ಡಿಜಿಟಲ್ ಯುಗದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಪ್ರಸ್ತುತತೆ.| ಶ್ರೀ.ಮೋಹನ್‌ದಾಸ್ ಮರಕಡ.

“ದೇಶದ ಜನಸಂಖ್ಯೆಯ ಶೇ.20ರಷ್ಟು ಸಹಕಾರಿಗಳಿರುವ ಕ್ಷೇತ್ರಕ್ಕೆ ಯುನಿವರ್ಸಿಟಿಯ ಅಗತ್ಯ: ಒಂದು ಚಿಂತನೆ”

 


ಕೃಷಿ, ಗ್ರಾಮೀಣ ಅಭಿವೃದ್ಧಿಯಂತಹ ಚಟುವಟಿಕೆಗಳಲ್ಲಿ ತಳಮಟ್ಟದಲ್ಲೇ ಬೇರೂರಿರುವ ಸಹಕಾರ ಕ್ಷೇತ್ರ ಭಾರತದ ಆರ್ಥಿಕತೆಯ ಬಹುಪಾಲು ಅಂಶವನ್ನು ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಸಹಕಾರ ಕ್ಷೇತ್ರ ವ್ಯಾಪಿಸದ ಜಾಗವೇ ಇಲ್ಲ. ಕೃಷಿ, ಹಾಲು, ರಸಗೊಬ್ಬರ, ಗ್ರಾಮೀಣ ಚಟುವಟಿಕೆಗಳು, ಗುಡಿ ಕೈಗಾರಿಕೆ, ವಿದ್ಯಾರ್ಥಿ, ಉದ್ಯೋಗ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರ ಹರಡಿಕೊಂಡಿದೆ. ಆದರೆ ಇಂಥ ಕ್ಷೇತ್ರ ಸರಿಯಾದ ಸಂಶೋಧನೆ, ಅಧ್ಯಯನಗಳಿಲ್ಲದೆ ಬೆಳೆಯಬೇಕಾದ ಎತ್ತರಕ್ಕೆ ಏರದ ಕೊರಗು ಕೂಡ ಇದ್ದೇ ಇದೆ. ಇಂಥ ಕಾಲಘಟ್ಟದಲ್ಲೇ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಸಹಕಾರ ಕ್ಷೇತ್ರಕ್ಕೆಂದೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು ಅದರ ಮುಂದುವರಿದ ಭಾಗವಾಗಿ ಈಗ ಸಹಕಾರ ವಿಶ್ವವಿದ್ಯಾಲಯದ ಪ್ರಸ್ತಾವನೆಯೊಂದನ್ನು ಮುಂದೆ ತಂದಿದೆ.

ಒಂದು ಮಾತಿದೆ… “ಒಂದು ಸಾಮಾನ್ಯ ಗುರಿಯನ್ನು ಸಾಧಿಸಲು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಜನ ಗುಂಪಿನಲ್ಲಿ ಕೆಲಸ ಮಾಡಬೇಕು, ಜತೆಗೆ ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯನ್ನೂ ಗೌರವಿಸಬೇಕು…” ಸಹಕಾರ ಕ್ಷೇತ್ರದ ಕೆಲಸವೂ ಹೀಗೆಯೇ. ಒಂದು ನಿರ್ದಿಷ್ಟ ಗುರಿ ಸಾಧಿಸಲು ಜೊತೆಯಾಗಿ ದುಡಿಯುತ್ತ ಅದರ ಯಶಸ್ಸಿನ ಸಂದರ್ಭದಲ್ಲಿ ಪರಸ್ಪರ ಗೌರವ ನೀಡುವ ಪದ್ಧತಿಯನ್ನು ಬೆಳೆಸಿಕೊಳ್ಳುವುದು ಸಹಕಾರ ಕ್ಷೇತ್ರದ ಯಶಸ್ಸಿನ ಗುಟ್ಟು. ಭಾರತದಲ್ಲಿ ಸಹಕಾರ ಕ್ಷೇತ್ರ ಒಂದು ರೀತಿಯಲ್ಲಿ ದೊಡ್ಡಮಟ್ಟದಲ್ಲೇ ಬೆಳೆದಿದೆ. ದೇಶದ ಜನಸಂಖ್ಯೆಯ ಶೇ.೨೦ ಭಾಗದಷ್ಟು ಜನ ಸಹಕಾರ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಅಂಕಿ ಅಂಶವೇ ಭಾರತದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಯನ್ನು ವಿಶದಪಡಿಸುತ್ತದೆ. ಅದರಲ್ಲೂಈಗಿನ ಡಿಜಿಟಲ್ ಯುಗದಲ್ಲಿ ಸಹಕಾರ ಕ್ಷೇತ್ರದ ಪ್ರಸ್ತುತತೆ ತುಸು ಹೆಚ್ಚೇ ಇದೆ. ಮೂರ್ನಾಲ್ಕು ವರ್ಷದ ಹಿಂದೆ ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಕಂಗಾಲಾಗಿಸಿದ್ದ ಸಂದರ್ಭ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ತಲ್ಲಣವನ್ನೇನನ್ನೂ ಕಂಡಿದ್ದು ಅನುಭವಕ್ಕೆ ಬಂದಿಲ್ಲ. ಕೊರೊನಾ ಕಾಲದಲ್ಲಿ ಎಲ್ಲ ಆರ್ಥಿಕ ಚಟುವಟಿಕೆಗಳು ಮುಚ್ಚಿದ್ದರೂ ಕೃಷಿ, ಹೈನುಗಾರಿಕೆಯಂತಹ ಸಹಕಾರ ಕ್ಷೇತ್ರದ ಚಟುವಟಿಕೆಗಳು ನಿರಾತಂಕವಾಗಿಯೇ ನಡೆದಿತ್ತು. ಇದು ಸಹಕಾರ ಕ್ಷೇತ್ರದ ಉಪಯುಕ್ತತೆಯನ್ನು ಆ ಸಂದಿಗ್ಧ ಕಾಲದಲ್ಲಿ ಎತ್ತಿ ಹಿಡಿದಿತ್ತು. ಇಂಥ ಕ್ಷೇತ್ರವನ್ನು ಇನ್ನಷ್ಟು ಮುನ್ನೆಲೆಗೆ ತರಲೆಂದೇ ಕೇಂದ್ರ ಸರ್ಕಾರ ಸಹಕಾರ ವಿಶ್ವವಿದ್ಯಾಲಯದ ಪ್ರಸ್ತಾವನೆಯನ್ನು ಮುಂದೆ ತಂದಿದೆ.

ಸಹಕಾರಿ ಕಲಿಕೆ ಎಂದರೆ ತಂಡ ಆಧಾರಿತವಾಗಿ ಕಲಿಯುವ ಸಕ್ರಿಯ ಚಟುವಟಿಕೆ. ಸಹಕಾರಿ ಕಲಿಕೆ ರಚನಾತ್ಮಕ ಪ್ರಕ್ರಿಯೆಯನ್ನು ಒಳಗೊಂಡಿದ್ದರೆ ಅದು ಹೆಚ್ಚು ಪರಿಣಾಮಕಾರಿ. ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಅನುಭವ ಹಾಗೂ ಆಲೋಚನೆಗಳಿಂದ ಹೊಸ ಹೊಸ ತಿಳುವಳಿಕೆಯನ್ನು ಆರ್ಜಿಸಿಕೊಂಡು ಹೋಗಬೇಕು. ತನ್ನಲ್ಲಿರುವ ಜ್ಞಾನವನ್ನು ಉಪಯೋಗಿಸಿ ತಾನೇನು ಗುರಿ ತಲುಪಬೇಕು ಎಂದುಕೊಂಡಿರುವರೋ ಅಥವಾ ತಾನೇನು ಸಮಸ್ಯೆಯನ್ನು ಪರಿಹರಿಸಲು ಮುಂದಾಗಿರುವರೋ ಅದಕ್ಕೆ ತನ್ನ ಅನುಭವ, ಆಲೋಚನೆ ಮತ್ತು ತಿಳುವಳಿಕೆಯ ಜ್ಞಾನದಿಂದ ಉತ್ತರ ಕಂಡುಕೊಳ್ಳಬೇಕು. ಇದನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳ ಗುಂಪುಗಳು ಒಟ್ಟಿಗೆ ಸೇರಬಹುದು. ತಂತ್ರಜ್ಞಾನದ ಮೂಲಕ ಪರಸ್ಪರ ಸಂಪರ್ಕ ಸಾಧಿಸಿ ತಾವು ಕಲಿಯಬೇಕಾಗಿರುವ ವಿಷಯದೊಂದಿಗೆ ಆಳವಾದ ಅಧ್ಯಯನ ಕೈಗೊಳ್ಳಲು ಈ ಸಹಕಾರಿ ಕಲಿಕೆ ಉಪಯುಕ್ತ.
ವಿದ್ಯಾರ್ಥಿಗಳ ಅನುಭವದ ದೃಷ್ಟಿಯಿಂದ ಪ್ರಾಯೋಗಿಕವಾದ ಸಹಕಾರಿ ಕಲಿಕೆಯ ಚಟುವಟಿಕೆಗಳು ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿ ತಲುಪಲು ಅವಕಾಶಗಳನ್ನು ಒದಗಿಸುತ್ತವೆ ಮತ್ತು ಹೆಚ್ಚು ಮೌಲ್ಯಯುತವಾದ ‘ಮೃದು’ ಕೌಶಲಗಳನ್ನು ಬೆಳೆಸುತ್ತವೆ. ಈ ‘ಮೃದು’ ಕೌಶಲಗಳು ಸಾಮಾನ್ಯ ಗುರಿಗಳ ಕಡೆಗೆ ತಂಡಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಹೊಸ ಜನರೊಂದಿಗೆ ಸಂವಹನ, ವಿಮರ್ಶಾತ್ಮಕ ಆಲಿಕೆ, ಇತರರ ತಂಡದ ಕೆಲಸ, ಸಮಸ್ಯೆಗೆ ಪರಿಹಾರಗಳನ್ನು ರೂಪಿಸುವ ಕೌಶಲಗಳನ್ನು ಕಲಿಸುತ್ತದೆ. ಯಾವುದೇ ಸಮಸ್ಯೆಗಳಿಗೆ ಟೀಮ್‌ವರ್ಕ್, ವಿಮರ್ಶಾತ್ಮಕ ಆಲೋಚನೆ, ಪರಸ್ಪರ ನಿರ್ವಹಣೆ ಮತ್ತು ಪರಿಣಾಮಕಾರಿ ನಾಯಕತ್ವದ ಸಾಮರ್ಥ್ಯವನ್ನು ಇದು ತಮ್ಮೊಳಗೆ ಆವಾಹಿಸುತ್ತದೆ.
ಕೆಲಸದ ಸ್ಥಳದಲ್ಲಿ ಡಿಜಿಟಲ್ ಪ್ರಯೋಗಗಳು ಉದ್ಯೋಗಿಗಳ ನಡುವೆ ಅನೇಕ ಅಡೆತಡೆಗಳನ್ನು ಮುರಿದು, ನಿಶ್ಚಿತ ಕಾರ್ಯ ಸಾಧಿಸಲು, ತಂಡಗಳು ಹೆಚ್ಚು ನಿಕಟವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ವೀಡಿಯೊ ಕಾನ್ಫರೆನ್ಸಿಂಗ್, ತ್ವರಿತ ಸಂದೇಶ ವಿನಿಮಯ, ಡಿಜಿಟಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ , ಸಮಯ ನಿರ್ವಹಣೆ ಇವೆಲ್ಲವೂ ಯಾವುದೇ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅವಕಾಶ ಒದಗಿಸುತ್ತದವೆ.
ಸಹಕಾರಿ ನಾಯಕರು ತಮ್ಮ ಕಾರ್ಯತಂತ್ರದ ಚಿಂತನೆ, ಸಂವಹನ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಅಥವಾ ವಿಮರ್ಶೆಯಂತಹ ಪ್ರಾಯೋಗಿಕ ಕೌಶಲ್, ಮೃದು ಕೌಶಲಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಾರೆ. ನಂತರ ಕಾರ್ಯತಂತ್ರದ ವಿಭಾಗಗಳಲ್ಲಿ ಅವುಗಳನ್ನು ಅನ್ವಯಿಸುತ್ತಾರೆ. ಇಂದಿನ ಉನ್ನತ ಕಾರ್ಯನಿರ್ವಹಣೆಯ ಸಂಸ್ಥೆಗಳಲ್ಲಿ ನಾವು ನೋಡುವ ಕ್ರಿಯಾತ್ಮಕ, ಚುರುಕುಬುದ್ಧಿಯ ತಂಡಗಳನ್ನು ಅಭಿವೃದ್ಧಿಪಡಿಸಲು ಇದು ಕಾರಣವಾಗುತ್ತದೆ.
ಸಹಕಾರ ಕಲಿಕೆ ಮತ್ತು ಸಾಮಾಜಿಕ ಕೌಶಲಗಳಲ್ಲಿ ತರಬೇತಿಯ ನಡುವೆ ಪ್ರಮುಖ ಸಾಮ್ಯತೆಗಳಿವೆ. ಸಹಕಾರಿ ಕಲಿಕೆಯಲ್ಲಿ ವಿದ್ಯಾರ್ಥಿಗಳು ಇತರರ ಮಾದರಿಗಳನ್ನು (ಮಾಡೆಲಿಂಗ್) ಅನುಕರಿಸುತ್ತಾರೆ. ಸಹಕಾರಿ ಕಲಿಕೆಯು ಸಾಮಾಜಿಕ ಕೌಶಲಗಳನ್ನು ಕಲಿಯುವ ಅಥವಾ ಸುಧಾರಿಸುವ ಹಂತವಾಗಿದೆ.

*ಸಹಕಾರಿ ಕಲಿಕೆ ಏಕೆ?*
ಸಹಕಾರಿ ಕಲಿಕೆಯು ಆ ಕ್ಷೇತ್ರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ನಡುವೆ ಅರಿವಿನ ಹಂಚಿಕೆಯ ಮಾಹಿತಿ ಒದಗಿಸುವುದು, ಸಹಕಾರಿ ವಿಷಯವನ್ನು ಕಲಿಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ವಿದ್ಯಾರ್ಥಿಗಳು ತಮ್ಮ ಸ್ವಂತ ಜ್ಞಾನ ವೃದ್ಧಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು, ರಚನಾತ್ಮಕ ಪ್ರತಿಕ್ರಿಯೆಯನ್ನು ಒದಗಿಸುವುದು, ತರಗತಿಯ ಹೊರಗೆ ಯಶಸ್ಸಿಗೆ ಅಗತ್ಯವಾದ ಸಾಮಾಜಿಕ ಮತ್ತು ಗುಂಪು ಕೌಶಲಗಳನ್ನು ಅಭಿವೃದ್ಧಿಪಡಿಸುವುದು, ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಆರ್ಥಿಕ ಗುಂಪುಗಳ ಸದಸ್ಯರ ನಡುವೆ ಧನಾತ್ಮಕ ಸಂವಹನವನ್ನು ಉತ್ತೇಜಿಸುವುದು ಸಹಕಾರಿ ಕಲಿಕೆಯ ಉದ್ದೇಶ.
ಸಹಕಾರ ಶಿಕ್ಷಣವು ಪ್ರಸಕ್ತ ವಾತಾವರಣದಲ್ಲಿ ನಮ್ಮ ವೃತ್ತಿ ಕೌಶಲಗಳನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಾಯೋಗಿಕ ಮತ್ತು ನಿಖರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ. ಪ್ರಸ್ತಾಪಿತ ಸಹಕಾರ ಕಲಿಕೆಯ ವಿಧಾನ ಹೇಗೆಂದರೆ ಒಂದು ವರ್ಷದ ಕಲಿಕೆಯ ಅರ್ಧ ಭಾಗ ಅಕಾಡೆಮಿಕ್. ಅಂದರೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುವುದು, ಮುಂದಿನ ಅರ್ಧ ಭಾಗ ತಾವು ಮುಂದೆ ಕೆಲಸ ಮಾಡಬಹುದಾದ ಪರಿಸರದಲ್ಲಿ ತಮ್ಮ ವೃತ್ತಿ ಕೌಶಲ ಮತ್ತು ಸಾಮರ್ಥ್ಯ ವೃದ್ಧಿಸಿಕೊಳ್ಳಲು ತರಬೇತಿ ಪಡೆಯುವುದು.
ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮುಂದಾಳತ್ವದಲ್ಲಿ ಸಹಕಾರ ಸಚಿವಾಲಯವು ಸಹಕಾರಿ ವಲಯದಲ್ಲಿ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು, ಸಹಕಾರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಅಂಗಸAಸ್ಥೆಗಳ ಜಾಲದ ಮೂಲಕ ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ರಾಷ್ಟ್ರೀಯ ಮಟ್ಟದ ಸಹಕಾರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕೆ ಬೇಕಾದ ರೂಪುರೇಷೆಗಳು ತಯಾರಾಗಿದ್ದು ಮುಂದಿನ ಸಂಸತ್ ಅಧಿವೇಶನದಲ್ಲಾದರೂ ಮಂಡನೆಯಾಗುವ ನಿರೀಕ್ಷೆ ಇದೆ.

ಪ್ರಸ್ತಾವಿತ ವಿಶ್ವವಿದ್ಯಾಲಯವು ಸಹಕಾರಿ ವಲಯದೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುವ ಸಾಧ್ಯತೆಯಿದ್ದು, ಶಿಕ್ಷಣ ಮತ್ತು ತರಬೇತಿಗಾಗಿ ಸಮಗ್ರ ಮತ್ತು ಪ್ರಮಾಣೀಕೃತ ರಚನೆಯಾಗಿ ಹೊರಹೊಮ್ಮುವ ನಿರೀಕ್ಷೆ ಇಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಹಕಾರಿ ವಲಯದಲ್ಲಿ ತರಬೇತಿ ಪಡೆದ ಮಾನವಶಕ್ತಿಯ ಸ್ಥಿರ, ಸಮರ್ಪಕ ಮತ್ತು ಗುಣಮಟ್ಟದ ಪೂರೈಕೆಯನ್ನು ನಿರೀಕ್ಷಿಸಬಹುದು. ಸಚಿವಾಲಯವು ಕೈಗೊಂಡ ವಿವಿಧ ಉಪಕ್ರಮಗಳ ಯಶಸ್ವಿ ಅನುಷ್ಠಾನ, ವೃತ್ತಿಪರ ಮಾನವಶಕ್ತಿಯ ಪೂರೈಕೆ ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಸಾಮರ್ಥ್ಯ ವೃದ್ಧಿಯು ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ದೊಡ್ಡ ಕೊಡುಗೆ ನೀಡುವಲ್ಲಿ ಸಹಕಾರಿ ವಲಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದೂ ನಿರೀಕ್ಷಿಸಲಾಗಿದೆ.
ಕೋ ಆಪರೇಟಿವ್ ಶಿಕ್ಷಣದ ಪರಿಕಲ್ಪನೆ ಹುಟ್ಟಿಕೊಂಡದ್ದು 1906ರಲ್ಲಿ. ಅಲ್ಲಿಂದ ಮುಂದೆ ಇದು ಏರಿಳಿತದ ಗ್ರಾಫ್‌ನಲ್ಲಿ ಮುಂದೆ ಸಾಗುತ್ತಲೇ ಬಂದಿದೆ. ಪ್ರಸಕ್ತ ಕೇಂದ್ರ ಸರ್ಕಾರ ಅಸ್ವಿತ್ವಕ್ಕೆ ಬಂದ ಬಳಿಕ ಈ ಪರಿಕಲ್ಪನೆ ಸ್ವಲ್ಪ ವೇಗ ಪಡೆದುಕೊಂಡಿದೆ. ಕೆಲವು ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹಕಾರದ ಪಠ್ಯಕ್ರಮವನ್ನು ತಮ್ಮ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿವೆ. ಪ್ರಸಕ್ತ ಸನ್ನಿವೇಶದಲ್ಲಿ ಸಹಕಾರ ವಲಯದ ಪ್ರಸ್ತುತತೆ ಹೆಚ್ಚಿರುವ ಕಾರಣದಿಂದಲೋ ಏನೋ ಸಹಕಾರ ಶಿಕ್ಷಣದ ಪ್ರಚಾರವೂ ವೇಗ ಪಡೆದುಕೊಂಡಿದೆ.
ಸಹಕಾರ ಶಿಕ್ಷಣವು ವಿದ್ಯಾರ್ಥಿಗಳಿಗೆ ತಾವು ಆಯ್ದುಕೊಂಡಿರುವ ಕ್ಷೇತ್ರಕ್ಕೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಅವಕಾಶ ಒದಗಿಸುತ್ತದೆ. ಈಗಿನ ಡಿಜಿಟಲ್ ಯುಗದಲ್ಲಂತೂ ಅದು ಅನಿವಾರ್ಯವೂ ಹೌದು. ಸಹಕಾರ ಶಿಕ್ಷಣ ನಿಖರವಾದ ವಿಷಯವೂ ಇದೇ ಆಗಿದೆ. ಇದರ ಪರಿಕಲ್ಪನೆಯಂತೆ ವಿದ್ಯಾರ್ಥಿಗಳು ಅರ್ಧ ವರ್ಷ ಕಾಲೇಜಲ್ಲಿ ಉಳಿದರ್ಧ ವರ್ಷ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಯ ಮಧ್ಯೆ ಉದ್ಯೋಗಿಗಳಂತೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸಲಾಗುತ್ತಿದೆ.

ಸಹಕಾರ ಕ್ಷೇತ್ರದ ಅಧ್ಯಯನದ ದೃಷ್ಟಿಯಿಂದ ಅಮೇರಿಕಾದಲ್ಲಿ ಈಶಾನ್ಯ ವಿಶ್ವವಿದ್ಯಾಲಯವು 1909ರಲ್ಲಿ ತಮ್ಮ ಇಂಜಿನಿಯರಿಂಗ್ ಕಲಿಕೆಯಲ್ಲಿ ಸಹಕಾರ ಶಿಕ್ಷಣವನ್ನು ಪ್ರಾರಂಭಿಸಿತು. ಆ ವಿಶ್ವವಿದ್ಯಾಲಯವು ಇಂದಿನವರೆಗೂ ಸಹಕಾರ ಶಿಕ್ಷಣದ ಕಲಿಕೆ ನೀಡುವ ಪ್ರಪಂಚದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಪ್ರಸಿದ್ಧಿಯಲ್ಲಿದೆ. ಸಹಕಾರ ಶಿಕ್ಷಣದ ಯಶಸ್ಸನ್ನು ಈ ವಿವಿಯ ಸಾಧನೆ ಸಾಬೀತುಪಡಿಸುತ್ತದೆ. ಸಹಕಾರ ಶಿಕ್ಷಣದ ಪ್ರಾಮುಖ್ಯತೆಗೆ ಮನ್ನಣೆ ಕೊಟ್ಟ ದೇಶಗಳ ಪೈಕಿ ಜರ್ಮನಿಯೂ ಮುಂಚೂಣಿಯಲ್ಲಿದೆ. ಆ ದೇಶದಲ್ಲಿ ಸಹಕಾರ ಶಿಕ್ಷಣದ ಅಡಿಯಲ್ಲಿ, ವಿದ್ಯಾರ್ಥಿಗಳು ಪದವಿ ಪಡೆಯುವ ಮೊದಲೇ ತಾವು ಮುಂದೆ ಮಾಡಬಹುದಾದ ಕೆಲಸಗಳ ಬಗ್ಗೆ ಅನುಭವ ಪಡೆಯಲು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ ಹಲವಾರು ಕಾರ್ಯಕ್ರಮಗಳನ್ನು ಅಲ್ಲಿ ರೂಪಿಸಲಾಗಿದೆ. ವೃತ್ತಿಪರ ತರಬೇತಿಯೊಂದಿಗೆ ತರಗತಿಯ ಶಿಕ್ಷಣವನ್ನೂ ಪಡೆಯುವುದರಿಂದ ವಿದ್ಯಾರ್ಥಿಗಳು ಪದವಿ ಪಡೆದು ಹೊರಗೆ ಬರುವಾಗ ಒಂದಷ್ಟು ಪ್ರಾಯೋಗಿಕ ಜ್ಞಾನವನ್ನೂ ಸಂಪಾದಿಸಿಕೊಂಡಿರುತ್ತಾರೆ.
ಸಹಕಾರ ಕ್ಷೇತ್ರದ ಕಲಿಕೆಯಲ್ಲಿ ಕೆನಡಾ ಕೂಡ ಮುಂಚೂಣಿಯಲ್ಲಿದೆ. 1957ರಲ್ಲಿ ಕೆನಡಾ ಮೊದಲ ಬಾರಿ ಸಹಕಾರ ಶಿಕ್ಷಣ ಕಾರ್ಯಕ್ರಮವನ್ನು ವಾಟರ್ಲೂ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿತು. ಆಗ ಕೆಲವರು ಇದು ಸುಮ್ಮನೆ ಸಮಯ ವ್ಯರ್ಥ ಎಂದು ಅಪಹಾಸ್ಯ ಮಾಡಿದ್ದರು. ಆದರೆ ಅತ್ಯಲ್ಪ ಸಮಯದಲ್ಲೇ ವಿದ್ಯಾರ್ಥಿಗಳ ಆಸಕ್ತಿ ಗಳಿಸಿತಲ್ಲದೆ ಕೆನಡಾದಾದ್ಯಂತ ಎಲ್ಲಾ ಸಹಕಾರ ಕಾರ್ಯಕ್ರಮಗಳಿಗೆ ಈ ಕಲಿಕೆ ಮಾದರಿಯಾಗಿ ಹೊರಹೊಮ್ಮಿತು.

ಯುಕೆ ಸಹಕಾರ ಕಾಲೇಜು ಸಹಕಾರಿ ಕ್ಷೇತ್ರಗಳಲ್ಲಿ ಅನ್ವಯಿಕ ಸಂಶೋಧನೆಯ ಬಗ್ಗೆ ಶಿಕ್ಷಣ ನೀಡುತ್ತವೆ. ಸ್ಪೇನ್ ನ ಮಾಂಡ್ರಗಾನ್ ವಿಶ್ವವಿದ್ಯಾಲಯವು ಸಹಕಾರಿ ಸಂಸ್ಥೆಗಳಿಂದಲೇ ಪ್ರಾರಂಭವಾಗಿದ್ದು, ಇದು ಸಹಕಾರಿ ಸಂಸ್ಥೆಗಳ ಅಧ್ಯಯನಕ್ಕೆ ಸಂಬAಧಿಸಿದ ಕೋರ್ಸ್ಗಳನ್ನು ನೀಡುವ ಸ್ವಾಯತ್ತ ಸಂಸ್ಥೆಯಾಗಿದೆ. ಆಫ್ರಿಕಾ ಖಂಡವು ಸಹಕಾರಿ ವಿಶ್ವವಿದ್ಯಾಲಯಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದು, ಆಫ್ರಿಕನ್ ಯೂನಿವರ್ಸಿಟಿ ಆಫ್ ಕೋಆಪರೇಟಿವ್ ಡೆವಲಪ್‌ಮೆಂಟ್ ಸಂಶೋಧನೆ ಮತ್ತು ತರಬೇತಿಯ ಮೇಲೆ ಕೇಂದ್ರೀಕರಿಸುವ ವಿವಿಧ ಸಹಕಾರಿ ಕೋರ್ಸ್ಗಳನ್ನು ನೀಡುತ್ತದೆ. ಕೀನ್ಯಾದ ಸಹಕಾರ ವಿಶ್ವವಿದ್ಯಾಲಯವು ಡಿಪ್ಲೊಮಾ ಮತ್ತು ಇತರ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಸಹಕಾರ ನಿರ್ವಹಣೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ನೀಡುತ್ತವೆ. ತಾಂಜಾನಿಯಾದ ಮೋಶಿ ಸಹಕಾರ ವಿಶ್ವವಿದ್ಯಾಲಯವು ವಿವಿಧ ರೀತಿಯ ಪದವಿಪೂರ್ವ, ಪದವಿ ಕಾರ್ಯಕ್ರಮಗಳು ಮತ್ತು ಸಹಕಾರಿಗಳ ನಿರ್ದಿಷ್ಟ ಕ್ಷೇತ್ರಗಳಲ್ಲಿ ಡಿಪ್ಲೊಮಾ ಪದವಿಗಳನ್ನು ನೀಡುತ್ತದೆ. ಕೊಲಂಬಿಯಾದ ಸಹಕಾರಿ ವಿಶ್ವವಿದ್ಯಾಲಯವು ಸಹಕಾರಿಗಳನ್ನು ಒಳಗೊಂಡಿರುವ ಸಾಮಾಜಿಕ ಒಗ್ಗಟ್ಟಿನ ಆರ್ಥಿಕತೆಯ ವಿಶಾಲ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಿದೆ. ದಕ್ಷಿಣ ಕೊರಿಯಾದ ಕೃಷಿ ಸಹಕಾರಿ ವಿಶ್ವವಿದ್ಯಾಲಯವು ಕೃಷಿ ಸಹಕಾರ ನಿರ್ವಹಣೆಯಲ್ಲಿ ಎಂಬಿಎ ಪದವಿ ನೀಡುವ ಪ್ರಮುಖ ಕಾರ್ಯಕ್ರಮವನ್ನು ಹೊಂದಿದೆ.
ಭಾರತದಂತಹ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ನಿರುದ್ಯೋಗ ಪ್ರಮಾಣವೂ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಇದಕ್ಕೆ ಶಿಕ್ಷಣ ವ್ಯವಸ್ಥೆಯೂ ಒಂದು ಕಾರಣವಿರಬಹುದು. ಶಿಕ್ಷಣದಲ್ಲಿ ವೃತ್ತಿಪರ ತರಬೇತಿಯ ಕೊರತೆಯಿಂದಲೂ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿರಬಹುದು. ಈ ಸಮಸ್ಯೆಗೆ ಸಹಕಾರ ಶಿಕ್ಷಣದಿಂದ ಸ್ವಲ್ಪಮಟ್ಟಿಗಾದರೂ ಉತ್ತರ ಕಂಡುಕೊಳ್ಳಬಹುದು. ಸಹಕಾರ ಶಿಕ್ಷಣದ ಅನುಷ್ಠಾನದಿಂದ ಒಂದಷ್ಟು ಹೊಸ ಉದ್ಯೋಗಗಳನ್ನೂ ಸೃಷ್ಟಿಸಬಹುದು. ಸಹಕಾರ ಕ್ಷೇತ್ರದಲ್ಲಿ ಅಂಥ ಒಂದು ಅವಕಾಶ ಗೋಚರವಾಗುವುದಂತೂ ಸತ್ಯ. ಸಹಕಾರ ಶಿಕ್ಷಣವು ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಕೆಲಸದ ಕೌಶಲಗಳನ್ನು ಕಲಿಯಲು ತರಬೇತಿ ನೀಡುವುದಲ್ಲದೆ ಅವರಿಗೆ ಪೂರಕವಾಗಿ ಒಂದಷ್ಟು ಆರ್ಥಿಕ ನೆರವನ್ನೂ ಒದಗಿಸುತ್ತದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಅನುದಾನ ಕೂಡ ಲಭಿಸುವುದರಿಂದ ದುರ್ಬಲ ವರ್ಗಗಳಿಗೆ ಆರ್ಥಿಕ ಅನುಕೂಲ ಪಡೆಯಲು ಮತ್ತು ಭವಿಷ್ಯದಲ್ಲಿ ಉತ್ತಮ ವೃತ್ತಿಯನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ.
1860ರ ಸೊಸೈಟೀಸ್ ನೋಂದಣಿ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ ಸಹಕಾರಿ ತರಬೇತಿಯ ರಾಷ್ಟ್ರೀಯ ಕೇಂದ್ರ (NCCT)ವನ್ನು ಸ್ಥಾಪಿಸಿದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಸಹಕಾರಿ ಶಿಕ್ಷಣದ ಕಲಿಕೆಯನ್ನು ಉತ್ತೇಜಿಸಿತು. ಸಹಕಾರ ತರಬೇತಿ ಸಂಘಟಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಇದರ ಗುರಿಯಾಗಿದೆ.

ಸಹಕಾರ ಶಿಕ್ಷಣವು ವಿದ್ಯಾರ್ಥಿಗಳಿಗೆ ವಿವಿಧ ಕೆಲಸಗಳ ರೀತಿ ಮತ್ತು ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಲು ಇರಬೇಕಾದ ಕೌಶಲಗಳನ್ನು ಕಲಿಸುತ್ತದೆ. ಮತ್ತು ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕೋರ್ಸ್ ಗಳನ್ನು ಮುಂದುವರಿಸುವಾಗ ವೃತ್ತಿಪರರಾಗಲು ಅವಕಾಶ ಮಾಡಿಕೊಡುತ್ತದೆ. ಇದು ಅವರ ಸಂದರ್ಶನ ಕೌಶಲಗಳನ್ನು ಸುಧಾರಿಸಲು ಮತ್ತು ಸಂದರ್ಶನದ ಸಮಯದಲ್ಲಿ ಒತ್ತಡದ ಸಂದರ್ಭ ಎದುರಾದಾಗ ಅವರ ಕೌಶಲ್ಯ ಮತ್ತು ಜ್ಞಾನದ ಬಗ್ಗೆ ಹೆಚ್ಚು ವಿಶ್ವಾಸ ಹೊಂದಲು ಸಹಾಯ ಮಾಡುತ್ತದೆ.

ಸಹಕಾರಿ ವಿಶ್ವವಿದ್ಯಾಲಯವು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸುವ ಸಾರ್ವಜನಿಕ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಸಹಕಾರಿ ವಿಶ್ವವಿದ್ಯಾಲಯವು ವಿಭಿನ್ನವಾಗಿರಲಿದ್ದು, ಇದು ಬಹುಶಿಸ್ತಿನ ವಿಧಾನದೊಂದಿಗೆ ಸಹಕಾರಿಗಳ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲಿದೆ. ಪಠ್ಯಕ್ರಮವು ಸಹಕಾರಿ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ಬದಲಾಗಬಹುದು, ಇದು ಸಾಮಾನ್ಯವಾಗಿ ಸಹಕಾರ ಮೌಲ್ಯಗಳು ಮತ್ತು ಪರಸ್ಪರ ಪ್ರಯೋಜನಕ್ಕಾಗಿ ಕೆಲಸ ಮಾಡುವ ತತ್ವಗಳನ್ನು ಒಳಗೊಂಡಿರಲಿದೆ ಎಂದು ಭಾರತೀಯ ಸಹಕಾರ ರಾಷ್ಟ್ರೀಯ ಒಕ್ಕೂಟದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಸಹಕಾರಿ ಸಂಸ್ಥೆಗಳ ವಿವಿಧ ಕ್ಷೇತ್ರಗಳಲ್ಲಿ ಡಿಪ್ಲೊಮಾ / ಪದವಿ / ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಪದವಿಗಳಲ್ಲಿ ಕೋರ್ಸ್ ಅನ್ನು ಮುಂದುವರಿಸಬಹುದು. ಭಾರತದಲ್ಲಿ ಅಸ್ಸಾಂನಲ್ಲಿರುವ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಕೋಆಪರೇಟಿವ್ ಮ್ಯಾನೇಜ್‌ಮೆಂಟ್ ಸಹಕಾರಿ ಸಂಸ್ಥೆಗಳ ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸುವ ಏಕೈಕ ಸಂಸ್ಥೆ. ಕೇರಳದಲ್ಲಿ ಬಿಕಾಮ್ ಪದವಿ ಶಿಕ್ಷಣ ನೀಡುವ ಎಲ್ಲಾ ಕಾಲೇಜುಗಳು ವಿಶೇಷತೆಯ ಕ್ಷೇತ್ರವಾಗಿ ಸಹಕಾರ ಶಿಕ್ಷಣವನ್ನು ನೀಡುತ್ತವೆ. ಮೈಸೂರು ವಿಶ್ವವಿದ್ಯಾಲಯ, ಪಾಂಡಿಚೇರಿ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯಗಳು ಸಹಕಾರದಲ್ಲಿ ಕೋರ್ಸ್ ಅನ್ನು ನೀಡುತ್ತವೆ.
ಸಹಕಾರಿ ಶಿಕ್ಷಣವು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವೃತ್ತಿಜೀವನದ ಸ್ಥಿರತೆಯನ್ನು ನೀಡುತ್ತದೆ ಮತ್ತು ಸಮಾಜದ ಬಡ ಮತ್ತು ಕೆಳವರ್ಗದ ಜನರಿಗೆ ಕೆಲಸದ ಭದ್ರತೆಯನ್ನೂ ಒದಗಿಸುತ್ತದೆ. ಇಫ್ಕೋ, ಕ್ರಿಭ್ಕೋ ಅಮುಲ್ ಮುಂತಾದ ಕೆಲವು ಉತ್ತಮ ಸಹಕಾರಿ ಸಂಸ್ಥೆಗಳು ಎಂಎನ್ ಸಿಗಳಿಗೆ ಸಮಾನವಾಗಿ ವೇತನ ನೀಡಬಲ್ಲ ಸಂಸ್ಥೆಗಳು. ಸಹಕಾರ ಶಿಕ್ಷಣ ಪಡೆದವರಿಗೆ ಇಂಥ ಸಂಸ್ಥೆಗಳಲ್ಲಿ ಉದ್ಯೋಗ ಲಭಿಸಿದರೆ ಸಹಕಾರ ಶಿಕ್ಷಣ ಪಡೆದದ್ದಕ್ಕೂ ಸಾರ್ಥಕತೆ ಲಭಿಸುತ್ತದೆ. ಸಹಕಾರಿ ಸಂಸ್ಥೆಗಳು ಮತ್ತು ಸಹಕಾರಿ ಬ್ಯಾಂಕ್‌ಗಳು ಎಲ್ಲಾ ಹಂತಗಳಲ್ಲಿ ಉದ್ಯೋಗಾವಕಾಶಗಳನ್ನು ನೀಡುತ್ತಲೇ ಬಂದಿವೆ. ಸಹಕಾರಿ ಅಧ್ಯಯನದ ಹಿನ್ನೆಲೆಯೊಂದಿಗೆ, ಉನ್ನತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಚಿವಾಲಯಗಳು, ಸಂಶೋಧನಾ ಸಂಸ್ಥೆಗಳು, ಎನ್ಜಿಒಗಳು ಇತ್ಯಾದಿಗಳಲ್ಲಿ ಉದ್ಯೋಗಾವಕಾಶಗಳಿವೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳ (PACS) ಡಿಜಿಟಲೀಕರಣದ ಬಗ್ಗೆ ಸರ್ಕಾರ ಗಮನ ಹರಿಸಿರುವುದರಿಂದ ಈ ಸಹಕಾರಿ ಸಂಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿ IT-ತರಬೇತಿ ಪಡೆದವರಿಗೂ ಉದ್ಯೋಗ ಪಡೆಯಲು ಉತ್ತಮ ಅವಕಾಶ ಸೃಷ್ಟಿಯಾಗಿವೆ.

ಮೋಹನ್ ದಾಸ್ ಮರಕಡ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More