ಕೋವಿಡ್ ಮಹಾಮಾರಿ ತನ್ನ ಎರಡನೇ ಅಲೆಯಲ್ಲಿ ದೊಡ್ಡ ಮಟ್ಟಿನ ಅನಾಹುತಗಳನ್ನು ಮಾಡುತ್ತಿದೆ. ಸಮಾಜದ ಎಲ್ಲ ವರ್ಗದ ಜನರು ಇದರ ಹೊಡೆತಕ್ಕೆ ಸಿಕ್ಕಿ ನಲುಗಿದ್ದಾರೆ. ಕೃಷಿಕರು, ಕೈಗಾರಿಕೆಗಳು, ಉದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ಉದ್ಯೋಗಿಗಳು, ಸಂಸ್ಥೆಗಳು ಹೀಗೆ ಇನ್ನಷ್ಟು ವಿಭಾಗಗಳಲ್ಲಿ ಇರುವ ಕೋಟ್ಯಂತರ ಮಂದಿ ಕಷ್ಟ ಕಾರ್ಪಣ್ಯಗಳಿಗೆ ತುತ್ತಾಗಿದ್ದಾರೆ. ಕಷ್ಟ ನಷ್ಟಗಳ ಪಟ್ಟಿ ವ್ಯಾಪಕವಾಗುತ್ತಿದ್ದರೂ ಒಂದು ನೆಮ್ಮದಿಯ ಸಂಗತಿ ದೇಶಕ್ಕೊಬ್ಬ ಸಮರ್ಥ ಪ್ರಧಾನಿ ಈ ಸಮಯದಲ್ಲಿ ಇರುವುದು. ಈ ಪ್ರಧಾನಿ ಹೊರತು ಇನ್ನಾರೇ ಇರುತ್ತಿದ್ದರು ಭಾರತದ ವಾಸ್ತವ ಸ್ಥಿತಿಯನ್ನು ಊಹಿಸಲೂ ಕಷ್ಟ ಆಗುತ್ತಿತ್ತು.
ಇಂತಹ ಸಂಕಷ್ಟಮಯ ಸನ್ನಿವೇಶದಲ್ಲಿ ಸಮಾಜದ ಕೊಟ್ಟಕೊನೆಯ ವ್ಯಕ್ತಿಯವರೆಗೆ ತನ್ನ ಸಂಪರ್ಕ ಸಾಧಿಸುವ ಸಶಕ್ತ ಕ್ಷೇತ್ರವಾದ ಸಹಕಾರಿ ಕ್ಷೇತ್ರ ದೊಡ್ಡ ಮಟ್ಟಿನ ಜವಾಬ್ದಾರಿ ನಿಭಾಯಿಸಿ ಜನಮಾನಸದ ಬೇನೆ ಬೇಸರುಗಳಿಗೆ ಸಾಂತ್ವನ ನೀಡಿ ಮತ್ತೆ ನವಚೈತನ್ಯವನ್ನು ತುಂಬಲು ಮುಂಚೂಣಿಗೆ ಬರಬೇಕಿದೆ.
ಸಾಕಷ್ಟು ಸಾಧ್ಯತೆಗಳು ಸಹಕಾರಿ ಕ್ಷೇತ್ರದ ಮುಂದೆ ತೆರೆದುಕೊಳ್ಳುತ್ತೆ. ಬೆಂದು ಬಸವಳಿಯುತ್ತಿರುವ ಸಮಾಜಕ್ಕೆ ಅಶನ, ವಸನ ಮತ್ತು ವಸತಿಯಿಂದ ಹಿಡಿದು ಅನೇಕ ಕಾರ್ಯದಲ್ಲಿ ಸಹಕಾರಿ ಕ್ಷೇತ್ರ ತೊಡಗಿಕೊಳ್ಳುವ ಅವಕಾಶ ಇದೆ. ಈಗಾಗಲೆ ದೇಶದಾದ್ಯಂತ ಅನೇಕ ಸಹಕಾರಿ ಸಂಘ ಸಂಸ್ಥೆಗಳು ವೈದ್ಯಕೀಯ, ಆಹಾರ ಪೂರೈಕೆ, ಶುಶ್ರೂಷೆಗೆ ಪೂರಕ ವ್ಯವಸ್ಥೆ ಜೋಡಣೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆರವಾಗಿವೆ.
ಕೋವಿಡ್ ಕಾರಣಗಳಿಂದ ಕೃಷಿಕರು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯ ಕಡಿಮೆಯದ್ದಲ್ಲ. ಕೆಲಸ ಕಾರ್ಯಗಳು ಸರಿಯಾಗಿ ನಡೆದರೂ ಬೆಳೆದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ತೊಂದರೆಗಳು ಆಗುತ್ತಿವೆ. ತರಕಾರಿ, ಹಣ್ಣು, ಹಾಲು, ಮುಂತಾದವುಗಳಿಂದ ಹಿಡಿದು ಕೃಷಿಕ ತನ್ನ ಬದುಕು ಕಟ್ಟಿಕೊಳ್ಳಲು ಉತ್ಪಾದಿಸುವ ಪ್ರತಿಯೊಂದು ವಸ್ತುವಿಗೂ ಕೋವಿಡ್ ಬಿಸಿ ತಟ್ಟಿದೆ.
ರೈತ ತಾನು ಬೆಳೆದ ಬಾಳೆಕಾಯಿಯನ್ನು ಗೊಬ್ಬರವಾಗಿ ಬಳಕೆ ಮಾಡಿದ್ದು, ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲದೆ ಬೆಳೆದ ಫಸಲನ್ನು ಗದ್ದೆಯಲ್ಲೇ ಬಿಸಾಕಿದ್ದು ಕೆಲವೇ ಸಂಗತಿಗಳು. ಆದರೆ ಕೃಷಿ ಕ್ಷೇತ್ರದ ಆಳಕ್ಕಿಳಿದರೆ ಕಷ್ಟ ನಷ್ಟಗಳ ವಿಶ್ವರೂಪವನ್ನು ಕಾಣಬಹುದು.
ಇಂತಹ ಸಂದರ್ಭದಲ್ಲಿ ಸಹಕಾರಿ ಸಂಘಗಳ ಮೂಲಕ ತನ್ನ ಪರಿಸರದಲ್ಲಿ ಅನ್ಯಾನ್ಯ ಕಾರ್ಯದಲ್ಲಿ ತೊಡಗಬಹುದಲ್ಲ. ಕಷ್ಟಪಟ್ಟು ಬೆಳೆದ ಬಾಳೆಕಾಯಿಗೆ ಸಹಕಾರಿ ಸಂಘಗಳು ಮುತುವರ್ಜಿಯಿಂದ ಮಾರುಕಟ್ಟೆ ಒದಗಿಸುವ ಕೆಲಸ ಮಾಡಬಹುದು. ಸಾಮಾಜಿಕ ಜಾಲ ತಾಣದ ಸಮರ್ಥ ಬಳಕೆಯಿಂದ ಸಂಪರ್ಕ ಸಾಧಿಸಿ ಕೃಷಿಕರು ಬೆಳೆದ ಬಾಳೆಕಾಯಿಗೆ ಗ್ರಾಹಕರನ್ನು ಒದಗಿಸಿಕೊಡಬಹುದು. ಕೇವಲ ಬಾಳೆಕಾಯಿ ಮಾತ್ರವಲ್ಲ. ಕೃಷಿ ಉತ್ಪನ್ನಗಳು, ಹೈನೋದ್ಯಮದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಿ ಪೇಟೆಯಿಂದ ಅಗತ್ಯ ಸಾಮಾನುಗಳನ್ನು ಕೃಷಿಕರ ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ನಿಭಾಯಿಸಬಹುದು.
ಸಹಕಾರಿ ಸಂಘಗಳು ಇನ್ನು ಮುಂದೆ ಸಾಲ ನೀಡುವುದು, ಸಾಲ ಮರುಪಾವತಿಗೆ ಗಮನಕೊಟ್ಟು ಅದರಲ್ಲೇ ತೃಪ್ತಿ ಪಡುವ ಕಾಲ ಇದಲ್ಲ. ಅದರಿಂದಾಚೆ ಚಿಂತನೆ ಹರಿಯಬಿಟ್ಟು ಹೊಸ ಹೊಸತು ಸೇವೆಗಳಲ್ಲಿ ಗುರುತಿಸಿಕೊಳ್ಳುವ ನೈಪುಣ್ಯತೆ ಪಡೆಯಬೇಕು. ಹೀಗಾದಾಗ ಮಾತ್ರ ಭಾರತದ ಗ್ರಾಮ ಗ್ರಾಮಗಳು ಆತ್ಮನಿರ್ಭರದಿಂದ ಎದ್ದುನಿಂತು ಎಂತಹ ಮಾರಿಬಂದರೂ ಜಗ್ಗದೆ, ಕುಗ್ಗದೆ ಸೆಟೆದು ನಿಲ್ಲುವ ಸಾಮರ್ಥ್ಯ ತೋರಿಸಲು ಸಾಧ್ಯ.
■ ಶಂ. ನಾ. ಖಂಡಿಗೆ
ಶಂಕರನಾರಾಯಣ ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ- 671552
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
(ಲೇಖಕರು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರು, ಮೊಬೈಲ್ : 09946406321)