ಸಹಕಾರ ಕ್ಷೇತ್ರ ಅತ್ಯಂತ ಅಪರೂಪದ ಕ್ಷೇತ್ರ. ಹಾಗೆಯೇ ವೈಶಿಷ್ಟ್ಯಪೂರ್ಣ ಕ್ಷೇತ್ರವೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರು, ದೀನದಲಿತರು ಸೇರಿದಂತೆ ಎಲ್ಲ ಅಬಲ ವರ್ಗದವರು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳುವ ಅತ್ಯಂತ ಸರಳ ರಂಗವಾಗಿ ಇದು ಪರಿಣಮಿಸಿದೆ. ‘ನಾನು ಎಲ್ಲರಿಗಾಗಿ – ಎಲ್ಲರೂ ನನಗಾಗಿ ‘ ಎಂಬ ಸರಳ ನಂಬಿಕೆಯಡಿ ರೂಪುಗೊಂಡಿರುವ ಸಹಕಾರ ಕ್ಷೇತ್ರವು ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಲಿಂಗಾತೀತವಾಗಿ ಮಾತ್ರವಲ್ಲದೆ ಎಲ್ಲಾ ರೀತಿಯ ಸೈಧ್ಧಾಂತಿಕ ಇತಿಮಿತಿಗಳನ್ನೂ ದಾಟಿ ಎಲ್ಲರನ್ನೂ ಒಳಗೊಳ್ಳುವ ಸಮಾಜದ ಮಹತ್ವದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಸಹಕಾರ ಕ್ಷೇತ್ರವು ಸಮಾಜದ ಅನ್ಯಾನ್ಯ ಕ್ಷೇತ್ರಗಳಿಗೆ ಇಂದು ವಿಶಾಲವಾಗಿ ವಿಸ್ತರಿಸಿಕೊಂಡಿದೆ. ಕೃಷಿ, ಹಣಕಾಸು, ಹೈನುಗಾರಿಕೆ, ಗ್ರಾಹಕ, ಮಾರಾಟ, ಬಳಕೆದಾರ, ಸಂಸ್ಕರಣೆ ಇತ್ಯಾದಿ ಕ್ಷೇತ್ರದಲ್ಲಿ ಸಮಾಜದ ನಿಮ್ನ ವರ್ಗದ ಅಭಿವೃದ್ಧಿಯ ಮಾರ್ಗವಾಗಿ ಬೆಳೆದಿದೆ. ಭಾರತದಂತಹ ಗ್ರಾಮೀಣ ಭಾಗಗಳಿಂದ ಕೂಡಿದ ಕೃಷಿ ಪ್ರಧಾನ ಅರ್ಥವ್ಯವಸ್ಥೆಯ ದೇಶದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಹಕಾರ ರಂಗದಿಂದ ಸಾಧ್ಯವಿದೆ. ಈಗಾಗಲೇ ಸಹಕಾರ ರಂಗವು ಕೃಷಿ ವಲಯದ ಅನೇಕ ಬೇಕುಗಳಿಗೆ ರಚನಾತ್ಮಕವಾದ ಸ್ಪಂದನೆಯನ್ನು ನೀಡಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಕೃಷಿ ಬೇಸಾಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ‘ಸಹಕಾರ ಬೇಸಾಯ ಪದ್ಧತಿ’ ( Cooperative Farming Society System) ಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ. ಪ್ರಮುಖ ಆಹಾರ ಬೆಳೆಗಳಾದ ಅಕ್ಕಿ, ಗೋಧಿ, ರಾಗಿ, ಬೇಳೆ ಇತ್ಯಾದಿ ಬೆಳೆಗಳ ಬೇಸಾಯವನ್ನು ಹಿಡುವಳಿದಾರರು ‘ಸಹಕಾರ ಬೇಸಾಯ ಪದ್ಧತಿ’ ಯನ್ನು ಅಳವಡಿಸಿಕೊಳ್ಳುವ ಮೂಲಕ ಬೇಸಾಯದ ವೆಚ್ಚವನ್ನು ಕಡಿಮೆಗೊಳಿಸಿ, ಹೆಚ್ಚು ಇಳುವರಿಯನ್ನು ಪಡೆದು, ಸಂಸ್ಕರಣೆಗೊಳಿಸಿ, ಮಧ್ಯವರ್ತಿಗಳನ್ನು ನಿವಾರಿಸಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡು ಸೂಕ್ತ ದರದಲ್ಲಿ ಮಾರಾಟ ಮಾಡುವ ಮೂಲಕ ಲಾಭದಾಯಕತ್ವ ಮತ್ತು ಬೆಲೆಯಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬಹುದಾಗಿದೆ.
ವಾಣಿಜ್ಯ ಬೆಳೆಗಳಿಗಿಂತ ಹೆಚ್ಚು ಆಹಾರದ ಬೆಳೆಗಳನ್ನು ಬೇಸಾಯ ಮಾಡುವಲ್ಲಿ ಕೃಷಿಕರು ಅನೇಕ ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದು ಆಹಾರ ಬೆಳೆಗಳಾದ ಅಕ್ಕಿ, ಗೋಧಿ, ರಾಗಿ, ಬೇಳೆ ಅಥವಾ ತರಕಾರಿ ಬೆಳೆಗಳೇ ಇರಬಹುದು. ಸಮಸ್ಯೆಗಳು ಸಾಮಾನ್ಯವಾಗಿ ಒಂದೇ ರೀತಿ ಇದೆ. ಕೃಷಿ ಬೇಸಾಯದಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ಸಮಸ್ಯೆ ಕೃಷಿ ಕೂಲಿಕಾರ್ಮಿಕರ ಲಭ್ಯತೆ. ಲಭ್ಯವಾದರೂ ದುಬಾರಿಯಾಗಿರುತ್ತದೆ. ಇದಕ್ಕೆ ಪರಿಹಾರವಾಗಿ ಯಾಂತ್ರಿಕ ಕೃಷಿಗಾರಿಕೆಯನ್ನು ಮಾಡುವುದು ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಗೆ ಸುಲಭ ಸಾಧ್ಯವಾದುದಲ್ಲ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಹಿಡುವಳಿದಾರರು ಇದರಿಂದ ದೂರಕ್ಕೆ ಹೋಗುವುದರಿಂದ ಉಪಯುಕ್ತ ಕೃಷಿ ಭೂಮಿಯು ಹಡಿಲು ಬೀಳುತ್ತಿವೆ. ಇನ್ನು ಆಹಾರದ ಬೆಳೆಗಳನ್ನು ಬೆಳೆದರೂ ಅದರ ಗುಣಮಟ್ಟವನ್ನು ಒಂದೇ ರೀತಿಯಾಗಿ ಕಾಯ್ದುಕೊಂಡು ಮಾರುಕಟ್ಟೆಯನ್ನು ಕಂಡುಕೊಳ್ಳುವ ಪೂರಕವಾದ ವಾತಾವರಣ ಇಲ್ಲ. ಗುಣಮಟ್ಟದ ಬೆಳೆಗಳನ್ನು ಬೆಳೆದು ಅದನ್ನು ಸಂಸ್ಕರಣೆ ಮಾಡಿ, ಮಧ್ಯವರ್ತಿಗಳನ್ನು ನಿವಾರಿಸಿ ಸೂಕ್ತ ಮಾರುಕಟ್ಟೆಯನ್ನು ಕಂಡುಕೊಳ್ಳುವ ಸಹಕಾರ ವ್ಯವಸ್ಥೆಯನ್ನು ಹಿಡುವಳಿದಾರ ಕೃಷಿಕರೇ ಮಾಡಿಕೊಳ್ಳಬಹುದಾಗಿದೆ. ಸಮಾನ ಮನಸ್ಕ ಹಿಡುವಳಿದಾರ ಕೃಷಿಕರು ಪರಸ್ಪರ ಒಟ್ಟು ಸೇರಿಕೊಂಡು ಸಹಕಾರ ಮನೋಭಾವನೆಯಿಂದ ಅಗತ್ಯ ಯಂತ್ರೋಪಕರಣಗಳನ್ನು ಬಳಸಿಕೊಂಡು ಒಂದೇ ರೀತಿಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು, ಸಂಸ್ಕರಣೆ ಮಾಡಿ, ಸೂಕ್ತ ಮಾರುಕಟ್ಟೆಯನ್ನು ನಿರ್ಮಾಣ ಮಾಡಿ ತಮ್ಮದೇ ಆದ ‘ಬ್ರ್ಯಾಂಡ್’ ಹೆಸರಿನೊಂದಿಗೆ ಮಾರಾಟ ಮಾಡಬಹುದಾಗಿದೆ. ಈ ಮೂಲಕ ಇಳುವರಿಯನ್ನು ಲಾಭದಾಯಕವಾಗಿ ಪಡೆದುಕೊಂಡು, ಬೆಳೆಗಳ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಕೃಷಿಕರು ಉತ್ತಮ ಜೀವನವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಆದುದರಿಂದ ಹಿಡುವಳಿದಾರ ಕೃಷಿಕರಿಗೆ ಖಂಡಿತವಾಗಿಯೂ ಸಹಕಾರ ಬೇಸಾಯ ಪದ್ಧತಿಯು ವರದಾನವಾಗಿ ಪರಿಣಮಿಸಲಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಸಹಕಾರ ಬೇಸಾಯ ಪದ್ಧತಿಯನ್ನು ಹಿಡುವಳಿದಾರರ ಮಧ್ಯೆ ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ. ಕಡಿಮೆ ಸಂಖ್ಯೆಯ ಅಂದರೆ ಹತ್ತು ಜನ ಹಿಡುವಳಿದಾರರು ತಮ್ಮ ಕೃಷಿ ಭೂಮಿಯನ್ನು ಒಟ್ಟು ಮಾಡಿ ಜಂಟಿಯಾಗಿ ಕೃಷಿ ಚುವಟಿಕೆಗಳನ್ನು ಮಾಡಲು ಸಹಕಾರ ಕಾಯ್ದೆಯಲ್ಲಿ ಅವಕಾಶವನ್ನು ಮಾಡಿಕೊಡುತ್ತಿವೆ. ಇದರ ಜೊತೆಗೆ ಅವರಲ್ಲಿ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕಾಗಿದೆ. ಸಹಕಾರ ಇಲಾಖೆ, ಕೃಷಿ ಸಹಕಾರ ಸಂಘಗಳು ಮತ್ತು ಸಹಕಾರಿ ಮುಖಂಡರೂ ಕೂಡಾ ಜವಾಬ್ದಾರಿಯನ್ನು ವಹಿಸಿಕೊಂಡು ಹಿಡುವಳಿದಾರರಿಗೆ ಅಗತ್ಯ ಅರಿವು ಮತ್ತು ಪೂರಕ ಅವಕಾಶಗಳನ್ನು ಸೃಷ್ಟಿ ಮಾಡುವ ಕಾರ್ಯವನ್ನು ಮಾಡಿದರೆ ಖಂಡಿತವಾಗಿಯೂ ದೇಶದ ಕೃಷಿ ಅರ್ಥ ವ್ಯವಸ್ಥೆಯ ಸಮಗ್ರ ಅಭಿವೃದ್ಧಿ ಸಹಕಾರ ಕ್ಷೇತ್ರದಿಂದ ಕಾರ್ಯ ಸಾಧ್ಯವಾಗುತ್ತದೆ.
ಡಾ. ಎಸ್ ಆರ್ ಹರೀಶ್ ಆಚಾರ್ಯ
ಅಧ್ಯಕ್ಷರು
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ. ಮಂಗಳೂರು