ನಮ್ಮ ದೇಶದಲ್ಲಿ ಸಹಕಾರ ಸಪ್ತಾಹವನ್ನು ಕಳೆದ 70 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.70 ವರ್ಷಗಳ ಹಿಂದೆ ರಾಷ್ಟ್ರೀಯ ಸಹಕಾರಿ ಯೂನಿಯನ್ ಸೂಚನೆ ಮೇರೆಗೆ ನವಂಬರ್ ತಿಂಗಳ ಪ್ರಥಮ ಶನಿವಾರವನ್ನು ಸಹಕಾರಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿತ್ತು. ಬಳಿಕ ಪ್ರತಿ ವರ್ಷ ನವಂಬರ್ 14ರಿಂದ ನವಂಬರ 20 ರ ತನಕ ಸಪ್ತಾಹವನ್ನು ದೇಶದಾದ್ಯಂತ ಆಚರಿಸಿಕೊಂಡು ಬರುತ್ತಿರುವುದು ಪದ್ದತಿ.ಅಂತರಾಷ್ಟ್ರೀಯ ಸಹಕಾರಿ ಮೈತ್ರಿ ಕೂಟ(ICA) ಸಹಕಾರಿ ಸಪ್ತಾಹದ ಪರಿಕಲ್ಪನೆಯನ್ನು ಜ್ಯಾರಿಗೆ ತಂದಿತು.ಮಾಜಿ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರೂರವರು ಸಹಕಾರಕ್ಕೆ ನೀಡಿದ ಪ್ರೋತ್ಸಾಹದ ದ್ಯೋತಕವಾಗಿ ಅವರ ಜನ್ಮ ದಿನ ನವಂಬರ 14ರಿಂದ ಆರಂಭಿಸಿ ನ. 20ರ ತನಕ ಸಹಕಾರ ಸಪ್ತಾಹವನ್ನು ಆಚರಿಸುವ ಪದ್ದತಿಯನ್ನು ರಾಷ್ಟ್ರೀಯ ಸಹಕಾರಿ ಯೂನಿಯನ್ ನಮ್ಮ ದೇಶದಲ್ಲಿ ಜ್ಯಾರಿಗೆ ತಂದಿತು. ಸಪ್ತಾಹದ ಧ್ಯೇಯವಾಕ್ಯವನ್ನು ರಾಷ್ಟ್ರೀಯ ಸಹಕಾರಿ ಯೂನಿಯನ್ ಪ್ರತಿವರ್ಷ ನಿರ್ಣಯಿಸಿˌ ಪ್ರತಿಯೊಂದು ದಿನವನ್ನು ಸಹಕಾರದ ಪ್ರಸರಣಕ್ಕೆ ಪೂರಕವಾದ ವಿಷಯಗಳನ್ನು ನಿಗದಿ ಪಡಿಸಿ ರಾಜ್ಯ ಸಹಕಾರಿ ಮಹಾಮಂಡಲ ರಾಜ್ಯˌಮಟ್ಟದಲ್ಲಿ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಜಿಲ್ಲಾ ಮಟ್ಟದಲ್ಲಿ ಮುಂಚಿತವಾಗಿ ಸಮಾರಂಭ ನಡೆಸುವ ಸಹಕಾರಿ ಸಂಘವನ್ನು ಗುರುತಿಸಿˌ ಆ ಸಂಘದ ನೇತೃತ್ವದಲ್ಲಿ ಸಭೆ ಸಮಾರಂಭˌ ಕ್ರೀಡೆˌ ಮನೋರಂಜನೆ ಹಾಗೂ ಸಹಕಾರಿ ಬಂಧುಗಳಿಗೆ ಶಿಕ್ಷಣನೀಡುವಂತಹ ಕಾರ್ಯಕ್ರಮಗಳನ್ನು ಆಚರಿಸಿ ಸಹಕಾರದ ಪ್ರಚಾರಕ್ಕೆ ಒತ್ತುಕೊಡಲಾಗುತ್ತದೆ.
ಸಹಕಾರಿ ಕ್ಷೇತ್ರದ ಈ ವರೆಗಿನ ಕಾರ್ಯವೈಖರಿಯ ಸಿಂಹಾವಲೋಕನ ಹಾಗೂ ಮುಂದಿನ ಕಾರ್ಯಭಾಗದ ಕುರಿತು ಅವಲೋಕನ ಸಹಕಾರಿ ಸಪ್ತಾಹದ ಮುಖ್ಯ ಕಾರ್ಯಸೂಚಿ. ಸಹಕಾರಿ ನೇತಾರರು ಹಾಗೂ ಸಹಕಾರಿವಿಷಯದ ಪರಿಣತರ ಉಪಸ್ಥಿತಿಯಲ್ಲಿ ಸಭೆ ಸಮಾರಂಭˌಚರ್ಚಾಗೋಷ್ಟಿˌ ವಿಷಯಾಧಾರಿತವಾಗಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಸಹಕಾರಿ ಹಬ್ಬದ ರೀತಿಯಲ್ಲಿಸಪ್ತಾಹ ಆಚರಿಸಲ್ಪಟ್ಟಾಗ ಯುವ ಸಹಕಾರಿಗಳಲ್ಲಿ ಹುಮ್ಮಸು ಉಂಟಾಗಿ ಸಹಕಾರ ಚಳವಳಿ ವೃದ್ದಿಯಾಗಲು ಇದೊಂದು ರಹದಾರಿ. ಡಾ. ಎ. ಪಿ. ಜೆ. ಅಬ್ದುಲ್ ಕಲಾಂರವರು ರಾಷ್ಟ್ರಪತಿಯಾಗಿದ್ದ ಸಂದರ್ಭ ಅವರು “ಸಹಕಾರಿ ಸಂಸ್ಥೆಗಳು ದ್ವಿತೀಯ ಹಸಿರು ಕ್ರಾಂತಿ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಸಾಧನ”ಎಂಬ ಧ್ಯೇಯವಾಕ್ಯದಡಿ ಸಪ್ತಾಹ ಆಚರಿಸಲು ಸೂಚನೆ ನೀಡಿ ಸಹಕಾರಿ ಮಹತ್ವವನ್ನು ಪ್ರಜೆಗಳ ಮುಂದಿಟ್ಟಿದ್ದರು. ರಾಷ್ಟ್ರದ ಹಸಿರುಕ್ರಾಂತಿˌ ಬಿಳಿ(ಹಾಲು)ಕ್ರಾಂತಿಗೆ ಸಹಕಾರಸಿದ್ದಾಂತ ಕಾರಣ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಬಂಡವಾಳಶಾಹಿˌ ನೌಕರಶಾಹಿಯ ಮಧ್ಯದ ಸುವರ್ಣ ದಾರಿ ಸಹಕಾರ. ಜನರ ಆರ್ಥಿಕತೆ ಬೆಳವಣಿಗೆಯಾಗಬೇಕಾದರೆ ಕೃಷಿಕ್ಷೇತ್ರ ಇನ್ನಷ್ಟು ನೂತನ ತಂತ್ರಜ್ಞಾನದೊಂದಿಗೆ ಮುನ್ನಡೆಯಬೇಕು. ಕೃಷಿಕ್ಷೇತ್ರಕ್ಕೆ ಪ್ರತಿಹಳ್ಳಿಯಲ್ಲಿ ನಿಕಟ ಸಂಪರ್ಕಹೊಂದಿಸಲು ಸಾಧ್ಯವಿರುವ ಏಕೈಕ ಮಾಧ್ಯಮ ಸಹಕಾರ. ಸಹಕಾರದ ಹಬ್ಬವನ್ನು ಸಪ್ತಾಹದ ಮೂಲಕ ಆಚರಿಸಿದಾಗ ಅದಕ್ಕೊಂದು ವಿಶೇಷ ಪ್ರಚಾರ ದೊರೆತು ಬೆಳವಣಿಗೆಗೆ ಸಾಧ್ಯತೆಯಿದೆಯೆಂಬುದು ಸಪ್ತಾಹಕ್ಕೆ ವಿಶೇಷ ಚೌಕಟ್ಟು ನೀಡಿ ಹುಟ್ಟುಹಾಕಿದ ಮಹನೀಯರ ಆಶಯ.
ಇಂದು ಸಹಕಾರ ಸಪ್ತಾಹಗಳು ಸನ್ಮಾನˌಸಮಾರಂಭ ಭಾಷಣಗಳಿಗೆ ಸೀಮಿತವಾಗುತ್ತಿರುವುದು ಕಾಣುತ್ತಿದ್ದೇವೆ.ಇಪ್ಪತ್ತೈದು ವರ್ಷಗಳ ಹಿಂದೆ ಸಹಕಾರಕ್ಷೇತ್ರದಲ್ಲಿ ಅವ್ಯವಹಾರ ˌಭ್ರಷ್ಟಾಚಾರಗಳು ಅಲ್ಲೊಂದುˌಇಲ್ಲೊಂದು ಅಪರೂಪದಲ್ಲಿ ಕೇಳಿಬರುತ್ತಿತ್ತು. ಆದರೆ ಇಂದು ಸಹಕಾರದ ಆಡಳಿತ ದಲ್ಲಿ ಪಕ್ಷ ರಾಜಕಾರಣದ ಪ್ರಭಾವ ˌಸ್ವಹಿತಾಸಕ್ತಿಯ ಕಾರಣದಿಂದ ಸಹಕಾರದ ಮೂಲ ಆಶಯಕ್ಕೆ ದಕ್ಕೆಯಾಗುತ್ತಿರುವುದು ಖೇದಕರ ಸಂಗತಿ.ರಾಜಕೀಯಪಕ್ಷಗಳು ತಮ್ಮ ನೆಲೆಯನ್ನು ಗಟ್ಟಿಗೊಳಿಸಲು ಗ್ರಾಮೀಣಹಂತ ಸಹಿತ ಎಲ್ಲಾ ಪ್ರತಿಷ್ಟಿತ ಸಂಘಗಳಲ್ಲಿ ಅನಧಿಕೃತವಾಗಿ ತಮ್ಮ ಕಾರ್ಯಕರ್ತರ ಮೂಲಕ ಆಡಳಿತವನ್ನುಹಿಡಿಯಲು ಮುಂದಾಗುತ್ತಿದ್ದುˌಸಹಕಾರದ ಕಾನೂನು ನಿಯಮˌ ಆಡಳಿತ ನಿರ್ವಹಣೆಯ ಅರಿವಿಲ್ಲದ ಸ್ವಹಿತಾಸಕ್ತಿಗಾಗಿ ಸ್ಥಾನಗಿಟ್ಟಿಸುವ ಅಧ್ಯಕ್ಷˌ ಆಡಳಿತಮಂಡಳಿ ಸದಸ್ಯರುಗಳುˌಭ್ರಷ್ಟ ಸಹಕಾರಿ ಇಲಾಖಾ ಅಧಿಕಾರಿಗಳುˌ ಶಿಬಂಧಿಯನ್ನು ಶಿಸ್ತುಬದ್ದವಾಗಿ ನಿಭಾಯಿಸಿ ದೈನಂದಿನ ವ್ಯವಹಾರವನ್ನು ಕ್ಲಪ್ತರೀತಿಯಲ್ಲಿ ನಡೆಸಲು ಸಾಧ್ಯವಿಲ್ಲದ ಮುಖ್ಯಕಾರ್ಯನಿರ್ವಹಣಾಧಿಕಾರಿˌ ದುಡಿಮೆಯ ಶಿಕ್ಷಣವಿಲ್ಲದ ಸ್ವಂತ ಉದ್ಯೋಗದ ಧ್ಯೇಯ ಮಾತ್ರ ಹೊಂದಿರುವ ಬದ್ದತೆಯಿಲ್ಲದ ಶಿಬಂಧಿ ಮುಂತಾದ ಋಣಾತ್ಮಕ ಅಂಶಗಳಿಂದ ಸಹಕಾರಿರಂಗ ಸೊರಗುತ್ತಿದೆ. ಈ ತರಹ ಸಹಕಾರತತ್ತ್ವಕ್ಕೆ ಕೊಡಲಿಯೇಟು ನೀಡಿ ನಿಧಾನವಾಗಿ “ಸಹಕಾರ”ವನ್ನು ನಶಿಸುವ ಕಾರ್ಯಗಳನ್ನು ಸಪ್ತಾಹದ ಸಂದರ್ಭ ಗಂಭೀರವಾಗಿ ಪರಿಗಣಿಸಿ ಸಹಕಾರವನ್ನುಉಳಿಸಿ ಬೆಳೆಸುವ ಅಭಿಯಾನ ಕೈಗೊಳ್ಳಬೇಕಾಗಿದೆ. ಇದು ನಿಷ್ಟಾವಂತ ಬದ್ದತೆಯ ಸಹಕಾರಿಗಳು ಹಾಗೂ ಸಜ್ಜನ ಸದಸ್ಯರಿಂದ ಮಾತ್ರ ಸಾಧ್ಯ. ಇತ್ತೀಚೆಗೆ ಕೇಂದ್ರ ಸರಕಾರ ಕೂಡಾ ಸಹಕಾರಕ್ಕೆ ವಿಶೇಷ ಮಹತ್ವ ನೀಡಿದ್ದು ಸಹಕಾರ ಚಳವಳಿಯನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ಧನಾತ್ಮಕ ಚಟುವಟಿಕೆಗಳಿಂದಾಗಿ ಸಪ್ತಾಹದ ಧ್ಯೇಯ ಜನಮಾನಸದ ಮೇಲೆ ಪ್ರಭಾವ ಬೀರಿದಾಗ ಸಹಕಾರಿರಂಗ ನೆರದಾರಿಗೆ ಬರುವಂತಾಗಬಹುದು. ಸಹಕಾರ ಹಬ್ಬ ಜನರನ್ನು ಆಕರ್ಷಿಸುವ ಮೂಲಕ ಮೂಲಸಿದ್ದಾಂತಕ್ಕೆ ದಕ್ಕೆಯಾಗದಂತೆ ತಡೆಬೇಲಿಯಾಗಲಿ. ಆ ಮೂಲಕ ಸಹಕಾರಿಕ್ಷೇತ್ರ ಚೈತನ್ಯಪಡೆದು ಜನರ ಬದುಕಿನ ಸರ್ವ ಅವಶ್ಯಕತೆಗಳ ಕೇಂದ್ರಬಿಂದುವಾಗಲಿ.
ರಾಧಾಕೃಷ್ಣ ಕೋಟೆ
ಅಂಚೆ:ಕಳಂಜ (ಬೆಳ್ಳಾರೆ) ಸುಳ್ಯತಾಲೂಕು
ದ. ಕ. 574212
9448503424