ನಾವು ಇಂದು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ೧೮ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರ ವಿಶ್ವವನ್ನು ಹೆಚ್ಚಾಗಿ ಪ್ರಭಾವಿಸಿದ್ದು ಮಾಹಿತಿ ಕ್ರಾಂತಿ. ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲದ ಉಗಮ, ವಿಶ್ವವ್ಯಾಪಿ ಜಾಲಗಳ ರಚನೆ – ಮಾಹಿತಿ ಕ್ರಾಂತಿಗೆ ಕಾರಣವಾಯಿತು. ಪ್ರಸ್ತುತ ನಾವು ಇದ್ದ ಜಾಗದಿಂದಲೇ ಬೇಕಾದ ಮಾಹಿತಿಗಳನ್ನು ಪಡೆಯುವ ಮಟ್ಟಕ್ಕೆ ಮಾಹಿತಿ ತಂತ್ರಜ್ಞಾನ ಮುಂದುವರೆದಿದೆ. ಗಣಕ ಯಂತ್ರಗಳಿದ್ದಲ್ಲಿ ಮಾಹಿತಿ ಪಡೆಯುವುದು ಸುಲಭ ಎಂಬ ನಂಬಿಕೆಯಿಂದ ನಾವೀಗ ಹೊರಬಂದು, ಮೊಬೈಲ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಕೂಡ ಮಾಹಿತಿ ಪಡೆಯಬಹುದು ಎನ್ನುವುದನ್ನು ಕಂಡುಕೊಂಡಿದ್ದೇವೆ. ಇಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಒದಗಿಸುವ ಕೇಂದ್ರಗಳೆಂದರೆ ವಿಶ್ವವ್ಯಾಪಿ ಜಾಲತಾಣಗಳು ಅಂದರೆ ವೆಬ್‌ಸೈಟ್‌ಗಳು. ಸಹಕಾರ ಕ್ಷೇತ್ರದ ಬಗ್ಗೆ ಮಾಹಿತಿ ಒದಗಿಸುವ ಹಾಗೂ ಸಹಕಾರ ಸಂಸ್ಥೆಗಳಿಗೆ ಉಪಯೋಗವಾಗುವ ವೆಬ್‌ಸೈಟ್ ಗಳನ್ನು ಪರಿಚಯಿಸುವುದು ಈ ಮಾಲಿಕೆಯ ಉದ್ದೇಶ.
ಭಾರತದ ಸಂವಿಧಾನದಲ್ಲಿ ಒಂದೇ ವಿಷಯದ ಬಗ್ಗೆ ಎರಡು ಕಾಯ್ದೆಗಳನ್ನು ರಚಿಸಲು ಅವಕಾಶವಿದೆ. ಅಂತೆಯೇ, ಕರ್ನಾಟಕದಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೧೯೫೯ರ ಸಹಕಾರ ಸಂಘಗಳ ಕಾಯ್ದೆ ಹಾಗೂ ೧೯೯೭ರ ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆಗಳೆಂಬ ಎರಡು ಕಾಯ್ದೆಗಳಿವೆ. ಸ್ವತಂತ್ರ ಕಾಯ್ದೆ ಎಂದು ಪರಿಚಯಿಸಲ್ಪಟ್ಟ – ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣದ ಧ್ಯೇಯದೊಂದಿಗೆ ಜಾರಿಗೆ ಬಂದ ಸೌಹಾರ್ದ ಸಹಕಾರ ಕಾಯ್ದೆಯ ಬಗ್ಗೆ ಮಾಹಿತಿ ಒದಗಿಸುವ ವೆಬ್‌ತಾಣವೊಂದನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ನಿರ್ವಹಿಸುತ್ತಿದೆ. ಸಂಯುಕ್ತ ಸಹಕಾರಿಯು ರಾಜ್ಯದ ಎಲ್ಲ ಸೌಹಾರ್ದ ಸಹಕಾರಿಗಳ ಸ್ವಯಂ ಶಿಸ್ತನ್ನು ಕಾಪಾಡಲು ಶಾಸನಬದ್ಧ ನಿಯಂತ್ರಣಾಧಿಕಾರ ಹೊಂದಿರುವ ಹಾಗೂ ಸಹಕಾರಿಗಳ ಹಿತ ಕಾಪಾಡುವ ಜವಾಬ್ದಾರಿ ನಿರ್ವಹಿಸುವ ಸಂಸ್ಥೆಯಾಗಿದೆ.
ವೆಬ್‌ತಾಣ ೦೧ : www.souharda.coop
- ಈ ವೆಬ್‌ತಾಣದಲ್ಲಿ ಸೌಹಾರ್ದ ಸಹಕಾರ ಕಾಯ್ದೆಯ ಬಗ್ಗೆ ಮಾಹಿತಿ, ಸೌಹಾರ್ದ ಕಾಯ್ದೆಯಲ್ಲಿ ನೋಂದಣಿ ಪಡೆಯಲು ಅಥವಾ ೧೯೫೯ರ ಕಾಯ್ದೆಯಿಂದ ಪರಿವರ್ತಿತವಾಗುವ ಕುರಿತು ಮಾಹಿತಿ, ಕರ್ನಾಟಕದ ಎರಡು ಕಾಯ್ದೆಗಳ ನಡುವಿನ ವ್ಯತ್ಯಾಸ, ಸಹಕಾರ ಕ್ಷೇತ್ರದ ಬೆಳವಣಿಗೆಯ ಬಗ್ಗೆ ಮಾಹಿತಿಗಳಿವೆ.
- ಸಂಯುಕ್ತ ಸಹಕಾರಿಯ ಧ್ಯೇಯ ಮತ್ತು ಉದ್ದೇಶಗಳು, ಆಡಳಿತ ಮಂಡಳಿಯ ವಿವರಗಳಲ್ಲದೆ, ಸೌಹಾರ್ದ ಕಾಯ್ದೆಯಲ್ಲಿ ನೋಂದಣಿಯಾದ ಎಲ್ಲ ಜಿಲ್ಲೆಗಳ ವಿವಿಧ ಬಗೆಯ ಸೌಹಾರ್ದ ಸಹಕಾರಿಗಳ ಹೆಸರು, ವಿಳಾಸಗಳ ಪಟ್ಟಿ ಕೂಡ ಲಭ್ಯವಿದೆ.
- ಡೌನ್‌ಲೋಡ್ ವಿಭಾಗದಲ್ಲಿ ಸೌಹಾರ್ದ ಸಹಕಾರ ಕಾಯ್ದೆ (ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ), ಸಂಯುಕ್ತ ಸಹಕಾರಿಯ ಹಾಗೂ ಸೌಹಾರ್ದ ಸಹಕಾರಿಗಳಿಗೆ ಸಂಬಂಧಿಸಿದ ನಿಬಂಧಕರ ಸುತ್ತೋಲೆಗಳು, ಸಂಯುಕ್ತ ಸಹಕಾರಿಯ ಉಪವಿಧಿ, ನೋಂದಣಿ ಮಾಹಿತಿಯುಳ್ಳ ಕೈಪಿಡಿ, ಮಾದರಿ ಉಪವಿಧಿಗಳನ್ನು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಒದಗಿಸಲಾಗಿದೆ.
- ಸೌಹಾರ್ದ ಸಹಕಾರಿಗಳ ಲೆಕ್ಕಪರಿಶೋಧನೆಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಲೆಕ್ಕಪರಿಶೋಧಕರ ಪಟ್ಟಿಯನ್ನು ಹಾಗೂ ಲೆಕ್ಕಪರಿಶೋಧನಾ ವರದಿಯ ಮಾದರಿಯನ್ನು ನೀಡಲಾಗಿದೆ.
- ಸೌಹಾರ್ದ ಸಹಕಾರ ಸಂಸ್ಥೆಗಳು ಕಾಲಕಾಲಕ್ಕೆ ಸಂಯುಕ್ತ ಸಹಕಾರಿಗೆ ಸಲ್ಲಿಸಬೇಕಾದ ಮಾಹಿತಿಗಳ ನಮೂನೆಯನ್ನು ಹಾಗೂ ಸಂಯುಕ್ತ ಸಹಕಾರಿ ನಡೆಸುವ ತರಬೇತಿ ಕಾರ್ಯಕ್ರಮಗಳ ವಿವರಗಳು ಈ ವೆಬ್‌ಸೈಟ್‌ನಲ್ಲಿ ದೊರೆಯುತ್ತವೆ.
- ಪ್ರಸ್ತುತ ಈಗ ತಾವು ಓದುತ್ತಿರುವ ಸ್ವಾಭಿಮಾನಿ ಸಹಕಾರಿಯನ್ನು ಕೂಡ ಈ ವೆಬ್‌ಸೈಟ್‌ನಲ್ಲಿ ಓದಬಹುದಾಗಿದೆ.
- ಸಹಕಾರ ಕ್ಷೇತ್ರದಲ್ಲಿನ ಉತ್ತಮ ಹಾಗೂ ನಿರಂತರ ಅಪ್‌ಡೇಟ್ ಆಗುತ್ತಿರುವ ವೆಬ್‌ಸೈಟ್ ಎಂದು ಮಾನ್ಯತೆ ಪಡೆದಿರುವ ಜಾಲತಾಣವಿದು. ಕರ್ನಾಟಕದ ಸೌಹಾರ್ದ ಕ್ಷೇತ್ರದ ಬಗ್ಗೆ ಆಸಕ್ತರು ಹಾಗೂ ಸೌಹಾರ್ದ ಸಹಕಾರಿಗಳು ಜಾಲತಾಣ www. Souhardh.coopನ್ನು ಆಗಾಗ್ಗೆ ನೋಡಬಹುದು.
ರಘುನಂದನ ಕೆ.