
ಜಾಗತಿಕ ಆರ್ಥಿಕತೆಯಲ್ಲಿ ವಹಿವಾಟಿನ ಪ್ರಮುಖ ಕರೆನ್ಸಿ ಎನಿಸಿರುವ ಡಾಲರ್‌ನ ಮೌಲ್ಯದೆದುರು ನಮ್ಮ ದೇಶದ ಕರೆನ್ಸಿ ರೂಪಾಯಿಯ ಮೌಲ್ಯ ಸತತವಾಗಿ ಕುಸಿಯುತ್ತಲೇ ಬಂದು ಇವತ್ತು ಒಂದು ಡಾಲರ್ ಎಂದರೆ 86.33 ರೂ.ಗೆ ತಲುಪಿದೆ. ಕಳೆದ ಎಂಟು -ಹತ್ತು ವರ್ಷಗಳಲ್ಲಿ ಡಾಲರ್ ಎದುರು ಶೇ.25ರಷ್ಟು ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.8ರಿಂದ 10ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ದಿನಗಳ ಡಾಲರ್ ನಾಗಾಲೋಟ ಅದರ ಮುನ್ಸೂಚನೆಯನ್ನು ಈಗಾಗಲೇ ಕೊಡುತ್ತಿದೆ.
ಡಾಲರ್ ಎದುರು ರೂಪಾಯಿ ಮೌಲ್ಯದ ಲೆಕ್ಕಾಚಾರಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಅಂದರೆ ಬ್ರಿಟಿಷ್ ಆಡಳಿತಾವಧಿಯಲ್ಲಿ ಜಾಗತಿಕವಾಗಿ ಭಾರತದ ವ್ಯವಹಾರ ಇಂಗ್ಲೆಂಡ್‌ನ ಪೌಂಡ್ ಮೂಲಕ ನಡೆಯುತ್ತಿತ್ತು. ಆಗ ಒಂದು ಪೌಂಡ್‌ಗೆ 13 ರೂ. ಮೌಲ್ಯವಿತ್ತು. ಸ್ವಾತಂತ್ರ್ಯಾ ನಂತರ ಭಾರತದ ವ್ಯವಹಾರ ರೂಪಾಯಿ ಮೂಲಕವೇ ಆರಂಭವಾಯಿತು. ಹಾಗೆ ನೋಡಿದರೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಡಾಲರ್ ಮತ್ತು ರೂಪಾಯಿಯ ಮೌಲ್ಯಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಆಗ ಒಂದು ಡಾಲರ್ ಎಂದರೆ ಒಂದು ರೂಪಾಯಿ ಮೌಲ್ಯವಿತ್ತು ಎಂದು ಆಗಿನ ಇತಿಹಾಸದ ಕೆಲವು ಮೂಲಗಳು ತಿಳಿಸಿವೆ. 1947ರ ಕೊನೆಗೆ ಒಂದು ಡಾಲರ್‌ಮೌಲ್ಯ 3.30 ರೂ. ಆಯಿತು. ನಂತರ ಏರುಗತಿಯಲ್ಲೇ ಸಾಗಿದ ಡಾಲರ್ ಮೌಲ್ಯ ರೂಪಾಯಿ ಮೌಲ್ಯವನ್ನು ಹಿಂದೆ ಹಾಕಿ ನಾಗಾಲೋಟ ಮುಂದುವರಿಸುತ್ತ ಸಾಗಿತು
1950-1960ರ ನಡುವೆ ಡಾಲರ್ ಎದುರು ರೂಪಾಯಿಯ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತು. ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದ್ದು ಆಗ ಡಾಲರ್ ಎದುರು ರೂಪಾಯಿ ಮೌಲ್ಯ 14.75ಕ್ಕೆ ಕುಸಿತ ಕಂಡಿತು.
1962ರಿಂದ 1965ರ ಅವಧಿಯಲ್ಲಿ ಭಾರತ ಚೀನಾ ಮತ್ತು ಪಾಕಿಸ್ತಾನದ ಜತೆಗೆ ಯುದ್ಧ ನಡೆಸುವ ಸ್ಥಿತಿ ಬಂದೊದಗಿತು. ಆಗ ದೇಶದ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿಲ್ಲ. ಇದೇ ಕಾಲಘಟ್ಟದಲ್ಲಿ ದೇಶದ ಹಲವು ಕಡೆ ಬರ ಪರಿಸ್ಥಿತಿ ತಲೇದೋರಿ ಕೃಷಿ ಉತ್ಪಾದನೆಯೂ ಕುಂಠಿತಗೊಂಡಿತ್ತು. ಆಗಿನ ಪ್ರಧಾನಿ ಲಾಲ್‌ಬಹದ್ದೂರ್‌ಶಾಸ್ತ್ರಿಯವರು ಒಪ್ಪೊತ್ತಿನ ರೊಟ್ಟಿ (ಊಟ) ಕೈಬಿಡಿ ಎಂಬ ಐತಿಹಾಸಿಕ ಭಾಷಣ ಮಾಡಿದ್ದು ಇದೇ ಸಂದರ್ಭ. ಈ ಅವಧಿಯಲ್ಲಿ ಡಾಲರ್‌ಎದುರು ರೂಪಾಯಿಯ ಮೌಲ್ಯ ಮತ್ತಷ್ಟು ಕುಸಿಯಿತು.
1973ರಲ್ಲಿ ಅರಬ್ ರಾಷ್ಟ್ರಗಳು ಪೆಟ್ರೋಲಿಯಂ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಮಾಡಿದವು. ಆಗ ಮತ್ತೊಮ್ಮೆ ರೂಪಾಯಿ ಮೌಲ್ಯ ಡಾಲರ್‌ಎದುರು ಕುಸಿತ ಕಂಡಿತು. ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರ ಅಂಗರಕ್ಷಕರಿಂದಲೇ ಹತರಾದಾಗ ದೇಶದ ಹಲವೆಡೆ ಗಲಭೆಗಳು ಕಾಣಿಸಿಕೊಂಡು ಮತ್ತೆ ರೂಪಾಯಿ ಮೌಲ್ಯ ಕುಸಿತ ಕಂಡಿತ್ತು.
ಭಾರತದಲ್ಲಿ ಹಲವಾರು ಕಾರಣಗಳಿಂದ ಅಭಿವೃದ್ಧಿ ಮೇಲೆ ಹೊಡೆತ ಬೀಳುತ್ತಾ ಸಾಗಿದಂತೆ ಅಮೆರಿಕ ಆರ್ಥಿಕವಾಗಿ ಬಲಶಾಲಿಯಾಗುತ್ತಲೇ ಮುಂದುವರಿಯಿತು. 1990ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭ ಒಂದು ಡಾಲರ್‌ನ ಮೌಲ್ಯ 25.92 ರೂಪಾಯಿ ತಲುಪಿತು. ಅಲ್ಲಿಂದ ಡಾಲರ್ ಎದುರು ಸತತವಾಗಿ ಕುಸಿಯುತ್ತಲೇ ಬಂದ ರೂಪಾಯಿಯ ಮೌಲ್ಯ ಇವತ್ತು 86.33 ರೂ. ಆಗಿದೆ.
1950 ರಿಂದ 1990ರವರೆಗೆ ಸ್ಥಿರ ವಿನಿಮಯ ದರ ವ್ಯವಸ್ಥೆಯನ್ನು ಭಾರತ ಅನುಸರಿಸಿತ್ತು. ಆ ಕಾಲಘಟ್ಟದಲ್ಲಿ ರೂಪಾಯಿಯನ್ನು ಅಂತಾರಾಷ್ಟ್ರೀಯವಾಗಿ ಸ್ಥಿರ ಕರೆನ್ಸಿಗಳ ಮೌಲ್ಯಕ್ಕೆ ಜೋಡಿಸಲಾಯಿತು. ಆರ್‌ಬಿಐ ಮತ್ತು ಇದನ್ನು ನಿರ್ವಹಿಸಿಕೊಂಡು ಬಂತು. ಡಾಲರ್ ಎದುರು ರೂಪಾಯಿ ಕುಸಿಯಲು ಜಾಗತಿಕ ಮತ್ತು ದೇಶೀಯ ಕಾರಣಗಳೆರಡೂ ಇವೆ. ಭಾರತದ ಆರ್ಥಿಕ ಬೆಳವಣಿಗೆ ಸದ್ಯ ಕಡಿಮೆ ಮಟ್ಟಕ್ಕೆ ಕುಸಿದಿದೆ. ಇನ್ನೊಂದೆಡೆ, ಅಮೆರಿಕದ ಫೆಡರಲ್ ರಿಸರ್ವ್, ಹಣದುಬ್ಬರ ಕಡಿಮೆ ಮಾಡಲು ಬಡ್ಡಿ ದರಗಳನ್ನು ಹೆಚ್ಚಿಸುತ್ತಿದೆ. ಇದು ಜಾಗತಿಕವಾಗಿ ಆ ಕಡೆ ಹೂಡಿಕೆದಾರರನ್ನು ಸೆಳೆಯುತ್ತಿದೆ. ತೆರಿಗೆ ಕಡಿತ ಮಾಡುವಂಥ ನೀತಿಗಳಿಂದ ಅಮೆರಿಕ ಹೂಡಿಕೆಗಳನ್ನು ಉತ್ತೇಜಿಸುತ್ತಿದೆ. ಇದು ರೂಪಾಯಿ ಸೇರಿದಂತೆ ಇತರ ದೇಶಗಳ ಕರೆನ್ಸಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಡಾಲರ್ ವಿನಿಮಯಕ್ಕಾಗಿ ಭಾರತವು ಅಪಾರ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆಯ ಮುಂದೆ ಇತರ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿದಿದೆ. ಆದರೆ ಯೂರೊ ಸೇರಿದಂತೆ ಇತರ ಹಲವು ದೇಶಗಳ ಕರೆನ್ಸಿಗಳ ಎದುರು ಭಾರತದ ರೂಪಾಯಿ ಮೌಲ್ಯವು ಉತ್ತಮವಾಗಿದೆ ಎನ್ನುವುದು ಗಮನಾರ್ಹ.
ಒಂದು ರಾಷ್ಟ್ರದ ಆಮದು ಮತ್ತು ರಫ್ತಿನ ನಡುವಿನ ಅಂತರ ಆ ದೇಶದ ಕರೆನ್ಸಿಯ ಮೌಲ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರೆನ್ಸಿಯ ಮೌಲ್ಯ ಹೆಚ್ಚಿಸಬೇಕು ಎಂದರೆ, ರಫ್ತು ಹೆಚ್ಚಿಸಬೇಕು. ಭಾರತವು ಕಚ್ಚಾ ತೈಲ ಸೇರಿದಂತೆ ಹಲವು ಪ್ರಮುಖ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಡಾಲರ್‌ಗಳ ಲೆಕ್ಕದಲ್ಲಿ ಅಪಾರ ಹಣ ವಿನಿಯೋಗಿಸುತ್ತಿದೆ. ಭಾರತದ ವ್ಯಾಪಾರ ಕೊರತೆಯು ಹಿಗ್ಗುತ್ತಿದ್ದು, ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಣದುಬ್ಬರ ಹೆಚ್ಚಳದಿಂದ ಒಂದು ಕರೆನ್ಸಿಯ ಕೊಳ್ಳುವ ಶಕ್ತಿಯು ಕುಂಠಿತವಾಗುತ್ತದೆ. ಹಣದುಬ್ಬರವನ್ನು ಹತೋಟಿಗೆ ತರಲು ಆರ್‌ಬಿಐ ಬಡ್ಡಿ ದರವನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುತ್ತದೆ. ಅದು ವಿನಿಯಮ ದರದ ಮೇಲೆ ಪರಿಣಾಮ ಬೀರುತ್ತದೆ.
ರೂಪಾಯಿ ಮೌಲ್ಯದಲ್ಲಿ ಗಣನೀಯ ಕುಸಿತವಾದಾಗ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶ ಇದೆ. ರೂಪಾಯಿ ಮೌಲ್ಯದ ಸ್ಥಿರತೆ ಕಾಪಾಡಲು ಅದು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಸಾಮಾನ್ಯವಾಗಿ ತನ್ನ ವಿದೇಶಿ ವಿನಿಯಮ ಮೀಸಲು ಸಂಗ್ರಹದಿಂದ ಡಾಲರ್‌ಗಳನ್ನು ಮಾರಾಟ ಮಾಡಿ ರೂಪಾಯಿ ಮೌಲ್ಯದ ಬಲವರ್ಧನೆಗೆ ಯತ್ನಿಸುತ್ತದೆ. ಡಾಲರ್‌ಗಳ ಮಾರಾಟದಿಂದ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ, ಅದಕ್ಕಿರುವ ಬೇಡಿಕೆ ಕಡಿಮೆಯಾಗುತ್ತದೆ. ಆ ಮೂಲಕ ಅದರ ಮೌಲ್ಯದಲ್ಲಿ ಇಳಿಕೆಯಾಗುತ್ತದೆ.
ರೂಪಾಯಿ ಮೌಲ್ಯ ಕುಸಿತದಿಂದ ಕಚ್ಚಾ ತೈಲದಂತಹ ಅತ್ಯಂತ ಅವಶ್ಯಕ ಸರಕುಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ವಿದೇಶದ ಸೇವೆಗಳಿಗೂ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಉದಾಹರಣೆಗೆ ಅಮೆರಿಕ ಅಥವಾ ಬೇರೆ ದೇಶಗಳಿಗೆ ಪ್ರವಾಸ ಹೋಗುವವರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವೆಚ್ಚದಲ್ಲೂ ಏರಿಕೆಯಾಗುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುವ ಸಂದರ್ಭವೂ ಇರುತ್ತದೆ. ಇದು ವಿದೇಶಿ ನೇರ ಬಂಡವಾಳ ಹೂಡಿಕೆ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಣದುಬ್ಬರದ ಹೆಚ್ಚಳ, ಬಂಡವಾಳ ಹೂಡಿಕೆ ಕಡಿಮೆಯಾಗುವುದರಿಂದ ಒಟ್ಟಾರೆಯಾಗಿ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ.
1944ರಲ್ಲಿ ಬ್ರಿಟನ್ ವುಡ್ಸ್ ಒಪ್ಪಂದವನ್ನು ಅಂಗೀಕರಿಸಿದ ಬಳಿಕ ಭಾರತೀಯ ರೂಪಾಯಿಯ ಅಪಮೌಲ್ಯ ಪ್ರಾರಂಭವಾಯಿತು. ಈ ಒಪ್ಪಂದದ ಮೂಲಕ ಅಮೆರಿಕ ಡಾಲರ್ ಅನ್ನು ಬ್ರಿಟನ್‌ವುಡ್ಸ್ ಸಿಸ್ಟಮ್ ಅಡಿಯಲ್ಲಿ ಇತರ ಕರೆನ್ಸಿಗಳ ಮೌಲ್ಯದೊಂದಿಗೆ ಬಂಧಿಸಲಾಯಿತು. ಈ ವ್ಯವಸ್ಥೆ 1971 ರವರೆಗೆ ಕಾರ್ಯನಿರ್ವಹಿಸುತ್ತಿತ್ತು.
2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಭಾರತೀಯ ವಿದೇಶಿ ವಿನಿಮಯ ಸಂಗ್ರಹ ಅಭಿವೃದ್ಧಿ ಹೊಂದಿತು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ವಾಲ್ ಸ್ಟ್ರೀಟ್‌ನಲ್ಲಿ ಟೋಲ್ ತೆಗೆದುಕೊಂಡ ವರ್ಷ, ಪ್ರಪಂಚದಾದ್ಯಂತ ದುರ್ಬಲ ಆರ್ಥಿಕ ಬಿಕ್ಕಟ್ಟುಗಳ ಕುರುಹುಗಳನ್ನು ಬಿಟ್ಟುಬಿಟ್ಟಿತು. 2011 ರ ಮಧ್ಯದ ವೇಳೆಗೆ ಡಾಲರ್‌ಎದುರು ರೂಪಾಯಿ ಮೌಲ್ಯ 44ಕ್ಕೆ ಇಳಿಯಿತು. 2013ರ ಮಧ್ಯದ ವೇಳೆಗೆ ಡಾಲರ್‌ಎದುರು ರೂಪಾಯಿ 60ರ ಗಡಿ ಮುಟ್ಟಿತು. 2018ರಲ್ಲಿ ಇದು 75ರ ಗಡಿಯನ್ನೂ ದಾಟಿತು. ಆ ಬಳಿಕ ಕೋವಿಡ್ ಸಾಂಕ್ರಾಮಿಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ, ಕಚ್ಚಾ ತೈಲ ಬೆಲೆ ಏರಿಕೆ ಮೊದಲಾದ ಕಾರಣಗಳಿಂದ 2022ರ ಆಗಸ್ಟ್‌ನಲ್ಲಿ ಡಾಲರ್‌ಎದುರು ರೂಪಾಯಿ ಮೌಲ್ಯ 80ಕ್ಕೆ ಇಳಿಯಿತು.
ಭಾರತ ಆರ್ಥಿಕವಾಗಿ ಮುಂದುವರಿದು, ಭವಿಷ್ಯದಲ್ಲಿ ಅಮೆರಿಕ ಸೇರಿದಂತೆ ಜಗತ್ತಿನ ಶ್ರೀಮಂತ ದೇಶಗಳನ್ನು ಹಿಂದೆ ಹಾಕಲಿದೆ ಎಂಬ ನಿರೀಕ್ಷೆ ಇದೆ. ಈಗಾಗಲೇ ಹಲವು ಕ್ಷೇತ್ರ ಮತ್ತು ವಿಚಾರಗಳಲ್ಲಿ ಭಾರತ ಆರ್ಥಿಕವಾಗಿ ಬಲಶಾಲಿಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದಿದೆ. ಹೀಗಾಗಿ ಭಾರತ ಜಗತ್ತಿನ ಮೊದಲ ಮೂರು ಆರ್ಥಿಕತೆಯ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂಬ ನಿರೀಕ್ಷೆ ಮೂಡಿದೆ. ಭಾರತ ಐಟಿ ವಲಯ, ಉತ್ಪಾದನಾ ವಲಯ, ಸೇವಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಗತ್ತನ್ನು ಆವರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಕೂಡ ಭಾರತ ದೊಡ್ಡ ಸಾಧನೆ ಮಾಡುತ್ತಿದೆ. ಇಷ್ಟೆಲ್ಲದರ ನಡುವೆಯೂ ಭಾರತದ ರೂಪಾಯಿ ಮೌಲ್ಯ ಡಾಲರ್‌ಎದುರು ಕುಸಿತ ಕಾಣುತ್ತಿದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದಾಗಲೇ ರೂಪಾಯಿಗೆ ದೊಡ್ಡ ಆಘಾತ ಎದುರಾಗಿದೆ.
2010ರಿಂದ 2024ರ ತನಕ 1 ಡಾಲರ್ -ರೂಪಾಯಿ ಏರಿಳಿತ
2010 – 46.65
2011 – 44.67
2012 – 53.29
2013 – 54.83
2014 – 61.93
2015 – 63.32
2016 – 66.17
2017 – 62.02
2018 – 63.66
2019 – 71.16
2020 – 76.20
2021 – 74.57
2022 – 81.35
2023 – 82.62
2024 – 85.48
(ಸಂಗ್ರಹ ಮಾಹಿತಿ)