ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ. ಮಂಗಳೂರು (Institute for Study and Development of Cooperation) ದೇಶದಲ್ಲಿಯೇ ವಿನೂತನವಾದ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಾರಂಭವಾಗಿರುವ ಸರಕಾರೇತರ ಸಂಸ್ಥೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ‘ಸ್ಪಂದನ’ ಕಾರ್ಯಕ್ರಮಗಳನ್ನು ಇದು ಜಾರಿಗೊಳಿಸುತ್ತಿದೆ. ಸಹಕಾರ ಸ್ಪಂದನ, ವಿದ್ಯಾ ಸ್ಪಂದನ, ಆಪ್ತ ಸ್ಪಂದನ, ಮಹಿಳಾ ಸ್ಪಂದನ ಮತ್ತು ಗ್ರಾಮ ಸ್ಪಂದನ ಈ ಐದು ಕಾರ್ಯಕ್ರಮಗಳನ್ನು ಸಹಕಾರ ಕ್ಷೇತ್ರದಲ್ಲಿ ಅನುಷ್ಟಾನ ಮಾಡಲು ದೇಶದ ಟ್ರಸ್ಟ್ ಕಾಯಿದೆಯಡಿ ಈ ಸಂಸ್ಥೆ ರಚನೆಗೊಂಡಿದೆ.
ಸಹಕಾರ ಕ್ಷೇತ್ರ ಅತ್ಯಂತ ಅಪರೂಪದ ಕ್ಷೇತ್ರ. ಹಾಗೆಯೇ ವೈಶಿಷ್ಟ್ಯಪೂರ್ಣ ಕ್ಷೇತ್ರವೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರು, ದೀನದಲಿರು ಸೇರಿದಂತೆ ಎಲ್ಲ ಅಬಲ ವರ್ಗದವರು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳುವ ಅತ್ಯಂತ ಸರಳ ರಂಗವಾಗಿ ಇದು ಪರಿಣಮಿಸಿದೆ. ‘ನಾನು ಎಲ್ಲರಿಗಾಗಿ – ಎಲ್ಲರೂ ನನಗಾಗಿ ‘ ಎಂಬ ಸರಳ ನಂಬಿಕೆಯಡಿ ರೂಪುಗೊಂಡಿರುವ ಸಹಕಾರ ಕ್ಷೇತ್ರವು ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಲಿಂಗಾತೀತವಾಗಿ ಮಾತ್ರವಲ್ಲದೆ ಎಲ್ಲಾ ರೀತಿಯ ಸೈಧ್ಧಾಂತಿಕ ಇತಿಮಿತಿಗಳನ್ನೂ ದಾಟಿ ಎಲ್ಲರನ್ನೂ ಒಳಗೊಳ್ಳುವ ಸಮಾಜದ ಮಹತ್ವದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಭಾರತದಲ್ಲಿ ಸಹಕಾರ ತತ್ವವು ಸನಾತನ ಸಂಸ್ಕತಿಯಾಗಿ ಬೆಳೆದು ಬಂದಿದೆ. 1884ರಲ್ಲಿ ಇಂಗ್ಲೆಂಡ್ ದೇಶದ ರಾಕ್ ಡೇಲ್ ಪಟ್ಟಣದಲ್ಲಿ 27 ಜನ ನೂಲಿನ ಗಿರಣಿ ಕಾರ್ಮಿಕರಿಂದ ‘ ರಾಕ್ ಡೇಲ್ ಇಕ್ವಟೇಬಲ್ ಪಯೋನಿಯರ್ಸ್ ಕೋ ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ಸಾಂಸ್ಥಿಕ ರೂಪದಲ್ಲಿ ಪ್ರಾರಂಭಗೊಂಡಿರುವುದನ್ನು ಸಹಕಾರ ಇತಿಹಾಸ ದಾಖಲಿಸಿದೆ. ನಂತರ ಜರ್ಮನ್ ದೇಶಕ್ಕೆ ಪಸರಿಸಿ, ಅಲ್ಲಿ ನಗರ ಮತ್ತು ಗ್ರಾಮೀಣ ಪತ್ತಿನ ಸಹಕಾರ ಸಂಘಗಳು ಸ್ಥಾಪನೆಗೊಂಡು ವಿಶ್ವದ ಮೊತ್ತಮೊದಲ ಸಹಕಾರಿ ಕಾನೂನು ಜಾರಿಗೊಂಡಿತು. ಅದನ್ನು ಅಧ್ಯಯನ ಮಾಡಿದ ಬ್ರಿಟೀಷ್ ಸರಕಾರ ಅದೇ ಮಾದರಿಯ ಸಹಕಾರಿ ಕಾನೂನನ್ನು 1904ರಲ್ಲಿ ನಮ್ಮ ದೇಶದಲ್ಲಿ ಮೊದಲನೇ ಬಾರಿಗೆ ಜಾರಿಗೆ ತಂದಿತು.
1904ರ ಸಹಕಾರ ಕಾಯಿದೆಯಡಿ ನಮ್ಮ ರಾಜ್ಯದ ಗದಗ ಜಿಲ್ಲೆಯ ಕಣಗಿನಹಾಲದಲ್ಲಿ ದೇಶದ ಮೊತ್ತಮೊದಲ ಸಹಕಾರ ಸಂಘ ಕೃಷಿಕ ಶ್ರೀ ಸಿದ್ಧನ ಗೌಡ ಸಣ್ಣರಾಮನ ಗೌಡ ಪಾಟೀಲ್ ಅವರ ಮೂಲಕ ಪ್ರಾರಂಭವಾಯಿತು. ಅಂದು ಸಾಂಸ್ಥಿಕ ರೂಪದಲ್ಲಿ ಪ್ರಾರಂಭಗೊಂಡ ಸಹಕಾರ ಚಳುವಳಿ ಇಂದು ವಿಸ್ತ್ರತವಾಗಿ ಬೆಳೆದು ನಿಂತಿದೆ. ಸುಮಾರು 54 ವಿವಿಧ ವಿಧದ ಸುಮಾರು 50 ಸಾವಿರ ಸಹಕಾರ ಸಂಘಗಳು ರಾಜ್ಯದಲ್ಲಿ, 80 ಸಾವಿರಕ್ಕಿಂತಲೂ ಹೆಚ್ಚು ಸಹಕಾರ ಸಂಘಗಳು ದೇಶದಲ್ಲಿ ಸ್ಥಾಪನೆಗೊಂಡು ಸಮೃದ್ಧವಾಗಿ ಬೆಳೆದಿದೆ. ಇಂದು ದೇಶದ ಜನಸಂಖ್ಯೆಯ ಶೇಕಡಾ 25ಕ್ಕಿಂತಲೂ ಹೆಚ್ಚು ಜನ ಈ ಚಳುವಳಿಯಲ್ಲಿ ಜೋಡಿಕೊಂಡಿದ್ದಾರೆ.
ಸಹಕಾರ ಕ್ಷೇತ್ರವು ಸಮಾಜದ ಅನ್ಯಾನ್ಯ ಕ್ಷೇತ್ರಗಳಿಗೆ ಇಂದು ವಿಶಾಲವಾಗಿ ವಿಸ್ತರಿಸಿಕೊಂಡಿದೆ. ಕೃಷಿ, ಹಣಕಾಸು, ಹೈನುಗಾರಿಕೆ, ಗ್ರಾಹಕ, ಮಾರಾಟ, ಬಳಕೆದಾರ, ಸಂಸ್ಕರಣೆ ಇತ್ಯಾದಿ ಕ್ಷೇತ್ರದಲ್ಲಿ ಸಮಾಜದ ನಿಮ್ನ ವರ್ಗದ ಅಭಿವೃದ್ಧಿಯ ಮಾರ್ಗವಾಗಿ ಬೆಳೆದಿದೆ. ಕೃಷಿಕರು, ಹೈನುಗಾರ ರೈತರು, ಮಹಿಳೆಯರು ಸೇರಿದಂತೆ ಹಿಂದುಳಿದ ವರ್ಗದ ಸಂಸ್ಥೆಗಳು ದೇಶದಲ್ಲಿ ಗುರುತರ ಅಭಿವೃದ್ಧಿಯನ್ನು ಕಂಡಿದೆ. ಸಹಕಾರವು ಅಬಲರನ್ನು ಸಬಲರನ್ನಾಗಿಸಿದೆ. ಈ ಮೂಲಕ ಸಹಕಾರ ಕ್ಷೇತ್ರವು ಸರಕಾರೀ ಮತ್ತು ಖಾಸಗಿ ಕ್ಷೇತ್ರಗಳಿಗಿಂತ ಭಿನ್ನವಾದ ಜನಸಾಮಾನ್ಯರ ಸುವರ್ಣ ಮಾಧ್ಯಮವಾಗಿ ಇಂದು ದೇಶದಲ್ಲಿ ಗೋಚರಿಸಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು, ಹಾಲು ಒಕ್ಕೂಟಗಳು, ತೋಟಗಾರಿಕಾ ಸಹಕಾರ ಸಂಘಗಳು, ರಾಜ್ಯ ಅಪೆಕ್ಸ್ ಸಹಕಾರ ಸಂಸ್ಥೆಗಳು ಕರ್ನಾಟಕ ರಾಜ್ಯದ ಸೌಹಾರ್ದ ಸಹಕಾರಿ ಚಳುವಳಿ ಇತ್ಯಾದಿ ದೇಶದ ಸಹಕಾರ ಚಳುವಳಿಯ ಹಿರಿಮೆಯನ್ನು ತೋರುತ್ತಿದೆ. ಇಪ್ಕೊ, ಕ್ರಿಪ್ಕೋನಂತಹ ಸಹಕಾರ ಸಂಸ್ಥೆಗಳು ದೇಶದ ಸಹಕಾರ ಕ್ಷೇತ್ರವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳ ಅಡಿಕೆ ಬೆಳೆಗಾರ ರೈತರ ಜೀವನಾಡಿಯಾಗಿ ಬೆಳೆದಿರುವ ಬಹು ರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಕೂಡ ಸಹಕಾರ ಕ್ಷೇತ್ರಕ್ಕೆ ಅಂತರಾಷ್ಟ್ರೀಯ ಮೆರುಗನ್ನು ನೀಡಿದೆ.
ಹೀಗೆ ಸಹಕಾರ ಕ್ಷೇತ್ರವು ಜನಸಾಮಾನ್ಯರ ಚಳುವಳಿಯಾಗಿ ಹುಟ್ಟಿಕೊಂಡು ರಾಜ್ಯ-ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯವಾಗಿಯೂ ಬೆಳೆದಿರುವುದು ಗಮನಾರ್ಹ ಸಂಗತಿಯಾಗಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ತನ್ನದೇ ಆದ ಗಾಢ ಪರಿಣಾಮವನ್ನು ಬೀರಿದೆ. ದೇಶದ ಜನಸಾಮಾನ್ಯರ ಆರ್ಥಿಕ ಸೇರ್ಪಡೆಗೆ ( Financial Inclusion) ಇತರ ಎಲ್ಲಾ ಕ್ಷೇತ್ರಗಳಿಂದ ಅತಿ ಹೆಚ್ಚು ಕೊಡುಗೆಯನ್ನು ನೀಡಿದೆ.
ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರಕಾರದ ಮಾರ್ಗದರ್ಶನದ ಅವಶ್ಯಕತೆ ಎಷ್ಟಿದೆಯೋ ಹಾಗೆಯೇ ಸಾರ್ವಜನಿಕ ರಂಗವೂ ತನ್ನ ಕಾರ್ಯವನ್ನು ಮಾಡಬೇಕಾಗಿದೆ. ದೇಶದಲ್ಲಿರುವ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ಈ ಕ್ಷೇತ್ರದಲ್ಲಿ ಹುಟ್ಟಿಕೊಂಡಿರುವ ಅಗತ್ಯ ಜನಸಾಮಾನ್ಯರ ಸಹಕಾರ ಸಂಸ್ಥೆಗಳನ್ನು ಗಟ್ಟಿ ಗೊಳಿಸಬೇಕಾಗಿದೆ. ಹೊಸ ಸಹಕಾರ ಸಂಸ್ಥೆಗಳನ್ನು ಕೂಡಾ ಕಟ್ಟಿ ಬೆಳೆಸಬೇಕಾಗಿದೆ. ಯುವ, ಮಹಿಳೆ ಮತ್ತು ಸಮಾಜದ ನಿಮ್ನ ವರ್ಗದಲ್ಲಿ ಸಹಕಾದ ಕಾರ್ಯಾಗಳನ್ನು ಇನ್ನಷ್ಟು ವಿಸ್ತರಿಸುವ ಕಾರ್ಯ ಮಾಡಬೇಕಾಗಿದೆ. ಹಾಗೆಯೇ ಇಷ್ಟೊಂದು ವಿಸ್ತಾರವಾದ ಸಹಕಾರ ಕ್ಷೇತ್ರದ ಸೂಕ್ತ ಅಧ್ಯಯನ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಈ ಕ್ಷೇತ್ರದ ಬೆಳವಣಿಗೆಗಳ ದಾಖಲೆಗಳನ್ನು ದಾಖಲಿಸಿ ಮುಂದಿನ ತಲೆಮಾರುಗಳಿಗೆ ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಸಂಶೋಧನಾ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡಬೇಕಾಗಿದೆ. ಇಂತಹ ಕಾರ್ಯಗಳನ್ನು ಮಾಡುವ ಪ್ರಯತ್ನವೇ ಸಹಕಾರ ಅಭಿವೃದ್ಧಿ ಮತ್ತು ಅಭಿವೃದ್ಧಿ ಸಂಸ್ಥೆ ( Institute for Study and Development of Cooperation). ಈಗಾಗಲೇ ಯುವ, ಮಹಿಳಾ, ವೈದ್ಯಕೀಯ, ಹಿಂದುಳಿದ ವರ್ಗದ ಕಲ್ಯಾಣದ ಕಾರ್ಯಗಳ ಕಾರ್ಯಯೋಜನೆಗಳನ್ನು
ಸಾಕಾರಗೊಳಿಸಲಾಗುತ್ತಿದೆ.
ಈ ಎಲ್ಲಾ ಕಾರ್ಯಗಳು ಕಾರ್ಯರೂಪಕ್ಕೆ ಬರುವಲ್ಲಿ ಎಲ್ಲರ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಅತ್ಯಗತ್ಯ. ಆದುದರಿಂದ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎಲ್ಲರ ಮಾರ್ಗದರ್ಶನವನ್ನು ಈ ಮಾಧ್ಯಮದ ಮೂಲಕ ಕೋರುತ್ತಿದ್ದೇವೆ. ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮಗಿರುವ ಚಿಂತನೆ ಮತ್ತು ದೃಷ್ಟಿಕೋನವನ್ನು ಇಲ್ಲಿ ಬರಹ ರೂಪದಲ್ಲಿ ಹಂಚಿಕೊಳ್ಳಲು ಎಲ್ಲಾ ಸಹಕಾರಿ ಚಿಂತಕರು, ಸಹಕಾರಿ ತಜ್ಞರು ಮತ್ತು ಸಹಕಾರಿ ಮುಖಂಡರನ್ನು ವಿನಂತಿಸಲಾಗಿದೆ.
ಜೈ ಸಹಕಾರ