಮಂಡಳಿ ಕಷ್ಟ ಅನುಭವಿಸಲಿ ಎಂಬ ಧೋರಣೆ.
ಆಡಳಿತ ಮಂಡಳಿಯ ವೈಫಲ್ಯ.
ಯಾಕೆ ಕೆಲವೊಂದು ಸಹಕಾರಿ ಸಂಘಗಳು ಸಹಕಾರಿ ಕ್ಷೇತ್ರಕ್ಕೆ ಅಪಚಾರವಾಗುವಂತೆ ನಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ಯೋಚಿಸಬೇಕು. ಒಟ್ಟು ವ್ಯವಸ್ಥೆಯನ್ನು ಸದಸ್ಯರ ಸೇವೆಗೆ ಅನುಗುಣವಾಗಿ ಬೆಳೆಸಬೇಕಾದ ಮಹತ್ತರ ಜವಾಬ್ದಾರಿಯನ್ನು ಹೆಗಲಮೇಲೆ ಧರಿಸಬೇಕಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಗಿನ ನೇರಕ್ಕೆ, ಕೆಲವೊಮ್ಮೆ ಅವರೂ ಈ ಹುನ್ನಾರದೊಳಗಿನ ಸೂತ್ರಧಾರರಾಗಿದ್ದುಕೊಂಡು ಸಂಘದ ಮೇಲಿನ ವಿಶ್ವಾಸಕ್ಕೆ ತಿಲಾಂಜಲಿ ನೀಡುವಂತಾಗುವುದು ದುರಂತ
ಆಡಳಿತ ಮಂಡಳಿಯ ಮೇಲೆ ವಿಶ್ವಾಸವಿಟ್ಟು ಅನೇಕ ಸದಸ್ಯರು ಸಂಘದ ಜೊತೆಗೆ ವ್ಯವಹಾರ ಮಾಡುವುದಿದೆ. ಅಪಾರ ನಂಬಿಕೆಯಿಂದ ಲಕ್ಷ ಲಕ್ಷ ಠೇವಣಿ ಜೋಡಿಸಿಡುವುದಿದೆ. ಆದರೆ ಒಂದು ಆಡಳಿತ ಮಂಡಳಿ ಅಧಿಕಾರ ಮುಗಿದು ಹೊಸತು ಬಂದುದು ವಿಶ್ವಾಸಕ್ಕೆ ಅನರ್ಹರಂತೆ ವರ್ತಿಸಿದಾಗ ಸಂಘದ ಏಳುಬೀಳುಗಳು ನಿರ್ಧಾರವಾಗುತ್ತವೆ. ತನ್ನ ಸಂಘದ ಸಿಬ್ಬಂದಿಗಳ ಚಟುವಟಿಕೆಗಳ ಮೇಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕೆಲಸದ ಮೇಲೆ ಗಮನವಿಡದ ಸಂಘದ ಆಡಳಿತ ಮಂಡಳಿ ಅದರಲ್ಲೂ ಅಧ್ಯಕ್ಷರಾದವರು ಸಂಘದ ಕೆಲಸಗಳಿಗೆ ಸಮಯ ಕೊಡದಿದ್ದರೆ ಇಂತಹ ವಿಶ್ವಾಸದ್ರೋಹ ಸುಲಭವಾಗಿ ನಡೆಯಬಹುದು. ಆಡಳಿತ ಮಂಡಳಿಯ ನಿರ್ದೇಶಕರು ಕೂಡ ಕೇವಲ ಮಂಡಳಿ ಸಭೆಗಷ್ಟೆ ಸೀಮಿತವಾದರೆ ಸದಸ್ಯರು ವಿಫಲ ಆಡಳಿತದ ಬಗ್ಗೆ ಯೋಚನೆಮಾಡುವ ಪರಿಸ್ಥಿತಿ ಬಂದೇ ಬರುತ್ತದೆ.
ಪಾರದರ್ಶಕತೆಯಿಲ್ಲದಿದ್ದರೆ ಅವನತಿ ಸಹಕಾರಿ ಸಂಘಗಳ ನಿತ್ಯ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲದೆ ಹೋದರೆ ಅದು ಸಂಘದ ಅವನತಿಗೆ ಕಾರಣವಾಗುತ್ತದೆ. ಒಂದು ಸಂಘದ ದೈನಂದಿನ ವ್ಯವಹಾರಗಳು ಶಿಸ್ತಿನಿಂದ, ಗೌರವದಿಂದ, ವಿಶ್ವಾಸದಿಂದ, ನಂಬಿಕೆಯಿಂದ ಪಾರದರ್ಶಕ ವ್ಯವಸ್ಥೆಯ ಮೇಳೈಸುವಿಕೆಯಲ್ಲಿ ಇಲ್ಲದೆ ಹೋದರೆ ಅಂತಹ ಸಂಘಗಳನ್ನು ಸದಸ್ಯರು ದೂರವಿಡುತ್ತಾರೆ. ಆಡಳಿತ ಮಂಡಳಿ ತನ್ನ ಅಧಿಕಾರಾವಧಿಯಲ್ಲಿ ಸಂಘವನ್ನು ಅಭಿವೃದ್ಧಿಯ ಪಥದಲ್ಲಿ ಮೇಲ್ಮುಖವಾಗಿ ಎತ್ತರಿಸಬೇಕಾದ್ದು ಜವಾಬ್ದಾರಿ. ಅದನ್ನರಿತು ಒಂದಷ್ಟು ಸಮಯ ಸಹಕಾರಿ ಸಂಘದ ಒಟ್ಟು ವ್ಯವಸ್ಥೆಗೆ ಕೊಡದಿದ್ದರೆ ಅವರ ಆಯ್ಕೆ ಮಾಡಿದ ಸದಸ್ಯರಿಗೆ ಅಪಚಾರಮಾಡಿದಂತೆ ಎಂಬುದನ್ನು ತಿಳಿದುಕೊಳ್ಳಬೇಕು.
ಶಂ.ನಾ.ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ