ಭಾಗ – ೨
ಸಂಘದ ಒಳಗೆ ಕೆಲಸ ಆರಂಭ ಆದ ನಂತರ ಪರಸ್ಪರ ಹಾಳು ಹರಟೆ ಇರಬಾರದು. ಶಿಸ್ತು ಪ್ರತಿಯೊಂದು ನಡೆಯಲ್ಲಿ ನುಡಿಯಲ್ಲಿ ಕಾಣುತ್ತಿರಬೇಕು. ಹಾಗೆಂದು ಗಂಭೀರವಾಗಿರಬೇಕೆಂದಲ್ಲ. ಯಾವುದು ಎಲ್ಲಿ ಹೇಗೆ ಇರಬೇಕೊ ಹಾಗಿರಬೇಕು. ಸದಾ ವ್ಯವಹಾರ ನಡೆಸುತ್ತಿರುವ ಸದಸ್ಯರು ಬಂದಾಗ ಕೆಲಸ ಬದಿಗಿಟ್ಟು ಮಾತಾಡಿ. ಅಂತಹ ಸದಸ್ಯರೆ ಸಂಘದ ಆಸ್ತಿ ಎಂಬುದು ನಮಗೆ ನೆನಪಿರಬೇಕು. ಸಾಲ ಪಡೆದು ಸಮಯಕ್ಕೆ ಮರುಪಾವತಿ ಮಾಡುವವರು ಬಂದಾಗ, ಠೇವಣಿದಾರರು ಬಂದಾಗ ಅಂತಹ ಸದಸ್ಯರಿಗೆ ನಮ್ಮ ಗಮನ ಹೆಚ್ಚು ಕೊಡಬೇಕು. ಕಸಗಳ ವಿಲೇವಾರಿ, ಕಡತಗಳ ಜೋಪಾನ ಮಾಡುವಲ್ಲಿ ಅಸಡ್ಡೆಯಂತು ಇರಲೇ ಬಾರದು. ಒಂದು ಜಾಗದಿಂದ ಕಡತವೊಂದನ್ನು ತೆಗೆದರೆ ಅದನ್ನು ಮತ್ತೆ ಅದೆ ಜಾಗದಲ್ಲಿ ಇಡುವ ಅಭ್ಯಾಸ ನಮ್ಮಲ್ಲಿ ಬರಬೇಕು.
ಕೆಲಸ ಎಲ್ಲ ಕರಗತ
ಸದಸ್ಯರಿಗೆ ಕ್ಲಪ್ತ ಸಮಯಕ್ಕೆ ಸೇವೆ ಒದಗಿಸುವುದು ನಮ್ಮ ಪರಮ ಧ್ಯೇಯವಾಗಿರುವುದರಿಂದ ಅವರ ಸದಸ್ಯತನ ಸಂಖ್ಯೆ ಹುಡುಕುವುದು, ಅವರ ಖಾತೆಯಲ್ಲಿನ ವ್ಯವಹಾರದ ಬಗ್ಗೆ ತಿಳಿಸುವುದು ಮುಂತಾದ ಕೆಲಸಗಳು ಸಲೀಸಾಗಿ ಕರಗತವಾಗಿರಬೇಕು. ಸದಸ್ಯರು ವ್ಯವಹರಿಸಲು ಬಂದಾಗ ಸಂಘದ ಯೋಜನೆಗಳು, ಸದಸ್ಯರಿಗೆ ಇರುವ ವ್ಯವಸ್ಥೆಗಳನ್ನು ಮನವರಿಕೆ ಮಾಡುವ ಅವಕಾಶ ಇದೆ. ಅದನ್ನು ಮರೆಯಬಾರದು. ನಮ್ಮ ಸಂಘದ ಕರ್ಯ ಚಟುವಟಿಕೆಗಳು ಸತತ ನೆನಪಿನಲ್ಲಿ ಇರುವುದು ಅಗತ್ಯ. ಗೊಬ್ಬರ ಮಾರಾಟ ಇದ್ದರೆ ಅದರ ಲಭ್ಯತೆ, ಬೆಲೆಯ ವಿವರ, ದಾಸ್ತಾನು ಇರದಿದ್ದರೆ ಬರಬಹುದಾದ ಅಂದಾಜು ದಿನವನ್ನು ಅವರಿಗೆ ತಿಳಿಸುವುದು ಬುದ್ಧಿವಂತಿಕೆ. ಒಬ್ಬ ಸದಸ್ಯ ಯಾವುದೇ ಕೆಲಸದ ಬಗ್ಗೆ ಬಂದಿರಲಿ, ಅಂದರೆ ಖಾತೆ ಹೊಸದಾಗಿ ತೆರೆಯಲು, ಠೇವಣಿ ಹೂಡಲು ಬಂದಿದ್ದರೆ ಅದಕ್ಕೆ ಇರುವ ಸಿಬ್ಬಂದಿ ಬಾರದಿದ್ದರೂ ಅಲ್ಲಿಗೆ ಹೋಗಿ ಆ ಕೆಲಸ ಮಾಡಿ ಕೊಡುವ ಜಾಣ್ಮೆ ನಮ್ಮಲ್ಲಿರಬೇಕು. ಕೆಲವು ಸಂಘಗಳಲ್ಲಿ ನಾನು ನೋಡಿದ ಹಾಗೆ ಸದಸ್ಯರು ವ್ಯವಹಾರಕ್ಕೆ ಬಂದಾಗ ಎದುರಿನ ಸಾಲಿನಲ್ಲಿ ಇಲ್ಲದಿದ್ದರೆ ಹಿಂದಿನ ಸಾಲಿನಿಂದ ಮುಂದೆ ಬಂದು ಕೆಲಸ ಮಾಡಿಕೊಡುವ ಅಭ್ಯಾಸ ಸಾಕಷ್ಟು ಸಿಬ್ಬಂದಿ ಬೆಳೆಸಿಕೊಂಡಂತೆ ಕಾಣುತ್ತಿಲ್ಲ.
ಕೆಲಸದಲ್ಲಿ ಜಾಣತನ ಇರಲಿ.
ನಾವು ಕೆಲಸ ಮಾಡುವ ಸಂಘ ಎಂದರೆ ಅದು ನಮಗೆ ಅನ್ನ ಕೊಡುವ ಸಂಸ್ಥೆ. ಅದರ ಏಳು ಬೀಳು ಎಂದರೆ ಅದು ನಮ್ಮ ಏಳು ಬೀಳು. ಪ್ರತಿಯೊಂದು ಹಂತದಲ್ಲಿಯೂ ಸಂಘದ ಆಸ್ತಿ ಪಾಸ್ತಿ, ವಸ್ತುಗಳ ಬಗ್ಗೆ ಗಮನ ಬೇಕು. ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಮುಂತಾದ ಕೆಲಸಕ್ಕೆ ಅಗತ್ಯ ವ್ಯವಸ್ಥೆಗಳು ಕೆಲಸ ಸರಿಯಾಗಿ ಮಾಡುತ್ತಿವೆಯೊ ಎಂಬ ತಿಳುವಳಿಕೆ ನಾವು ಮೊತ್ತ ಮೊದಲಾಗಿ ಪಡೆದುಕೊಳ್ಳಬೇಕು. ಸಣ್ಣಪುಟ್ಟ ರಿಪೇರಿಗಳು ಬಂದಾಗ ಇನ್ನೊಬ್ಬರಿಗೆ ಕಾಯದೆ ನಾವೇ ಸರಿಪಡಿಸಿಕೊಳ್ಳುವ ಉತ್ಸಾಹ ಬೆಳೆಸಿಕೊಳ್ಳಬೇಕು. ಗೊತ್ತಿಲ್ಲದ ವಿಷಯಗಳನ್ನು ಅರಿತುಕೊಳ್ಳುವ ಉತ್ಸಾಹ ಬೇಕು. ಸಂಘಕ್ಕೆ ಆದಾಯ ತಂದುಕೊಡುವ ದಾರಿಗಳನ್ನು ಕಂಡುಹುಡುಕುವುದು, ಅದಕ್ಕೆ ಒತ್ತು ಕೊಡುವುದು ಸದಸ್ಯರಿಗೆ ಕೊಡುವ ಸೇವೆಯ ಜೊತೆ ಜೊತೆಗೆ ಆದರೆ ಚೆನ್ನ. ಸದಸ್ಯರನ್ನು ಇದರಲ್ಲಿ ಮಿಳಿತಗೊಳಿಸಿ ಹೊಸ ಸೇವೆಗಳನ್ನು ತರುವುದು ಹೆಚ್ಚು ಪ್ರಯೋಜನಕಾರಿ.
ಸ್ವಾರ್ಥ ಬದಿಗಿರಿಸಿ ಕೆಲಸ.
ಕೆಲವು ಸಲ ನಮಗೆ ಅರಿವಿರದೆ ತಪ್ಪುಗಳು ಘಟಿಸುವುದುಂಟು. ಇದಕ್ಕೆ ಕ್ಷಮೆ ಇದೆ. ಆದರೆ ಉದ್ದೇಶ ಪೂರ್ವಕ ಹಣ ಹೊಡೆಯುವ ಸಿಬ್ಬಂದಿ ಅಥವ ಆಡಳಿತ ನಿರ್ದೇಶಕರು ಹಲವೆಡೆ ಸಂಘವನ್ನು ಮುಳುಗಿಸಿದ್ದನ್ನು ಕೇಳಿದ್ದೇವೆ. ಹಲವು ದಾರಿಗಳಲ್ಲಿ ಹಣ ಮಾಡುವ ಚಾಕಚಕ್ಯತೆ ಅವರಿಗೆ ಗೊತ್ತಿದೆ. ಸದಸ್ಯರಿಗೆ ಸಾಲ ಕೊಡಿಸುವಾಗ ಅದರಲ್ಲಿ ಒಂದಷ್ಟು ಹೊಡೆಯುವ ಮನಸ್ಸು. ಗೊಬ್ಬರ, ಕೀಟನಾಶಕ ಮಾರಾಟ ಮಾಡುವ ಹೊತ್ತಿನಲ್ಲಿ ಅದರಲ್ಲಿ ಸ್ವಲ್ಪ ಸಿಗುತ್ತೊ ಅನ್ನುವ ಬಯಕೆ. ಕಟ್ಟಡ ಕಟ್ಟುವುದಿದ್ದರೆ ಅದರಲ್ಲಿ ನಮ್ಮವರಿಗೆ ಕಾಂಟ್ರಾಕ್ಟ್ ದೊರಕಿಸಿ ಅಲ್ಲೂ ಒಂದಷ್ಟು ಪಡೆಯುವ ಆಸೆ. ಇನ್ನೂ ಅನೇಕ ದಾರಿಗಳನ್ನು ಹುಡುಕಿ ಸ್ವಂತಕ್ಕೆ ಗಳಿಸುವ ಆಸೆ ಇದೆಲ್ಲ ಕೈ ಬಿಡಬೇಕು. ಸರಿಯಾದ ಆಡಳಿತ ಮಂಡಳಿ ಇದ್ದರೆ ಇಂತಹವುಗಳಿಗೆ ಅವಕಾಶ ಕೊಡದು. ಎಲ್ಲವೂ ಪಾರದರ್ಶಕ ಆಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿಯದ್ದು.
ಬದಲಾವಣೆ ಕೇಳಿ ಪಡೆದುಕೊಳ್ಳಿ
ಸಹಕಾರಿ ಸಂಘಗಳಿಗೆ ಶಾಖೆಗಳಿದ್ದರೆ ಅಲ್ಲಿ ಕೂಡಾ ಕೆಲಸ ಮಾಡುವ ಉತ್ಸಾಹ ನಮ್ಮಲ್ಲಿರಬೇಕು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರು ಸೇರಿ ಶಾಖೆಗಳಿಗೆ ವರ್ಗಾವಣೆ ಮಾಡದಿದ್ದರೆ ಕೇಳಿ ವರ್ಗಾವಣೆ ಮಾಡಿಸಿಕೊಳ್ಳಿ. ಬೇರೆ ಬೇರೆ ಪರಿಸರದಲ್ಲಿ ದುಡಿಯುವ ಆಸಕ್ತಿ ಇದ್ದವರು ಚೆನ್ನಾಗಿ ಬೆಳೆಯುತ್ತಾರೆ. ಅರಿವು ಹೆಚ್ಚಿಸಿಕೊಳ್ಳುತ್ತಾರೆ. ಸಂಘದ ಕೆಲಸಗಳು ಯಾವುದಾದರು ಕಲಿಯುವುದಿದ್ದರೆ, ತರಬೇತಿ ಬೇಕಾದರೆ ಕೇಳಿ ಪಡೆದುಕೊಳ್ಳಿ. ಕಾಲ ಬದಲಾದಂತೆ ನಮ್ಮಲ್ಲಿಯೂ ಬದಲಾವಣೆ ಆಗಬೇಕು. ನಮ್ಮ ಸಂಘ ಕೂಡ ಬದಲಾಗಬೇಕು. ಸದಸ್ಯರು ಬಯಸಿದ ಸೇವೆ ದೊರಕಿಸಿಕೊಡುವ ಮಹತ್ತರ ಜವಾಬ್ದಾರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಇದೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಜಾಣತನ.
ಶಂ. ನಾ. ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ – ೬೭೧೫೫